- ₹6 ಲಕ್ಷ ಕೋಟಿ ಸಾಲ ರೈಟ್ಆಫ್
ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಕಳೆದ ಐದೂವರೆ ವರ್ಷಗಳಲ್ಲಿ ಒಟ್ಟು ₹6.15 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.
- ‘ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ರೈಟ್‌ಆಫ್ ಮಾಡಿರುವ ಮೊತ್ತವು ಕಳೆದ ಐದು ಹಣಕಾಸು ವರ್ಷಗಳಲ್ಲಿ ಹಾಗೂ ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ 30ರವರೆಗೆ ₹6.15 ಲಕ್ಷ ಕೋಟಿಯಷ್ಟಾಗಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
- ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು 2022–23ರ ನಂತರದಲ್ಲಿ ಬಂಡವಾಳದ ನೆರವು ಒದಗಿಸಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿವೆ. ಅವು ಲಾಭದಾಯಕವಾಗಿ ನಡೆಯುತ್ತಿವೆ, ಬಂಡವಾಳದ ಸ್ಥಿತಿಯನ್ನು ಸುಧಾರಿಸಿಕೊಂಡಿವೆ ಎಂದು ಚೌಧರಿ ಹೇಳಿದ್ದಾರೆ.
- ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈಗ ಬಂಡವಾಳದ ಅಗತ್ಯಗಳಿಗಾಗಿ ಮಾರುಕಟ್ಟೆ ಮೂಲಗಳನ್ನು ನೆಚ್ಚಿಕೊಳ್ಳುತ್ತಿವೆ, ಆಂತರಿಕ ನಿಧಿಯನ್ನು ಬಳಸಿಕೊಳ್ಳುತ್ತಿವೆ. ಅವು 2022ರ ಏಪ್ರಿಲ್ 1ರ ನಂತರದಲ್ಲಿ ಈಕ್ವಿಟಿ ಮತ್ತು ಸಾಲಪತ್ರಗಳ ಮೂಲಕ ಬಂಡವಾಳ ಮಾರುಕಟ್ಟೆ ಗಳಿಂದ ಒಟ್ಟು ₹1.79 ಲಕ್ಷ ಕೋಟಿ ಸಂಗ್ರಹಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
- ಬ್ಯಾಂಕ್‌ಗಳು ತಮ್ಮ ಆಡಳಿತ ಮಂಡಳಿ ಅನುಮೋದನೆ ನೀಡಿದ ನಿಯಮ ಹಾಗೂ ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ರೈಟ್‌ಆಫ್ ತೀರ್ಮಾನ ತೆಗೆದುಕೊಳ್ಳುತ್ತಿವೆ ಎಂದು ಸಚಿವರು ಹೇಳಿದ್ದಾರೆ. ಆದರೆ ರೈಟ್‌ಆಫ್ ಎಂದರೆ ಸಾಲ ಮನ್ನಾ ಅಲ್ಲ, ಸಾಲ ಮನ್ನಾ ಆಗುವುದಿಲ್ಲ, ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ ಬ್ಯಾಂಕ್‌ನ ಲೆಕ್ಕಪತ್ರಗಳಲ್ಲಿ ಎನ್‌ಪಿಎ ಪ್ರಮಾಣ ಕಡಿಮೆಯಾಗಿ ಕಾಣಿಸುತ್ತದೆ.
- ರೈಟ್‌ಆಫ್ ಆದ ಸಾಲಗಳ ವಸೂಲಿಯು ನಿರಂತರ ಪ್ರಕ್ರಿಯೆ. ಬ್ಯಾಂಕ್‌ಗಳು ತಮಗೆ ಲಭ್ಯವಿರುವ ವಿವಿಧ ಮಾರ್ಗಗಳ ಮೂಲಕ ವಸೂಲಾತಿ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ. ‘ಸರ್ಫೇಸಿ ಕಾಯ್ದೆ’ ಅಡಿ ಕ್ರಮ ಜರುಗಿಸುವುದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಎಲ್‌ಟಿ) ಮೊರೆ ಹೋಗುವುದು, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಕೆಲಸವನ್ನು ಅವು ಮಾಡುತ್ತವೆ ಎಂದು ವಿವರಿಸಿದ್ದಾರೆ.
- ವಸೂಲಾಗದ ಸಾಲಗಳಿಗೆ ಹಣ ತೆಗೆದಿರಿಸುವ ಕೆಲಸ ಆಗಿರುತ್ತದೆ. ಹೀಗಾಗಿ ರೈಟ್‌ಆಫ್ ಪ್ರಕ್ರಿಯೆಯ ಕಾರಣದಿಂದಾಗಿ ನಗದು ಹೊರಹರಿಯುವಿಕೆ ಇರುವುದಿಲ್ಲ. ಬ್ಯಾಂಕ್‌ನಲ್ಲಿ ನಗದು ಲಭ್ಯತೆ ಮೇಲೆ ಕೆಟ್ಟ ಪರಿಣಾಮ ಇರುವುದಿಲ್ಲ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.
- ಪಾಳುಬಿದ್ದಿದ್ದ ಭೂಮಿಯಲ್ಲಿ ಕಾಂಡ್ಲಾ ವನ
ಸಂದರ್ಭ: ಇಂಗಾಲ ಪ್ರಮಾಣ ಕುಗ್ಗಿಸಿದ್ದಕ್ಕೆ ರೈತರ ಖಾತೆಗೆ ‘ಕಾರ್ಬನ್ ಕ್ರೆಡಿಟ್’ ರೂಪದಲ್ಲಿ ನಗದು ಜಮೆ ಕಾಂಡ್ಲಾ ಕೃಷಿ ಪ್ರದೇಶವು ಮೀನು, ಸಿಗಡಿ, ಏಡಿ ಸೇರಿ ಜಲಚರಗಳ ಸಂತತಿ ಬೆಳೆಯಲು ಅನುಕೂಲಕರ.
- ರೈತರಿಗೆ ಉತ್ತಮ ಆದಾಯ ಸಿಗುತ್ತದೆ, ಕಾರ್ಯದರ್ಶಿ, ಸ್ನೇಹ ಕುಂಜ ಸಂಸ್ಥೆ
- ಹಲವು ದಶಕಗಳ ಹಿಂದೆ ಸಿಗಡಿ ಮೀನಿನ ಕೃಷಿಗೆ ಬಳಕೆಯಾಗಿ, ಪಾಳುಬಿದ್ದಿದ್ದ 600 ಎಕರೆ ವಿಸ್ತೀರ್ಣದ ಗಜನಿ ಭೂಮಿಯಲ್ಲಿ ಕಾಂಡ್ಲಾವನ ರೂಪುಗೊಂಡಿದೆ.
- ಹೊನ್ನಾವರದ ‘ಸ್ನೇಹ ಕುಂಜ’ ಸಂಸ್ಥೆಯು ಗಜನಿ ಭೂಮಿಯ ಒಡೆತನವುಳ್ಳ 250 ರೈತರನ್ನು ಬಳಸಿ ಕಾಂಡ್ಲಾ ಗಿಡಗಳನ್ನು ಬೆಳೆಸುವಂತೆ ಮಾಡಿದೆ. ಹೀಗೆ ಬೆಳೆಸಿದ ಗಿಡಗಳಿಂದ ಸಂಗ್ರಹವಾಗುವ ‘ಕಾರ್ಬನ್ ಕ್ರೆಡಿಟ್’ ಆದಾಯವನ್ನೂ ರೈತರಿಗೆ ನೀಡಲಾಗುತ್ತದೆ.
- ‘ಹಿಂದೆ ಕಗ್ಗ ತಳಿಯ ಭತ್ತ ಬೆಳೆಯುತ್ತಿದ್ದ ಪ್ರದೇಶದಲ್ಲಿ ಅಘನಾಶಿನಿ ನದಿಯ ಹಿನ್ನೀರು ಬಳಸಿ ಗಜನಿಗಳಲ್ಲಿ ಸಿಗಡಿ ಕೃಷಿ ನಡೆಸಲು ಉದ್ಯಮಿಗಳಿಗೆ ರೈತರು ಜಮೀನು ನೀಡಿದ್ದರು. ಬಿಳಿ ಚುಕ್ಕಿ ರೋಗ ಬಂದು ಸಿಗಡಿ ಕೃಷಿ ನಷ್ಟವಾಗಿತ್ತು. ಹೊಂಡಗಳಲ್ಲಿ ಮುಂದೆ ಕೃಷಿ ಸಾಧ್ಯವಾಗದೆ, ಹಲವು ದಶಕಗಳಿಂದ ಹಾಗೇ ಇದ್ದವು. ಇದೇ ಜಾಗವನ್ನು ಈಗ ಕಾಂಡ್ಲಾ ವನವಾಗಿ ರೂಪಿಸಲಾಗಿದೆ’ ಎಂದು ಸ್ನೇಹಕುಂಜ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ ತಿಳಿಸಿದರು.
- ‘ಕಾಂಡ್ಲಾ ಗಿಡಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಹೀರಿ ವಾತಾವರಣ ಶುದ್ಧಗೊಳಿಸುತ್ತವೆ. ಕಾಂಡ್ಲಾ ವನ ಪ್ರಮಾಣ ಹೆಚ್ಚಿದಷ್ಟು ಪರಿಸರದಲ್ಲಿ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರ್ಯಕ್ಕೆ ಹಿಮಾಲಯ ವೆಲ್‌ನೆಸ್ ಕಂಪನಿ ಮತ್ತು ವ್ಯಾಲ್ಯು ನೆಟ್ವರ್ಕ್ ವೆಂಚರ್ಸ್ ಎಂಬ ಏಜೆನ್ಸಿ ಮೂಲಕ ಪರಿಸರ ರಕ್ಷಣೆಗೆ ಕಾಂಡ್ಲಾ ಕೃಷಿ ಕೈಕೊಳ್ಳಲಾಗಿದೆ’ ಎಂದು ಹೇಳಿದರು.
- ‘ಪ್ರತಿ ವರ್ಷ 12 ಸಾವಿರ ಮೆಟ್ರಿಕ್ ಟನ್ ಇಂಗಾಲವನ್ನು ನೆಲದಡಿ ಹುದು ಗಿಸಿ ಪರಿಸರ ಶುದ್ಧ ಮಾಡಲು ರೈತರ ಜಮೀನು ಬಳಕೆ ಆಗುತ್ತದೆ. ಇದರಿಂದ ರೈತರಿಗೆ ಕಾರ್ಬನ್ ಕ್ರೆಡಿಟ್ ಹೆಸರಿನಲ್ಲಿ ಪ್ರತಿ ಎಕರೆಗೆ ₹6 ರಿಂದ ₹ 8 ಸಾವಿರ ಆದಾಯ ಸಿಗುತ್ತದೆ’ ಎಂದು ಅವರು ತಿಳಿಸಿದರು.
ರೈತರ 5 ಗುಂಪು ರಚನೆ
- ‘ಕುಮಟಾದ ಧಾರೇಶ್ವರದಿಂದ ಮಾದನಗೇರಿವರೆಗೆ 2020-21ರಿಂದ ರೈತರ ಪಾಳುಬಿದ್ದ ಗಜನಿ ಭೂಮಿಯಲ್ಲಿ ಕಾಂಡ್ಲಾ ಗಿಡ ನೆಡುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. 250 ರೈತರ ಜೊತೆ ಈ ಬಗ್ಗೆ ಒಪ್ಪಂದ ಮಾಡಿಕೊಂಡು ತಲಾ 50 ಜನರ ರೈತರ 5 ಗುಂಪು ರಚಿಸಲಾಗಿದೆ’ ಎಂದು ಸ್ನೇಹ ಕುಂಜ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ ತಿಳಿಸಿದರು.
- ‘ಕಾರ್ಬನ್ ಕ್ರೆಡಿಟ್ ಆದಾಯ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಸಮನಾಗಿ ಜಮೆ ಆಗುವಂತೆ ವ್ಯವಸ್ಥೆ ರೂಪಿಸಲಾಗಿದೆ. 2026ರ ಮಾರ್ಚ್‌ನಲ್ಲಿ ಮೊದಲ ಹಂತದ ಕಾರ್ಬನ್ ಕ್ರೆಡಿಟ್ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ’ ಎಂದರು.
