Fri. Feb 6th, 2026

ಮಾನವ-ವನ್ಯಜೀವಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ.

ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಈ ಕೇಂದ್ರಗಳಿಗೆ ಚಾಲನೆ ನೀಡಿದರು.

‘ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಿಂತ, ಅಂತಹ ಸ್ಥಿತಿ ತಲೆದೋರುವುದನ್ನು ತಡೆಯುವುದೇ ಹೆಚ್ಚು ಪರಿಣಾಮಕಾರಿ. ತಡೆ ಮತ್ತು ನಿಯಂತ್ರಣ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡೇ ಈ ಕೇಂದ್ರಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಕ್ಯಾಮೆರಾ, ಜಿಪಿಎಸ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘ಅರಣ್ಯ ಪ್ರದೇಶದ ಹೊರಗೆ ಕಾಡುಪ್ರಾಣಿಗಳು ಓಡಾಡುತ್ತಿರುವುದುಸಾರ್ವಜನಿಕರ ಗಮನಕ್ಕೆ ಬಂದರೆ, ಅರಣ್ಯ ಇಲಾಖೆ ಸಹಾಯವಾಣಿ 1926ಕ್ಷೆಕರೆ ಮಾಡಿ ಮಾಹಿತಿ ನೀಡಬೇಕು. ಆ ಕರೆಯ ಮಾಹಿತಿಯು ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಕ್ಕೆ ಹೋಗಲಿದೆ. ಅಲ್ಲಿಂದ ಸಂಬಂಧಿತ ವಿಭಾಗೀಯ ಅಥವಾ ವಲಯ ಮಟ್ಟದ ನಿಯಂತ್ರಣ ಕೊಠಡಿಗೆ ನಿರ್ದೇಶನ ರವಾನೆಯಾಗಲಿದೆ’ ಎಂದು ವಿವರಿಸಿದರು.

‘ಆನಂತರ, ವನ್ಯಜೀವಿಗಳನ್ನು ಅರಣ್ಯ ಪ್ರದೇಶಕ್ಕೆ ಮರಳಿ ಕಳುಹಿಸುವ, ಮಾನವ ವನ್ಯಜೀವಿ ಸಂಘರ್ಷ ಉಂಟಾಗುವುದನ್ನು ತಡೆಯುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.ಸಮಸ್ಯೆ ಬಗೆಹರಿಯುವವರೆಗೂ ರಾಜ್ಯಮಟ್ಟದ ಕೇಂದ್ರದ ಅಧಿಕಾರಿಗಳು, ನಿಗಾ ಇರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

11 ವಿಭಾಗೀಯ ಕೇಂದ್ರಗಳು: ರಾಜ್ಯದಲ್ಲಿ ಈಚೆಗಷ್ಟೇ ವಿಭಾಗೀಯ ಮಟ್ಟದ ನಾಲ್ಕು ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ ಇನ್ನೂ ಏಳು ವಿಭಾಗೀಯ ಮಟ್ಟದ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅವುಗಳ ಸಂಖ್ಯೆ 11ರಷ್ಟಾಗಿದೆ. ಈ ಹನ್ನೊಂದೂ ಕೇಂದ್ರಗಳು ಬೆಂಗಳೂರಿನ ಅರಣ್ಯ ಭವನದಲ್ಲಿರುವ ರಾಜ್ಯಮಟ್ಟದ ಕೇಂದ್ರದ ನಿರ್ದೇಶನದೊಂದಿಗೆ ಕಾರ್ಯನಿರ್ವಹಿಸಲಿವೆ. 1926 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ, ಸಂಬಂಧಪಟ್ಟ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments