ಪ್ರಚಲಿತ ವಿದ್ಯಮಾನಗಳು: 13ನೇ ಡಿಸೆಂಬರ್ 2025
- ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕಾರ್ಯಕ್ಕೆ ವೇದಿಕೆ ಸಿದ್ಧಪಡಿಸಿರುವ ಕೇಂದ್ರ ಸರ್ಕಾರವು 2027ರ ಜನಗಣತಿ ನಡೆಸಲು ₹11,718.24 ಕೋಟಿಗಳ ಬಜೆಟ್ಗೆ ಅನುಮೋದನೆ ನೀಡಿದೆ.
- ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯಲಿರುವ ಜನಗಣತಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- 2027ರ ಜನಗಣತಿಯು ದೇಶದಲ್ಲಿ 16ನೇ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

- ಏಕೀಕೃತ ವ್ಯವಸ್ಥೆಗೆ ಸಂಪುಟ ಒಪ್ಪಿಗೆ: ಉನ್ನತ ಶಿಕ್ಷಣ ಕ್ಷೇತ್ರ ನಿಯಂತ್ರಣಕ್ಕೆ ‘ವಿಕಸಿತ ಭಾರತ್ ಶಿಕ್ಷಾ ಅಧಿಕ್ಷಣ್’ (ವಿಬಿಎಸ್‌ಎ)
ಸಂದರ್ಭ: ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ಈಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಎಐಸಿಟಿಇ ಬದಲಾಯಿಸಿ ಏಕೀಕೃತ ವ್ಯವಸ್ಥೆ ರೂಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
- ಈ ಹಿಂದೆ ಭಾರತ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಎಂದು ನಾಮಕರಣ ಮಾಡಿದ್ದ ಪ್ರಸ್ತಾವಿತ ಮಸೂದೆಗೆ ‘ವಿಕಸಿತ ಭಾರತ್ ಶಿಕ್ಷಾ ಅಧಿಕ್ಷಣ್’ (ವಿಬಿಎಸ್‌ಎ) ಎಂದು ಹೆಸರಿಡಲು ನಿರ್ಧರಿಸಲಾಗಿದೆ.
- ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಉನ್ನತ ಶಿಕ್ಷಣ ನಿಯಂತ್ರಣವನ್ನು ಏಕೀಕೃತ ವ್ಯವಸ್ಥೆಗೆ ತರಲು ಪ್ರಸ್ತಾವಿಸಲಾಗಿತ್ತು. ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹಾಗೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆಯೂ(ಎನ್‌ಸಿಟಿಇ) ವಿಬಿಎಸ್‌ಎನಲ್ಲಿ ವಿಲೀನವಾಗಲಿವೆ.
- ‘ವಿಬಿಎಸ್‌ಎ ಮಸೂದೆಗೆ ಸಂಪುಟವು ಒಪ್ಪಿಗೆ ನೀಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಯುಜಿಸಿಯು ತಾಂತ್ರಿಕೇತರ ಉನ್ನತ ಶಿಕ್ಷಣವನ್ನು ನೋಡಿಕೊಳ್ಳು ತ್ತಿದೆ. ಎಐಸಿಟಿಇಯು ತಾಂತ್ರಿಕ ಶಿಕ್ಷಣದ ಮೇಲುಸ್ತುವಾರಿ ವಹಿಸಿದ್ದರೆ, ಎನ್‌ಸಿಟಿಯು ಶಿಕ್ಷಕರ ಶಿಕ್ಷಣದ ವಿಚಾರದ ಮೇಲೆ ನಿಗಾ ವಹಿಸಿದೆ.
- ಉದ್ದೇಶಿತ ಆಯೋಗವು ಉನ್ನತ ಶಿಕ್ಷಣದ ನಿಯಂತ್ರಣಕ್ಕೆ ಏಕೀಕೃತ ವ್ಯವಸ್ಥೆ ಹೊಂದಿರಲಿದೆ. ಆದರೆ, ವೈದ್ಯಕೀಯ ಹಾಗೂ ಕಾನೂನು ಶಿಕ್ಷಣ ಇದರ ವ್ಯಾಪ್ತಿಗೆ ಬರುವುದಿಲ್ಲ. ಈ ನೂತನ ವ್ಯವಸ್ಥೆಯು ನಿಯಂತ್ರಣ, ಮಾನ್ಯತೆ ಹಾಗೂ ವೃತ್ತಿಪರ ಮಾನದಂಡವನ್ನು ನಿಗದಿಪಡಿಸುವ ಗುರಿ ಹೊಂದಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿತ್ತು.
- ನಾಗರಿಕ ಪರಮಾಣು ಇಂಧನ ಕ್ಷೇತ್ರ; ಖಾಸಗಿ ಸಹಭಾಗಿತ್ವಕ್ಕೆ ಮುಕ್ತ
ಸಂದರ್ಭ: 2047ರ ವೇಳೆಗೆ 100 ಗಿಗಾವ್ಯಾಟ್ ಅಣುಶಕ್ತಿ ಉತ್ಪಾದನೆ ಗುರಿ ತಲುಪುವ ನಿಟ್ಟಿನಲ್ಲಿ ನಾಗರಿಕ ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
- ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಹಾಗೂ ಪ್ರಗತಿ ನಿಟ್ಟಿನಲ್ಲಿ ಭಾರತ ಪರಿವರ್ತನೆ (ಶಾಂತಿ) ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ.
- ಕಳೆದ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗಿ ಸಹಭಾಗಿತ್ವದಲ್ಲಿ ಪರಮಾಣು ಇಂಧನ ಕೇಂದ್ರ ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಘೋಷಣೆ ಮಾಡಿದ್ದರು.
- ಸಣ್ಣ ಮಾಡ್ಯುಲರ್ ಪರಮಾಣು ಸ್ಥಾವರಗಳ ಅಭಿವೃದ್ಧಿ, ಸಂಶೋಧನೆಗಾಗಿ ₹ 20 ಸಾವಿರ ಕೋಟಿ ಮೊತ್ತದ ಯೋಜನೆಯನ್ನು ಈ ವೇಳೆ ಘೋಷಿಸಿದ್ದರು. ಖಾಸಗಿ ಸಹಭಾಗಿತ್ವದಲ್ಲಿ ದೇಶೀಯವಾಗಿ 2033ರ ವೇಳೆಗೆ ಇಂತಹ 5 ಸ್ಥಾವರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಅವರು ಹೇಳಿದ್ದರು.
- ವಿಮಾ ವಲಯ: ಎಫ್ಡಿಐ ಶೇ 100ಕ್ಕೆ ಹೆಚ್ಚಿಸುವ ಮಸೂದೆಗೆ ಸಂಪುಟ ಒಪ್ಪಿಗೆ
ಸಂದರ್ಭ: ದೇಶದ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್ಡಿಐ) ಪ್ರಮಾಣ ವನ್ನು ಶೇ 100ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
- ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಮಾಡುವ ಸಾಧ್ಯತೆ ಇದೆ. ಅಧಿವೇಶನವು ಡಿಸೆಂಬರ್ 19ರಂದು ಕೊನೆಗೊಳ್ಳಲಿದೆ.
- ವಿಮಾ ಕಾನೂನುಗಳ (ತಿದ್ದುಪಡಿ) ಮಸೂದೆ 2025, ವಿಮಾ ಕ್ಷೇತ್ರದ ಅಭಿವೃದ್ಧಿ ಮತ್ತು ವಹಿವಾಟನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ. ಈ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿಸಿವೆ.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ವರ್ಷದ ಬಜೆಟ್ ಮಂಡನೆ ವೇಳೆ, ಹಣಕಾಸು ವಲಯದ ಸುಧಾರಣೆಗಳ ಭಾಗವಾಗಿ ಪ್ರಸ್ತುತ ವಿಮಾ ವಲಯದಲ್ಲಿರುವ ಎಫ್‌ಡಿಐ ಮಿತಿಯನ್ನು ಶೇ 74ರಿಂದ ಶೇ 100ಕ್ಕೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇಲ್ಲಿಯವರೆಗೆ ವಿಮಾ ವಲಯವು ₹82 ಸಾವಿರ ಕೋಟಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ.
- ವಿಮಾ ವಲಯದಲ್ಲಿ ಎಫ್‌ಡಿಐ ಅನ್ನು ಶೇ 100ಕ್ಕೆ ಹೆಚ್ಚಿಸುವುದು ಸೇರಿದಂತೆ 1938ರ ವಿಮಾ ಕಾಯ್ದೆಯ ವಿವಿಧ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಹಣಕಾಸು ಸಚಿವಾಲಯ ಪ್ರಸ್ತಾಪಿಸಿದೆ.
- ಈ ಪ್ರಕ್ರಿಯೆಯ ಭಾಗವಾಗಿ, ಜೀವ ವಿಮಾ ನಿಗಮ ಕಾಯ್ದೆ 1956 ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1999 ಅನ್ನು ವಿಮಾ ಕಾಯ್ದೆ 1938ರ ಜೊತೆಗೆ ತಿದ್ದುಪಡಿ ಮಾಡಲಾಗುತ್ತಿದೆ.
- ಎಲ್‌ಐಸಿ ಕಾಯ್ದೆಗೆ ತರಲು ಉದ್ದೇಶಿಸಿರುವ ಬದಲಾವಣೆಗಳು, ಭಾರತೀಯ ಜೀವ ವಿಮಾ ನಿಗಮದ ಆಡಳಿತ ಮಂಡಳಿಗೆ ಕಾರ್ಯಾಚರಣೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರ ನೀಡುವ ಪ್ರಸ್ತಾವ ಹೊಂದಿವೆ. ತಿದ್ದುಪಡಿಯು ಕಾನೂನಾಗಿ ಜಾರಿಗೆ ಬಂದರೆ ಶಾಖೆಗಳ ವಿಸ್ತರಣೆ, ನೇಮಕಾತಿಯಂತಹ ತೀರ್ಮಾನಗಳನ್ನು ಆಡಳಿತ ಮಂಡಳಿಯೇ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
- ಪ್ರಸ್ತಾವಿತ ತಿದ್ದುಪಡಿಗಳು ವಿಮಾ ಪಾಲಿಸಿ ಹೊಂದಿರುವವರ ಹಿತಾಸಕ್ತಿ ರಕ್ಷಿಸಿ, ಅವರ ಹಣಕಾಸಿನ ಭದ್ರತೆಯನ್ನು ಹೆಚ್ಚಿಸಲಿದೆ. ಜೊತೆಗೆ ವಿಮಾ ವಲಯಕ್ಕೆ ಇನ್ನಷ್ಟು ಹೆಚ್ಚು ಕಂಪನಿಗಳು ಪ್ರವೇಶಿಸುವುದಕ್ಕೆ ನೆರವು ಒದಗಿಸುವ, ಆ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.
- ರಾಜ್ಯಕ್ಕೆ ಅನುದಾನ ಬರದ ಬರೆ: ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳಿಗೂ ಹಣದ ಕೊರತೆ
ಸಂದರ್ಭ: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ವರ್ಷ ₹51,700 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಕಂತು ಕಂತುಗಳಲ್ಲಿ ರಾಜ್ಯದ ಪಾಲಿನ ಅನುದಾನ ಬಂದಿದೆ.

- ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈ ಸಾಲಿನಲ್ಲಿ ₹16,000 ಕೋಟಿ ನೀಡುವುದಾಗಿ ವಾಗ್ದಾನ ಮಾಡಿದೆ. ಆದರೆ, ಈ ವರೆಗೆ ₹7 ಸಾವಿರ ಕೋಟಿಯಷ್ಟೇ ನೀಡಿದೆ. ಇನ್ನೂ ₹9 ಸಾವಿರ ಕೋಟಿ ನೀಡಬೇಕಿದೆ. ಈ ಅನುದಾನ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಜಲಜೀವನ್ ಮಿಷನ್ ಯೋಜನೆಯಲ್ಲೂ ಕೇಂದ್ರದ ಪಾಲು ₹4,574 ಕೋಟಿ ಬರಬೇಕಿದೆ.
ಎರಡು ವರ್ಷದಿಂದ ಆರೋಗ್ಯ ಅನುದಾನ ಇಲ್ಲ
- ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ವರ್ಷಗಳಿಂದ ಬಿಡುಗಡೆಯೇ ಮಾಡಿಲ್ಲ.
- ಆಯೋಗವು 2021–22ರಿಂದ 2025–26ರ ಅವಧಿಗೆ ರಾಜ್ಯಕ್ಕೆ ₹2,928 ಕೋಟಿ ಹಂಚಿಕೆ ಮಾಡಿತ್ತು. ಇಲ್ಲಿಯವರೆಗೆ ₹1,497 ಕೋಟಿ ಬಿಡುಗಡೆ ಆಗಿದೆ. 2024–25, 2025–26ರಲ್ಲಿ ಅನುದಾನವೇ ಬಂದಿಲ್ಲ.
- ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಅನುದಾನವೆಷ್ಟು, ರಾಜ್ಯ ಖರ್ಚು ಮಾಡಿರುವುದೆಷ್ಟು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ್ದರು. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
- ‘ಪರಿಶಿಷ್ಟರಿಗೆ 3,200 ನ್ಯಾಯಬೆಲೆ ಅಂಗಡಿ’
ಸಂದರ್ಭ: ‘ಹೊಸ ಮೀಸಲಾತಿ ಅನುಸಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗಾಗಿ 3,200 ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
- ರಾಜ್ಯದ ಗ್ರಾಮೀಣ ಭಾಗದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸುವ ಕುರಿತಂತೆ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸರ್ಕಾರದ ಸೆಳೆದರು. ಅದಕ್ಕೆ ಉತ್ತರಿಸಿದ ಮುನಿಯಪ್ಪ, ‘ನಿಯಮದಂತೆ 3 ಕಿ.ಮೀ.ಗೊಂದು ನ್ಯಾಯಬೆಲೆ ಅಂಗಡಿ ತೆರೆಯ ಲಾಗುವುದು. ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಿಲ್ಲದ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲಾಗುವುದು’ ಎಂದರು.
- ‘ಗುಡ್ಡಗಾಡು ಪ್ರದೇಶದಲ್ಲಿ ಕಡಿಮೆ ಪಡಿತರ ಚೀಟಿದಾರರಿದ್ದರೂ ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುತ್ತೇವೆ. ಗ್ರಾಮಾಂತರ ಭಾಗದಲ್ಲಿ 500 ಮತ್ತು ನಗರ ಪ್ರದೇಶದಲ್ಲಿ 800 ಪಡಿತರ ಚೀಟಿಗೊಂದು ನ್ಯಾಯಬೆಲೆ ಅಂಗಡಿ ತೆರೆಯಲಾಗಿದೆ. ಇದೀಗ ಎಸ್‌ಸಿ, ಎಸ್‌ಟಿ ಸಮುದಾಯ ದವರಿಗಾಗಿ ಹೊಸದಾಗಿ 3,200 ನ್ಯಾಯ ಬೆಲೆ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ’ ಎಂದರು.
‘ನೇಕಾರರ ಬಿಲ್ ಮೊತ್ತ ಮನ್ನಾ: ಸಿ.ಎಂ ಜೊತೆ ಚರ್ಚೆ’
- ‘ವಿದ್ಯುತ್ ಮಗ್ಗಗಳಿಗೆ 10 ಎಚ್‌ಪಿವರೆಗೆ 2023ರ ನವೆಂಬರ್‌ನಿಂದ ಜಾರಿ ಮಾಡಿರುವ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು 2023ರ ಏಪ್ರಿಲ್‍ನಿಂದಲೇ ಅನ್ವಯಗೊಳಿಸ ಬೇಕೆಂಬ ನೇಕಾರರ ಬೇಡಿಕೆಯನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿ ಸಲಾಗುವುದು’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
- ವಿಧಾನಸಭೆಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.‘ನೇಕಾರರ ವಿದ್ಯುತ್ ಬಿಲ್ ಅಂದಾಜು ₹20 ಕೋಟಿಯಷ್ಟು ಬಾಕಿ ಇದೆ. ಅದನ್ನು ಮನ್ನಾ ಮಾಡುವುದ ರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಈ ಕುರಿತು ತೀರ್ಮಾನ ಕೈಗೊಳ್ಳುವವರೆಗೆ ವಿದ್ಯುತ್ ಪೂರೈಕೆ ಕಂಪನಿಗಳು ನೇಕಾರ ಕೈಮಗ್ಗಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ನಿರ್ದೇಶನ ನೀಡ ಬೇಕು’ ಎಂದು ಜೊಲ್ಲೆ ಆಗ್ರಹಿಸಿದರು. ಬಿಜೆಪಿಯ ಸಿದ್ದು ಸವದಿ, ಬಿ.ವೈ. ವಿಜಯೇಂದ್ರ, ಪ್ರಭು ಚವ್ಹಾಣ್ ದನಿಗೂಡಿಸಿದರು.
- ‘ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹತ್ತು ಎಚ್‌ಪಿ ವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 2023ರ ನವೆಂಬರ್‌ನಿಂದ ಈ ಆದೇಶ ಜಾರಿಗೆ ಬಂದಿದ್ದು, ಅಂದಿನಿಂದ ಅನ್ವಯವಾಗುತ್ತಿದೆ. ನೇಕಾರರ ಬೇಡಿಕೆ ಯಂತೆ ಹತ್ತರಿಂದ 20 ಎಚ್‌ಪಿವರೆಗಿನ ಪ್ರತಿ ಯೂನಿಟ್‍ಗೆ ₹1.25 ರಿಯಾಯಿತಿ ದರದಲ್ಲಿ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಗಳಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು ₹130 ಕೋಟಿ ವೆಚ್ಚವಾಗುತ್ತಿದೆ’ ಎಂದು ಸಚಿವರು ವಿವರಿಸಿದರು.
- ‘ಅನೇಕ ನೇಕಾರರು ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರುವವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಕೆಲವರು ಮಾತ್ರ ಬಾಕಿ ಉಳಿಸಿಕೊಂಡಿ ದ್ದಾರೆ. ಯಾವುದೇ ಯೋಜನೆ ಸರ್ಕಾರದ ಆದೇಶ ಹೊರಬಿದ್ದ ನಂತರ ಅನ್ವಯವಾಗುತ್ತದೆ. ಆದರೂ, ಆದೇಶ ಹೊರಬೀಳುವ ಹಿಂದಿನ ಅವಧಿಗೂ ಅನ್ವಯ ಮಾಡಬೇಕು ಎಂಬ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ’ ಎಂದರು.
ಹು–ಧಾ ಪಾಲಿಕೆ ವಿಭಜನೆಗೆ ನಿಯೋಗ
- ‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆಯಾಗಿ ಮಾಡುವ ಪ್ರಸ್ತಾವವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಮಾಡಲು ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ಯಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
- ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಮಾತನಾಡಿ, ‘ಧಾರವಾಡ ಮಹಾನಗರಪಾಲಿಕೆಯನ್ನಾಗಿ ಜನವರಿ ತಿಂಗಳಲ್ಲಿಯೇ ಅಧಿಸೂಚನೆ ಹೊರಡಿಸಿದ್ದರೂ ಈವರೆಗೂ ಕಾರ್ಯಗತ ಆಗಿಲ್ಲ. ಅನುಮೋದನೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದ ಕಡತ ಏಳು ತಿಂಗಳಿನಿಂದ ಅವರ ಬಳಿಯೇ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
- ಅದಕ್ಕೆ ಉತ್ತರಿಸಿದ ಸಚಿವರು, ‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆ ರಚಿಸಲು ಮತ್ತು ಉಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರಪಾಲಿಕೆ ಎಂದು ಮುಂದುವರಿಸಲು ಉದ್ದೇಶಿಸಿ, ಬಾಧಿತರಿಂದ ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಿ 2025ರ ಜ. 21ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ, ಸಲಹೆಗಳ ಕುರಿತ ವರದಿಯನ್ನು ಪೌರಾಡಳಿತ ನಿರ್ದೇಶನಾಲಯದಿಂದ ಧಾರವಾಡ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಆ ವರದಿ ಸಹಿತ ರಾಜ್ಯಪಾಲರ ಅನುಮೋದನೆ ಸಲ್ಲಿಸಲಾಗಿದೆ’ ಎಂದರು.
- ಕೊಬ್ಬರಿ ಎಂಎಸ್ಪಿ ₹400 ಹೆಚ್ಚಳ
ಸಂದರ್ಭ: 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.
- ಮಿಲ್ಲಿಂಗ್ (ಚಿಕ್ಕ ಚಿಕ್ಕ ತುಂಡು) ಕೊಬ್ಬರಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹445 ಹೆಚ್ಚಿಸಿ ₹12,027ಕ್ಕೆ ನಿಗದಿ ಪಡಿಸಲಾಗಿದೆ. ಉಂಡೆ ಕೊಬ್ಬರಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹400 ಹೆಚ್ಚಿಸಿ ₹12,500ಕ್ಕೆ ನಿಗದಿ ಮಾಡಲಾಗಿದೆ.
- ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭ ಖಚಿತಪಡಿಸಲು ಮತ್ತು ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
- ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನ ಮೇರೆಗೆ ಕೊಬ್ಬರಿಯ ‘ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟ’ಕ್ಕೆ ಎಂಎಸ್‌ಪಿ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೇಡ್) ಹಾಗೂ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು (ಎನ್‌ಸಿಸಿಎಫ್) ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದು ವರಿಸುತ್ತವೆ ಎಂದು ವೈಷ್ಣವ್ ಹೇಳಿದರು.
- 2014ರಿಂದ ಕೇಂದ್ರ ಸರ್ಕಾರವು ಮಿಲ್ಲಿಂಗ್ ಕೊಬ್ಬರಿಯ ಎಂಎಸ್‌ಪಿಯನ್ನು ಗಣನೀಯವಾಗಿ ಹೆಚ್ಚಿಸಿದೆ. 2014ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ ₹5,250 ಇತ್ತು. ದಶಕದಲ್ಲಿ ಬೆಂಬಲ ಬೆಲೆ ಶೇ 129ರಷ್ಟು ಜಾಸ್ತಿ ಆಗಿದೆ. ಉಂಡೆ ಕೊಬ್ಬರಿಯ ಬೆಲೆಯು ಕ್ವಿಂಟಲ್‌ಗೆ ₹5,500ರಿಂದ ₹12,500ಕ್ಕೆ ಏರಿಕೆಯಾಗಿದ್ದು, ಶೇ 127ರಷ್ಟು ಹೆಚ್ಚಳ ವಾಗಿದೆ ಎಂದು ಮಾಹಿತಿ ನೀಡಿದರು.
- ಬೆಳೆಗಾರರಿಗೆ ಲಾಭದಾಯಕ ಬೆಲೆ ಒದಗಿಸುವ ಸಲುವಾಗಿ ಸರ್ಕಾರವು 2018-19ರ ಬಜೆಟ್‌ನಲ್ಲಿ, ಎಲ್ಲ ಬೆಳೆಗಳ ಎಂಎಸ್‌ಪಿಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿ ಸಲಾಗುವುದು ಎಂದು ಘೋಷಿಸಿತ್ತು ಎಂದು ಅವರು ನೆನಪಿಸಿದರು.
- ದೇಶದಲ್ಲಿ ಕೊಬ್ಬರಿ ಮಾರುಕಟ್ಟೆ ಋತುವು ಸಾಮಾನ್ಯವಾಗಿ ಜನವರಿ ಯಿಂದ ಏಪ್ರಿಲ್‌ವರೆಗೆ ಇರುತ್ತದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆ ಆಗುತ್ತದೆ.

- ಎಫ್ಪಿಒ: 5 ವರ್ಷ ವಿಸ್ತರಣೆ: ರೈತ ಉತ್ಪಾದಕ ಸಂಸ್ಥೆಗಳ ಹಣಕಾಸಿನ ನೆರವಿಗೆ ಇರುವ ಅಡೆತಡೆ ಪರಿಹರಿಸಲು ಕ್ರಮ
ಸಂದರ್ಭ: ಕೆಲವು ಎಫ್ಪಿಒಗಳು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದು, ನೈಜ ರೈತರ ಭಾಗವಹಿಸುವಿಕೆ ಇಲ್ಲದೆ ಕೇವಲ 3ರಿಂದ 4 ಜನರನ್ನು ಒಳಗೊಂಡಿವೆ ದೇವೇಶ್ ಚತುರ್ವೇದಿ, ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ.
- ‘ತನ್ನ ಪ್ರಾಯೋಜಕತ್ವದ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಕಾರ್ಯಕ್ರಮವನ್ನು ಮತ್ತೆ ಐದು ವರ್ಷ ಕೇಂದ್ರ ಸರ್ಕಾರ ವಿಸ್ತರಿಸಲಿದೆ’ ಎಂದು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದ್ದಾರೆ.
- ಸರ್ಕಾರದ ನಿಯಮಗಳ ಪಾಲನೆ ಮತ್ತು ಹಣಕಾಸಿನ ಅಡೆತಡೆಗಳನ್ನು ಪರಿಹರಿಸಲು 2026-31ರವರೆಗೆ ಈ ವಿಸ್ತರಣೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಹೇಳಿದ್ದಾರೆ.
- ದೇಶದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ರಚನೆಗೆ ಕೇಂದ್ರ ಸರ್ಕಾರವು 2020ರ ಫೆಬ್ರುವರಿಯಲ್ಲಿ ಚಾಲನೆ ನೀಡಿತ್ತು. ಈಗಾಗಲೇ 10 ಸಾವಿರ ಎಫ್‌ಪಿಒ ನೋಂದಣಿ ಆಗಿದ್ದು, ಈ ಪೈಕಿ ಹಲವು ಎಫ್‌ಪಿಒ ಕಳೆದ ಎರಡು ವರ್ಷದಲ್ಲಿ ರಚನೆ ಆಗಿವೆ. ಹೀಗಾಗಿ, ಈ ಸಂಘಗಳ ಸಶಕ್ತಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
- ರೈತರಿಗೆ ಹೆಚ್ಚಿನ ಪ್ರತಿಫಲ ನೀಡಲು ಸಾಧ್ಯವಾಗುವ ರೀತಿಯಲ್ಲಿ ಎಫ್‌ಪಿಒ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
- ಕಂಪನಿ ಕಾಯ್ದೆ ಅಡಿಯಲ್ಲಿನ ಮಾನದಂಡಗಳನ್ನು ಪಾಲಿಸುವುದೇ ಎಫ್‌ಪಿಒಗೆ ದೊಡ್ಡ ಸವಾಲಾಗಿದೆ. 3ರಿಂದ 5 ವರ್ಷದವರೆಗೆ ದಂಡದಿಂದ ವಿನಾಯಿತಿ ನೀಡುವಂತೆ ಸಂಸದೀಯ ವ್ಯವಹಾರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
- 2024–25ರ ಆರ್ಥಿಕ ವರ್ಷದಲ್ಲಿ ಎಫ್‌ಪಿಒ ವಾರ್ಷಿಕ ವಹಿವಾಟು ₹9 ಸಾವಿರ ಕೋಟಿ ಆಗಿದೆ ಎಂದ ಅವರು, ಒಟ್ಟು ವ್ಯವಹಾರ ₹10 ಸಾವಿರ ಕೋಟಿ ದಾಟುವ ಅಂದಾಜಿದೆ. ದೇಶದ 52 ಲಕ್ಷ ರೈತರಿಗೆ ಎಫ್‌ಪಿಒದಿಂದ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
- ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ನೋಂದಾಯಿ ಸಲಾದ 40 ಸಾವಿರದಿಂದ 50 ಸಾವಿರ ಎಫ್‌ಪಿಒಗಳನ್ನು ಸೇರಿಸಿದರೆ, ಒಟ್ಟು ಎಫ್‌ಪಿಒಗಳ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಗುತ್ತದೆ.
- ಪ್ರಸ್ತುತ, ದೊಡ್ಡ ಗಾತ್ರದ ವಹಿವಾಟು ನಡೆಸಲು ಎಫ್‌ಪಿಒ ಮಿತಿ ₹30 ಲಕ್ಷದಷ್ಟಿದ್ದು, ಇದು ಸಾಕಾಗುವುದಿಲ್ಲ. ಬೆಳೆ ಖರೀದಿ ವೇಳೆ ಅಥವಾ ರೈತರಿಗೆ ಮುಂಗಡ ಪಾವತಿ ಮಾಡುವಾಗ ಇದು ಕನಿಷ್ಠ ₹50 ಲಕ್ಷದಿಂದ ₹1 ಕೋಟಿ ಆಗಿರಬೇಕು ಎಂದು ಹೇಳಿದ್ದಾರೆ.
- ಸರ್ಕಾರವು ಎಫ್‌ಪಿಒಗಳಿಗೆ ಸಾಲದ ಗ್ಯಾರಂಟಿ ಅಥವಾ ಹಣಕಾಸಿನ ನೆರವು ಸೌಲಭ್ಯಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
- ಏನಿದು ಎಫ್ಪಿಒ: ಸಾಮೂಹಿಕ ಕೃಷಿಯನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಎಫ್‌ಪಿಒ ರಚನೆಯ ಹಿಂದಿನ ಉದ್ದೇಶ. ಈ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಂತ್ರಜ್ಞಾನ, ಸಾಲ, ಮಾರುಕಟ್ಟೆಗಳು ಮತ್ತು ಕೃಷಿಗೆ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ತಮ್ಮ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ರೈತ ಉತ್ಪಾದಕ ಸಂಸ್ಥೆಗಳ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು, ಪರಸ್ಪರ ಅನುಭವಗ ಳನ್ನು ಹಂಚಿಕೊಳ್ಳಲು ವೇದಿಕೆಗಳಾಗಿವೆ.
- ಅಂಚೆ ಇಲಾಖೆ ಮೂಲಕ ಎಂ.ಎಫ್ನಲ್ಲಿ ಹೂಡಿಕೆ
ಸಂದರ್ಭ: ಹೂಡಿಕೆದಾರರಿಗೆ ಅಂಚೆ ಇಲಾಖೆ ಮೂಲಕವೂ ಮ್ಯೂಚುವಲ್ ಫಂಡ್ನಲ್ಲಿ (ಎಂ.ಎಫ್) ಹೂಡಿಕೆಗೆ ಅನುಕೂಲ ಕಲ್ಪಿಸಲು ಮುಂಬೈ ಷೇರು ವಿನಿಮಯ ಕೇಂದ್ರವು (ಬಿಎಸ್‌ಇ) ನಿರ್ಧರಿಸಿದ್ದು, ಅಂಚೆ ಇಲಾಖೆ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
- ಈ ಪಾಲುದಾರಿಕೆಯ ಭಾಗವಾಗಿ ಅಂಚೆ ಇಲಾಖೆಯ ಆಯ್ದ ನೌಕರರು ಮತ್ತು ಏಜೆಂಟ್‌ಗಳಿಗೆ ತರಬೇತಿ ನೀಡಿ, ಅಧಿಕೃತ ಮ್ಯೂಚುವಲ್ ಫಂಡ್ ವಿತರಕರಾಗಿ ನೇಮಕ ಮಾಡಲಾಗುತ್ತದೆ.
- ಅಂಚೆ ಇಲಾಖೆಯ ಬೃಹತ್ ಜಾಲವನ್ನು ಬಳಸಿಕೊಂಡು ಪ್ರಮುಖವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶದಲ್ಲಿನ ಜನರು ಆರ್ಥಿಕ ಪಾಲ್ಗೊಳ್ಳುವಿ ಕೆಯಲ್ಲಿ ಹೆಚ್ಚಿಸುವ ಉದ್ದೇಶವನ್ನು ಈ ಪಾಲುದಾರಿಕೆ ಹೊಂದಿದೆ. ದೇಶದ ಅತಿದೊಡ್ಡ ಆನ್‌ಲೈನ್ ಮ್ಯೂಚುವಲ್ ಫಂಡ್ ವಿತರಣೆಯ ವ್ಯವಸ್ಥೆಯಾದ ಮುಂಬೈ ಷೇರು ವಿನಿಮಯ ಕೇಂದ್ರದ ಸ್ಟಾರ್ ಎಂಎಫ್ ವೇದಿಕೆಯನ್ನು ಬಳಸಿಕೊಂಡು ಈ ಸೇವೆ ನೀಡಲಿದೆ ಎಂದು ಬಿಎಸ್‌ಇ ತಿಳಿಸಿದೆ.
- ದೇಶದಲ್ಲಿ ವಿನಿಮಯ ಆಧಾರಿತ ವಹಿವಾಟುಗಳಲ್ಲಿ ಈ ವೇದಿಕೆಯು ಶೇ 85ಕ್ಕೂ ಹೆಚ್ಚು ಖಾತೆಗಳನ್ನು ನಿರ್ವಹಣೆ ಮಾಡುತ್ತದೆ. ಪ್ರತಿ ತಿಂಗಳು 7 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತದೆ ಎಂದು ತಿಳಿಸಿದೆ.
- ‘ಈ ಪಾಲುದಾರಿಕೆಯಿಂದ ಗ್ರಾಹಕರಿಗೆ ಆಧುನಿಕ ಹೂಡಿಕೆಯ ಆಯ್ಕೆಯನ್ನು ಅಂಚೆ ಇಲಾಖೆ ಒದಗಿಸಲಿದೆ. ಟಯರ್–2 ಮತ್ತು ಟಯರ್–3 ನಗರಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮವು ವೇಗ ಪಡೆದುಕೊಳ್ಳ ಲಿದ್ದು, ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆ ಇದೆ’ ಎಂದು ಅಂಚೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕಿ (ಸಿಸಿಎಸ್ ಮತ್ತು ಆರ್‌ಬಿ) ಮನೀಷಾ ಬನ್ಸಾಲ್ ಬಾದಲ್ ಹೇಳಿದ್ದಾರೆ.
- ಭಾರತದ ರಫ್ತಿಗೆ ಮೆಕ್ಸಿಕೊ ಸುಂಕ ಪೆಟ್ಟು: ಎಲೆಕ್ಟ್ರಾನಿಕ್ಸ್, ಲೋಹ, ವಾಹನ, ಜವಳಿ ಉದ್ಯಮದ ಮೇಲೆ ಪರಿಣಾಮ
ಸಂದರ್ಭ: ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಮೆಕ್ಸಿಕೊ ಸುಂಕ ಹೆಚ್ಚಳ ಮಾಡಿರುವುದು, ಭಾರತದ ಎಲೆಕ್ಟ್ರಾನಿಕ್ಸ್, ಲೋಹ, ವಾಹನಗಳ ಬಿಡಿಭಾಗಗಳು, ರಾಸಾಯನಿಕ ರಫ್ತಿನ ಮೇಲೆ ಭಾರಿ ಹೊಡೆತ ಬೀಳಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

- 2026ರ ಜನವರಿ 1ರಿಂದ ಪರಿಷ್ಕೃತ ಸುಂಕ ಜಾರಿಗೆ ಬರಲಿದೆ. ಕೆಲವು ಸರಕುಗಳಿಗೆ ಕನಿಷ್ಠ ಶೇ 5ರಿಂದ ಗರಿಷ್ಠ ಶೇ 50ರವರೆಗೆ ಸುಂಕ ಹೆಚ್ಚಿಸಲಾಗಿದೆ.
- ಭಾರತದಿಂದ ಮೆಕ್ಸಿಕೊಕ್ಕೆ ರಫ್ತಾಗುವ ಸರಕುಗಳಲ್ಲಿ ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳ ಪಾಲು ಗರಿಷ್ಠ ಮಟ್ಟದಲ್ಲಿದೆ. ಆಮದು ಸುಂಕ ಹೆಚ್ಚಳವು ಈ ಕ್ಷೇತ್ರದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (ಜಿಟಿಆರ್‌ಐ) ಹೇಳಿದೆ.
- ಭಾರತದಿಂದ ಆಮದು ಮಾಡಿ ಕೊಳ್ಳುವ ಪ್ರಯಾಣಿಕ ವಾಹನಗಳಿಗೆ ಮೆಕ್ಸಿಕೊ ಸದ್ಯ ಶೇ 20ರಷ್ಟು ಸುಂಕ ವಿಧಿಸುತ್ತಿದೆ. 2026ರ ಜನವರಿಯಿಂದ ಇದು ಶೇ 35ಕ್ಕೆ ಏರಿಕೆಯಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು 938.35 ದಶಲಕ್ಷ ಡಾಲರ್ ಮೊತ್ತದ (₹8,500 ಕೋಟಿ ) ವಾಹನಗಳನ್ನು ಮತ್ತು 507.26 ದಶಲಕ್ಷ ಡಾಲರ್ (₹4,595 ಕೋಟಿ) ಮೊತ್ತದ ವಾಹನಗಳ ಬಿಡಿಭಾಗಗಳನ್ನು ಮೆಕ್ಸಿಕೊಕ್ಕೆ ರಫ್ತು ಮಾಡಿತ್ತು.
- ಭಾರತದ ಜವಳಿ, ಪ್ಲಾಸ್ಟಿಕ್, ಸಾವಯವ ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್, ಔಷಧ, ಎಲೆಕ್ಟ್ರಿಕ್ ವಸ್ತುಗಳ ರಫ್ತಿನ ಮೇಲೆ ಮೆಕ್ಸಿಕೊದ ಆಮದು ಸುಂಕ ಹೆಚ್ಚಳವು ಪರಿಣಾಮ ಬೀರಲಿದೆ ಎಂದು ಭಾರತೀಯ ರಫ್ತುದಾರರ ಒಕ್ಕೂಟದ (ಎಫ್‌ಐಇಒ) ಪ್ರಧಾನ ನಿರ್ದೇಶಕ ಅಜಯ್ ಶಾಹಿ ಅಭಿಪ್ರಾಯಪಟ್ಟಿದ್ದಾರೆ.
- ಭಾರತವು ಕಳೆದ ಹಣಕಾಸು ವರ್ಷದಲ್ಲಿ ಮೆಕ್ಸಿಕೊಕ್ಕೆ 284.53 ದಶಲಕ್ಷ ಡಾಲರ್ ಮೊತ್ತದ (₹2,577 ಕೋಟಿ) ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಜನವರಿಯಿಂದ ಸ್ಮಾರ್ಟ್‌ಫೋನ್ ಆಮದು ಸುಂಕವು ಶೇ 35ಕ್ಕೆ ಏರಿಕೆಯಾಗಲಿದೆ. ಇದು ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಿಗೆ ಪೆಟ್ಟು ನೀಡಲಿದೆ. ಭಾರತದಿಂದ ಕೈಗಾರಿಕಾ ಯಂತ್ರೋಪಕರಣಗಳನ್ನು ಮೆಕ್ಸಿಕೊ ಆಮದು ಮಾಡಿಕೊಳ್ಳುತ್ತಿದ್ದು, ಈ ಉದ್ಯಮದ ಮೇಲೂ ಶೇ 35ರಷ್ಟು ಸುಂಕ ಹೆಚ್ಚಳವು ಬರೆ ಎಳೆಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
- ಚಿಲ್ಲರೆ ಹಣದುಬ್ಬರ ಹೆಚ್ಚಳ
ಸಂದರ್ಭ: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ನವೆಂಬರ್ ತಿಂಗಳಿನಲ್ಲಿ ಶೇ 0.71ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ.
- ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 0.25ಕ್ಕೆ ಇಳಿಕೆಯಾಗಿತ್ತು. ಜಿಎಸ್‌ಟಿ ದರ ಪರಿಷ್ಕರಣೆಯು ಇಳಿಕೆಗೆ ನೆರವಾಗಿತ್ತು. ಹಣದುಬ್ಬರವು ಸತತ ಎರಡನೇ ತಿಂಗಳೂ ಶೇ 1ರೊಳಗೆ ಇದೆ.
- ಆಹಾರ ಪದಾರ್ಥಗಳ ಹಣದುಬ್ಬರವು ನವೆಂಬರ್‌ನಲ್ಲಿ ಶೇ 3.91ರಷ್ಟಿದೆ. ತರಕಾರಿಗಳು, ಮೊಟ್ಟೆ, ಮಾಂಸ ಮತ್ತು ಮೀನು, ಮಸಾಲೆ ಪದಾರ್ಥಗಳು, ಇಂಧನ ಬೆಲೆಯಲ್ಲಿನ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣ ಎಂದು ತಿಳಿಸಿದೆ.
- ನಿವೃತ್ತಿ ಹಿಂಪಡೆದ ವಿನೇಶ್: ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ
ಸಂದರ್ಭ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡೆಗಳಲ್ಲಿ ಪದಕಕ್ಕಾಗಿ ಮತ್ತೊಂದು ಪ್ರಯತ್ನ ನಡೆಸಲು ತಾವು ನಿವೃತ್ತಿಯಿಂದ ಹೊರಬರುವುದಾಗಿ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ. ‘ನನ್ನೊಳಗಿನ ಕಿಚ್ಚು ಇನ್ನೂ ಆರಿಲ್ಲ. ದಣಿವು ಮತ್ತು ಗದ್ದಲದಲ್ಲಿ ಅದು ಹುದುಗಿಹೋಗಿತ್ತು’ ಎಂದು ಹೇಳಿದ್ದಾರೆ.
- 2024ರ ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಸ್ಪರ್ಧೆಗೆ ಮೊದಲು ನಿಗದಿಗಿಂತ 100 ಗ್ರಾಂ ಹೆಚ್ಚುವರಿ ತೂಕ ಇದ್ದ ಕಾರಣ ಅವರನ್ನು ಚಿನ್ನದ ಪದಕದ ಸ್ಪರ್ಧೆಯ ವೇಳೆ ಅನರ್ಹಗೊಳಿಸಲಾ ಗಿತ್ತು. 31 ವರ್ಷ ವಯಸ್ಸಿನ ವಿನೇಶ್ ತೀವ್ರ ನಿರಾಸೆಗೆ ಒಳಗಾಗಿ, ಕೆಲವೇ ದಿನಗಳ ನಂತರ ನಿವೃತ್ತಿ ಪ್ರಕಟಿಸಿದ್ದರು.
- ತಮಗೆ ಜಂಟಿಯಾಗಿ ಬೆಳ್ಳಿ ಪದಕ ನೀಡುವಂತೆ ವಿನೇಶ್ ಅವರು ಕ್ರೀಡಾ ನ್ಯಾಯಮಂಡಳಿಗೆ (ಸಿಎಎಸ್) ಮೊರೆಹೋಗಿದ್ದರು. ಆದರೆ ಸಿಎಎಸ್ ಇದಕ್ಕೆ ಒಪ್ಪಿರಲಿಲ್ಲ. ಇದರ ಬೆನ್ನಲ್ಲೇ ವಿನೇಶ್ ಅವರು ಕುಸ್ತಿಗೆ ವಿದಾಯ ಹೇಳಿದ್ದರು. ರಾಜಕೀಯಕ್ಕೆ ಸೇರ್ಪಡೆ ಗೊಂಡ ಅವರು ಹರಿಯಾಣದ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕಿಯಾಗಿದ್ದರು.
- ‘ನಿಮ್ಮ ಪಾಲಿಗೆ ಪ್ಯಾರಿಸ್ ಕೂಟ ಕೊನೆಯೇ ಎಂದು ಜನ ಕೇಳುತ್ತಲೇ ಬಂದಿದ್ದರು. ನನ್ನ ಬಳಿ ಉತ್ತರವಿರಲಿಲ್ಲ. ನಾನು ಒತ್ತಡ, ನಿರೀಕ್ಷೆಯ ಭಾರ ಮತ್ತು ನನ್ನದೇ ಮಹತ್ವಾಕಾಂಕ್ಷೆಯ ಪರಿಣಾಮ ಮ್ಯಾಟ್ ತೊರೆಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿ ಈಗ ನಿರಾಳಭಾವ ಮೂಡಿದೆ’ ಎಂದು ವಿನೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
- ಸೋಮವೀರ್ ರಾಠಿ ಅವರನ್ನು ವಿವಾಹವಾಗಿರುವ ವಿನೇಶ್ ಜುಲೈನಲ್ಲಿ ಗಂಡುಮಗುವಿಗೆ ತಾಯಿಯಾಗಿದ್ದರು.
- ‘ಹೊಸ ಸ್ಪೂರ್ತಿಯೊಡನೆ ಲಾಸ್ ಏಂಜಲೀಸ್ 28 ಕ್ರೀಡೆಗಳಿಗೆ ಹೊಸದಾಗಿ ಪಯಣ ಆರಂಭಿಸುವುದಾಗಿ ವಿನೇಶ್ ತಿಳಿಸಿದ್ದಾರೆ.
- ‘ಅಂಜಿಕೆಯಿಲ್ಲದ ಹೃದಯ, ಬತ್ತದ ಸ್ಫೂರ್ತಿಯೊಡನೆ ಲಾಸ್ ಏಂಜಲೀಸ್ 2028ರತ್ತ ಹೆಜ್ಜೆಯಿಡುತ್ತಿದ್ದೇನೆ. ಈ ಬಾರಿ ನಾನೊಬ್ಬಳೇ ಇಲ್ಲ, ನನ್ನ ಮಗನೂ ನನ್ನ ಜೊತೆಯಲ್ಲಿದ್ದಾನೆ. ಲಾಸ್ ಏಂಜಲೀಸ್ ಹಾದಿಯಲ್ಲಿ ನನ್ನ ಅತಿ ದೊಡ್ಡ ಪ್ರೇರಣೆ ಮತ್ತು ನನ್ನ ಪುಟ್ಟ ಚಿಯರ್‌ಲೀಡರ್ ಇದ್ದಾನೆ’ ಎಂದು ಹೇಳಿದ್ದಾರೆ.
- ಒಲಿಂಪಿಕ್ ಸ್ಪರ್ಧೆಯೊಂದರ ಚಿನ್ನದ ಪದಕದ ಸ್ಪರ್ಧೆಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಶ್ರೇಯ ಈಗಾಗಲೇ ಅವರದಾಗಿದೆ. ಮೂರು ಬಾರಿಯ ಒಲಿಂಪಿಯನ್ ಆಗಿರುವ ವಿನೇಶ್, ಏಷ್ಯನ್ ಕ್ರೀಡೆ ಮತ್ತು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
- ಮೆಸ್ಸಿ ಭಾರತ ಪ್ರವಾಸ ಇಂದಿನಿಂದ
ಸಂದರ್ಭ: ಫುಟ್ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಆರಂಭವಾಗಲಿದೆ.
- ‘ಗೋಟ್ (GOAT – Greatest Of All Time) ಟೂರ್ ಆಫ್ ಇಂಡಿಯಾ 2025’ ಕಾರ್ಯಕ್ರಮದ ಅಂಗವಾಗಿ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಅವರು ನಾಲ್ಕು ನಗರಗಳಿಗೆ (ಕೋಲ್ಕತ್ತ, ಅಹಮದಾಬಾದ್, ಮುಂಬೈ ಮತ್ತು ನವದೆಹಲಿ) ಭೇಟಿ ನೀಡುವರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ಯೊಂದಿಗೆ 38 ವರ್ಷದ ಸೂಪರ್ ಸ್ಟಾರ್ ಆಟಗಾರನ ಭಾರತ ಪ್ರವಾಸ ಮುಕ್ತಾಯವಾಗಲಿದೆ.
- ಕೋಲ್ಕತ್ತದಲ್ಲಿ ನಿರ್ಮಿಸಲಾಗಿರುವ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ಶನಿವಾರ ಬೆಳಿಗ್ಗೆ ಮೆಸ್ಸಿ ಅವರು ವರ್ಚುವಲ್ ಆಗಿ ಅನಾವರಣ ಮಾಡುವರು. ಭದ್ರತಾ ಕಾರಣದಿಂದಾಗಿ ಅವರು ಖುದ್ದಾಗಿ ಹಾಜರಾಗುತ್ತಿಲ್ಲ.
- ಮೆಸ್ಸಿ ಅವರು ಕೋಲ್ಕತ್ತದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಅವರು ಪ್ರದರ್ಶನ ಪಂದ್ಯವನ್ನು ಆಡಲಿದ್ದಾರೆ.