- ‘ರೇರಾ ಆದೇಶ: ‘ಡಿಕ್ರಿ’ ಅಲ್ಲ’
ಸಂದರ್ಭ: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಆದೇಶಗಳು: ರೇರಾ ಆದೇಶಗಳು ಕಾನೂನು ವಿಶ್ಲೇಷಣಾ ವ್ಯಾಪ್ತಿಗೆ ಒಳಪಡುವುದಿಲ್ಲ. ರೇರಾ ಆದೇಶಗಳನ್ನು ಜಾರಿಗೊಳಿಸಲು ತಹಶೀಲ್ದಾರ್ ಸಂಪೂರ್ಣ ವಿಫಲವಾದಾಗ ಮಾತ್ರ ಸಕ್ಷಮ ಕೋರ್ಟ್ ಮೊರೆ ಹೋಗಬಹುದು ನ್ಯಾ.ಎಂ.ನಾಗಪ್ರಸನ್ನ.
- ‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯ ಗಳಲ್ಲಿ, ಅನುಷ್ಠಾನ ಕೋರಿಕೆ ಅರ್ಜಿ (ಎಕ್ಸಿಕ್ಯೂಷನ್ ಪಿಟಿಷನ್) ಸಲ್ಲಿಸುವ ಮೂಲಕ ಜಾರಿಗೆ ತರಲು ಆಗದು’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
- ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ‘ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್’ ಸಲ್ಲಿಸಿದ್ದ ಮೂರು ರಿಟ್ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ರಿಯಲ್ ಎಸ್ಟೇಟ್ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ರೇರಾ ಆದೇಶಗಳು ನಾಗರಿಕ ಸಂಹಿತೆ ಪ್ರಕ್ರಿಯೆಯಲ್ಲಿನ (ಸಿಪಿಸಿ) ‘ಡಿಕ್ರಿ’ ಅರ್ಥದ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂಬ ವಿಶೇಷ ಉಲ್ಲೇಖವನ್ನು ನಮೂದಿಸಿದೆ.
- ‘ಕಲಂ 40(1)ರ ಅಡಿ ರೇರಾ ವಿಧಿಸುವ ಪರಿಹಾರದ ಮೊತ್ತ ಅಥವಾ ದಂಡವನ್ನು ಬಡ್ಡಿ ಸಹಿತ ವಸೂಲು ಮಾಡಬಹುದು. ಅದನ್ನು ಭೂ ಕಂದಾಯ ಎಂದು ಪರಿಗಣಿಸಬಹುದು ಎಂದು ತಿಳಿಸಲಾಗಿದೆ. ಅಂತೆಯೇ, ಕಲಂ 79ರ ಅಡಿ ರೇರಾದ ಆದೇಶ ಮತ್ತು ದಾವೆಗಳನ್ನು ಪುರಸ್ಕರಿಸಲು ಸಿವಿಲ್ ಕೋರ್ಟ್‌ಗೆ ನಿರ್ಬಂಧವಿದೆ’ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
- ಬಿಲ್ಡರ್‌ಗಳ ಮನವಿ ತಿರಸ್ಕರಿಸಿದ್ದ ಸಿವಿಲ್ ಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ‘ಪ್ರತಿವಾದಿ ರೇರಾ ಕಂದಾಯ ಅಧಿಕಾರಿಗಳ ಮೂಲಕ ಆದೇಶ ಜಾರಿಗೆ ಇತರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಸ್ವತಂತ್ರವಾಗಿದೆ’ ಎಂದು ಸ್ಪಷ್ಟಪಡಿಸಿದೆ.
- ಪ್ರಕರಣವೇನು?: ಮನೆ ಖರೀದಿದಾರರ ಪರ ‘ಕೆ-ರೇರಾ’ 2023ರಲ್ಲಿ ಹಲವು ಆದೇಶಗಳನ್ನು ನೀಡಿತ್ತು. ಈ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಮನೆ ಖರೀದಿದಾರರು ಸಿವಿಲ್ ಕೋರ್ಟ್‌ನಲ್ಲಿ ಆದೇಶಗಳ ಅನುಷ್ಠಾನ ಕೋರಿಕೆ ಅರ್ಜಿಗಳನ್ನು (ಎಕ್ಸಿಕ್ಯೂಷನ್ ಪಿಟಿಷನ್) ಸಲ್ಲಿಸಿದ್ದರು.
- ಈ ಅರ್ಜಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಲ್ಡರ್‌ಗಳು, ‘ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಅದರ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗದು. ಸಿವಿಲ್ ಕೋರ್ಟ್‌ಗಳಿಗೆ ಕಲಂ 79ರ ಅಡಿ ಅಂತಹ ಅರ್ಜಿಗಳನ್ನು ಪುರಸ್ಕರಿಸುವ ಅಧಿಕಾರವಿಲ್ಲ. ಕರ್ನಾಟಕ ರೇರಾ ನಿಯಮ 26ರ ಅಡಿ ಹೇಗೆ ಆದೇಶಗಳನ್ನು ಜಾರಿಗೊಳಿಸಬಹುದು ಎಂಬುದು ಈಗಾಗಲೇ ವಿದಿತವಾಗಿದೆ’ ಎಂಬ ವಾದ ಮಂಡಿಸಿದ್ದರು.
- ಇದಕ್ಕೆ ಪ್ರತಿಯಾಗಿ ಮನೆ ಖರೀದಿದಾರರು, ‘ರೇರಾ ಆದೇಶಗಳು ಡಿಕ್ರಿ ಇದ್ದಂತೆ. ಹಾಗಾಗಿ, ಎಕ್ಸಿಕ್ಯೂಷನ್ ಅರ್ಜಿಗಳು ಸ್ವೀಕಾರಾರ್ಹ ಮತ್ತು ಸಿವಿಲ್ ಕೋರ್ಟ್‌ಗಳು ಅವುಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿವೆ’ ಎಂದು ಪ್ರತಿವಾದ ಮಂಡಿಸಿದ್ದರು.
ಡಿಕ್ರಿ ವ್ಯಾಖ್ಯಾನ
ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಕಲಂ 2(2)ರಲ್ಲಿ ಡಿಕ್ರಿ ಎಂದು ವ್ಯಾಖ್ಯಾನಿಸಲು ಮೂರು ಅಗತ್ಯ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
lತೀರ್ಪು ಮೂಲ ದಾವೆಯಿಂದ ಬಂದಿರಬೇಕು
lವ್ಯಾಜ್ಯ ದೂರಿನೊಂದಿಗೆ ಆರಂಭವಾಗಿರಬೇಕು ಮತ್ತು ಡಿಕ್ರಿಯೊಂದಿಗೆ ಕೊನೆಯಾಗಬೇಕು
lನ್ಯಾಯಾಲಯ ತೀರ್ಪನ್ನು ಅಂತಿಮಗೊಳಿಸಿರಬೇಕು
lರೇರಾ ಮುಂದಿರುವ ಪ್ರಕ್ರಿಯೆಗಳು ದೂರುಗಳಷ್ಟೇ. ಅವು ಮೂಲ ದಾವೆಗಳಲ್ಲ. ಹಾಗಾಗಿ, ಅವುಗಳನ್ನು ದಾವೆಗಳೆಂದು ಪರಿಗಣಿಸಲಾಗದು.
- ‘ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರ’
ಸಂದರ್ಭ: ಹವಾಮಾನ ಬದಲಾವಣೆ, ಕೀಟ–ರೋಗಗಳ ನಿರ್ವಹಣೆ, ಜಲ ಸಂಪನ್ಮೂಲಗಳ ಕಡಿಮೆ ಲಭ್ಯತೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರ ವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
- ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಸೋಮವಾರ ಆಯೋಜಿಸಿದ್ದ ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ಕೃಷಿ ವಿಜ್ಞಾನಿಗಳಿಗೆ ಸ್ಮಾರ್ಟ್ ಕೃಷಿಯ ಬಗ್ಗೆ ಸಲಹೆ, ಎಐ ತಂತ್ರಜ್ಞಾನ ಆಧಾರಿತ ಬೆಳೆ ವಿಶ್ಲೇಷಣೆ ನಡೆಸುವ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
- ‘ನಮ್ಮ ಕೆವಿಕೆ ವಿಜ್ಞಾನಿಗಳು ಗ್ರಾಮೀಣ ಭಾಗದ ರೈತರು ಹಾಗೂ ವಿಶ್ವವಿದ್ಯಾಲಯಗಳ ನಡುವೆ ಜ್ಞಾನದ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಅದರ ಜೊತೆಗೆ ರೈತರ ಹೊಲ, ಗದ್ದೆಗಳಿಗೆ ಭೇಟಿ ನೀಡಿ ವೈಜ್ಞಾನಿಕ ಸಲಹೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ವಿಜ್ಞಾನಿಗಳಿಗೆ ಹೊಸ–ಹೊಸ ತಂತ್ರಜ್ಞಾನದ ತರಬೇತಿ ಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.
- ‘ವಿಸ್ತರಣಾ ನಿರ್ದೇಶಕ ವೈ.ಎನ್. ಶಿವಲಿಂಗಯ್ಯ ಮಾತನಾಡಿ, ‘ಹೊಸ ತಂತ್ರಜ್ಞಾನಗಳು ರೈತರ ಬದುಕಿಗೆ ಹೊಸ ಭರವಸೆ ನೀಡುತ್ತವೆ. ರೈತರಿಗೆ ತಲುಪುವ ಪ್ರತಿಯೊಂದು ಸಲಹೆಯೂ ಹೆಚ್ಚು ನಿಖರ, ವೈಜ್ಞಾನಿಕ ಮತ್ತು ಫಲಪ್ರದವಾಗಬೇಕು’ ಎಂದು ಹೇಳಿದರು.
- ರಷ್ಯಾ ಅಧ್ಯಕ್ಷರ ಭಾರತ ಭೇಟಿ ಹಳೆಯ ಸ್ನೇಹಕ್ಕೆ ಹೊಸ ಭಾಷ್ಯ
ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಮಾತುಕತೆಯ ಸಂದರ್ಭದಲ್ಲಿ ವಿಶ್ವದೆದುರು ತೋರಿಸಲಿಕ್ಕೆ ಉಭಯ ದೇಶಗಳು ನಡೆಸಿದ ಕೆಲವು ಯತ್ನಗಳು ಆ ಮಾತುಕತೆಗಳಿಗೆ ಇರುವ ಮಹತ್ವವನ್ನಾಗಲಿ, ಸಭೆಗಳ ಫಲಿತವನ್ನಾಗಲಿ ಕಡಿಮೆ ಮಾಡಲಿಲ್ಲ.
- ಜಗತ್ತಿನ ಎದುರು ತೋರಿಸಲಿಕ್ಕಾಗಿ ನಡೆಸಿದ ಯತ್ನಗಳು ಬಹುಶಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗಮನದಲ್ಲಿ ಇರಿಸಿಕೊಂಡಿದ್ದವು.
- ತಮ್ಮ ಸ್ನೇಹಿತ ಯಾರು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಸ್ವತಂತ್ರವಾಗಿಯೇ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಟ್ರಂಪ್ ಅವರಿಗೆ ರವಾನಿಸಲು ಭಾರತ ಮತ್ತು ರಷ್ಯಾ ಹೀಗೆ ಮಾಡಿರಬಹುದು. ಉಕ್ರೇನ್ ಜೊತೆಗಿನ ಯುದ್ಧ ಆರಂಭವಾದ ನಂತರದಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು.
- ತಮ್ಮನ್ನು ಏಕಾಂಗಿಯಾಗಿಸುವಲ್ಲಿ ಅಮೆರಿಕ ಯಶಸ್ಸು ಕಂಡಿಲ್ಲ ಎಂದು ಪುಟಿನ್ ಹೇಳಿದ್ದಾರೆ. 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯ ವೇದಿಕೆಯನ್ನು ಬಳಸಿಕೊಂಡ ಮೋದಿ ಅವರು, ಟ್ರಂಪ್ ಅವರ ನಿರ್ಬಂಧಗಳು ಭಾರತ ಮತ್ತು ರಷ್ಯಾ ನಡುವಿನ ದಶಕಗಳಷ್ಟು ಹಳೆಯದಾದ ಸ್ನೇಹಕ್ಕೆ ಧಕ್ಕೆ ಉಂಟುಮಾಡಿಲ್ಲ ಎಂಬ ಸಂದೇಶ ರವಾನಿಸಿದರು.
- ಎರಡು ದೇಶಗಳ ನಡುವಿನ ವಿಶೇಷವಾದ ಪಾಲುದಾರಿಕೆಯಿಂದ ಸಿಗುವ ಅನುಕೂಲಗಳು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ಇಬ್ಬರಿಗೂ ನೆರವಾಗಬಹುದು ಎಂಬುದನ್ನು ಈ ಶೃಂಗಸಭೆಯು ತೋರಿಸಿದೆ.
- ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಗ್ಗಿಸಬೇಕು ಎಂದು ಭಾರತದ ಮೇಲೆ ಪಾಶ್ಚಾತ್ಯ ಜಗತ್ತು ಒತ್ತಡ ಹೇರುತ್ತಿದೆ. ಅದರಲ್ಲೂ ಮುಖ್ಯವಾಗಿ ಅಮೆರಿಕವು ತೀವ್ರ ಪ್ರಮಾಣದಲ್ಲಿ ಒತ್ತಡ ತರುತ್ತಿದೆ. ಆದರೆ, ಈ ಒತ್ತಡಗಳ ನಡುವೆಯೂ ಭಾರತಕ್ಕೆ ‘ಇಂಧನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುತ್ತದೆ’ ಎಂಬ ಭರವಸೆಯನ್ನು ರಷ್ಯಾ ನೀಡಿರುವುದು ಗಮನಾರ್ಹ. ಸ್ವಾಯತ್ತೆಯ ವಿಚಾರದಲ್ಲಿ ನುಡಿದಂತೆ ನಡೆಯುವ ಶಕ್ತಿ ತನಗೆ ಇದೆ ಎಂಬುದನ್ನು ಈ ಮೂಲಕ ಭಾರತ ಕೂಡ ತೋರಿಸಿದೆ. ಕಾಜನ್‌ನಲ್ಲಿ 2024ರ ಅಕ್ಟೋಬರ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗದಲ್ಲಿ ಮಾಡಿಕೊಂಡ ಒಪ್ಪಂದದ ಆಧಾರದಲ್ಲಿ, ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಕೆ ಮಾಡಲು ಒಟ್ಟಾಗಿ ಮುಂದಡಿ ಇರಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುವುದು ಕೂಡ ವ್ಯಾಪಾರ ಸಂಬಂಧವನ್ನು ಸುಧಾರಿಸಿಕೊಳ್ಳುವ ಬದ್ಧತೆ ಎರಡೂ ದೇಶಗಳಿಗೆ ಇದೆ ಎಂಬುದನ್ನು ತೋರಿಸುತ್ತದೆ.
- ರಕ್ಷಣಾ ವಹಿವಾಟುಗಳು ಮಾತ್ರವಲ್ಲದೆ, ಔಷಧ ಮತ್ತು ರಸಗೊಬ್ಬರ ದಂತಹ ವಲಯಗಳಿಗೆ ಆದ್ಯತೆ ನೀಡಿರುವುದು ವ್ಯಾಪಾರ ವಹಿವಾಟಿನ ಮೊತ್ತವನ್ನು ಹೆಚ್ಚಿಸುವ ಬದ್ಧತೆಯನ್ನು ತೋರಿಸುತ್ತಿದೆ. ರಫ್ತು ಪ್ರಮಾಣವನ್ನು ಹೆಚ್ಚು ಮಾಡಿ ರಷ್ಯಾ ಜೊತೆಗಿನ ವ್ಯಾಪಾರ ಕೊರತೆ ಅಂತರವನ್ನು ತಗ್ಗಿಸುವ ಬಯಕೆಯನ್ನು ಭಾರತ ಹೊಂದಿದೆ.
- ರಷ್ಯಾದ ಜೊತೆ ಭಾರತ ಹೊಂದಿರುವ ಸ್ನೇಹ ಇಂದು–ನಿನ್ನೆಯದಲ್ಲ. ದಶಕಗಳ ಹಿಂದಿನ ಈ ನಂಟು ‘ಎಸ್–400’ನಂತಹ ಅತ್ಯಂತ ಮಹತ್ವದ ರಕ್ಷಣಾ ಉಪಕರಣದ ಖರೀದಿಯ ಮೂಲಕ ಇನ್ನಷ್ಟು ಗಾಢವಾಗಿದೆ. ಆದರೆ, ಭಾರತವು ರಷ್ಯಾ ಜೊತೆಗಿನ ಐತಿಹಾಸಿಕ ಸಂಬಂಧವನ್ನು ಬಲಪಡಿಸುತ್ತ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ಜೊತೆಗಿನ ಸಂಬಂಧವನ್ನೂ ತೂಗಿಸಿಕೊಂಡು ಮುನ್ನಡೆಯಬೇಕಿದೆ.
- ರಷ್ಯಾ–ಉಕ್ರೇನ್ ಯುದ್ಧದ ವಿಚಾರದಲ್ಲಿ ತಾನು ಶಾಂತಿಯ ಪರವಾಗಿ ಇದ್ದೇನೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಭಾರತವು ಪಾಶ್ಚಿಮಾತ್ಯ ದೇಶಗಳ ಕಳವಳಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ.
- ಭಾರತವು ಈಗ ರಷ್ಯಾ–ಚೀನಾ ಸಂಬಂಧದಲ್ಲಿನ ಆತ್ಮೀಯತೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಹಾಗೆಯೇ, ಚೀನಾ ಜೊತೆಗಿನ ಸಂಬಂಧದಲ್ಲಿ ಈಚೆಗೆ ಆಗಿರುವ ಸುಧಾರಣೆಗಳನ್ನು ಉಳಿಸಿಕೊಳ್ಳಬೇಕಿದೆ.
- ಐದು ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಭಾರತ ಮತ್ತು ಚೀನಾ, ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಮಾತುಕತೆಗಳನ್ನು ಈಚೆಗೆ ಪುನರಾರಂಭಿಸಿವೆ. ಎರಡೂ ದೇಶಗಳು, ಪರಸ್ಪರರಿಗೆ ಇರುವ ಪ್ರಯೋಜನವನ್ನು ಅರಿತು ಸಂಬಂಧ ಸುಧಾರಣೆಗೆ ಮುಂದಾಗಿವೆ.
- ಚೀನಾ ಜೊತೆಗಿನ ಸಂಬಂಧದ ವಿಚಾರವಾಗಿ ಎಚ್ಚರಿಕೆಯೊಂದಿಗೆ ಹೆಜ್ಜೆ ಹಾಕುತ್ತ, ಚೀನಾ–ರಷ್ಯಾ ಸಂಬಂಧವನ್ನು ಎಚ್ಚರಿಕೆಯಿಂದ ಗಮನಿಸುತ್ತ ಭಾರತವು– ಚೀನಾ, ಅಮೆರಿಕ ಮತ್ತು ರಷ್ಯಾ ಜೊತೆಗಿನ ತನ್ನ ಸಂಬಂಧವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ.
- ಪುಟಿನ್ ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುವ ಮೂಲಕ ಭಾರತವು ತನ್ನ ಹಿತಾಸಕ್ತಿಗಳ ರಕ್ಷಣೆಗಾಗಿ, ಅದರಲ್ಲೂ ಮುಖ್ಯವಾಗಿ ಇಂಧನಕ್ಕೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ರಷ್ಯಾ ಜೊತೆ ಬಲವಾದ ಸಂಬಂಧವನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿಸಿದೆ.
- ಪೋಷಕರ ಆಯ್ಕೆ ಈಗಲೂ ಸರ್ಕಾರಿ ಶಾಲೆ, ಆದರೆ..

- 2027–28ಕ್ಕೆ ಮೊದಲು ಹೊಸ ನಮೂನೆ: ಲೋಕಸಭೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ
ಸಂದರ್ಭ: ಆದಾಯ ತೆರಿಗೆ ಕಾಯ್ದೆ – 2025ಕ್ಕೆ ಅನುಗುಣವಾಗಿರುವ ಹೊಸ ಆದಾಯ ತೆರಿಗೆ ವಿವರ (ಐಟಿಆರ್) ನಮೂನೆಗಳನ್ನು 2027–28ನೇ ಹಣಕಾಸು ವರ್ಷಕ್ಕೆ ಮೊದಲೇ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
- ಐಟಿಆರ್ ನಮೂನೆಗಳ ಸರಳೀಕರಣ ಕ್ಕೆ ಸಂಬಂಧಿಸಿದ ಸಿಬಿಡಿಟಿ ಸಮಿತಿಯು ತೆರಿಗೆ ತಜ್ಞರ ಜೊತೆ, ಸಂಸ್ಥೆಗಳ ಜೊತೆ ಹಾಗೂ ಆದಾಯ ತೆರಿಗೆ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ವ್ಯಾಪಕ ಸಮಾಲೋಚನೆ ನಡೆಸುತ್ತಿದೆ ಎಂದು ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
- ಆಗಸ್ಟ್ 21ರಂದು ರಾಷ್ಟ್ರಪತಿ ಯವರ ಅಂಕಿತ ಪಡೆದಿರುವ ಆದಾಯ ತೆರಿಗೆ ಕಾಯ್ದೆ – 2025 ಮುಂದಿನ ಹಣಕಾಸು ವರ್ಷದ ಮೊದಲ ದಿನದಿಂದ (2026ರ ಏಪ್ರಿಲ್ 1) ಜಾರಿಗೆ ಬರಲಿದೆ. ಇದು ಈಗ ಚಾಲ್ತಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆ – 1961ರ ಬದಲಿಗೆ ಜಾರಿಗೊಳ್ಳುತ್ತದೆ.
- ತ್ರೈಮಾಸಿಕ ಟಿಡಿಎಸ್ ನಮೂನೆ, ಐಟಿಆರ್ ನಮೂನೆ ಸೇರಿದಂತೆ ಹೊಸ ಕಾಯ್ದೆಯ ಅಡಿಯಲ್ಲಿ ಅಗತ್ಯವಿರುವ ಎಲ್ಲ ನಮೂನೆಗಳನ್ನು ಸಿದ್ಧಪಡಿಸಲಾ ಗುತ್ತಿದೆ. ಹೊಸ ಕಾಯ್ದೆ ಜಾರಿಗೆ ಬಂದ ನಂತರದ ಮೊದಲ ತೆರಿಗೆ ವರ್ಷವಾದ 2026–27ಕ್ಕೆ ಸಂಬಂಧಿಸಿದ ಐಟಿಆರ್ ನಮೂನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಅವುಗಳನ್ನು 2027–28ಕ್ಕೆ ಮೊದಲು ಅಧಿಸೂಚನೆಯಲ್ಲಿ ಪ್ರಕಟಿಸ ಲಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ.
- ಪ್ರಸಕ್ತ ಹಣಕಾಸು ವರ್ಷದ ಆದಾಯಕ್ಕೆ ಸಂಬಂಧಿಸಿದ ಐಟಿಆರ್ ನಮೂನೆಗಳನ್ನು ಸರಳೀಕರಿಸುವ ಕೆಲಸ ನಡೆಯುತ್ತಿದೆ, ಅವುಗಳನ್ನು 1961ರ ಕಾಯ್ದೆಗೆ ಅನುಗುಣವಾಗಿ ಅಧಿಸೂಚನೆ ಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
- ಶೇ 30 ಸ್ಥಾನ ಮಹಿಳೆಯರಿಗೆ ನಿಗದಿ: ರಾಜ್ಯ ವಕೀಲರ ಪರಿಷತ್ತು ಚುನಾವಣೆ: ಸುಪ್ರೀಂ ಕೋರ್ಟ್ ನಿರ್ದೇಶನ
ಸಂದರ್ಭ: ಚುನಾವಣಾ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಗದ ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
- ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ‘ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರು ಪ್ರತಿನಿಧಿಸಬೇಕು. ಅದರಲ್ಲಿ ಶೇ 20ರಷ್ಟು ಸ್ಥಾನಗಳನ್ನು ಚುನಾವಣೆ ಮೂಲಕ ಮತ್ತು ಶೇ 10ರಷ್ಟು ಸ್ಥಾನಗಳನ್ನು ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಬೇಕು’ ಎಂದು ಹೇಳಿತು.
- ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳಾ ವಕೀಲರ ಸಂಖ್ಯೆ ಕಡಿಮೆ ಯಿದ್ದರೆ, ಅಂತರ ರಾಜ್ಯಗಳ ವಕೀಲರ ಪರಿಷತ್ತುಗಳಲ್ಲಿ ನಾಮ ನಿರ್ದೇಶನಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ನ್ಯಾಯಾಲಯದ ಮುಂದೆ ಇಡಬೇಕು ಎಂದೂ ನಿರ್ದೇಶಿಸಿದೆ.
- ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನದಂತೆ ಆರು ರಾಜ್ಯಗಳ ವಕೀಲರ ಪರಿಷತ್ತುಗಳ ಚುನಾವಣೆಗೆ ಅಧಿಸೂಚನೆ ಹೊರಡಿಸ ಲಾಗಿದೆ ಎಂದು ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಪೀಠಕ್ಕೆ ತಿಳಿಸಿದರು.
- ‘ಶೇ 15ರಷ್ಟು ಸ್ಥಾನಗಳನ್ನು ಮಹಿಳಾ ಸದಸ್ಯರ ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಬೇಕು’ ಎಂದು ಅವರು ಪೀಠಕ್ಕೆ ಮನವಿ ಮಾಡಿದರು. ಆದರೆ, ‘ನಾಮ ನಿರ್ದೇಶನವನ್ನು ಶೇ 10ರಷ್ಟು ಸೀಟುಗಳಿಗೆ ಸೀಮಿತಗೊಳಿಸಿದರೆ ಸೂಕ್ತ’ ಎಂದು ಪೀಠ ತಿಳಿಸಿತು.
- ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಪರಿಷತ್ತುಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವುದು ವಿವೇಕಯುತ ನಿರ್ಧಾರವಲ್ಲ ಎಂದೂ ಪೀಠ ಹೇಳಿತು.
- ಆಂಧ್ರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಬಿಹಾರ ಹಾಗೂ ಛತ್ತೀಸಗಢ ರಾಜ್ಯಗಳ ವಕೀಲರ ಪರಿಷತ್ತುಗಳ ಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದಿತು.
- ‘ಮಹಿಳೆಯರು ಸ್ಪರ್ಧಿಸಲು ಹಿಂಜರಿಯುವಂತಹ ಪರಿಷತ್ತುಗಳಲ್ಲಿ ನಾಮ ನಿರ್ದೇಶನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಅಂತಿಮವಾಗಿ ಕಾರ್ಯಕಾರಿ ಮಂಡಳಿಯಲ್ಲಿ ಮಹಿಳೆಯರಿಗೆ ಶೇ 30ರಷ್ಟು ಪ್ರಾತಿನಿಧ್ಯ ಸಿಗುವುದನ್ನು ಖಾತರಿಪಡಿಸಬೇಕು’ ಎಂದು ಹೇಳಿತು.
- ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಹಿಳೆಯರಿಗೆ ಮೀಸಲಿಡಬೇಕೆಂದು ಕೋರಿ ವಕೀಲರಾದ ಯೋಗಮಾಯಾ ಎಂ.ಜಿ ಮತ್ತು ಶೆಹ್ಲಾ ಚೌಧರಿ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
- ಶೂಟಿಂಗ್: 6 ಪದಕಗಳೊಂದಿಗೆ ಭಾರತದ ಅಭಿಯಾನಕ್ಕೆ ತೆರೆ
ಸಂದರ್ಭ: ಭಾರತದ ಶೂಟರ್ ಗಳು ಇಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ನಲ್ಲಿ ಎರಡು ಚಿನ್ನ ಸೇರಿ 6 ಪದಕಗಳೊಂದಿಗೆ ಅಭಿಯಾನವನ್ನು ಅತ್ಯುತ್ತಮ ರೀತಿಯಲ್ಲಿ ಮುಗಿಸಿದರು.
- ಪುರುಷರ ಟ್ರ್ಯಾಪ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಝೋರಾವರ್ ಸಿಂಗ್ ಸಂಧು ಏಳನೇ ಸ್ಥಾನ ಪಡೆದರು. ಅಂತಿಮ ದಿನದ ಶಾಟ್‌ಗನ್ ಸ್ಪರ್ಧೆಯಲ್ಲಿದ್ದ ಭಾರತದ ಏಕೈಕ ಶೂಟರ್ ಅವರಾಗಿದ್ದರು.
- ಅರ್ಹತಾ ಸುತ್ತಿನಲ್ಲಿ 125ರಲ್ಲಿ 119 ಅಂಕ ಪಡೆದಿದ್ದ ಝೋರಾವರ್ ಅವರು ಆರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಐಎಸ್‌ಎಸ್‌ಎಫ್ ಹೊಸ ನಿಯಮಗಳ ಪ್ರಕಾರ ಆರು ಶೂಟರ್‌ಗಳ ಬದಲಿಗೆ ಈ ಬಾರಿ ಎಂಟು ಮಂದಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು.
- 30 ಶಾಟ್‌ಗಳ ಫೈನಲ್‌ನಲ್ಲಿ ಲಯ ತಪ್ಪಿದ ಝೋರಾವರ್ 7 ಅಂಕ ಸಂಪಾದಿಸಲಷ್ಟೇ ಶಕ್ತವಾದರು. ಅಮೆರಿಕದ ಹಿಂಟನ್ ವಿಲಿಯಂ (29) ಚಿನ್ನ ಗೆದ್ದರೆ, ಗ್ವಾಟೆಮಾಲಾದ ಬ್ರೋಲ್ ಕಾರ್ಡೆನಾಸ್ ಜೀನ್ ಪಿಯರ್ (28) ಬೆಳ್ಳಿ ಜಯಿಸಿದರು. ಅಮೆರಿಕದ ಮತ್ತೊಬ್ಬ ಶೂಟರ್ ಎಲರ್ ವಾಲ್ಟನ್ (23) ಕಂಚು ತಮ್ಮದಾಗಿಸಿಕೊಂಡರು.
- 4 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಗೆದ್ದ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 2 ಚಿನ್ನ, 3 ಬೆಳ್ಳಿ, ಒಂದು ಕಂಚಿನ ಪದಕಗಳೊಂದಿಗೆ ಭಾರತ ಎರಡನೇ ಸ್ಥಾನ ಗಳಿಸಿತು. ಅಮೆರಿಕ (6 ಪದಕ) ಮೂರನೇ ಸ್ಥಾನ ಪಡೆಯಿತು.
- ಮುಟ್ಟಿನ ರಜೆ ನಿರಾಕರಿಸಿದರೆ ದಂಡ: ಮಸೂದೆ ಸಿದ್ಧ l ಮೇ 28ಕ್ಕೆ ‘ಮುಟ್ಟಿನ ನೈರ್ಮಲ್ಯ ದಿನ’ ಆಚರಣೆಗೆ ನಿರ್ಧಾರ
ಸಂದರ್ಭ: ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ, ಮುಟ್ಟು ಆದವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ, ತಾರತಮ್ಯ ಮಾಡುವ ಅಥವಾ ಅಸ್ಪೃಶ್ಯ ಎಂದು ಪರಿಗಣಿಸುವವರಿಗೆ ₹5 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

- ಈ ಉದ್ದೇಶದಿಂದ ‘ಕರ್ನಾಟಕ ಮಹಿಳಾ ಯೋಗಕ್ಷೇಮ ರಜೆ ಕಾಯ್ದೆ– 2025’ರ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸಿದೆ. ಇಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.
- ‘ರಾಜ್ಯ ಸರ್ಕಾರದ ಅಧೀನದ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸೇವೆಗಳಲ್ಲಿ ತೊಡಗಿರುವ ಮಹಿಳೆಯರು ಮುಟ್ಟಾದರೆ, ಆ ಅವಧಿಯಲ್ಲಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಈ ಮಸೂದೆಯನ್ನು ರೂಪಿಸಲಾಗಿದೆ. ಮಸೂದೆಯ ಅನ್ವಯ ಹುಡುಗಿಯರು, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಮುಟ್ಟಿನ ರಜೆ ಪಡೆಯಲು ಅರ್ಹರು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
- ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಮುಟ್ಟಿನ ರಜೆಯನ್ನು ಮಂಜೂರು ಮಾಡಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ.
- ಎರಡನೇ ದೊಡ್ಡ ಧ್ವಜ ಅನಾವರಣ
ಸಂದರ್ಭ: ‘ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ. ಅದು ಸ್ವಾತಂತ್ರ್ಯ ಹೋರಾಟದ ಪ್ರತೀಕ, ಭಾರತದ ಹೆಮ್ಮೆ, ಸ್ವಾಭಿಮಾನದ ಸಂಕೇತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
- ಬೆಳಗಾವಿಯ ಸುವರ್ಣ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿ ಇರುವ ಮೆಟ್ಟಿಲುಗಳ ಮೇಲೆ ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡದಾದ ತ್ರಿವರ್ಣ ಧ್ವಜವನ್ನು ಮಂಗಳವಾರ ಅನಾವರಣ ಮಾಡಿ ಅವರು ಮಾತನಾಡಿದರು. ‘ನಮ್ಮ ತ್ರಿವರ್ಣ ಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಬಣ್ಣಗಳು ಶೌರ್ಯ, ಸ್ವಾಭಿಮಾನ, ಶಾಂತಿ, ಸಮೃದ್ಧಿಯನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರ ಧ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು’ ಎಂದು ಹೇಳಿದರು.
- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸುವರ್ಣ ವಿಧಾನಸೌಧದ ಮಟ್ಟಿಲುಗಳ ಮೇಲೆ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿರುವುದು, ದೇಶ ಪ್ರೇಮವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕ್ರಮವಾಗಿದೆ’ ಎಂದರು.
- ಭದ್ರಾ ಮೇಲ್ದಂಡೆ: ವೆಚ್ಚ ₹24 ಸಾವಿರ ಕೋಟಿಗೆ
ಸಂದರ್ಭ: ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚ ₹24 ಸಾವಿರ ಕೋಟಿಗೆ ತಲುಪಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ₹5,400 ಕೋಟಿ ಯನ್ನು ನೀಡಿಲ್ಲ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
- ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಚಿತ್ರದುರ್ಗ ನಾಲೆಗೆ ನೀರು ಹರಿಸುವ ವಿಚಾರಕ್ಕೆ ಸರ್ಕಾರ ಬದ್ಧವಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ನೀಡುವುದಾಗಿ ಘೋಷಣೆ ಮಾಡಿದ ಹಣವನ್ನು ಪಡೆಯಲು ಸರ್ವ ಪಕ್ಷಗಳ ನಿಯೋಗವೊಂದನ್ನು ಆದಷ್ಟು ಬೇಗನೆ ಕರೆದೊಯ್ಯುತ್ತೇವೆ’ ಎಂದು ಭರವಸೆ ನೀಡಿದರು.
- ಜಪಾನ್ ಪ್ರಶಸ್ತಿಗೆ ಶ್ರೀಹರಿ ಆಯ್ಕೆ
ಸಂದರ್ಭ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ವಿಜ್ಞಾನಿ ಮತ್ತು ಉದ್ಯಮಿ ಶ್ರೀಹರಿ ಚಂದ್ರಘಾಟಗಿ ಅವರು ಜಪಾನ್‌ನ ಉದ್ಯಮ ತಂತ್ರಜ್ಞಾನದ ‘ಸೂಪರ್ ಮ್ಯಾನುಫ್ಯಾಕ್ಚರ್ಸ್ (ಚೋ ಮೊನೊಡುಜುಕುರಿ)’ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

- ಪರಿಸರ ಸಂರಕ್ಷಣೆ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಶ್ರೀಹರಿ ಅವರು ಮಾಡಿದ ಉನ್ನತ ಸಾಧನೆಯನ್ನು ಪರಿಗಣಿಸಲಾಗಿದೆ. ಎರಡೂವರೆ ದಶಕಗಳಿಂದ ಟೋಕಿಯೋದಲ್ಲಿ ನೆಲೆಸಿರುವ ಅವರು, ‘ಎಕೋಸೈಕಲ್ ಕಾರ್ಪೊರೇಷನ್’ ಎಂಬ ಸಂಸ್ಥೆ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ.
- ಜಪಾನ್ ಸರ್ಕಾರದ ಆರ್ಥಿಕ, ವ್ಯಾಪಾರ, ಕೈಗಾರಿಕಾ ಸಚಿವಾಲಯ ಸೇರಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
- ಅನಂತ್ ಅಂಬಾನಿಗೆ ಗ್ಲೋಬಲ್ ಹ್ಯೂಮನ್ ಸೊಸೈಟಿ ಪ್ರಶಸ್ತಿ
ಸಂದರ್ಭ: ರಿಲಯನ್ಸ್ ಫೌಂಡೇಷನ್ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವಂತಾರದ ಸ್ಥಾಪಕ ಅನಂತ್ ಅಂಬಾನಿ ಅವರಿಗೆ ಅಮೆರಿಕದ ಗ್ಲೋಬಲ್ ಹ್ಯೂಮನ್ ಸೊಸೈಟಿಯು ವಿಶ್ವ ಮಾನವೀಯ ಪ್ರಶಸ್ತಿ ಪ್ರದಾನ ಮಾಡಿದೆ.

- ವನ್ಯಜೀವಿ ಸಂರಕ್ಷಣೆಯಲ್ಲಿ ಅನಂತ್ ಅಂಬಾನಿ ಅವರ ದೂರದೃಷ್ಟಿಯ ನಾಯಕತ್ವ, ವೈಜ್ಞಾನಿಕ ಕ್ರಮಗಳನ್ನು ಸಂಸ್ಥೆಯು ಶ್ಲಾಘಿಸಿದೆ. ಅಂತರ ರಾಷ್ಟ್ರೀಯ ಮಟ್ಟದ ಈ ಪುರಸ್ಕಾರ ಪಡೆದ ಏಷ್ಯಾದ ಮೊದಲಿಗ ಹಾಗೂ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅನಂತ್ ಪಾತ್ರರಾಗಿದ್ದಾರೆ.
- ಅಳಿವಿನಂಚಿನಲ್ಲಿರುವ ವನ್ಯಜೀವಿ ತಳಿಗಳನ್ನು ಸಂರಕ್ಷಿಸುವಲ್ಲಿ ಅಂಬಾನಿ ಅವರ ಸುಸ್ಥಿರ ಕ್ರಮಗಳು ನೆರವಾಗಿವೆ. ವನ್ಯಜೀವಿಗಳು ಮತ್ತು ಮನುಷ್ಯರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲು ಅಜೀವ ಬದ್ಧತೆ ಪ್ರದರ್ಶಿಸುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಮೀಸಲಿಡ ಲಾಗಿದೆ’ ಎಂದು ಗ್ಲೋಬಲ್ ಹ್ಯೂಮನ್ ಸೊಸೈಟಿಯ ಪ್ರಕಟಣೆ ತಿಳಿಸಿದೆ.
- ‘ಅತ್ಯುತ್ಕೃಷ್ಟ ಕಾಳಜಿ ಮೂಲಕ ಪ್ರತಿಯೊಂದು ಪ್ರಾಣಿಯ ಘನತೆಯನ್ನು ವಂತಾರ ಎತ್ತಿ ಹಿಡಿದಿದೆ’ ಎಂದು ಗ್ಲೋಬಲ್ ಹ್ಯೂಮನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಿಇಒ ಡಾ. ರಾಬಿನ್ ಗ್ಯಾನ್ಜೆರ್ಟ್ ಹೇಳಿದ್ದಾರೆ.
- ’ಪ್ರಾಣಿಗಳು ನಮಗೆ ಮಾನವೀಯತೆ, ವಿಶ್ವಾಸ ಮತ್ತು ಬದುಕಿನ ಸಮತೋಲನವನ್ನು ಕಲಿಸುತ್ತವೆ. ಸೇವೆಯ ಮೂಲಕ ಪ್ರತಿಯೊಂದು ಪ್ರಾಣಿಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ವಂತಾರ ಮಾಡುತ್ತಿದೆ’ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
- ವಂದೇ ಮಾತರಂ ಸ್ಫೂರ್ತಿಗೀತೆಯ ಸುತ್ತ ವಿವಾದದ ಜ್ವಾಲೆ

ಖ್ಯಾತ ಬಂಗಾಳಿ ಲೇಖಕರಾಗಿದ್ದ ಬಂಕಿಮಚಂದ್ರ ಚಟರ್ಜಿ ಅವರು 1874ರಲ್ಲಿ ‘ಬಂಗದರ್ಶನ್’ ಎನ್ನುವ ಸಾಹಿತ್ಯ ಪತ್ರಿಕೆಯಲ್ಲಿ ವಿಗ್ರಹಾರಾಧನೆಯ ಬಗ್ಗೆ ಲೇಖನವೊಂದನ್ನು ಬರೆದಿದ್ದರು. ವಿಗ್ರಹಾರಾಧನೆಯು ಜ್ಞಾನ–ವಿಜ್ಞಾನದ ವಿರೋಧಿ ಎಂದು ಪ್ರತಿಪಾದಿಸಿದ್ದ ಅವರು, ಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸಿದ ಗ್ರೀಕ್ ತತ್ವಜ್ಞಾನಿಗಳಾಗಲಿ, ವಿಜ್ಞಾನಿಗಳಾಗಲಿ, ಆರ್ಯನ್ ಸಾಧುಗಳಾಗಲಿ ವಿಗ್ರಹಾರಾಧನೆಯ ಪರವಾಗಿರಲಿಲ್ಲ ಎಂದು ಲೇಖನದಲ್ಲಿ ಉಲ್ಲೇಖಿಸಿದ್ದರು. ಸುಮಾರು ಅದೇ ಅವಧಿಯಲ್ಲಿಯೇ (1875) ಅವರು ‘ವಂದೇ ಮಾತರಂ’ (ನಮಿಸುವೆ ಮಾತೆಗೆ) ಗೀತೆಯ ಮೊದಲ ಎರಡು ಪ್ಯಾರಾಗಳನ್ನು ಬರೆದರು. ಅವುಗಳಲ್ಲಿ ಮೂರ್ತಿಪೂಜೆಯ ಉಲ್ಲೇಖ ಇರಲಿಲ್ಲ. ಅದನ್ನು ಅವರು ಎಲ್ಲಿಯೂ ಪ್ರಕಟಿಸಲಿಲ್ಲ.
ಬಂಕಿಮಚಂದ್ರರ ‘ಅನಂದಮಠ’ ಕಾದಂಬರಿಯು 1881ರಲ್ಲಿ ‘ಬಂಗದರ್ಶನ್’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ಅಪಾರ ಜನಪ್ರಿಯತೆ ಪಡೆಯಿತು. ಬಂಗಾಳದಲ್ಲಿ ತೀವ್ರ ಬರಗಾಲ, ರೈತರ ಸಂಕಷ್ಟ ಇದ್ದ ಕಾಲದ (1770) ಕಥಾವಸ್ತುವನ್ನು ಹೊಂದಿದ್ದ ಕಾದಂಬರಿಯು, ಫಕೀರರು–ಸನ್ಯಾಸಿಗಳು ಈಸ್ಟ್ ಇಂಡಿಯಾ ಕಂಪನಿಯ ಗುಲಾಮನಂತಿದ್ದ ನವಾಬನ ವಿರುದ್ಧ ಹೋರಾಡುವುದರ ಕಥನವಾಗಿತ್ತು. ವಿಶೇಷ ಏನೆಂದರೆ, ಅವರು ಈ ಹಿಂದೆ ಬರೆದಿದ್ದ ‘ವಂದೇ ಮಾತರಂ’ ಹಾಡು ಕಾದಂಬರಿಯಲ್ಲಿ ಸ್ಥಾನ ಪಡೆದಿತ್ತು. ಅವರ ಗೀತೆಯಲ್ಲಿ ಮೂಲದ ಎರಡು ಪ್ಯಾರಾಗಳ ಜತೆಗೆ ಹೊಸದಾಗಿ ಎರಡು ಪ್ಯಾರಾ ಸೇರಿದ್ದವು ಮತ್ತು ಮುಖ್ಯವಾಗಿ, ವಿಗ್ರಹಾರಾಧನೆಯ ಉಲ್ಲೇಖವಿತ್ತು. ಕಾದಂಬರಿಯ ಕೊನೆಯಲ್ಲಿ ಸನ್ಯಾಸಿಗಳು ಗೀತೆಯನ್ನು ಹಾಡುತ್ತಾರೆ. ಗದ್ಯ–ಪದ್ಯ ಮಿಶ್ರಿತ ಶೈಲಿಯಲ್ಲಿ, ದೇವಿ ದುರ್ಗೆಯನ್ನು ತಾಯಿಯೊಂದಿಗೆ (ದೇಶ) ಸಮೀಕರಿಸಿ, ಆ ತಾಯಿಯ ಪ್ರಾಕೃತಿಕ ವೈಭವ ಮತ್ತು ಶಕ್ತಿ ಸಾಮರ್ಥ್ಯಗಳನ್ನು ಅವರು ಚಿತ್ರಿಸಿದ್ದರು. ತಾಯಿಯ ಉಗ್ರರೂಪವನ್ನೂ ಗೀತೆಯಲ್ಲಿ ವರ್ಣಿಸಿದ್ದರು. ಬಂಕಿಮಚಂದ್ರರು ತಮ್ಮ ಸ್ವಾತಂತ್ರ್ಯ ಹೋರಾಟದ ಕಥಾವಸ್ತುವಿನ ಕೃತಿಯಲ್ಲಿ ಹಿಂದೂ ಧಾರ್ಮಿಕ ಪ್ರತಿಮೆಗಳಿರುವ ಗೀತೆಯನ್ನು ಬಳಸಿದ್ದರು.
ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದ್ದ, ಸ್ವಾತಂತ್ರ್ಯ ಹೋರಾಟವು ಹಬ್ಬುತ್ತಿದ್ದ ಕಾಲ ಅದು. ಈ ಚಾರಿತ್ರಿಕ ಸಂದರ್ಭದಲ್ಲಿ ಸಹಜವಾಗಿಯೇ ‘ವಂದೇ ಮಾತರಂ’ ಗೀತೆಯೂ ನಿಧಾನಕ್ಕೆ ಜನಪ್ರಿಯವಾಗತೊಡಗಿತ್ತು. 1896ರ ಕಾಂಗ್ರೆಸ್ ಸಮಾವೇಶದಲ್ಲಿ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಬ್ರಿಟಿಷರು 1905ರಲ್ಲಿ ಹಿಂದೂ–ಮುಸ್ಲಿಂ ಜನಸಂಖ್ಯಾ ಬಾಹುಳ್ಯದ ಆಧಾರದಲ್ಲಿ ಬಂಗಾಳವನ್ನು ವಿಭಜಿಸಲು ಮುಂದಾದರು. ಈ ಸಂದರ್ಭದಲ್ಲಿ ‘ವಂದೇ ಮಾತರಂ’ ಮತ್ತಷ್ಟು ಜನಪ್ರಿಯತೆ ಪಡೆಯಿತು. ಜನ ಅದನ್ನು ವ್ಯಾಪಕವಾಗಿ ಹಾಡತೊಡಗಿದರು. 1920ರ ಹೊತ್ತಿಗೆ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದ ಅದು, ರಾಷ್ಟ್ರೀಯವಾದಿಗಳ ನೆಚ್ಚಿನ ಹಾಡಾಗಿ ಬದಲಾಗಿತ್ತು.
ಮುಸ್ಲಿಂ ವಿರೋಧ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ವಂದೇ ಮಾತರಂ’ ಅನ್ನು ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಗೀತೆಯಾಗಿ ಬಳಸುತ್ತಿತ್ತು. ಹಿಂದೂಗಳು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಈ ಹಾಡನ್ನು ಬಳಸುತ್ತಿದ್ದರು. ಈ ದಿಸೆಯಲ್ಲಿ ಬಂಕಿಮಚಂದ್ರರ ಜೀವಿತಾವಧಿಯಲ್ಲಿಯೇ ಗೀತೆಗೆ ಮುಸ್ಲಿಂ ಸಮುದಾಯದ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಂ ಅರಸರ ವಿರುದ್ಧ ಹಿಂದೂಗಳ ಹೋರಾಟವನ್ನು ‘ಆನಂದಮಠ’ ಕಾದಂಬರಿಯಲ್ಲಿ ವೈಭವೀಕರಿಸಲಾಗಿದೆ ಎನ್ನುವ ವಿಶ್ಲೇಷಣೆಯೂ ಕೇಳಿಬಂದಿತ್ತು. ಜತೆಗೆ, ಹಿಂದೂ ದೇವತೆಯ ಪ್ರಸ್ತಾಪ, ವರ್ಣನೆ ಇರುವ ಗೀತೆಯಲ್ಲಿ ತಾಯ್ನಾಡನ್ನು ದೈವೀಕರಿಸಿರುವುದರ ಬಗ್ಗೆ ಮುಸ್ಲಿಮರಿಂದ ವಿರೋಧದ ಧ್ವನಿಗಳು ಕೇಳಿಬಂದವು. ಸ್ವಾತಂತ್ರ್ಯ ಹೋರಾಟವು ಎಲ್ಲ ಸಮುದಾಯಗಳ ಹೋರಾಟವಾಗಿದ್ದು, ಅಂಥ ಹೋರಾಟದಲ್ಲಿ ಈ ಗೀತೆ ಹಾಡುವುದು ಮುಸ್ಲಿಮರಿಗೆ ಇರಿಸುಮುರುಸು ಉಂಟುಮಾಡುತ್ತದೆ, ಅವರನ್ನು ಹೋರಾಟದಿಂದ ಹೊರಗಿಡುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಆದರೆ, ಶಾಲೆಗಳಲ್ಲಿ ಎಲ್ಲ ಧರ್ಮದ ಮಕ್ಕಳೂ ‘ವಂದೇ ಮಾತರಂ’ ಹಾಡುವುದನ್ನು ಕಾಂಗ್ರೆಸ್ ಕಡ್ಡಾಯ ಮಾಡಿತು. ಇದರಿಂದ ಮುಸ್ಲಿಮರ ಅಸಮಾಧಾನ ಹೆಚ್ಚಾಗುತ್ತಾ ಸಾಗಿ, ಮುಸ್ಲಿಂ ಲೀಗ್ ಪ್ರವೇಶದೊಂದಿಗೆ ಅದು ಮತ್ತಷ್ಟು ಸಂಕೀರ್ಣ ಸ್ವರೂಪ ಪಡೆಯಿತು.
ರಾಜಕೀಯ ಲೇಪ: ‘ವಂದೇ ಮಾತರಂ’ ಗೀತೆಯು ‘ಆನಂದಮಠ’ ಕಾದಂಬರಿಯಲ್ಲಿ ಸ್ಥಾನ ಪಡೆದ ದಿನದಿಂದಲೂ ಆಯಾ ಕಾಲಮಾನದ ರಾಜಕೀಯ, ಆಡಳಿತ ವ್ಯವಸ್ಥೆಗೆ ತಕ್ಕಂತೆ ಹಲವು ಸ್ವರೂಪಗಳನ್ನು ಪಡೆಯುತ್ತಲೇ ಬಂದಿದೆ. ಬಂಕಿಮಚಂದ್ರರು ತಮ್ಮ ಹಿಂದೂ ಧಾರ್ಮಿಕ ಹಿನ್ನೆಲೆಗನುಗುಣವಾಗಿ ಬರೆದ ಸ್ತುತಿಗೀತೆಯು ತನ್ನ ಗೇಯಗುಣ, ಭಾವತೀವ್ರತೆ, ಆಕರ್ಷಕ ಶೈಲಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಸೆಳೆಯಲು ಬಳಕೆಯಾಯಿತು. ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಹುಟ್ಟು ಪಡೆದ ನಂತರ ಅದರ ಕೋಮು ಆಯಾಮಕ್ಕೆ ಹೆಚ್ಚು ಒತ್ತು ಸಿಕ್ಕಿತು.
ಸ್ವಾತಂತ್ರ್ಯಪೂರ್ವದಲ್ಲಿ ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡುವ ಚಿಂತನೆ ಕೆಲವರಲ್ಲಿತ್ತು. ಐದು ಪ್ಯಾರಾಗಳ ಹಾಡನ್ನು ಎರಡು ಪ್ಯಾರಾಗಳಿಗೆ ಇಳಿಸುವ ನಿರ್ಧಾರವನ್ನು ನೆಹರೂ ಅವರನ್ನೊಳಗೊಂಡತೆ ಅಂದಿನ ನಾಯಕರು ಕೈಗೊಂಡಿದ್ದರು. ಅದರ ಜನಪ್ರಿಯತೆ, ಸ್ಫೂರ್ತಿಗುಣವನ್ನು ಅರಿತಿದ್ದ ನೆಹರೂ ಅವರು, ಸ್ವಾತಂತ್ರ್ಯಾ ನಂತರ ಅದನ್ನು ರಾಷ್ಟ್ರೀಯ ಹಾಡನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂದೆ, ಹಾಡಿನ ಸುತ್ತ ಚರ್ಚೆಗಳು ಚಾಲ್ತಿಯಲ್ಲಿದ್ದರೂ, ಅದು ತೀವ್ರಗೊಂಡದ್ದು ರಾಷ್ಟ್ರೀಯವಾದಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ. 2026ರ ಮಾರ್ಚ್–ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಗಿನಿಂದಲೇ ನೆಲ ಹದಗೊಳಿಸುವ ಪ್ರಯತ್ನವಾಗಿ ಬಂಕಿಮಚಂದ್ರ ಮತ್ತು ‘ವಂದೇ ಮಾತರಂ’ ಮೂಲಕ ಹಿಂದೂ ಕಾರ್ಯಸೂಚಿಯನ್ನು ಮುನ್ನೆಲೆಗೆ ತರುತ್ತಿದೆ ಎನ್ನುವ ವಿಶ್ಲೇಷಣೆಗಳಿವೆ.
ಮುಸ್ಲಿಂ ಲೀಗ್ ತೀವ್ರ ವಿರೋಧ
ಕಲ್ಕತ್ತದಲ್ಲಿ 1896ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 12ನೇ ಸಮಾವೇಶದಲ್ಲಿ ರವೀಂದ್ರ ನಾಥ ಟ್ಯಾಗೋರ್ ಅವರು ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದಾಗ, ರಹೀಮುತುಲ್ಲಾ ಸಯಾನಿ ಅವರು ಆ ಸಮಾವೇಶದ ಅಧ್ಯಕ್ಷರಾಗಿದ್ದರು. 1905ರ ನಂತರ ‘ವಂದೇ ಮಾತರಂ’ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಬದಲಾಯಿತು. ಆದರೆ, ಹಾಡಿನಲ್ಲಿರುವ ದೇವತೆಗಳ ಪ್ರಸ್ತಾಪ ಮತ್ತು ಹಿಂದೂ ಪರವಾದ ಧ್ವನಿ ಮುಸ್ಲಿಮರ ಆಕ್ಷೇಪಕ್ಕೆ ಕಾರಣವಾಯಿತು.
ಬಂಗಾಳ ವಿಭಜನೆಯ ನಂತರ ಜಮಲ್‌ಪುರ (1907) ಸೇರಿದಂತೆ ಬಂಗಾಳದ ಹಲವು ಕಡೆಗಳಲ್ಲಿ ಕೋಮು ಘರ್ಷಣೆಗಳು ನಡೆದವು.
1908ರ ಡಿ.30ರಂದು ಅಮೃತಸರದಲ್ಲಿ ನಡೆದಿದ್ದ ಅಖಿಲ ಭಾರತ ಮುಸ್ಲಿಂ ಲೀಗ್‌ನ ಎರಡನೇ ಸಮಾವೇಶದಲ್ಲಿ ಅಧ್ಯಕ್ಷರಾಗಿದ್ದ ಸೈಯದ್ ಅಲಿ ಇಮಾಮ್ ಅವರು ‘ವಂದೇ ಮಾತರಂ’ ಹಿಂದೂ ರಾಷ್ಟ್ರೀಯವಾದದ ಭಾಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. ನೈಜ ಭಾರತೀಯ ರಾಷ್ಟ್ರೀಯವಾದದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಈ ಗೀತೆ ಮುಸ್ಲಿಮರ ಸಂಪ್ರದಾಯಕ್ಕೆ ವಿರೋಧವಾದುದು ಎಂದೂ ಹೇಳಿದ್ದರು.
1937ರ ಅಕ್ಟೋಬರ್‌ನಲ್ಲಿ ಮಹಮ್ಮದ್ ಅಲಿ ಜಿನ್ನಾ ಅವರ ನೇತೃತ್ವದಲ್ಲಿ ನಡೆದಿದ್ದ ಮುಸ್ಲಿಂ ಲೀಗ್‌ನ 25ನೇ ವಾರ್ಷಿಕ ಸಮಾವೇಶವು ‘ವಂದೇ ಮಾತರಂ’ ವಿರುದ್ಧವಾಗಿ ನಿರ್ಣಯ ಕೈಗೊಂಡಿತ್ತು. ಇದನ್ನು ರಾಷ್ಟ್ರಗೀತೆ ಎಂದು ಘೋಷಿಸುವ ಭಾರತೀಯ ಕಾಂಗ್ರೆಸ್‌ನ ನಿರ್ಧಾರವನ್ನು ಖಂಡಿಸಿತ್ತು. ಅಲ್ಲದೇ, ‘ಇದು ಸಂವೇದನಾರಹಿತ, ಮುಸ್ಲಿಂ ವಿರೋಧಿ. ಕಾಂಗ್ರೆಸ್‌ನ ನಿಲುವು, ಯೋಚನೆಗಳು ವಿಗ್ರಹಾರಾಧನೆಯ ಪರವಾಗಿವೆ. ಇದು ಭಾರತದಲ್ಲಿ ನೈಜ ರಾಷ್ಟ್ರೀಯವಾದದ ಬೆಳವಣಿಗೆಯನ್ನು ಬುಡಮೇಲು ಮಾಡಲಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.
ಎರಡು ಪ್ಯಾರಾ ಬಳಸುವ ನಿರ್ಧಾರ
ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ಬಂದ ನಂತರ ಕಲ್ಕತ್ತದಲ್ಲಿ ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ 1937ರ ಅ.26ರಂದು ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಐದು ಪ್ಯಾರಾಗಳನ್ನು ಹೊಂದಿದ್ದ ‘ವಂದೇ ಮಾತರಂ’ ಗೀತೆಯಲ್ಲಿ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಬಳಸುವ ಬಗ್ಗೆ ಚರ್ಚೆ ನಡೆಸಿತ್ತಲ್ಲದೇ, ಈ ಬಗ್ಗೆ ಸುದೀರ್ಘ ಹೇಳಿಕೆಯನ್ನೂ ಬಿಡುಗಡೆ ಮಾಡಿತ್ತು.
‘ಕಳೆದ 30 ವರ್ಷಗಳಲ್ಲಿ ದೇಶದಾದ್ಯಂತ ಕಂಡುಬಂದಿರುವ ಜನರ ತ್ಯಾಗ ಮತ್ತು ನರಳಾಟದೊಂದಿಗೆ ‘ವಂದೇ ಮಾತರಂ’ ಬೆಸೆದುಕೊಂಡಿದೆ. ಈ ಗೀತೆ ಮತ್ತು ಅದರಲ್ಲಿನ ಪದಗಳು ಬಂಗಾಳ ಮತ್ತು ದೇಶದ ಇತರ ಕಡೆಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ರಾಷ್ಟ್ರೀಯ ಸಂಕೇತವಾಗಿ ರೂಪುಗೊಂಡಿವೆ. ಕ್ರಮೇಣ ಹಾಡಿನ ಮೊದಲೆರಡು ಪ್ಯಾರಾಗಳ ಬಳಕೆಯು ದೇಶದ ಇತರ ಪ್ರಾಂತ್ಯಗಳಿಗೆ ಹರಡಿದೆ ಮತ್ತು ಅವುಗಳಿಗೆ ರಾಷ್ಟ್ರೀಯ ಪ್ರಾಮುಖ್ಯವೂ ಸಿಕ್ಕಿದೆ. ಹಾಡಿನ ಉಳಿದ ಸಾಲುಗಳ ಬಳಕೆ ಅಪರೂಪವಾಗಿದೆ. ಮೊದಲ ಎರಡು ಪ್ಯಾರಾಗಳು ನಮ್ಮ ತಾಯಿನೆಲದ ಸೌಂದರ್ಯ ಮತ್ತು ಆಕೆಯ ಕೊಡುಗೆಗಳನ್ನು ಕೋಮಲವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದೆ. ಧಾರ್ಮಿಕವಾಗಿ ಅಥವಾ ಬೇರೆ ಯಾವುದೇ ದೃಷ್ಟಿಕೋನದಿಂದ ಆಕ್ಷೇಪಿಸಬಹುದಾದ ಯಾವ ಸಂಗತಿಗಳು ಇವುಗಳಲ್ಲಿ ಇಲ್ಲ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿತ್ತು.
ಮುಸ್ಲಿಮರು ವ್ಯಕ್ತಪಡಿಸಿದ್ದ ಆಕ್ಷೇಪವನ್ನು ಅದರಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಹೇಳಿಕೆಯನ್ನು ಸಿದ್ಧಪಡಿಸುವಲ್ಲಿ ನೆಹರೂ ಅವರ ಪಾತ್ರವಿತ್ತು. ರವೀಂದ್ರನಾಥ ಟ್ಯಾಗೋರ್ ಅವರು ಇದಕ್ಕೆ ಸಮ್ಮತಿಸಿದ್ದರು. ಕಾಂಗ್ರೆಸ್ ಸಮಿತಿಯು ಮೊದಲೆರಡು ಪ್ಯಾರಾಗಳನ್ನು ಹೊಂದಿದ ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆಯನ್ನಾಗಿ ಘೋಷಿಸಲು ಸಮ್ಮತಿಸಿತ್ತು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದ ಈ ಗೀತೆಯನ್ನು ಎಲ್ಲರೂ ಒಪ್ಪಬೇಕು ಎಂದು ಮಹಾತ್ಮ ಗಾಂಧೀಜಿ ಅವರು ಬಯಸಿದ್ದರು. ಆದರೆ, ಅದರ ಹೇರಿಕೆಯನ್ನು ವಿರೋಧಿಸಿದ್ದರು.
ರಾಷ್ಟ್ರಗೀತೆಗೆ ಸಮನಾದ ಸ್ಥಾನಮಾನ
ಸ್ವಾತಂತ್ರ್ಯಾನಂತರ ರಾಷ್ಟ್ರಗೀತೆಯನ್ನಾಗಿ ಯಾವ ಹಾಡನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ನಡೆದಿತ್ತು.
1948ರ ಆಗಸ್ಟ್ 25ರಂದು ನಡೆದಿದ್ದ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನೆಹರೂ ಅವರು ರವೀಂದ್ರನಾಥ್ ಟ್ಯಾಗೋರ್ ವಿರಚಿತ ‘ಜನ ಗಣ ಮನ’ದ ಪರವಾಗಿ ಮಾತನಾಡಿದ್ದರು. ‘ನೈರುತ್ಯ ಏಷ್ಯಾದಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯು ಈ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತ್ತು. ಭಾರತದಲ್ಲೂ ಇದು ಜನಪ್ರಿಯವಾಗಿದೆ. ಜನ ಗಣ ಮನವನ್ನು ಅಥವಾ ಬೇರೆ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡುವ ಬಗ್ಗೆ ಎಲ್ಲ ಪ್ರಾಂತ್ಯಗಳ ರಾಜ್ಯಪಾಲರ ಅಭಿಪ್ರಾಯವನ್ನು ಕೇಳಿದ್ದೆ. ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ‘ಜನ ಗಣ ಮನ’ಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಅಭಿಪ್ರಾಯವನ್ನು ಸಂಪುಟ ಪರಿಗಣಿಸಿದ್ದು, ಸಂವಿಧಾನ ರಚನಾ ಸಭೆಯು ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಜನ ಗಣ ಮನವನ್ನು ತಾತ್ಕಾಲಿಕವಾಗಿ ರಾಷ್ಟ್ರಗೀತೆಯನ್ನಾಗಿ ಬಳಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದರು.
ತಮ್ಮ ಭಾಷಣದಲ್ಲಿ ‘ವಂದೇ ಮಾತರಂ’ನ ಬಗ್ಗೆಯೂ ಪ್ರಸ್ತಾಪಿಸಿದ್ದ ಅವರು, ‘ನಿಜಕ್ಕೂ ಅದು ಪ್ರಮುಖವಾದ ರಾಷ್ಟ್ರೀಯ ಹಾಡು. ನಮ್ಮ ದೇಶ ಮತ್ತು ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡಿದೆ. ಅದರ ಸ್ಥಾನವನ್ನು ಬೇರೆ ಯಾವ ಹಾಡು ಕೂಡ ತುಂಬಲು ಸಾಧ್ಯವಿಲ್ಲ. ರಾಷ್ಟ್ರಗೀತೆಯ ವಿಚಾರಕ್ಕೆ ಬಂದಾಗ ಪದಗಳಿಗಿಂತಲೂ ರಾಗ/ಧಾಟಿ (ಟ್ಯೂನ್) ಮುಖ್ಯ’ ಎಂದು ಪ್ರತಿಪಾದಿಸಿದ್ದರು.
1950ರ ಜನವರಿ 24ರಂದು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರು, ‘ಪದಗಳು ಮತ್ತು ಸಂಗೀತವನ್ನೊಳಗೊಂಡ ಜನ ಗಣ ಮನವು ದೇಶದ ರಾಷ್ಟ್ರಗೀತೆಯಾಗಿದ್ದು, ಸಂದರ್ಭ ಬಂದಾಗ ಸರ್ಕಾರ ಅನುಮತಿಸಿದರೆ ಗೀತೆಯಲ್ಲಿನ ಪದಗಳನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ. ಭಾರತದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ‘ವಂದೇ ಮಾತರಂ’ಗೆ ಕೂಡ ‘ಜನ ಗಣ ಮನ’ಕ್ಕೆ ಸಮನಾದ ಗೌರವ, ಅದಕ್ಕೆ ಸರಿಸಮಾನದ ಸ್ಥಾನಮಾನವನ್ನೇ ನೀಡಬೇಕು’ ಎಂದು ಹೇಳಿದ್ದರು.
ಇಡೀ ಸಭೆಯು ಕರತಾಡನದ ಮೂಲಕ ಈ ಹೇಳಿಕೆಯನ್ನು ಅನುಮೋದಿಸಿತ್ತು. ಆಧಾರ: ಜ್ಯೂಲಿಯಸ್ ಜೆ.ಲೈಪ್ನರ್ ಭಾಷಾಂತರಿಸಿದ ‘ಆನಂದಮಠ, ಆರ್ ದಿ ಸೇಕ್ರೆಡ್ ಬ್ರದರ್‌ಹುಡ್’ ಕೃತಿ, ಅಮರೇಂದ್ರ ಲಕ್ಷ್ಮಣ್ ಗಾಡ್ಗೀಳ್ ಅವರ ‘ವಂದೇ ಮಾತರಂ’ ಕೃತಿ, ಪಿಐಬಿ, ತಜ್ಞರ ಲೇಖನಗಳು
‘ವಂದೇ ಮಾತರಂ’ ಗೀತೆ 19ನೇ ಶತಮಾನದ ಕೊನೆ– 20ನೇ ಶತಮಾನದ ಆರಂಭದಲ್ಲಿ ದೇಶದಾದ್ಯಂತ ಪಸರಿಸಿತು. ಅದೆಷ್ಟು ಖ್ಯಾತಿ ಗಳಿಸಿತು ಎಂದರೆ, 1906 ಆಗಸ್ಟ್ 6ರಂದು ಕಲ್ಕತ್ತದಲ್ಲಿ ‘ವಂದೇ ಮಾತರಂ’ ಹೆಸರಿನಲ್ಲಿ ಇಂಗ್ಲಿಷ್ ಪತ್ರಿಕೆ ಆರಂಭಗೊಂಡಿತು. ವಿಪಿನ್ ಚಂದ್ರಪಾಲ್ (ಲಾಲ್–ಬಾಲ್–ಪಾಲ್ ಎಂದು ಖ್ಯಾತಿ ಗಳಿಸಿದ ಮೂವರಲ್ಲಿ ಒಬ್ಬರು) ಇದರ ಸಂಸ್ಥಾಪಕರು. ಈ ಪತ್ರಿಕೆಯ ವಿರುದ್ಧ ಬ್ರಿಟಿಷ್ ಆಡಳಿತ ದೇಶದ್ರೋಹ ಪ್ರಕರಣವನ್ನೂ ದಾಖಲಿಸಿತ್ತು
- ಭಾರತದ ಅಕ್ಕಿಗೆ ಹೆಚ್ಚಿನ ತೆರಿಗೆ: ಟ್ರಂಪ್
ಸಂದರ್ಭ: ಆಮದು ನಿಯಂತ್ರಣಕ್ಕೆ ಕ್ರಮ: ಅಮೆರಿಕದ ಕೃಷಿಕರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ತೆರಿಗೆ ಹೇರಿಕೆಯು ಭಾರತದ ಅಕ್ಕಿ ರಫ್ತಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದಷ್ಟೇ. ಹೊಸ ಕಾರ್ಯತಂತ್ರ ಅಳವಡಿಸಿಕೊಂಡರೆ ಅಮೆರಿಕದಲ್ಲಿ ಅಕ್ಕಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನಮಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ ಪ್ರೇಮ್ ಗಾರ್ಗ್, ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ.
- ಭಾರತವು, ಬಾಸ್ಮತಿ, ಸೋನಾ ಮಸೂರಿ ಸೇರಿದಂತೆ ವಿವಿಧ ತಳಿಗಳ ಅಕ್ಕಿಯನ್ನು ತಂದು ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿದ್ದು, ಆಮದು ನಿಯಂತ್ರಿಸಲು ಅಕ್ಕಿ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
- ವೈಟ್‌ಹೌಸ್‌ನಲ್ಲಿ ಕೃಷಿ ವಲಯದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಲೂಸಿಯಾನದ ಕೆನಡಿ ಅಕ್ಕಿ ಗಿರಣಿಯ ಮೆರಿಲ್ ಕೆನಡಿ ಅವರು, ‘ಭಾರತ, ಥಾಯ್ಲೆಂಡ್ ಮತ್ತು ಚೀನಾ ಅಮೆರಿಕದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ತಂದು ಸುರಿಯುತ್ತಿವೆ. ಇದರಿಂದ ಅಮೆರಿಕದ ಅಕ್ಕಿ ಉತ್ಪಾದಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಲ್ಲಿ ಭಾರತದ ಪಾಲು ಗರಿಷ್ಠ ಮಟ್ಟದಲ್ಲಿದೆ’ ಎಂದು ದೂರಿದರು.
- ‘ಯಾಕೆ, ಭಾರತ ಅಮೆರಿಕದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ತಂದು ಸುರಿಯುತ್ತಿದೆ. ಭಾರತದ ಅಕ್ಕಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆಯೇ’ ಎಂದು ಟ್ರಂಪ್, ಸಭೆಯಲ್ಲಿ ಹಾಜರಿದ್ದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರನ್ನು ಪ್ರಶ್ನಿಸಿದರು. ‘ಇಲ್ಲ, ನಾವು ಈ ಬಗ್ಗೆ ಶೀಘ್ರದಲ್ಲೇ ಹೊಸ ಒ ಪ್ಪಂದ ಮಾಡಿ ಕೊಳ್ಳುತ್ತೇವೆ’ ಎಂದು ಬೆಸೆಂಟ್ ಹೇಳಿದರು.
- ‘ಅಮೆರಿಕನ್ನರಿಗೆ ಬೇಕಾಗುವಷ್ಟು ಭತ್ತವನ್ನು ಅಮೆರಿಕದ ರೈತರೇ ಬೆಳೆಯುತ್ತಾರೆ. ನಮಗೆ ಬೇರೆ ದೇಶಗಳೊಂದಿಗೆ ನ್ಯಾಯಯುತ ವ್ಯಾಪಾರ ಬೇಕೇ ಹೊರತು, ಉಚಿತ ವ್ಯಾಪಾರವಲ್ಲ. ಅಕ್ಕಿ ಆಮದಿನ ಮೇಲೆ ನಿಯಂತ್ರಣ ಹೇರಬೇಕು‘ ಎಂದು ಕೆನಡಿ, ಟ್ರಂಪ್ ಅವರನ್ನು ಒತ್ತಾಯಿಸಿದರು.
- ‘ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ತಂದು ಸುರಿಯಬಾರದು. ‘ತೆರಿಗೆ’ ವಿಧಿಸುವ ಮೂಲಕ ಈ ಸಮಸ್ಯೆಯನ್ನು ನಾವು ಸರಳವಾಗಿ ಬಗೆಹರಿಸಿಕೊಳ್ಳಬಹುದು’ ಎಂದು ಟ್ರಂಪ್ ಹೇಳಿದರು.
- ಭಾರತದಿಂದ ಆಮದು ಮಾಡಿಕೊಳ್ಳುವ ಅಕ್ಕಿಯ ಮೇಲೆ ಅಮೆರಿಕವು ಮೊದಲು ಶೇ 10ರಷ್ಟು ತೆರಿಗೆ ವಿಧಿಸಿತ್ತು. ಟ್ರಂಪ್ ಆಡಳಿತವು ಇತ್ತೀಚೆಗೆ ತೆರಿಗೆ ಪರಿಷ್ಕರಣೆ ಮಾಡಿದ ಬಳಿಕ ಇದು ಶೇ 40ಕ್ಕೆ ಏರಿಕೆಯಾಗಿದೆ.
- ಸಭೆ ಮುಗಿದ ಬಳಿಕ ಟ್ರಂಪ್, ಅಮೆರಿಕದ ಕೃಷಿಕರಿಗಾಗಿ ನಾಲ್ಕು ವರ್ಷಗಳ ಅವಧಿಗೆ 12 ಶತಕೋಟಿ ಡಾಲರ್ (₹1.07 ಲಕ್ಷ ಕೋಟಿ) ಕೃಷಿ ಪರಿಹಾರ ಪ್ಯಾಕೇಜ್ ಪ್ರಕಟಿಸಿದರು. ಕೃಷಿ ಕಾರ್ಯದರ್ಶಿ ಬ್ರೂಕ್ ರೋಲಿನ್ಸ್, ಕೃಷಿ ವಲಯದ ಪ್ರತಿನಿಧಿಗಳು, ಟ್ರಂಪ್ ಸಂಪುಟದ ಸದಸ್ಯರು ಭಾಗವಹಿಸಿದ್ದರು.
ಅಮೆರಿಕಕ್ಕೆ 2.74 ಲಕ್ಷ ಟನ್ ಬಾಸ್ಮತಿ ಅಕ್ಕಿ
- ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಅಮೆರಿಕವು ಭಾರತಕ್ಕೆ ವಿಶ್ವದಲ್ಲೇ ನಾಲ್ಕನೆಯ ಅತಿ ದೊಡ್ಡ ಮಾರುಕಟ್ಟೆ. 2024–25ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತವು ಅಮೆರಿಕಕ್ಕೆ 337 ದಶಲಕ್ಷ ಡಾಲರ್ (₹3,028 ಕೋಟಿ) ಮೌಲ್ಯದ 2.74 ಲಕ್ಷ ಟನ್‌ನಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಇದೇ ಅವಧಿಯಲ್ಲಿ 61 ಸಾವಿರ ಟನ್‌ನಷ್ಟು ಬಾಸ್ಮತಿಯೇತರ ಅಕ್ಕಿಯನ್ನೂ ಅಮೆರಿಕಕ್ಕೆ ರಫ್ತು ಮಾಡಲಾಗಿದೆ.
- ರಸಗೊಬ್ಬರ ಆಮದು ಹೆಚ್ಚಳ ನಿರೀಕ್ಷೆ: 2.23 ಕೋಟಿ ಟನ್ನಷ್ಟು ಆಮದು: ಎಫ್ಎಐ ಅಂದಾಜು
ಸಂದರ್ಭ:‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ರಸಗೊಬ್ಬರ ಆಮದು 2.23 ಕೋಟಿ ಟನ್ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಭಾರತೀಯ ರಸಗೊಬ್ಬರ ಸಂಘ (ಎಫ್ಎಐ) ತಿಳಿಸಿದೆ.
- ಇದು ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 41ರಷ್ಟು ಹೆಚ್ಚು ಎಂದು ತಿಳಿಸಿದೆ. ದೇಶದಲ್ಲಿ ಸುರಿದ ಉತ್ತಮ ಮುಂಗಾರು, ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
- ಭಾರತವು ಜಗತ್ತಿನಲ್ಲಿ ಅತಿಹೆಚ್ಚು ರಸಗೊಬ್ಬರ ಬಳಸುವ ದೇಶಗಳ ಪೈಕಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ದೇಶದಲ್ಲಿ 1.44 ಕೋಟಿ ಟನ್‌ನಷ್ಟು ರಸಗೊಬ್ಬರ ಆಮದಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 85.6 ಲಕ್ಷ ಟನ್ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣ ಈ ಅವಧಿಯಲ್ಲಿ ಶೇ 69ರಷ್ಟು ಹೆಚ್ಚಳವಾಗಿದೆ.
- ‘ದೇಶದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ರಸಗೊಬ್ಬರದ ಆಮದು ಪ್ರಮಾಣ ಹೆಚ್ಚಳವಾಗಿದೆ’ ಎಂದು ಎಫ್‌ಎಐ ಅಧ್ಯಕ್ಷ ಎಸ್. ಶಂಕರ್‌ಸುಬ್ರಮಣಿಯನ್ ಹೇಳಿದ್ದಾರೆ.
- ನವೆಂಬರ್ ಅಂತ್ಯದ ವೇಳೆಗೆ ರಸಗೊಬ್ಬರ ದಾಸ್ತಾನು 1.02 ಕೋಟಿ ಟನ್‌ನಷ್ಟಿದೆ. ಈ ದಾಸ್ತಾನಿನಲ್ಲಿ 50 ಲಕ್ಷ ಟನ್ ಯೂರಿಯಾ, 17 ಲಕ್ಷ ಟನ್ ಡಿಎಪಿ ಮತ್ತು 35 ಲಕ್ಷ ಟನ್ ಎನ್‌ಪಿಕೆ ರಸಗೊಬ್ಬರ ಸೇರಿದೆ ಎಂದು ಹೇಳಿದ್ದಾರೆ.
- ಕೋರಮಂಡಲ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಶಂಕರ್‌ಸುಬ್ರಮಣಿಯನ್ ಅವರು, ಕಳೆದ ಎರಡು ತಿಂಗಳಿನಲ್ಲಿ ಭಾರತವು ದೊಡ್ಡ ಪ್ರಮಾಣದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಯಾವುದೇ ಪೂರೈಕೆ ನಿರ್ಬಂಧಗಳಿಲ್ಲ ಎಂದು ಹೇಳಿದ್ದಾರೆ.
- ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ 2.97 ಕೋಟಿ ಟನ್‌ನಷ್ಟಿತ್ತು. ಅದು ಈ ಬಾರಿ 2.99 ಕೋಟಿ ಟನ್‌ಗೆ ಹೆಚ್ಚಳವಾಗಿದೆ.
- ಈ ಪೈಕಿ 1.71 ಕೋಟಿ ಟನ್ ಯೂರಿಯಾ, 23.2 ಲಕ್ಷ ಟನ್ ಡಿಎಪಿ, 70.4 ಲಕ್ಷ ಟನ್ ಎನ್‌ಪಿಕೆ ರಸಗೊಬ್ಬರ ಮತ್ತು 34.8 ಲಕ್ಷ ಟನ್ ಎಸ್‌ಎಸ್‌ಪಿ ಇದೆ. ವಾರ್ಷಿಕವಾಗಿ ದೇಶದಲ್ಲಿ 7 ಕೋಟಿ ಟನ್‌ನಷ್ಟು ರಸಗೊಬ್ಬರ ಬಳಕೆ ಆಗುತ್ತದೆ.
- ಉಡಾನ್ 10 ವರ್ಷಕ್ಕೆ ವಿಸ್ತರಣೆ: ಕೇಂದ್ರಕ್ಕೆ ಪ್ರಸ್ತಾವ
ಸಂದರ್ಭ: ಪ್ರಾದೇಶಿಕ ವಿಮಾನಯಾನ ಸೇವೆಗೆ ಉಡಾನ್ ಯೋಜನೆ ಮೂಲಕ ನೀಡುತ್ತಿರುವ ಆರ್ಥಿಕ ನೆರವನ್ನು 10 ವರ್ಷಗಳವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
- ಕಲಬುರಗಿಯಲ್ಲಿ ವಿಮಾನ ಹಾರಾಟ ಸ್ಥಗಿತ ಕುರಿತಂತೆ ಬಿಜೆಪಿಯ ಶಶೀಲ್ ನಮೋಶಿ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ದೇಶದ ವಿಮಾನಯಾನ ಕ್ಷೇತ್ರದಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ.
- ಈ ಯೊಜನೆಯಡಿ ಮೂರು ವರ್ಷ ಮಾತ್ರ ಪ್ರಾದೇಶಿಕ ವಿಮಾನಯಾನದ ಅಭಿವೃದ್ಧಿ, ಪುನಶ್ಚೇತನಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ. ಇದನ್ನು 10 ವರ್ಷಕ್ಕೆ ವಿಸ್ತರಿಸಿ, ಐದು ವರ್ಷ ಪೂರ್ತಿ ನಿಲ್ದಾಣಗಳ ಅಭಿವೃದ್ಧಿಗೆ ನೆರವು ಒದಗಿಸಬೇಕು. ಉಳಿದ ಐದು ವರ್ಷದ ಅವಧಿಗೆ ರಾಜ್ಯ ಸರ್ಕಾರ ಶೇ 50ರ ಅನುಪಾತದಲ್ಲಿ ಅನುದಾನ ಒದಗಿಸಲು ಸಿದ್ಧವಿದೆ’ ಎಂದು ಹೇಳಿದರು.
- ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ 2022ರಿಂದ ಕಾರ್ಯಾಚರಣೆ ಆರಂಭಗೊಂಡಿತ್ತು. ವಿಮಾನಯಾನ ಸಂಸ್ಥೆಗಳು ಕೇಂದ್ರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಉಡಾನ್ ಯೋಜನೆಯಡಿ ಒಪ್ಪಂದ ಮಾಡಿಕೊಂಡಿವೆ. ಅದರಂತೆ ಮೂರು ವರ್ಷ ಸೇವೆ ಒದಗಿಸಿವೆ. ಅವಧಿ ಪೂರ್ಣಗೊಂಡ ಕಾರಣ ಸೇವೆ ಸ್ಥಗಿತಗೊಳಿಸಿವೆ. ಅವಧಿ ವಿಸ್ತರಿಸದಿದ್ದರೆ ಉಡಾನ್ ಯೋಜನೆಯಡಿ ವಿಮಾನಯಾನ ಸೌಲಭ್ಯ ಪಡೆದ ನಿಲ್ದಾಣಗಳು ಬಂದ್ ಆಗಲಿವೆ ಎಂದು ಹೇಳಿದರು.
- ಆಸ್ಟ್ರೇಲಿಯಾ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
ಸಂದರ್ಭ: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವ ಕಾನೂನು ಬುಧವಾರದಿಂದ ಜಾರಿಗೆ ಬರಲಿದೆ.
- ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಸಮಗ್ರವಾದ ಕಾನೂನು ರೂಪಿಸಿರುವ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನಿನ ಮೂಲಕ ಸಾಮಾಜಿಕ ಜಾಲತಾಣ ವೇದಿಕೆಗಳು ಬಳಕೆದಾರರ ವಯಸ್ಸನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ.
- ‘ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಲು ಸಾಮಾಜಿಕ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶ ಈ ಕಾನೂನಿಗೆ ಇದೆ’ ಎಂದು ಅಲ್ಲಿನ ಸರ್ಕಾರ ಹೇಳಿದೆ.
- ಆದರೆ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಕಿಕ್, ಸ್ನಾಪ್‌ಚಾಟ್, ಟಿಕ್‌ಟಾಕ್, ಯೂಟ್ಯೂಬ್, ಥ್ರೆಡ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸದೆ ತಮ್ಮ ಸ್ನೇಹಿತರ ಜತೆಗೆ ಸಂಪರ್ಕ ದಲ್ಲಿರುವುದು ಹೇಗೆ ಎಂಬ ಚಿಂತೆ ಮಕ್ಕಳನ್ನು ಕಾಡುತ್ತಿದೆ.
- ‘ಈ ನಿಷೇಧವು ನಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ. ನಾವು ಸ್ನೇಹಿತರು ಪರಸ್ಪರ ಸಂಪರ್ಕದಲ್ಲಿರಲು ಪರ್ಯಾಯ ಆಯ್ಕೆಗಳು ಸಾಕಷ್ಟಿಲ್ಲ’ ಎಂದು ಮೆಲ್ಬರ್ನ್‌ನ 15 ವರ್ಷದ ಬಾಲಕ ರಿಲೆ ಅಲೆನ್ ಹೇಳಿದ್ದಾರೆ.