Sat. Feb 7th, 2026
  • ‘5 ಕಡೆ ಏರೋಸ್ಪೇಸ್ಪಾರ್ಕ್’: ಕಾಲಿನ್ಸ್ಇಂಡಿಯಾ ಆಪರೇಷನ್ಸೆಂಟರ್ಗೆ ಚಾಲನೆ

ಸಂದರ್ಭ:ಬೆಂಗಳೂರು ಸೇರಿದಂತೆ ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ಮತ್ತು ಡಿಫೆನ್ಸ್ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

  • ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಕಾಲಿನ್ಸ್‌ ಏರೋಸ್ಪೇಸ್‌ ಕಂಪನಿಯು ಅಭಿವೃದ್ಧಿ ಪಡಿಸಿರುವ ಕಾಲಿನ್ಸ್‌ ಇಂಡಿಯಾ ಆಪರೇಷನ್‌ ಸೆಂಟರ್‌ಗೆ ಅವರು ಚಾಲನೆ ನೀಡಿ ಮಾತನಾಡಿದರು.
  • ಕಾಲಿನ್ಸ್‌ ಏರೋಸ್ಪೇಸ್‌ ರಾಜ್ಯದಲ್ಲಿ 25 ದಶಲಕ್ಷ ಡಾಲರ್‌ ಹೂಡಿಕೆ ಮಾಡುತ್ತಿದೆ. ಈ ನೂತನ ಘಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಧುನಿಕ ತಯಾರಿಕೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕದ ಕೊಡುಗೆ ಶೇ. 65ರಷ್ಟಿದೆ ಎಂದು ಹೇಳಿದರು.
  • ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ತೊಡಗಿಸಿಕೊಂಡಿರುವ ಎರಡು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಾಜ್ಯದಲ್ಲಿವೆ.
  • ಮಹೀಂದ್ರ ಏರೋಸ್ಪೇಸ್‌, ರಂಗ್‌ಸನ್ಸ್ ರೀತಿಯ ವೈಮಾಂತರಿಕ್ಷ ಕಂಪನಿಗಳು ರಾಜ್ಯದಲ್ಲಿ ಅಪಾರ ಮೊತ್ತದ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ 48 ಒಡಂಬಡಿಕೆಗಳಾಗಿವೆ.
  • ರಂಗ್‌ಸನ್ಸ್‌ ಕಂಪನಿಯು ಬೋಯಿಂಗ್‌ ಕಂಪನಿ ಜತೆ ಸಹಭಾಗಿತ್ವ ಹೊಂದಿದ್ದು, ₹2,915 ಕೋಟಿ ಹೂಡಿಕೆ ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ₹45,000 ಕೋಟಿ ಹೂಡಿಕೆ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ ಎಂದು ಅವರು ವಿವರಿಸಿದರು.
  • ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಭಾರತದ ವೈಮಾನಿಕ ಮಾರುಕಟ್ಟೆಯು 2032 ವೇಳೆಗೆ ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಇಲ್ಲಿ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ ಯೋಜನೆಯಡಿ ಈಗ ವರ್ಷಕ್ಕೆ 1.2 ಶತಕೋಟಿ ಡಾಲರ್‌ ವಹಿವಾಟು ನಡೆಯುತ್ತಿದೆ. ಮುಂದಿನ ಏಳು
  • ಕ್ವಾಂಟಮ್ಕಂಪ್ಯೂಟಿಂಗ್ಗೆ ಹೊಸ ದಾರಿ ತೋರಿದ ವಿಜ್ಞಾನಿ

