ಜಗತ್ತಿನಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿರುವ ವೆನೆಜುವೆಲಾ, ಸುಮಾರು ಮೂರು ಶತಮಾನ ಸ್ಪೇನ್‌ನ ವಸಾಹತುವಾಗಿತ್ತು.ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದನಂತರನೆರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದ, ಸರ್ವಾಧಿಕಾರ, ಸೇನಾ ದಂಗೆಯಿಂದ ತೆವಳುತ್ತಾ ಸಾಗುತ್ತಿದ್ದವೆನೆಜುವೆಲಾಗೆ ಸ್ಥಿರತೆ ತಂದುಕೊಟ್ಟು, ಅದನ್ನು ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ಮಾಡಿದ್ದು ಹೂಗೊ ಚಾವೇಸ್.ಎಡಪಂಥೀಯರಾಗಿದ್ದಚಾವೇಸ್, ಉದ್ದಿಮೆಗಳ ರಾಷ್ಟ್ರೀಕರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡು ಆರ್ಥಿಕ ಬೆಳವಣಿಗೆ ಸಾಧಿಸಿದರು. ಆದರೆ, ಸರ್ವಾಧಿಕಾರಿ ಎನ್ನುವ ನೆಪದಲ್ಲಿ ದೇಶದ ಒಳಗೆ ಮತ್ತು ಹೊರಗೆ ಅವರ ವಿರೋಧಿಗಳು ಹೆಚ್ಚಾದರು. ದೇಶದ ಹೊರಗಿನ ವಿರೋಧಿಗಳಲ್ಲಿ ಅಮೆರಿಕ ಪ್ರಮುಖವಾದರೆ, ಒಳಗಿನ ವಿರೋಧಿಗಳಲ್ಲಿ ಮಾರಿಯಾ ಕೊರಿನಾ ಮಚಾದೊ ಪ್ರಮುಖರಾಗಿದ್ದರು. ಅಮೆರಿಕದ ವಿರೋಧಕ್ಕೆ ಕಾರಣವಾಗಿದ್ದು ಇಂಧನ ವ್ಯಾಪಾರ.


ಅಮೆರಿಕ ಕಣ್ಣು ತೈಲದ ಮೇಲೆ: ವೆನೆಜುವೆಲಾದ ಅನಿಲ ಸಂಪನ್ಮೂಲಗಳ ಮೇಲೆ ಅಮೆರಿಕ ದೀರ್ಘಕಾಲದಿಂದಲೂ ಕಣ್ಣಿಟ್ಟಿದೆ. 1920ರಿಂದಲೂ ಅಮೆರಿಕದ ಕಂಪನಿಗಳು ವೆನೆಜುವೆಲಾದಲ್ಲಿ ತೈಲವ್ಯಾಪಾರ ಮಾಡುತ್ತಿದ್ದವು. 1976ರಲ್ಲಿ ವೆನೆಜುವೆಲಾದಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ಮತ್ತು ನೈಸರ್ಗಿಕ ಅನಿಲ ಕಂಪನಿಯನ್ನು ಸ್ಥಾಪಿಸಿದರೂ ಅಮೆರಿಕವು ಪಾಲುದಾರಿಕ ಮತ್ತು ಇತರ ಪರೋಕ್ಷ ವಿಧಾನಗಳಲ್ಲಿ ತೈಲ ವ್ಯಾಪಾರ ಮುಂದುವರಿಸಿತ್ತು.ಆದರೆ, ಚಾವೇಸ್ ಅಧ್ಯಕ್ಷರಾದ (1998) ನಂತರ ರಾಷ್ಟ್ರೀಕರಣದಿಂದ ನಿಯಮಗಳು ಬಿಗಿಯಾಗಿ, ಅಮೆರಿಕ ವೆನೆಜುವೆಲಾದ ತೈಲ ಮಾರುಕಟ್ಟೆಯಿಂದ ಹೊರಬರಲೇಬೇಕಾಯಿತು. ಕಮ್ಯುನಿಸ್ಟ್ ವೆನೆಜುವೆಲಾ ಕಮ್ಯುನಿಸ್ಟ್ ಚೀನಾದತ್ತ ವಾಲಿತು. ಚೀನಾಕ್ಕೆ ತೈಲರಫ್ತು ಮಾಡತೊಡಗಿತು.ಅಮೆರಿಕವು ವೆನೆಜುವೆಲಾ ಮೇಲೆ ಹಲವು ರೀತಿಯ ನಿರ್ಬಂಧ ಹೇರಿದ್ದಲ್ಲದೇ ಆಗಿನಿಂದಲೂ ವೆನೆಜುವೆಲಾ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇತ್ತು.
ಚಾವೇಸ್ ನಂತರ ಅವರ ಉತ್ತರಾಧಿಕಾರಿಯಾಗಿ ಬಂದ ನಿಕೊಲಸ್ ಮಡೂರೊ ಕೂಡ ಚಾವೇಸ್ ಅವರ ಅಮೆರಿಕ ವಿರೋಧಿ ನಿಲುವನ್ನು ಮುಂದುವರಿಸಿದರು. ಆದರೆ, ತೈಲದ ಬೆಲೆ ಏರಿಳಿತ, ವಿರೋಧಿಗಳ ಪಿತೂರಿ ಮುಂತಾದ ಕಾರಣಗಳಿಂದ ವೆನೆಜುವೆಲಾದ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಿತು. ಆಹಾರ ಧಾನ್ಯಗಳ ಬೆಲೆ ಏರಿಕೆ. ಬಡತನ ಹೆಚ್ಚಾಯಿತು. ಲಕ್ಷಾಂತರ ಮಂದಿ ದೇಶ ತೊರೆದರು. ಇಪ್ಪಾದರೂ ಸತತ ಮೂರು ಚುನಾವಣೆಗಳಲ್ಲಿ (2013, 2018. 2024) ಜಯಗಳಿಸಿ ಅಧ್ಯಕ್ಷರಾಗಿ ಮುಂದುವರಿದರು.ಅವರು ಚುನಾವಣೆಗಳನ್ನು ಆಕ್ರಮವಾಗಿ ಗೆಲ್ಲುತ್ತಿದ್ದಾರೆ ಎನ್ನುವುದು ವಿರೋಧಿಗಳವಾದವಾಗಿತ್ತು.
ಚೀನಾ ಪ್ರಭಾವ ತಗ್ಗಿಸುವ ಉದ್ದೇಶ
ಭೌಗೋಳಿಕವಾಗಿ ಪಶ್ಚಿಮದ ರಾಷ್ಟ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದು ಅಮೆರಿಕದ ಈಕ್ರಮದ ಹಿಂದಿನ ಮತ್ತೊಂದು ಕಾರಣವಾದರೆ, ದಕ್ಷಿಣ ಅಮೆರಿಕದ ವ್ಯಾಪ್ತಿಯಲ್ಲಿ ಚೀನಾ ಮತ್ತು ರಷ್ಯಾ ಪ್ರಭಾವವನ್ನು ತಗ್ಗಿಸುವುದು ಮಗದೊಂದು ಕಾರಣ.
ವೆನೆಜುವೆಲಾ ಸೇರಿದಂತೆ ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಚೀನಾವು ಬೆಲ್ಸ್ ಆ್ಯಂಡ್ ರೋಡ್ ಇನಿಷಿಯೇಟಿವ್ ಮೂಲಕ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ತನ್ನ ಮಹತ್ವಾಕಾಂಕ್ಷೆ ಯೋಜನೆಗೆ ಈ ಭಾಗದ 24 ರಾಷ್ಟ್ರಗಳು ಸಹಿ ಹಾಕಿವೆ ಎಂದು ಚೀನಾ ಈ ಹಿಂದೆ ಹೇಳಿಕೊಂಡಿತ್ತು. ಇಲ್ಲಿನ ಹಲವು ದೇಶಗಳಿಗೆ ಚೀನಾ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲೊಂದು. ಚೀನಾದೊಂದಿಗೆ ಪಾಲುದಾರಿಕೆ ಇದ್ದಹೊರತಾಗಿಯೂ ಈ ವಲಯದ ಹಲವು ರಾಷ್ಟ್ರಗಳು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ, ವೆನೆಜುವೆಲಾ ಮತ್ತು ಕ್ಯೂಬಾ ಅಮೆರಿಕದ ವಿರುದ್ಧ ತೊಡೆ ತಟ್ಟಿದ್ದವು.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಕ್ಯೂಬಾಕ್ಕಿಂತಲೂ ವೆನೆಜುವೆಲಾವನ್ನೇ ಹೆಚ್ಚು ಗುರಿಯಾಗಿಸಿಕೊಂಡಿತ್ತು.
ಅಮೆರಿಕದಿಂದ ದೂರವಾದ ಬಳಿಕ ಚೀನಾವು ವೆನೆಜುವೆಲಾಕ್ಕೆ ಹತ್ತಿರವಾಗಿತ್ತು.
ಚೀನಾವು ಅಲ್ಲಿನ ಇಂಧನ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ವೆನೆಜುವೆಲಾವು ತಾನು ಉತ್ಪಾದಿಸುವ ಒಟ್ಟು ತೈಲದಲ್ಲಿ ಶೇ 80ರಷ್ಟನ್ನು ಚೀನಾಕ್ಕೆ ಮಾರುತ್ತಿದೆ. 2024ರಲ್ಲಿ ಅಮೆರಿಕವು ವೆನೆಜುವೆಲಾದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ಚೀನಾವು ಹೂಡಿಕೆಯನ್ನು ಸ್ವಲ್ಪ ಕಡಿಮೆ ಮಾಡಿದ್ದರೂ ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮುಂದುವರಿದಿತ್ತು.
ಚೀನಾ ಕಾನ್‌ಕೋರ್ಡ್ ರಿಸೋರ್ಸಸ್ ಕಾರ್ಪೊರೇಷನ್ ಎಂಬ ಖಾಸಗಿ ಕಂಪೆನಿಯುವೆನೆಜುವೆಲಾದ ಸರ್ಕಾರಿ ಸ್ವಾಮ್ಯದತೈಲ ಕಂಪನಿಯೊಂದಿಗೆ ಮ್ಯಾರಕ್ಕೆಬೊ ಸರೋವರದಲ್ಲಿ ಎರಡು ತೈಲ ಉತ್ಪಾದನಾ ಘಟಕ ಅಭಿವೃದ್ಧಿಪಡಿಸಲು 100 ಕೋಟಿ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.
ವೆನೆಜುವೆಲಾ ಸಂಕಷ್ಟ: ಭಾರತದ ಇಂಧನ ಭದ್ರತೆಗೆ ಪರಿಣಾಮವಿಲ್ಲ
2025ರ ನವೆಂಬರ್‌ವರೆಗೆ ನಡೆದ ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ತೈಲ ಆಮದುಗಳಲ್ಲಿ ವೆನೆಜುವೆಲಾ ಕ್ರೂಡ್ ಕೇವಲ 0.3% ಮಾತ್ರ. 2019ರಿಂದಲೇ ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ವೆನೆಜುವೆಲಾದಿಂದ ತೈಲ ಆಮದು ಕಡಿಮೆ ಮಾಡುತ್ತಿದೆ.
ಅಮೆರಿಕದ ದಾಳಿ ಮತ್ತು ಭಾರತದ ಸ್ಥಿತಿ
ಅಮೆರಿಕವು ವೆನೆಜುವೆಲಾದ ಮೇಲೆ ನಡೆಸಿದ ದಾಳಿ ಭಾರತದ ಇಂಧನ ಭದ್ರತೆಗೆ ನೇರ ಪರಿಣಾಮ ಬೀರುವ ಸಾಧ್ಯತೆ ಇಲ್ಲವೆಂದು ಇತ್ತೀಚಿನ ಅಂಕಿಅಂಶಗಳು ತೋರಿಸುತ್ತವೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿ: 2025ರ ನವೆಂಬರ್‌ವರೆಗೆ ಭಾರತವು ವೆನೆಜುವೆಲಾದಿಂದ 255.3 ಮಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿದೆ. ಇದು ಒಟ್ಟು ಆಮದುಗಳಲ್ಲಿ ಕೇವಲ 0.3%.
2013ರ ಸ್ಥಿತಿ: ಆ ಸಮಯದಲ್ಲಿ ಭಾರತವು ವೆನೆಜುವೆಲಾದಿಂದ 13 ಬಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿತ್ತು.
2019ರಿಂದ: ಅಮೆರಿಕದ ನಿರ್ಬಂಧಗಳು ಮತ್ತು ದ್ವಿತೀಯ ನಿರ್ಬಂಧಗಳ ಭೀತಿಯಿಂದ ಭಾರತವು ವೆನೆಜುವೆಲಾದೊಂದಿಗೆ ವ್ಯಾಪಾರವನ್ನು ಕಡಿಮೆ ಮಾಡಿತು.
“ಕಡಿಮೆ ವ್ಯಾಪಾರ ಪ್ರಮಾಣ, ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳು ಮತ್ತು ಭೌಗೋಳಿಕ ಅಂತರ—ಒಟ್ಟಾಗಿ ದೃಢಪಡಿಸುತ್ತದೆ ವೆನೆಜುವೆಲಾದ ಇತ್ತೀಚಿನ ಬೆಳವಣಿಗೆಗಳು ಭಾರತದ ಆರ್ಥಿಕತೆ ಅಥವಾ ಇಂಧನ ಭದ್ರತೆಗೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ,” ಎಂದು ವಿಶ್ಲೇಷಕರು ಹೇಳಿದ್ದಾರೆ.
OPEC ಸದಸ್ಯತ್ವ
ವೆನೆಜುವೆಲಾ OPEC (Organization of the Petroleum Exporting Countries) ಸದಸ್ಯ ರಾಷ್ಟ್ರ. ಈ ಗುಂಪು ಜಾಗತಿಕ ತೈಲ ಮಾರುಕಟ್ಟೆಯನ್ನು ಬಹುಮಟ್ಟಿಗೆ ನಿಯಂತ್ರಿಸುತ್ತದೆ.
ವೆನೆಜುವೆಲಾ ಪ್ರಸ್ತುತ ಇತರ ರಾಷ್ಟ್ರಗಳಿಗಿಂತ ಕಡಿಮೆ ಪ್ರಮಾಣದ ಕ್ರೂಡ್ ತೈಲವನ್ನು ಉತ್ಪಾದಿಸುತ್ತದೆ.
OPEC ಅಂಕಿಅಂಶಗಳ ಪ್ರಕಾರ, ವೆನೆಜುವೆಲಾ OPEC ಒಟ್ಟು ತೈಲ ರಫ್ತುಗಳಲ್ಲಿ 3.5% ಮತ್ತು ಜಾಗತಿಕ ತೈಲ ಸರಬರಾಜಿನಲ್ಲಿ 1% ಮಾತ್ರ.
ಭಾರವಾದ ತೈಲ (Heavy Oil)
ವೆನೆಜುವೆಲಾದ ತೈಲವು ಭಾರವಾದ ಸ್ವರೂಪ ಹೊಂದಿರುವುದರಿಂದ ಅದನ್ನು ಸಂಸ್ಕರಿಸಲು ವಿಶೇಷ ಶುದ್ಧೀಕರಣಾಲಯಗಳು ಅಗತ್ಯ. ಆದರೆ ಇಂತಹ ಶುದ್ಧೀಕರಣಾಲಯಗಳು ಬಹುತೇಕ ರಾಷ್ಟ್ರಗಳಲ್ಲಿ ಲಭ್ಯವಿಲ್ಲ.
ಅಮೆರಿಕದ ನಿರ್ಬಂಧಗಳ ಪರಿಣಾಮವಾಗಿ ವೆನೆಜುವೆಲಾದ ತೈಲದ ಜಾಗತಿಕ ಸರಬರಾಜು ಕುಸಿದಿದೆ.
ಪ್ರಸ್ತುತ ಉತ್ಪಾದನೆಯ ಹೆಚ್ಚಿನ ಭಾಗವನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ.