Kannada
ಪ್ರಚಲಿತ ವಿದ್ಯಮಾನಗಳು: 15ನೇ ನವೆಂಬರ್ 2025
- ವಿಶ್ವ ರ್ಯಾಂಕಿಂಗ್: ಕ್ರೈಸ್ಟ್ ಸಾಧನೆ
ಸಂದರ್ಭ: ಕ್ವಾಕ್ವರೇಲ್ಲಿ ಸೈಮಂಡ್ಸ್ (ಕ್ಯೂಎಸ್) ಸಂಸ್ಥೆ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
- ಕಳೆದ ಬಾರಿ 681–700ನೇ ಸ್ಥಾನದಲ್ಲಿದ್ದ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ವಿಶ್ವವಿದ್ಯಾಲಯವು ಈ ಬಾರಿ 537ನೇ ಶ್ರೇಯಾಂಕ ವನ್ನು ಪಡೆದಿದೆ. ದಕ್ಷಿಣ ಏಷ್ಯಾ ವಿಭಾಗದಲ್ಲಿಯೂ ವಿಶ್ವವಿದ್ಯಾಲಯವು ಉತ್ತಮ ಸ್ಥಾನ ಪಡೆದಿದ್ದು, 140ನೇ ಸ್ಥಾನ ಗಳಿಸಿದೆ.
- ಈ ವರ್ಷ ಏಷ್ಯಾದ ಪಟ್ಟಿಯಲ್ಲಿ 1,526 ವಿಶ್ವವಿದ್ಯಾಲಯಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವೂ ಸೇರಿದೆ. ಭಾರತದ 294 ಸಂಸ್ಥೆಗಳಲ್ಲಿ ಕ್ರೈಸ್ಟ್ ಕೂಡ ಒಂದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಜೋಸೆಫ್ ಸಿ.ಸಿ. ತಿಳಿಸಿದ್ದಾರೆ.
ಭಾರತದ ನಗರಗಳ ಜಲಸಂಕಷ್ಟ

ನೀರು ಜೀವಸಂಕುಲದ ಅಮೃತ. ಸಕಲ ಚರಾಚರಗಳ ಅಳಿವು ಉಳಿವಿನ ಸಂಜೀವಿನಿ. ಆದರೆ, ಬೇಸಿಗೆ ಬಂತೆಂದರೆ ಈ ಸಂಜೀವಿನಿಗಾಗಿ ಭಾರತದ ಮಹಾನಗರಗಳಲ್ಲಿ ಹಾಹಾಕಾರ. ಮಳೆಗಾಲದಲ್ಲಿ ಅದೇ ನೀರಿನ ರುದ್ರನರ್ತನಕ್ಕೆ ನಲುಗಿ ಹೋಗುವವು ಈ ನಗರಗಳು. ನಮ್ಮ ಬೆಂಗಳೂರು ಇರಲಿ, ರಾಷ್ಟ್ರ ರಾಜಧಾನಿ ದೆಹಲಿಯಾಗಲಿ, ಮುಂಬೈ ಮಹಾನಗರಿಯಾಗಲಿ, ಕೋಲ್ಕತ್ತ ಅಥವಾ ಚೆನ್ನೈ ಇರಲಿ, ಬಹುತೇಕ ಎಲ್ಲ ಮಹಾನಗರಗಳೂ ಜಲಸಂಕಷ್ಟದ ಈ ಎರಡು ವೈಪರೀತ್ಯಗಳಿಂದ ಪ್ರತಿ ವರ್ಷ ನಲುಗಿ ಹೋಗುತ್ತಿವೆ.
ಒಂದೆಡೆ ನಗರಗಳನ್ನು ನಿಷ್ಕ್ರಿಯಗೊಳಿಸುವ ಪ್ರವಾಹಗಳು, ಇನ್ನೊಂದೆಡೆ ಲಕ್ಷಾಂತರ ಜನರು ಹನಿ ನೀರಿಗೆ ಹೆಣಗಾಡುತ್ತಿರುವ ದೃಶ್ಯ- ಈ ವಿರೋಧಾಭಾಸವು ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಹಿಂದೆ ಸಾಲುಸಾಲು ನಿಂತ ಜನರು, ಮಳೆಗಾಲದಲ್ಲಿ ರಸ್ತೆಯನ್ನೇ ನದಿಯನ್ನಾಗಿ ಮಾಡಿರುವ ಪ್ರವಾಹಗಳು; ಈ ‘ಹೈಡ್ರೊ-ಸ್ಕಿಜೋಫ್ರೀನಿಯಾ’ ಎಂಬ ಜಲ ವಿಕೃತಿಯು ಮಹಾನಗರಗಳ ಅನಿಯಂತ್ರಿತ ಬೆಳವಣಿಗೆಯ ಪ್ರತಿಬಿಂಬವಾಗಿದೆ.
ಅಸಮಾನತೆಯ ಬೇರುಗಳು
ಮಾರ್ಗನ್ ಸ್ಟಾನ್ಲಿಯ ಆರ್ಥಿಕ ತಜ್ಞ ರುಚಿರ್ ಶರ್ಮಾ ಅವರು ತಮ್ಮ ‘10 ರೂಲ್ಸ್ ಆಫ್ ಸಕ್ಸಸ್‌ಫುಲ್ ನೇಷನ್ಸ್’ ಪುಸ್ತಕದಲ್ಲಿ ರಾಷ್ಟ್ರಗಳ ಬೆಳವಣಿಗೆಯ ಅಸಮತೋಲನದ ಕುರಿತು ಎಚ್ಚರಿಸುತ್ತಾರೆ. ರಾಷ್ಟ್ರದ ಅಥವಾ ಒಂದು ಪ್ರದೇಶ/ರಾಜ್ಯದ ಮೊದಲ ಅತಿ ದೊಡ್ಡ ನಗರ ಮತ್ತು ಎರಡನೆಯ ದೊಡ್ಡ ನಗರದ ನಡುವಿನ ಅಗಾಧವಾದ ಆರ್ಥಿಕ ಅಸಮಾನತೆಯ ಪ್ರಮಾಣವು ದೇಶದ ಸಮತೋಲನದ ಪ್ರಗತಿಗೆ ಮಾರಕವಾಗಬಲ್ಲದು ಎಂಬುದನ್ನು ಅವರು ವಿವರಿಸುತ್ತಾರೆ.
ಉದಾಹರಣೆಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಶಂಸಿಸಲ್ಪಡುವ ನಮ್ಮ ಬೆಂಗಳೂರಿನ ಜನಸಂಖ್ಯೆ ಮೈಸೂರಿಗಿಂತ 10 ಪಟ್ಟು ಹೆಚ್ಚು. ಮುಂಬೈ ಜನಸಂಖ್ಯೆಯು ಪುಣೆಗಿಂತ 4 ಪಟ್ಟು ಜಾಸ್ತಿ. ಕೋಲ್ಕತ್ತ ಜನಸಂಖ್ಯೆ ಅಸನ್ಸೋಲ್‌ಗಿಂತ 10 ಪಟ್ಟು ಇದೆ. ಚೆನ್ನೈ ಮಹಾನಗರದ್ದು ಕೊಯಮತ್ತೂರಿಗಿಂತ 5ರಷ್ಟು ಮತ್ತು 3 ಕೋಟಿಗಿಂತಲೂ ಹೆಚ್ಚು ಇರುವ ದೆಹಲಿಯು ಉತ್ತರ ಭಾರತದಲ್ಲಿ ಅಸಾಧಾರಣ ಜನಸಂಖ್ಯೆ ಹೊಂದಿದೆ. ಈ ಅಸಮಾನತೆಗಳು ಕೇವಲ ಜನಸಂಖ್ಯೆಯಲ್ಲಿ ಅಲ್ಲ, ಹೂಡಿಕೆಯಲ್ಲಿ, ಮೂಲಸೌಕರ್ಯದಲ್ಲಿ, ನೀರಿನ ಒತ್ತಡದಲ್ಲೂ ಕಾಣಿಸುತ್ತವೆ.
ರುಚಿರ್ ಶರ್ಮಾರ ಈ ಸಂಶೋಧನೆಯು ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಹಾಗೂ ಬಿಕ್ಕಟ್ಟಿನ ಪ್ರಮುಖ ಸುಳಿವನ್ನು ನೀಡುತ್ತದೆ.
ಅನಿಯಂತ್ರಿತ ನಗರ ವಿಸ್ತರಣೆ
ಪ್ರತಿ ವರ್ಷ ಬರ ಹಾಗೂ ಪ್ರವಾಹದಂತಹ ವೈಪರೀತ್ಯಗಳು ಬಂದು ಅಪ್ಪಳಿಸುತ್ತಿದ್ದರೂ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ, ದೇಶದ ಮಹಾನಗರಗಳು ದಿಕ್ಕು ದೆಸೆಯಿಲ್ಲದೆ ಅಗಾಧವಾಗಿ ಬೆಳೆಯುತ್ತಾ ಹೋಗುತ್ತಿವೆ. ಆದರೆ, ಈ ಬೆಳವಣಿಗೆಯ ಅಂತ್ಯದ ಅರಿವು ಮಾತ್ರ ಯಾರಿಗೂ ಇಲ್ಲ. ಈ ಏಕಪಕ್ಷೀಯ ಬೆಳವಣಿಗೆ ಎಲ್ಲಿಯವರೆಗೆ ವಿಸ್ತರಿಸುತ್ತದೆ, ಹತ್ತಿರದ ಎಷ್ಟು ಪಟ್ಟಣಗಳನ್ನು ಕಬಳಿಸುತ್ತದೆ ಮತ್ತು ಇದೆಲ್ಲವೂ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮುಂಬೈ ನಗರವು ಈಗಾಗಲೇ ಠಾಣೆ ಜಿಲ್ಲೆಗೆ ಪ್ರವೇಶಿಸಿದರೆ, ಬೆಂಗಳೂರು ನಗರ ಉತ್ತರದಲ್ಲಿ ತುಮಕೂರು, ಪಶ್ಚಿಮದಲ್ಲಿ ರಾಮನಗರ ಮತ್ತು ಪೂರ್ವದಲ್ಲಿ ಕೋಲಾರ ಹತ್ತಿರದ ಪಟ್ಟಣಗಳನ್ನು ಭಕ್ಷಿಸುವತ್ತ ಸಾಗಿದೆ. ದೇಶದ ಇತರೆ ಮಹಾನಗರಗಳು ಇದಕ್ಕೆ ಭಿನ್ನವಾಗಿಲ್ಲ.
ದೇಶದ ಮಹಾನಗರಗಳ ಈ ಗೊತ್ತು ಗುರಿ ಇಲ್ಲದ ವಿಸ್ತರಣೆಗೆ ಯಾವುದೇ ಮಿತಿಗಳಿಲ್ಲದಿರಬಹುದು, ಆದರೆ ಅದು ನೀರಿಗೆ ಮಾತ್ರ ಅನ್ವಯಿಸುವುದಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ನದಿಗಳಿಗಾಗಲಿ ಅಥವಾ ಭೂಜಲಕ್ಕಾಗಲಿ ಒಂದು ಪರಿಮಿತಿ ಇದ್ದೇ ಇದೆ. ಉದಾಹರಣೆ, ಜಲಸಂಪನ್ಮೂಲ ‘ವರುಣ’ನ ಅನುಗ್ರಹ ಮತ್ತು ಅನುಕಂಪದಲ್ಲಿದೆ. ಇದಲ್ಲದೆ ದೇಶದಾದ್ಯಂತ ಅನೇಕ ನ್ಯಾಯಮಂಡಳಿಗಳು ತಮ್ಮ ತೀರ್ಪುಗಳಿಂದ ರಾಜ್ಯಗಳಿಗೆ ಜಲ ಸಂಪನ್ಮೂಲವನ್ನು ಹಂಚಿಕೆಯ ಮೂಲಕ ಸೀಮಿತಗೊಳಿಸಿವೆ. ಆದುದರಿಂದ ನೀರನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ.
ಜಲಸಂಪನ್ಮೂಲಗಳಿಗೆ ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಕೆಲವರು ಸಾವಿರಾರು ಕಿಲೋಮೀಟರ್ ದೂರದ ನದಿಗಳಿಂದ ಮಹಾನಗರಗಳಿಗೆ ನೀರು ಹರಿಸುವ ಪ್ರಸ್ತಾವಗಳನ್ನು ಮುಂದಿಡುತ್ತಾರೆ. ಈ ಪ್ರಸ್ತಾವಗಳು ಕಾಗದದ ಮೇಲೆ ಆಕರ್ಷಕವಾಗಿ ಕಾಣುತ್ತವೆ. ಇದಕ್ಕೆ ತಗಲುವ ಆರ್ಥಿಕ ವೆಚ್ಚ, ತಾಂತ್ರಿಕ ತೊಂದರೆಗಳು, ನೀರಿನ ಸಂಘರ್ಷಗಳು ಹಾಗೂ ಪರಿಸರ ಹಾನಿ ಇವೆಲ್ಲವೂ ಇದರ ಸದುದ್ದೇಶಗಳನ್ನು ಮೀರುವ ಸಾಧ್ಯತೆಗಳಿವೆ. ಇವೆಲ್ಲಕ್ಕಿಂತ, ಮಹಾನಗರಗಳು ಇನ್ನಷ್ಟು ಬೆಳೆದು, ಮತ್ತಷ್ಟು ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾದರೆ ನೀರನ್ನು ದೇಶದ ಯಾವ ನದಿಯಿಂದ, ಇನ್ನೆಷ್ಟು ದೂರದಿಂದ ಮತ್ತು ಎಲ್ಲಿಯವರೆಗೆ ತರಬಹುದು ಎಂಬ ಅಂಶವನ್ನು ದೇಶದ ಜನರು ನಿರ್ಧರಿಸಬೇಕಿದೆ. ಉದಾಹರಣೆಗೆ, ಕೇವಲ 70 ಕಿ.ಮೀ. ದೂರದಲ್ಲಿರುವ ತುಮಕೂರಿನ ಹತ್ತಿರ ಬೆಳೆದ ಬೆಂಗಳೂರು, ಅಲ್ಲಿಗೇ ನಿಲ್ಲುತ್ತದೆ ಎಂಬುದಕ್ಕೆ ಖಾತರಿ ಏನು?
ಹಾಗಾಗಿ, ಜಲ ಸಂಕಷ್ಟದ ದೃಷ್ಟಿಯಿಂದ ಈ ದಿಕ್ಕು ದೆಸೆಯಿಲ್ಲದ ಅಸಮಾನತೆಯ ಬೆಳವಣಿಗೆಯನ್ನು ನಿಲ್ಲಿಸಲು ರಾಜಕೀಯ, ಆಡಳಿತ ಮತ್ತು ಯೋಜನಾ ತಂತ್ರಜ್ಞರು ಈಗಲಾದರೂ ಚಿಂತನೆ ಮಾಡಲೇಬೇಕಾಗಿದೆ.
ತಾತ್ಕಾಲಿಕ ಪರಿಹಾರಗಳು
ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಮೂಲ ಕಾರಣ ನಗರ ಪ್ರದೇಶಗಳ ಬಿರುಸಿನ ವಿಸ್ತರಣೆ, ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆ, ಕ್ಷೀಣಿಸುತ್ತಿರುವ ಮೂಲಗಳು ಮತ್ತು ಶಿಥಿಲಗೊಂಡ ಒಳಚರಂಡಿಯ ಅವ್ಯವಸ್ಥೆ. ಇವುಗಳ ಮುಂದೆ ಬರ/ಪ್ರವಾಹಗಳಿಗೆ ಪರಿಹಾರಗಳೆಂದು ಹೇಳಲ್ಪಡುವ ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಚಾವಣಿಯ ಮಳೆನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ… ಮುಂತಾದವು ಕೇವಲ ತಾತ್ಕಾಲಿಕ ಪರಿಹಾರಗಳು. ಅಂದರೆ ‘ಬ್ಯಾಂಡ್ ಏಡ್’ನಂತೆ. ಏಕೆಂದರೆ ಈ ಪರಿಹಾರಗಳು ಆಸ್ಪಿರಿನ್‌ನಂತೆ ನೋವನ್ನು ಮಾತ್ರ ಕಡಿಮೆ ಮಾಡುತ್ತವೆ; ಮೂಲ ರೋಗವನ್ನು ಗುಣಪಡಿಸುವುದಿಲ್ಲ.
ಭಾರತದ ನಗರ ಪ್ರದೇಶಗಳ ಜಲ ಬಿಕ್ಕಟ್ಟು, ವೈಪರೀತ್ಯಗಳಿಗೆ ಮೂಲ ಹಾಗೂ ಅಂತಿಮ ಪರಿಹಾರ ಸಿಗಬೇಕು ಎಂದರೆ, ದೇಶದ ಅನೇಕ ರಾಜ್ಯಗಳಲ್ಲಿ ಒಂದು ನಗರದ ಬೆಳವಣಿಗೆಗೆ ಕೊಡುತ್ತಿರುವ ಅಪರಿಮಿತ ಪ್ರಾಮುಖ್ಯ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳ ಅಭಿವೃದ್ಧಿಯ ನಿರ್ಲಕ್ಷ್ಯ- ಇವೆರಡಕ್ಕೂ ಕಡಿವಾಣ ಬೀಳಬೇಕು.
ಒಂದೇ ನಗರಕ್ಕೆ ಹರಿದುಹೋಗುತ್ತಿರುವ ಅಪರಿಮಿತ ಹೂಡಿಕೆ, ಶ್ರೀಮಂತಿಕೆಯ ಕೇಂದ್ರೀಕರಣ ಮತ್ತು ಇದರ ಕಾರಣವಾಗಿ ಮಹಾನಗರಗಳ ಅನಿಯಂತ್ರಿತ 360 ಡಿಗ್ರಿಯ ವಿಸ್ತರಣೆ- ಇವೆಲ್ಲದರ ಕಡಿವಾಣವೇ ಮಹಾನಗರಗಳ ಮಹಾವೈಪರೀತ್ಯಗಳಾದ ಬರ/ಪ್ರವಾಹಗಳಿಗೆ ನೀಡಬಹುದಾದ ಮೂಲ ಚಿಕಿತ್ಸೆ. ಇದನ್ನು ನಿರ್ಲಕ್ಷಿಸಿ ತಾತ್ಕಾಲಿಕ ‘ಬ್ಯಾಂಡ್ ಏಡ್’ ಪರಿಹಾರಗಳನ್ನು ಅವಲಂಬಿಸಿದರೆ ಸಮಸ್ಯೆಯು ಪರಿಹಾರವಾಗುವ ಬದಲು ಮತ್ತಷ್ಟು ಜಟಿಲವಾಗುತ್ತದೆ.
ಪುನರ್ ವಿತರಣೆಯೇ ಪರಿಹಾರ
ಆದುದರಿಂದ ತುರ್ತಾಗಿ, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈನಂತಹ ಮಹಾನಗರಗಳ ಸುತ್ತಮುತ್ತ ಇರುವ, ಹತ್ತಿರವಿರುವ ಸಣ್ಣ ನಗರಗಳಿಗೆ ದೇಶದ/ರಾಜ್ಯದ ಸಂಪತ್ತಿನ ಪುನರ್ ವಿತರಣೆಯಾಗಬೇಕಿದೆ. ಈ ಬಗ್ಗೆ ಆರ್ಥಿಕ ತಜ್ಞರು/ಯೋಜನೆ ರೂಪಿಸುವವರು ತುರ್ತು ಗಮನ ಹರಿಸಬೇಕು. ನೈಸರ್ಗಿಕ ವಿಕೋಪಗಳನ್ನು ನಿಭಾಯಿಸುವ ಶಕ್ತಿಗನುಗುಣವಾಗಿ ಈ ಸಣ್ಣ ನಗರಗಳಿಗೆ ಹೂಡಿಕೆ, ಅಭಿವೃದ್ಧಿ ಮತ್ತು ಸಂಪತ್ತು ಪುನರ್ ವಿತರಣೆ ಮಾಡಬೇಕು. ಬೆಂಗಳೂರಿಗೆ ಬರುವ ಹೂಡಿಕೆಯ ಶೇಕಡ ಒಂದು ಭಾಗವನ್ನಾದರೂ ತುಮಕೂರು, ರಾಮನಗರ, ಹಾಸನ, ಮಂಡ್ಯದಂತಹ ಸಣ್ಣ ನಗರಗಳಿಗೆ ವಿತರಿಸಲು ಚಿಂತನೆ ಮಾಡಬೇಕು.
ಹಾಗೆ ಮಹಾನಗರಗಳ ಕಡೆ ಹೊರಟಿರುವ ಮತ್ತು ಜಲ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಜನರ ವಲಸೆಯನ್ನು ಸಣ್ಣ ನಗರಗಳ ಕಡೆ ತಿರುಗಿಸಬೇಕಿದೆ. ಭಾರತದ ಮಹಾನಗರಗಳ ಹೈಡ್ರೊ-ಸ್ಕಿಜೋಫ್ರೀನಿಯಾದ ಸಮಸ್ಯೆಗಳಾದ ಬೇಸಿಗೆಯ ಕೊರತೆ ಮತ್ತು ಮುಂಗಾರಿನ ಪ್ರವಾಹ ಇವುಗಳನ್ನು ನಿವಾರಿಸಲು ಇರುವ ಏಕೈಕ ಸಂಭಾವ್ಯ ಮಾರ್ಗ ಇದು.
ಲೇಖಕ: ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ
(ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯಗಳು)
ನೀರು ಸಂಜೀವಿನಿಯೂ ಹೌದು, ಮರೀಚಿಕೆಯೂ ಹೌದು
ಭಾರತದ ಮಹಾನಗರಗಳ ಅಸಹಜ ಜನಸಂಖ್ಯೆ, ಅಡ್ಡಾದಿಡ್ಡಿ ವಿಸ್ತೀರ್ಣ ಹಾಗೂ ಹೂಡಿಕೆಯ ಫಲಿತಂಶವೇ ಈ ಎಲ್ಲ ಜಲಸಂಕಷ್ಟಗಳಿಗೆ ಪ್ರಮುಖ ಕಾರಣ. ಹಾಗೆ ನೀರಿನ ಬೇಡಿಕೆಯ ಮೇಲಿನ ಇವೆಲ್ಲದರ ಪರಿಣಾಮವನ್ನು ಒಮ್ಮೆ ನೋಡೋಣ: 2015ರಲ್ಲಿ ದೆಹಲಿಯಲ್ಲಿ ಸುಮಾರು 4,760 ಎಂಎಲ್‌ಡಿ ನೀರಿನ ಬೇಡಿಕೆಯಿದ್ದರೆ ಪೂರೈಕೆ ಮಾತ್ರ 3,546 ಎಂಎಲ್‌ಡಿ ಇತ್ತು. ಎರಡರ ನಡುವೆ ಸುಮಾರು 1,000 ಎಂಎಲ್‌ಡಿಯಷ್ಟು ಅಂತರವಿತ್ತು; ಇವತ್ತಿನ ದಿನ, ಕೋಲ್ಕತ್ತ ಸುಮಾರು 1,875 ಎಂಎಲ್‌ಡಿ ನೀರಿನ ಬೇಡಿಕೆಯನ್ನು ಹೊಂದಿದೆ ಮತ್ತು ಸೋರಿಕೆ, ಕಳ್ಳತನ ಮತ್ತು ವಿತರಣಾ ಅಂತರವನ್ನು ಪರಿಗಣಿಸಿದರೆ ಸುಮಾರು 400 ಎಂಎಲ್‌ಡಿ ಕೊರತೆ ಕಾಣುತ್ತದೆ. ಚೆನ್ನೈ ನಗರ ಪ್ರದೇಶದ ನೀರಿನ ಬೇಡಿಕೆ 1,850 ಎಂಎಲ್‌ಡಿ ಆಗಿದ್ದು, ಪೂರೈಕೆ ಮಾತ್ರ 1,510 ಎಂಎಲ್‌ಡಿ. ಇದರಿಂದ ಸುಮಾರು 300 ಎಂಎಲ್‌ಡಿ ಕೊರತೆ ಇದೆ. ಮುಂದಿನ ವರ್ಷ (2026) ನಮ್ಮ ಬೆಂಗಳೂರು ನಗರ ಪ್ರದೇಶದ ಬೇಡಿಕೆ ಮತ್ತು ಪೂರೈಕೆ ಕ್ರಮವಾಗಿ 3,437 ಎಂಎಲ್‌ಡಿ ಮತ್ತು 2,235 ಎಂಎಲ್‌ಡಿ ಇರಲಿದ್ದು, ಇನ್ನೂ 1,262 ಎಂಎಲ್‌ಡಿಯಷ್ಟು ಕೊರತೆ ಉಂಟಾಗಲಿದೆ. ಇದರಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ.
ಈ ಅಂಕಿಅಂಶಗಳು, ನಗರಗಳಲ್ಲಿನ ಬೆಳವಣಿಗೆಗೆ ಸಂಬಂಧಿಸಿದ, ಪ್ರಜ್ಞಾಪೂರ್ವಕ ನೀತಿಗಳ ಕೊರತೆಯ ಪ್ರತಿರೂಪಗಳಾಗಿವೆ.
ಅಸಮಾನತೆಯ ಬೆಳವಣಿಗೆ ಬದಲಾವಣೆ ಅಗತ್ಯ
ಮುಂಗಾರು ಈಗ ತಾನೇ ಮುಗಿದಿದೆ, ಹಿಂಗಾರು ಆರಂಭವಾಗಿದೆ. ಬೇಸಿಗೆ ಮುಂದಿದೆ. ಬೇಸಿಗೆಯಲ್ಲಿ ಜಲಕ್ಷಾಮಕ್ಕೆ ಒಳಗಾಗಿದ್ದ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳು ಮುಂಗಾರಿನ ನಂತರ ಈಗ ಪುನಃ ಹಿಂಗಾರಿನ ಪ್ರವಾಹದ ಬಿಕ್ಕಟ್ಟನ್ನು ಎದುರಿಸುವ ಅಪಾಯವಿದೆ. ನಂತರ ಬೇಸಿಗೆ– ನೀರಿಗೆ ಪುನಃ ಹಾಹಾಕಾರ. ಇದು ಎಚ್ಚರಿಕೆಯ ಗಂಟೆ ಮತ್ತು ನೀತಿನಿರೂಪಕರಿಗೆ ಆಪತ್ಕಾಲದ ಕರೆಯಾಗಿದೆ. ‘ಅದೇ ರಾಗ ಅದೇ ಹಾಡು’ ಎಂಬಂತೆ ಪ್ರತಿವರ್ಷವೂ ಬಂದೆರಗುವ ಈ ಹಾಹಾಕಾರದ ಪುನರಾವರ್ತಿತ ಪ್ರದರ್ಶನ ನಿಲ್ಲಿಸಬೇಕಾದರೆ, ನಾವೆಲ್ಲರೂ ಮಹಾನಗರಗಳ ವಿನ್ಯಾಸದ ದಿಕ್ಕು ಬದಲಿಸಲೇಬೇಕಿದೆ.
ಆದುದರಿಂದ ಜಲ ಹಾಗೂ ಆರ್ಥಿಕ ತಜ್ಞರು/ಯೋಜಕರು (ಮತ್ತು ನಾವು/ನೀವು) ಜೊತೆಗೂಡಿ ದೇಶದ ನಗರ/ಪಟ್ಟಣಗಳ ಈ ಆರ್ಥಿಕ ಅಸಮಾನತೆಯನ್ನು, ಏಕಪಕ್ಷೀಯ ಬೆಳವಣಿಗೆಯನ್ನು ಎಷ್ಟು ಬೇಗ ಅರಿತು ಬದಲಾಯಿಸುವೆವೋ, ಅಷ್ಟು ಬೇಗ ಮಹಾನಗರಗಳ ಬೆನ್ನತ್ತಿರುವ ಹೈಡ್ರೊ-ಸ್ಕಿಜೋಫ್ರೀನಿಯಾ ಅಂದರೆ ಈ ನೀರಿನ ಹಾಹಾಕಾರ/ಪ್ರವಾಹಗಳ ಅವಳಿ ಬಿಕ್ಕಟಿಗೆ ಅಂತಿಮ ತೆರೆ ಎಳೆಯಬಹುದಾಗಿದೆ.
1.6 ಕೋಟಿ ಟನ್ ಅಡುಗೆ ಎಣ್ಣೆ ಆಮದು
ಸಂದರ್ಭ: 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ ₹1.61 ಲಕ್ಷ ಕೋಟಿ ಮೌಲ್ಯದ ಎಣ್ಣೆ ಆಮದು: ಎಸ್ಇಎ
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್) ದೇಶಕ್ಕೆ 1.6 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹1.61 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ತಿಳಿಸಿದೆ.
- 2023–24ರ ತೈಲ ಮಾರುಕಟ್ಟೆ ವರ್ಷದಲ್ಲಿ 1.59 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿತ್ತು. ಇದರ ಮೌಲ್ಯ ₹1.32 ಲಕ್ಷ ಕೋಟಿಯಷ್ಟಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ. ಇದರಿಂದ ಆಮದು ಮಾಡಿಕೊಂಡ ಅಡುಗೆ ಎಣ್ಣೆಯ ಬೆಲೆ, ಹಣಕಾಸಿನ ಮೌಲ್ಯದಲ್ಲಿ ಶೇ 22ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
- ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು, ಭಾರತವು 1990ರ ದಶಕದಿಂದಲೂ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಆರಂಭಿಕ ಅವಧಿಯಲ್ಲಿ, ಆಮದು ಪ್ರಮಾಣವು ತುಂಬಾ ಕಡಿಮೆ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ (2004-05ರಿಂದ 2024-25), ಆಮದು ಪ್ರಮಾಣವು 2 ಪಟ್ಟು ಹೆಚ್ಚಾಗಿದ್ದರೆ, ಆಮದು ವೆಚ್ಚವು ಸುಮಾರು 15 ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
- 2022–23ರ ಮಾರುಕಟ್ಟೆ ವರ್ಷದಲ್ಲಿ 1.64 ಕೋಟಿ ಟನ್, 2021–22ರಲ್ಲಿ 1.40 ಕೋಟಿ ಟನ್ ಮತ್ತು 2020–21ರಲ್ಲಿ 1.31 ಕೋಟಿ ಟನ್ ಆಮದಾಗಿತ್ತು.
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ 17.37 ಲಕ್ಷ ಟನ್ ರಿಫೈನ್ಡ್ ಎಣ್ಣೆ ಆಮದಾಗಿದೆ. 2023–24ರ ಇದೇ ಅವಧಿಯಲ್ಲಿ 19.31 ಲಕ್ಷ ಟನ್ ಆಮದಾಗಿತ್ತು. 2015–16ರಲ್ಲಿ ಸೋಯಾಬಿನ್ ಎಣ್ಣೆ ಆಮದು 42.3 ಲಕ್ಷ ಟನ್‌ನಷ್ಟಿತ್ತು. ಅದು 2024–25ರ ವೇಳೆಗೆ 54.7 ಲಕ್ಷ ಟನ್‌ಗೆ ಏರಿಕೆಯಾಗಿದೆ. ತಾಳೆ ಎಣ್ಣೆ ಆಮದು 90 ಲಕ್ಷ ಟನ್‌ನಿಂದ 75.8 ಲಕ್ಷ ಟನ್‌ಗೆ ಇಳಿದಿದೆ ಎಂದು ತಿಳಿಸಿದೆ.
- ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಿಂದ ಸೋಯಾಬಿನ್ ಎಣ್ಣೆ ಆಮದಾಗುತ್ತದೆ.
- ಸಗಟು ಹಣದುಬ್ಬರ ಇಳಿಕೆ
ಸಂದರ್ಭ: ಜಿಎಸ್ಟಿ ಇಳಿಕೆಯಿಂದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ದರವು ಅಕ್ಟೋಬರ್ ತಿಂಗಳಿನಲ್ಲಿ ಶೇ (–) 1.21ಕ್ಕೆ ಇಳಿಕೆ ಆಗಿದೆ. ಇದು 27 ತಿಂಗಳದ ಕನಿಷ್ಠ ಮಟ್ಟವಾಗಿದೆ.
- ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ 2.75ರಷ್ಟು ಸಗಟು ಹಣದುಬ್ಬರ ದಾಖಲಾಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 0.13ರಷ್ಟಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿ ಹಲವು ವಸ್ತುಗಳ ಬೆಲೆ ಕಡಿಮೆಯಾಗಿದೆ. ಇದರಿಂದ ಅಕ್ಟೋಬರ್ ತಿಂಗಳಿನಲ್ಲಿ ಹಣದುಬ್ಬರ ಪ್ರಮಾಣ ತಗ್ಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಶೇ 8.31ರಷ್ಟು ಇಳಿಕೆ ಆಗಿದೆ. ಈರುಳ್ಳಿ, ಆಲೂಗೆಡ್ಡೆ, ತರಕಾರಿಗಳು, ದ್ವಿದಳ ಧಾನ್ಯಗಳು ಬೆಲೆ ಸಹ ಕಡಿಮೆ ಆಗಿದೆ.
- ತಯಾರಿಕಾ ವಲಯದ ಉತ್ಪನ್ನಗಳ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 2.33ರಷ್ಟಿತ್ತು. ಅದು ಅಕ್ಟೋಬರ್‌ನಲ್ಲಿ ಶೇ 1.54ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 2.58ರಿಂದ ಶೇ 2.55ಕ್ಕೆ ಇಳಿದಿದೆ.
- ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯಿಂದ ಸರಕುಗಳ ಬೆಲೆ ಕಡಿಮೆ ಆಯಿತು. ಇದು ಸಗಟು ಮತ್ತು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 0.25ರಷ್ಟು ದಾಖಲಾಗಿದೆ. ಇದು ದಶಕದ ಕನಿಷ್ಠ ಮಟ್ಟವಾಗಿದೆ ಎಂದು ತಿಳಿಸಿದೆ.
- ಪಿಎಂ–ಕಿಸಾನ್ ನಿಧಿ ಬಿಡುಗಡೆ 19ರಂದು
ಸಂದರ್ಭ: ಪಿಎಂ–ಕಿಸಾನ್ ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು, ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ.
- ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ವಾರ್ಷಿಕ ₹6 ಸಾವಿರ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಮೂರು ಬಾರಿ ರೈತರಿಗೆ ₹2 ಸಾವಿರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
- ಭೂಮಿಗೆ ಮರಳಿದ ಚೀನಾದ ಗಗನಯಾನಿಗಳು
ಸಂದರ್ಭ: ಬೀಜಿಂಗ್, ಚೀನಾ (ಪಿಟಿಐ): ವ್ಯೋಮನೌಕೆಯು ಅಂತರಿಕ್ಷದ ಅವಶೇಷಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಭೂಮಿಗೆ ಬರಲು ವಿಳಂಬವಾಗಿದ್ದ ಚೀನಾದ ಗಗನಯಾನಿಗಳು ಸುರಕ್ಷಿತವಾಗಿ ಬಂದಿಳಿದಿದ್ದಾರೆ.
- ‘ಶೆಂಝೌ-14 ಬಾಹ್ಯಾಕಾಶ ನೌಕೆಯ ಮೂಲಕ ಚೆನ್ ಡಾಂಗ್, ಚೆನ್ ಝೆಂಗುರಿ ಹಾಗೂ ವಾಂಗ್ ಜಿ ಅವರು ಉತ್ತರ ಚೀನಾದ ಡಾಂಗ್‌ಫೆಂಗ್ ನಿಲ್ದಾಣಕ್ಕೆ ಬಂದಿಳಿದರು’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ತಿಳಿಸಿದೆ.
- ‘ನವೆಂಬರ್ 5ರಂದೇ ಈ ಮೂವರು ಗಗನಯಾನಿಗಳು ಭೂಮಿಗೆ ಮರಳಬೇಕಿತ್ತು. ಅಂತರಿಕ್ಷದಲ್ಲಿ ವ್ಯೋಮನೌಕೆಗೆ ಕೊನೆಯ ಹಂತದಲ್ಲಿ ಅವಶೇಷಗಳು ಡಿಕ್ಕಿ ಹೊಡೆದಿದದ್ದರಿಂದ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ, ಪ್ರಯಾಣವನ್ನು ಮುಂದೂಡಲಾಗಿತ್ತು. ನಂತರ ಅವುಗಳನ್ನು ಸರಿಪಡಿಸಿದ ನಂತರ, ಅವರು ವ್ಯೋಮನೌಕೆಯಲ್ಲಿ ಬಂದಿಳಿದರು’ ಎಂದು ಸಿಎಂಎಸ್‌ಎ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
- 2011ರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಿದ ಬಳಿಕ ಇದೇ ಮೊದಲ ಬಾರಿ ಈ ಸಮಸ್ಯೆ ತಲೆದೋರಿತ್ತು. ಈ ನಿಲ್ದಾಣದಲ್ಲಿ ಮೂವರು ಗಗನಯಾನಿಗಳಿಗೆ ಏಕಕಾಲಕ್ಕೆ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬೇರೆ ಗಗನ ಯಾನಿಗಳನ್ನು ಚೀನಾವು ಅಲ್ಲಿಗೆ ಕಳುಹಿಸಿಕೊಡುತ್ತದೆ.
- ವಿಶ್ವ ಶೂಟಿಂಗ್: ಇಶಾಗೆ ಕಂಚಿನ ಪದಕ
ಸಂದರ್ಭ: ಭಾರತದ ಅನುಭವಿ ಶೂಟರ್ ಇಶಾ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಷಿಪ್ನ ಮಹಿಳೆಯರ 25 ಮೀ. ಸ್ಪೋರ್ಟ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಆದರೆ, ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಮನು ಭಾಕರ್ ನಿರಾಸೆ ಮೂಡಿಸಿದರು.
- 26 ವರ್ಷದ ಇಶಾ ಅವರಿಗೆ ಇದು ವಿಶ್ವ ಚಾಂಪಿ ಯನ್‌ಷಿಪ್‌ನಲ್ಲಿ ಮೊದಲ ವೈಯಕ್ತಿಕ ಪದಕವಾಗಿದೆ. ಶುಕ್ರವಾರ ಫೈನಲ್ ಸ್ಪರ್ಧೆಯಲ್ಲಿ 30 ಅಂಕಗಳೊಂದಿಗೆ ಇಶಾ ಮೂರನೇ ಸ್ಥಾನ ಗಳಿಸಿದರು.
- ಹಾಲಿ ಒಲಿಂಪಿಕ್ ಚಾಂಪಿಯನ್, ಕೊರಿಯಾದ ಯಾಂಗ್ ಜಿಯಿನ್ (40 ಅಂಕ) ಚಿನ್ನದ ಸಾಧನೆ ಮಾಡಿದರೆ, ಚೀನಾದ ಯಾವೋ ಕಿಯಾನ್ಕ್ಸನ್ (38) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮನು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
- ಮೂರು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗೆದ್ದ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
- ಇಶಾ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್
ಸಂದರ್ಭ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಶಾ ಶರ್ಮಾ ಅವರು ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ಸರ್ಬಿಯಾದ ಸುಬೊಟಿಕಾದಲ್ಲಿ ನಡೆದ ಐಎಂ ಸರ್ಕಿಟ್ ಟೂರ್ನಿಯಲ್ಲಿ ಅವರು ಮೂರನೇ ಡಬ್ಲ್ಯುಜಿಎಂ ನಾರ್ಮ್ ಪಡೆದು ಅಗತ್ಯವಿದ್ದ ಅರ್ಹತೆ ಪೂರೈಸಿದರು.
- ಡಬ್ಲ್ಯುಜಿಎಂ ‘ಟೈಟಲ್’ ಪಡೆಯಲು ಆಟಗಾರ್ತಿಯೊಬ್ಬರು ಮೂರು ನಾರ್ಮ್ ಗಳ ಜೊತೆ 2300 ಫಿಡೆ ರೇಟಿಂಗ್ ಗಳಿಸ ಬೇಕಾಗುತ್ತದೆ. ಅವರು 2022ರ ಆಗಸ್ಟ್‌ನಲ್ಲೇ ಈ ರೇಟಿಂಗ್ ಪೂರೈಸಿದ್ದರು.
- 2022ರಲ್ಲಿ ಸ್ಲೊವಾಕಿಯಾದಲ್ಲಿ ಅವರು ಮೊದಲ ನಾರ್ಮ್ ಪಡೆದಿದ್ದರು. ಮರುವರ್ಷ ಮೊರಾಕೊದಲ್ಲಿ ಎರಡನೇ ಡಬ್ಲ್ಯುಜಿಎಂ ನಾರ್ಮ್ ಗಳಿಸಿದ್ದರು.
- 2019ರಲ್ಲಿ ಅವರು ಮಹಿಳಾ ಐಎಂ (ಡಬ್ಲ್ಯುಐಎಂ) ಆಗಿದ್ದರು. ಈ ಸಾಧನೆಗೆ ಪಾತ್ರರಾಗಿದ್ದ ರಾಜ್ಯದ ಮೊದಲಿಗರಾಗಿದ್ದರು.
- ‘ಇದಕ್ಕಾಗಿ ಐದು ವರ್ಷಗಳಿಂದ ಶ್ರಮ ಹಾಕಿದ್ದೆ. ಈಗ ಸಾಕಾರಗೊಂಡಿರುವುದು ಸಂತಸಕ್ಕಿಂತ ನಿರಾಳತೆ ನೀಡಿದೆ’ ಎಂದು ಇಶಾ ಸರ್ಬಿಯಾದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
- ಇಶಾ ಅವರು ಈ ವರ್ಷ ಚೆಸ್ ಆಟಗಾರ ಐಎಂ ಶರಣ್ ರಾವ್ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿ ನಲ್ಲಿರುವ ಶರಣ್ ಅವರ ರಾವ್ ಚೆಸ್ ಅಕಾಡೆಮಿಯಲ್ಲಿ ಇಶಾ ಮುಖ್ಯ ಕೋಚ್ ಆಗಿದ್ದಾರೆ.
- ‘ಆಟಕ್ಕಿಂತಲೂ ಈಗ ತರಬೇತಿ ನೀಡುವತ್ತ ಹೆಚ್ಚಿನ ಗಮನ ನೀಡುತ್ತಿ ದ್ದೇನೆ’ ಎಂದೂ ಅವರು ಹೇಳಿದರು.
- ಏಷ್ಯನ್ ಆರ್ಚರಿ: ಅಂಕಿತಾ, ಧೀರಜ್ಗೆ ಚಿನ್ನದ ಪದಕ
ಸಂದರ್ಭ: ಭಾರತದ ಬಿಲ್ಗಾರರಾದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಶುಕ್ರವಾರ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್ಷಿಪ್ನ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು.
- 27 ವರ್ಷದ ಅಂಕಿತಾ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 7–3 ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ದಕ್ಷಿಣ ಕೊರಿಯಾದ ನಾಮ್ ಸುಹಿಯೋನ್ ಅವರಿಗೆ ಆಘಾತ ನೀಡಿದರು. ಪುರುಷರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಧೀರಜ್ 6–2ರಿಂದ ಸ್ವದೇಶದ ರಾಹುಲ್ ಅವರನ್ನು ಮಣಿಸಿದರು.
- ಅಂಕಿತಾ ಸೆಮಿಫೈನಲ್‌ನಲ್ಲಿ ಸ್ವದೇಶದ ಅನುಭವಿ ದೀಪಿಕಾ ಅವರನ್ನು ಸೋಲಿಸಿದ್ದರು. 5–5 ಅಂಕಗಳಿಂದ ಸಮಬಲ ಸಾಧಿಸಿದ ಬಳಿಕ ಶೂಟ್ ಆಫ್‌ನಲ್ಲೂ ಪಾಯಿಂಟ್ಸ್ (9) ಸಮನಾಯಿತು. ಆದರೆ, ಅಂಕಿತಾ ಅವರ ಬಾಣವು ಹೆಚ್ಚು ನಿಖರವಾಗಿದ್ದರಿಂದ ಅವರು ಫೈನಲ್‌ಗೆ ಮುನ್ನಡೆದರು.
- ಐದು ಬಾರಿಯ ಒಲಿಂಪಿಯನ್ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡರು. ಕಂಚಿನ ಪ್ಲೇ ಆಫ್ ಸುತ್ತಿನಲ್ಲಿ ಸ್ವದೇಶದ ಸಂಗೀತಾ ಅವರನ್ನು ಶೂಟ್ ಆಫ್‌ನಲ್ಲಿ (6–5) ಮಣಿಸಿದರು.
- ಸೆಮಿಫೈನಲ್‌ನಲ್ಲಿ ಮೊದಲ ಸೆಟ್ ಕಳೆದುಕೊಂಡಿದ್ದ ಧೀರಜ್ ನಂತರ ಲಯ ಕಂಡುಕೊಂಡು 6–2ರಿಂದ ಕೊರಿಯಾದ ಅನುಭವಿ ಆಟಗಾರ ಜಾಂಗ್ ಚೆಹ್ವಾನ್ ಅವರನ್ನು ಸೋಲಿಸಿದ್ದರು.
- ಭಾರತವು ಆರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿ ಒಟ್ಟು 10 ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿತು.
ಪ್ರಚಲಿತ ವಿದ್ಯಮಾನಗಳು: 14ನೇ ನವೆಂಬರ್ 2025
ಸಾಫ್ಟ್ವೇರ್ ರಫ್ತು: ಭಾರಿ ಏರಿಕೆ ಗುರಿ: ನಗರಗಳಲ್ಲಿ ಐಟಿ ಬೆಳವಣಿಗೆಗೆ ಒತ್ತು l ಮಾಹಿತಿ ತಂತ್ರಜ್ಞಾನ ನೀತಿಗೆ ಅಸ್ತು
ಸಂದರ್ಭ: ಕರ್ನಾಟಕದಿಂದ ಸಾಫ್ಟ್ವೇರ್ ರಫ್ತನ್ನು 2030 ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
- ಬೆಂಗಳೂರಿನಾಚೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನ ಗಳ ಮೇಲೆ ಹೂಡಿಕೆಗೆ ಆದ್ಯತೆ ನೀಡುವ ಬಗ್ಗೆಯೂ ನೀತಿ ಪ‍್ರಸ್ತಾಪಿಸಿದೆ.
- ‘ರಾಜ್ಯದ ಆದಾಯ ಮೌಲ್ಯ ವರ್ಧನೆಗೆ ಐಟಿ ವಲಯದ ಕೊಡುಗೆಯನ್ನು ಶೇ 26ರಿಂದ ಶೇ 36ಕ್ಕೆ ಹೆಚ್ಚಿಸಲು ಗುರಿ ನಿಗದಿ ಮಾಡಲಾಗಿದೆ.
- ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಕರ್ನಾಟಕದ ನಾಯಕತ್ವ ಬಲಪಡಿಸುವುದು ಮತ್ತು ಕರ್ನಾಟಕದ ಬ್ರ್ಯಾಂಡ್ ಅನ್ನು ಕೃತಕ ಬುದ್ದಿಮತ್ತೆಯ ಸ್ಥಳೀಯ ತಾಣವಾಗಿ (ಎಐ–ನೇಟಿವ್) ಉನ್ನತೀಕರಿಸಲು ಅಗತ್ಯ ಯೋಜನೆ ರೂಪಿಸಲಾಗುವುದು.
ನೀತಿಯ ಮುಖ್ಯಾಂಶಗಳು
- ಕೃತಕ ಬುದ್ದಿಮತ್ತೆ, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಐಟಿ ಮತ್ತು ಮುಂದುವರಿದ ಸೈಬರ್ ಭದ್ರತೆಗೆ ತಂತ್ರಜ್ಞಾನಕ್ಕೆ ಉತ್ತೇಜನ
- ಡಿಜಿಟಲ್ ಸಂಪರ್ಕ, ಹಸಿರು ಆವರಣಗಳು ಮತ್ತು ಗ್ರಾಮೀಣ–ನಗರ ಏಕೀಕರಣವನ್ನು ಉತ್ತೇಜಿಸಲು ಮೂಲಸೌಕರ್ಯ ಅಭಿವೃದ್ಧಿ
- ಸೈಬರ್ ಸುರಕ್ಷತೆ, ವಿಪತ್ತು ನಿರ್ವಹಣೆ ಮತ್ತು ವಿದ್ಯುತ್ ಭದ್ರತೆ ಮೂಲಕ ಬಲಿಷ್ಠ ಐಟಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸಲಾಗುವುದು
- ನಿಯಮಗಳನ್ನು ಸರಳಗೊಳಿಸಿ, ತಡೆ ರಹಿತ, ಪಾರದರ್ಶಕ ಮತ್ತು ಏಕಗವಾಕ್ಷಿ ಆಡಳಿತ ಸಕ್ರಿಯಗೊಳಿಸಲಾಗುವುದು
- ಕ್ನೋವರ್ಸ್ ಅಂದರೆ ಸಂಯೋಜಿತ ತಂತ್ರಜ್ಞಾನ ಆವರಣಗಳ ಸ್ಥಾಪನೆ ಮತ್ತು ಮುಂಬರುವ ಜಾಗತಿಕ ನಾವೀನ್ಯತಾ ಜಿಲ್ಲೆಗಳಲ್ಲಿ (ಜಿಐಡಿಗಳು) ಇವುಗಳ ಸ್ಥಾಪನೆ ಆಗಲಿದೆ.
- ರಾಜ್ಯವ್ಯಾಪಿ ಡಿಜಿಟಲ್ ಹಬ್ ಗ್ರಿಡ್ (ಎಸ್‌ಡಿಎಚ್‌ಜಿ), ಐಟಿ ಪಾರ್ಕ್‌ಗಳು, ಶ್ರೇಷ್ಠತೆಯ ಕೇಂದ್ರಗಳು, ನಾವೀನ್ಯತೆ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಏಕೀಕರಿಸಲಾಗುವುದು.
- 1,000 ಮಧ್ಯಮ–ವೃತ್ತಿ ಜೀವನದ ಮಹಿಳಾ ತಂತ್ರಜ್ಞಾನ ವೃತ್ತಿಪರರಿಗೆ ತರಬೇತಿ ನೀಡಲು ಮೀಸಲಾದ ಮಹಿಳಾ ಗ್ಲೋಬಲ್ ಟೆಕ್ ಮಿಷನ್ಸ್ ಫೆಲೋಶಿಪ್ ಆರಂಭಿಸಲಾಗುವುದು
- ಬೆಂಗಳೂರಿನ ಹೊರಗೆ ಇರುವ ಕಂಪನಿಗಳಿಗೆ 16 ಬಗೆಯ ಪ್ರೋತ್ಸಾಹ.
ರಾಜ್ಯಕ್ಕೆ ‘ಸುಪ್ರೀಂ’ ಜಯ
ಸಂದರ್ಭ:ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ, ತಮಿಳುನಾಡಿಗೆ ಭಾರಿ ಹಿನ್ನಡೆಯಾಗಿದೆ.

- ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಎನ್.ವಿ. ಅಂಜಾರಿಯಾ ಪೀಠವು, ‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಅನುಮತಿ ನೀಡಿದೆ.
- ತಮಿಳುನಾಡಿನ ಆಕ್ಷೇಪಣೆ ಗಳನ್ನು ತಜ್ಞರು ಪರಿಶೀಲಿಸಿದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ. ಈ ಹಂತದಲ್ಲಿ ಇದನ್ನು ಪ್ರಶ್ನಿಸಿ ತಮಿಳುನಾಡು ಅರ್ಜಿ ಸಲ್ಲಿಸಿರುವುದು ಅವಧಿಪೂರ್ವ (ಪ್ರಿಮೆಚೂರ್)’ ಎಂದು ಅಭಿಪ್ರಾಯಪಟ್ಟಿದೆ.
- ‘ತಮಿಳುನಾಡಿನ ಆಕ್ಷೇಪಣೆಗಳನ್ನು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರಗಳ (ಸಿಡಬ್ಲ್ಯುಎಂಎ) ಅಭಿಪ್ರಾಯಗಳನ್ನು ಪರಿಗಣಿಸಿದ ನಂತರವೇ ಆಯೋಗವು ಯೋಜನೆಗೆ ಅನುಮೋದನೆ ನೀಡಲಿದೆ’ ಎಂದು ಪೀಠ ತಿಳಿಸಿದೆ.
- ‘ನ್ಯಾಯಾಲಯ ಮತ್ತು ಪ್ರಾಧಿಕಾರಗಳ ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ರಾಜ್ಯವು ಕಾವೇರಿ ನೀರನ್ನು ಹರಿಸಲು ಬದ್ಧವಾಗಿರಬೇಕು. ಒಂದು ವೇಳೆ, ಈ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಕರ್ನಾಟಕ ವಿಫಲವಾದರೆ, ನ್ಯಾಯಾಂಗ ನಿಂದನೆ ಎಸಗಿದ ಅಪಾಯ ಎದುರಿಸಲಿದೆ’ ಎಂದು ಪೀಠ ಎಚ್ಚರಿಸಿದೆ. ಆದಾಗ್ಯೂ, ‘ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗಿದೆ. ತಮಿಳುನಾಡು ಎತ್ತಿರುವ ಅನೇಕ ಪ್ರಶ್ನೆಗಳು ಅತಿಯಾದುದು’ ಎಂದು ಕರ್ನಾಟಕ ವಾದಿಸಿದೆ.
ಬಾಹ್ಯಾಕಾಶ: ‘ನಂ 1’ಗೆ ಜಿಗಿತದತ್ತ ನಡೆ
ಸಂದರ್ಭ: ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ ನೀತಿಗೆ ಸಂಪುಟ ಸಭೆ ಒಪ್ಪಿಗೆ: ರಾಜ್ಯದಲ್ಲಿರುವ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿ ಪರಿವರ್ತಿಸುವ ಉದ್ದೇಶದ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಕ್ಕೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾರುಕಟ್ಟೆ ಪಾಲಿನ ಶೇ 50 ಅನ್ನು ಹೊಂದುವ ಮೂಲಕ ಕರ್ನಾಟಕ ವನ್ನು ಭಾರತದಲ್ಲಿ ನಂಬರ್ 1 ತಾಣವಾಗಿ ಉಳಿಸಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆ ಪಾಲಿನ ಶೇ 5 ಅನ್ನು ಹೊಂದುವ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿಸುವುದು ಸರ್ಕಾರದ ಉದ್ದೇಶ.
- ಜಾಗತಿಕ ಮತ್ತು ದೇಶೀಯ ಬಾಹ್ಯಾಕಾಶ ವಲಯದಿಂದ ಉದ್ಯೋಗ ಪಡೆಯಬಹುದಾದ ಹೆಚ್ಚು ಕೌಶಲಪೂರ್ಣ ಕಾರ್ಯಪಡೆ ರೂಪಿಸು ವುದು, ಕರ್ನಾಟಕದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೈಗಾ ರಿಕೆಗಳ ಒಟ್ಟುಗೂಡುವಿಕೆಗೆ ಪ್ರೇರಕ ಶಕ್ತಿ ಯಾಗಿ ಕಾರ್ಯ ನಿರ್ವಹಿಸಲು 50 ಸಾವಿರ ಯುವ ವೃತ್ತಿಪರರು, ವಿದ್ಯಾರ್ಥಿ ಗಳಿಗೆ ತರಬೇತಿ ನೀಡಿಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು.
ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಅಸ್ತು: ಮಾನವ– ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಸಿಬ್ಬಂದಿ, ಅನುದಾನ: ಸಿ.ಎಂ
ಸಂದರ್ಭ: ‘ಮಾನವ– ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಡ್ರೋನ್ ಕ್ಯಾಮರಾ ಗಳ ನಿಗಾ ಹೆಚ್ಚಿಸಬೇಕು. ಕೃಪಾಕರ ಸೇನಾನಿ–ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಬೇಕು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
- ರಾಜ್ಯ ಮಟ್ಟದ ಸಮಗ್ರ ಮಾನವ- ವನ್ಯಜೀವಿ ಸಂಘರ್ಷ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
- ‘ವಯಸ್ಸಾದ ಕಾರಣಕ್ಕೆ, ಯುವ ಹುಲಿಗಳ ದಾಳಿಯಿಂದ ಗಾಯಗೊಂಡ ಹಾಗೂ ಇತರೆ ಕಾರಣಗಳಿಂದ ಅರಣ್ಯ ಪ್ರದೇಶದಿಂದ ಹೊರಗೆ ಸಂಚರಿಸುತ್ತಿರುವ 15-20 ಹುಲಿಗಳನ್ನು ಡ್ರೋನ್ ಕ್ಯಾಮರಾ ನೆರವಿನಿಂದ ತಕ್ಷಣ ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ಅಗತ್ಯವಾದ ಸಿಬ್ಬಂದಿ, ಅನುದಾನ ಸೇರಿ ಎಲ್ಲ ನೆರವು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು.
- ‘ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಕ್ವಾಡ್‌ಗಳ ಸಂಖ್ಯೆಯನ್ನು ಸಂಘರ್ಷ ಪೀಡಿತ ಅರಣ್ಯ ಪ್ರದೇಶದಲ್ಲಿ ಬಳಸಬೇಕು’ ಎಂದೂ ಅವರು ಸೂಚನೆ ನೀಡಿದರು.
- ಚಾಮರಾಜನಗರ, ಕೊಡಗು, ಹಾಸನ, ಮೈಸೂರು ಹಾಗೂ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ಪ್ರಾಣ ಹಾನಿ ಪ್ರಕರಣಗಳು ಸಂಭವಿಸಿವೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024-25ರಲ್ಲಿ ಇಂತಹ ಪ್ರಕರಣ ಶೇ 30ರಷ್ಟು ಕಡಿಮೆಯಾಗಿದೆ.
- ವನ್ಯಜೀವಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರಗೆ ಬರುವುದನ್ನು ನಿಗ್ರಹಿಸಬೇಕು. ಬೇಸಿಗೆ ಕಾಲದಲ್ಲಿ ವನ್ಯಜೀವಿ ಗಳಿಗೆ ಅರಣ್ಯದೊಳಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯದಲ್ಲಿ ವ್ಯಾಪಕವಾಗಿ ಹರಡುವ ಲಂಟಾನ ಕಳೆ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.
ಎಂಟು ಅಂಶಗಳು ಯಾವುವು?
l ಮಾನವ– ವನ್ಯಜೀವಿ ಸಂಘರ್ಷದ ಜಾಗ ಗುರುತಿಸಿ, ಯಾವ ಸ್ವರೂಪದ ಸಂಘರ್ಷವೆಂದು ಪಟ್ಟಿ ಮಾಡಬೇಕು
l ಸಂಘರ್ಷದ ತೀವ್ರತೆಯ ಆಧಾರದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಬೇಕು
l ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ, ರಿಜಿಸ್ಟರ್ ನಿರ್ವಹಣೆ
l ಮಾನವ ವನ್ಯ ಜೀವಿ ಸಂಘರ್ಷ ಇರುವ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳು ನಿಯಮಿತವಾಗಿ ವಾಸ್ತವ್ಯ ಮಾಡಬೇಕು
l ಅರಣ್ಯದಂಚಿನ ಸ್ಥಳೀಯರನ್ನು ಗುರುತಿಸಿ ‘ಅರಣ್ಯ ಮಿತ್ರ’ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ, ಸೆರೆ, ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು
l ವನ್ಯಜೀವಿಗಳು ಸಂಚರಿಸುವ ಕಾರ್ಯತಂತ್ರ ಸ್ಥಳಗಳಲ್ಲಿ 24X7 ವಾಹನ ಮತ್ತು ಅರಣ್ಯ ಸಿಬ್ಬಂದಿ ಲಭ್ಯವಾಗುವಂತೆ ಮಾಡಬೇಕು
l ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ನೀಡಲು ಅಣಕು ಪ್ರದರ್ಶನ ಏರ್ಪಡಿಸಬೇಕು
l ಜಿಲ್ಲಾ ಮಟ್ಟದಲ್ಲಿ ಸಮನ್ವಯ, ಸಹಯೋಗ ಸಮಿತಿ, ತಾಲ್ಲೂಕು ಮಟ್ಟದಲ್ಲಿ ಉಪಸಮಿತಿ ರಚಿಸಬೇಕು
ವನ್ಯಪ್ರಾಣಿ ಹಾವಳಿ 200 ಜೀವಹಾನಿ
- ಕರ್ನಾಟಕದಲ್ಲಿ 6,395 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 563 ಹುಲಿಗಳಿದ್ದು, ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1,879 ಚಿರತೆಗಳಿದ್ದು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
- ರಾಜ್ಯದಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ 2022-23ರಲ್ಲಿ 57, 2023-24ರಲ್ಲಿ 65, 2024-25ರಲ್ಲಿ 46, 2025-26ರಲ್ಲಿ 32 ಮಾನವ ಜೀವಹಾನಿ ಸಂಭವಿಸಿದೆ.
ಗಣಿಗಾರಿಕೆಗೆ ‘ಸುಪ್ರೀಂ’ ನಿಷೇಧ: ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ
ಸಂದರ್ಭ: ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
- ‘ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳ ಒಳಗೆ ಮತ್ತು ಅಂತಹ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಅನುಮತಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಅವರ ಪೀಠ ಹೇಳಿದೆ.
- ‘ಸಂರಕ್ಷಿತ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಚಟುವಟಿಕೆಗಳು ವನ್ಯಜೀವಿಗಳಿಗೆ ಅಪಾಯಕಾರಿ ಎಂಬುದನ್ನು ಈ ನ್ಯಾಯಾಲಯ ಮನಗಂಡಿದೆ.
- ಈ ಹಿಂದೆ ಗೋವಾ ಫೌಂಡೇಶನ್ ಪ್ರಕರಣದಲ್ಲಿ, ಗೋವಾ ರಾಜ್ಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಇದೀಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಅಂತಹ ನಿರ್ದೇಶನ ನೀಡುತ್ತಿದ್ದೇವೆ’ ಎಂದಿತು.
- ಜಾರ್ಖಂಡ್‌ನ ಸಾರಂಡಾ ಅಭಯಾರಣ್ಯ ಮತ್ತು ಸಾಸಂಗದಾಬುರು ಅರಣ್ಯ ಪ್ರದೇಶ ಗಳನ್ನು ಮೀಸಲು ಅರಣ್ಯ ಪ್ರದೇಶವಾಗಿ ಘೋಷಿಸುವ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸುವಂತೆ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
- ಅರಣ್ಯ ಹಕ್ಕುಗಳ ಕಾಯ್ದೆಯಡಿ ಈ ಪ್ರದೇಶದ ಬುಡಕಟ್ಟು ಜನರು ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ.
‘ಬಡ್ಡಿ ದರ ಕಡಿಮೆ ಮಟ್ಟದಲ್ಲಿರಲಿ’
ಸಂದರ್ಭ: ಹಣಕಾಸಿನ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಕಿರು ಹಣಕಾಸು ಸಂಸ್ಥೆಗಳು ತಮ್ಮ ಬಡ್ಡಿ ದರವನ್ನು ಕೈಗೆಟಕುವ ಮಟ್ಟದಲ್ಲಿ ಇರಿಸಬೇಕು ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಹೇಳಿದ್ದಾರೆ.
- ‘ಕೆಲವು ಕಿರು ಹಣಕಾಸು ಸಂಸ್ಥೆಗಳು ಅಸಹನೀಯ ಮಟ್ಟದಲ್ಲಿ ಬಡ್ಡಿ ದರವನ್ನು ನಿಗದಿ ಮಾಡಿರುವುದನ್ನು ನಾನು ನೋಡಿದ್ದೇನೆ. ಇದಕ್ಕೆ ಕಾರಣ ಆ ಕಿರು ಹಣಕಾಸು ಸಂಸ್ಥೆಗಳಲ್ಲಿನ ಅಸಾಮರ್ಥ್ಯ’ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
- ಕಿರು ಹಣಕಾಸು ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು, ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ವಿಫಲವಾದ ಕಾರಣಕ್ಕೆ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿರಬಹುದು ಎಂದು ಅವರು ಹೇಳಿದ್ದಾರೆ.
- ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು ಸಾಧಿಸಬೇಕು, ಹೆಚ್ಚಿನ ಉತ್ಪಾದಕತೆ ಸಾಧಿಸಬೇಕು. ಅದರ ಮೂಲಕ ಸಾಲಗಾರರಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವಂತೆ ಆಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
- ಹಣದ ಅಗತ್ಯ ತೀವ್ರವಾಗಿ ಇರುವವರು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಆದರೆ ಅವರಿಗೆ ಆ ಸಾಲವನ್ನು ಮರುಪಾವತಿಸಲು ಆಗುವುದಿಲ್ಲ. ಇದರ ಪರಿಣಾಮವು ಹಣಕಾಸು ವ್ಯವಸ್ಥೆಯ ಮೇಲೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.
- ಕಿರು ಹಣಕಾಸು ಸಂಸ್ಥೆಗಳು ದೇಶದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಸಾಧಿಸಲು ಬಹಳ ಮುಖ್ಯ. ಈ ಸಂಸ್ಥೆಗಳು ಮನೆಬಾಗಿಲಿಗೆ ತೆರಳಿ ಸಾಲ ನೀಡುವ ಕಾರಣದಿಂದಾಗಿ ಇವು ಮಹಿಳೆಯರ ಸಬಲೀಕರಣಕ್ಕೂ ಬಹಳ ಅಗತ್ಯ ಎಂದು ಅವರು ಹೇಳಿದ್ದಾರೆ.
- ‘ಹಣಕಾಸಿನ ಒಳಗೊಳ್ಳುವಿಕೆಯ ವ್ಯಾಪ್ತಿಗೆ ನಾವು ಇನ್ನೂ ಅಂದಾಜು 35 ಕೋಟಿಯಷ್ಟು ಯುವಕರನ್ನು ತರಬೇಕಿದೆ. ಸರ್ಕಾರ ರೂಪಿಸಿರುವ ಯೋಜನೆಗಳು ಹಲವಿದ್ದರೂ, ದೇಶದ ಜನಸಂಖ್ಯೆಯಲ್ಲಿ ದೊಡ್ಡ ವರ್ಗವೊಂದು ಹಣಕಾಸಿನ ಒಳಗೊಳ್ಳುವಿಕೆಯ ತೆಕ್ಕೆಗೆ ಬಂದಿಲ್ಲ. ಈ ಬಗ್ಗೆ ಕಿರು ಹಣಕಾಸು ಸಂಸ್ಥೆಗಳು ಆದ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದವರಿಗೆ ಪ್ರತ್ಯೇಕ ಕ್ರೆಡಿಟ್ ಅಂಕ: ನಬಾರ್ಡ್
ಸಂದರ್ಭ: ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ‘ನಾವು ಸ್ವಸಹಾಯ ಸಂಘಗಳ ವ್ಯವಸ್ಥೆಯ ಡಿಜಿಟಲೀಕರಣದಲ್ಲಿ ತೊಡಗಿದ್ದೇವೆ. ಗ್ರಾಮೀಣ ಪ್ರದೇಶದವರಿಗಾಗಿ ಕ್ರೆಡಿಟ್ ಅಂಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
- ‘ಕಡುಬಡವರ ಜೊತೆ ಕೆಲಸ ಮಾಡುತ್ತಿರುವ ಕೆಲವು ಕಿರು ಹಣಕಾಸು ಸಂಸ್ಥೆಗಳ ಜೊತೆ ಸೇರಿ ನಾವು ಗ್ರಾಮೀಣ ಪ್ರದೇಶದವರಿಗೆ ನೀಡುವ ಕ್ರೆಡಿಟ್ ಅಂಕದ ವಿಚಾರವಾಗಿ ಒಂದಿಷ್ಟು ಪ್ರಾಯೋಗಿಕ ಕೆಲಸ ಮಾಡುತ್ತಿದ್ದೇವೆ’ ಎಂದರು.
- ಕೇಂದ್ರದ 2025–26ನೇ ಸಾಲಿನ ಬಜೆಟ್‌ನಲ್ಲಿ ‘ಗ್ರಾಮೀಣ ಕ್ರೆಡಿಟ್ ಅಂಕ’ದ ಬಗ್ಗೆ ಪ್ರಸ್ತಾವ ಇದೆ. ಗ್ರಾಮೀಣ ಪ್ರದೇಶಗಳ ಜನರಿಗಾಗಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಕ್ರೆಡಿಟ್ ಅಂಕಗಳ ಚೌಕಟ್ಟೊಂದನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜೊತೆ ಸೇರಿ ಅಭಿವೃದ್ಧಿಪಡಿಸುವ ಘೋಷಣೆ ಇದು.
- ಈಗ ಚಾಲ್ತಿಯಲ್ಲಿರುವ ಕ್ರೆಡಿಟ್ ಅಂಕ ನೀಡುವ ವ್ಯವಸ್ಥೆಯು ಎಲ್ಲರಿಗೂ ಒಂದೇ ಬಗೆಯ ನಿಯಮ ಅನ್ವಯ ಮಾಡುತ್ತದೆ, ಅದು ಗ್ರಾಮೀಣ ಪ್ರದೇಶದವರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ.
- ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಜನರು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಅದರ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲು ಸಹಾಯ ಆಗುವಂತೆ ಗ್ರಾಮೀಣ ಕ್ರೆಡಿಟ್ ಅಂಕ ವ್ಯವಸ್ಥೆ ಯನ್ನು ರೂಪಿಸಲಾಗುತ್ತದೆ. ಆಗ ಸ್ವಸಹಾಯ ಸಂಘಗಳ ಸದಸ್ಯರಿಗೆ, ಗ್ರಾಮೀಣ ಪ್ರದೇಶದ ಜನರಿಗೆ, ರೈತರಿಗೆ, ದುರ್ಬಲ ವರ್ಗಗಳ ಜನರಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವ ಪ್ರಕ್ರಿಯೆಯಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
‘ಸಂಪುಟದ ನಿರ್ಧಾರದಿಂದ ರಫ್ತುದಾರರಿಗೆ ಅನುಕೂಲ’
ಸಂದರ್ಭ: ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ₹45 ಸಾವಿರ ಕೋಟಿ ವೆಚ್ಚದ ಎರಡು ಯೋಜನೆಗಳಿಗೆ ಅನುಮೋದನೆ ನೀಡಿರುವುದರಿಂದ ದೇಶದ ರಫ್ತು ವಲಯ ಸದೃಢಗೊಳ್ಳಲಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ರಫ್ತು ವಲಯದ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ರಫ್ತುದಾರರು ಹೇಳಿದ್ದಾರೆ.
- ರಫ್ತು ಉತ್ತೇಜನಾ ಮಿಷನ್‌ಗೆ ₹25,060 ಕೋಟಿ ಮತ್ತು ಸಾಲ ಖಾತರಿ ಯೋಜನೆಗೆ ₹20 ಸಾವಿರ ಕೋಟಿ ಮೊತ್ತ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿದೆ. ಈ ಯೋಜನೆಗಳಿಂದ ಉದ್ಯಮಗಳಿಗೆ ಸಾಲವು ಕೈಗೆಟಕುವಂತಾಗಲಿದೆ ಎಂದು ರಫ್ತುದಾರರು ತಿಳಿಸಿದ್ದಾರೆ.
- ‘ಸರ್ಕಾರದ ಈ ಕ್ರಮವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್ಎಂಇ), ಮೊದಲ ಬಾರಿಗೆ ರಫ್ತು ಮಾಡುವವರ ಕೈ ಬಲಪಡಿಸುವ ಉದ್ದೇಶ ಹೊಂದಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ರಫ್ತು ವಿಭಾಗದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹೇಳಿದ್ದಾರೆ.
- ‘ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡಿರುವುದರಿಂದ ಉದ್ಯಮಗಳಿಗೆ ಹಣಕಾಸಿನ ನೆರವು ದೊರೆಯಲಿದೆ. ದೇಶದ ರಫ್ತು ವ್ಯವಸ್ಥೆ ಸದೃಢಗೊಳ್ಳಲಿದ್ದು, ಅಗಾಧ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಸಿದ್ಧ ಉಡುಪು ರಫ್ತು ಉತ್ತೇಜನ ಮಂಡಳಿಯ (ಎಇಪಿಸಿ) ಉಪಾಧ್ಯಕ್ಷ ಹೇಳಿದ್ದಾರೆ.
ಜವಳಿ ಉತ್ಪನ್ನಗಳ ರಫ್ತು ಏರಿಕೆ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 111 ದೇಶಗಳಿಗೆ ಭಾರತದಿಂದ ಆಗಿರುವ ಜವಳಿ ಉತ್ಪನ್ನಗಳ ರಫ್ತು ಶೇ 10ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ದೇಶದ ಜವಳಿ ಉತ್ಪನ್ನಗಳ ರಫ್ತು ಹಣಕಾಸಿನ ಮೌಲ್ಯದಲ್ಲಿ ₹68,453 ಕೋಟಿಯಷ್ಟಾಗಿತ್ತು. ಈ ಬಾರಿ ಅದು ₹75,291 ಕೋಟಿಯಷ್ಟಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಅನಿಶ್ಚಿತತೆ, ಸುಂಕ ಸಂಬಂಧಿತ ಸವಾಲುಗಳ ನಡುವೆಯೂ ದೇಶದ ಜವಳಿ ರಫ್ತು ಮೌಲ್ಯ ಹೆಚ್ಚಳವಾಗಿದೆ ಎಂದು ತಿಳಿಸಿದೆ.
- ಒಟ್ಟಾರೆ ದೇಶದ ಜವಳಿ ಉತ್ಪನ್ನಗಳು, ಸಿದ್ಧ ಉಡುಪುಗಳ ಜಾಗತಿಕ ರಫ್ತು ಪ್ರಮಾಣ ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 0.1ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
- ಹಾಂಗ್‌ಕಾಂಗ್‌ಗೆ ದೇಶದ ರಫ್ತು ಶೇ 69ರಷ್ಟು ಹೆಚ್ಚಳವಾಗಿದೆ. ಈಜಿಪ್ಟ್, ಸೌದಿ ಅರೇಬಿಯಾ, ಯುಎಇ, ಬ್ರಿಟನ್, ಜಪಾನ್, ಜರ್ಮನಿ, ಸ್ಪೇನ್ ಮತ್ತು ಫ್ರಾನ್ಸ್‌ಗೆ ರಫ್ತು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಜವಳಿ ಉತ್ಪನ್ನಗಳ ಒಟ್ಟು ರಫ್ತು ಶೇ 3.42ರಷ್ಟು ಮತ್ತು ಸೆಣಬು ಶೇ 5.56ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.
ಓಪನ್‌ಎಐ-ಫೋನ್‌ಪೇ ಪಾಲುದಾರಿಕೆ
ಸಂದರ್ಭ: ದೇಶದ ಹಣಕಾಸು ತಂತ್ರಜ್ಞಾನ ಕಂಪನಿ ‘ಫೋನ್‌ಪೇ’ ತನ್ನ ಬಳಕೆದಾರರಿಗೆ ಚಾಟ್ಜಿಪಿಟಿ ಸೌಲಭ್ಯಗಳನ್ನು ಕಲ್ಪಿಸಲು ಅಮೆರಿಕದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ಕಂಪನಿ ಓಪನ್ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
- ಫೋನ್‌ಪೇ ಗ್ರಾಹಕರ ಆ್ಯಪ್ ಮತ್ತು ಫೋನ್‌ಪೇ ಬಿಸಿನೆಸ್ ಆ್ಯಪ್ ಮೂಲಕವೇ ‘ಚಾಟ್‌ಜಿಪಿಟಿ’ಯ ಆಧುನಿಕ ಎ.ಐ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳ ಬಹುದು ಎಂದು ಕಂಪನಿ ತಿಳಿಸಿದೆ.
- ಇದು ಬಳಕೆದಾರರಿಗೆ ಪ್ರವಾಸದ ಯೋಜನೆ ರೂಪಿಸುವುದರಿಂದ ಆರಂಭಿಸಿ ಶಾಪಿಂಗ್ ನಡೆಸುವುದರವರೆಗಿನ ದಿನನಿತ್ಯದ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಸೆಸ್ ಪ್ರಸ್ತಾವ ಒಪ್ಪದ ಆರ್ಥಿಕ ಇಲಾಖೆ
ಸಂದರ್ಭ: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ₹1 ಸೆಸ್ ವಿಧಿಸುವ ಕಾರ್ಮಿಕ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.
- ಆದರೆ, ಈ ಪ್ರಸ್ತಾವ ಅನುಷ್ಠಾನಕ್ಕೆ ಸೂಕ್ತವಾಗಿಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆ, ಪ್ರಸ್ತಾವವನ್ನು ತಿರಸ್ಕರಿಸಿದೆ.
- ‘ಅಸಂಘಟಿತ ವಲಯದಲ್ಲಿ ಸುಮಾರು 1.30 ಕೋಟಿ ಕಾರ್ಮಿಕರು ಇದ್ದಾರೆ. ಇಂತಹ ಕಾರ್ಮಿಕರ ಕಲ್ಯಾಣ ಹಾಗೂ ಅವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ದೊಡ್ಡ ಮೊತ್ತದ ಸಂಪನ್ಮೂಲದ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಮೇಲೆ ಸೆಸ್ ವಿಧಿಸುವುದರಿಂದ ವಾರ್ಷಿಕ ಸುಮಾರು ₹2,120 ಕೋಟಿ ಸಂಗ್ರಹವಾಗುತ್ತದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಾದ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದ್ದಾರೆ.
- ‘ಅಸಂಘಟಿತ ವಲಯಕ್ಕೆ ಪ್ರತ್ಯೇಕ ಸೆಸ್ ಸಂಗ್ರಹಿಸಿದರೆ ಆರೋಗ್ಯ ಸೌಲಭ್ಯಕ್ಕೆ ₹1,772 ಕೋಟಿ ವಿನಿಯೋಗಿಸಲಾಗು ವುದು. ಉಳಿದ ಹಣವನ್ನು 62 ಲಕ್ಷ ಕಾರ್ಮಿಕ ಕುಟುಂಬಗಳ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೂ ಹಣ ನೀಡಲಾಗುವುದು’ ಎಂದು ಲಾಡ್ ಹೇಳಿದ್ದಾರೆ.
‘ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ’
ಸಂದರ್ಭ: ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಚರ್ಚೆ ನಡೆಸಿದರು.
- ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ದಕ್ಷಿಣ ಕನ್ನಡ, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಬೇಕೆಂದು ಕೋರಿದರು.
- ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಸಚಿವ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ನನ್ನ ಪ್ರಸ್ತಾವನೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
- ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಗಾಣಿಕೆ ಸುಲಭ ವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಬಂದರೆ ಇಡೀ ರಾಜ್ಯಕ್ಕೆ ಸಮಗ್ರವಾಗಿ ಅನುಕೂಲ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶಗಳು ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣುವುದಲ್ಲದೆ, ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಕಾಣಿಕೆ ನೀಡುತ್ತವೆ ಎಂದು ಕುಮಾರಸ್ವಾಮಿ ತಿಳಿಸಿದರು.
- ಭಾರತಕ್ಕೆ ಎಂಟು ಚೀತಾ ಹಸ್ತಾಂತರ
ಸಂದರ್ಭ: ಬೋಟ್ಸ್ವಾನಾ ಎಂಟು ಚೀತಾ ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.
- ಬೋಟ್ಸ್‌ವಾನಾಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಚೀತಾಗಳನ್ನು ಅಲ್ಲಿನ ಅಧ್ಯಕ್ಷ ಡುಮಾ ಗಿಡೋನ್ ಬೋಕೊ ಹಸ್ತಾಂತರ ಮಾಡಿದರು.
- ಬೋಟ್ಸ್‌ವಾನಾಗೆ ಮುರ್ಮು ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಅಂತಿಮ ದಿನ ಮೊಕೊಲೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಚೀತಾಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
- ಸಂರಕ್ಷಿತ ಅರಣ್ಯ ಪ್ರದೇಶವನ್ನು ಬೋಕೊ ಅವರ ಜೊತೆಗೂಡಿ ಮುರ್ಮು ಅವರು ಸಫಾರಿ ವಾಹನದಲ್ಲಿ ತೆರಳಿ ವೀಕ್ಷಿಸಿದರು. ಭಾರತ ಮತ್ತು ಬೋಟ್ಸ್‌ವಾನಾನ ವನ್ಯಜೀವಿ ಅಧಿಕಾರಿಗಳು ಹಸ್ತಾಂತರ ಪ್ರಕ್ರಿಯೆ ಬಗ್ಗೆ ವಿವರಿಸಿದರು.
- ಎಂಟು ಚೀತಾಗಳನ್ನು ಸದ್ಯ ಪ್ರತ್ಯೇಕವಾಗಿರಿಸಲಾಗಿದ್ದು, ಕೆಲವೇ ವಾರಗಳಲ್ಲಿ ಭಾರತಕ್ಕೆ ಸ್ಥಳಾಂತರಗೊಳ್ಳಲಿವೆ. ಎಂಟು ಚೀತಾಗಳಲ್ಲಿ ಮರಿಗಳೂ ಸೇರಿವೆ.
- ಅಮೆರಿಕನ್ನರಿಗೆ ತರಬೇತಿ ನೀಡಿ ವಾಪಸಾಗಬೇಕು: ಬೆಸೆಂಟ್
ಸಂದರ್ಭ: ‘ಕೌಶಲ ಹೊಂದಿರುವ ವಿದೇಶಿ ಉದ್ಯೋಗಿ ಗಳನ್ನು ಕರೆತರುವುದು ಹಾಗೂ ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸುವುದು. ಆ ಬಳಿಕ ಅವರು ತಮ್ಮ ದೇಶಗಳಿಗೆ ಮರಳಬೇಕು. ಇದು ಎಚ್–1ಬಿ ವೀಸಾದ ಮುಖ್ಯ ಉದ್ದೇಶ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
- ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶವೂ ಇದೇ ಆಗಿದೆ’ ಎನ್ನುವ ಮೂಲಕ ಎಚ್–1ಬಿ ವೀಸಾ ಯೋಜನೆಯನ್ನು ಸಮರ್ಥಿಸಿ ಕೊಂಡಿದ್ದಾರೆ. ‘ವಿದೇಶಗಳಿಂದ ಬರುವ ಉದ್ಯೋಗಿಗಳು ಮೂರು, ಐದು ಇಲ್ಲವೇ ಏಳು ವರ್ಷ ಇಲ್ಲಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರು ಅಮೆರಿಕನ್ ಉದ್ಯೋಗಿಗಳಿಗೆ ತರಬೇತಿ ನೀಡಿ ತಮ್ಮ ದೇಶಗಳಿಗೆ ಹಿಂತಿರುಗಬೇಕು. ನಂತರ, ಅಮೆರಿಕದ ನೌಕರರೇ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡುವಂತಾಗಬೇಕು ಎಂಬುದು ಟ್ರಂಪ್ ಅವರ ಉದ್ದೇಶವಾಗಿದೆ’ ಎಂದು ಸ್ಕಾಟ್ ಹೇಳಿದ್ದಾರೆ.
- ‘ಕೆಲವು ಕೆಲಸಗಳನ್ನು ನಿರ್ವಹಿಸ ಬಲ್ಲಂತಹ ಪ್ರತಿಭಾವಂತರು ಅಮೆರಿಕದಲ್ಲಿ ಇಲ್ಲ’ ಎಂಬ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಕಳೆದ 20–30 ವರ್ಷಗಳವರೆಗೆ ಕೆಲ ನಿರ್ದಿಷ್ಟ ಕೆಲಸಗಳನ್ನು ಇತರ ದೇಶಗಳ ನುರಿತ ಕೆಲಸಗಾರರಿಂದಲೇ ಮಾಡಿಸಲಾಗಿದೆ. ಈಗ, ನೀವು ರಾತ್ರೋರಾತ್ರಿ ಹಡಗು ನಿರ್ಮಾಣ ಕಲಿಯಬೇಕು ಎಂದು ಸ್ಥಳೀಯ ಉದ್ಯೋಗಿಗಳಿಗೆ ಸೂಚನೆ ನೀಡಲು ಸಾಧ್ಯವೇ?’ ಎಂದು ಅವರು ಉತ್ತರಿಸಿದ್ದಾರೆ.
- ಕ್ರಿಸ್ಟಿ ಸಮರ್ಥನೆ: ‘ಅಮೆರಿಕವು ಎಚ್–1ಬಿ ವೀಸಾ ಕಾರ್ಯಕ್ರಮವನ್ನು ಮುಂದುವರಿಸಲಿದೆ. ಈ ವೀಸಾ ಸೌಲಭ್ಯ ಪಡೆದು ಇಲ್ಲಿ ಬಂದವರು ಭಯೋತ್ಪಾದಕರನ್ನು ಹಾಗೂ ಅಮೆರಿಕ ದ್ವೇಷಿಸುವವರನ್ನು ಬೆಂಬಲಿಗರಾಗಿರಬಾರದು’ ಎಂದು ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ ಕ್ರಿಸ್ಟಿ ನೋಯಮ್ ಹೇಳಿದ್ದಾರೆ.
- ಮಿಂಚಿದ ಜ್ಯೋತಿ: ಭಾರತಕ್ಕೆ 3 ಚಿನ್ನ
ಸಂದರ್ಭ: ಅನುಭವಿ ಸ್ಪರ್ಧಿ ಜ್ಯೋತಿ ಸುರೇಖಾ ವೆನ್ನಂ ಮುಂಚೂಣಿ ಯಲ್ಲಿದ್ದ ಭಾರತ ಕಾಂಪೌಂಡ್ ಆರ್ಚರಿ ತಂಡ ಏಷ್ಯನ್ ಚಾಂಪಿಯನ್‌ಷಿಪ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.

- 29 ವರ್ಷ ವಯಸ್ಸಿನ ಜ್ಯೋತಿ ಅವರು ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದರಲ್ಲದೇ, ತಂಡ ವಿಭಾಗದಲ್ಲೂ ಚಿನ್ನ ಗೆಲ್ಲಲು ನೆರವಾದರು.
- ದೀಪ್ಶಿಕಾ, ಪ್ರತೀಕಾ ಪ್ರದೀಪ್ ಅವರ ಜೊತೆಗೂಡಿದ ಜ್ಯೋತಿ ತಂಡ ವಿಭಾಗದ ಫೈನಲ್‌ನಲ್ಲಿ 236–234 ರಿಂದ ದಕ್ಷಿಣ ಕೊರಿಯಾವನ್ನು (ಪಾರ್ಕ್ ಯೆರಿನ್, ಒಹ್ ಯೂಹ್ಯುನ್, ಜುಂಗ್‌ಯೂನ್ ಪಾರ್ಕ್) ಸೋಲಿಸಲು ನೆರವಾದರು.
- ಭಾರತೀಯ ಬಿಲ್ಗಾರ್ತಿಯರ ವ್ಯವಹಾರವಾಗಿದ್ದ ವೈಯಕ್ತಿಕ ಫೈನಲ್‌ನಲ್ಲಿ ಜ್ಯೋತಿ, 17 ವರ್ಷ ವಯಸ್ಸಿನ ಪ್ರತೀಕಾ ಅವರಿಂದ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 147–145ರಲ್ಲಿ ಗೆದ್ದರು.
- ಕಾಂಪೌಂಡ್ ಮಿಶ್ರ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್ ವರ್ಮಾ– ದೀಪಿಕಾ ಜೋಡಿ 153–151 ರಿಂದ ಬಾಂಗ್ಲಾದೇಶದ ಜೋಡಿಯನ್ನು ಸೋಲಿಸಿ ಭಾರತ ಮತ್ತೊಂದು ಚಿನ್ನ ತನ್ನದಾಗಿಸಿಕೊಂಡಿತು.
- ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 229–230ರಲ್ಲಿ ಕಜಾಕಸ್ತಾನ ತಂಡಕ್ಕೆ ಸೋತು ಬೆಳ್ಳಿ ಪದಕ ಗಳಿಸಿತು. ಅಭಿಷೇಕ್ ವರ್ಮಾ, ಸಾಹಿಲ್ ರಾಜೇಶ್ ಜಾಧವ್, ಪ್ರಥಮೇಶ ಬಾಲಚಂದ್ರ ಫುಗೆ ತಂಡದಲ್ಲಿದ್ದರು.
- ಸ್ನೂಕರ್: ಅನುಪಮಾಗೆ ಕಿರೀಟ
ಸಂದರ್ಭ: ಭಾರತದ ಅನುಪಮಾ ರಾಮಚಂದ್ರನ್ ಅವರು ಗುರುವಾರ ನಡೆದ ವಿಶ್ವ ಸ್ನೂಕರ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎನ್‌ಜಿ ಆನ್ ಯಿ ಅವರನ್ನು ಸೋಲಿಸಿ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು.

- ಚೆನ್ನೈನ 23 ವರ್ಷದ ಅನುಪಮಾ ಅವರು 3–2 (51-74, 65-41, 10-71, 78-20, 68-60) ಅಂತರದಿಂದ ಆನ್ ಯಿ ಅವರನ್ನು ಮಣಿಸಿ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಕಿರೀಟವನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಕಳೆದ ವರ್ಷ ಏಷ್ಯನ್ ಸ್ನೂಕರ್ ಪ್ರಶಸ್ತಿಯನ್ನು ಗೆದ್ದಿದ್ದ ಅನುಪಮಾ ಇಲ್ಲಿ ಕೊನೆಯ ಹಂತದಲ್ಲಿ ಅದೃಷ್ಟಶಾಲಿ ಯಾಗಿ ಜಯ ಗಳಿಸಿದರು. ಮೂರು ಬಾರಿ ಚಾಂಪಿಯನ್ ಆನ್ ಯೀ ನಿರ್ಣಾಯಕ ಪಂದ್ಯದಲ್ಲಿ 60-61 ಅಂತರದಿಂದ ಎಡವಿದರು.
- ಸೆಮಿ ಫೈನಲ್‌ನಲ್ಲಿ ಅನುಪಮಾ 3–1ರಿಂದ ಸ್ವದೇಶದ ಕೀರ್ತನಾ ಪಾಂಡಿಯನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು. ಆನ್ ಯಿ 3–0ಯಿಂದ ತಮ್ಮದೇ ದೇಶದ ಸೋ ಮನ್ ಯಾನ್ ಅವರನ್ನು ಸೋಲಿಸಿದ್ದರು.
ಪ್ರಚಲಿತ ವಿದ್ಯಮಾನಗಳು: 13ನೇ ನವೆಂಬರ್ 2025
- ‘ರಾಜ್ಯದಲ್ಲಿ ಹೂಡಿಕೆಗೆ ಸಿಂಗಪುರ ಉತ್ಸುಕ’
ಸಂದರ್ಭ: ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಿಂಗಪುರ ಹೆಚ್ಚು ಉತ್ಸುಕವಾಗಿದೆ. ಆ ದೇಶದ ಜತೆ ತಂತ್ರಜ್ಞಾನ ಹಂಚಿಕೊಳ್ಳುವ ಮತ್ತು ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಕುರಿತು ಸಿಂಗಪುರದ ವಿದೇಶಾಂಗ ಸಚಿವರ ಜತೆ ಚರ್ಚೆ ನಡೆಸಲಾಗಿದೆ.
- ಸಿಂಗಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್ ಶಿಯೋ ಹುಯಂಗ್ ಅವರ ನೇತೃತ್ವದ ನಿಯೋಗದ ಜತೆ ಚರ್ಚೆ.
- ಹಲವು ದೇಶಗಳ ಜನ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ಹೀಗಾಗಿ ಸಿಂಗಪುರ ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ ಎಂದರು.
‘2026ರಲ್ಲಿ ಸಿಂಗಪುರಕ್ಕೆ’
- ‘ಭಾರತದಲ್ಲಿ ಅತ್ಯಧಿಕ ವಿದೇಶಿ ನೇರ ಹೂಡಿಕೆ ಮಾಡುತ್ತಿ ರುವ ಸಿಂಗಪುರ ಜತೆ ಕೈಗಾರಿಕಾ ಮತ್ತು ವಾಣಿಜ್ಯ ಸಹಭಾಗಿತ್ವ ಬೆಳೆಸಿಕೊಳ್ಳಲು ರಾಜ್ಯದ ಪಾಲಿಗೆ ಒಳ್ಳೆಯ ಅವಕಾಶ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ 2026ರಲ್ಲಿ ಸಿಂಗಪುರಕ್ಕೆ ಭೇಟಿ ನೀಡಲಾಗುವುದು’ ಎಂದು ಕೈಗಾರಿಕಾ ಸಚಿವ.
- ಸಿಂಗಪುರ ಭೇಟಿಗೂ ಮುನ್ನ ದ್ವಿಪಕ್ಷೀಯ ಕೈಗಾರಿಕಾ ಬಾಂಧವ್ಯ ವರ್ಧನೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿಚಾರ ವಿನಿಮಯ ನಡೆಸಲಾಗುವುದು. ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್, ಫಿನ್-ಟೆಕ್, ಚಿಪ್ ವಿನ್ಯಾಸ, ಔಷಧ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ ಎಂದರು.
‘ಹೂಡಿಕೆ: ಅಮೆರಿಕ ಕಂಪನಿಗಳ ಆಸಕ್ತಿ’
- ‘ಅಮೆರಿಕದ ಉತಾ ಪ್ರಾಂತ್ಯದ ವೈಮಾಂತರಿಕ್ಷ ಕ್ಷೇತ್ರದ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ, ಬೃಹತ್ ಕೈಗಾರಿಕಾ ಸಚಿವ.
- ‘ತಯಾರಿಕಾ, ಜೀವವಿಜ್ಞಾನ, ರೋಗನಿಧಾನ, ಶಿಕ್ಷಣ ಮತ್ತು ವಿದ್ಯುತ್ ಚಾಲಿತ ಸಾರ್ವಜನಿಕ ಸಾರಿಗೆ ಹಾಗೂ ವಾಹನ ಕ್ಷೇತ್ರದ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ.
- ‘ಇನ್ಫೊಸಿಸ್ ಪ್ರಶಸ್ತಿ’ ಪ್ರಕಟ

- ವರ್ಷಕ್ಕೆ 12 ಮುಟ್ಟಿನ ರಜೆ: ಆದೇಶ
ಸಂದರ್ಭ: ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು (ವೇತನ ಸಹಿತ) ನೀಡುವ ಕುರಿತು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
- ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ವಯವಾಗಲಿದೆ.
- 18ರಿಂದ 52ರ ವಯೋಮಾನದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಸೌಲಭ್ಯ ನೀಡಬೇಕು ಎಂದು ಎಲ್ಲ ಉದ್ಯೋಗದಾತರಿಗೂ ಆದೇಶದಲ್ಲಿ ಸೂಚಿಸಿದೆ.
ಷರತ್ತುಗಳು:
- ಆಯಾ ತಿಂಗಳ ರಜೆಯನ್ನು ಆಯಾ ತಿಂಗಳಲ್ಲೇ ಬಳಸಿಕೊಳ್ಳಬೇಕು
- ಒಂದು ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸುವಂತಿಲ್ಲ
- ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ನೀಡಬೇಕಿಲ್ಲ
- 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆಯ ಸೌಲಭ್ಯ ಇಲ್ಲ
- ಸರ್ಕಾರಿ, ಬಹುರಾಷ್ಟ್ರೀಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಅನ್ವಯ
- ಮೀಸಲಾತಿ ಅಧಿಸೂಚನೆ: ನೋಟಿಸ್ :ಹೈಕೋರ್ಟ್ ಮೆಟ್ಟಿಲೇರಿದ ರಾಜ್ಯ ಚುನಾವಣಾ ಆಯೋಗ
ಸಂದರ್ಭ: ‘ಮುಂದಿನ ವರ್ಷ ಜನವರಿಯಲ್ಲಿ ಅವಧಿ ಪೂರ್ಣಗೊಳ್ಳಲಿರುವ 5,950 ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿಯ ಅಧಿಸೂಚನೆ ಹೊರಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.
- ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
- ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ‘ಇದೊಂದು ಗಂಭೀರ ವಿಷಯವಾಗಿದ್ದು, ಸರ್ಕಾರದಿಂದ ಅಗತ್ಯ ಮಾಹಿತಿಗಳನ್ನು ಪಡೆದು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿ ಸಲು ಆದೇಶಿಸಿತು. ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ.
- ವಿವಾದಾತ್ಮಕ ಮಸೂದೆ ಜಂಟಿ ಸಮಿತಿ ರಚನೆ
ಸಂದರ್ಭ: ಕನಿಷ್ಠ 30 ದಿನ ಜೈಲುವಾಸ ಅನುಭವಿಸಿದ ಪ್ರಧಾನಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ, ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ವಿವಾದಾತ್ಮಕ ಮಸೂದೆಗಳನ್ನು ಪರಿಶೀಲಿಸಲು ಸಂಸತ್ತಿನ ಜಂಟಿ ಸಮಿತಿಯನ್ನು ರಚಿಸಲಾಗಿದೆ.
- ಮಸೂದೆಯನ್ನು ಸಂಸದರ ಸಮಿತಿಯ ಪರಿಶೀಲನೆಗೆ ಕಳುಹಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿ 84 ದಿನಗಳು ಕಳೆದಿವೆ. ಆದರೆ, ಎನ್‌ಸಿಪಿ (ಎಸ್‌ಪಿ) ಹೊರತುಪಡಿಸಿ ಇಂಡಿಯಾ ಮೈತ್ರಿಕೂಟವು ಯಾವುದೇ ಸಂಸದರನ್ನು ಈ ಸಮಿತಿಗೆ ನಾಮನಿರ್ದೇಶನ ಮಾಡಲು ನಿರಾಕರಿಸಿದ್ದರಿಂದ ಸಮಿತಿ ರಚನೆ ಕಾರ್ಯ ಬಾಕಿ ಉಳಿದಿತ್ತು.
- ಬಿಜೆಪಿಯ ಅಪರಾಜಿತಾ ಸಾರಂಗಿ ಅಧ್ಯಕ್ಷತೆಯಲ್ಲಿ 31 ಸದಸ್ಯರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಬಿಜೆಪಿಯ 15 ಮಂದಿ ಸೇರಿ ಎನ್‌ಡಿಎನ 26 ಸಂಸದರು, ವಿರೋಧ ಪಕ್ಷಗಳ ನಾಲ್ವರು ಸದಸ್ಯರಿದ್ದಾರೆ. ಕರ್ನಾಟಕದ ಸುಧಾಮೂರ್ತಿ ಈ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಜೆಡಿಎಸ್ ಸಂಸದ ಎಂ. ಮಲ್ಲೇಶಬಾಬು ಸಹ ಈ ಸಮಿತಿ ಸದಸ್ಯರು.
- ಸುಪ್ರಿಯಾ ಸುಳೆ (ಎನ್‌ಸಿಪಿ –ಎಸ್‌ಪಿ), ಅಕಾಲಿ ದಳದ ಹರ್‌ಸಿಮ್ರತ್ ಕೌರ್, ವೈಎಸ್‌ಆರ್ ಕಾಂಗ್ರೆಸ್‌ನ ಎಸ್. ನಿರಂಜನ ರೆಡ್ಡಿ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಈ ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸಂಸದರು. ಬಿಜೆಡಿ ಮತ್ತು ಬಿಆರ್‌ಎಸ್‌ನ ಸಂಸದರು ಈ ಸಮಿತಿಯಲ್ಲಿ ಇಲ್ಲ.
- ಸಮಿತಿಯಲ್ಲಿ ಲೋಕಸಭೆಯ 21, ರಾಜ್ಯಸಭೆಯ 10 ಸದಸ್ಯರು ಇದ್ದಾರೆ. ಮುಂದಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನ ಸಮಿತಿ ವರದಿ ಸಲ್ಲಿಸಲಿದೆ. ಆದರೂ, ವರದಿ ಸಲ್ಲಿಸಲು ನಿಗದಿಪಡಿಸಿರುವ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳಿವೆ.
- ಇಂಡಿಯಾ ಮೈತ್ರಿಕೂಟ, ತೃಣಮೂಲ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಾರ್ಟಿ ಮತ್ತು ಶಿವಸೇನಾ (ಯುಬಿಟಿ) ಈ ಸಮಿತಿಯನ್ನು ಬಹಿಷ್ಕರಿಸುವುದಾಗಿ ಹೇಳಿವೆ.
- 77 ಅಡಿ ರಾಮನ ಪ್ರತಿಮೆ: ಪರ್ತಗಾಳಿ ಮಠ: ನ.28ಕ್ಕೆ ಪ್ರಧಾನಿಯಿಂದ ಜನಾರ್ಪಣೆ
ಸಂದರ್ಭ: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಕರ್ನಾಟಕ ಗೋವಾ ಗಡಿ ಭಾಗದ ಕಾನಕೋಣ ಸಮೀಪದ ಪರ್ತಗಾಳಿಯಲ್ಲಿ ನಿರ್ಮಿಸಿರುವ 77 ಅಡಿ ಎತ್ತರದ ರಾಮನ ಕಂಚಿನ ಪ್ರತಿಮೆ ಹಾಗೂ ರಾಮಾಯಣ ವನ ನ.28ಕ್ಕೆ ಜನಾರ್ಪಣೆಗೊಳ್ಳಲಿದೆ.
- ಐದೂವರೆ ಶತಮಾನದ ಇತಿಹಾಸ ಹೊಂದಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮೂಲ ಮಠದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂದು ಮಧ್ಯಾಹ್ನ 3.50ಕ್ಕೆ ಉದ್ಘಾಟಿಸುವರು.
- 13ನೇ ಶತಮಾನದಲ್ಲಿ ಮಧ್ವಾ ಚಾರ್ಯರು ಸ್ಥಾಪಿಸಿದ ಮಠವಿದು. ಸದ್ಯ ದಕ್ಷಿಣ ಗೋವಾದ ಪರ್ತಗಾಳಿ ಗ್ರಾಮದ ಕುಶಾವತಿ ನದಿಯ ದಡದಲ್ಲಿರುವ ಪ್ರಧಾನ ಮಠದ ಆವರಣದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಭಾರತದಲ್ಲಿಯೇ ಅತಿ ಎತ್ತರದ ರಾಮನ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ಇದರೊಟ್ಟಿಗೆ ರಾಮಾಯಣ ಉದ್ಯಾನ, 3ಡಿ ಮ್ಯಾಪಿಂಗ್, ವಿಶಾಲ ಸಭಾಂಗಣ, ಬಹು ಬಳಕೆಯ ಕಟ್ಟಡ, ಮ್ಯೂಸಿಯಂ ಅನ್ನು ರೂಪಿಸಲಾಗಿದೆ ಎಂದರು.
- ಮಠದ 24ನೇ ಪೀಠಾಧ್ಯಕ್ಷರಾದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಮಾರ್ಗದರ್ಶನದಲ್ಲಿಯೇ 550ನೇ ವರ್ಷದ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಆರಂಭಗೊಂಡು ಡಿ.7ರವರೆಗೂ ಪರ್ತಗಾಳಿಯಲ್ಲಿ ಇರಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು
- ಮಠದ 550 ನೇ ವರ್ಷದ ಸಂದರ್ಭದಲ್ಲಿ ವೇದಿಕ್ ಪಾಠ ಶಾಲೆ ನಿರ್ಮಿಸಿ, ಗುರುಕುಲ ಮಾದರಿಯಲ್ಲಿ 12 ವರ್ಷ ಶಿಕ್ಷಣವನ್ನು ನೀಡಲು ಮಠ ಮುಂದಾಗಿದೆ. 1 ಲಕ್ಷ ಚದರಡಿ ಪ್ರದೇಶದಲ್ಲಿ ಗುರುಕುಲ ವಿದ್ಯಾಪೀಠ ಕೆಲಸವೂ ಶುರುವಾಗಿದೆ ಎಂದು ಹೇಳಿದರು.
- ರಫ್ತು ಉತ್ತೇಜನಾ ಯೋಜನೆಗೆ ಒಪ್ಪಿಗೆ
ಸಂದರ್ಭ: ಆರು ವರ್ಷಗಳ ಅವಧಿಯಲ್ಲಿ ಜಾರಿಗೆ ಬರುವ, ₹25 ಸಾವಿರ ಕೋಟಿ ಮೊತ್ತದ ರಫ್ತು ಉತ್ತೇಜನಾ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಯೋಜನೆಯು ಈ ಹಣಕಾಸು ವರ್ಷದಿಂದಲೇ ಜಾರಿಗೆ ಬರಲಿದೆ.
- ಈ ಯೋಜನೆಯು, ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮವನ್ನು ನಿಭಾಯಿಸಲು ರಫ್ತುದಾರರಿಗೆ ನೆರವಾಗಲಿದೆ. ಎರಡು ಉಪ ಯೋಜನೆಗಳ ಮೂಲಕ (‘ನಿರ್ಯಾತ್ ಪ್ರೋತ್ಸಾಹನ್’ ಮತ್ತು ‘ನಿರ್ಯಾತ್ ದಿಶಾ’) ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
- ಈ ಯೋಜನೆಯು ರಫ್ತು ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆಯ ನಂತರ ತಿಳಿಸಿದರು.
- ಚಿಲ್ಲರೆ ಹಣದುಬ್ಬರ ಇಳಿಕೆ: ದಶಕದ ಕನಿಷ್ಠ ಮಟ್ಟಕ್ಕೆ ಹಣದುಬ್ಬರ l ಇಳಿಕೆಗೆ ಜಿಎಸ್ಟಿ ಪರಿಷ್ಕರಣೆಯೂ ಕಾರಣ
ಸಂದರ್ಭ: ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್ ನಲ್ಲಿ ಶೇಕಡ 0.25ಕ್ಕೆ ಇಳಿಕೆಯಾಗಿದೆ. ಜನರು ನಿತ್ಯದ ಬದುಕಿನಲ್ಲಿ ಹೆಚ್ಚಾಗಿ ಬಳಕೆ ಮಾಡುವ ಸರಿಸುಮಾರು 380 ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದ್ದುದು ಕೂಡ ಹಣದುಬ್ಬರ ಇಳಿಕೆಗೆ ಒಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.
- ಅಲ್ಲದೆ, ತರಕಾರಿ, ಹಣ್ಣುಗಳು ಮತ್ತು ಮೊಟ್ಟೆ ಬೆಲೆಯು ಕಡಿಮೆ ಆಗಿರುವುದು ಕೂಡ ಹಣದುಬ್ಬರ ದರವನ್ನು ತಗ್ಗಿಸಿದೆ. ಅಕ್ಟೋಬರ್‌ನಲ್ಲಿ ದಾಖಲಾಗಿರುವ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು 2014ರ ಜನವರಿ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.
- ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 1.44ರಷ್ಟು ಇತ್ತು. ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಇದು ಶೇ 6.21ರಷ್ಟು ಆಗಿತ್ತು.
- ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಅಕ್ಟೋಬರ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ (–)5.02ರಷ್ಟು ಆಗಿತ್ತು.
- ಹಣದುಬ್ಬರವು ಇಳಿಕೆ ಕಂಡಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಜಿಎಸ್‌ಟಿ ದರ ಪರಿಷ್ಕರಣೆಯೂ ಸೇರಿದೆ ಎಂದು ಎನ್‌ಎಸ್‌ಒ ಹೇಳಿದೆ. ಎಣ್ಣೆ ಮತ್ತು ಕೊಬ್ಬುಗಳು, ತರಕಾರಿಗಳು, ಹಣ್ಣುಗಳು, ಮೊಟ್ಟೆ, ಪಾದರಕ್ಷೆ, ಏಕದಳ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳು, ಸಾರಿಗೆ ಹಾಗೂ ಸಂವಹನ ವರ್ಗಗಳಲ್ಲಿ ಹಣ ದುಬ್ಬರ ಇಳಿಕೆ ಆಗಿದ್ದುದು ಕೂಡ ಒಂದು ಕಾರಣ ಎಂದು ಎನ್‌ಎಸ್‌ಒ ಹೇಳಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣವು (–)0.25 ಆಗಿದೆ. ನಗರ ಪ್ರದೇಶಗಳಲ್ಲಿ ಇದು ಶೇ 0.88ರ ಮಟ್ಟದಲ್ಲಿದೆ.
- ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಚಿಲ್ಲರೆ ಹಣದುಬ್ಬರದ ಅಂದಾಜು ಪ್ರಮಾಣವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ 2.6ರ ಮಟ್ಟದಿಂದ ತುಸು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
- ‘ಸಮಿತಿಯು ಅಕ್ಟೋಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡುವುದಕ್ಕೆ ಹಣದುಬ್ಬರದ ಇಳಿಕೆಯು ಒತ್ತಾಸೆ ನೀಡುತ್ತದೆ. ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ಆಶ್ಚರ್ಯಕರ ಮಟ್ಟದಲ್ಲಿ ಏರಿಕೆ ಕಾಣದೆ ಇದ್ದರೆ, ರೆಪೊ ದರ ಇಳಿಕೆಯ ಸಾಧ್ಯತೆಗೆ ಬಲ ಬರುತ್ತದೆ’ ಎಂದು ಅದಿತಿ ಅವರು ಅಭಿಪ್ರಾಯಪಟ್ಟಿದ್ದಾರೆ.
- ಜಿಎಸ್‌ಟಿ ದರ ಪರಿಷ್ಕರಣೆಯು ಸೆಪ್ಟೆಂಬರ್ ಕೊನೆಯಲ್ಲಿ ಜಾರಿಗೆ ಬಂತು. ಅದರ ಧನಾತ್ಮಕ ಪರಿಣಾಮವು ಅಕ್ಟೋಬರ್‌ನಲ್ಲಿ ಕಂಡುಬಂದಿದೆ ಎಂದು ಕೇರ್‌ಎಜ್ ರೇಟಿಂಗ್ಸ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಹೇಳಿದ್ದಾರೆ.
- ‘ಹಣಕಾಸು ನೀತಿಗಳ ದೃಷ್ಟಿಯಿಂದ ಹೇಳುವುದಾದರೆ, ಹಣದುಬ್ಬರ ಕಡಿಮೆ ಆಗಿರುವುದು, ಆರ್ಥಿಕ ಬೆಳವಣಿಗೆಯ ಮೇಲೆ ಗಮನ ನೀಡಲು ಆರ್‌ಬಿಐಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತದೆ… ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಬೆಳವಣಿಗೆ ದರವು ಕಡಿಮೆ ಆದರೆ, ರೆಪೊ ದರ ಕಡಿತಕ್ಕೆ ಸಂದರ್ಭ ಸೃಷ್ಟಿಯಾಗುತ್ತದೆ’ ಎಂದು ಸಿನ್ಹಾ ಅವರು ಹೇಳಿದ್ದಾರೆ.
- ‘ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್’ಗೆ ಸೂಚನೆ
ಸಂದರ್ಭ: ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್’ ತಯಾರಿಸಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಸ್ವಿಟ್ಜರ್‌ಲೆಂಡ್‌ನಲ್ಲಿ ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪ್ರಚುರಪಡಿಸಲು ‘ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್’ ಸಿದ್ಧಪಡಿಸಿದೆ. ಅದೇ ಮಾದರಿ ಯಲ್ಲಿ ಇಲ್ಲೂ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ಸಿದ್ದಪಡಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
- ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸ್ವಿಸ್‌ನೆಕ್ಸ್ ಇಂಡಿಯಾದ ಸಿಇಓ ಮತ್ತು ಕೌನ್ಸಲ್ ಜನರಲ್ ಡಾ ಎಂಜೆಲಾ ಹೊನೆಗ್ಗರ್ ಮತ್ತು ರಾಜ್ಯದ ಅಧಿಕಾರಿಗಳ ಜತೆ ಬೋಸರಾಜು ಮಾತುಕತೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ಸ್ವಿಟ್ಜರ್‌ಲೆಂಡ್ ಮಧ್ಯೆ ಸಂಶೋಧನೆ ಮತ್ತು ಉದ್ಯಮಗಳ ತಂತ್ರಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತೂ ವಿವರವಾಗಿ ಚರ್ಚಿಸಲಾಯಿತು.
- ಬೆಂಗಳೂರು ನಗರವು ದೇಶದ ಕ್ವಾಂಟಮ್ ನವೋದ್ಯಮದ ರಾಜಧಾನಿ. ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಸಾಕಷ್ಟು ನವೋದ್ಯಮಗಳು ಮತ್ತು ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಹಲವಾರು ಸಂಸ್ಥೆಗಳೂ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ದೇಶದಲ್ಲಿಯೇ ಅತಿ ಹೆಚ್ಚು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿರುವ ಮಾನವ ಸಂಪನ್ಮೂಲವೂ ಲಭ್ಯವಿದೆ ಎಂದು ಬೋಸರಾಜು ತಿಳಿಸಿದರು.
- ದೇಶದಲ್ಲೇ ಮೊದಲ ಕ್ಯೂ–ಸಿಟಿಯನ್ನು ನಿರ್ಮಾಣ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿದೆ. ಈ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಚುರ ಪಡಿಸಲು ಮ್ಯಾಪ್ ರಚಿಸುವುದು ಅಗತ್ಯವಿದೆ ಎಂದರು.
- ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ವಿಸ್‌ನೆಕ್ಸ್ ಸಿಇಓ ಡಾ. ಎಂಜೆಲಾ ಹೊನೆಗ್ಗರ್ ಅವರು, ಸ್ವಿಟ್ಜರ್‌ಲೆಂಡ್ ಕ್ವಾಂಟಮ್ ಕ್ಷೇತ್ರದ ಆವಿಷ್ಕಾರ ಹಾಗೂ ಉದ್ಯಮಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ ಅಮೆರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ಪ್ರಚಾರ ಮಾಡುವ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್ ರಚಿಸಲಾಯಿತು ಎಂದರು.
- ಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್‌ನಿಂದ ಕ್ವಾಂಟಮ್ ಕ್ಷೇತ್ರದ ಯಾವ ವಿಷಯದಲ್ಲಿ ಯಾವ ಯಾವ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಹಯೋಗದ ಅವಕಾಶ ಎಲ್ಲಿದೆ ಎನ್ನುವ ಮಾಹಿತಿಯನ್ನು ಕ್ರೋಡೀಕರಿಸಲಾಗಿತ್ತು. ಇದೇ ರೀತಿ ಮ್ಯಾಪ್ ಸಿದ್ದಪಡಿಸಿದರೆ ಎರಡೂ ರಾಷ್ಟ್ರಗಳ ನಡುವೆ ವಿಚಾರ ವಿನಿಮಯದ ಮೊದಲ ಹೆಜ್ಜೆ ಯಾಗಲಿದೆ ಎಂದು ಹೇಳಿದರು.
- ಎ.ಐ ಪರಿಕರದಿಂದ ಶೇ 50ರಷ್ಟು ಕೆಲಸ: ಸೇಲ್ಸ್ಫೋರ್ಸ್
ಸಂದರ್ಭ: 2027ರ ವೇಳೆಗೆ ದೇಶದ ಸೇವಾ ವಲಯದಲ್ಲಿ ಗ್ರಾಹಕರಿಂದ ಬರುವ ಕೋರಿಕೆಗಳ ಪೈಕಿ ಶೇ 50ರಷ್ಟಕ್ಕೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಪರಿಕರಗಳೇ ಪರಿಹಾರ ನೀಡಲಿವೆ ಎಂದು ಸೇಲ್ಸ್ಫೋರ್ಸ್ ಸಮೀಕ್ಷೆ ಹೇಳಿದೆ.
- ಅಮೆರಿಕ ಮೂಲದ ಸೇಲ್ಸ್‌ಫೋರ್ಸ್ ಕಂಪನಿಯು ಕ್ಲೌಡ್ ಆಧಾರಿತ ತಂತ್ರಾಂಶ ಸೇವೆಗಳನ್ನು ಒದಗಿಸುತ್ತದೆ.
- ಸೇವಾ ವಲಯದ ತಜ್ಞರ ಪ್ರಕಾರ, ಗ್ರಾಹಕರಿಂದ ಈಗ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಬರುತ್ತಿರುವ ಕೋರಿಕೆಗಳ ಪೈಕಿ ಶೇ 30ರಷ್ಟನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರಿಹರಿಸುತ್ತಿದೆ. ಇದು 2027ರ ವೇಳೆಗೆ ಶೇ 50ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಸೇಲ್ಸ್‌ಫೋರ್ಸ್ ತನ್ನ ಇತ್ತೀಚಿನ ವರದಿಯೊಂದರಲ್ಲಿ ತಿಳಿಸಿದೆ.
- ‘ಎ.ಐ ತಂತ್ರಜ್ಞಾನದ ಬಳಕೆಯಿಂದ ಸೇವಾ ವೆಚ್ಚವು ಕಡಿತಗೊಂಡಿದ್ದು, ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಸುಧಾರಣೆ ಆಗಿದೆ’ ಎಂದು ಸೇಲ್ಸ್‌ಫೋರ್ಸ್ ಇಂಡಿಯಾದ ಸಲ್ಯೂಷನ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ದೀಪು ಚಾಕೊ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
- ‘ಸೇವಾ ವಲಯದ ಕಂಪನಿಗಳು, ಈ ತಂತ್ರಜ್ಞಾನ ಬಳಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ತಂತ್ರಜ್ಞಾನದ ಬಳಕೆಯಿಂದ ವರಮಾನವು ಶೇ 16ರಷ್ಟು ಹೆಚ್ಚಳವಾಗಲಿದೆ ಎಂದು ದೇಶದ ಸೇವಾ ವಲಯದ ಕಂಪನಿಗಳು ಭಾವಿಸಿವೆ’ ಎಂದು ಸೇಲ್ಸ್‌ಫೋರ್ಸ್ ಇಂಡಿಯಾದ ಮಾರಾಟ ಮತ್ತು ವಿತರಣೆಯ ವ್ಯವಸ್ಥಾಪಕ ನಿರ್ದೇಶಕಿ ಮನ್ಕಿರಣ್ ಚೌಹಾನ್ ತಿಳಿಸಿದರು.
- ಈ ವರ್ಷದ ಏಪ್ರಿಲ್ 25ರಿಂದ ಜೂನ್ 6ರವರೆಗೆ ಜಗತ್ತಿನ 6,500 ಕಂಪನಿಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.
- ‘ವಿಶ್ವದೆಲ್ಲೆಡೆಯಿಂದ ಪ್ರತಿಭಾವಂತರ ಕರೆತರಲು ಎಚ್–1ಬಿ ವೀಸಾ ಅಗತ್ಯ’
ಸಂದರ್ಭ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾ ಕಾರ್ಯಕ್ರಮ ವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
- ‘ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಅಮೆರಿಕದಲ್ಲಿ ಪ್ರತಿಭಾವಂತರು ಇಲ್ಲ. ಈ ಕೊರತೆ ನೀಗಿಸಲು ವಿಶ್ವದ ವಿವಿಧ ಭಾಗಗಳಿಂದ ಪ್ರತಿಭಾವಂತರನ್ನು ಅಮೆರಿಕಕ್ಕೆ ಕರೆತರುವುದು ಅಗತ್ಯ. ಹೀಗಾಗಿ ಎಚ್–1ಬಿ ವೀಸಾ ಅಗತ್ಯ’ ಎಂದು ಹೇಳಿದ್ದಾರೆ.
- ಫಾಕ್ಸ್ ನ್ಯೂಸ್‌ನ ಲಾರಾ ಇನ್‌ಗ್ರಹಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.
- ‘ಎಚ್–1ಬಿ ವೀಸಾ ಯೋಜನೆ ಟ್ರಂಪ್ ಆಡಳಿತದ ಆದ್ಯತೆ ಆಗಿಲ್ಲವೇ? ಒಂದು ವೇಳೆ, ಅಮೆರಿಕನ್ನರಿಗೆ ನೀಡುವ ವೇತನವನ್ನು ಹೆಚ್ಚಳ ಮಾಡಿದಲ್ಲಿ ಇತರ ದೇಶಗಳಿಂದ ಉದ್ಯೋಗ ಅರಸಿ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆ ಯಾಗುವುದಿಲ್ಲವೇ’ ಎಂಬ ಲಾರಾ ಅವರ ಪ್ರಶ್ನೆಗೆ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮಲ್ಲಿಯೇ ಸಾಕಷ್ಟು ಪ್ರತಿಭೆಗಳಿವೆ ಯಲ್ಲ?’ ಎಂದೂ ಲಾರಾ ಪ್ರಶ್ನಿಸಿದ್ದಾರೆ.
- ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಇಲ್ಲ. ಅಮೆರಿಕವು ಕೆಲ ಕ್ಷೇತ್ರಗಳಿಗೆ ಸಂಬಂಧಿಸಿ ಪ್ರತಿಭೆಗಳನ್ನು ಹೊಂದಿಲ್ಲ. ಅಂತಹ ಪ್ರತಿಭಾವಂತರನ್ನು ಇತರ ದೇಶಗಳಿಂದ ಕರೆತರಬೇಕು. ಇಲ್ಲಿನ ಜನರು ಇನ್ನಷ್ಟು ಕಲಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.
- ಎಚ್–1ಬಿ ವೀಸಾ ದುರ್ಬಳಕೆ ತಡೆಯುವ ಉದ್ದೇಶದಿಂದ ಕಳೆದ ವಾರ ಟ್ರಂಪ್ ಆಡಳಿತವು ತನಿಖೆ ಆರಂಭಿಸಿತ್ತು. ‘ಅಮೆರಿಕದಲ್ಲಿನ ಉದ್ಯೋಗಗಳ ಸಂರಕ್ಷಣೆ ಮಾಡುವ ಅಗತ್ಯ ಇದ್ದು, ಇದಕ್ಕಾಗಿ ಎಚ್–1ಬಿ ವೀಸಾ ದುರ್ಬಳಕೆಗೆ ಕಡಿವಾಣ ಹಾಕಬೇಕಿದೆ. ಹೀಗಾಗಿ 175 ಪ್ರಕರಣಗಳ ಕುರಿತು ತನಿಖೆ ಕೈಗೊಂಡಿದ್ದೇವೆ’ ಎಂದು ಕಾರ್ಮಿಕ ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿತ್ತು.
- ಎಚ್–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಳ ಮಾಡುವ ಆದೇಶಕ್ಕೆ ಟ್ರಂಪ್ ಅವರು ಸೆಪ್ಟೆಂಬರ್‌ನಲ್ಲಿ ಸಹಿ ಹಾಕಿದ್ದರು. ಈ ನೂತನ ಆದೇಶದ ಪ್ರಕಾರ, ಈ ವೀಸಾಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು 1 ಲಕ್ಷ ಡಾಲರ್(ಅಂದಾಜು ₹88 ಲಕ್ಷ) ಶುಲ್ಕ ನೀಡಬೇಕಾಗುತ್ತದೆ.
- ಟ್ರಂಪ್ ಅವರ ಈ ಕ್ರಮದಿಂದ, ಉದ್ಯೋಗ ಅರಸಿ ಅಮೆರಿಕಕ್ಕೆ ತೆರಳುವ ಭಾರತೀಯರಿಗೆ ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿಗೆ ಭಾರಿ ಸಮಸ್ಯೆಯಾಗಿದೆ. ವಿಶೇಷ ಕೌಶಲ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿಗಳಿಗೂ ಈ ಆದೇಶದಿಂದ ಹೊರೆಯಾಗುತ್ತಿದೆ.
ಪ್ರಚಲಿತ ವಿದ್ಯಮಾನಗಳು: 12ನೇ ನವೆಂಬರ್ 2025
- ‘5 ಕಡೆ ಏರೋಸ್ಪೇಸ್ ಪಾರ್ಕ್’: ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಚಾಲನೆ
ಸಂದರ್ಭ: ‘ಬೆಂಗಳೂರು ಸೇರಿದಂತೆ ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.
- ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಅವರು ಚಾಲನೆ ನೀಡಿ ಮಾತನಾಡಿದರು.
- ಕಾಲಿನ್ಸ್ ಏರೋಸ್ಪೇಸ್ ರಾಜ್ಯದಲ್ಲಿ 25 ದಶಲಕ್ಷ ಡಾಲರ್ ಹೂಡಿಕೆ ಮಾಡುತ್ತಿದೆ. ಈ ನೂತನ ಘಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಧುನಿಕ ತಯಾರಿಕೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಕೊಡುಗೆ ಶೇ. 65ರಷ್ಟಿದೆ ಎಂದು ಹೇಳಿದರು.
- ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ತೊಡಗಿಸಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಾಜ್ಯದಲ್ಲಿವೆ.
- ಮಹೀಂದ್ರ ಏರೋಸ್ಪೇಸ್, ರಂಗ್‌ಸನ್ಸ್ ರೀತಿಯ ವೈಮಾಂತರಿಕ್ಷ ಕಂಪನಿಗಳು ರಾಜ್ಯದಲ್ಲಿ ಅಪಾರ ಮೊತ್ತದ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ 48 ಒಡಂಬಡಿಕೆಗಳಾಗಿವೆ.
- ರಂಗ್‌ಸನ್ಸ್ ಕಂಪನಿಯು ಬೋಯಿಂಗ್ ಕಂಪನಿ ಜತೆ ಸಹಭಾಗಿತ್ವ ಹೊಂದಿದ್ದು, ₹2,915 ಕೋಟಿ ಹೂಡಿಕೆ ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ₹45,000 ಕೋಟಿ ಹೂಡಿಕೆ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದು ಅವರು ವಿವರಿಸಿದರು.
- ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ಭಾರತದ ವೈಮಾನಿಕ ಮಾರುಕಟ್ಟೆಯು 2032ರ ವೇಳೆಗೆ ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಇಲ್ಲಿ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ ಯೋಜನೆಯಡಿ ಈಗ ವರ್ಷಕ್ಕೆ 1.2 ಶತಕೋಟಿ ಡಾಲರ್ ವಹಿವಾಟು ನಡೆಯುತ್ತಿದೆ. ಮುಂದಿನ ಏಳು
- ಕ್ವಾಂಟಮ್ ಕಂಪ್ಯೂಟಿಂಗ್ಗೆ ಹೊಸ ದಾರಿ ತೋರಿದ ವಿಜ್ಞಾನಿ
ಸಂದರ್ಭ: ಭೌತಶಾಸ್ತ್ರದ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಬರೆದ ಮೂವರು ಅಸಾಮಾನ್ಯ ವಿಜ್ಞಾನಿಗಳಿಗೆ 2025ರ ನೊಬೆಲ್ ಪ್ರಶಸ್ತಿ ಲಭಿಸಿದೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾದ ಅಧ್ಯಾಪಕರೂ ಹಾಗೂ ಯೇಲ್ ವಿಶ್ವವಿದ್ಯಾಲಯದ ಫ್ರೆಡೆರಿಕ್ ಡಬ್ಲ್ಯೂ. ಬೈನೆಕೆ ಅಪ್ಲೈಡ್ ಫಿಸಿಕ್ಸ್ ಪ್ರಾಧ್ಯಾಪಕ ಎಮೆರಿಟಸ್ ಪ್ರೊ. ಮೈಕೆಲ್ ಎಚ್. ಡೆವೊರೆಟ್ ಕೂಡ ಒಬ್ಬರು.

- ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾನ್ ಕ್ಲಾರ್ಕ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾನ್ ಎಂ. ಮಾರ್ಟಿನಿಸ್ ಅವರೊಂದಿಗೆ ಪ್ರೊ. ಡೆವೊರೆಟ್ ಅವರು ‘ವಿದ್ಯುತ್ ಸರ್ಕ್ಯೂಟ್ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿಯ ಕ್ವಾಂಟೈಸೇಶನ್ ವಿದ್ಯಮಾನಗಳನ್ನು ಪ್ರದರ್ಶಿಸಿದ್ದಕ್ಕಾಗಿ’ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಂಶೋಧನೆಯು ಕ್ವಾಂಟಮ್ ಭೌತಶಾಸ್ತ್ರದ ಅತಿ ಕ್ಲಿಷ್ಟಕರ ತತ್ವಗಳನ್ನು ಪ್ರಾಯೋಗಿಕವಾಗಿ ನಿರೂಪಿಸಿ, ಕ್ವಾಂಟಮ್ ಕಂಪ್ಯೂಟಿಂಗ್‌ನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದೆ.
ಫ್ರಾನ್ಸ್ನಿಂದ ಅಮೆರಿಕದವರೆಗೆ
- 1953ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜನಿಸಿದ ಮೈಕೆಲ್ ಡೆವೊರೆಟ್, ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಲ್ಲಿಯ ಸಾರ್ವಜನಿಕ ಶಾಲೆಗಳಲ್ಲಿ ಪೂರ್ಣಗೊಳಿಸಿದರು. ಫ್ರೆಂಚ್ ಶಿಕ್ಷಣ ವ್ಯವಸ್ಥೆಯಲ್ಲಿ ‘ಗ್ರ್ಯಾಂಡ್ಸ್ ಎಕೋಲ್ಸ್’ ಮಾರ್ಗವನ್ನು ಅನುಸರಿಸಿ, ಎಂಜಿನಿಯರಿಂಗ್ ಅಧ್ಯಯನದಲ್ಲಿ ತೊಡಗಿದರು. ಒರ್ಸೇ ವಿಶ್ವವಿದ್ಯಾಲಯದಲ್ಲಿ ಆಣ್ವಿಕ ಭೌತಶಾಸ್ತ್ರದ ಪ್ರಯೋಗಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಫ್ರಾನ್ಸ್‌ನ ಪರಮಾಣು ಶಕ್ತಿ ಆಯೋಗ(CEA)ದಲ್ಲಿ ಹೆಸರಾಂತ ಅನಾಟೋಲ್ ಅಬ್ರಹಾಂ ಅವರ ಮಾರ್ಗದರ್ಶನದಲ್ಲಿ ಘನ ಹೈಡ್ರೋಜನ್‌ನಲ್ಲಿ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಕುರಿತು ಪಿಎಚ್.ಡಿ. ಮಾಡಿದರು.
- ಪಿಎಚ್.ಡಿ. ನಂತರ ಅವರ ವೃತ್ತಿಜೀವನ ನಿರ್ಣಾಯಕ ತಿರುವನ್ನು ಪಡೆಯಿತು. 1982ರಿಂದ 1984ರವರೆಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿಯಲ್ಲಿ ಪ್ರೊ. ಜಾನ್ ಕ್ಲಾರ್ಕ್ ಅವರ ಪ್ರಯೋಗಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿ ಕೆಲಸ ಮಾಡಿದರು. ಈ ಸಹಯೋಗವು ‘ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್’ ಎಂಬ ಪ್ರವರ್ತಕ ಆವಿಷ್ಕಾರಕ್ಕೆ ಕಾರಣವಾಯಿತು. ಈ ಆವಿಷ್ಕಾರವು ಕ್ವಾಂಟಮ್ ಪರಿಣಾಮಗಳು ಅತಿಸೂಕ್ಷ್ಮ ಕಣಗಳಿಗೆ ಮಾತ್ರವಲ್ಲದೆ, ಕಣ್ಣಿಗೆ ಕಾಣುವಂತಹ ದೊಡ್ಡ ವಿದ್ಯುತ್ ಸರ್ಕ್ಯೂಟ್‌ಗಳಲ್ಲೂ ಅಸ್ತಿತ್ವದಲ್ಲಿವೆ ಎಂಬುದನ್ನೂ ದೃಢಪಡಿಸಿತು.
ಕ್ವಾಂಟ್ರಾನಿಕ್ಸ್–ಕ್ಯೂಬಿಟ್ಗಳು
- ಬರ್ಕ್ಲಿಯಿಂದ ಫ್ರಾನ್ಸ್‌ಗೆ ಹಿಂದಿರುಗಿದ ನಂತರ, ಪ್ರೊ. ಡೆವೊರೆಟ್ ಅವರು ಡೇನಿಯಲ್ ಎಸ್ಟೀವ್ ಮತ್ತು ಕ್ರಿಶ್ಚಿಯನ್ ಉರ್ಬಿನಾ ಅವರೊಂದಿಗೆ ‘ಕ್ವಾಂಟ್ರಾನಿಕ್ಸ್ ಲ್ಯಾಬ್’ ಅನ್ನು ಸ್ಥಾಪಿಸಿದರು. ಇದು ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನ ಸಮ್ಮಿಲನವಾಗಿತ್ತು. ಅವರು 1995ರಿಂದ 2002ರ ವರೆಗೆ ಫ್ರಾನ್ಸ್‌ನ ಸಿಇಎ-ಸಾಕ್ಲೆ(CEA-Saclay)ನಲ್ಲಿ ಸಂಶೋಧನಾ ನಿರ್ದೇಶಕರಾಗಿ, ಕ್ವಾಂಟ್ರಾನಿಕ್ಸ್ ಗುಂಪಿನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
- ಈ ಅವಧಿಯಲ್ಲಿ, ಅವರು ಸೂಪರ್‌ಕಂಡಕ್ಟಿಂಗ್ ಸರ್ಕ್ಯೂಟ್‌ಗಳನ್ನು ‘ಕೃತಕ ಪರಮಾಣು’ಗಳಾಗಿ (artificial atoms) ಬಳಸುವ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ಈ ಕೃತಕ ಪರಮಾಣುಗಳೇ ಇಂದು ಕ್ವಾಂಟಮ್ ಕಂಪ್ಯೂಟರ್‌ಗಳ ಮೂಲಭೂತ ಘಟಕಗಳಾದ ‘ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್‌ಗಳಿಗೆ” (superconducting qubits) ಅಡಿಪಾಯ. ಅವರ ತಂಡವು ಅಭಿವೃದ್ಧಿಪಡಿಸಿದ ‘ಕ್ವಾಂಟ್ರೋನಿಯಂ’ (quantronium) ಎಂಬ ಕ್ಯೂಬಿಟ್, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು.
- 2002ರಿಂದ 2024ರ ವರೆಗೆ ಯೇಲ್ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರೊ. ಡೆವೊರೆಟ್, ನಂತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾದ ಅಧ್ಯಾಪಕರಾಗಿ ಸೇರಿಕೊಂಡರು. ಪ್ರಸ್ತುತ, ಅವರು ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಗೂಗಲ್ ಕ್ವಾಂಟಮ್ ಎಐ Google Quantum AI)ನಲ್ಲಿ ಮುಖ್ಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಕೊಡುಗೆಗಳು: ಪ್ರೊ. ಡೆವೊರೆಟ್ ಅವರ ಸಂಶೋಧನೆಯು ಹಲವು ನವೀನ ತಂತ್ರಜ್ಞಾನಗಳಿಗೆ ಕಾರಣವಾಗಿದೆ. ಅವರ ಸಂಶೋಧನೆಯು ಕ್ಯೂಬಿಟ್‌ಗಳನ್ನು ನಿರ್ಮಿಸಲು ಮತ್ತು ನಿಯಂತ್ರಿಸಲು ಅಗತ್ಯವಾದ ಮೂಲಭೂತ ತತ್ವಗಳನ್ನು ಒದಗಿಸಿದೆ; ಇದು ಕ್ವಾಂಟಮ್ ಕಂಪ್ಯೂಟರ್‌ಗಳ ಕಾರ್ಯಸಾಧ್ಯತೆಗೆ ನಿರ್ಣಾಯಕವಾಗಿದೆ. ಅದಲ್ಲದೆ ಸೂಪರ್‌ಕಂಡಕ್ಟಿಂಗ್ ಕ್ವಾಂಟಮ್ ಇಂಟರ್‌ಫೆರೆನ್ಸ್ ಡಿವೈಸಸ್ (SQUIDs) ಎಂಬ ಅತಿ ಸೂಕ್ಷ್ಮ ಕಾಂತೀಯ ಸಂವೇದಕಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ‘ಸಿಂಗಲ್-ಎಲೆಕ್ಟ್ರಾನ್ ಪಂಪ್’ ಸಾಧನವು ವಿದ್ಯುತ್ ಪ್ರವಾಹದ ಮೂಲಭೂತ ಮಾನದಂಡವನ್ನು ಸ್ಥಾಪಿಸಲು ಸಹಾಯ ಮಾಡಿದ್ದು, ‘ಮೆಟ್ರೋಲಾಜಿಕಲ್ ಟ್ರಯಾಂಗಲ್’ ಅನ್ನು ಮುಚ್ಚುವಲ್ಲಿ ಪ್ರಗತಿ ಸಾಧಿಸಿಸಲು ಸಾಧ್ಯವಾಗಿದೆ. ಸೂಪರ್‌ಕಂಡಕ್ಟಿಂಗ್ ಸರ್ಕ್ಯೂಟ್‌ಗಳನ್ನು ತಯಾರಿಸಲು ಅಗತ್ಯವಾದ ಇ-ಬೀಮ್ ನಾನೋಲಿಥೋಗ್ರಫಿ (e-beam nanolithography) ತಂತ್ರಗಳಲ್ಲಿ ಇವರ ಕೊಡುಗೆ ಇದೆ.
- ಪ್ರಶಸ್ತಿಗಳು: ನೊಬೆಲ್ ಪ್ರಶಸ್ತಿಯ ಜೊತೆಗೆ ಪ್ರೊಫೆಸರ್ ಡೆವೊರೆಟ್ ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. 1991ರಲ್ಲಿ ಫ್ರಿಟ್ಜ್ ಲಂಡನ್ ಮೆಮೋರಿಯಲ್ ಪ್ರಶಸ್ತಿ (Fritz London Memorial Award)); 1999ರಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿಯ ಜೋಸೆಫ್ ಎಫ್. ಕೀತ್ಲಿ ಅವಾರ್ಡ್ ಫಾರ್ ಅಡ್ವಾನ್ಸಸ್ ಇನ್ ಮೆಷರ್‌ಮೆಂಟ್ ಸೈನ್ಸ್ (Joseph F. Keithley Award for Advances in Measurement Science); 2006ರಲ್ಲಿ IEEE ಡೇವಿಡ್ ಸಾರ್ನಾಫ್ ಪ್ರಶಸ್ತಿ (IEEE David Sarnoff Award); ಹಾಗು 2021ರಲ್ಲಿ ಮಿಸಿಯಸ್ ಕ್ವಾಂಟಮ್ ಪ್ರಶಸ್ತಿ (Micius Quantum Prize) – ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
- ಪ್ರೊ. ಮೈಕೆಲ್ ಡೆವೊರೆಟ್ ಅವರ ಸಂಶೋಧನೆಯು ಕ್ವಾಂಟಮ್ ಭೌತಶಾಸ್ತ್ರದ ಮೂಲಭೂತ ತಿಳಿವಳಿಕೆಯನ್ನು ಆಳಗೊಳಿಸಿದೆ ಮತ್ತು ಕ್ವಾಂಟಮ್ ಕಂಪ್ಯೂಟರ್‌ಗಳಂತಹ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡಿದೆ. ಅವರ ಈ ನೊಬೆಲ್ ಪ್ರಶಸ್ತಿ ವಿಜ್ಞಾನಜಗತ್ತಿಗೆ ಅಪ್ರತಿಮ ಸ್ಫೂರ್ತಿಯಾಗಿದೆ.
- ಕಂಬಿಗಳ ಹಿಂದೆ ಬದುಕು ಕಠೋರ
ಕಂಬಿಗಳ ಹಿಂದೆ ಬದುಕು ಕಠೋರದೇಶದ ಜೈಲುಗಳಲ್ಲಿಯೂ ಮಹಿಳೆಯರಿಗಿಲ್ಲ ರಕ್ಷಣೆ, ಪೋಷಣೆ; ಗರ್ಭಿಣಿ, ಬಾಣಂತಿಯರ ಸ್ಥಿತಿ ಅಸಹನೀಯ.
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೆಲವು ಕೈದಿಗಳು ಮೊಬೈಲ್, ಟಿ.ವಿ ಬಳಸುತ್ತಿದ್ದ ವಿಡಿಯೊಗಳು ಬಹಿರಂಗಗೊಂಡು, ಭಾರಿ ಗದ್ದಲವೇ ಉಂಟಾಗಿದೆ. ಕರ್ನಾಟಕವೂ ಸೇರಿದಂತೆ, ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇಂಥ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಜೈಲಿನಲ್ಲಿರುವ ಪುರುಷ ಕೈದಿಗಳ ಪೈಕಿ ಕೆಲವರು ಹೇಗೋ ಮಾಡಿ ಇಂಥ ವಿಐಪಿ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ, ಜೈಲುಗಳಲ್ಲಿರುವ ಮಹಿಳಾ ಬಂದಿಗಳ ಬದುಕು ಅಸಹನೀಯವಾಗಿದೆ. ಮೂಲಭೂತ ಅಗತ್ಯಗಳನ್ನು ಪಡೆಯುವುದರಿಂದ ಹಿಡಿದು ತಮ್ಮ ವೈಯಕ್ತಿಕ ಸ್ವಚ್ಛತೆ, ಘನತೆ ಕಾಪಾಡಿಕೊಳ್ಳಲು ಅಗತ್ಯವಾದ ಸ್ಥಳ, ಸೌಕರ್ಯಗಳನ್ನು ಪಡೆಯುವವರೆಗೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಜೈಲಿನಲ್ಲಿರುವ ಮಹಿಳೆಯರ ಸ್ಥಿತಿಗತಿ ಸುಧಾರಿಸಲು 210 ಸಂಸ್ಥೆಗಳು (ಎನ್‌ಜಿಒ) ದುಡಿಯುತ್ತಿವೆ.
ಜೈಲುಗಳಲ್ಲಿರುವ ಪುರುಷರ ಸಂಖ್ಯೆಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯು ಕಡಿಮೆ ಇದ್ದರೂ, ಮಹಿಳೆಯರಿಗೆ ಒದಗಿಸಲಾಗಿರುವ (ಸ್ನಾನಗೃಹ, ಶೌಚ ಇತ್ಯಾದಿ) ಸೌಕರ್ಯಗಳು ಅವರ ಅಗತ್ಯಕ್ಕಿಂತಲೂ ತುಂಬಾ ಕಡಿಮೆ ಇವೆ. ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅನೇಕ ಜೈಲುಗಳಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು, ಗರ್ಭಿಣಿ ತಾಯಂದಿರು ಮಕ್ಕಳಿಗೆ ಹಾಲೂಡಿಸಲು ಪ್ರತ್ಯೇಕ ಸ್ಥಳದ ಕೊರತೆ ಇದೆ. ಮುಟ್ಟಿನ ಸಂದರ್ಭಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಕಷ್ಟಕರವಾಗಿದೆ ಎನ್ನುವುದು ವರದಿಯಾಗಿದೆ. ಆಗಿಂದಾಗ್ಗೆ ನಡೆಯುವ ತಪಾಸಣೆಯ ಹೆಸರಿನಲ್ಲಿ ಪೊಲೀಸರು ಜೈಲುಗಳಲ್ಲಿರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಅನೇಕ ಘಟನೆಗಳು ವರದಿಯಾಗಿವೆ.
ಜೈಲುಗಳು ರಾಜ್ಯ ಪಟ್ಟಿಯಲ್ಲಿ ಬರುವುದರಿಂದ ಮೂಲಸೌಕರ್ಯ ಕಲ್ಪಿಸುವುದು, ಬಂದಿಗಳಿಗೆ ಸೂಕ್ತ ಪ್ರಮಾಣದಲ್ಲಿ ಆಹಾರ ಒದಗಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ವಿಶೇಷ ಆಹಾರ ಒದಗಿಸಬೇಕು. ಕೆಲವು ಜೈಲುಗಳ ಕ್ಯಾಂಟೀನ್‌ಗಳಲ್ಲಿ ಆಹಾರ ಸಿಗುತ್ತದೆಯಾದರೂ ಹೆಚ್ಚಿನ ಮಹಿಳಾ ಕೈದಿಗಳು ಅದಕ್ಕೆ ಹಣ ತೆರುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ.
ಗರ್ಭಿಣಿಯರ ಪರಿಸ್ಥಿತಿ ದುರ್ಬರವಾಗಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಬೇಕು. ಆದರೆ, ದೇಶದ ಬಹುತೇಕ ಜೈಲುಗಳಲ್ಲಿ ನಿಯಮಗಳು ಕಾಗದದ ಮೇಲಷ್ಟೇ ಇವೆ. ಮಹಾರಾಷ್ಟ್ರದ ಬೈಕುಲ್ಲಾ ಜೈಲಿನಲ್ಲಿ 2012ರಲ್ಲಿ ಗರ್ಭಿಣಿಯೊಬ್ಬರು ಜೈಲಿನ ಶೌಚಾಲಯದಲ್ಲಿಯೇ ಮಗುವನ್ನು ಹೆತ್ತು, ಜೈಲಿನ ಪರಿಸ್ಥಿತಿಗೆ ಹೆದರಿ ಆ ಮಗುವನ್ನು ಬಕೆಟ್‌ನಲ್ಲಿ ಮುಳುಗಿಸಿ ಕೊಂದು ಹಾಕಿದ್ದರು. ಮಹಿಳಾ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಗರ್ಭಿಣಿಯ ಬಗ್ಗೆ ಗಮನ ಕೊಡಲು ಸಾಧ್ಯವಾಗಿರಲಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದರು.
ದೇಶದಲ್ಲಿರುವ ವಿವಿಧ ರೀತಿಯ ಜೈಲುಗಳಲ್ಲಿ ಶೇ 4ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆದರೆ, ಮಹಿಳೆಯರಿಗಷ್ಟೇ ಮೀಸಲಾದ ಜೈಲುಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ರತಿ ಐವರಲ್ಲಿ ಒಬ್ಬ ಮಹಿಳಾ ಬಂದಿಗೆ ಮಾತ್ರ ಮಹಿಳಾ ಜೈಲಿನಲ್ಲಿರುವ ಅವಕಾಶ ಸಿಕ್ಕಿದೆ. 2018 ಮತ್ತು 2023ರ ನಡುವೆ ಮಹಿಳಾ ಜೈಲುಗಳ ಸಾಮರ್ಥ್ಯವನ್ನು ಶೇ 26.7ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಇದೇ ಅವಧಿಯಲ್ಲಿ ಮಹಿಳಾ ಬಂದಿಗಳ ಪ್ರಮಾಣವು ಶೇ 32ರಷ್ಟು ಹೆಚ್ಚಾಗಿದೆ.
ಆಧಾರ: ಎನ್‌ಸಿಆರ್‌ಬಿ ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ 2023, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಪುಲಿಟ್ಜರ್ ಸೆಂಟರ್, ದಿ ಗಾರ್ಡಿಯನ್
ದೇಶದಲ್ಲಿ ಜೈಲುಗಳ ಸ್ಥಿತಿಗತಿ
lದೇಶದ 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,332 ಜೈಲುಗಳಿವೆ. ಆದರೆ, ಈ ಪೈಕಿ ಕೇವಲ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಮಹಿಳಾ ಜೈಲುಗಳಿವೆ. ಅವುಗಳಲ್ಲಿ 4,293 ಬಂದಿಗಳಿದ್ದಾರೆ (ಈ ಜೈಲುಗಳ ಒಟ್ಟು ಸಾಮರ್ಥ್ಯ 7,086).ಕರ್ನಾಟಕದಲ್ಲಿ ಒಂದು ಮಹಿಳಾ ಜೈಲು ಇದ್ದು, ಅದರಲ್ಲಿ 100 ಮಂದಿ (2023ರ ಅಂತ್ಯಕ್ಕೆ) ಬಂದಿಗಳಿದ್ದಾರೆ. ಉಳಿದ 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ ಮೀಸಲಾದ ಜೈಲುಗಳೇ ಇಲ್ಲ
lರಾಜಸ್ಥಾನದಲ್ಲಿ ಏಳು, ತಮಿಳುನಾಡಿನಲ್ಲಿ ಐದು, ಕೇರಳದಲ್ಲಿ ಮೂರು ಮತ್ತು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ತಲಾ ಎರಡು ಮಹಿಳಾ ಜೈಲುಗಳಿವೆ. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಮಹಿಳಾ ಜೈಲು ಇದೆ
lದೇಶದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 5,30,333 ಬಂದಿಗಳಿದ್ದು, ಅವರಲ್ಲಿ 5,08,715 ಪುರುಷರಾದರೆ, 21,510 ಮಹಿಳೆಯರು, 108 ಮಂದಿ ಲಿಂಗತ್ವ ಅಲ್ಪಸಂಖ್ಯಾತರು
lಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಮಹಿಳೆಯರು ಜೈಲುಗಳಲ್ಲಿದ್ದರೆ (3,926), ಬಿಹಾರದಲ್ಲಿ 2,029 ಮತ್ತು ಮಧ್ಯಪ್ರದೇಶದಲ್ಲಿ 1,803 ಮಹಿಳೆಯರು ಜೈಲಿನಲ್ಲಿದ್ದಾರೆ
lಮಹಿಳಾ ಜೈಲುಗಳ ಪೈಕಿ ಮಿಜೋರಾಂನಲ್ಲಿ ನಿಗದಿತ ಸಂಖ್ಯೆಗಿಂತ ಬಂದಿಗಳು ಹೆಚ್ಚು ಇದ್ದಾರೆ (ಶೇ 227.1). ತ್ರಿಪುರಾದಲ್ಲಿ ಈ ಪ್ರಮಾಣವು ಶೇ 184, ಮಹಾರಾಷ್ಟ್ರದಲ್ಲಿ ಶೇ 143.9 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 110.2 ಇದೆ
ಜೈಲಿನ ‘ಅಮಾನವೀಯ’ ಮುಖ
ಪಶ್ಚಿಮ ಬಂಗಾಳದ ಕಿಕ್ಕಿರಿದ ಜೈಲುಗಳ ಬಗ್ಗೆ ತನಿಖೆ ಮಾಡಲು ಕಲ್ಕತ್ತ ಹೈಕೋರ್ಟ್ 1990ರಲ್ಲಿ ವಕೀಲ ತಪಸ್ ಕುಮಾರ್ ಭಂಜಾ ಅವರನ್ನು ನೇಮಿಸಿತ್ತು. ಹಲವು ಮಹಿಳಾ ಬಂದಿಗಳ ಮೇಲೆ ಅತ್ಯಾಚಾರ ನಡೆದಿದ್ದು ಅವರ ಗಮನಕ್ಕೆ ಬಂದಿತ್ತು. ಅದರಿಂದ ಅನೇಕರು ಗರ್ಭಿಣಿಯರಾಗಿ, ಜೈಲಿನಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ್ದರು. ಮಹಿಳೆಯು ಜೈಲಿಗೆ ಅಡಿಯಿಟ್ಟ ದಿನದಿಂದಲೆ ಆಕೆಗೆ ಲೈಂಗಿಕ ಕಿರುಕುಳ ಆರಂಭವಾಗುತ್ತದೆ ಎನ್ನುವುದನ್ನು ಅವರು ಬಂದಿಗಳಿಂದ ತಿಳಿದರು. ಜೈಲಿನ ಪರಿಸ್ಥಿತಿಯನ್ನು ‘ಅಮಾನವೀಯ’ ಎಂದು ಬಣ್ಣಿಸಿದ್ದ ಅವರು ಕಲ್ಕತ್ತ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿನ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಜೈಲುಗಳಲ್ಲಿ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ ಎಂದು ಅವರು ‘ದಿ ಗಾರ್ಡಿಯನ್’ ಪತ್ರಿಕೆಗೆ (2024, ಫೆ.23) ತಿಳಿಸಿದ್ದರು.
ದೇಶದಾದ್ಯಂತ ಮಹಿಳಾ ಬಂದಿಗಳ ಮೇಲೆ ಜೈಲಿನಲ್ಲಿರುವ ಪುರುಷರು ಮತ್ತು ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಹಿಂಸೆ ನಡೆದಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2018ರ ವರದಿ ಉಲ್ಲೇಖಿಸಿದೆ.
ಹಿಂದುಳಿದವರೇ ಅಧಿಕ
ಮಹಿಳಾ ಬಂದಿಗಳ ಪೈಕಿ ಶೇ 75ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಎಲ್ಲ ಧರ್ಮಗಳಲ್ಲಿನ ಹಿಂದುಳಿದ ವರ್ಗದವರು, ಬಡವರು ಆಗಿದ್ದಾರೆ. ಸಮಾಜದಲ್ಲಿ ಹೆಚ್ಚು ಶೋಷಣೆಗೆ ಗುರಿಯಾಗುವ ಈ ಮಹಿಳೆಯರು ಜೈಲುಗಳಲ್ಲಿಯೂ ಹೆಚ್ಚು ಶೋಷಣೆ, ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಹಿಳೆಯರ ಜಾತಿ, ವರ್ಗ, ಧರ್ಮ, ರಾಷ್ಟ್ರೀಯತೆ ಮುಂತಾದ ಅಂಶಗಳನ್ನು ಆಧರಿಸಿ ಮಹಿಳಾ ಕೈದಿಗಳೊಂದಿಗಿನ ಅಧಿಕಾರಿಗಳ ವರ್ತನೆಯು ನಿರ್ಧಾರವಾಗುತ್ತದೆ ಎನ್ನಲಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ ಪ್ರಕರಣ ಭಾರಿ ಸುದ್ದಿಯಾಗಿತ್ತು. ಆದರೆ, ಹಣ ನೀಡಿ ಅಕ್ರಮವಾಗಿ ಈ ರೀತಿ ಸೌಲಭ್ಯ ಪಡೆದ ಮಹಿಳಾ ಕೈದಿಗಳ ಪ್ರಮಾಣವು ತೀರಾ ಕಡಿಮೆ.
ಮಕ್ಕಳಿಗೂ ಜೈಲುವಾಸ
ಮಕ್ಕಳನ್ನು ಬೆಳೆಸಲು ಜೈಲುಗಳು ಯಾವ ಕಾರಣಕ್ಕೂ ಉತ್ತಮ ಸ್ಥಳಗಳಲ್ಲ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ ಆರು ವರ್ಷದವರೆಗಿನ ಮಕ್ಕಳು ತಮ್ಮ ತಾಯಿಯೊಂದಿಗೆ ಜೈಲಿನಲ್ಲಿ ಇರಲು ಅವಕಾಶವಿದೆ. ಮಕ್ಕಳಿಗೆ ಆರು ವರ್ಷವಾಗುವವರೆಗೆ ಅವರನ್ನು ಜೈಲಿನಲ್ಲಿಯೇ ಅವರ ತಾಯಂದಿರ ಜೊತೆ ಇರಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆರ್.ಡಿ.ಉಪಾಧ್ಯಾಯ ಮತ್ತು ಆಂಧ್ರ ಪ್ರದೇಶ ನಡುವಿನ ಪ್ರಕರಣದಲ್ಲಿ (2006) ಆದೇಶಿಸಿತ್ತು.
ದೇಶದ ಜೈಲುಗಳಲ್ಲಿ 1,318 ಮಹಿಳೆಯರು 1,492 ಮಕ್ಕಳೊಂದಿಗೆ ಇದ್ದಾರೆ. ಇವರ ಪೈಕಿ 1,049 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದು, ಅವರೊಂದಿಗೆ 1,191 ಮಕ್ಕಳಿದ್ದಾರೆ. ಉಳಿದಂತೆ, 249 ಮಹಿಳಾ ಕೈದಿಗಳು ತಪ್ಪಿತಸ್ಥರೆಂದು ನಿರ್ಧಾರವಾಗಿದ್ದು, ಅವರೊಂದಿಗೆ 272 ಮಕ್ಕಳಿದ್ದಾರೆ.

- ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್: ಎಸ್ಐಆರ್ ಸಾಂವಿಧಾನಿಕ ಸಿಂಧುತ್ವ
ಸಂದರ್ಭ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
- ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಆಯೋಗಕ್ಕೆ ನೋಟಿಸ್ ನೀಡಿದ್ದು, ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ನವೆಂಬರ್ 26ಕ್ಕೆ ನಡೆಯಲಿದೆ.
- ಈ ವಿಚಾರಣೆ ಪೂರ್ಣ ಆಗು ವವರೆಗೆ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಬೇರೆ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳ ವಿಚಾರಣೆ ತಡೆಹಿಡಿಯುವಂತೆ ಅಥವಾ ಮುಂದೂಡುವಂತೆಯೂ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
- ಡಿಎಂಕೆ ಪಕ್ಷದ ಪರವಾಗಿ ಹಾಜರಾದ ವಕೀಲ ಕಪಿಲ್ ಸಿಬಲ್ ಅವರು, ‘ಮತದಾರರ ಪಟ್ಟಿ ಪರಿಷ್ಕರಣೆಗೆ ಸಾಮಾನ್ಯವಾಗಿ ಮೂರು ವರ್ಷಗಳು ಬೇಕಾಗುತ್ತವೆ. ಆದರೆ, ಈಗ, ತರಾತುರಿಯಲ್ಲಿ ಎಸ್‌ಐಆರ್ ಜಾರಿಗೊಳಿಸಲಾಗಿದೆ. ಪರಿಷ್ಕರಣೆ ವೇಳೆ ಮತದಾರರ ವಿವರಗಳನ್ನು ಒಳಗೊಂಡ ಅರ್ಜಿಗಳನ್ನು ಅಪ್‌ಲೋಡ್ ಮಾಡಲು 5ಜಿ ನೆಟ್‌ವರ್ಕ್ ಬೇಕಾಗುತ್ತದೆ. ಆದರೆ, ಹಲವೆಡೆ ನೆಟ್‌ವರ್ಕ್ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ’ ಎಂದು ಪೀಠದ ಗಮನಕ್ಕೆ ತಂದರು.
- ಆಯೋಗದ ಪರವಾಗಿ ಹಾಜರಾದ ವಕೀಲ ರಾಕೇಶ್ ದ್ವಿವೇದಿ ಅವರು, ‘ರಾಜ್ಯಗಳು ಅಭಿವೃದ್ಧಿ ಹೊಂದಿವೆ ಎಂದು ಹೇಳಿಕೊಳ್ಳುವ ಬದಲು, ಎಷ್ಟು ಹಿಂದುಳಿದಿವೆ ಎನ್ನುವುದನ್ನು ತೋರಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ’ ಎಂದರು.
- ವಾದ ಆಲಿಸಿದ ಪೀಠವು, ‘ಎಸ್‌ಐಆರ್ ಬಗ್ಗೆ ಇಷ್ಟೊಂದು ಭಯವೇಕೆ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಈ ಬಗ್ಗೆ ವಿವರಣೆ ನೀಡಿದ ಕಪಿಲ್ ಸಿಬಲ್, ‘ಎಸ್‌ಐಆರ್ ವಿರೋಧಿಸಲು ರಾಜ್ಯಗಳಿಗೆ ವಿಭಿನ್ನ ಕಾರಣಗಳಿವೆ. ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಯುವ ಸಮಯದಲ್ಲಿ ಮಳೆಗಾಲ ಇರುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ನೇಮಕಗೊಂಡಿರುತ್ತಾರೆ. ಡಿಸೆಂಬರ್–ಜನವರಿಯಲ್ಲಿ ಕಟಾವಿನ ಸಮಯವಾಗಿದ್ದು, ಆಗಲೂ ಸೂಕ್ತ ಸಮಯವಲ್ಲ’ ಎಂದರು.
12 ರಾಜ್ಯಗಳಲ್ಲಿ ಎಸ್ಐಆರ್
- ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಟಿಎಂಸಿ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ, ಸಿಪಿಐಎಂ ಮತ್ತು ಡಿಎಂಕೆ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
- ಬಿಹಾರದಲ್ಲಿ, ವಿಧಾನಸಭೆ ಚುನಾವಣೆಗೆ ಮುನ್ನ ಜೂನ್ 24ರಂದು ಎಸ್‌ಐಆರ್ ಜಾರಿಗೊಳಿಸಲಾಗಿತ್ತು. ನಂತರ ಇದನ್ನು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಸೇರಿ 12 ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಸುಮಾರು 51 ಕೋಟಿ ಮತದಾರರು ಎಸ್‌ಐಆರ್ ವ್ಯಾಪ್ತಿಗೆ ಬರಲಿದ್ದಾರೆ.
- ‘ನಮಗೆ ನ್ಯಾಯಸಮ್ಮತ ಒಪ್ಪಂದ ಬೇಕು’
ಸಂದರ್ಭ: ಭಾರತವು ಅಮೆರಿಕದ ಜೊತೆ ನ್ಯಾಯ ಸಮ್ಮತವಾದ, ಸಮಾನ ನೆಲೆಯ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
- ರೈತರು, ಮೀನುಗಾರರು, ಕಾರ್ಮಿಕರು ಮತ್ತು ಹೈನುಗಾರರ ಹಿತಾಸಕ್ತಿಗಳ ವಿಚಾರದಲ್ಲಿ ದೇಶವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗೋಯಲ್ ಅವರು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಅಮೆರಿಕದ ನಡುವೆ ಒಳ್ಳೆಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಮಾತುಕತೆ ನಡೆದಿದೆ ಎಂದಿದ್ದಾರೆ.
- ‘ಭಾರತದ ಹಿತಾಸಕ್ತಿಗಳಿಗೆ ಪೂರಕವಾದ ಉತ್ತಮ ವ್ಯಾಪಾರ ಒಪ್ಪಂದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ರಾಜ್ಯಗಳ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರ ಸಮಾವೇಶದಲ್ಲಿ ಹೇಳಿದ್ದಾರೆ.
- ‘ಅಮೆರಿಕದ ಜೊತೆ ನ್ಯಾಯಸಮ್ಮತ, ಸಮಾನ ನೆಲೆಯ ವ್ಯಾಪಾರ ಒಪ್ಪಂದವು ನಮಗೆ ಬೇಕು. ಅದು ಯಾವತ್ತು ಬೇಕಿದ್ದರೂ ಸಾಧ್ಯವಾಗಬಹುದು. ಅದು ನಾಳೆಯೇ ಆಗಬಹುದು, ಮುಂದಿನ ತಿಂಗಳು ಆಗಬಹುದು, ಮುಂದಿನ ವರ್ಷ ಆಗಬಹುದು. ಆದರೆ ಸರ್ಕಾರವಾಗಿ ನಾವು ಎಲ್ಲದಕ್ಕೂ ಸಿದ್ಧವಾಗುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
- ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳಿಗೆ ರಷ್ಯಾದಲ್ಲಿ ಹೊಸ ಮಾರುಕಟ್ಟೆ ಅರಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ. ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳ ಮೇಲೆ ಅಮೆರಿಕವು ಹೆಚ್ಚಿನ ಸುಂಕ ವಿಧಿಸಿದೆ.
- ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ವಿಚಾರವಾಗಿ ಐದು ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಒಪ್ಪಂದದ ಮೊದಲ ಹಂತವು ಈ ವರ್ಷದ ಅಂತ್ಯದ ಮೊದಲು ಸಾಧ್ಯವಾಗಲಿದೆ ಎಂದು ಎರಡೂ ದೇಶಗಳು ಹೇಳಿವೆ.
- ‘ಬೇರೆ ದೇಶಗಳು ಅಮೆರಿಕದ ಜೊತೆ ನಡೆಸಿದ ಮಾತುಕತೆಗಳಿಗೆ ಹೋಲಿಸಿದರೆ ಭಾರತ ನಡೆಸಿರುವ ವಾಣಿಜ್ಯ ಒಪ್ಪಂದ ಕುರಿತ ಮಾತುಕತೆಯು ಹೆಚ್ಚು ಸಮಗ್ರವಾಗಿದೆ, ಡಬ್ಲ್ಯುಟಿಒ ನಿಯಮಗಳಿಗೆ ಅನುಗುಣವಾಗಿದೆ. ಮಾತುಕತೆಯು ಹೆಚ್ಚು ಸಮಯ ತೆಗೆದು ಕೊಂಡಿರಬಹುದು. ಆದರೆ ನಾವು ನಮ್ಮ ಸೂಕ್ಷ್ಮ ವಲಯಗಳ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಬಹಳ ಎಚ್ಚರಿಕೆಯಿಂದ ಮಾತುಕತೆ ನಡೆಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಭಾರತದ ಜೊತೆ ನ್ಯಾಯ ಸಮ್ಮತವಾದ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳುವ ಹಂತದ ಸನಿಹಕ್ಕೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಭಾರತದ ಸರಕುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಒಂದು ಹಂತದಲ್ಲಿ ಕಡಿಮೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
- ಸಕ್ಕರೆ ಉತ್ಪಾದನೆ ಶೇ 18ರಷ್ಟು ಹೆಚ್ಚಳ
ಸಂದರ್ಭ: ಅಕ್ಟೋಬರ್ಗೆ ಶುರುವಾದ 2025–26ನೇ ಸಾಲಿನ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ದೇಶದ ಸಕ್ಕರೆ ಉತ್ಪಾದನೆ ಪ್ರಮಾಣವು ಶೇ 18.58ರಷ್ಟು ಹೆಚ್ಚಳವಾಗಿ, 3.09 ಕೋಟಿ ಟನ್ಗೆ ತಲುಪುವ ನಿರೀಕ್ಷೆ ಇದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟ (ಐಎಸ್ಎಂಎ) ಹೇಳಿದೆ.
- ಕಳೆದ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 2.61 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಈ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆಯ ದಾಸ್ತಾನು 50 ಲಕ್ಷ ಟನ್ ಆಗಿದೆ. ಎಥೆನಾಲ್‌ಗಾಗಿ ಈ ವರ್ಷ 34 ಲಕ್ಷ ಟನ್ ಸಕ್ಕರೆಯನ್ನು ಬಳಸಿಕೊಳ್ಳುವ ಅಂದಾಜು ಇದೆ ಎಂದು ಐಎಸ್‌ಎಂಎ ಹೇಳಿದೆ.
- ವರ್ಷದ ಆರಂಭದಲ್ಲಿ ಇದ್ದ ಸಕ್ಕರೆ ದಾಸ್ತಾನು ಹಾಗೂ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಪರಿಗಣಿಸಿದರೆ ಈ ಬಾರಿ ಸಕ್ಕರೆಯ ಲಭ್ಯತೆಯು 3.59 ಕೋಟಿ ಟನ್ ಆಗಲಿದೆ. ಇದು ದೇಶದ ಮಾರುಕಟ್ಟೆಗೆ ಅಗತ್ಯವಿರುವ ಸಕ್ಕರೆಯ ಪ್ರಮಾಣವಾದ 2.85 ಕೋಟಿ ಟನ್‌ಗಿಂತ ಹೆಚ್ಚು ಎಂದು ಐಎಸ್‌ಎಂಎ ಹೇಳಿದೆ.
- ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನೆಯು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ದೇಶದ ಒಟ್ಟಾರೆ ಸಕ್ಕರೆ ಉತ್ಪಾದನೆಯೂ ಜಾಸ್ತಿ ಆಗಬಹುದು ಎಂದು ಅಂದಾಜು ಮಾಡಿದೆ. 2025–26ರಲ್ಲಿ ಕರ್ನಾಟಕದಲ್ಲಿ 63.5 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗುವ ನಿರೀಕ್ಷೆ ಇದೆ.
- ‘ದೇಶದಲ್ಲಿ ಸಕ್ಕರೆ ಲಭ್ಯತೆಯು ಈ ಬಾರಿ ಉತ್ತಮ ಮಟ್ಟದಲ್ಲಿ ಇರುವ ಅಂದಾಜು ಇದೆ. ಹೀಗಾಗಿ ಭಾರತದಿಂದ ಸರಿಸುಮಾರು 20 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಅವಕಾಶ ಇದೆ. ರಫ್ತು ನೀತಿಯನ್ನು ಆದಷ್ಟು ಬೇಗ ಪ್ರಕಟಿಸುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ’ ಎಂದು ಐಎಸ್‌ಎಂಎ ಹೇಳಿದೆ.
- ‘ಫ್ಲೆಷ್’ ಕೃತಿಗೆ ಬುಕರ್
ಸಂದರ್ಭ: ಹಂಗೇರಿ– ಬ್ರಿಟನ್ ಲೇಖಕ ಡೇವಿಡ್ ಝಲೈ ಅವರ ‘ಫ್ಲೆಷ್’ ಕಾದಂಬರಿಗೆ 2025ರ ಪ್ರತಿಷ್ಠಿತ ‘ಬುಕರ್ ಪ್ರಶಸ್ತಿ’ ಸಂದಿದೆ.

- ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಲೋನ್ಲಿನೆಸ್ ಆಫ್ ಸೊನಿಯಾ ಆ್ಯಂಡ್ ಸನ್ನಿ’ ಕಾದಂಬರಿ ಸೇರಿದಂತೆ ಆರು ಲೇಖಕರ ಕೃತಿಗಳು ಬುಕರ್ ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದವು.
- ಲಂಡನ್‌ನ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಕಳೆದ ವರ್ಷದ ಬುಕರ್ ಪ್ರಶಸ್ತಿ ವಿಜೇತೆ ಸಂತಾ ಹಾರ್ವಿ ಅವರು ಡೇವಿಡ್ ಝಲೈ ಅವರಿಗೆ ಪಾರಿತೋಷಕವನ್ನು ನೀಡಿದರು.
- ಈ ಪ್ರಶಸ್ತಿಯು ಪಾರಿತೋಷಕದ ಜೊತೆಗೆ ₹50 ಸಾವಿರ ಪೌಂಡ್ (₹58.25 ಲಕ್ಷ) ನಗದನ್ನೂ ಒಳಗೊಂಡಿದೆ.
- ಒಂದು ವೇಳೆ ಕಿರಣ್ ದೇಸಾಯಿ ಅವರಿಗೆ ಈ ಪ್ರಶಸ್ತಿ ದೊರೆತಿದ್ದರೆ, ಬುಕರ್ ಪ್ರಶಸ್ತಿಯ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ 5ನೇ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಿದ್ದರು.
- 2006ರಲ್ಲಿ ದೇಸಾಯಿ ಅವರ ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಬುಕರ್ ಪ್ರಶಸ್ತಿ ಲಭಿಸಿತ್ತು. ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಅಮೆರಿಕನ್ ಕೊರಿಯನ್ ಲೇಖಕಿ ಸುಸಾನ್ ಚೋಯ್ ಅವರ ‘ಫ್ಲಾಶ್ ಲೈಟ್’ ಅಮೆರಿಕನ್ ಜಪಾನೀಸ್ ಲೇಖಕಿ ಕೇಟಿ ಕಿಟಮುರಾ ಅವರ ‘ಆಡಿಷನ್’, ಬ್ರಿಟಿಷ್ ಅಮೆರಿಕನ್ ಲೇಖಕಿ ಬೆನ್ ಮಾರ್ಕೊವಿಟ್ಸ್ ಅವರ ‘ದಿ ರೆಸ್ಟ್ ಆಫ್ ಅವರ್ ಲೈವ್ಸ್’ ಮತ್ತು ಇಂಗ್ಲಿಷ್ ಕಾದಂಬರಿಕಾರ ಆಂಡ್ರ್ಯೂ ಮಿಲ್ಲರ್ ಅವರ ‘ದಿ ಲ್ಯಾಂಡ್ ಇನ್ ವಿಂಟರ್’ ಕೃತಿಗಳು ಇದ್ದವು.
- ವಿಶ್ವ ಶೂಟಿಂಗ್: ಐಶ್ವರಿ ಪ್ರಸಾದ್ಗೆ ಬೆಳ್ಳಿ ಪದಕ
ಸಂದರ್ಭ: ಒಲಿಂಪಿಯನ್ ಐಶ್ವರಿ ಪ್ರಸಾದ್ ಸಿಂಗ್ ತೋಮಾರ್ ಅವರು ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ಸರಿಗಟ್ಟಿದರು.

- ಐಶ್ವರಿ ಅವರು 466.9 ಸ್ಕೋರ್‌ನೊಡನೆ ಎರಡನೇ ಸ್ಥಾನ ಗಳಿಸಿದರು. ಚೀನಾದ ಯುಕುನ್ ಲಿಯು (467.1) ಅವರು ಚಿನ್ನ ಗೆದ್ದರೆ, ಫ್ರಾನ್ಸ್‌ನ ರೊಮೇನ್ ಆಫ್ರೆರಿ (454.8) ಕಂಚಿನ ಪದಕ ಗಳಿಸಿದರು.
- ಫೈನಲ್‌ನಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್ ನೀರಜ್ ಕುಮಾರ್ (432.6) ಅವರು ಐದನೇ ಸ್ಥಾನ ಪಡೆದರು.
- ಐಶ್ವರಿ ಪ್ರಸಾದ್ ಇದಕ್ಕೆ ಮೊದಲು ತಮ್ಮ ಸ್ಪರ್ಧೆಯ ಫೈನಲ್ ತಲುಪುವ ಮೊದಲು ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆ (597–40x) ಸರಿಗಟ್ಟಿದ್ದರು. ನೀರಜ್ 592ರ ಸ್ಕೋರ್‌ನೊಡನೆ ಅಂತಿಮ ಸುತ್ತು ತಲುಪಿದ್ದರು.
- ರಾಣಾ–ಇಶಾಗೆ ಬೆಳ್ಳಿ: ಏರ್ ಪಿಸ್ತೂಲ್ ವಿಶ್ವ ಚಾಂಪಿಯನ್ ಆದ ಸಾಮ್ರಾಟ್ ರಾಣಾ –ಹಾಲಿ ಚಾಂಪಿಯನ್ ಇಶಾ ಸಿಂಗ್ ಅವರು 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದರು.
- ಎರಡನೇ ಸ್ಥಾನ: ಮೂರು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗಳೊಂದಿಗೆ ಭಾರತವು ಪದಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾ (8 ಚಿನ್ನ ಸಹಿತ 14 ಪದಕ) ಅಗ್ರಸ್ಥಾನದಲ್ಲಿದೆ.
ಪ್ರಚಲಿತ ವಿದ್ಯಮಾನಗಳು: 11ನೇ ನವೆಂಬರ್ 2025
- ವಿಮಾನ ನಿಲ್ದಾಣದಲ್ಲಿ ‘ಕಲಾ ಲೋಕ’ ಮಳಿಗೆ
ಸಂದರ್ಭ: ಕೆಐಎಎಲ್ನಲ್ಲೂ ಸಿಗಲಿದೆ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ ಒಂದೇ ಸೂರಿನಡಿ ನಾಡಿನ ಪಾರಂಪರಿಕ–ವಿಶಿಷ್ಟ ಉತ್ಪನ್ನಗಳು ಲಭ್ಯ.
- ಚನ್ನಪಟ್ಟಣದ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿ ನಾಡಿನ ಅಸ್ಮಿತೆ ಬಿಂಬಿಸುವ ಉತ್ಪನ್ನಗಳು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ (ಕೆಐಎಎಲ್) ದೊರೆಯಲಿವೆ. ಕೆಐಎಎಲ್‌ನಲ್ಲಿ ಈಗಾಗಲೇ ‘ಕಲಾ ಲೋಕ’ ಮಳಿಗೆಗಳು ತಲೆಯೆತ್ತಿದ್ದು, ದೇಶ–ವಿದೇಶದ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯಲು ಅಣಿಗೊಂಡಿವೆ.
- ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಈ ವಿಮಾನ ನಿಲ್ದಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ.
- ಇದು ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣದ ಟರ್ಮಿನಲ್ –2 ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಹಸಿರು ವಿನ್ಯಾಸವನ್ನು ಹೊಂದಿದ್ದು, ಸಂಸ್ಕರಿಸಿದ ಬಿದಿರು ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟಿದೆ.
- ಇದರ ದೇಶೀಯ ಮತ್ತು ಅಂತರ ರಾಷ್ಟ್ರೀಯ ನಿರ್ಗಮನ ವಲಯದಲ್ಲಿ ಕೈಗಾರಿಕೆ ಇಲಾಖೆಯಡಿ ‘ಕಲಾ ಲೋಕ’ ಮಳಿಗೆಗಳನ್ನು ಆರಂಭಿಸಲಾಗಿದೆ.
- ದೇಶಿಯ ನಿರ್ಗಮನ ವಲಯದಲ್ಲಿನ ಮಳಿಗೆ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಪಡೆದ ನಾಡಿನ ಆಯ್ದ ಉತ್ಪನ್ನಗಳ ಜತೆಗೆ ಇಲ್ಲಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳು ದೊರೆಯಲಿವೆ.
- ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಸಿಲ್ಕ್ ಸೀರೆ ಸೇರಿ ವಿವಿಧ ಉತ್ಪನ್ನಗಳ ವಿಶೇಷತೆ ಹಾಗೂ ಸಂಕ್ಷಿಪ್ತ ಇತಿಹಾಸವೂ ಲಭ್ಯ.
- ಸರ್ಕಾರಿ ಸಂಸ್ಥೆಗಳ ಉತ್ಪನ್ನ: ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಿ, ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. ಈಗಾಗಲೇ ರಾಜ್ಯದ 45 ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿದ್ದು, ಅವುಗಳಲ್ಲಿ ಆಯ್ದ ಉತ್ಪನ್ನಗಳು ಇಲ್ಲಿ ಕಾಣಸಿಗುತ್ತವೆ. ನಾಡಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳ ಜತೆಗೆ ಸರ್ಕಾರಿ ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಉತ್ಪನ್ನಗಳೂ ಇಲ್ಲಿ ದೊರೆಯಲಿವೆ. ಕಾಫಿ ಮಂಡಳಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳ ಉತ್ಪನ್ನಗಳನ್ನೂ ಇಲ್ಲಿ ಇರಿಸಲಾಗಿದೆ.
- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಮಳಿಗೆಗಳ ನಿರ್ಮಾಣದಿಂದ ಮೈಸೂರು ಸ್ಯಾಂಡಲ್ ಸೋಪಿನಂತಹ ಉತ್ಪನ್ನಗಳು ಜಗತ್ತಿನ ಎಲ್ಲೆಡೆ ತನ್ನ ಕಂಪನ್ನು ಪಸರಿಸುವ ಸಾಧ್ಯತೆಯಿದೆ. 2024–25ರಲ್ಲಿ ಈ ವಿಮಾನ ನಿಲ್ದಾಣವನ್ನು 4.18 ಕೋಟಿ ಪ್ರಯಾಣಿಕರು ಬಳಕೆ ಮಾಡಿದ್ದರು. ದಿನಕ್ಕೆ ಸರಾಸರಿ 1.15 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
- ಟರ್ಮಿನಲ್ 1 ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. 2023ರಲ್ಲಿ ಕಾರ್ಯಾರಂಭಗೊಂಡ ಟರ್ಮಿನಲ್ 2ರ ಮೊದಲನೇ ಹಂತವು 12.55 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕ 1.6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಮಳಿಗೆಯಲ್ಲಿ ಏನೆಲ್ಲ ಇರಲಿದೆ?
ಮೈಸೂರು ಸಿಲ್ಕ್ ಸೀರೆ, ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಬಿದರಿ ಕಲೆ ಹೊಂದಿರುವ ಉತ್ಪನ್ನಗಳು, ಮೈಸೂರು ರೋಸ್ ವುಡ್ ಇನ್ಲೆ ಕಲಾಕೃತಿಗಳು, ಶ್ರೀಗಂಧದ ಕೆತ್ತನೆಗಳು, ಶ್ರೀಗಂಧದ ಸೋಪು, ಶ್ರೀಗಂಧದ ಎಣ್ಣೆ, ಅಗರಬತ್ತಿ, ಸಾಂಪ್ರದಾಯಿಕ ರೇಷ್ಮೆ ಸೀರೆಗಳು, ಚರ್ಮದ ಉತ್ಪನ್ನಗಳು, ಕಾಫಿ ಪುಡಿ ಹಾಗೂ ಸಹ ಉತ್ಪನ್ನಗಳ ಜತೆಗೆ ಪಾರಂಪರಿಕ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ಉತ್ಪನ್ನಗಳು ದೊರೆಯಲಿವೆ.
- ಫೇಸ್ಲೆಸ್, ಸಂಪರ್ಕರಹಿತ, ಆನ್ಲೈನ್ ಇ–ಖಾತಾ
ಸಂದರ್ಭ: ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸಲು, ಭ್ರಷ್ಟಾಚಾರ ನಿಯಂತ್ರಣಕ್ಕೆ ವ್ಯವಸ್ಥೆ: ಪಾಲಿಕೆಗಳ ಅಧಿಕಾರಿಗಳನ್ನು ಭೇಟಿ ಮಾಡದೆ, ‘ಫೇಸ್ಲೆಸ್, ಸಂಪರ್ಕ ರಹಿತ, ಆನ್ಲೈನ್ ಇ–ಖಾತಾ’ ಪಡೆಯುವ ವ್ಯವಸ್ಥೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
- ‘ಅಂತಿಮ ಇ-ಖಾತಾ ಅಥವಾ ಹೊಸ ಖಾತಾವನ್ನು ಅನುಮೋದಿಸಲು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಅಥವಾ ವಿಷಯ ನಿರ್ವಾಹಕರು ಆಸ್ತಿ ದಾಖಲೆಗಳನ್ನು ಮಾತ್ರ ನೋಡಬೇಕಾಗುತ್ತದೆ. ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ನಾಗರಿಕರು ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪುತ್ತದೆ, ಭ್ರಷ್ಟಾಚಾರ ಇಲ್ಲದಂತಾಗುತ್ತದೆ’ ಎಂದು ಹೇಳಿದರು.
- ‘ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಉಪ ವಿಭಾಗದ ಹೊರಗಿನ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತದೆ. ಅರ್ಜಿಗಳನ್ನು ಎಲ್ಲ ಅಧಿಕಾರಿಗಳಿಗೆ ಸಮಾನವಾಗಿ ವಿತರಿಸ ಲಾಗುತ್ತದೆ. ಇದರಿಂದಾಗಿ ನಗರ ಪಾಲಿಕೆ ಯೊಳಗೆ ಎಲ್ಲರಿಗೂ ಕೆಲಸದ ಹೊರೆ ಸಮಾನ ವಾಗಿ ಹಂಚಿಕೆಯಾಗುತ್ತದೆ. ಮಧ್ಯವರ್ತಿ ಗಳು ಇ-ಖಾತಾ ಕೊಡಿಸುವುದಾಗಿ ನಾಗರಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಅದೂ ಈ ಹೊಸ ವ್ಯವಸ್ಥೆಯಿಂದ ನಿಂತು ಹೋಗಿದೆ’ ಎಂದು ಮಾಹಿತಿ ನೀಡಿದರು.
- ‘ಹಳೆಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಖಾತಾ ಪಡೆಯಲು ಮತ್ತು ವರ್ಗಾವಣೆಗೆ ಎಆರ್‌ಒ ಕಚೇರಿ ಗಳಿಗೆ ಭೇಟಿ ನೀಡಬೇಕಾಗಿತ್ತು. ದಾಖಲೆ ಗಳನ್ನು ಭೌತಿಕವಾಗಿ ಸ್ಥಳೀಯವಾಗಿ ಪರಿ ಶೀಲಿಸಲಾಗುತ್ತಿತ್ತು. ಮಧ್ಯವರ್ತಿಗಳು ನಾಗ ರಿಕರಿಂದ ಹಣವನ್ನು ಸಂಗ್ರಹಿಸಿ ಅಧಿಕಾರಿ ಗಳನ್ನು ಪ್ರಭಾವಿಸುತ್ತಿದ್ದರು. ಭ್ರಷ್ಟಾಚಾರವು ತುಂಬಾ ಹೆಚ್ಚಾಗಿತ್ತು. ನಾಗರಿಕರು ಸಂಪೂರ್ಣವಾಗಿ ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ಮೇಲೆ ಅವಲಂಬಿತ ರಾಗಿದ್ದರು. ಈಗ ಇದ್ಯಾವುದಕ್ಕೂ ಅವಕಾಶ ಇಲ್ಲ’ ಎಂದು ಹೇಳಿದರು.
- ‘ಇ–ಖಾತಾ ವ್ಯವಸ್ಥೆಯು ಕೇಂದ್ರ ಸರ್ಕಾರ ದಿಂದ ರಾಷ್ಟ್ರೀಯ ಇ–ಗವರ್ನೆನ್ಸ್ ಪ್ರಶಸ್ತಿ (ಚಿನ್ನ)– 2025 ಅನ್ನು ಗೆದ್ದಿದೆ. ಇ–ಖಾತಾ ಆನ್ಲೈನ್ ವ್ಯವಸ್ಥೆಯು ಕಾವೇರಿ ಮತ್ತು ಸ್ವಯಂಚಾಲಿತ ತಿದ್ದುಪಡಿಗಳೊಂದಿಗೆ ಏಕೀಕರಣ ಹೊಂದಿದೆ. ಇ–ಖಾತಾ ದಲ್ಲಾಗುವ ಬದಲಾವಣೆಗಳ ಪ್ರಕಾರ ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀ ಕತ್ವದಲ್ಲಿ ಸ್ವಯಂಚಾಲಿತ ಬದಲಾವಣೆ ಗಳಾಗುತ್ತವೆ. ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ ಮತ್ತು ಏಜೆಂಟರು ಅಥವಾ ಮಧ್ಯವರ್ತಿಗಳಿಂದ ನಡೆಯುವ ಶೋಷಣೆ ತಡೆಯುತ್ತದೆ. ಅಧಿಕಾರಿ-ಮಧ್ಯವರ್ತಿಗಳ ಒಪ್ಪಂದವನ್ನೂ ಮುರಿಯುತ್ತದೆ’ ಎಂದು ಮುನೀಶ್ ಮೌದ್ಗಿಲ್ ವಿವರಿಸಿದರು.
- ಅಂತಿಮ ಇ-ಖಾತಾ ಅರ್ಜಿಯನ್ನು 7 ದಿನಗಳಲ್ಲಿ ಮತ್ತು ಹೊಸ ಖಾತಾ ಸಂದರ್ಭ ದಲ್ಲಿ 60 ದಿನದಲ್ಲಿ (ಹೊಸ ಖಾತಾ ನೀಡಲು ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಅಗತ್ಯ ಇರುವುದರಿಂದ) ವಿಲೇವಾರಿ ಮಾಡು ವುದು ಜಿಬಿಎ ಮತ್ತು ನಗರ ಪಾಲಿಕೆಗಳ ಬದ್ಧತೆಯಾಗಿದೆ. ಖಾತಾ ಬದಲಾವಣೆಗಳು, ತಿದ್ದುಪಡಿ ಅಥವಾ ವಿಚಾರಣೆಯ ಅಗತ್ಯವಿ ರುವ ವಿವಾದದ ಅಂತಿಮ ಇ-ಖಾತಾ ಅರ್ಜಿ ಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
- ದರೋಜಿ ಬಳಿ ನೈಟ್ಜಾರ್ ಪಕ್ಷಿ ಗೋಚರ
ಸಂದರ್ಭ: ತಾಲ್ಲೂಕಿನ ದರೋಜಿ ಕರಡಿಧಾಮ ಪ್ರದೇಶದಲ್ಲಿ ಕುರುಡುಗಪ್ಪಟ (ಸವನ್ನಾ ನೈಟ್‌ಜಾರ್) ಎಂಬ ಅಪರೂಪದ ನಿಶಾಚರ ಪಕ್ಷಿ ಗೋಚರಿಸಿದೆ.

- ಪಕ್ಷಿ ವೀಕ್ಷಣೆ ಪ್ರವಾಸಿ ಸಂಘಟನೆ ‘ನೇಚರ್ ಇಂಡಿಯಾ ಮುಂಬೈ’ ನ ಆದೇಶ್ ಶಿವಕರ್ ಅವರ ತಂಡದ ಸದಸ್ಯೆ ಅಂಜಲಿ ಕೇಲ್ಕರ್ ಅವರ ಕ್ಯಾಮೆರಾ ಕಣ್ಣಿಗೆ ಈ ಪಕ್ಷಿ ಸೆರೆಯಾಗಿದೆ.
- ದೊಡ್ಡ ಕಣ್ಣು, ವಿಶಿಷ್ಟ ಧ್ವನಿಯ ಈ ಪಕ್ಷಿಯು ನೆಲದಲ್ಲಿ ಗೂಡು ಕಟ್ಟಿ, ಮರದಲ್ಲಿ ವಿಶ್ರಮಿಸುತ್ತದೆ. ‘ನೈಟ್‌ಜಾರ್’ ಇರುವಿಕೆ ಇಲ್ಲಿಗೆ ಸಮೀಪದ ಗುಂಡಾ ಮೀಸಲು ಅರಣ್ಯ ಪ್ರದೇಶದಲ್ಲಿದೆ ಎಂಬ ಮಾಹಿತಿ ಇತ್ತು. ಆದರೆ, ಸುಲಭವಾಗಿ ಕಾಣಸಿಗುತ್ತಿರಲಿಲ್ಲ.
- ‘ನತ್ತಿಂಗ ಎಂದೂ ಕರೆಯಿಸಿ ಕೊಳ್ಳುವ ಇಂಡಿಯನ್ ನೈಟ್‌ಜಾರ್ ಪಕ್ಷಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಅದೇ ಕುಟುಂಬದ ಸವನ್ನಾ ನೈಟ್‌ಜಾರ್‌ನ ಆವಾಸಸ್ಥಾನ ಉತ್ತರ ಪಾಕಿಸ್ತಾನದಿಂದ ಇಂಡೋನೇಷ್ಯಾದವರೆಗಿನ ವ್ಯಾಪ್ತಿ ಹೊಂದಿದೆ’ ಎಂದು ಪಕ್ಷಿತಜ್ಞ ಪಂಪಯ್ಯಾ ಮಳಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.
- ‘ಉತ್ತರ ಪ್ರದೇಶ: ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಕಡ್ಡಾಯ’
ಸಂದರ್ಭ: ಉತ್ತರ ಪ್ರದೇಶದ ಎಲ್ಲ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
- ಗೋರಖಪುರದಲ್ಲಿ ನಡೆದ ಏಕತಾ ಮೆರವಣಿಗೆಯಲ್ಲಿ ಮಾತನಾಡಿದ ಆದಿತ್ಯನಾಥ ಅವರು, ‘ವಂದೇ ಮಾತರಂ ಹಾಡುವ ಮೂಲಕ ಭಾರತ ಮಾತೆ ಮತ್ತು ತಾಯ್ನಾಡಿನ ಬಗ್ಗೆ ಭಕ್ತಿ ಮತ್ತು ಹೆಮ್ಮೆಯ ಭಾವ ಮೂಡುತ್ತದೆ’ ಎಂದರು.
- ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್: ಮಹಿಳಾ ಮೀಸಲಾತಿ ಕಾಯ್ದೆ ಶೀಘ್ರ ಜಾರಿ
ಸಂದರ್ಭ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ 2023ರ ‘ನಾರಿ ಶಕ್ತಿ ವಂದನ ಕಾಯ್ದೆ’ಯನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಪರಿಶೀಲನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.
- ಮಹಿಳೆಯರು ದೇಶದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತರು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
- ‘ದೇಶದ ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕವಾಗಿ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ಈ ದೇಶದಲ್ಲಿ ಅತಿದೊಡ್ಡ ಅಲ್ಪ ಸಂಖ್ಯಾತರು ಯಾರು? ಒಟ್ಟು ಜನ ಸಂಖ್ಯೆಯಲ್ಲಿ ಶೇ 48ರಷ್ಟಿರುವ ಮಹಿಳೆಯರು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಇದು ಮಹಿಳೆಯರ ರಾಜಕೀಯ ಸಮಾನತೆಗೆ ಸಂಬಂಧಿಸಿದ ವಿಷಯ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
- ಅರ್ಜಿದಾರರಾದ ಜಯಾ ಠಾಕೂರ್ ಪರ ಹಾಜರಾದ ಹಿರಿಯ ವಕೀಲೆ ಶೋಭಾ ಗುಪ್ತಾ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮಹಿಳೆಯರು ತಮ್ಮ ಪ್ರಾತಿನಿಧ್ಯಕ್ಕಾಗಿ ನ್ಯಾಯಾಲಯದ ಮೊರೆಹೋಗಬೇಕಾಗಿರುವುದು ದುರದೃಷ್ಟಕರ’ ಎಂದರು.
- ದತ್ತಾಂಶಗಳ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಅವರು ವಾದಿಸಿದರು.
- ಕಾನೂನನ್ನು ಜಾರಿಗೊಳಿಸುವುದು ಕಾರ್ಯಾಂಗದ ವಿಶೇಷಾಧಿಕಾರವಾಗಿದ್ದು, ಈ ವಿಷಯಲ್ಲಿ ಯಾವುದೇ ಆದೇಶ ಹೊರಡಿಸಲಾಗುವುದಿಲ್ಲ ಎಂದು ಪೀಠ ಹೇಳಿತು. ‘ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸುವಾಗ ನ್ಯಾಯಾಲಯಗಳಿಗೆ ಇತಿಮಿತಿಗಳಿವೆ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
- ‘ನಾರಿ ಶಕ್ತಿ ವಂದನ ಮಸೂದೆ’ಗೆ 2023ರ ಸೆಪ್ಟೆಂಬರ್ 21ರಂದು ಸಂಸತ್ತಿನ ಅಂಗೀಕಾರ ಲಭಿಸಿತ್ತು. ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಹುತೇಕ ಸರ್ವಾನುಮತದಿಂದ ಹಾಗೂ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.2023ರ ಸೆಪ್ಟೆಂಬರ್ 28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗೆ ಒಪ್ಪಿಗೆ ನೀಡಿದ್ದರು. ಈ ಕಾಯ್ದೆಯು ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ 33ರಷ್ಟನ್ನು ಮಹಿಳೆಯರಿಗೆ ಮೀಸಲಾಗಿ ಇರಿಸುತ್ತದೆ.
- ಲೋಕಸಭೆಗೆ 2029ರಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಈ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇಲ್ಲ. ಕಾಯ್ದೆಯು ಜಾರಿಗೆ ಬರಬೇಕು ಎಂದಾದರೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಪುನರ್ ವಿಂಗಡಣೆಗೆ ಕಾಯದೆಯೇ ಕಾಯ್ದೆ ಜಾರಿಗೊಳಿಸಬೇಕು ಎಂದು ಜಯಾ ಠಾಕೂರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
- ಎಐ ಅಪಾಯ ಉಲ್ಲೇಖಿಸಿದ ಸಿಜೆಐ
ಸಂದರ್ಭ: ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಕೃತಕ ಬುದ್ಧಿಮತ್ತೆಯ (ಎಐ) ಅಪಾಯವನ್ನು ಎತ್ತಿತೋರಿಸಿದ್ದಾರೆ. ತಮ್ಮ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ತಪ್ಪಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ತಿರುಚಿದ ವಿಡಿಯೊ ಬಗ್ಗೆ ತಮಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.
- ನ್ಯಾಯಾಂಗದಲ್ಲಿ ಎಐ ಬಳಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಿದ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು, ನಂತರ ಈ ಹೇಳಿಕೆಯನ್ನು ನೀಡಿತು.
- ವಿಚಾರಣೆ ಸಮಯದಲ್ಲಿ, ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಎಐಯನ್ನು ಅನಿಯಂತ್ರಿತವಾಗಿ ಅವಳಡಿಸಿಕೊಳ್ಳುವುದರ ವಿರುದ್ಧ ಎಚ್ಚರಿಸುತ್ತಾ, ‘ಈ ನ್ಯಾಯಾಲಯ ಕೂಡ ಎಐ ಬಳಸುತ್ತಿದೆ’ ಎಂದಿದ್ದಾರೆ.
- ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ನಮಗೆ ಅದರ ಅರಿವಿದೆ, ನಮ್ಮಿಬ್ಬರ ತಿರುಚಿದ ವಿಡಿಯೊವನ್ನು ನಾವು ನೋಡಿದ್ದೇವೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೊವನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.
- ನಗರ ಸಹಕಾರಿ ಬ್ಯಾಂಕ್ ಆ್ಯಪ್ಗೆ ಚಾಲನೆ
ಸಂದರ್ಭ: ನಗರ ಸಹಕಾರಿ ಬ್ಯಾಂಕ್ಗಳಲ್ಲಿ ಡಿಜಿಟಲ್ ಪಾವತಿಯ ಬಳಕೆಯನ್ನು ಹೆಚ್ಚಿಸಲು ‘ಸಹಕಾರ್ ಡಿಜಿ ಪೇ’ ಮತ್ತು ‘ಸಹಕಾರ್ ಡಿಜಿ ಲೋನ್’ ಎಂಬ ಎರಡು ಮೊಬೈಲ್ ಆ್ಯಪ್ಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸೋಮವಾರ ಚಾಲನೆ ನೀಡಿದ್ದಾರೆ.
- ನಗದು ರಹಿತ ಪಾವತಿ ವಿಧಾನ ಹೆಚ್ಚುತ್ತಿದ್ದು, ಸಹಕಾರಿ ಬ್ಯಾಂಕ್‌ಗಳ ಉಳಿವಿಗೆ ಡಿಜಿಟಲ್ ಪಾವತಿ ಅಳವಡಿಕೆ ಅಗತ್ಯ. ನಗರ ಸಹಕಾರಿ ಬ್ಯಾಂಕ್‌ಗಳು (ಯುಸಿಬಿ) ಮತ್ತು ಪತ್ತಿನ ಸಹಕಾರ ಸಂಘಗಳ ವೃತ್ತಿಪರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
- ದೇಶದ ಸಹಕಾರ ವಲಯದ ಎನ್‌ಪಿಎ ಕಳೆದ ಎರಡು ವರ್ಷದ ಹಿಂದೆ ಶೇ 2.8ರಷ್ಟಿತ್ತು. ಅದು ಈಗ ಶೇ 0.6ಕ್ಕೆ ಇಳಿದಿದೆ. ಎನ್‌ಪಿಎ ಸುಧಾರಣೆ ಕಂಡಿದೆ. ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ಸುಧಾರಣೆ ಮತ್ತು ಆರ್ಥಿಕ ಶಿಸ್ತು ಉಂಟಾಗಿದೆ ಎಂದಿದ್ದಾರೆ.
- ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕ್ ಹಾಗೂ ಪತ್ತಿನ ಸಂಸ್ಥೆಗಳ ಒಕ್ಕೂಟವು (ಎನ್‌ಎಎಫ್‌ಸಿಯುಬಿ) ಮುಂದಿನ ಐದು ವರ್ಷದೊಳಗೆ ಎರಡು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪ್ರತಿ ಪಟ್ಟಣದಲ್ಲಿ ಕನಿಷ್ಠ ಒಂದಾದರೂ ಹೆಚ್ಚುವರಿ ನಗರ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಗುರಿ ಸಾಧಿಸಬೇಕು ಎಂದು ಸೂಚಿಸಿದ್ದಾರೆ.
- ‘ಡಿಜಿ ಪೇ ಇಂದು ಅಗತ್ಯವಾಗಿದೆ. ನಗರ ಸಹಕಾರಿ ಬ್ಯಾಂಕ್‌ಗಳು ಈ ಪಾವತಿ ವಿಧಾನಕ್ಕೆ ಹೊಂದಿಕೊಳ್ಳ ದಿದ್ದರೆ, ಸ್ಪರ್ಧೆಯಿಂದ ಹೊರಗುಳಿ ಯುತ್ತವೆ. ಎರಡು ವರ್ಷದೊಳಗೆ 1,500 ಬ್ಯಾಂಕ್‌ಗಳು ಈ ಅಪ್ಲಿಕೇಷನ್ ಅನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
- ಎನ್‌ಎಫ್‌ಸಿಯುಬಿ ಗೌರವಾಧ್ಯಕ್ಷ ಮತ್ತು ಕರ್ನಾಟಕದ ಕಾನೂನು ಸಚಿವ ಎಚ್.ಕೆ.ಪಾಟೀಲ, 20 ನಗರ ಸಹಕಾರಿ ಬ್ಯಾಂಕ್‌ಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇವುಗಳ ಪುನರುಜ್ಜೀವನಕ್ಕೆ ಕ್ರಮ ತೆಗೆದು ಕೊಳ್ಳಬೇಕು ಎಂದರು.
- ಕಲಬೆರಕೆ ಪೆಟ್ರೋಲ್, ನೀರಿನಲ್ಲಿ ಬೆರೆತ ತೈಲ ಪತ್ತೆಗೆ ಐಐಟಿ ಸಂಶೋಧನೆ
ಸಂದರ್ಭ: ಕಲಬೆರಕೆ ಪೆಟ್ರೋಲ್ ಅಥವಾ ಸೀಮೆಎಣ್ಣೆ ಮಿಶ್ರಣ ಮತ್ತು ನೀರಿನಲ್ಲಿ ಸೇರಿದ ತೈಲದ ಅಂಶವನ್ನು ಪತ್ತೆ ಮಾಡಬಲ್ಲ ಹೊಸ ವಸ್ತುವೊಂದನ್ನು ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಈ ವಸ್ತುವು ನೀರಿನಲ್ಲಿರುವ ತೈಲದ ಅಂಶ ಹೀರಿಕೊಳ್ಳುವ ಮತ್ತು ಘನೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಶೋಧನೆಯ ಅಂಶಗಳನ್ನು ಪ್ರತಿಷ್ಠಿತ ‘ಕೆಮಿಕಲ್ ಎಂಜಿನಿಯರಿಂಗ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಗೋಪಾಲ್ ದಾಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
- ‘ತೈಲ ಟ್ಯಾಂಕರ್‌ಗಳ ಸೋರಿಕೆ ಅಂಕಿಅಂಶ–2024ರ ಪ್ರಕಾರ ಜಾಗತಿಕವಾಗಿ ಸುಮಾರು 10,000 ಟನ್‌ನಷ್ಟು ತೈಲವು ಸಮುದ್ರ ಮತ್ತು ಸಾಗರವನ್ನು ಸೇರುತ್ತಿದೆ. ಇದು ಜಾಗತಿಕವಾಗಿ ನೈಸರ್ಗಿಕ ವಿಕೋಪವಾಗಿ ಪರಿಣಮಿಸುತ್ತಿದೆ. ಸಾಗರ ಜೀವಿಗಳು, ಕರಾವಳಿ ಪ್ರದೇಶ ಮತ್ತು ಇವುಗಳನ್ನು ಅವಲಂಬಿಸಿರುವ ಜನಜೀವನದ ಮೇಲೂ ಹಾನಿ ಉಂಟು ಮಾಡುತ್ತಿದೆ’ ಎಂದು ಹೇಳಿದ್ದಾರೆ.
- ‘ಸದ್ಯ ಅನುಸರಿಸುತ್ತಿರುವ ರಾಸಾ ಯನಿಕ ವಿಧಾನ ಅಥವಾ ತೈಲವನ್ನು ಉರಿಸುವ ವಿಧಾನಗಳು ಎರಡನೇ ಹಂತದ ಮಾಲಿನ್ಯ ಉಂಟುಮಾಡುತ್ತವೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಫೇಸ್ ಸೆಲೆಕ್ಟೀವ್ ಆರ್ಗೊಜಿಲೇಟರ್ (ಪಿಎಸ್‌ಓಜಿ)’ ಅಣು (ಜೆಲ್ ಮಾದರಿಯ ಸಣ್ಣ ಕಣ) ಸುರಕ್ಷಿತ ವಸ್ತುವಾಗಿದ್ದು, ನೀರಿನಲ್ಲಿ ಸೇರಿದ ತೈಲವನ್ನು ಘನೀಕರಿಸುತ್ತದೆ’ ಎಂದು ತಿಳಿಸಿದ್ದಾರೆ.
- ಭಾರತದಲ್ಲಿ ಪೆಟ್ರೋಲ್‌ಗೆ ಸೀಮೆಎಣ್ಣೆ ಮಿಶ್ರಣ ಮಾಡಿ ಕೆಲವರು ಬಳಸುತ್ತಿದ್ದಾರೆ. ಇದು ಸ್ಫೋಟದಂತಹ ಅನಾಹುತಕ್ಕೂ ಕಾರಣವಾಗುತ್ತಿದೆ. ತೈಲ ಕಲಬೆರಕೆ ಪತ್ತೆ ಹಚ್ಚಲು ಜಿಲೇಟರ್ ಮಾಲೆಕ್ಯೂಲ್ (ಜೆಲ್ ಮಾದರಿಯ ಸಣ್ಣ ಕಣ) ನೆರವಾಗಲಿದೆ. ಇದರ ದಕ್ಷತೆ ಇನ್ನಷ್ಟು ಹೆಚ್ಚಿಸುವ ಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
- ದತ್ತಾಂಶ ಕೇಂದ್ರ: ಮುಂಬೈ ಅಗ್ಗ
ಸಂದರ್ಭ: ದತ್ತಾಂಶ ಕೇಂದ್ರಗಳ ಮೇಲಿನ ಹೂಡಿಕೆಗೆ ಭಾರತವು ಅತ್ಯಂತ ಆಕರ್ಷಕವಾಗಿ ಕಾಣುತ್ತಿದೆ ಎಂದು ವರದಿಯೊಂದು ಹೇಳಿದೆ.
- ದತ್ತಾಂಶ ಕೇಂದ್ರಗಳ ನಿರ್ಮಾಣಕ್ಕೆ ಈಗ ಮುಂಬೈ ಜಾಗತಿಕ ಮಟ್ಟದಲ್ಲಿ ಎರಡನೆಯ ಅತ್ಯಂತ ಕಡಿಮೆ ಖರ್ಚಿನ ನಗರವಾಗಿ ಪರಿಗಣಿತವಾಗಿದೆ ಎಂದು ‘ಟರ್ನರ್ ಆ್ಯಂಡ್ ಟೌನ್‌ಸೆಂಡ್ ದತ್ತಾಂಶ ಕೇಂದ್ರ ನಿರ್ಮಾಣ ವೆಚ್ಚ ಸೂಚ್ಯಂಕ’ ಹೇಳಿದೆ.
- ಮುಂಬೈನಲ್ಲಿ ದತ್ತಾಂಶ ಕೇಂದ್ರ ನಿರ್ಮಾಣ ಮಾಡುವುದರ ವೆಚ್ಚವು ಪ್ರತಿ ವಾಟ್‌ಗೆ ಅಂದಾಜು ₹589 ಮಾತ್ರ.
- ಕಡಿಮೆ ವೆಚ್ಚದಲ್ಲಿ ದತ್ತಾಂಶ ಕೇಂದ್ರವನ್ನು ಮುಂಬೈನಲ್ಲಿ ನಿರ್ಮಿಸಲು ಸಾಧ್ಯವಿರುವುದು, ಭಾರತಕ್ಕೆ ಈ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಹೆಚ್ಚಿನ ತಾಕತ್ತನ್ನು ನೀಡಲಿದೆ. ಟೋಕಿಯೊ, ಸಿಂಗಪುರ, ಜುರಿಕ್‌ನಂತಹ ನಗರಗಳಲ್ಲಿ ದತ್ತಾಂಶ ಕೇಂದ್ರ ನಿರ್ಮಿಸಲು ಬೇಕಿರುವ ಮೊತ್ತವು ಮುಂಬೈಗೆ ಹೋಲಿಸಿದರೆ ದುಪ್ಪಟ್ಟಾ ಗುತ್ತದೆ ಎಂದು ವರದಿ ಹೇಳಿದೆ.
- ಜಗತ್ತಿನಲ್ಲಿ ಸೃಷ್ಟಿಯಾಗುವ ದತ್ತಾಂಶದಲ್ಲಿ ಶೇಕಡ 20ರಷ್ಟು ಪಾಲು ಭಾರತದ್ದು. ಆದರೆ ಜಾಗತಿಕ ದತ್ತಾಂಶ ಕೇಂದ್ರ ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ 3ರಷ್ಟು ಮಾತ್ರ. ಭಾರತದಲ್ಲಿ ದತ್ತಾಂಶ ಕೇಂದ್ರಗಳಿಗೆ ವಿಸ್ತರಣೆ ಕಾಣಲು ಭಾರಿ ಅವಕಾಶ ಇದೆ ಎಂಬುದನ್ನು ಇದು ಹೇಳುತ್ತಿದೆ.
- ಸಲ್ಮಾನ್ ರಶ್ದಿಗೆ ‘ಡೇಟನ್ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ
ಸಂದರ್ಭ: ಓಹಿಯೋದಲ್ಲಿ ನಡೆದ ‘ಡೇಟನ್ ಸಾಹಿತ್ಯ ಶಾಂತಿ ಪ್ರಶಸ್ತಿ ಸಮಾರಂಭ’ದಲ್ಲಿ ಭಾರತೀಯ ಸಂಜಾತ, ಲೇಖಕ ಸಲ್ಮಾನ್ ರಶ್ದಿ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
- ಮೂರು ವರ್ಷಗಳ ಹಿಂದೆ ನ್ಯೂಯಾರ್ಕ್ ನಗರದಲ್ಲಿ ನಡೆದಿದ್ದ ಉಪನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ರಶ್ದಿ ಅವರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದ. ಈ ವೇಳೆ ರಶ್ದಿ ಬಲಗಣ್ಣನ್ನು ಕಳೆದುಕೊಂಡಿದ್ದರು. ಈ ಘಟನೆ ಬಳಿಕ ಅವರು ಕಾದಂಬರಿಯನ್ನು ಪ್ರಕಟಿಸಿದ ನಂತರ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಿದ್ದಾರೆ.
- ದೆಹಲಿ ವಾಯುಮಾಲಿನ್ಯ: ಮೀಮ್ಗಳದ್ದೇ ಸದ್ದು: ಸಾಮಾಜಿಕ ಮಾಧ್ಯಮಗಳ ಮೂಲಕ ಟೀಕೆ
ಸಂದರ್ಭ: ದೆಹಲಿಯ ವಾಯುಮಾಲಿನ್ಯದ ವಿಚಾರವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ರುವುದು ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ‘ಮೀಮ್’ಗಳ ಮೂಲಕವೂ ಸದ್ದು ಮಾಡುತ್ತಿದೆ.
- ‘ವೆಡ್ಡಿಂಗ್ ವಿದ್ ಆಕ್ಸಿಜನ್ ಮಾಸ್ಕ್’ ಎಂಬ ವಿಡಿಯೊ ವೈರಲ್ ಆಗಿದೆ. ವಾಯಮಾಲಿನ್ಯಯುಕ್ತ ನಗರದಲ್ಲಿ ಸಂಗಾತಿಗಳಿಬ್ಬರು ಮಾಸ್ಕ್ ಧರಿಸಿಕೊಂಡು ಪ್ರೇಮಿಸುವ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಗಿ ವಿಡಿಯೊ ಮಾಡಲಾಗಿದೆ.
- ಮದುಮಗನು ಮದುಮಗಳ ಮೇಲೆ ಹೂವು ಸುರಿಯುವ ಬದಲಾಗಿ, ಔಷಧದ ಲಕೋಟೆಗಳನ್ನು ಸುರಿಯುವ ದೃಶ್ಯವನ್ನು ಸೃಷ್ಟಿಸಲಾಗಿದೆ. ಭವ್ಯ ಅರಮನೆ ಅಥವಾ ಉದ್ಯಾನದ ಬದಲಿಗೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಲಿಂಡರ್ ಮತ್ತು ಇತರ ಉಪಕರಣಗಳ ಮಧ್ಯೆ ಫೋಟೊ ತೆಗೆಸಿಕೊಳ್ಳುವ ಮತ್ತು ಕೊನೆಯಲ್ಲಿ ಕೈಯಲ್ಲಿ ಮಾಸ್ಕ್ ಅನ್ನು ತೋರಿಸುವ ಮೂಲಕ ತಾವು ದೆಹಲಿ ನಾಗರಿಕರು ಎಂದು ತಿಳಿಸುವ ರೀತಿಯಲ್ಲಿ ವ್ಯಂಗ್ಯ ಮಾಡಲಾಗಿದೆ.
- ದೆಹಲಿಯ ಗಾಳಿಯಲ್ಲಿ 10 ನಿಮಿಷ ಹಾರಾಡಿದ ಬಳಿಕ ‘ಸೂಪರ್‌ಮ್ಯಾನ್’ ಕೂಡ ಆಸ್ಪತ್ರೆಗೆ ದಾಖಲಾಗಿ ಮಾಸ್ಕ್ ಧರಿಸಬೇಕಾಗುತ್ತದೆ ಎಂಬ ಮೀಮ್ ಒಂದು ‘ಎಕ್ಸ್’ನಲ್ಲಿದೆ.
- ‘ದೆಹಲಿಗೆ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಯತ್ನವಾಗುತ್ತಿದೆ. ಮಾಲಿನ್ಯ ಮತ್ತು ಅಪರಾಧ ವ್ಯವಸ್ಥೆಯು 14ನೇ ಶತಮಾನದತ್ತ ಮರಳುತ್ತಿದೆ’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
- ರಾಜಕೀಯ ಮತ್ತು ಮಾಲಿನ್ಯವನ್ನು ಸಮೀಕರಿಸಿಕೊಂಡು ಟೀಕಿಸಿರುವ ನೆಟ್ಟಿಗರು, ‘ಅಬ್ ಕಿ ಬಾರ್, 1000 ಎಕ್ಯುಐ ಪಾರ್’ ಎಂದು ಪೋಸ್ಟ್ ಮಾಡಿದ್ದಾರೆ.
‘ಗಾಳಿಯ ಗುಣಮಟ್ಟ ತೀರಾ ಕಳಪೆ’
- ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಿಗ್ಗೆ ವಿಷಯುಕ್ತ ಗಾಳಿಯು ಪರದೆಯಂತೆ ಆವರಿಸಿತ್ತು. ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ.
- ಸಿಪಿಸಿಬಿ ದತ್ತಾಂಶಗಳ ಪ್ರಕಾರ, ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) 345 ಇತ್ತು.
- ಗಾಳಿಯ ಗುಣಮಟ್ಟ ಸೂಚ್ಯಂಕವು ಮುಂಜಾನೆ ತೀವ್ರವಾಗಿ (391 ಎಕ್ಯುಐ) ಕುಸಿದಿತ್ತು. ಬಳಿಕ ಸ್ವಲ್ಪ ಸುಧಾರಿಸಿದೆ.
- ಬೂಕರ್ ಸ್ಪರ್ಧೆಯಲ್ಲಿ ಕಿರಣ್
ಸಂದರ್ಭ: ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಲೋನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನ್ನಿ’ ಪುಸ್ತಕವು ಬೂಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದು, ತಾವು ಅನುಭವಿಸಿದ ‘ಕಲಾತ್ಮಕ ಒಂಟಿತನ’ವನ್ನೇ (ಬೇಗುದಿ) ಆಧರಿಸಿ ಈ ಪುಸ್ತಕ ಬರೆದಿರುವುದಾಗಿ ಕಿರಣ್ ಹೇಳಿಕೊಂಡಿದ್ದಾರೆ.
- ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಪೂರ್ವ ಸಮಾರಂಭದಲ್ಲಿ ತಮ್ಮ ಪುಸ್ತಕದ ವಸ್ತುವಿಷಯದ ಕುರಿತು ಕಿರಣ್ ಮಾತನಾಡಿದರು. ‘ದೀರ್ಘಕಾಲದಿಂದ ಬಗೆಹರಿಯದ ಪ್ರೇಮ ಕಥೆಯೊಂದರ ಮೂಲಕ ಜಗತ್ತಿನ ಒಂಟಿತನದ ವಿಚಾರದ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.
- ಅಲ್ಲದೇ, ‘ವಿದ್ಯಾಭ್ಯಾಸಕ್ಕಾಗಿ ಮೊದಲ ಬಾರಿ ಭಾರತವನ್ನು ತೊರೆದಾಗ ಅನುಭವಿಸಿದ ಒಂಟಿತನ ಹಾಗೂ ಬರೆಯಲು ಆರಂಭಿಸಿದ ನಂತರ ಪ್ರೇಕ್ಷರಿಗೆ ತಲುಪಲು ಸಾಧ್ಯವಾಗದೆ, ಯಾರೂ ನಮ್ಮನ್ನು ಗುರುತಿಸದೇ ಎದುರಾದ ಬೇಗುದಿಯ ಅನುಭವ ಪುಸ್ತಕವಾಗಿಸಿ ದ್ದೇನೆ.
- ಇದನ್ನು ಕಲಾತ್ಮಕ ಒಂಟಿತನದ ಬರಹ ವೆಂದೇ ಭಾವಿಸುವೆ’ ಎಂದಿದ್ದಾರೆ. 2006ರಲ್ಲಿ ಕಿರಣ್ ಅವರ ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿತ್ತು.
- ಸ್ವರ್ಣಕ್ಕೆ ಗುರಿಯಿಟ್ಟ ರಾಣಾ : ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್
ಸಂದರ್ಭ: ಭಾರತದ ಯುವ ಶೂಟರ್ ಸಾಮ್ರಾಟ್ ರಾಣಾ ಅವರು ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್ಷಿಪ್ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
- ಕರ್ನಲ್ ಮೂಲದ ಸಾಮ್ರಾಟ್ ಫೈನಲ್‌ನಲ್ಲಿ 243.7 ಅಂಕಗಳನ್ನು ಗಳಿಸಿ ಚೀನಾದ ಹು ಕೈ ಅವರನ್ನು ಸೋಲಿಸಿದರು. 243.3 ಅಂಕಗಳೊಂದಿಗೆ ಹು ಕೈ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಉತ್ತರ ಪ್ರದೇಶದ ಬಾಗ್‌ಪತ್‌ನ ವರುಣ್ ತೋಮರ್ ಅವರು 221.7 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
- ಮನು, ಇಶಾಗೆ ತಪ್ಪಿದ ಪದಕ: ಒಲಿಂಪಿಕ್ ಅವಳಿ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಇಶಾ ಸಿಂಗ್ ಅವರು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪದಕ ಗೆಲ್ಲಲು ವಿಫಲರಾದರು. ಆದರೆ, ತಂಡ ವಿಭಾಗದಲ್ಲಿ ಸುರುಚಿ ಸಿಂಗ್ ಅವರೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
- ಇಶಾ (583), ಮನು (580) ಮತ್ತು ಸುರುಚಿ (577) ಹೀಗೆ ಒಟ್ಟು 1740 ಅಂಕಗಳೊಂದಿಗೆ ತಂಡ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ವೈಯಕ್ತಿಕ ಸ್ಪರ್ಧೆಯಲ್ಲಿ ಇಶಾ ಆರನೇ ಸ್ಥಾನ ಮತ್ತು ಮನು ಏಳನೇ ಸ್ಥಾನಗಳೊಂದಿಗೆ ಅಭಿಯಾನ ಮುಗಿಸಿದರು.
- ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ.
- ಏಷ್ಯನ್ ಆರ್ಚರಿ: ಭಾರತಕ್ಕೆ 2 ಪದಕ ಖಚಿತ
ಸಂದರ್ಭ: ಭಾರತದ ಪುರುಷರ ರಿಕರ್ವ್ ತಂಡ, ಏಷ್ಯನ್ ಆರ್ಚರಿ ಚಾಂಪಿಯನ್ಷಿಪ್ನ ಫೈನಲ್ ತಲುಪಿದೆ. ಇದರಿಂದ ಈ ಕೂಟದಲ್ಲಿ ದೀರ್ಘಕಾಲದ ಪದಕ ಬರ ಅಂತ್ಯಗೊಳ್ಳುವ ಕ್ಷಣ ಸನ್ನಿಹಿತವಾಗಿದೆ. ಭಾರತ ತಂಡವು ಚಿನ್ನದ ಪದಕಕ್ಕಾಗಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.
- ಮಹಿಳೆಯರ ವಿಭಾಗದಲ್ಲಿ ಕಾಂಪೌಂಡ್ ವಿಭಾಗದ ಹಾಲಿ ಚಾಂಪಿಯನ್ ಭಾರತ ಸತತ ಎರಡನೇ ಬಾರಿ ಫೈನಲ್ ತಲುಪಿದೆ. ಇದರಿಂದಾಗಿ ಭಾರತಕ್ಕೆ ಈ ಕೂಟದಲ್ಲಿ ಎರಡು ಪದಕಗಳು ಖಾತರಿಯಾಗಿವೆ.
- ಯಶದೀಪ್ ಭೋಗೆ, ಅತನು ದಾಸ್ ಮತ್ತು ರಾಹುಲ್ ಅವರಿದ್ದ ತಂಡ, ತೀವ್ರ ಸೆಣಸಾಟದಲ್ಲಿ ಕಜಾಕಸ್ತಾನ ತಂಡವನ್ನು 5–3 ರಿಂದ ಸೋಲಿಸಿತು.
- ದಕ್ಷಿಣ ಕೊರಿಯಾವು ಪ್ರಮುಖ ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಿ ಎರಡನೇ ಹಂತದ ತಂಡವನ್ನು ಈ ಕೂಟಕ್ಕೆ ಕಳುಹಿಸಿದೆ.
- ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್ ತಂಡ ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯನ್ನರ ತಂಡ ಸೆಮಿಫೈನಲ್‌ನಲ್ಲಿ 237–227 ರಿಂದ ಇರಾನ್ ಮೇಲೆ ಜಯಗಳಿಸಿತು.
ಪ್ರಚಲಿತ ವಿದ್ಯಮಾನಗಳು: 9 & 10ನೇ ನವೆಂಬರ್ 2025
ಆಫ್ರಿಕಾದಿಂದ ಮತ್ತೆ 8 ಚೀತಾಗಳು ಭಾರತಕ್ಕೆ
ಭೋಪಾಲ್ (ಪಿಟಿಐ): ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ 2022ರ ಕಾರ್ಯಕ್ರಮದ ಅಡಿಯಲ್ಲಿ ಸ್ಥಳಾಂತರಿಸಲು 8 ಚೀತಾಗಳನ್ನು ದಕ್ಷಿಣ ಆಫ್ರೀಕಾದ ಬೋಟ್ಸ್‌ವಾನಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ಹೇಳಿದ್ದಾರೆ.
ಎರಡು ಗಂಡು ಚೀತಾಗಳು ಸೇರಿ ಒಟ್ಟು ಎಂಟು ಚೀತಾಗಳನ್ನು ಒಂದು ತಿಂಗಳ ಕಾಲ ಪ್ರತ್ಯೇಕವಾಸದಲ್ಲಿ ಇರಿಸಲಾಗುತ್ತದೆ. ಭಾರತಕ್ಕೆ ಕಳುಹಿಸುವ ಮೊದಲು ಅವುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಂಗೋಲಾ ಪ್ರವಾಸಕ್ಕೆ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಫ್ರಿಕಾದ ದಕ್ಷಿಣ ಭಾಗದ ಅಂಗೋಲಾ ಹಾಗೂ ಬೋಟ್ಸ್‌ವಾನಾ ದೇಶಗಳಿಗೆ 6 ದಿನಗಳ ಪ್ರವಾಸಕ್ಕೆ ಶನಿವಾರ ತೆರಳಿದರು. ಈ ದೇಶಗಳಿಗೆ ಭಾರತದ ರಾಷ್ಟ್ರಪತಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.
ಆ ದೇಶಗಳೊಂದಿಗೆ ಸಹಯೋಗ ಹಾಗೂ ಪಾಲುದಾರಿಕೆಯನ್ನು ವಿಸ್ತರಿಸುವ ಭಾರತದ ಪ್ರಯತ್ನದ ಭಾಗವಾಗಿ ಈ ಪ್ರವಾಸ ಕೈಗೊಂಡಿದ್ದಾರೆ.
ಮೊದಲು ಅಂಗೋಲಾ ರಾಜಧಾನಿ ಲೌಂಡಾಕ್ಕೆ ಮುರ್ಮು ಬಂದಿಳಿಯಲಿದ್ದಾರೆ. ಇಲ್ಲಿ ನ.8 ರಿಂದ 11ರವರೆಗೆ ಪ್ರವಾಸದಲ್ಲಿರಲಿರುವ ಅವರು ದೇಶದ 50ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಅಂಗೋಲಾ ಅಧ್ಯಕ್ಷ ಜಾವೊ ಮ್ಯಾನುಯೆಲ್ ಗೊಂಕ್ಲಾವೆಸ್ ಲಿಯೊರೆಂಕೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆ ದೇಶದ ಸಂಸತ್ತನ್ನು ಉದ್ದೇಶಿಸಿ ಮುರ್ಮು ಮಾತನಾಡಲಿದ್ದಾರೆ.
‘ಸ್ವಾವಲಂಬಿ ಭಾರತದ ಪ್ರತೀಕ ವಂದೇ ಭಾರತ್’
ಎರ್ನಾಕುಲಂ-–ಬೆಂಗಳೂರು ರೈಲಿಗೆ ಸಚಿವ ಎಚ್‌ಡಿಕೆ ಸ್ವಾಗತ
ರೈಲ್ವೆ ಜಾಲಕ್ಕೆ ಸೇರ್ಪಡೆ ಯಾಗುವ ಪ್ರತಿಯೊಂದು ‘ವಂದೇ ಭಾರತ್’ ರೈಲು ಕೂಡ ಸ್ವಾವಲಂಬಿ ಭಾರತದ ಪ್ರತೀಕವಾಗಿದೆ. ಭವಿಷ್ಯವನ್ನು ರೂಪಿಸುವ ನಾವೀನ್ಯತೆ, ವಿಶ್ವಾಸ ಮತ್ತು ಸಾಮರ್ಥ್ಯದ ದ್ಯೋತಕ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಮೂಲಕ ಸಂಚರಿಸುವ ಎರ್ನಾಕುಲಂ-ಬೆಂಗಳೂರು ‘ವಂದೇ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಶನಿವಾರ ಚಾಲನೆ ನೀಡಿದ್ದರು. ಈ ರೈಲು ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದಾಗ ಸ್ವಾಗತಕೋರಿ ಕುಮಾರಸ್ವಾಮಿ ಅವರು ಮಾತನಾಡಿದರು.
‘ಮೇಕ್ ಇನ್ ಇಂಡಿಯಾದ ಅಡಿ ಯಲ್ಲಿ ನಮ್ಮದೇ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಈ ರೈಲುಗಳು ಭಾರತವು ತಾಂತ್ರಿಕವಾಗಿ ಮತ್ತು ವೇಗವಾಗಿ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಬಿಂಬಿಸುತ್ತಿವೆ’ ಎಂದು ಹೇಳಿದರು.
ಅಂತರ ರಾಜ್ಯ ಸಂಪರ್ಕ ಮಾರ್ಗವು ಅಗತ್ಯವಾಗಿದ್ದು, ವಾಣಿಜ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಎರಡು ಕೇಂದ್ರಗಳಾದ ಎರ್ನಾಕುಲಂ–ಬೆಂಗಳೂರನ್ನು ಈ ‘ವಂದೇ ಭಾರತ್’ ರೈಲು ಜೋಡಿಸುತ್ತಿದೆ ಎಂದು ಅವರು ಹೇಳಿದರು.
ಸಂಸದ ಪಿ.ಸಿ. ಮೋಹನ್ ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಕಬ್ಬಿಗೆ ಪರಿಷ್ಕೃತ ದರ ಇಲಾಖೆ ಅಧಿಕೃತ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿದ್ದ ಪರಿಷ್ಕೃತ ದರಕ್ಕೆ ಸಂಬಂಧಿಸಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ) ಶನಿವಾರ ಆದೇಶ ಹೊರಡಿಸಿದೆ.
ಪರಿಷ್ಕೃತ ದರ 2025–26ನೇ ಸಾಲಿನ ಹಂಗಾಮಿಗೆ ಅನ್ವಯವಾಗಲಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಈ ಮೊತ್ತ ಪಾವತಿಸಬೇಕಿದೆ. ಕಾರ್ಖಾನೆಗಳು ಮೊದಲ ಕಂತಿನಲ್ಲಿ ಶೇ 10.25 ಸಕ್ಕರೆ ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ₹3,100, ಶೇ 11.25 ಇಳುವರಿ ಇರುವ ಕಬ್ಬಿಗೆ ₹3,200 ಪಾವತಿಸುತ್ತವೆ. ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ದರ ಪ್ರತಿ ಟನ್‌ಗೆ ₹50 ಹಾಗೂ ರಾಜ್ಯ ಸರ್ಕಾರ ಒಂದು ಬಾರಿಗೆ ನೀಡುತ್ತಿರುವ ಆರ್ಥಿಕ ನೆರವು ₹50 ಎರಡನೇ ಕಂತಿನಲ್ಲಿ ಪಾವತಿಸಲಾಗುತ್ತದೆ.
ಶೇ 10.25–ಶೇ 9.5ರ ನಡುವಿನ ಇಳುವರಿ ಪ್ರಮಾಣದ ನಡುವೆ ಪ್ರತಿ 0.1 ಕಡಿಮೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ ಪ್ರತಿ ಕ್ವಿಂಟಲ್‌ಗೆ ₹3.46 ಮೊತ್ತವನ್ನು ಪರಿಗಣಿಸಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕರು ಸೂಚಿಸಿದ್ದಾರೆ.
ಕೇಂದ್ರ ಸರ್ಕಾರ ಸಾಗಣೆ ವೆಚ್ಚ ಸೇರಿ ಶೇ 9.5 ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ ₹3,290.50, ಶೇ 10.25 ಇಳುವರಿಗೆ ₹3,550 ಹಾಗೂ ಶೇ 11.25 ಇಳುವರಿಗೆ ₹3,896 ನ್ಯಾಯಯುತ ಮತ್ತು ಲಾಭದಾಯಕ ದರವನ್ನು (ಎಫ್‌ಆರ್‌ಪಿ) ನಿಗದಿ ಮಾಡಿತ್ತು. ನಂತರ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಕಬ್ಬು ಕಟಾವು, ಸಾಗಣೆ ವೆಚ್ಚ ಕುರಿತು ಮಾರ್ಗಸೂಚಿ ಹೊರಡಿಸಿತ್ತು.
ಕೇಂದ್ರ ಸರ್ಕಾರ ಹೊರಡಿಸಿದ ಎಫ್‌ಆರ್‌ಪಿ, ಮಾರ್ಗಸೂಚಿ ನ್ಯಾಯಯುತ ವಾಗಿಲ್ಲ. ರೈತರು ಬೆಳೆದ ಕಬ್ಬಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೆ ದರ ನಿಗದಿ ಮಾಡಲಾಗಿದೆ. ಇಳುವರಿ ನಿಗದಿಯೂ ಪಾರದರ್ಶಕವಾಗಲಿಲ್ಲ. ಹೆಚ್ಚಿನ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಪರಿಷ್ಕೃತ ದರ ಘೋಷಣೆ ಮಾಡಿದ್ದರು.
ಶೂಟಿಂಗ್: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು
ಕೈರೊ (ಪಿಟಿಐ): ಸೇನೆಯ ಅನುಭವಿ ಶೂಟರ್ ರವಿಂದರ್ ಸಿಂಗ್ ಅವರು ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.
ಆದರೆ ಮಹಿಳೆಯರ ವಿಭಾಗದಲ್ಲಿ ಎರಡು ಬಾರಿಯ ಒಲಿಂಪಿಯನ್ ಇಳವನಿಲ್ ವಳರಿವನ್ ಅವರು 10 ಮೀ. ಏರ್ ರೈಫೆಲ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
ದಕ್ಷಿಣ ಕೊರಿಯಾದ ಬಾನ್ ಹ್ಯೊಜಿನ್ (255.0) ಚಿನ್ನ ಗೆದ್ದರೆ, ಚೀನಾದ ವಾಂಗ್ ಜಿಫೀ (254) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 19ನೇ ಶಾಟ್‌ವರೆಗೆ ಚೀನಾ ಸ್ಪರ್ಧಿಯು ವಳರಿವನ್ ಅವರಿಗಿಂತ ಹಿಂದೆಯಿದ್ದರು.
ವಳರಿವನ್, ಮೇಘನಾ ಸಜ್ಜನರ ಮತ್ತು ಶ್ರೇಯಾ ಅಗರವಾಲ್ ಅವರನ್ನೊಳಗೊಂಡ ಭಾರತ ತಂಡ (1893.3) ತಂಡ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯಿತು.
ನಾಯಕ್ ಸುಬೇದಾರ್ ಆಗಿರುವ 29 ವರ್ಷ ವಯಸ್ಸಿನ ರವಿಂದರ್ ಸಿಂಗ್ ಅವರು 569 ಪಾಯಿಂಟ್ ಸ್ಕೋರ್ ಮಾಡಿದರೆ, ದಕ್ಷಿಣ ಕೊರಿಯಾದ ಕಿಮ್ ಚಿಯಾಂಗ್‌ಯಾಂಗ್ (556) ಅವರು ಬೆಳ್ಳಿ ಮತ್ತು ತಟಸ್ಥ ರಾಷ್ಟ್ರದ ಆ್ಯಂಟನ್ ಅರಿಸ್ಟರ್ಕೊವ್ (555) ಕಂಚು ಗೆದ್ದರು. ರವಿಂದರ್, ಕಮಲಜೀತ್ ಮತ್ತು ಯೋಗೇಶ್ ಕುಮಾರ್ ಅವರನ್ನು ಒಳಗೊಂಡ ತಂಡವು ಟೀಮ್ ವಿಭಾಗದಲ್ಲಿ ಬೆಳ್ಳಿ ಗೆದ್ದಿತು.
ವಂದೇ ಭಾರತ್-: 4 ರೈಲಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು– ಎರ್ನಾಕುಳಂ ಸೇರಿದಂತೆ ನಾಲ್ಕು ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಬನಾರಸ್ ರೈಲು ನಿಲ್ದಾಣದಿಂದ ಶನಿವಾರ ಹಸಿರು ನಿಶಾನೆ ತೋರಿದರು.
ನೂತನ ರೈಲುಗಳು ಬನಾರಸ್–ಖಜುರಾಹೊ, ಲಖನೌ–ಸಹಾರನಪುರ, ಫಿರೋಜ್‌ಪುರ–ದೆಹಲಿ, ಎರ್ನಾಕುಳಂ–ಬೆಂಗಳೂರಿನ ನಡುವೆ ಸಂಚರಿಸಲಿವೆ.
ಈ ಸೆಮಿ ಹೈಸ್ಪೀಡ್ ರೈಲುಗಳು ಪ್ರಮುಖ ರೈಲು ನಿಲ್ದಾಣಗಳ ನಡುವಣ ಪ್ರಯಾಣದ ಅವಧಿಯನ್ನು ತಗ್ಗಿಸಲಿವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಮತ್ತು ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,‘ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ ಭಾರತ್ ರೈಲುಗಳು ಭಾರತೀಯ ರೈಲ್ವೆಯ ಹೊಸ ಪೀಳಿಗೆಗಳು’ ಎಂದರು.
‘ದೇಶದಲ್ಲಿ ಸಾಕಷ್ಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ, ವಿಮಾನಗಳು ಜಗತ್ತಿನಾದ್ಯಂತ ಹಾರಾಡುತ್ತಿವೆ. ಈ ಎಲ್ಲ ಅಭಿವೃದ್ಧಿಯು ದೇಶದ ಬೆಳವಣಿಗೆ ಯೊಂದಿಗೆ ಸಂಬಂಧ ಹೊಂದಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲ ಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಅಭಿವೃದ್ಧಿಯ ಪಥದಲ್ಲಿ ಭಾರತವೂ ವೇಗವಾಗಿ ಸಾಗುತ್ತಿದೆ’ ಎಂದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉಪಸ್ಥಿತರಿದ್ದರು.
‘ಅಭಿವೃದ್ಧಿಯ ಪಯಣದಲ್ಲಿ ಭಾಗಿ’
‘ವಂದೇ ಭಾರತ್’ ರೈಲು ಜಾಲವು ಭಾರತದ ಪ್ರಮುಖ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ಮೂಲಕ ದೇಶದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿಯ ಪಯಣದಲ್ಲಿ ಜೊತೆಯಾಗಿದೆ. ದೇಶದಲ್ಲಿ ಯಾತ್ರೆಯನ್ನು ‘ಧ್ಯಾನದ ಮಾರ್ಗ’ ಎಂದೇ ಶತಮಾನಗಳಿಂದ ಪರಿಗಣಿಸಲಾಗುತ್ತದೆ’ ಎಂದು ಪ್ರಧಾನಿ ಹೇಳಿದರು.
ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್ ಗೀತೆ: ಪಿಣರಾಯಿ ಖಂಡನೆ
ತಿರುವನಂತಪುರ: ನೂತನವಾಗಿ ಉದ್ಘಾಟನೆಗೊಂಡ ಎರ್ನಾಕುಳಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್ ಗೀತೆಯನ್ನು ಹಾಡಿಸಲಾಗಿದೆ ಎಂದು ಹೇಳಲಾಗಿದ್ದು, ಈ ನಡೆ ಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ.
ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿರುವ ದೃಶ್ಯ ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ.
‘ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನಾತ್ಮಕ ನೀತಿಗಳನ್ನು ಉಲ್ಲಂಘಿಸಲಾಗಿದೆ. ಸಂಘ ಪರಿವಾರವು ತನ್ನ ಕೋಮು ರಾಜಕೀಯದ ಪ್ರಚಾರಕ್ಕಾಗಿ ಅತಿದೊಡ್ಡ ಸಾರ್ವಜನಿಕ ವಲಯವಾದ ರೈಲ್ವೆಯನ್ನು ಬಳಸಿಕೊಂಡಿರುವುದು ಸ್ವೀಕಾರಾರ್ಹವಲ್ಲ’ ಎಂದು ಹರಿಹಾಯ್ದಿದ್ದಾರೆ.
- ಮಧುಗುಂಡಿ: ಅಪರೂಪದ ಜೇಡ ಗೋಚರ
ಸಂದರ್ಭ: 123 ವರ್ಷಗಳ ನಂತರ ಸಂಶೋಧಕರಿಗೆ ಕಾಣಿಸಿಕೊಂಡ ‘ಪಿಲಿಯಾ’ ಪ್ರಭೇದ: ಮಧುಗುಂಡಿಯಲ್ಲಿ ಪರಿಸರ ಅಧ್ಯಯನಕ್ಕೆ ಹೆಚ್ಚು ಅವಕಾಶವಿರುವುದು ಮತ್ತೆ ಸಾಬೀತಾಗಿದೆ. ಹಾಗಾಗಿ ಅಧ್ಯಯನ ಆಸಕ್ತಿ ಇರುವ ಅತಿಥಿಗಳಿಗೇ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ ಶ್ರೀಜಿತ್, ರಿವರ್ ಮಿಸ್ಟ್ ಮುಖ್ಯಸ್ಥ .

- ಪಶ್ಚಿಮ ಘಟ್ಟದ ಜೀವವೈವಿಧ್ಯದ ಅಧ್ಯಯನ ಕೈಗೊಂಡಿರುವ ಸಂಶೋಧಕರ ತಂಡವು ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯಲ್ಲಿ ಕುಪ್ಪಳಿಸುವ ಜೇಡಗಳ ‘ಪಿಲಿಯಾ’ ಗುಂಪಿಗೆ ಸೇರಿದ ಹೊಸ ಪ್ರಭೇದದ ಜೇಡವು ಗೋಚರಿಸಿದೆ.
- ಈ ಕುರಿತ ವರದಿ ಅಂತರರಾಷ್ಟ್ರೀಯ ಜೀವವೈವಿಧ್ಯ ಅಧ್ಯಯನ ಪತ್ರಿಕೆ ಝೂಟಾಕ್ಸಾನಲ್ಲಿ(Zootaxa) ಪ್ರಕಟವಾಗಿದೆ. ಈ ತಳಿಯ ಜೇಡ ಕೊನೆಯದಾಗಿ 1902ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಈಗ, 123 ವರ್ಷಗಳ ನಂತರ ಮಧುಗುಂಡಿಯಲ್ಲಿ ಈ ಸಂಕುಲ ಕಾಣಿಸಿಕೊಂಡಿರುವುದು ದಾಖಲಾಗಿದೆ.
- ಸಂಶೋಧಕರು ಮೊದಲ ಬಾರಿಗೆ ಈ ಪ್ರಬೇಧದ ಗಂಡು, ಹೆಣ್ಣು ಜೇಡಗಳನ್ನು ಗುರುತಿಸಿದ್ದಾರೆ. ಈ ಗುಂಪಿಗೆ ‘ಪಿಲಿಯಾ ಮಲೆನಾಡು’ ಎಂಬ ಹೆಸರನ್ನು ಸಂಶೋಧಕರು ಸೂಚಿಸಿದ್ದಾರೆ. ಗೋಚರಿಸಿದ ಸ್ಥಳಕ್ಕೆ ಗೌರವ ಸೂಚಿಸಲು ಈ ಹೆಸರು ನೀಡಲಾಗಿದೆ ಎಂದೂ ಹೇಳುತ್ತಾರೆ.
- ಮಧುಗುಂಡಿಯ ರಿವರ್ ಮಿಸ್ಟ್ ರೆಸಾರ್ಟ್‌ನಲ್ಲಿ ನೈಸರ್ಗಿಕ ತಜ್ಞರಾಗಿರುವ, ವನ್ಯಜೀವಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಜಿತ್ ಪಡಿಯಾರ್ ಈ ಹೊಸ ಪ್ರಭೇದವನ್ನು ಮೊದಲಿಗೆ ಗಮನಿಸಿದ್ದಾರೆ. ಒಟ್ಟು 24 ಜೇಡ ಪತ್ತೆಯಾಗಿವೆ. ಅವುಗಳಲ್ಲಿ 17 ಗಂಡು, ಮೂರು ಹೆಣ್ಣು ಮತ್ತು ನಾಲ್ಕು ಎಳೆಯ ಜೇಡಗಳಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಅಪರೂಪದ ‘ಕೇಸರಿ ರೀಡ್‌ಟೇಲ್’ ಚಿಟ್ಟೆಗಳನ್ನು ಅಜಿತ್ ಪಡಿಯಾರ್ ಗುರುತಿಸಿದ್ದರು.
- ‘ಸಾಮಾನ್ಯವಾಗಿ ಮನೆ ಮತ್ತು ತೋಟಗಳಲ್ಲಿ ಕಾಣಿಸುವ ಜೇಡಗಳಿಗಿಂತ ಈ ಪಿಲಿಯಾ ಪ್ರಭೇದದ ಜೇಡಗಳು ವಿಭಿನ್ನವಾಗಿವೆ. ಅದರಲ್ಲೂ ಹೆಣ್ಣು ಜೇಡ ಮೊದಲ ಬಾರಿಗೆ ಗುರುತಿಸಲ್ಪಟ್ಟಿದೆ. ಇದು ಈ ಪ್ರಭೇದದ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ’ ಎಂದು ಪಡಿಯಾರ್ ಅಭಿಪ್ರಾಯಪಡುತ್ತಾರೆ.
- ಗಮನಾರ್ಹವೆಂದರೆ ಈ ಜೇಡಗಳು ಅಪರೂಪದ ಸಸ್ಯ ಪ್ರಭೇದಗಳಾದ ‘ಮೆಮೆಸಿಲಾನ್ ಅಂಬ ಲಾಟಮ್’ ಮತ್ತು ‘ಮೆಮೆಸಿಲಾನ್ ಮಲಬಾರಿಕಮ್’ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಈ ಸಸ್ಯಗಳ ಎಲೆಗಳ ನಡುವೆ ಅಡಗಿಕೊಂಡಿರುವುದು ಕಂಡುಬಂದಿದೆ ಎಂದು ವಿವರಿಸಿದರು.
- ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು
ಸಂದರ್ಭ: ಬಹುಪತ್ನಿತ್ವ ನಿಷೇಧಕ್ಕೆ ಸಂಬಂಧಿಸಿದ ಮಸೂದೆಯನ್ನು ಅಸ್ಸಾಂ ಸಚಿವ ಸಂಪುಟ ಸಭೆ ಅನುಮೋದಿ ಸಿದೆ. ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ ನಿಯಮ ಉಲ್ಲಂಘಿಸಿ, ಬಹುಪತ್ನಿತ್ವ ಅನುಸರಿಸುವವರಿಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
- ವಿಧಾನ ಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಬಹುಪತ್ನಿತ್ವ ನಿಷೇಧದ ಕಾರಣಕ್ಕೆ ಸಂತ್ರಸ್ತರಾಗುವವರಿಗೆ ನೆರವು ಕಲ್ಪಿಸಲು ಪ್ರತ್ಯೇಕ ಹಣಕಾಸು ನಿಧಿ ಸ್ಥಾಪಿಸಲಾಗುವುದು ಎಂದೂ ಹೇಳಿದ್ದಾರೆ.
- 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಒಪ್ಪಿಗೆ
ಸಂದರ್ಭ: ಅಕ್ಟೋಬರ್ ನಿಂದ ಆರಂಭವಾಗಿರುವ ಪ್ರಸ್ತಕ ವರ್ಷದ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
- ಕಾಕಂಬಿ (ಮೊಲಾಸಿಸ್) ರಫ್ತು ಮೇಲಿನ ಶೇಕಡ 50ರಷ್ಟು ಸುಂಕವನ್ನು ತೆಗೆಯಲು ಕೇಂದ್ರ ನಿರ್ಧರಿಸಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವೆಂಬರ್ 7ರಂದು ಬರೆದ ಪತ್ರದಲ್ಲಿ ಜೋಶಿ ತಿಳಿಸಿದ್ದಾರೆ.
- ದೇಶದಲ್ಲಿನ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪತ್ರದಲ್ಲಿ ವಿವರಿಸಿದ್ದಾರೆ.
- 2024–25ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿ ನೀಡಿತ್ತು. ಈ ಪೈಕಿ 8 ಲಕ್ಷ ಟನ್ ಸಕ್ಕರೆ ಮಾತ್ರ ರಫ್ತಾಗಿತ್ತು.
- ಈ ಬಾರಿ ಉದ್ಯಮವು 20 ಲಕ್ಷ ಟನ್ ಸಕ್ಕರೆ ರಫ್ತಿಗೆ ಬೇಡಿಕೆ ಇಟ್ಟಿತ್ತು. ಆದರೆ, 15 ಲಕ್ಷ ಟನ್ ರಫ್ತಿಗೆ ಅನುಮತಿ ನೀಡಿದೆ.
- ಸಕ್ಕರೆ ದಾಸ್ತಾನು ಹೆಚ್ಚಳದಿಂದಾಗಿ ಸಕ್ಕರೆ ರಫ್ತಿಗೆ ಅನುಮತಿ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಇತ್ತೀಚೆಗೆ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಹೇಳಿದ್ದರು.
- ಕಳೆದ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ 34 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ತಯಾರಿಕೆಗೆ ಕೈಗಾರಿಕೆಗಳು ಬಳಕೆ ಮಾಡಿವೆ. ಇದು ಅಂದಾಜು ಮಾಡಿದ್ದ 45 ಲಕ್ಷ ಟನ್‌ಗಿಂತ ಕಡಿಮೆ. ಇದರ ಪರಿಣಾಮವಾಗಿ ಹೆಚ್ಚಿನ ದಾಸ್ತಾನು ಇದೆ ಎಂದು ಚೋಪ್ರಾ ತಿಳಿಸಿದ್ದರು.
- ಪ್ರಸಕ್ತ ಋತುವಿನಲ್ಲಿ 3.4 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗಲಿದೆ. ಈ ಪೈಕಿ 2.85 ಕೋಟಿ ಟನ್ ಸಕ್ಕರೆಗೆ ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದು ಹೇಳಿದ್ದರು.
- ‘ಅತಿದೊಡ್ಡ ಸ್ಕಾಚ್ ವಿಸ್ಕಿ ಮಾರುಕಟ್ಟೆಯಾಗುವತ್ತ ಭಾರತ’
ಸಂದರ್ಭ: ಸ್ಕಾಚ್ ವಿಸ್ಕಿಗಳ ಪಾಲಿಗೆ ಜಾಗತಿಕ ಮಟ್ಟದಲ್ಲಿ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಸ್ಕಾಚ್ ವಿಸ್ಕಿ ಅಸೋಸಿಯೇಷನ್ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಕೆಂಟ್ ಹೇಳಿದ್ದಾರೆ.
- ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಗೆ ಬೇಡಿಕೆ ಹೆಚ್ಚಿರುವುದನ್ನು ಮಾರ್ಕ್ ಕೆಂಟ್ ಅವರು ಶ್ಲಾಘಿಸಿದ್ದಾರೆ.
- ಸ್ಕಾಚ್ ವಿಸ್ಕಿಗಳು 180 ದೇಶಗಳ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಈ ಪೈಕಿ ಭಾರತದ ಮಾರುಕಟ್ಟೆಯು ಸ್ಕಾಚ್ ವಿಸ್ಕಿಗಳ ಪಾಲಿಗೆ ಪ್ರಮಾಣದ ಲೆಕ್ಕದಲ್ಲಿ ಈಗಾಗಲೇ ಅತಿದೊಡ್ಡದು. ಆದರೆ ಮೌಲ್ಯದ ಲೆಕ್ಕದಲ್ಲಿ ಭಾರತದ ಮಾರುಕಟ್ಟೆಯು ಮೊದಲ ಐದು ಮಾರುಕಟ್ಟೆಗಳ ಪೈಕಿ ಒಂದಾಗಿದೆ ಎಂದು ಕೆಂಟ್ ಹೇಳಿದ್ದಾರೆ.
- ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್ಟಿಎ) ಅನುಷ್ಠಾನಕ್ಕೆ ಬಂದ ನಂತರದಲ್ಲಿ, ಹಲವು ವಿಧದ ಸ್ಕಾಚ್ ವಿಸ್ಕಿಗಳು ಭಾರತಕ್ಕೆ ಬರಲಿವೆ. ಅದರಲ್ಲೂ ಮುಖ್ಯವಾಗಿ, ಸ್ಕಾಟ್ಲೆಂಡಿನ ಸಣ್ಣ ಕಂಪನಿಗಳ ಸ್ಕಾಚ್ ವಿಸ್ಕಿಗಳು ಕೂಡ ಭಾರತದಲ್ಲಿ ಲಭ್ಯವಾಗಲಿವೆ ಎಂದು ಮಾರ್ಕ್ ಕೆಂಟ್ ಹೇಳಿದ್ದಾರೆ.
- ಜಪಾನ್: ಪ್ರಬಲ ಭೂಕಂಪನ, ಸುನಾಮಿ ಎಚ್ಚರಿಕೆ
ಸಂದರ್ಭ: ಉತ್ತರ ಜಪಾನ್ನಲ್ಲಿ ಭಾನುವಾರ ಸಂಜೆ ಪ್ರಬಲ ಭೂಕಂಪನ ಸಂಭವಿಸಿದ್ದು, ಬಳಿಕ ಹಲವು ಬಾರಿ ಭೂಮಿ ಕಂಪಿಸಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಸಿದೆ.
- ಮೊದಲಿಗೆ 6.7 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇವಾಟೆ ಕರಾವಳಿಯ 10 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆ ಯಾಗಿದೆ ಎಂದು ತಿಳಿಸಿದೆ.
- ಸುನಾಮಿ ಕಾರಣ ಕರಾವಳಿ ಪ್ರದೇಶಗಳಿಂದ ದೂರ ಇರುವಂತೆ ಜನರಿಗೆ ಮುನ್ಸೂಚನೆ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಮತ್ತೆ ಭೂಮಿ ಕಂಪಿಸುವ ಸಾಧ್ಯತೆ ಇದೆ ಎಂದೂ ಎಚ್ಚರಿಸಲಾಗಿದೆ. ಭೂಕಂಪನದಿಂದ ಉಂಟಾದ ಹಾನಿಯ ಬಗ್ಗೆ ಸದ್ಯಕ್ಕೆ ಯಾವುದೇ ವರದಿಯಾಗಿಲ್ಲ.
- 50 ಸಂಸ್ಥೆ ಜೊತೆ ಡಿಪಿಐಐಟಿ ಒಪ್ಪಂದ
ಸಂದರ್ಭ: ತಯಾರಿಕೆಗೆ ಉತ್ತೇಜನ ನೀಡಲು ಮತ್ತು ನವೋದ್ಯಮಗಳಿಗೆ ಪೂರಕವಾದ ನಾವೀನ್ಯ ಪರಿಸರದ ವ್ಯವಸ್ಥೆ ರೂಪಿಸಲು ಐಟಿಸಿ, ಫ್ಲಿಪ್ಕಾರ್ಟ್, ಮರ್ಸಿಡಿಸ್ ಬೆಂಜ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (ಡಿಪಿಐಐಟಿ) ಒಪ್ಪಂದ ಮಾಡಿಕೊಂಡಿದೆ.
- ಈ ಕುರಿತ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೋಟ್, ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್, ಹೀರೊ ಮೋಟೊ, ಜೆಪ್ಟೊ, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಪೇಟಿಎಂ, ವಾಲ್‌ಮಾರ್ಟ್ ಮತ್ತು ಏಥರ್ ಎನರ್ಜಿ ಒಪ್ಪಂದ ಮಾಡಿಕೊಂಡ ಕಂಪನಿಗಳ ಪಟ್ಟಿಯಲ್ಲಿವೆ.
- ಈ ಒಪ್ಪಂದದ ಭಾಗವಾಗಿ ನವೋದ್ಯಮಗಳಿಗೆ ಪೂರಕವಾದ ವ್ಯವಸ್ಥೆಗೆ ಉತ್ತೇಜನ ನೀಡಲಾಗುವುದು. ನವೋದ್ಯಮಗಳ ಆರಂಭಿಕ ಹಂತದಲ್ಲಿ ಅಗತ್ಯವಾಗಿ ಬೇಕಿರುವ ಎಲ್ಲ ನೆರವು ಒದಗಿಸುವ ತಯಾರಿಕಾ ವಲಯದ ಇನ್‌ಕ್ಯುಬೇಟರ್ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ಪಾದನೆಯಲ್ಲಿ ನಾವೀನ್ಯವನ್ನು ಹೆಚ್ಚಿಸುವ ಉದ್ದೇಶ ಇದೆ ಎಂದು ಅಧಿಕಾರಿ ಹೇಳಿದ್ದಾರೆ.
- ಶೂಟಿಂಗ್ ವಿಶ್ವಕಪ್: ಅನೀಶ್ಗೆ ಬೆಳ್ಳಿ
ಸಂದರ್ಭ: ಭಾರತದ ಅನೀಶ್ ಭಾನವಾಲಾ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್ನ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.
- 23 ವರ್ಷ ವಯಸ್ಸಿನ ಹರಿಯಾಣದ ಶೂಟರ್ ಫೈನಲ್ ಸುತ್ತಿನಲ್ಲಿ 28 ಪಾಯಿಂಟ್ಸ್ ಕಲೆಹಾಕಿದರು. ಫ್ರಾನ್ಸ್‌ನ ಕ್ಲೆಮೆಂಟ್ ಬೆಸಾಗೆಟ್ (31) ಸ್ವರ್ಣ ಗೆದ್ದರೆ, ಉಕ್ರೇನ್‌ನ ಮಾಕ್ಸಿಮ್ ಹರೊಡಿನೆಟ್ಸ್ (25) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಚಲಿತ ವಿದ್ಯಮಾನಗಳು: 8ನೇ ನವೆಂಬರ್ 2025
- ಕಬ್ಬಿಗೆ ₹3,300 ದರ, ₹50 ಪ್ರೋತ್ಸಾಹಧನ
ಸಂದರ್ಭ: ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ನಡೆಸಿದ ಸುದೀರ್ಘ ಮಾತುಕತೆ ಬಳಿಕ ರಾಜ್ಯ ಸರ್ಕಾರ, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿದೆ.
- ‘ಕೇಂದ್ರದಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರಿಗೆ ಅನ್ಯಾಯವಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಲೀಕರು, ರೈತರನ್ನು ಒಳಗೊಂಡು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
- ಸಕ್ಕರೆಯ ಎಂಎಸ್‌ಪಿ ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.
- ಕಾರ್ಖಾನೆಗಳು ಒಂದು ಟನ್ಗೆ ಹಿಂದೆ ನಿಗದಿಯಾಗಿದ್ದ ₹3,200ರ ಜತೆಗೆ ಹೆಚ್ಚುವರಿಯಾಗಿ ₹50 ನೀಡಿದರೆ, ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ₹50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ 11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ₹3,300 ಹಾಗೂ ಶೇ 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ದರ ಸಿಗಲಿದೆ.
- ಕೇಂದ್ರ ಸರ್ಕಾರ ಕಟಾವು ಮತ್ತು ಸಾಗಣೆ ವೆಚ್ಚ ಸೇರಿಸಿ ಶೇ 10.5 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ₹3,550 ನಿಗದಿಪಡಿಸಿದೆ. ಸಾಗಣೆ, ಕಟಾವು ವೆಚ್ಚ ಹೊರತುಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ ಮತ್ತು ಕಲಬುರಗಿ ಸೇರಿದಂತೆ ವಿವಿಧೆಡೆ ರೈತರು ಅ.30ರಿಂದ ಪ್ರತಿಭಟನೆ ನಡೆಸುತ್ತಿದ್ದರು.
- ಸಚಿವರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ನಿಗದಿ ಮಾಡಿದ್ದ ₹3,200 ದರವನ್ನೂ ಬೆಳೆಗಾರರು ತಿರಸ್ಕರಿಸಿದ್ದರು.
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆ ನಡೆಸಿ, ಪರಿಷ್ಕೃತ ದರ ಘೋಷಣೆ ಮಾಡಿದರು. ಕಬ್ಬಿನ ಇಳುವರಿ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ಹಾಗಾಗಿ, ಎಲ್ಲ ಇಳುವರಿ ಪ್ರಮಾಣದ ಕಬ್ಬಿಗೂ ಪ್ರತಿ ಟನ್ಗೆ ₹100ರೂ ಹೆಚ್ಚಳ ಅನ್ವಯವಾಗಲಿದೆ ಎಂದು ಖಚಿತಪಡಿಸಿದರು.
- ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ), ಕಬ್ಬಿಗೆ ಎಫ್ಆರ್ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ, ಸಕ್ಕರೆ ರಫ್ತು ಮಿತಿ ನಿಗದಿಪಡಿಸುವುದೂ ಕೇಂದ್ರ ಸರ್ಕಾರ.
- ಹಣಕಾಸು ವಲಯದಲ್ಲಿ ಸುಧಾರಣೆ ಅಗತ್ಯ: ವಿಶ್ವಬ್ಯಾಂಕ್
ಸಂದರ್ಭ: 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ (₹2,660 ಲಕ್ಷ ಕೋಟಿ) ಆರ್ಥಿಕತೆಯಾಗಲು ಹಣಕಾಸು ವಲಯದಲ್ಲಿ ಹೆಚ್ಚಿನ ಸುಧಾರಣೆಗಳು ಮತ್ತು ಖಾಸಗಿ ಬಂಡವಾಳಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
- ಭಾರತದ ‘ವಿಶ್ವ ದರ್ಜೆ’ಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸರ್ಕಾರದ ಕಾರ್ಯಕ್ರಮಗಳಿಂದ ಪುರುಷರು ಮತ್ತು ಮಹಿಳೆಯರಿಗೆ ಹಣಕಾಸು ಸೇವೆಗಳು ಸುಲಭವಾಗಿ ಲಭ್ಯವಾಗುವಂತಾಗಿವೆ ಎಂದು ವಿಶ್ವ ಬ್ಯಾಂಕ್‌ನ ಹಣಕಾಸು ವಲಯದ ಮೌಲ್ಯಮಾಪನ ವರದಿ ತಿಳಿಸಿದೆ.
- ವಿಶೇಷವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಳವಾಗಬೇಕು. ವ್ಯಕ್ತಿಗಳು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಹಣಕಾಸು ಸೌಲಭ್ಯ ಲಭ್ಯವಾಗುವಂತೆ ಮಾಡಬೇಕು. ಸಹಕಾರಿ ಬ್ಯಾಂಕ್‌ಗಳ ಮೇಲೆ ಪ್ರಾಧಿಕಾರದ ನಿಯಂತ್ರಣ ಅಗತ್ಯ ಎಂದು ಸಲಹೆ ನೀಡಿದೆ.
- ಹಣಕಾಸು ವಲಯದ ಮೌಲ್ಯಮಾಪನ ಕಾರ್ಯಕ್ರಮವು (ಎಫ್‌ಎಸ್‌ಎಪಿ) ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಜಂಟಿ ಕಾರ್ಯಕ್ರಮವಾಗಿದೆ. ಇದು ದೇಶದ ಹಣಕಾಸು ವಲಯದ ಸಮಗ್ರ ಮತ್ತು ಆಳವಾದ ವಿಶ್ಲೇಷಣೆಯನ್ನು ಮಾಡುತ್ತದೆ.
- ‘ಜಿಡಿಪಿ: ಶೇ 6.8ರಷ್ಟು ನಿರೀಕ್ಷೆ’
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ಕ್ಕಿಂತಲೂ ಹೆಚ್ಚಾಗುವ ವಿಶ್ವಾಸವಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.
- ಜಿಎಸ್‌ಟಿ ಇಳಿಕೆ ಮತ್ತು ಆದಾಯ ತೆರಿಗೆ ವಿನಾಯಿತಿಯಿಂದ ಜನರು ಹೆಚ್ಚು ಹಣ ವ್ಯಯಿಸಲು ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.
- ಆರ್ಥಿಕ ಸಮೀಕ್ಷೆ ವರದಿ ಸಹ ಜಿಡಿಪಿ ಬೆಳವಣಿಗೆ ಶೇ 6.3ರಿಂದ ಶೇ 6.8ರಷ್ಟಾಗಲಿದೆ ಎಂದು ಅಂದಾಜಿಸಿದೆ. ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಈ ಒಪ್ಪಂದ ಶೀಘ್ರ ಆಗಲಿದೆ ಎಂದು ಹೇಳಿದ್ದಾರೆ.
- ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟಾಗಿತ್ತು. ಕೃಷಿ ವಲಯ ಮತ್ತು ಸೇವಾ ವಲಯದಿಂದ ಈ ಪ್ರಗತಿ ಸಾಧಿಸಿತ್ತು.
- ರಾಜ್ಯದ ಕಚ್ಚಾ ಗೇರು ಆಮದು ಹೆಚ್ಚಳ
ಸಂದರ್ಭ: 14ರಿಂದ 16ರವರೆಗೆ ಗೋಡಂಬಿ ಶತಮಾನೋತ್ಸವ ಶೃಂಗ: ‘ಜಗತ್ತಿನ ಒಟ್ಟು ಗೋಡಂಬಿ ಬಳಕೆಯಲ್ಲಿ ಭಾರತದ ಪ್ರಮಾಣ ಮೂರನೇ ಒಂದರಷ್ಟಿದೆ. ದೇಶದ ಗೋಡಂಬಿ ಸಂಸ್ಕರಣೆಯಲ್ಲಿ ಕರ್ನಾಟಕದ ಪಾಲು ಶೇ 25ರಷ್ಟಿದೆ. ರಾಜ್ಯದ ಕಚ್ಚಾಗೇರು ಆಮದು ಪ್ರಮಾಣ 5 ಲಕ್ಷ ಟನ್ಗೆ ತಲುಪಿದೆ’ ಎಂದು ಕರ್ನಾಟಕ ಗೇರು ಉತ್ಪಾದಕರ ಸಂಘ ಹೇಳಿದೆ.
- ‘ಮಂಗಳೂರಿನ ಗೇರು ಸಂಸ್ಕರಣಾ ಉದ್ಯಮಕ್ಕೆ (1925ರಲ್ಲಿ ಆರಂಭ) ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ‘ಗೋಡಂಬಿ ಶತಮಾನೋತ್ಸವ ಶೃಂಗ’ವನ್ನು ಇದೇ 14ರಿಂದ 16ರವರೆಗೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್. ಅನಂತ ಕೃಷ್ಣ ರಾವ್ ಹಾಗೂ ಶೃಂಗದ ಸಂಚಾಲಕ ಕೆ. ಪ್ರಕಾಶ್ ಕಲ್ಬಾವಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
- ‘ಗೇರು ಸಂಸ್ಕರಣೆಯಲ್ಲಿ ಹೊಸ ಆವಿಷ್ಕಾರಗಳ ಪರಿಚಯ, ಸಮಸ್ಯೆಗಳ ಬಗ್ಗೆ ಚರ್ಚೆ ಇರಲಿದೆ. ದೇಶದಲ್ಲಿ ಗೋಡಂಬಿ ಸಂಸ್ಕರಣೆಯಲ್ಲಿ ತೊಡಗಿರುವ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.
- ‘ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅದರಲ್ಲೂ ಮಂಗಳೂರು ಗೋಡಂಬಿಗೆ ಬೇಡಿಕೆ ಹೆಚ್ಚಿದೆ. ಆರಂಭದಲ್ಲಿ ವರ್ಷಕ್ಕೆ 50 ಸಾವಿರ ಟನ್ ಇದ್ದ ಕಚ್ಚಾ ಗೇರು ಬೀಜ ಸಂಸ್ಕರಣೆಯ ಪ್ರಮಾಣ ಈಗ ವರ್ಷಕ್ಕೆ 5 ಲಕ್ಷ ಟನ್ಗೆ ತಲುಪಿದೆ. ನವಮಂಗಳೂರು ಬಂದರಿಗೆ ಏಳು ತಿಂಗಳಲ್ಲಿ 3.45 ಲಕ್ಷ ಟನ್ ಕಚ್ಚಾಗೇರು ಆಮದಾಗಿದ್ದು, ಒಂದು ವರ್ಷದಲ್ಲಿ ಇದರ ಪ್ರಮಾಣ 5 ಲಕ್ಷ ಟನ್ ಆಗಲಿದೆ’ ಎಂದರು.
- ಭಾರತದ ಸಂಸ್ಕರಣಾ ಉದ್ಯಮಕ್ಕೆ 20 ಲಕ್ಷ ಟನ್ ಕಚ್ಚಾ ಗೇರು ಬೀಜ ಬೇಕು. ಆದರೆ, ನಮ್ಮ ದೇಶದಲ್ಲಿ ಬೆಳೆಯುವುದು ಸರಾಸರಿ 5 ಲಕ್ಷ ಟನ್ ಮಾತ್ರ. ನಮಗೆ ಬೇಕಿರುವ ಕಚ್ಚಾ ಗೇರು ಬೀಜಗಳ ಪೈಕಿ ಶೇ 25ರಷ್ಟು ಮಾತ್ರ ದೇಶೀಯವಾಗಿ ಬೆಳೆಯಲಾಗುತ್ತಿದೆ. ಶೇ 75ರಷ್ಟು ಹೊರದೇಶಗಳನ್ನೇ ಅವಲಂಬಿಸಿದ್ದೇವೆ.
- ಕರ್ನಾಟಕದಲ್ಲಿ ಕಚ್ಚಾ ಗೇರು ಬೆಳೆಯುವ ಪ್ರಮಾಣ 50 ಸಾವಿರ ಟನ್‌ನಷ್ಟು ಮಾತ್ರ. ರಾಜ್ಯದ 26 ಜಿಲ್ಲೆಗಳಲ್ಲಿ ಗೇರು ಕೃಷಿ ಇದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು. ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ, ಆ ಹಣ್ಣು (ಹಣ್ಣಿನ ಶೇ 80ರಷ್ಟು ಭಾಗ) ಈಗ ವ್ಯರ್ಥವಾಗುತ್ತಿದೆ. ಅದರಿಂದ ಉಪ ಉತ್ಪನ್ನ ತಯಾರಿಸಿ ಈ ಬೆಳೆಯನ್ನು ಲಾಭದಾಯಕವಾಗಿಸಬೇಕಿದೆ ಎಂದರು.
- ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ದರ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಗೋಡಂಬಿ ರಫ್ತು ಪ್ರಮಾಣ ಕೇವಲ 50 ಸಾವಿರ ಟನ್‌ನಷ್ಟು ಮಾತ್ರ ಇದೆ ಎಂದು ಹೇಳಿದರು.
- ರಾಜ್ಯದ ಕರಾವಳಿಯಲ್ಲಿ ಅಂದಾಜು 400 ಗೋಡಂಬಿ ಸಂಸ್ಕರಣಾ ಘಟಕಗಳು ಇದ್ದವು. ಈಗ 250 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಯಾಂತ್ರೀಕರಣಕ್ಕೆ ಒಗ್ಗಿಕೊಳ್ಳದಿರುವುದು ಮತ್ತಿತರ ಕಾರಣ ಕೆಲ ಘಟಕಗಳು ಮುಚ್ಚಿವೆ. ಘಟಕಗಳು ಕಡಿಮೆಯಾದರೂ, ಗೋಡಂಬಿ ಸಂಸ್ಕರಣೆಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದರು.
- ಬೆಂಗಳೂರು– ಎರ್ನಾಕುಳಂ ‘ವಂದೇ ಭಾರತ್ಗೆ’ ಹಸಿರು ನಿಶಾನೆ ಇಂದು
ಸಂದರ್ಭ: ಬೆಂಗಳೂರು– ಎರ್ನಾಕುಳಂ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ.
- ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ರೈಲು ತ್ರಿಶ್ಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ, ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ. ಕೇರಳ–ತಮಿಳುನಾಡು–ಕರ್ನಾಟಕದಲ್ಲಿ ಸಂಚರಿಸುವ ಈ ರೈಲು ಎಂಟು ಕೋಚ್‌ಗಳನ್ನು ಒಳಗೊಂಡಿರಲಿದೆ.
- 97 ಜೆಟ್ ಎಂಜಿನ್ ಖರೀದಿಗೆ ಒಪ್ಪಂದ
ಸಂದರ್ಭ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ತೇಜಸ್ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 97 ಜೆಟ್ ಎಂಜಿನ್ಗಳನ್ನು ಖರೀದಿಸಲು ಜಿಇ ಏರೋಸ್ಪೇಸ್ ಜತೆ ಒಪ್ಪಂದ ಮಾಡಿಕೊಂಡಿದೆ.
- ಒಪ್ಪಂದದ ಪ್ರಕಾರ, ಎಫ್404–ಜಿಇ–ಐಎನ್20 ಎಂಜಿನ್‌ಗಳ ವಿತರಣೆಯು 2027ರಿಂದ ಪ್ರಾರಂಭವಾಗಲಿದ್ದು, 2032ರ ವೇಳೆಗೆ ಪೂರೈಕೆ ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- 97 ಲಘು ಯುದ್ಧ ವಿಮಾನ ಎಂಕೆ1ಎ ಕಾರ್ಯಕ್ರಮವನ್ನು ಕಾರ್ಯಗತ ಗೊಳಿಸಲು ಎಂಜಿನ್‌ಗಳು ಹಾಗೂ ‘ಪೂರಕ ಪ್ಯಾಕೇಜ್’ ಖರೀದಿಗೆ ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
- ಭಾರತೀಯ ವಾಯುಪಡೆಗೆ 97 ತೇಜಸ್ ಎಂಕೆ–1ಎ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಎಚ್‌ಎಎಲ್‌ನೊಂದಿಗೆ ಸೆಪ್ಟೆಂಬರ್‌ನಲ್ಲಿ ₹62,370 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.
- ಭಾರತ ಹಾಕಿಗೆ ಶತಮಾನ ಸಂಭ್ರಮ
ಸಂದರ್ಭ: ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ದಿಗ್ಗಜರು ಅಪರೂಪದ ಛಾಯಾಚಿತ್ರ, ಸ್ಮರಣಿಕೆಗಳ ಪ್ರದರ್ಶನ: ಇಲ್ಲಿನ ಹೆಗ್ಗುರುತಾದ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣ ಸಂಭ್ರಮದಿಂದ ಕಳೆಗಟ್ಟಿತ್ತು. ತಲೆಮಾರು ಗಳನ್ನು ಪ್ರಭಾವಿಸಿದ ದಿಗ್ಗಜ ಆಟಗಾರರು, ಒಲಿಂಪಿಕ್ ಸ್ವರ್ಣ ವಿಜೇತ ಆಟಗಾರರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
- ಭಾರತದ ಹಾಕಿ ಸುವರ್ಣಯುಗದಲ್ಲಿ ಆಡಿದ್ದ ಗುರುಬಕ್ಷ್ ಸಿಂಗ್, ಅಸ್ಲಂ ಶೇರ್ ಖಾನ್, ಹರ್ಬಿಂದರ್ ಸಿಂಗ್, ಅಜಿತ್ ಪಾಲ್ ಸಿಂಗ್, ಅಶೋಕ್ ಕುಮಾರ್, ಬಿ.ಪಿ.ಗೋವಿಂದ, ಜಾಫರ್ ಇಕ್ಬಾಲ್, ಬ್ರಿಗೇಡಿಯರ್ ಹರಚರಣ್ ಸಿಂಗ್, ವಿನೀತ್ ಕುಮಾರ್, ಮಿರ್ ರಂಜನ್ ನೇಗಿ, ರೋಮಿಯೊ ಜೇಮ್ಸ್, ಅಸುಂತ ಲಾಕ್ರಾ, ಸುಭದ್ರ ಪ್ರಧಾನ್ ಇವರಲ್ಲಿ ಒಳಗೊಂಡಿದ್ದರು.
- ಈ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಭಾರತದ ರಾಷ್ಟ್ರೀಯ ಕ್ರೀಡೆಯ ವೈಭವಯುತ ಪಯಣವನ್ನು ಕೊಂಡಾಡಿದರು. ದೇಶದ ಕ್ರೀಡಾ ಪರಂಪರೆಯಲ್ಲಿ ಈ ಆಟದ ಗಟ್ಟಿ ಬೇರುಗಳನ್ನು ನೆನಪಿಸಿದರು.
- ‘ಈ ಕ್ರೀಡೆಯು ದೇಶದಲ್ಲಿ ವಿವಿಧ ಹಂತಗಳನ್ನು ದಾಟಿದೆ. ಭಾರತ ಕ್ರೀಡಾ ಕ್ಷೇತ್ರದಲ್ಲಿ ಮೆರೆಯಬಹುದು ಎಂಬುದನ್ನು ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಸಾಧಿಸಿ ತೋರಿಸಿತು’ ಎಂದು ಮಾಂಡವೀಯ ಬಣ್ಣಿಸಿದರು.