ಪ್ರಚಲಿತ ವಿದ್ಯಮಾನಗಳು: 28ನೇ ಅಕ್ಟೋಬರ್ 2025
- ಎಸ್ಐಆರ್: ವೇಳಾಪಟ್ಟಿ ಪ್ರಕಟ
ಸಂದರ್ಭ: 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ. ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಡಿಯಿಟ್ಟಿದ್ದು, ಎರಡನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಸುವುದಾಗಿ ಘೋಷಿಸಿದೆ.
- ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ಈಗ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆಯು ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಒಂಬತ್ತನೇ ಪ್ರಕ್ರಿಯೆಯಾಗಿದೆ. 2002–04ರಲ್ಲಿ ಕೊನೆಯದಾಗಿ ಎಸ್ಐಆರ್ ನಡೆದಿತ್ತು’ ಎಂದರು.
- 2ನೇ ಹಂತದಲ್ಲಿ ಎಸ್ಐಆರ್ ನಡೆಯಲಿರುವ ತಮಿಳುನಾಡು, ಪುದುಚೇರಿ, ಕೇರಳ, ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಎಸ್ಐಆರ್ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೊದಲ ಹಂತದಲ್ಲಿ…
- ಎಸ್‌ಐಆರ್ ನಡೆದ ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು.
- ‘ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯದಂತೆ ಎಸ್‌ಐಆರ್ ಖಚಿತಪಡಿಸುತ್ತದೆ’ ಎಂದರು.
ಎರಡನೇ ಹಂತ ಎಲ್ಲೆಲ್ಲಿ?
- ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯ ಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.
ಬಿಹಾರದಲ್ಲಿ ಪ್ರಕ್ರಿಯೆ ಪೂರ್ಣ
- ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 30ರಂದು ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ 7.42 ಕೋಟಿ ಮತದಾರರ ಹೆಸರುಗಳು ಇವೆ. ವಿಶೇಷ ಪರಿಷ್ಕರಣೆ ಬಳಿಕ 3.66 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಹಾರದ ಎಸ್‌ಐಆರ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.
- ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದುವರೆಗೂ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.
- ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 6 ಹಾಗೂ 11ರಂದು ಮತದಾನ ಹಾಗೂ ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
- ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಕೇರಳದಲ್ಲಿ ಎಸ್‌ಐಆರ್‌ಅನ್ನು ಮುಂದೂಡಬೇಕೆಂಬ ಮನವಿಯ ಕುರಿತ ಪ್ರಶ್ನೆಗೆ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದುವರೆಗೆ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ್ದರಿಂದ ಕೇರಳದಲ್ಲಿ ಎರಡನೇ ಹಂತದಲ್ಲಿ ಎಸ್ಐಆರ್ ನಡೆಸಲು ಆಯೋಗ ಮುಂದಾಗಿದೆ’ ಎಂದು ಹೇಳಿದರು.
- ಎಸ್‌ಐಆರ್ ಕುರಿತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ (ಸಿಇಒ) ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಈಚೆಗೆ ಸಭೆ ನಡೆಸಿದ್ದರು. ತಮ್ಮ ತಮ್ಮ ರಾಜ್ಯಗಳಲ್ಲಿ ಕೊನೆಯದಾಗಿ ಎಸ್ಐಆರ್ ಪ್ರಕ್ರಿಯೆ ನಡೆದ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು.
- ಹಲವು ರಾಜ್ಯಗಳ ಚುನಾವಣಾಧಿಕಾರಿಗಳು ತಮ್ಮ ಕೊನೆಯ ಎಸ್‌ಐಆರ್ ನಂತರ ಪ್ರಕಟವಾದ ಮತದಾರರ ಪಟ್ಟಿಗಳನ್ನು ಈಗಾಗಲೇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಕೊನೆಯದಾಗಿ ಎಸ್ಐಆರ್ ನಡೆದಿತ್ತು.
‘ಬಂಗಾಳ: ಅಡ್ಡಿ ಎದುರಾಗದು’
- ‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸಲು ಯಾವುದೇ ಅಡ್ಡಿ ಎದುರಾಗದು’ ಎಂಬುದನ್ನು ಚುನಾವಣಾ ಅಯೋಗ (ಇ.ಸಿ) ಪುನರುಚ್ಚರಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದರೆ ಅಲ್ಲಿ ‘ರಕ್ತಪಾತ’ ಆಗಲಿದೆ ಎಂದು ವರದಿಯಾಗಿರುವ ಬಗ್ಗೆ ಎದುರಾದ ಪ್ರಶ್ನೆಗೆ ಜ್ಞಾನೇಶ್ ಕುಮಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
- ‘ಇ.ಸಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಸಾಂವಿಧಾನಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಬದ್ಧವಾಗಿವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನದಲ್ಲಿ ತಿಳಿಸಿರುವಂತೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತವೆ’ ಎಂದು ಹೇಳಿದರು.
- ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಚುನಾವಣೆ ನಡೆಸಲು ಇ.ಸಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸಲು ರಾಜ್ಯಗಳು ಬದ್ಧವಾಗಿವೆ’ ಎಂದರು.
- ಮುಂದಿನ ಸಿಜೆಐ ನ್ಯಾ. ಸೂರ್ಯಕಾಂತ್ ಹೆಸರು ಶಿಫಾರಸು
ಸಂದರ್ಭ: ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯ ನ್ನಾಗಿ ನೇಮಕ ಮಾಡುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
- ಸಿಜೆಐ ಗವಾಯಿ ಅವರ ಬಳಿಕ ನ್ಯಾ. ಸೂರ್ಯಕಾಂತ್ ಅವರೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಗವಾಯಿ ಅವರು ನ. 23ರಂದು ನಿವೃತ್ತಿಯಾಗಲಿದ್ದಾರೆ. ಈ ಬಳಿಕ ಸೂರ್ಯಕಾಂತ್ 53ನೇ ಸಿಜೆಐ ಆಗಲಿದ್ದಾರೆ.
- ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ. 9ರಂದು ನಿವೃತ್ತಿಯಾಗಲಿದ್ದಾರೆ. ಇವರು ಸುಮಾರು 15 ತಿಂಗಳವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸಿಜೆಐ ಆಗಿದ್ದವರು ತಮ್ಮ ನಿವೃತ್ತಿಗೆ ಒಂದು ತಿಂಗಳು ಇರುವಂತೆ ಮುಂದಿನ ಸಿಜೆಐ ಆಗುವವರ ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ.
- ಸರ್ಕಾರಿ ಬ್ಯಾಂಕ್ನಲ್ಲಿ ಶೇ 49ರಷ್ಟು ಎಫ್ಡಿಐ?
ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಗರಿಷ್ಠ ಶೇಕಡ 49ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ.
- ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೊತೆ ಚರ್ಚೆ ನಡೆಸಿದೆ. ಕಳೆದ ಎರಡು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ ಎಂದು ಮೂಲವೊಂದು ಹೇಳಿದೆ. ಆದರೆ ಈ ವಿಚಾರವಾಗಿ ಅಂತಿಮ ತೀರ್ಮಾನ ಇನ್ನೂ ಆಗಿಲ್ಲ.
- ಭಾರತದ ಬ್ಯಾಂಕಿಂಗ್ ಉದ್ಯಮದಲ್ಲಿ ವಿದೇಶಿ ಕಂಪನಿಗಳು ಹೆಚ್ಚಿನ ಮಟ್ಟದ ಆಸಕ್ತಿ ತೋರಿಸಿವೆ. ದುಬೈ ಮೂಲದ ಎಮಿರೇಟ್ಸ್ ಎನ್‌ಬಿಡಿ ಸಂಸ್ಥೆಯು ಖಾಸಗಿ ವಲಯದ ಆರ್‌ಬಿಎಲ್ ಬ್ಯಾಂಕ್‌ನ ಶೇಕಡ 60ರಷ್ಟು ಪಾಲನ್ನು ಖರೀದಿಸಿದೆ. ಯೆಸ್ ಬ್ಯಾಂಕ್‌ನ ಶೇ 20ರಷ್ಟು ಪಾಲನ್ನು ಜಪಾನ್‌ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪ್ ಖರೀದಿಸಿ, ನಂತರ ಹೆಚ್ಚುವರಿಯಾಗಿ ಶೇ 4.99ರಷ್ಟು ಪಾಲು ಖರೀದಿಸಿದೆ.
- ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಗ್ಗೆಯೂ ವಿದೇಶಿ ಹೂಡಿಕೆದಾರರು ಆಸಕ್ತಿ ವಹಿಸಿದ್ದಾರೆ. ಈ ಬ್ಯಾಂಕ್ ಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಇರುವ ಮಿತಿಯನ್ನು ಹೆಚ್ಚಿಸಿದರೆ ಅವುಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಬಂಡವಾಳ ಹೊಂದಲು ಆಗುತ್ತದೆ ಎಂದು ಮೂಲಗಳು ವಿವರಿಸಿವೆ.
- ಏಷ್ಯನ್ ಯೂತ್ ಗೇಮ್ಸ್ಗೆ ಚರಿತಾ
ಸಂದರ್ಭ: ಬಹ್ರೇನ್ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ಸರ್.ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಚರಿತ ಪಣೀಂದ್ರನಾಥ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
- ಶಾಲೆಯ ಆಡಳಿತಾಧಿಕಾರಿ ಆರೋಗ್ಯಪ್ಪ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿನಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಠಿಣ ಶ್ರಮದಿಂದ ಅಮೋಘ ಸಾಧನೆ ಮಾಡುವ ಮೂಲಕ ಚರಿತಾ ಪದಕ ಗೆದ್ದು ಬರಲಿ’ ಎಂದು ಹಾರೈಸಿದರು.
- ಆರೋಗ್ಯ ಸಂಜೀವಿನಿ: 4.83 ಲಕ್ಷ ನೌಕರರ ಸಮ್ಮತಿ
ಸಂದರ್ಭ: ಯೋಜನೆಗೆ ನೌಕರರ ಅವಲಂಬಿತರ ಸೇರ್ಪಡೆ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಆರೋಗ್ಯ ಯೋಜನೆ ಪರಿಷ್ಕೃತ ಚಿಕಿತ್ಸಾ ವೆಚ್ಚ ಪ್ರಕಟವಾಗಿದ್ದು, ರಾಜ್ಯವೂ ಅದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.
- ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್) ಅ.1 ರಿಂದ ಜಾರಿಯಾಗಿದ್ದು, ಇದುವರೆಗೆ 4.83 ಲಕ್ಷ ನೌಕರರು ಸಮ್ಮತಿ ಸೂಚಿಸಿದ್ದಾರೆ.
- ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು. ಅಂತಿಮವಾಗಿ ಅ.1 ರಿಂದ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
- ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ಎಎಸ್ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದೆ.
- ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಪತಿ–ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿ ದ್ದಲ್ಲಿ ಯಾರಾದರೂ ಒಬ್ಬರ ವೇತನದಿಂದ ಮಾತ್ರ ಒಂದು ಕಂತು ಪಾವತಿಸಬಹುದು. ಎಚ್ಆರ್ಎಂಎಸ್ ವ್ಯಾಪ್ತಿಯಲ್ಲಿ ಇರದ ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತಿನ ಮೊತ್ತವನ್ನು ಆಯಾ ಸಂಸ್ಥೆಗಳು ಹಿಡಿದು ಕೊಂಡು ಟ್ರಸ್ಟ್ ಖಾತೆಗೆ ಜಮೆ ಮಾಡಬೇಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಡಿತ ಮಾಡಲಾಗುತ್ತದೆ. ನಂತರ ಒಟ್ಟು ಮೊತ್ತವನ್ನು ಖಜಾನೆ–2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತದೆ.
- ಆರಂಭಿಕ ತೊಡಕು, ಮರುಪಾವತಿ ಸೌಲಭ್ಯ ವಿಸ್ತರಣೆ: ಸರ್ಕಾರಿ ನೌಕರರು ಯಾವುದೇ ಸಾರ್ವಜನಿಕ ಆಸ್ಪತ್ರೆಗಳು, ಬೋಧನಾ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಯೋಜನೆಗೆ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆ ಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸರ್ಕಾರಿ ನೌಕರರ ಹೆಸರು ಎಚ್‌ಆರ್‌ಎಂಎಸ್‌ನಲ್ಲೇ ದಾಖಲಾಗಿ ರುತ್ತದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರೆ ನಗದುರಹಿತ ಚಿಕಿತ್ಸೆಗೆ ಸಮಸ್ಯೆ ಯಾಗದು. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ–ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಈ ಬಾರಿ ಮಹಿಳಾ ನೌಕರರ ತಂದೆ– ತಾಯಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಅವಲಂಬಿತರ ಹೆಸರು ಸೇರ್ಪಡೆ ಕಾರ್ಯವನ್ನು ಹಲವು ನೌಕರರು ಪೂರ್ಣಗೊಳಿಸಿಲ್ಲ. ಇದರಿಂದ ಅವಲಂಬಿತರನ್ನು ಆಸ್ಪತ್ರೆಗೆ ದಾಖಲಿಸಿದಾಗ ಸಮಸ್ಯೆ ಎದುರಿಸು ವಂತಾಗಿದೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ನಗದು ಚಿಕಿತ್ಸಾ ಸೌಲಭ್ಯ ಆರಂಭವಾಗಿ ದ್ದರೂ, ವೈದ್ಯಕೀಯ ವೆಚ್ಚ ಮರು ಪಾವತಿ ಸೌಲಭ್ಯವನ್ನೂ ಸರ್ಕಾರ 6 ತಿಂಗಳ ವರೆಗೆ ವಿಸ್ತರಿಸಿದೆ. ಮುಂಗಡ ಪಾವತಿಸಿ, ಚಿಕಿತ್ಸೆ ಪಡೆದ ನೌಕರರು ತಾವು ಮಾಡಿದ ವೆಚ್ಚದ ಮೊತ್ತವನ್ನು ಮರಳಿ ಪಡೆಯಬಹುದು.
- ‘ಯೋಜನೆ ವ್ಯಾಪ್ತಿಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರ್ಪಡೆ ಮಾಡುವ ಕೆಲಸ ನಡೆದಿದೆ. ಚಿಕಿತ್ಸಾ ವೆಚ್ಚಗಳ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡುವ ಭರವಸೆ ಇದೆ. ಅವಲಂಬಿತ ಹೆಸರು ಸೇರ್ಪಡೆ ಕಾರ್ಯವೂ ಪ್ರಗತಿಯಲ್ಲಿದೆ. ಯೋಜನೆಯಿಂದ ನೌಕರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ.
- ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ‘ಮೊಂಥಾ’
ಸಂದರ್ಭ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ‘ಮೊಂಥಾ’ ಚಂಡಮಾರುತ ಮಂಗಳವಾರ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊಂಥಾದ ಪ್ರಭಾವವು ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳದ ಮೇಲೂ ಆಗಲಿದೆ ಎಂದು ಹೇಳಿದೆ.
- ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಂಡಿವೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿದ್ಧತಾ ಕಾರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರಿಗೆ ಭರವಸೆ ನೀಡಿದ್ದಾರೆ.
- ಪ್ರತಿ ಗಂಟೆಗೆ 90 ಕಿ.ಮೀನಿಂದ 100 ಕಿ.ಮೀವರೆಗೂ ಗಾಳಿ ಬೀಸಲಿದೆ. ಗಾಳಿಯ ವೇಗವು ಗಂಟೆಗೆ 110 ಕಿ.ಮೀವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಚಂಡಮಾರುತದ ಪ್ರಭಾವವು ಆಂಧ್ರದಲ್ಲಿ ಈಗಾಗಲೇ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳ ದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
- ಒಡಿಶಾದ ದಕ್ಷಿಣ ಭಾಗದ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸರ್ಕಾರ ಆರಂಭಿಸಿದೆ.
- ಆಂಧ್ರದಲ್ಲಿ ಸರ್ಕಾರಿ ನೌಕರರ ರಜೆಗಳನ್ನು ರದ್ದು ಮಾಡಲಾಗಿದ್ದು, ಮುನ್ನೆಚ್ಚರಿಕಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೂಚಿಸಿದ್ದಾರೆ.
- ಮುಂದಿನ ಎರಡು ದಿನಗಳಲ್ಲಿ ತೆಲಂಗಾಣದ ಕೆಲವು ಪ್ರದೇಶ ಗಳಲ್ಲಿಯೂ ಭಾರಿ ಮಳೆಯಾಗಲಿದೆ.
- ಮೊಂಥಾ ಎಂದರೆ?: ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ ಸುಂದರ ಹೂವು ಅಥವಾ ಸುವಾಸನೆ ಭರಿತ ಹೂವು ಎಂದರ್ಥ.
- ಹಿಂದುಳಿದ ಪ್ರದೇಶ ತಲುಪದ ಸಿಎಸ್ಆರ್

- ಅಮೆರಿಕದಿಂದ ತೈಲ ಖರೀದಿ ಹೆಚ್ಚಳ
ಸಂದರ್ಭ: ಆಮದು ಪ್ರಮಾಣ ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್ಗೆ ಏರಿಕೆ: ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಅಕ್ಟೋಬರ್ನಲ್ಲಿ ಹೆಚ್ಚಳ ಕಂಡಿದೆ. ಇದು 2022ರ ನಂತರದ ಗರಿಷ್ಠ ಮಟ್ಟ.
- ಕಚ್ಚಾ ತೈಲದ ಆಮದು ಪ್ರಮಾಣವನ್ನು ರಷ್ಯಾ ಹೊರಗೂ ಹೆಚ್ಚಿಸಿಕೊಳ್ಳುವ, ಅಮೆರಿಕದ ಜೊತೆ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಭಾರತವು ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ.
- ಅಕ್ಟೋಬರ್ 27, ಹೊತ್ತಿಗೆ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ದಿನವೊಂದಕ್ಕೆ 5.40 ಲಕ್ಷ ಬ್ಯಾರಲ್‌ಗೆ ತಲುಪಿದೆ ಎಂದು ದತ್ತಾಂಶಗಳ ಮೇಲೆ ಗಮನ ಇರಿಸುವ ಕೆಪ್ಲರ್ ಸಂಸ್ಥೆ ಹೇಳಿದೆ.
- ಅಕ್ಟೋಬರ್ ಅಂತ್ಯದ ಹೊತ್ತಿಗೆ ಆಮದು ಪ್ರಮಾಣವು ದಿನವೊಂದಕ್ಕೆ 5.75 ಲಕ್ಷ ಬ್ಯಾರಲ್‌ಗೆ ತಲುಪಬಹುದು. ನವೆಂಬರ್‌ನಲ್ಲಿ ಆಮದು ಪ್ರಮಾಣವು ದಿನವೊಂದಕ್ಕೆ 4 ಲಕ್ಷದಿಂದ 4.5 ಲಕ್ಷ ಬ್ಯಾರಲ್‌ವರೆಗೆ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಈ ವರ್ಷದಲ್ಲಿ ಇದುವರೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಸರಾಸರಿ ಪ್ರಮಾಣಕ್ಕೆ (ದಿನವೊಂದಕ್ಕೆ 3 ಲಕ್ಷ ಬ್ಯಾರಲ್) ಹೋಲಿಸಿದರೆ ಇದು ಹೆಚ್ಚು.
- ಹಣಕಾಸಿನ ಲೆಕ್ಕಾಚಾರ ಆಧರಿಸಿ ಅಮೆರಿಕದಿಂದ ಆಮದು ಪ್ರಮಾಣ ಹೆಚ್ಚಿಸಲಾಗಿದೆ. ಬ್ರೆಂಟ್ ಕಚ್ಚಾ ತೈಲಕ್ಕಿಂತ ಡಬ್ಲ್ಯುಟಿಐ ಮಿಡ್‌ಲ್ಯಾಂಡ್ ಕಚ್ಚಾ ತೈಲವು ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳಿಗೆ ಕಡಿಮೆ ದರಕ್ಕೆ ಸಿಕ್ಕಿದೆ ಎಂದು ಕೆಪ್ಲರ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಹೇಳಿದ್ದಾರೆ.
- ಅಮೆರಿಕದಿಂದ ಆಮದು ಹೆಚ್ಚಾಗಿದ್ದರೂ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಈಗಲೂ ರಷ್ಯಾ ಇದೆ. ಎರಡನೆಯ ಸ್ಥಾನದಲ್ಲಿ ಇರಾಕ್ ಹಾಗೂ ಮೂರನೆಯ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ.
- ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಅಮೆರಿಕದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗಿವೆ. ತಮ್ಮ ಪೂರೈಕೆ ಜಾಲವನ್ನು ವಿಸ್ತರಿಸಿಕೊಳ್ಳುವ ಜೊತೆಗೆ, ಅಮೆರಿಕದ ಜೊತೆ ಸಹಕರಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದಿದೆ ಎಂದು ಸರ್ಕಾರ ಹಾಗೂ ವರ್ತಕರ ವಲಯದ ಮೂಲಗಳು ಹೇಳಿವೆ.
- ಆದರೆ ಅಮೆರಿಕದಿಂದ ಕಚ್ಚಾ ತೈಲ ಆಮದು ಇನ್ನೂ ಹೆಚ್ಚಾಗುವ ಸಾಧ್ಯತೆ ಕಡಿಮೆ ಎಂದು ರಿತೊಲಿಯಾ ಅಭಿಪ್ರಾಯಪಟ್ಟಿದ್ದಾರೆ. ‘ಈಗ ಭಾರತವು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಿರುವುದಕ್ಕೆ ಒಂದು ಕಾರಣ ಒಳ್ಳೆಯ ಬೆಲೆಗೆ ಅದು ಸಿಕ್ಕಿರುವುದು. ಅಲ್ಲಿಂದ ಭಾರತಕ್ಕೆ ಕಚ್ಚಾ ತೈಲ ತರಲು ಹೆಚ್ಚಿನ ಸಮಯ ಬೇಕು, ಸಾಗಣೆ ವೆಚ್ಚ ಹೆಚ್ಚಾಗಿರುತ್ತದೆ. ಹೀಗಾಗಿ ಅಲ್ಲಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಆಗಲಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.
ಐಒಸಿ ಲಾಭ ಹಲವು ಪಟ್ಟು ಏರಿಕೆ
- ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಸೆಪ್ಟೆಂಬರ್ ತ್ರೈಮಾಸಿಕದ ಲಾಭವು ಹಲವು ಪಟ್ಟು ಹೆಚ್ಚಾಗಿ ₹7,610 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹180 ಕೋಟಿ ಆಗಿತ್ತು.
- ಶೇ 6ರಷ್ಟು ಹೆಚ್ಚಾಗಿದೆ. ಕಚ್ಚಾ ತೈಲ ಸಂಸ್ಕರಣೆಯ ಪ್ರಮಾಣವು ಶೇ 5ರಷ್ಟು ಹೆಚ್ಚಾಗಿದೆ.
ಸಂದರ್ಭ: ‘ಎಲ್ಲ ಬಗೆಯ ನಿರ್ಬಂಧಗಳನ್ನು ಪಾಲಿಸಲಾಗುವುದು’ ಎಂದು ಐಒಸಿ ಅಧ್ಯಕ್ಷ ಅರವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ. ಆದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
- ಐಒಸಿ ದೇಶದ ಅತಿದೊಡ್ಡ ತೈಲ ಕಂಪನಿ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಐಒಸಿ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ರಷ್ಯಾದಿಂದ ಬಂದ ಕಚ್ಚಾ ತೈಲದ ಪಾಲು ಶೇ 21ರಷ್ಟಿದೆ.
- ಭಾರತದ ಕಚ್ಚಾ ತೈಲ ಸಂಸ್ಕರಣಾ ಕಂಪನಿಗಳು ಆಮದು ಮೂಲವನ್ನು ಹೆಚ್ಚಿಸಿಕೊಳ್ಳಲು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರಂಭಿಸಿವೆ. ಅವು ಕೊಲಂಬಿಯಾ, ಕೆನಡಾ ಮತ್ತು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಹೆಚ್ಚಿಸಿವೆ.
- ಭಾರತದ ಕಂಪನಿಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರತಿದಿನ 16.8 ಲಕ್ಷ ಬ್ಯಾರಲ್ ಆಗಿತ್ತು. ಇದು ಜೂನ್ ತ್ರೈಮಾಸಿಕದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 13ರಷ್ಟು ಕಡಿಮೆ.
- ಮಾಲಿಯಲ್ಲಿ ಇಂಧನ ಬಿಕ್ಕಟ್ಟು ಶಾಲೆ, ಕಾಲೇಜುಗಳು ಬಂದ್
ಸಂದರ್ಭ: ಇಂಧನ ಆಮದಿನ ಮೇಲೆ ಜಿಹಾದಿ ಭಯೋತ್ಪಾದಕರು ಹೇರಿರುವ ನಿರ್ಬಂಧದಿಂದ ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮುಂದಿನ ಎರಡು ವಾರಗಳವರೆಗೆ ದೇಶದಾದ್ಯಂತ ಎಲ್ಲಾ ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.
- ಶಿಕ್ಷಣ ಸಚಿವ ಅಮಡೌ ಸೈ ಸವಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ‘ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಶಾಲಾ–ಕಾಲೇಜುಗಳ ಸಿಬ್ಬಂದಿಯ ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
- ಅಲ್ಲದೇ, ನವೆಂಬರ್ 10ರಂದು ಶಾಲೆಗಳನ್ನು ಮತ್ತೆ ತೆರೆಯಲಾಗುವುದು. ಅಷ್ಟರೊಳಗೆ ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಆಡಳಿತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಹೇಳಿದ್ದಾರೆ.
- ಅಲ್–ಖೈದಾ ಬೆಂಬಲಿತ ಜಮಾತ್ ನುಸೃತ್ ಅಲ್–ಇಸ್ಲಾಮ್ ವಲ್–ಮುಸ್ಲಿಮೀನ್ ಎಂಬ ಭಯೋತ್ಪಾದಕ ಸಂಘಟನೆಯು ಮಾಲಿಯ ಸುತ್ತ ಮುತ್ತಲಿನ ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳದಂತೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧ ಹೇರಿದೆ.
- ಇಂಧನ ಹೊತ್ತು ತರುವ ಟ್ಯಾಂಕರ್‌ಗಳನ್ನು ಗಡಿಯಲ್ಲೇ ತಡೆದು, ಅವುಗಳ ಮೇಲೆ ದಾಳಿ ನಡೆಸಿ, ಇಂಧನ ಪೂರೈಕೆಗೆ ಭಯೋತ್ಪಾದಕರು ತಡೆ ಒಡ್ಡಿದ್ದಾರೆ. ಇದು ಮಾಲಿಯಲ್ಲಿ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
- ಇರಾಕ್, ಇರಾನ್ಗೆ ಬಸರಕೋಡದ ಬಾಳೆ
ಸಂದರ್ಭ: ಅತಿವೃಷ್ಟಿ ಸಮಯದಲ್ಲೂ ಲಾಭ ಕಂಡುಕೊಂಡ ರೈತ: ತಾಲ್ಲೂಕಿನ ಬಸರಕೋಡ ಗ್ರಾಮದ ರೈತ ಹೇಮರೆಡ್ಡಿ ಬ.ಮೇಟಿ ಅವರು ಬೆಳೆದ ಬಾಳೆ (ಜಿ– 9) ಬೆಳೆಗೆ ಹೊರದೇಶದಲ್ಲಿ ಮಾರುಕಟ್ಟೆ ಲಭಿಸಿದೆ.
- ರೈತ ಹೇಮರೆಡ್ಡಿ ಬ.ಮೇಟಿ ಬಾಳೆಯನ್ನು ಇರಾಕ್, ಇರಾನ್ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. 20 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಭಾಗಶಃ ಕಟಾವಿಗೆ ಬಂದಿದೆ. ಅವರ ಪುತ್ರ ಬಾಪುಗೌಡ ಮೇಟಿ ವಿದೇಶಿ ಮಾರುಕಟ್ಟೆಯ ಸಂಪರ್ಕ ಸಾಧಿಸಿದ್ದಾರೆ.
- ‘ಮಧ್ಯಪ್ರದೇಶ, ಗುಜರಾತ್‌ದಿಂದ ಸಸಿಗಳನ್ನು ತರಿಸಿಕೊಂಡಿದ್ದೆವು. ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ ₹3ರಿಂದ ₹4ಕ್ಕೆ ಕೇಳುತ್ತಾರೆ. ಇಷ್ಟು ಕಡಿಮೆಗೆ ನೀಡಿದರೆ ನಷ್ಟ ಖಂಡಿತ. ಎಕರೆಗೆ ತಲಾ ₹1.15 ಲಕ್ಷದಂತೆ ಖರ್ಚು ಮಾಡಿದ್ದು, 20 ಎಕರೆಗೆ 1 ಸಾವಿರ ಟನ್ ಬಾಳೆ ಬರುವ ನಿರೀಕ್ಷೆ ಇದೆ’ ಎಂದು ಹೇಮರೆಡ್ಡಿ ಮೇಟಿ ತಿಳಿಸಿದರು.
- ‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬೆಳೆ ತಲುಪಿಸಲು ಮೀರಜ್‌ನ ಚಾಂದ್ ಫ್ರೂಟ್ಸ್ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಖರೀದಿಗೆ ಒಪ್ಪಿದರು. ಕಂಟೇನರ್‌ಗಳಲ್ಲಿ ಬಾಳೆ ಕಾಯಿಗಳನ್ನು ಸಂಗ್ರಹಿಸಿ ಹಡಗುಗಳ ಮೂಲಕ ಇರಾಕ್, ಇರಾನ್‌ಗೆ ಕಳುಹಿಸು ತ್ತಿದ್ದೇವೆ. ಕೆ.ಜಿಗೆ ₹13ರಂತೆ ಈವರೆಗೆ 35 ಟನ್ ಬಾಳೆಕಾಯಿ ಕಳುಹಿಸಲಾಗಿದೆ’ ಎಂದು ತಿಳಿಸಿದರು.
- ಪಶ್ಚಿಮ ಬಂಗಾಳದ ಕಾರ್ಮಿಕರು: ಬಾಳೆ ಗೊನೆಯನ್ನು ಕತ್ತರಿಸಿ, ಅದು ಕೆಡದಂತೆ ವೈಜ್ಞಾನಿಕ ಕ್ರಮದಲ್ಲಿ ಪ್ಯಾಕಿಂಗ್ ಮಾಡಲು ಪಶ್ಚಿಮ ಬಂಗಾಳದ 25 ಕಾರ್ಮಿಕರು ನಾಲ್ಕು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
- ‘ಗ್ರಾಮದ ರೈತರೊಬ್ಬರು ಬೆಳೆದಿರುವ ಬಾಳೆ ಅನ್ಯ ದೇಶಕ್ಕೆ ಹೋಗುತ್ತಿದೆ. ನಮ್ಮಲ್ಲೂ ಉತ್ಕೃಷ್ಟ ದರ್ಜೆಯ ಬಾಳೆ ಕೃಷಿ ನಡೆದಿರುವುದು ಹೆಮ್ಮೆಯ ಸಂಗತಿ’ ಎಂದು ಸ್ಥಳೀಯ ರೈತರು ಹೇಳುತ್ತಾರೆ.
ಗುಣಮಟ್ಟದ ಬಾಳೆ
- ‘ದೇವರ ನಿಂಬರಗಿಯ ಯಂಕಣ್ಣ ಬಿರಾದಾರ ಅವರು ಬಸರಕೋಡದಲ್ಲಿ ಗುಣಮಟ್ಟದ ಬಾಳೆ ಇದೆ ಎಂದು ತಿಳಿಸಿದ್ದರು. ಹೇಮರೆಡ್ಡಿ ಅವರು ಬೆಳೆದ ಬಾಳೆ ರಫ್ತುಮಾಡಲು ಯೋಗ್ಯ ವಾಗಿದೆ. ಖರೀದಿ ಒಪ್ಪಂದ ಆಗಿದೆ. ಈ ಬಾಳೆಯು ನ. 1ರಂದು ಗುಣಮಟ್ಟದ ಪ್ಯಾಕಿಂಗ್‌ನಲ್ಲಿ ಇರಾನ್, ಇರಾಕ್, ಸೌದಿ ಅರೇಬಿಯಾಕ್ಕೆ ರವಾನೆಯಾಗ ಲಿದೆ’ ಎನ್ನುತ್ತಾರೆ ಬಾಳೆ ಖರೀದಿ ದಾರ ಅಬೂಬಕರ ಖರೋಷಿ.
- ಎಫ್ಡಿಐ ಏರಿಕೆ: ಜಿಗಿದ ಪಿಎಸ್ಯು ಬ್ಯಾಂಕ್ ಸೂಚ್ಯಂಕ
ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಇರುವ ಶೇಕಡ 20ರ ಮಿತಿಯನ್ನು, ಶೇ 49ಕ್ಕೆ ಹೆಚ್ಚಿಸುವ ಚಿಂತನೆ ನಡೆದಿದೆ ಎಂಬ ಸುದ್ದಿಯು ಬಿತ್ತರವಾದ ನಂತರದಲ್ಲಿ ಬ್ಯಾಂಕಿಂಗ್ ವಲಯದ ‘ನಿಫ್ಟಿ ಪಿಎಸ್ಯು ಬ್ಯಾಂಕ್’ ಸೂಚ್ಯಂಕವು ಶೇಕಡ 3ರವರೆಗೆ ಜಿಗಿದಿದೆ.
- ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಹೆಚ್ಚಳವು, ನಿಯಮಗಳ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳ ನಡುವಿನ ಅಂತರವನ್ನು ತಗ್ಗಿಸುವ ಪ್ರಯತ್ನದ ಭಾಗವೂ ಆಗಿದೆ ಎಂದು ಮೂಲಗಳು ಹೇಳಿವೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಶೇ 74ರಷ್ಟು ಎಫ್‌ಡಿಐಗೆ ಅವಕಾಶ ಇದೆ.
- ಈ ವಿಚಾರವಾಗಿ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
- ದೇಶದ ಆರ್ಥಿಕ ಬೆಳವಣಿಗೆ ದರವು ಕಳೆದ ಮೂರು ವರ್ಷಗಳಿಂದ ಸರಾಸರಿ ಶೇ 8ರಷ್ಟಿದೆ. ಇದರಿಂದಾಗಿ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ, ದೇಶದ ಬ್ಯಾಂಕ್‌ಗಳು ಹೂಡಿಕೆಗೆ ಆಕರ್ಷಕವಾಗುತ್ತಿವೆ.
- ದೇಶದಲ್ಲಿ 12 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳಲ್ಲಿ ಕನಿಷ್ಠ ಶೇ 51ರಷ್ಟು ಪಾಲನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈಗ ದೇಶದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿಐ ಪ್ರಮಾಣವು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ಮಟ್ಟದಲ್ಲಿದೆ. ಕೆನರಾ ಬ್ಯಾಂಕ್‌ನಲ್ಲಿ ಅದು ಶೇ 12ರಷ್ಟಿದೆ.
- ಸಮಾಜದ ದುರ್ಬಲ ವರ್ಗಗಳಿಗೂ ಸಾಲ ನೀಡುವ ಹೊಣೆಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೇಲೆ ಇರುವ ಕಾರಣ ಹೂಡಿಕೆಯ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಖಾಸಗಿ ವಲಯದ ಬ್ಯಾಂಕ್‌ಗಳಷ್ಟು ಬಲಿಷ್ಠವಲ್ಲ ಎಂಬ ನಂಬಿಕೆ ಇದೆ.
- ವಿಶ್ವ ಕುಸ್ತಿ: ಸ್ವರ್ಣ ಜಯಿಸಿದ ಸುಜೀತ್
ಸಂದರ್ಭ: ಭಾರತದ ಉದಯೋನ್ಮುಖ ಕುಸ್ತಿಪಟು ಸುಜೀತ್ ಕಲ್ಕಲ್ ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಜಯಿಸಿದರು.
- ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದಿರುವ ಸುಜೀತ್ ಅವರು ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ 10–0ಯಿಂದ ಉಜ್ಬೇಕಿಸ್ತಾನದ ಉಮಿಜೊನ್ ಜಲಲೊವ್ ಅವರನ್ನು ಅಧಿಕಾರಯುತವಾಗಿ ಮಣಿಸಿದರು. 22 ವರ್ಷ ವಯಸ್ಸಿನ ಸುಜೀತ್ ಕಳೆದ ಬಾರಿ ಈ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು.
