Current Affairs
ಪ್ರಚಲಿತ ವಿದ್ಯಮಾನಗಳು: 15ನೇ ನವೆಂಬರ್ 2025
- ವಿಶ್ವ ರ್ಯಾಂಕಿಂಗ್: ಕ್ರೈಸ್ಟ್ ಸಾಧನೆ
ಸಂದರ್ಭ: ಕ್ವಾಕ್ವರೇಲ್ಲಿ ಸೈಮಂಡ್ಸ್ (ಕ್ಯೂಎಸ್) ಸಂಸ್ಥೆ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
- ಕಳೆದ ಬಾರಿ 681–700ನೇ ಸ್ಥಾನದಲ್ಲಿದ್ದ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ವಿಶ್ವವಿದ್ಯಾಲಯವು ಈ ಬಾರಿ 537ನೇ ಶ್ರೇಯಾಂಕ ವನ್ನು ಪಡೆದಿದೆ. ದಕ್ಷಿಣ ಏಷ್ಯಾ ವಿಭಾಗದಲ್ಲಿಯೂ ವಿಶ್ವವಿದ್ಯಾಲಯವು ಉತ್ತಮ ಸ್ಥಾನ ಪಡೆದಿದ್ದು, 140ನೇ ಸ್ಥಾನ ಗಳಿಸಿದೆ.
- ಈ ವರ್ಷ ಏಷ್ಯಾದ ಪಟ್ಟಿಯಲ್ಲಿ 1,526 ವಿಶ್ವವಿದ್ಯಾಲಯಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವೂ ಸೇರಿದೆ. ಭಾರತದ 294 ಸಂಸ್ಥೆಗಳಲ್ಲಿ ಕ್ರೈಸ್ಟ್ ಕೂಡ ಒಂದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಜೋಸೆಫ್ ಸಿ.ಸಿ. ತಿಳಿಸಿದ್ದಾರೆ.
ಭಾರತದ ನಗರಗಳ ಜಲಸಂಕಷ್ಟ

ನೀರು ಜೀವಸಂಕುಲದ ಅಮೃತ. ಸಕಲ ಚರಾಚರಗಳ ಅಳಿವು ಉಳಿವಿನ ಸಂಜೀವಿನಿ. ಆದರೆ, ಬೇಸಿಗೆ ಬಂತೆಂದರೆ ಈ ಸಂಜೀವಿನಿಗಾಗಿ ಭಾರತದ ಮಹಾನಗರಗಳಲ್ಲಿ ಹಾಹಾಕಾರ. ಮಳೆಗಾಲದಲ್ಲಿ ಅದೇ ನೀರಿನ ರುದ್ರನರ್ತನಕ್ಕೆ ನಲುಗಿ ಹೋಗುವವು ಈ ನಗರಗಳು. ನಮ್ಮ ಬೆಂಗಳೂರು ಇರಲಿ, ರಾಷ್ಟ್ರ ರಾಜಧಾನಿ ದೆಹಲಿಯಾಗಲಿ, ಮುಂಬೈ ಮಹಾನಗರಿಯಾಗಲಿ, ಕೋಲ್ಕತ್ತ ಅಥವಾ ಚೆನ್ನೈ ಇರಲಿ, ಬಹುತೇಕ ಎಲ್ಲ ಮಹಾನಗರಗಳೂ ಜಲಸಂಕಷ್ಟದ ಈ ಎರಡು ವೈಪರೀತ್ಯಗಳಿಂದ ಪ್ರತಿ ವರ್ಷ ನಲುಗಿ ಹೋಗುತ್ತಿವೆ.
ಒಂದೆಡೆ ನಗರಗಳನ್ನು ನಿಷ್ಕ್ರಿಯಗೊಳಿಸುವ ಪ್ರವಾಹಗಳು, ಇನ್ನೊಂದೆಡೆ ಲಕ್ಷಾಂತರ ಜನರು ಹನಿ ನೀರಿಗೆ ಹೆಣಗಾಡುತ್ತಿರುವ ದೃಶ್ಯ- ಈ ವಿರೋಧಾಭಾಸವು ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಹಿಂದೆ ಸಾಲುಸಾಲು ನಿಂತ ಜನರು, ಮಳೆಗಾಲದಲ್ಲಿ ರಸ್ತೆಯನ್ನೇ ನದಿಯನ್ನಾಗಿ ಮಾಡಿರುವ ಪ್ರವಾಹಗಳು; ಈ ‘ಹೈಡ್ರೊ-ಸ್ಕಿಜೋಫ್ರೀನಿಯಾ’ ಎಂಬ ಜಲ ವಿಕೃತಿಯು ಮಹಾನಗರಗಳ ಅನಿಯಂತ್ರಿತ ಬೆಳವಣಿಗೆಯ ಪ್ರತಿಬಿಂಬವಾಗಿದೆ.
ಅಸಮಾನತೆಯ ಬೇರುಗಳು
ಮಾರ್ಗನ್ ಸ್ಟಾನ್ಲಿಯ ಆರ್ಥಿಕ ತಜ್ಞ ರುಚಿರ್ ಶರ್ಮಾ ಅವರು ತಮ್ಮ ‘10 ರೂಲ್ಸ್ ಆಫ್ ಸಕ್ಸಸ್‌ಫುಲ್ ನೇಷನ್ಸ್’ ಪುಸ್ತಕದಲ್ಲಿ ರಾಷ್ಟ್ರಗಳ ಬೆಳವಣಿಗೆಯ ಅಸಮತೋಲನದ ಕುರಿತು ಎಚ್ಚರಿಸುತ್ತಾರೆ. ರಾಷ್ಟ್ರದ ಅಥವಾ ಒಂದು ಪ್ರದೇಶ/ರಾಜ್ಯದ ಮೊದಲ ಅತಿ ದೊಡ್ಡ ನಗರ ಮತ್ತು ಎರಡನೆಯ ದೊಡ್ಡ ನಗರದ ನಡುವಿನ ಅಗಾಧವಾದ ಆರ್ಥಿಕ ಅಸಮಾನತೆಯ ಪ್ರಮಾಣವು ದೇಶದ ಸಮತೋಲನದ ಪ್ರಗತಿಗೆ ಮಾರಕವಾಗಬಲ್ಲದು ಎಂಬುದನ್ನು ಅವರು ವಿವರಿಸುತ್ತಾರೆ.
ಉದಾಹರಣೆಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಶಂಸಿಸಲ್ಪಡುವ ನಮ್ಮ ಬೆಂಗಳೂರಿನ ಜನಸಂಖ್ಯೆ ಮೈಸೂರಿಗಿಂತ 10 ಪಟ್ಟು ಹೆಚ್ಚು. ಮುಂಬೈ ಜನಸಂಖ್ಯೆಯು ಪುಣೆಗಿಂತ 4 ಪಟ್ಟು ಜಾಸ್ತಿ. ಕೋಲ್ಕತ್ತ ಜನಸಂಖ್ಯೆ ಅಸನ್ಸೋಲ್‌ಗಿಂತ 10 ಪಟ್ಟು ಇದೆ. ಚೆನ್ನೈ ಮಹಾನಗರದ್ದು ಕೊಯಮತ್ತೂರಿಗಿಂತ 5ರಷ್ಟು ಮತ್ತು 3 ಕೋಟಿಗಿಂತಲೂ ಹೆಚ್ಚು ಇರುವ ದೆಹಲಿಯು ಉತ್ತರ ಭಾರತದಲ್ಲಿ ಅಸಾಧಾರಣ ಜನಸಂಖ್ಯೆ ಹೊಂದಿದೆ. ಈ ಅಸಮಾನತೆಗಳು ಕೇವಲ ಜನಸಂಖ್ಯೆಯಲ್ಲಿ ಅಲ್ಲ, ಹೂಡಿಕೆಯಲ್ಲಿ, ಮೂಲಸೌಕರ್ಯದಲ್ಲಿ, ನೀರಿನ ಒತ್ತಡದಲ್ಲೂ ಕಾಣಿಸುತ್ತವೆ.
ರುಚಿರ್ ಶರ್ಮಾರ ಈ ಸಂಶೋಧನೆಯು ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಹಾಗೂ ಬಿಕ್ಕಟ್ಟಿನ ಪ್ರಮುಖ ಸುಳಿವನ್ನು ನೀಡುತ್ತದೆ.
ಅನಿಯಂತ್ರಿತ ನಗರ ವಿಸ್ತರಣೆ
ಪ್ರತಿ ವರ್ಷ ಬರ ಹಾಗೂ ಪ್ರವಾಹದಂತಹ ವೈಪರೀತ್ಯಗಳು ಬಂದು ಅಪ್ಪಳಿಸುತ್ತಿದ್ದರೂ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲದಂತೆ, ದೇಶದ ಮಹಾನಗರಗಳು ದಿಕ್ಕು ದೆಸೆಯಿಲ್ಲದೆ ಅಗಾಧವಾಗಿ ಬೆಳೆಯುತ್ತಾ ಹೋಗುತ್ತಿವೆ. ಆದರೆ, ಈ ಬೆಳವಣಿಗೆಯ ಅಂತ್ಯದ ಅರಿವು ಮಾತ್ರ ಯಾರಿಗೂ ಇಲ್ಲ. ಈ ಏಕಪಕ್ಷೀಯ ಬೆಳವಣಿಗೆ ಎಲ್ಲಿಯವರೆಗೆ ವಿಸ್ತರಿಸುತ್ತದೆ, ಹತ್ತಿರದ ಎಷ್ಟು ಪಟ್ಟಣಗಳನ್ನು ಕಬಳಿಸುತ್ತದೆ ಮತ್ತು ಇದೆಲ್ಲವೂ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮುಂಬೈ ನಗರವು ಈಗಾಗಲೇ ಠಾಣೆ ಜಿಲ್ಲೆಗೆ ಪ್ರವೇಶಿಸಿದರೆ, ಬೆಂಗಳೂರು ನಗರ ಉತ್ತರದಲ್ಲಿ ತುಮಕೂರು, ಪಶ್ಚಿಮದಲ್ಲಿ ರಾಮನಗರ ಮತ್ತು ಪೂರ್ವದಲ್ಲಿ ಕೋಲಾರ ಹತ್ತಿರದ ಪಟ್ಟಣಗಳನ್ನು ಭಕ್ಷಿಸುವತ್ತ ಸಾಗಿದೆ. ದೇಶದ ಇತರೆ ಮಹಾನಗರಗಳು ಇದಕ್ಕೆ ಭಿನ್ನವಾಗಿಲ್ಲ.
ದೇಶದ ಮಹಾನಗರಗಳ ಈ ಗೊತ್ತು ಗುರಿ ಇಲ್ಲದ ವಿಸ್ತರಣೆಗೆ ಯಾವುದೇ ಮಿತಿಗಳಿಲ್ಲದಿರಬಹುದು, ಆದರೆ ಅದು ನೀರಿಗೆ ಮಾತ್ರ ಅನ್ವಯಿಸುವುದಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ನದಿಗಳಿಗಾಗಲಿ ಅಥವಾ ಭೂಜಲಕ್ಕಾಗಲಿ ಒಂದು ಪರಿಮಿತಿ ಇದ್ದೇ ಇದೆ. ಉದಾಹರಣೆ, ಜಲಸಂಪನ್ಮೂಲ ‘ವರುಣ’ನ ಅನುಗ್ರಹ ಮತ್ತು ಅನುಕಂಪದಲ್ಲಿದೆ. ಇದಲ್ಲದೆ ದೇಶದಾದ್ಯಂತ ಅನೇಕ ನ್ಯಾಯಮಂಡಳಿಗಳು ತಮ್ಮ ತೀರ್ಪುಗಳಿಂದ ರಾಜ್ಯಗಳಿಗೆ ಜಲ ಸಂಪನ್ಮೂಲವನ್ನು ಹಂಚಿಕೆಯ ಮೂಲಕ ಸೀಮಿತಗೊಳಿಸಿವೆ. ಆದುದರಿಂದ ನೀರನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ.
ಜಲಸಂಪನ್ಮೂಲಗಳಿಗೆ ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಕೆಲವರು ಸಾವಿರಾರು ಕಿಲೋಮೀಟರ್ ದೂರದ ನದಿಗಳಿಂದ ಮಹಾನಗರಗಳಿಗೆ ನೀರು ಹರಿಸುವ ಪ್ರಸ್ತಾವಗಳನ್ನು ಮುಂದಿಡುತ್ತಾರೆ. ಈ ಪ್ರಸ್ತಾವಗಳು ಕಾಗದದ ಮೇಲೆ ಆಕರ್ಷಕವಾಗಿ ಕಾಣುತ್ತವೆ. ಇದಕ್ಕೆ ತಗಲುವ ಆರ್ಥಿಕ ವೆಚ್ಚ, ತಾಂತ್ರಿಕ ತೊಂದರೆಗಳು, ನೀರಿನ ಸಂಘರ್ಷಗಳು ಹಾಗೂ ಪರಿಸರ ಹಾನಿ ಇವೆಲ್ಲವೂ ಇದರ ಸದುದ್ದೇಶಗಳನ್ನು ಮೀರುವ ಸಾಧ್ಯತೆಗಳಿವೆ. ಇವೆಲ್ಲಕ್ಕಿಂತ, ಮಹಾನಗರಗಳು ಇನ್ನಷ್ಟು ಬೆಳೆದು, ಮತ್ತಷ್ಟು ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾದರೆ ನೀರನ್ನು ದೇಶದ ಯಾವ ನದಿಯಿಂದ, ಇನ್ನೆಷ್ಟು ದೂರದಿಂದ ಮತ್ತು ಎಲ್ಲಿಯವರೆಗೆ ತರಬಹುದು ಎಂಬ ಅಂಶವನ್ನು ದೇಶದ ಜನರು ನಿರ್ಧರಿಸಬೇಕಿದೆ. ಉದಾಹರಣೆಗೆ, ಕೇವಲ 70 ಕಿ.ಮೀ. ದೂರದಲ್ಲಿರುವ ತುಮಕೂರಿನ ಹತ್ತಿರ ಬೆಳೆದ ಬೆಂಗಳೂರು, ಅಲ್ಲಿಗೇ ನಿಲ್ಲುತ್ತದೆ ಎಂಬುದಕ್ಕೆ ಖಾತರಿ ಏನು?
ಹಾಗಾಗಿ, ಜಲ ಸಂಕಷ್ಟದ ದೃಷ್ಟಿಯಿಂದ ಈ ದಿಕ್ಕು ದೆಸೆಯಿಲ್ಲದ ಅಸಮಾನತೆಯ ಬೆಳವಣಿಗೆಯನ್ನು ನಿಲ್ಲಿಸಲು ರಾಜಕೀಯ, ಆಡಳಿತ ಮತ್ತು ಯೋಜನಾ ತಂತ್ರಜ್ಞರು ಈಗಲಾದರೂ ಚಿಂತನೆ ಮಾಡಲೇಬೇಕಾಗಿದೆ.
ತಾತ್ಕಾಲಿಕ ಪರಿಹಾರಗಳು
ಭಾರತದ ಮಹಾನಗರ ಪ್ರದೇಶಗಳಲ್ಲಿನ ನೀರಿನ ವೈಪರೀತ್ಯಗಳಿಗೆ ಮೂಲ ಕಾರಣ ನಗರ ಪ್ರದೇಶಗಳ ಬಿರುಸಿನ ವಿಸ್ತರಣೆ, ಸ್ಫೋಟಗೊಳ್ಳುತ್ತಿರುವ ಜನಸಂಖ್ಯೆ, ಕ್ಷೀಣಿಸುತ್ತಿರುವ ಮೂಲಗಳು ಮತ್ತು ಶಿಥಿಲಗೊಂಡ ಒಳಚರಂಡಿಯ ಅವ್ಯವಸ್ಥೆ. ಇವುಗಳ ಮುಂದೆ ಬರ/ಪ್ರವಾಹಗಳಿಗೆ ಪರಿಹಾರಗಳೆಂದು ಹೇಳಲ್ಪಡುವ ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಚಾವಣಿಯ ಮಳೆನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ… ಮುಂತಾದವು ಕೇವಲ ತಾತ್ಕಾಲಿಕ ಪರಿಹಾರಗಳು. ಅಂದರೆ ‘ಬ್ಯಾಂಡ್ ಏಡ್’ನಂತೆ. ಏಕೆಂದರೆ ಈ ಪರಿಹಾರಗಳು ಆಸ್ಪಿರಿನ್‌ನಂತೆ ನೋವನ್ನು ಮಾತ್ರ ಕಡಿಮೆ ಮಾಡುತ್ತವೆ; ಮೂಲ ರೋಗವನ್ನು ಗುಣಪಡಿಸುವುದಿಲ್ಲ.
ಭಾರತದ ನಗರ ಪ್ರದೇಶಗಳ ಜಲ ಬಿಕ್ಕಟ್ಟು, ವೈಪರೀತ್ಯಗಳಿಗೆ ಮೂಲ ಹಾಗೂ ಅಂತಿಮ ಪರಿಹಾರ ಸಿಗಬೇಕು ಎಂದರೆ, ದೇಶದ ಅನೇಕ ರಾಜ್ಯಗಳಲ್ಲಿ ಒಂದು ನಗರದ ಬೆಳವಣಿಗೆಗೆ ಕೊಡುತ್ತಿರುವ ಅಪರಿಮಿತ ಪ್ರಾಮುಖ್ಯ ಮತ್ತು ಚಿಕ್ಕ ಚಿಕ್ಕ ಪಟ್ಟಣಗಳ ಅಭಿವೃದ್ಧಿಯ ನಿರ್ಲಕ್ಷ್ಯ- ಇವೆರಡಕ್ಕೂ ಕಡಿವಾಣ ಬೀಳಬೇಕು.
ಒಂದೇ ನಗರಕ್ಕೆ ಹರಿದುಹೋಗುತ್ತಿರುವ ಅಪರಿಮಿತ ಹೂಡಿಕೆ, ಶ್ರೀಮಂತಿಕೆಯ ಕೇಂದ್ರೀಕರಣ ಮತ್ತು ಇದರ ಕಾರಣವಾಗಿ ಮಹಾನಗರಗಳ ಅನಿಯಂತ್ರಿತ 360 ಡಿಗ್ರಿಯ ವಿಸ್ತರಣೆ- ಇವೆಲ್ಲದರ ಕಡಿವಾಣವೇ ಮಹಾನಗರಗಳ ಮಹಾವೈಪರೀತ್ಯಗಳಾದ ಬರ/ಪ್ರವಾಹಗಳಿಗೆ ನೀಡಬಹುದಾದ ಮೂಲ ಚಿಕಿತ್ಸೆ. ಇದನ್ನು ನಿರ್ಲಕ್ಷಿಸಿ ತಾತ್ಕಾಲಿಕ ‘ಬ್ಯಾಂಡ್ ಏಡ್’ ಪರಿಹಾರಗಳನ್ನು ಅವಲಂಬಿಸಿದರೆ ಸಮಸ್ಯೆಯು ಪರಿಹಾರವಾಗುವ ಬದಲು ಮತ್ತಷ್ಟು ಜಟಿಲವಾಗುತ್ತದೆ.
ಪುನರ್ ವಿತರಣೆಯೇ ಪರಿಹಾರ
ಆದುದರಿಂದ ತುರ್ತಾಗಿ, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈನಂತಹ ಮಹಾನಗರಗಳ ಸುತ್ತಮುತ್ತ ಇರುವ, ಹತ್ತಿರವಿರುವ ಸಣ್ಣ ನಗರಗಳಿಗೆ ದೇಶದ/ರಾಜ್ಯದ ಸಂಪತ್ತಿನ ಪುನರ್ ವಿತರಣೆಯಾಗಬೇಕಿದೆ. ಈ ಬಗ್ಗೆ ಆರ್ಥಿಕ ತಜ್ಞರು/ಯೋಜನೆ ರೂಪಿಸುವವರು ತುರ್ತು ಗಮನ ಹರಿಸಬೇಕು. ನೈಸರ್ಗಿಕ ವಿಕೋಪಗಳನ್ನು ನಿಭಾಯಿಸುವ ಶಕ್ತಿಗನುಗುಣವಾಗಿ ಈ ಸಣ್ಣ ನಗರಗಳಿಗೆ ಹೂಡಿಕೆ, ಅಭಿವೃದ್ಧಿ ಮತ್ತು ಸಂಪತ್ತು ಪುನರ್ ವಿತರಣೆ ಮಾಡಬೇಕು. ಬೆಂಗಳೂರಿಗೆ ಬರುವ ಹೂಡಿಕೆಯ ಶೇಕಡ ಒಂದು ಭಾಗವನ್ನಾದರೂ ತುಮಕೂರು, ರಾಮನಗರ, ಹಾಸನ, ಮಂಡ್ಯದಂತಹ ಸಣ್ಣ ನಗರಗಳಿಗೆ ವಿತರಿಸಲು ಚಿಂತನೆ ಮಾಡಬೇಕು.
ಹಾಗೆ ಮಹಾನಗರಗಳ ಕಡೆ ಹೊರಟಿರುವ ಮತ್ತು ಜಲ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಜನರ ವಲಸೆಯನ್ನು ಸಣ್ಣ ನಗರಗಳ ಕಡೆ ತಿರುಗಿಸಬೇಕಿದೆ. ಭಾರತದ ಮಹಾನಗರಗಳ ಹೈಡ್ರೊ-ಸ್ಕಿಜೋಫ್ರೀನಿಯಾದ ಸಮಸ್ಯೆಗಳಾದ ಬೇಸಿಗೆಯ ಕೊರತೆ ಮತ್ತು ಮುಂಗಾರಿನ ಪ್ರವಾಹ ಇವುಗಳನ್ನು ನಿವಾರಿಸಲು ಇರುವ ಏಕೈಕ ಸಂಭಾವ್ಯ ಮಾರ್ಗ ಇದು.
ಲೇಖಕ: ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ನಿರ್ದೇಶಕ
(ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯಗಳು)
ನೀರು ಸಂಜೀವಿನಿಯೂ ಹೌದು, ಮರೀಚಿಕೆಯೂ ಹೌದು
ಭಾರತದ ಮಹಾನಗರಗಳ ಅಸಹಜ ಜನಸಂಖ್ಯೆ, ಅಡ್ಡಾದಿಡ್ಡಿ ವಿಸ್ತೀರ್ಣ ಹಾಗೂ ಹೂಡಿಕೆಯ ಫಲಿತಂಶವೇ ಈ ಎಲ್ಲ ಜಲಸಂಕಷ್ಟಗಳಿಗೆ ಪ್ರಮುಖ ಕಾರಣ. ಹಾಗೆ ನೀರಿನ ಬೇಡಿಕೆಯ ಮೇಲಿನ ಇವೆಲ್ಲದರ ಪರಿಣಾಮವನ್ನು ಒಮ್ಮೆ ನೋಡೋಣ: 2015ರಲ್ಲಿ ದೆಹಲಿಯಲ್ಲಿ ಸುಮಾರು 4,760 ಎಂಎಲ್‌ಡಿ ನೀರಿನ ಬೇಡಿಕೆಯಿದ್ದರೆ ಪೂರೈಕೆ ಮಾತ್ರ 3,546 ಎಂಎಲ್‌ಡಿ ಇತ್ತು. ಎರಡರ ನಡುವೆ ಸುಮಾರು 1,000 ಎಂಎಲ್‌ಡಿಯಷ್ಟು ಅಂತರವಿತ್ತು; ಇವತ್ತಿನ ದಿನ, ಕೋಲ್ಕತ್ತ ಸುಮಾರು 1,875 ಎಂಎಲ್‌ಡಿ ನೀರಿನ ಬೇಡಿಕೆಯನ್ನು ಹೊಂದಿದೆ ಮತ್ತು ಸೋರಿಕೆ, ಕಳ್ಳತನ ಮತ್ತು ವಿತರಣಾ ಅಂತರವನ್ನು ಪರಿಗಣಿಸಿದರೆ ಸುಮಾರು 400 ಎಂಎಲ್‌ಡಿ ಕೊರತೆ ಕಾಣುತ್ತದೆ. ಚೆನ್ನೈ ನಗರ ಪ್ರದೇಶದ ನೀರಿನ ಬೇಡಿಕೆ 1,850 ಎಂಎಲ್‌ಡಿ ಆಗಿದ್ದು, ಪೂರೈಕೆ ಮಾತ್ರ 1,510 ಎಂಎಲ್‌ಡಿ. ಇದರಿಂದ ಸುಮಾರು 300 ಎಂಎಲ್‌ಡಿ ಕೊರತೆ ಇದೆ. ಮುಂದಿನ ವರ್ಷ (2026) ನಮ್ಮ ಬೆಂಗಳೂರು ನಗರ ಪ್ರದೇಶದ ಬೇಡಿಕೆ ಮತ್ತು ಪೂರೈಕೆ ಕ್ರಮವಾಗಿ 3,437 ಎಂಎಲ್‌ಡಿ ಮತ್ತು 2,235 ಎಂಎಲ್‌ಡಿ ಇರಲಿದ್ದು, ಇನ್ನೂ 1,262 ಎಂಎಲ್‌ಡಿಯಷ್ಟು ಕೊರತೆ ಉಂಟಾಗಲಿದೆ. ಇದರಿಂದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ.
ಈ ಅಂಕಿಅಂಶಗಳು, ನಗರಗಳಲ್ಲಿನ ಬೆಳವಣಿಗೆಗೆ ಸಂಬಂಧಿಸಿದ, ಪ್ರಜ್ಞಾಪೂರ್ವಕ ನೀತಿಗಳ ಕೊರತೆಯ ಪ್ರತಿರೂಪಗಳಾಗಿವೆ.
ಅಸಮಾನತೆಯ ಬೆಳವಣಿಗೆ ಬದಲಾವಣೆ ಅಗತ್ಯ
ಮುಂಗಾರು ಈಗ ತಾನೇ ಮುಗಿದಿದೆ, ಹಿಂಗಾರು ಆರಂಭವಾಗಿದೆ. ಬೇಸಿಗೆ ಮುಂದಿದೆ. ಬೇಸಿಗೆಯಲ್ಲಿ ಜಲಕ್ಷಾಮಕ್ಕೆ ಒಳಗಾಗಿದ್ದ ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳು ಮುಂಗಾರಿನ ನಂತರ ಈಗ ಪುನಃ ಹಿಂಗಾರಿನ ಪ್ರವಾಹದ ಬಿಕ್ಕಟ್ಟನ್ನು ಎದುರಿಸುವ ಅಪಾಯವಿದೆ. ನಂತರ ಬೇಸಿಗೆ– ನೀರಿಗೆ ಪುನಃ ಹಾಹಾಕಾರ. ಇದು ಎಚ್ಚರಿಕೆಯ ಗಂಟೆ ಮತ್ತು ನೀತಿನಿರೂಪಕರಿಗೆ ಆಪತ್ಕಾಲದ ಕರೆಯಾಗಿದೆ. ‘ಅದೇ ರಾಗ ಅದೇ ಹಾಡು’ ಎಂಬಂತೆ ಪ್ರತಿವರ್ಷವೂ ಬಂದೆರಗುವ ಈ ಹಾಹಾಕಾರದ ಪುನರಾವರ್ತಿತ ಪ್ರದರ್ಶನ ನಿಲ್ಲಿಸಬೇಕಾದರೆ, ನಾವೆಲ್ಲರೂ ಮಹಾನಗರಗಳ ವಿನ್ಯಾಸದ ದಿಕ್ಕು ಬದಲಿಸಲೇಬೇಕಿದೆ.
ಆದುದರಿಂದ ಜಲ ಹಾಗೂ ಆರ್ಥಿಕ ತಜ್ಞರು/ಯೋಜಕರು (ಮತ್ತು ನಾವು/ನೀವು) ಜೊತೆಗೂಡಿ ದೇಶದ ನಗರ/ಪಟ್ಟಣಗಳ ಈ ಆರ್ಥಿಕ ಅಸಮಾನತೆಯನ್ನು, ಏಕಪಕ್ಷೀಯ ಬೆಳವಣಿಗೆಯನ್ನು ಎಷ್ಟು ಬೇಗ ಅರಿತು ಬದಲಾಯಿಸುವೆವೋ, ಅಷ್ಟು ಬೇಗ ಮಹಾನಗರಗಳ ಬೆನ್ನತ್ತಿರುವ ಹೈಡ್ರೊ-ಸ್ಕಿಜೋಫ್ರೀನಿಯಾ ಅಂದರೆ ಈ ನೀರಿನ ಹಾಹಾಕಾರ/ಪ್ರವಾಹಗಳ ಅವಳಿ ಬಿಕ್ಕಟಿಗೆ ಅಂತಿಮ ತೆರೆ ಎಳೆಯಬಹುದಾಗಿದೆ.
1.6 ಕೋಟಿ ಟನ್ ಅಡುಗೆ ಎಣ್ಣೆ ಆಮದು
ಸಂದರ್ಭ: 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ ₹1.61 ಲಕ್ಷ ಕೋಟಿ ಮೌಲ್ಯದ ಎಣ್ಣೆ ಆಮದು: ಎಸ್ಇಎ
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್) ದೇಶಕ್ಕೆ 1.6 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹1.61 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ತಿಳಿಸಿದೆ.
- 2023–24ರ ತೈಲ ಮಾರುಕಟ್ಟೆ ವರ್ಷದಲ್ಲಿ 1.59 ಕೋಟಿ ಟನ್ ಅಡುಗೆ ಎಣ್ಣೆ ಆಮದಾಗಿತ್ತು. ಇದರ ಮೌಲ್ಯ ₹1.32 ಲಕ್ಷ ಕೋಟಿಯಷ್ಟಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ. ಇದರಿಂದ ಆಮದು ಮಾಡಿಕೊಂಡ ಅಡುಗೆ ಎಣ್ಣೆಯ ಬೆಲೆ, ಹಣಕಾಸಿನ ಮೌಲ್ಯದಲ್ಲಿ ಶೇ 22ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
- ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು, ಭಾರತವು 1990ರ ದಶಕದಿಂದಲೂ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಆರಂಭಿಕ ಅವಧಿಯಲ್ಲಿ, ಆಮದು ಪ್ರಮಾಣವು ತುಂಬಾ ಕಡಿಮೆ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ (2004-05ರಿಂದ 2024-25), ಆಮದು ಪ್ರಮಾಣವು 2 ಪಟ್ಟು ಹೆಚ್ಚಾಗಿದ್ದರೆ, ಆಮದು ವೆಚ್ಚವು ಸುಮಾರು 15 ಪಟ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
- 2022–23ರ ಮಾರುಕಟ್ಟೆ ವರ್ಷದಲ್ಲಿ 1.64 ಕೋಟಿ ಟನ್, 2021–22ರಲ್ಲಿ 1.40 ಕೋಟಿ ಟನ್ ಮತ್ತು 2020–21ರಲ್ಲಿ 1.31 ಕೋಟಿ ಟನ್ ಆಮದಾಗಿತ್ತು.
- 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ 17.37 ಲಕ್ಷ ಟನ್ ರಿಫೈನ್ಡ್ ಎಣ್ಣೆ ಆಮದಾಗಿದೆ. 2023–24ರ ಇದೇ ಅವಧಿಯಲ್ಲಿ 19.31 ಲಕ್ಷ ಟನ್ ಆಮದಾಗಿತ್ತು. 2015–16ರಲ್ಲಿ ಸೋಯಾಬಿನ್ ಎಣ್ಣೆ ಆಮದು 42.3 ಲಕ್ಷ ಟನ್‌ನಷ್ಟಿತ್ತು. ಅದು 2024–25ರ ವೇಳೆಗೆ 54.7 ಲಕ್ಷ ಟನ್‌ಗೆ ಏರಿಕೆಯಾಗಿದೆ. ತಾಳೆ ಎಣ್ಣೆ ಆಮದು 90 ಲಕ್ಷ ಟನ್‌ನಿಂದ 75.8 ಲಕ್ಷ ಟನ್‌ಗೆ ಇಳಿದಿದೆ ಎಂದು ತಿಳಿಸಿದೆ.
- ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಿಂದ ಸೋಯಾಬಿನ್ ಎಣ್ಣೆ ಆಮದಾಗುತ್ತದೆ.
- ಸಗಟು ಹಣದುಬ್ಬರ ಇಳಿಕೆ
ಸಂದರ್ಭ: ಜಿಎಸ್ಟಿ ಇಳಿಕೆಯಿಂದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ದರವು ಅಕ್ಟೋಬರ್ ತಿಂಗಳಿನಲ್ಲಿ ಶೇ (–) 1.21ಕ್ಕೆ ಇಳಿಕೆ ಆಗಿದೆ. ಇದು 27 ತಿಂಗಳದ ಕನಿಷ್ಠ ಮಟ್ಟವಾಗಿದೆ.
- ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ 2.75ರಷ್ಟು ಸಗಟು ಹಣದುಬ್ಬರ ದಾಖಲಾಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 0.13ರಷ್ಟಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿ ಹಲವು ವಸ್ತುಗಳ ಬೆಲೆ ಕಡಿಮೆಯಾಗಿದೆ. ಇದರಿಂದ ಅಕ್ಟೋಬರ್ ತಿಂಗಳಿನಲ್ಲಿ ಹಣದುಬ್ಬರ ಪ್ರಮಾಣ ತಗ್ಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.
- ಆಹಾರ ಪದಾರ್ಥಗಳ ಬೆಲೆ ಶೇ 8.31ರಷ್ಟು ಇಳಿಕೆ ಆಗಿದೆ. ಈರುಳ್ಳಿ, ಆಲೂಗೆಡ್ಡೆ, ತರಕಾರಿಗಳು, ದ್ವಿದಳ ಧಾನ್ಯಗಳು ಬೆಲೆ ಸಹ ಕಡಿಮೆ ಆಗಿದೆ.
- ತಯಾರಿಕಾ ವಲಯದ ಉತ್ಪನ್ನಗಳ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 2.33ರಷ್ಟಿತ್ತು. ಅದು ಅಕ್ಟೋಬರ್‌ನಲ್ಲಿ ಶೇ 1.54ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 2.58ರಿಂದ ಶೇ 2.55ಕ್ಕೆ ಇಳಿದಿದೆ.
- ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯಿಂದ ಸರಕುಗಳ ಬೆಲೆ ಕಡಿಮೆ ಆಯಿತು. ಇದು ಸಗಟು ಮತ್ತು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 0.25ರಷ್ಟು ದಾಖಲಾಗಿದೆ. ಇದು ದಶಕದ ಕನಿಷ್ಠ ಮಟ್ಟವಾಗಿದೆ ಎಂದು ತಿಳಿಸಿದೆ.
- ಪಿಎಂ–ಕಿಸಾನ್ ನಿಧಿ ಬಿಡುಗಡೆ 19ರಂದು
ಸಂದರ್ಭ: ಪಿಎಂ–ಕಿಸಾನ್ ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು, ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ.
- ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ವಾರ್ಷಿಕ ₹6 ಸಾವಿರ ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ ಮೂರು ಬಾರಿ ರೈತರಿಗೆ ₹2 ಸಾವಿರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
- ಭೂಮಿಗೆ ಮರಳಿದ ಚೀನಾದ ಗಗನಯಾನಿಗಳು
ಸಂದರ್ಭ: ಬೀಜಿಂಗ್, ಚೀನಾ (ಪಿಟಿಐ): ವ್ಯೋಮನೌಕೆಯು ಅಂತರಿಕ್ಷದ ಅವಶೇಷಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಭೂಮಿಗೆ ಬರಲು ವಿಳಂಬವಾಗಿದ್ದ ಚೀನಾದ ಗಗನಯಾನಿಗಳು ಸುರಕ್ಷಿತವಾಗಿ ಬಂದಿಳಿದಿದ್ದಾರೆ.
- ‘ಶೆಂಝೌ-14 ಬಾಹ್ಯಾಕಾಶ ನೌಕೆಯ ಮೂಲಕ ಚೆನ್ ಡಾಂಗ್, ಚೆನ್ ಝೆಂಗುರಿ ಹಾಗೂ ವಾಂಗ್ ಜಿ ಅವರು ಉತ್ತರ ಚೀನಾದ ಡಾಂಗ್‌ಫೆಂಗ್ ನಿಲ್ದಾಣಕ್ಕೆ ಬಂದಿಳಿದರು’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ತಿಳಿಸಿದೆ.
- ‘ನವೆಂಬರ್ 5ರಂದೇ ಈ ಮೂವರು ಗಗನಯಾನಿಗಳು ಭೂಮಿಗೆ ಮರಳಬೇಕಿತ್ತು. ಅಂತರಿಕ್ಷದಲ್ಲಿ ವ್ಯೋಮನೌಕೆಗೆ ಕೊನೆಯ ಹಂತದಲ್ಲಿ ಅವಶೇಷಗಳು ಡಿಕ್ಕಿ ಹೊಡೆದಿದದ್ದರಿಂದ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ, ಪ್ರಯಾಣವನ್ನು ಮುಂದೂಡಲಾಗಿತ್ತು. ನಂತರ ಅವುಗಳನ್ನು ಸರಿಪಡಿಸಿದ ನಂತರ, ಅವರು ವ್ಯೋಮನೌಕೆಯಲ್ಲಿ ಬಂದಿಳಿದರು’ ಎಂದು ಸಿಎಂಎಸ್‌ಎ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
- 2011ರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಿದ ಬಳಿಕ ಇದೇ ಮೊದಲ ಬಾರಿ ಈ ಸಮಸ್ಯೆ ತಲೆದೋರಿತ್ತು. ಈ ನಿಲ್ದಾಣದಲ್ಲಿ ಮೂವರು ಗಗನಯಾನಿಗಳಿಗೆ ಏಕಕಾಲಕ್ಕೆ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬೇರೆ ಗಗನ ಯಾನಿಗಳನ್ನು ಚೀನಾವು ಅಲ್ಲಿಗೆ ಕಳುಹಿಸಿಕೊಡುತ್ತದೆ.
- ವಿಶ್ವ ಶೂಟಿಂಗ್: ಇಶಾಗೆ ಕಂಚಿನ ಪದಕ
ಸಂದರ್ಭ: ಭಾರತದ ಅನುಭವಿ ಶೂಟರ್ ಇಶಾ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಷಿಪ್ನ ಮಹಿಳೆಯರ 25 ಮೀ. ಸ್ಪೋರ್ಟ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಆದರೆ, ಒಲಿಂಪಿಕ್ಸ್ ಅವಳಿ ಪದಕ ವಿಜೇತೆ ಮನು ಭಾಕರ್ ನಿರಾಸೆ ಮೂಡಿಸಿದರು.
- 26 ವರ್ಷದ ಇಶಾ ಅವರಿಗೆ ಇದು ವಿಶ್ವ ಚಾಂಪಿ ಯನ್‌ಷಿಪ್‌ನಲ್ಲಿ ಮೊದಲ ವೈಯಕ್ತಿಕ ಪದಕವಾಗಿದೆ. ಶುಕ್ರವಾರ ಫೈನಲ್ ಸ್ಪರ್ಧೆಯಲ್ಲಿ 30 ಅಂಕಗಳೊಂದಿಗೆ ಇಶಾ ಮೂರನೇ ಸ್ಥಾನ ಗಳಿಸಿದರು.
- ಹಾಲಿ ಒಲಿಂಪಿಕ್ ಚಾಂಪಿಯನ್, ಕೊರಿಯಾದ ಯಾಂಗ್ ಜಿಯಿನ್ (40 ಅಂಕ) ಚಿನ್ನದ ಸಾಧನೆ ಮಾಡಿದರೆ, ಚೀನಾದ ಯಾವೋ ಕಿಯಾನ್ಕ್ಸನ್ (38) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮನು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
- ಮೂರು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಗೆದ್ದ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
- ಇಶಾ ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್
ಸಂದರ್ಭ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಶಾ ಶರ್ಮಾ ಅವರು ಕರ್ನಾಟಕದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ಸರ್ಬಿಯಾದ ಸುಬೊಟಿಕಾದಲ್ಲಿ ನಡೆದ ಐಎಂ ಸರ್ಕಿಟ್ ಟೂರ್ನಿಯಲ್ಲಿ ಅವರು ಮೂರನೇ ಡಬ್ಲ್ಯುಜಿಎಂ ನಾರ್ಮ್ ಪಡೆದು ಅಗತ್ಯವಿದ್ದ ಅರ್ಹತೆ ಪೂರೈಸಿದರು.
- ಡಬ್ಲ್ಯುಜಿಎಂ ‘ಟೈಟಲ್’ ಪಡೆಯಲು ಆಟಗಾರ್ತಿಯೊಬ್ಬರು ಮೂರು ನಾರ್ಮ್ ಗಳ ಜೊತೆ 2300 ಫಿಡೆ ರೇಟಿಂಗ್ ಗಳಿಸ ಬೇಕಾಗುತ್ತದೆ. ಅವರು 2022ರ ಆಗಸ್ಟ್‌ನಲ್ಲೇ ಈ ರೇಟಿಂಗ್ ಪೂರೈಸಿದ್ದರು.
- 2022ರಲ್ಲಿ ಸ್ಲೊವಾಕಿಯಾದಲ್ಲಿ ಅವರು ಮೊದಲ ನಾರ್ಮ್ ಪಡೆದಿದ್ದರು. ಮರುವರ್ಷ ಮೊರಾಕೊದಲ್ಲಿ ಎರಡನೇ ಡಬ್ಲ್ಯುಜಿಎಂ ನಾರ್ಮ್ ಗಳಿಸಿದ್ದರು.
- 2019ರಲ್ಲಿ ಅವರು ಮಹಿಳಾ ಐಎಂ (ಡಬ್ಲ್ಯುಐಎಂ) ಆಗಿದ್ದರು. ಈ ಸಾಧನೆಗೆ ಪಾತ್ರರಾಗಿದ್ದ ರಾಜ್ಯದ ಮೊದಲಿಗರಾಗಿದ್ದರು.
- ‘ಇದಕ್ಕಾಗಿ ಐದು ವರ್ಷಗಳಿಂದ ಶ್ರಮ ಹಾಕಿದ್ದೆ. ಈಗ ಸಾಕಾರಗೊಂಡಿರುವುದು ಸಂತಸಕ್ಕಿಂತ ನಿರಾಳತೆ ನೀಡಿದೆ’ ಎಂದು ಇಶಾ ಸರ್ಬಿಯಾದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
- ಇಶಾ ಅವರು ಈ ವರ್ಷ ಚೆಸ್ ಆಟಗಾರ ಐಎಂ ಶರಣ್ ರಾವ್ ಅವರನ್ನು ವಿವಾಹವಾಗಿದ್ದಾರೆ. ಮಂಗಳೂರಿ ನಲ್ಲಿರುವ ಶರಣ್ ಅವರ ರಾವ್ ಚೆಸ್ ಅಕಾಡೆಮಿಯಲ್ಲಿ ಇಶಾ ಮುಖ್ಯ ಕೋಚ್ ಆಗಿದ್ದಾರೆ.
- ‘ಆಟಕ್ಕಿಂತಲೂ ಈಗ ತರಬೇತಿ ನೀಡುವತ್ತ ಹೆಚ್ಚಿನ ಗಮನ ನೀಡುತ್ತಿ ದ್ದೇನೆ’ ಎಂದೂ ಅವರು ಹೇಳಿದರು.
- ಏಷ್ಯನ್ ಆರ್ಚರಿ: ಅಂಕಿತಾ, ಧೀರಜ್ಗೆ ಚಿನ್ನದ ಪದಕ
ಸಂದರ್ಭ: ಭಾರತದ ಬಿಲ್ಗಾರರಾದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಶುಕ್ರವಾರ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್ಷಿಪ್ನ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು.
- 27 ವರ್ಷದ ಅಂಕಿತಾ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 7–3 ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ದಕ್ಷಿಣ ಕೊರಿಯಾದ ನಾಮ್ ಸುಹಿಯೋನ್ ಅವರಿಗೆ ಆಘಾತ ನೀಡಿದರು. ಪುರುಷರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಧೀರಜ್ 6–2ರಿಂದ ಸ್ವದೇಶದ ರಾಹುಲ್ ಅವರನ್ನು ಮಣಿಸಿದರು.
- ಅಂಕಿತಾ ಸೆಮಿಫೈನಲ್‌ನಲ್ಲಿ ಸ್ವದೇಶದ ಅನುಭವಿ ದೀಪಿಕಾ ಅವರನ್ನು ಸೋಲಿಸಿದ್ದರು. 5–5 ಅಂಕಗಳಿಂದ ಸಮಬಲ ಸಾಧಿಸಿದ ಬಳಿಕ ಶೂಟ್ ಆಫ್‌ನಲ್ಲೂ ಪಾಯಿಂಟ್ಸ್ (9) ಸಮನಾಯಿತು. ಆದರೆ, ಅಂಕಿತಾ ಅವರ ಬಾಣವು ಹೆಚ್ಚು ನಿಖರವಾಗಿದ್ದರಿಂದ ಅವರು ಫೈನಲ್‌ಗೆ ಮುನ್ನಡೆದರು.
- ಐದು ಬಾರಿಯ ಒಲಿಂಪಿಯನ್ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡರು. ಕಂಚಿನ ಪ್ಲೇ ಆಫ್ ಸುತ್ತಿನಲ್ಲಿ ಸ್ವದೇಶದ ಸಂಗೀತಾ ಅವರನ್ನು ಶೂಟ್ ಆಫ್‌ನಲ್ಲಿ (6–5) ಮಣಿಸಿದರು.
- ಸೆಮಿಫೈನಲ್‌ನಲ್ಲಿ ಮೊದಲ ಸೆಟ್ ಕಳೆದುಕೊಂಡಿದ್ದ ಧೀರಜ್ ನಂತರ ಲಯ ಕಂಡುಕೊಂಡು 6–2ರಿಂದ ಕೊರಿಯಾದ ಅನುಭವಿ ಆಟಗಾರ ಜಾಂಗ್ ಚೆಹ್ವಾನ್ ಅವರನ್ನು ಸೋಲಿಸಿದ್ದರು.
- ಭಾರತವು ಆರು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಸೇರಿ ಒಟ್ಟು 10 ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿತು.