- ಮೊಬೈಲ್ನಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯ
ಸಂದರ್ಭ: ಅನ್ಯರ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ಸಿಮ್ ಖರೀದಿಸುವುದು, ಮೊಬೈಲ್ ಕಳ್ಳತನ ಆಗುವುದು, ಪ್ರತಿ ಮೊಬೈಲ್ಗೂ ನೀಡಲಾಗುವ ಅಂತರರಾಷ್ಟ್ರೀಯ ಮೊಬೈಲ್ ಗುರುತಿನ ಸಂಖ್ಯೆ (ಐಎಂಇಐ) ನಕಲು ಮಾಡುವುದು ಸೇರಿದಂತೆ ಹಲವು ವಂಚನೆಗಳಿಂದ ಜನರನ್ನು ರಕ್ಷಿಸುವ ಸಲುವಾಗಿ ಎಲ್ಲ ಮೊಬೈಲ್ಗಳಲ್ಲಿಯೂ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ (ಇನ್ಸ್ಟಾಲ್) ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.
ಈ ಸಂಬಂಧ ಭಾರತದ ಎಲ್ಲ ಮೊಬೈಲ್ ತಯಾರಕರಿಗೆ, ಮೊಬೈಲ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದೂರಸಂಪರ್ಕ ಸಚಿವಾಲಯವು ನ.28ರಂದು ಕೆಲವು ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದೆ.

- ‘ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ಎಲ್ಲ ಮೊಬೈಲ್ ಗಳಲ್ಲಿಯೂ ‘ಸಂಚಾರ ಸಾಥಿ’ ಆ್ಯಪ್ ಅನ್ನು ಮೊದಲೇ ಇನ್‌ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಮೊದಲ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಈ ಆ್ಯಪ್ ಅನ್ನು ಬಳಕೆದಾರರಿಗೆ ನೀಡಬೇಕು’ ಎಂದು ಸಚಿವಾಲಯ ಹೇಳಿದೆ.
- ‘ಈ ಆ್ಯಪ್ ಅನ್ನು ಮೊದಲೇ ‘ಇನ್‌ಸ್ಟಾಲ್’ ಮಾಡಿರುವ ಹೊಸ ಮೊಬೈಲ್‌ಗಳನ್ನು ‘ಸೆಟ್ಟಿಂಗ್’ ಮಾಡಿಕೊಳ್ಳುವಾಗಲೇ ಬಳಕೆದಾರರಿಗೆ ಈ ಆ್ಯಪ್ ಇರುವುದು ಸುಲಭವಾಗಿ ಕಾಣುವಂತೆ ಮಾಡಬೇಕು. ಈ ಆ್ಯಪ್‌ನ ಕಾರ್ಯಾಚರಣೆಯನ್ನು ಡಿಸೇಬಲ್ ಮಾಡುವುದಾಗಲೀ ಅಥವಾ ನಿರ್ಬಂಧಿಸುವುದಾಗಲೀ ಮಾಡುವಂತಿಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.
- ‘ತಯಾರಿಕಾ ಕಂಪನಿಗಳು ಮತ್ತು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಆದೇಶ ಪ್ರಕಟವಾದ 120 ದಿನಗಳ ಒಳಗೆ ಆ್ಯಪ್ ಇನ್‌ಸ್ಟಾಲ್ ಆದ ಕುರಿತು ವರದಿ ನೀಡಬೇಕು’ ಎಂದೂ ಹೇಳಿದೆ.
- ಆದೇಶ ಪಾಲಿಸದಿದ್ದರೆ ಕ್ರಮ: ಈ ಆದೇಶವನ್ನು ಪಾಲಿಸದಿದ್ದರೆ ದೂರಸಂಪರ್ಕ ಕಾಯ್ದೆ –2023 ಮತ್ತು ದೂರಸಂಪರ್ಕ ಸೈಬರ್ ಭದ್ರತಾ ನಿಯಮಗಳು – 2024 ಮತ್ತು ಇತರೆ ಕಾಯ್ದೆಗಳ ಅನ್ವಯ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
- ಇಂದಿರಾ ಕಿಟ್ಗೆ ಕ್ಯೂಆರ್ ಕೋಡ್
ಸಂದರ್ಭ: ‘ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾದ ತಂತ್ರಾಂಶ ಅಳವಡಿಸಿ, ಅದರ ಆಧಾರದಲ್ಲಿ ಪಡಿತರ ಚೀಟಿದಾರರಿಗೆ ‘ಇಂದಿರಾ’ ಆಹಾರ ಕಿಟ್ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
- ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕಿಲೋ ಅಕ್ಕಿಯ ಬದಲು ‘ಇಂದಿರಾ’ (ಐಎನ್ಡಿಐ ಆರ್ಎ – ಇಂಟೆಗ್ರೇಟೆಡ್ ನ್ಯೂಟ್ರಿಷಿಯನ್ ಆ್ಯಂಡ್ ಡಯೆಟರಿ ಇನಿಷಿಯೇಟಿವ್ ಫಾರ್ ರಿವೈಟಲೈಷಿಂಗ್ ಅನ್ನಭಾಗ್ಯ ಬೆನಿಫಿಷರೀಸ್– ಅನ್ನಭಾಗ್ಯ ಫಲಾನುಭವಿ ಗಳನ್ನು ಪುನರುಜ್ಜೀವನಗೊಳಿಸುವ ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ) ಆಹಾರ ಕಿಟ್ ಯೋಜನೆಯ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಸಭೆ ನಡೆಸಿದರು.
- ‘ಕಿಟ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು. ಗುಣಮಟ್ಟದಲ್ಲಿ ರಾಜಿ ಆಗಬಾರದು. ಅಳತೆಯಲ್ಲಿ ಹೆಚ್ಚು ಕಡಿಮೆ ಆಗದಂತೆಯೂ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
- ಎಲ್ಕೆಜಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ
ಸಂದರ್ಭ: ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿರುವ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ.
- 2019–20ನೇ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ವಿಭಾಗಗಳನ್ನು ಆರಂಭಿಸಲಾಗಿತ್ತು. ಆದರೆ, ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ ಆಗಿರಲಿಲ್ಲ.
- ಪ್ರಧಾನಮಂತ್ರಿ ಪೋಷಣ್ ಶಕ್ತಿ ಅಭಿಯಾನದ ಅನುಮೋದನಾ ಮಂಡಳಿ ಸಭೆಯ ನಿರ್ಧಾರದಂತೆ ಡಿ.1ರಿಂದ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳಿಗೂ ವಿಸ್ತರಿಸಲಾಗಿದೆ.
- ಪ್ರತಿ ಮಗುವಿಗೆ ಪ್ರತಿದಿನ ಕೇಂದ್ರ ಸರ್ಕಾರ ₹4.07, ರಾಜ್ಯ ಸರ್ಕಾರ ₹2.71 ವೆಚ್ಚ ಮಾಡಲಿವೆ. ಒಟ್ಟು ಆಹಾರ ತಯಾರಿ ವೆಚ್ಚ ₹6.78 ನಿಗದಿ ಮಾಡಲಾಗಿದೆ. ಅದಲ್ಲದೆ, ವಾರದಲ್ಲಿ ನಾಲ್ಕು ದಿನ ಮೊಟ್ಟೆ ಖರೀದಿಗೆ ಅಜೀಂ ಪ್ರೇಮ್ಜಿ ಫೌಂಡೇಶನ್ ಹಣಕಾಸಿನ ಸಹಾಯ ಮಾಡಲಿದೆ. ಉಳಿದ ಎರಡು ದಿನಗಳ ವೆಚ್ಚವನ್ನು ಶಾಲಾ ಶಿಕ್ಷಣ ಇಲಾಖೆ ಭರಿಸುತ್ತದೆ.
- ರಾಜ್ಯದಲ್ಲಿ ‘ಡಿಜಿಟಲ್ ಇ– ಸ್ಟ್ಯಾಂಪ್’ಜಾರಿ: ಸ್ಟ್ಯಾಂಪ್ ವಂಚನೆ, ಭದ್ರತಾ ಲೋಪ ತಡೆಗೆ ಕಂದಾಯ ಇಲಾಖೆ ಹೊಸ ವ್ಯವಸ್ಥೆ
ಸಂದರ್ಭ: ಹೊಸ ವ್ಯವಸ್ಥೆಯಲ್ಲಿ ನಾಗರಿಕರು ಆಧಾರ್ ಆಧಾರಿತ ಇ– ಸಹಿ ಅಥವಾ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್ಸಿ) ಬಳಸಿ ದಸ್ತಾವೇಜುಗಳಿಗೆ ಡಿಜಿಟಲ್ ಸಹಿ ಮಾಡಬಹುದು, ಕಂದಾಯ ಸಚಿವ.

ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್’ ಬದಲಿಗೆ ‘ಡಿಜಿಟಲ್ ಇ– ಸ್ಟ್ಯಾಂಪ್’ ವ್ಯವಸ್ಥೆಯನ್ನು ಕಂದಾಯ ಇಲಾಖೆ ಜಾರಿಗೆ ತಂದಿದೆ.
- ‘ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ಡಿಜಿಟಲ್ ಇ-ಸ್ಟ್ಯಾಂಪ್’ ಕಡ್ಡಾಯಗೊಳಿಸಲಾಗುವುದು’.
- ‘ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ‘ಡಿಜಿಟಲ್ ಇ– ಸ್ಟ್ಯಾಂಪ್’ ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್ ಇದ್ದರೆ 24×7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್ ಪಾವತಿ ಮಾಡಲು ಕೂಡಾ ಅವಕಾಶವಿದೆ’.
- ‘ಹಿಂದೆ ಛಾಪಾ ಕಾಗದಗಳನ್ನು ಮುದ್ರಿಸಲಾಗುತ್ತಿತ್ತು. ನಕಲಿ ಹಾಗೂ ಛಾಪಾ ಕಾಗದಗಳ ಮರುಬಳಕೆಯ ವಂಚನೆ ತೆಲಗಿ ಹಗರಣದಿಂದ ಬಹಿರಂಗವಾಗಿತ್ತು. ಅದನ್ನು ತಡೆಯಲು ಭೌತಿಕ ಸ್ಟಾಂಪ್ ಕಾಗದಗಳ ಬಳಕೆ ನಿಲ್ಲಿಸಿ, ‘ಇ-ಸ್ಟ್ಯಾಂಪ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
- ‘ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಎಸ್‌ಎಚ್‌ಸಿಐಎಲ್) ಸಹಯೋಗದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ– ಸ್ಟ್ಯಾಂಪ್’ ಕಾಗದವನ್ನು ಮುದ್ರಿಸುತ್ತಿದೆ. ಆದರೆ, ಝೆರಾಕ್ಸ್ ಯಂತ್ರಗಳ ಮೂಲಕ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಅಥವಾ ಅವುಗಳಂತೆಯೇ ಕಾಣುವ ಪ್ರತಿಗಳನ್ನು ಸೃಷ್ಟಿಸಲು ಸಾಧ್ಯವಾಗಿತ್ತು. ಇದರಿಂದ ಮೂಲ ಹಾಗೂ ನಕಲಿ ಯಾವುದೆಂದು ಪತ್ತೆ ಮಾಡುವುದೇ ಸವಾಲಾಗಿದೆ. ಒಂದು ಉದ್ದೇಶಕ್ಕೆ ಖರೀದಿಸಿದ ಸ್ಟ್ಯಾಂಪ್ ಕಾಗದವನ್ನು ಬೇರೆ ರೀತಿಯ ದಸ್ತಾವೇಜಿಗೆ ಬಳಸುವ ಪ್ರಸಂಗಗಳೂ ನಡೆದಿವೆ. ನಕಲಿ, ನಕಲು ಪ್ರತಿ ಹಾಗೂ ತಪ್ಪು ವರ್ಗೀಕರಣದಿಂದ ಸರ್ಕಾರಕ್ಕೆ ಸೇರುವ ಸ್ಟ್ಯಾಂಪ್ ಶುಲ್ಕ ತಪ್ಪಿಸಿದ ಹಲವು ಘಟನೆಗಳೂ ನಡೆದಿವೆ.
- ‘ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿ ಇರಲಿದೆ. ಹೊಸ ವ್ಯವಸ್ಥೆ ಜಾರಿಯಿಂದ ಇ-ಸ್ಟ್ಯಾಂಪ್ ವಿತರಣೆಗಾಗಿ ಎಸ್‌ಎಚ್‌ಸಿಐಎಲ್‌ಗೆ ಸರ್ಕಾರ ನೀಡುವ ಕಮಿಷನ್ ಮೊತ್ತ ಉಳಿತಾಯ ಆಗಲಿದೆ’.
- ನಾಲ್ಕು ಕಾರ್ಮಿಕ ಸಂಹಿತೆಗಳು ಹೊಸ ನಿಯಮಗಳಲ್ಲೇನಿದೆ?
ಸಂದರ್ಭ: ಕೇಂದ್ರ ಸರ್ಕಾರವು ಕಾರ್ಮಿಕ ಕಲ್ಯಾಣದ ದೃಷ್ಟಿಯಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತಾ ಸಂಹಿತೆ (2020), ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ (2020) ಜಾರಿಗೆ ಬಂದಿದ್ದು, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸುವ ದಿಸೆಯಲ್ಲಿ ಇವುಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರತಿಪಾದಿಸಿದೆ.
- ಇದುವರೆಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ಪರಾಮರ್ಶಿಸಿ, ನಿಯಮಾವಳಿಗಳನ್ನು ಆಧುನೀಕರಿಸಿ ಹೊಸ ಸಂಹಿತೆಗಳನ್ನು ರೂಪಿಸಲಾಗಿದೆ.
- ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶದ ಉದ್ಯಮ ರಂಗಕ್ಕೆ ತಕ್ಕಂತೆ ಕಾರ್ಮಿಕ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಆಶಯ ಇವುಗಳ ಹಿಂದಿದೆ ಎಂದು ಕೇಂದ್ರವು ಹೇಳಿದೆ.

ಹೊಸ ಕಾರ್ಮಿಕ ಸಂಹಿತೆಗಳ ಅಗತ್ಯವೇನು?
- ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಬಹುತೇಕ ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ದೇಶದಲ್ಲಿ ಉದ್ಯಮಗಳು ಆರಂಭವಾಗುತ್ತಿದ್ದ ಹಂತದಲ್ಲಿ ರೂಪಿಸಿದಂಥವು.
- ಜಗತ್ತಿನ ಮುಂದುವರಿದ ಆರ್ಥಿಕತೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದರೂ ಭಾರತದಲ್ಲಿ ಹಳೆಯ ನಿಯಮಗಳೇ ಚಾಲ್ತಿಯಲ್ಲಿದ್ದವು.
- ವಸಾಹತುಶಾಹಿಯ ನೆರಳಿನಿಂದ ಹೊರಬಂದು, ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ, ಉದ್ಯಮಿ ಮತ್ತು ಕಾರ್ಮಿಕ ಇಬ್ಬರ ಹಿತವನ್ನೂ ಕಾಯುವಂತೆ ಹೊಸ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿತ್ತು.
- ಈ ದಿಸೆಯಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಸದ್ಯದ ಮತ್ತು ಭವಿಷ್ಯದ ತಾಂತ್ರಿಕ ಹಾಗೂ ಆರ್ಥಿಕ ಬೆಳವಣಿಗೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಪಡೆಯನ್ನು ಸಿದ್ಧಗೊಳಿಸಲು ಈ ನಾಲ್ಕು ಸಂಹಿತೆಗಳು ನೆರವಾಗಲಿವೆ ಎಂದು ಕೇಂದ್ರವು ಹೇಳಿದೆ.
- ಎಫ್ಡಿಐ ಶೇ 18ರಷ್ಟು ಹೆಚ್ಚಳ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಪ್ರಮಾಣ ಶೇ 18ರಷ್ಟು ಹೆಚ್ಚಳವಾಗಿದ್ದು, ₹3.15 ಲಕ್ಷ ಕೋಟಿಯಷ್ಟಾಗಿದೆ. ಇದೇ ಅವಧಿಯಲ್ಲಿ ಅಮೆರಿಕದಿಂದ ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ದುಪ್ಪಟ್ಟು ಹೆಚ್ಚಾಗಿದ್ದು, ₹59,283 ಕೋಟಿಯಷ್ಟಾಗಿದೆ.
- ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ₹2.66 ಲಕ್ಷ ಕೋಟಿಯಷ್ಟಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1.48 ಲಕ್ಷ ಕೋಟಿ ಒಳಹರಿವು ಆಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 21ರಷ್ಟು ಹೆಚ್ಚಳ ಎಂದು ಹೇಳಿದೆ.
- ಸಂಕಷ್ಟದಲ್ಲಿದ್ದ ಭಾರತೀಯರು ಸ್ವದೇಶಕ್ಕೆ: ಶ್ರೀಲಂಕಾ: ‘ಸಾಗರಬಂಧು’ ಕಾರ್ಯಾಚರಣೆಯಿಂದ ತಾಯ್ನಾಡಿಗೆ
ಸಂದರ್ಭ: ‘ದಿತ್ವಾ’ ಚಂಡಮಾರುತದಿಂದಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಸಿಲುಕಿದ್ದ 104 ಭಾರತೀಯರನ್ನು ಕರೆತರಲಾಗಿದೆ. ಈ ಮೂಲಕ ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ ತಲುಪಿದಂತಾಗಿದೆ.
- ‘ಸಾಗರಬಂಧು ಹೆಸರಿನ ಕಾರ್ಯಾಚರಣೆಯಲ್ಲಿ 104 ಭಾರತೀಯರನ್ನು ವಾಯಪಡೆಯ ಯುದ್ಧವಿಮಾನದ ಮೂಲಕ ಕೊಲಂಬೊ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ ಕರೆತರಲಾಯಿತು’ ಎಂದು ಭಾರತದ ಹೈಕಮಿಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
- ಶ್ರೀಲಂಕಾದ ರಕ್ಷಣ ಕಾರ್ಯಕ್ಕೆ ಮತ್ತಷ್ಟು ನೆರವು ನೀಡುತ್ತಿರುವ ಭಾರತ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಭಾರತೀಯ ವಾಯುಪಡೆಯ ಚೇತಕ್ ಯುದ್ಧವಿಮಾನವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ಭೂಕುಸಿತ ಮತ್ತು ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ಗುಡ್ಡಪ್ರದೇಶ ಕೊಟ್‌ಮಲೆಯಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದೆ
- ಎನ್‌ಡಿಆರ್‌ಎಫ್ ಕೊಲಂಬೊಕ್ಕೆ ತಲುಪಿದ್ದು, ಕೋಚಿಕಡೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ತಮಿಳುನಾಡಿನಲ್ಲಿ ಮುಂದುವರಿದ ಮಳೆ
- ದಿತ್ವಾ ಚಂಡಮಾರುತದ ಪರಿಣಾಮವಾಗಿ ಚೆನ್ನೈ, ತಿರುವಲ್ಲೂರು, ಕಾಂಚೀಪುರಂ, ಕಡಲೂರು ಸೇರಿದಂತೆ ತಮಿಳುನಾಡಿನ ಹಲವೆಡೆ ಸಾಧಾರಣ ಮಳೆಯಾಗಿದೆ.
- ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಅದರ ಪರಿಣಾಮವಾಗಿ ವಾಯುಭಾರ ಕುಸಿತವಾಗಿದೆ. ಇದು ತಮಿಳುನಾಡು–ಪಾಂಡಿಚೇರಿ ಕರಾವಳಿಗೆ ಸಮೀಪವಾಗಿರುವುದರಿಂದ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
- ನಿರಂತರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೃಷಿಭೂಮಿಗೆ ಹಾನಿಯಾಗಿದೆ.
- ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ
ಸಂದರ್ಭ: 2022 ಮತ್ತು 2023ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ.
‘ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ₹6 ಕೋಟಿ ನೀಡಲಾಗುವುದು. ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು, ಬೆಳ್ಳಿ ಗೆದ್ದವರಿಗೆ ₹4 ಕೋಟಿ ಮತ್ತು ಕಂಚು ಗೆದ್ದವರಿಗೆ ₹3 ಕೋಟಿ ನಗದು ಪುರಸ್ಕಾರ ನೀಡಲಾಗುವುದು’ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ ಅವರು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಾಗಿ 60 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ತರಬೇತಿಯ ವೇಳೆ ಪ್ರತಿ ವರ್ಷ ಪ್ರತಿ ಕ್ರೀಡಾಪಟುವಿಗೆ ₹10 ಲಕ್ಷ ನೀಡಲಾಗುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತರು
- 2022ನೇ ಸಾಲಿನ ಏಕಲವ್ಯ ಪುರಸ್ಕೃತರು: ಪ್ರಿಯಾ ಎಚ್. ಮೋಹನ್ (ಅಥ್ಲೆಟಿಕ್ಸ್), ಮಿಥುನ್ ಮಂಜುನಾಥ್ (ಬ್ಯಾಡ್ಮಿಂಟನ್), ಪ್ರತ್ಯನುಷ್ ತೋಮರ್, ಸಂಪತ್ ವಿ.ಪಾಸ್ಮೆಲ್ (ಸೈಕ್ಲಿಂಗ್), ಮೊಹಮ್ಮದ್ ರಾಹಿಲ್ (ಹಾಕಿ/ ಪರ ತಂದೆ ನಾಸಿರುದ್ದೀನ್ ಸ್ವೀಕರಿಸಿದರು), ಧನಲಕ್ಷ್ಮಿ (ಕಯಾಕಿಂಗ್ ಮತ್ತು ಕೆನೊಯಿಂಗ್), ಅದಿತಿ ಅಶೋಕ್ (ಗಾಲ್ಫ್), ಎಸ್.ಡಿ.ಪ್ರಜ್ವಲ್ ದೇವ್ (ಟೆನಿಸ್), ಯುಕ್ತಿ ರಾಜೇಂದ್ರ (ಶೂಟಿಂಗ್), ರಿಧಿಮಾ ವೀರೇಂದ್ರಕುಮಾರ್ (ಈಜು), ಮಣಿಕಂದನ್ ಕೆ (ಪ್ಯಾರಾ ಕ್ಲೈಬಿಂಗ್), ಎಲ್.ಎಂ.ಮನೋಜ್ (ವಾಲಿಬಾಲ್), ಪ್ರವಲಿಕಾ ವಿ.ಕುಷ್ಟಗಿ (ಟೇಕ್ವಾಂಡೊ), ನಿಂಗಪ್ಪ ಪಿ.ಗೇಣೆನ್ನವರ (ಕುಸ್ತಿ), ರಕ್ಷಿತಾ ಆರ್. (ಪ್ಯಾರಾ ಅಥ್ಲೆಟಿಕ್ಸ್).
- 2023: ನಿಹಾಲ್ ಜೋಯೆಲ್ (ಅಥ್ಲೆಟಿಕ್ಸ್), ಕೆ.ಸಾಯಿ ಪ್ರತೀಕ್, ಆರ್.ಸಂಜನಾ (ಬ್ಯಾಸ್ಕೆಟ್‌ಬಾಲ್), ಅನುಪಮಾ ಗುಳೇದ (ಸೈಕ್ಲಿಂಗ್), ನೈದಿಲೆ ಬಿ (ಫೆನ್ಸಿಂಗ್), ಉಜ್ವಲ್ ನಾಯ್ಡು (ಜಿಮ್ನಾಸ್ಟಿಕ್ಸ್), ಬಿ.ಆಭರಣ ಸುದೇವ್ (ಹಾಕಿ), ದಾದಾಪೀರ್ (ಕಯಾಕಿಂಗ್/ ಕೆನೋಯಿಂಗ್), ದಿವ್ಯಾ ಟಿ.ಎಸ್. (ಶೂಟಿಂಗ್), ಅನೀಶ್ ಎಸ್.ಗೌಡ (ಈಜು), ಪ್ರಿಯಾಂಕಾ ಎಸ್. (ವಾಲಿಬಾಲ್), ಐಶ್ವರ್ಯ ಪಿ.ಕರಿಗಾರ (ಕುಸ್ತಿ), ಉಷಾ ಬಿ.ಎನ್. (ವೇಟ್ ಲಿಫ್ಟಿಂಗ್), ಶ್ರೀಧರ ನಾಗಪ್ಪ ಮಾಳಗಿ (ಪ್ಯಾರಾ ಈಜು), ಅಮ್ಮು ಮೋಹನ್ (ಪ್ಯಾರಾ ಬ್ಯಾಡ್ಮಿಂಟನ್). (ಪ್ರಶಸ್ತಿಯು ₹4ಲಕ್ಷ ನಗದು, ಏಕಲವ್ಯ ಪ್ರತಿಮೆ, ಪ್ರಮಾಣಪತ್ರ ಒಳಗೊಂಡಿದೆ)
- ಕರ್ನಾಟಕ ಕ್ರೀಡಾ ರತ್ನ: 2022: ದಿವ್ಯಾ ಎಂ.ಎಸ್. (ಬಾಲ್ ಬ್ಯಾಡ್ಮಿಂಟನ್), ಭಾಸ್ಕರ ದೇವಾಡಿಗ (ಕಂಬಳ), ರಾಯಪ್ಪ ಧರೆಪ್ಪ ಅಬ್ಬುನವರ (ಸಂಗ್ರಾಣಿ ಕಲ್ಲು ಎತ್ತುವುದು), ಚೈತ್ರಾ ಬಿ. (ಕೊಕ್ಕೊ), ವಿಠಲ್ ಮೇಟಿ (ಕಬಡ್ಡಿ), ಶಂಕರಪ್ಪ ಕೆ. (ಮಲ್ಲಕಂಬ), ಗೋಪವ್ವ ಮಂಜುನಾಥ ಖೋಡ್ಕಿ (ಕುಸ್ತಿ), ಮೊಹಮ್ಮದ್ ಫಿರೋಜ್ ಶೇಖ್ (ಯೋಗ). 2023: ಗೌತಮ್ ಎಂ.ಕೆ. (ಕೊಕ್ಕೊ), ಸುನಿಲ್ ಬಿ.ಪಡತಾರೆ (ಕುಸ್ತಿ), ವಿನಾಯಕ ಎಂ.ಕೊಂಗಿ (ಯೋಗ), ಮೇಘನಾ ಎಚ್.ಎಂ. (ಬಾಲ್‌ಬ್ಯಾಡ್ಮಿಂಟನ್), ಆತ್ಮೀಯಾ ಎಂ.ಬಿ. (ಕಬಡ್ಡಿ), ಮಂಜುಳಾ ಹಣಮಂತ ಹುಲಗಣ್ಣವರ (ಮಲ್ಲಕಂಬ). (₹2 ಲಕ್ಷ ನಗದು, ಪ್ರತಿಮೆ ಮತ್ತು ಪ್ರಶಂಸಾಪತ್ರ)
- 2023: ಕ್ರೀಡಾ ಪೋಷಕ ಪ್ರಶಸ್ತಿ: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಬೆಂಗಳೂರು. (₹10 ಲಕ್ಷ ನಗದು, ಪ್ರಶಂಸಾಪತ್ರ).
ತರಬೇತಿಗಾಗಿ ಜೀವಮಾನ ಸಾಧನೆ
- 2022 ಬಿ.ಎನ್.ಸುಧಾಕರ್ (ಬ್ಯಾಡ್ಮಿಂಟನ್), ಆರ್.ರಾಜನ್ (ಬ್ಯಾಸ್ಕೆಟ್‌ಬಾಲ್), ಕೃಷ್ಣ (ಫುಟ್‌ಬಾಲ್), ಕಬಡ್ಡಿ (ಈಶ್ವರ ಅಂಗಡಿ), ಉಮೇಶ ಕಲಘಟಗಿ (ಈಜು). 2023: ರಾಹುಲ್ ಬಿ. (ಪ್ಯಾರಾ ಅಥ್ಲೆಟಿಕ್ಸ್), ಎಚ್.ಎನ್.ಕೃಷ್ಣಮೂರ್ತಿ (ಕಬಡ್ಡಿ), ಕೆ.ಸತ್ಯನಾರಾಯಣ (ಬ್ಯಾಸ್ಕೆಟ್‌ಬಾಲ್), ಎಚ್.ಬಿ.ರವೀಶ್ (ಹಾಕಿ).
- (₹3 ಲಕ್ಷ ನಗದು, ಪ್ರತಿಮೆ, ಪ್ರಶಂಸಾ ಪತ್ರ)
- ಡುಪ್ಲಾಂಟಿಸ್ ‘ವರ್ಷದ ಅಥ್ಲೀಟ್’
ಸಂದರ್ಭ: ಸ್ವೀಡನ್ನ ಪೋಲ್‌ವಾಲ್ಟ್ ತಾರೆ ಅರ್ಮಾಂಡ್ ಡುಪ್ಲಾಂಟಿಸ್ ಹಾಗೂ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್ ಲೆವ್ರೊನ್ ಅವರು ವಿಶ್ವ ಅಥ್ಲೆಟಿಕ್ಸ್ ಕೊಡಮಾಡುವ 2025ನೇ ಸಾಲಿನ ‘ವರ್ಷದ ಅಥ್ಲೀಟ್’ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೊನಾಕೊದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ‘ಸೋಲಿಲ್ಲದ ಸರದಾರ’ ಡುಪ್ಲಾಂಟಿಸ್ ಅವರು ಟೋಕಿಯೊದಲ್ಲಿ ಈ ವರ್ಷದ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನಲ್ಲಿ 6.30ಮೀ. ಜಿಗಿದು 14ನೇ ಬಾರಿಗೆ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

- 26 ವರ್ಷ ವಯಸ್ಸಿನ ಡುಪ್ಲಾಂಟಿಸ್ ಅವರು ಈ ವರ್ಷದಲ್ಲಿ ಪೋಲ್‌ವಾಲ್ಟ್ ಹೊರಾಂಗಣ ಮತ್ತು ಒಳಾಂಗಣ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 16 ಕೂಟಗಳಲ್ಲಿ ಚಿನ್ನ ಜಯಿಸಿದ್ದು, ಅಜೇಯರಾಗಿ ಉಳಿದಿದ್ದಾರೆ.
- ವರ್ಷದ ಅಥ್ಲೀಟ್ ಜೊತೆಗೆ ವರ್ಷದ ‘ಶ್ರೇಷ್ಠ ಫೀಲ್ಡ್ ಅಥ್ಲೀಟ್’ ಗೌರವಕ್ಕೂ ಅವರು ಭಾಜನರಾಗಿದ್ದಾರೆ ಅವರು 2020 ಮತ್ತು 2022ರಲ್ಲಿಯೂ ವರ್ಷದ ಅಥ್ಲೀಟ್ ಗೌರವಕ್ಕೆ ಭಾಜನರಾಗಿದ್ದರು.
- ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಅಮೆರಿಕದ ಓಟಗಾರ್ತಿ ಲೆವ್ರೊನ್ ಅವರು ಮಹಿಳಾ ವಿಭಾಗದಲ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ. 26 ವರ್ಷ ವಯಸ್ಸಿನ ಲೆವ್ರೊನ್ ಅವರು ವಿಶ್ವ ಚಾಂಪಿಯನ್ಷಿಪ್ನ 400 ಮೀ. ಓಟ ಹಾಗೂ 400 ಮೀ. ಹರ್ಡಲ್ಸ್ ಸ್ಪರ್ಧೆಗಳೆರಡರಲ್ಲೂ ಚಿನ್ನ ಗೆದ್ದ ಮೊದಲ ಅಥ್ಲೀಟ್ ಆಗಿದ್ದಾರೆ. ಕಳೆದೆರಡು ವರ್ಷ ಗಳಲ್ಲಿ ಸ್ಪರ್ಧಿಸಿದ ಎಲ್ಲ ಸ್ಪರ್ಧೆಗಳಲ್ಲಿಯೂ ಅವರು ಸ್ವರ್ಣ ಜಯಿಸಿದ್ದಾರೆ.