ಸಂದರ್ಭ: ಭೌತಶಾಸ್ತ್ರದ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಬರೆದ ಮೂವರು ಅಸಾಮಾನ್ಯ ವಿಜ್ಞಾನಿಗಳಿಗೆ 2025ರ ನೊಬೆಲ್ ಪ್ರಶಸ್ತಿ ಲಭಿಸಿದೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾದ ಅಧ್ಯಾಪಕರೂ ಹಾಗೂ ಯೇಲ್ ವಿಶ್ವವಿದ್ಯಾಲಯದ ಫ್ರೆಡೆರಿಕ್ ಡಬ್ಲ್ಯೂ. ಬೈನೆಕೆ ಅಪ್ಲೈಡ್ ಫಿಸಿಕ್ಸ್ ಪ್ರಾಧ್ಯಾಪಕ ಎಮೆರಿಟಸ್ ಪ್ರೊ. ಮೈಕೆಲ್ ಎಚ್. ಡೆವೊರೆಟ್ ಕೂಡ ಒಬ್ಬರು.

  • ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾನ್ ಕ್ಲಾರ್ಕ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾನ್ ಎಂ. ಮಾರ್ಟಿನಿಸ್ ಅವರೊಂದಿಗೆ ಪ್ರೊ. ಡೆವೊರೆಟ್ ಅವರು ವಿದ್ಯುತ್ ಸರ್ಕ್ಯೂಟ್ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿಯ ಕ್ವಾಂಟೈಸೇಶನ್ ವಿದ್ಯಮಾನಗಳನ್ನು ಪ್ರದರ್ಶಿಸಿದ್ದಕ್ಕಾಗಿ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಂಶೋಧನೆಯು ಕ್ವಾಂಟಮ್ ಭೌತಶಾಸ್ತ್ರದ ಅತಿ ಕ್ಲಿಷ್ಟಕರ ತತ್ವಗಳನ್ನು ಪ್ರಾಯೋಗಿಕವಾಗಿ ನಿರೂಪಿಸಿ, ಕ್ವಾಂಟಮ್ ಕಂಪ್ಯೂಟಿಂಗ್‌ನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದೆ.

ಫ್ರಾನ್ಸ್ನಿಂದ ಅಮೆರಿಕದವರೆಗೆ

  • 1953ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜನಿಸಿದ ಮೈಕೆಲ್ ಡೆವೊರೆಟ್, ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಲ್ಲಿಯ ಸಾರ್ವಜನಿಕ ಶಾಲೆಗಳಲ್ಲಿ ಪೂರ್ಣಗೊಳಿಸಿದರು. ಫ್ರೆಂಚ್ ಶಿಕ್ಷಣ ವ್ಯವಸ್ಥೆಯಲ್ಲಿ ‘ಗ್ರ್ಯಾಂಡ್ಸ್ ಎಕೋಲ್ಸ್’ ಮಾರ್ಗವನ್ನು ಅನುಸರಿಸಿ, ಎಂಜಿನಿಯರಿಂಗ್ ಅಧ್ಯಯನದಲ್ಲಿ ತೊಡಗಿದರು. ಒರ್ಸೇ ವಿಶ್ವವಿದ್ಯಾಲಯದಲ್ಲಿ ಆಣ್ವಿಕ ಭೌತಶಾಸ್ತ್ರದ ಪ್ರಯೋಗಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಫ್ರಾನ್ಸ್‌ನ ಪರಮಾಣು ಶಕ್ತಿ ಆಯೋಗ(CEA)ದಲ್ಲಿ ಹೆಸರಾಂತ ಅನಾಟೋಲ್ ಅಬ್ರಹಾಂ ಅವರ ಮಾರ್ಗದರ್ಶನದಲ್ಲಿ ಘನ ಹೈಡ್ರೋಜನ್‌ನಲ್ಲಿ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಕುರಿತು ಪಿಎಚ್.ಡಿ. ಮಾಡಿದರು.
  • ಪಿಎಚ್.ಡಿ. ನಂತರ ಅವರ ವೃತ್ತಿಜೀವನ ನಿರ್ಣಾಯಕ ತಿರುವನ್ನು ಪಡೆಯಿತು. 1982ರಿಂದ 1984ರವರೆಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿಯಲ್ಲಿ ಪ್ರೊ. ಜಾನ್ ಕ್ಲಾರ್ಕ್ ಅವರ ಪ್ರಯೋಗಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿ ಕೆಲಸ ಮಾಡಿದರು. ಈ ಸಹಯೋಗವು ‘ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್’ ಎಂಬ ಪ್ರವರ್ತಕ ಆವಿಷ್ಕಾರಕ್ಕೆ ಕಾರಣವಾಯಿತು. ಈ ಆವಿಷ್ಕಾರವು ಕ್ವಾಂಟಮ್ ಪರಿಣಾಮಗಳು ಅತಿಸೂಕ್ಷ್ಮ ಕಣಗಳಿಗೆ ಮಾತ್ರವಲ್ಲದೆ, ಕಣ್ಣಿಗೆ ಕಾಣುವಂತಹ ದೊಡ್ಡ ವಿದ್ಯುತ್ ಸರ್ಕ್ಯೂಟ್‌ಗಳಲ್ಲೂ ಅಸ್ತಿತ್ವದಲ್ಲಿವೆ ಎಂಬುದನ್ನೂ ದೃಢಪಡಿಸಿತು.

ಕ್ವಾಂಟ್ರಾನಿಕ್ಸ್ಕ್ಯೂಬಿಟ್ಗಳು

  • ಬರ್ಕ್ಲಿಯಿಂದ ಫ್ರಾನ್ಸ್‌ಗೆ ಹಿಂದಿರುಗಿದ ನಂತರ, ಪ್ರೊ. ಡೆವೊರೆಟ್ ಅವರು ಡೇನಿಯಲ್ ಎಸ್ಟೀವ್ ಮತ್ತು ಕ್ರಿಶ್ಚಿಯನ್ ಉರ್ಬಿನಾ ಅವರೊಂದಿಗೆ ‘ಕ್ವಾಂಟ್ರಾನಿಕ್ಸ್ ಲ್ಯಾಬ್’ ಅನ್ನು ಸ್ಥಾಪಿಸಿದರು. ಇದು ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನ ಸಮ್ಮಿಲನವಾಗಿತ್ತು. ಅವರು 1995ರಿಂದ 2002ರ ವರೆಗೆ ಫ್ರಾನ್ಸ್‌ನ ಸಿಇಎ-ಸಾಕ್ಲೆ(CEA-Saclay)ನಲ್ಲಿ ಸಂಶೋಧನಾ ನಿರ್ದೇಶಕರಾಗಿ, ಕ್ವಾಂಟ್ರಾನಿಕ್ಸ್ ಗುಂಪಿನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
  • ಈ ಅವಧಿಯಲ್ಲಿ, ಅವರು ಸೂಪರ್‌ಕಂಡಕ್ಟಿಂಗ್ ಸರ್ಕ್ಯೂಟ್‌ಗಳನ್ನು ‘ಕೃತಕ ಪರಮಾಣು’ಗಳಾಗಿ (artificial atoms) ಬಳಸುವ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ಈ ಕೃತಕ ಪರಮಾಣುಗಳೇ ಇಂದು ಕ್ವಾಂಟಮ್ ಕಂಪ್ಯೂಟರ್‌ಗಳ ಮೂಲಭೂತ ಘಟಕಗಳಾದ ‘ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್‌ಗಳಿಗೆ” (superconducting qubits) ಅಡಿಪಾಯ. ಅವರ ತಂಡವು ಅಭಿವೃದ್ಧಿಪಡಿಸಿದ ‘ಕ್ವಾಂಟ್ರೋನಿಯಂ’ (quantronium) ಎಂಬ ಕ್ಯೂಬಿಟ್, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು.
  • 2002ರಿಂದ 2024ರ ವರೆಗೆ ಯೇಲ್ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರೊ. ಡೆವೊರೆಟ್, ನಂತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾದ ಅಧ್ಯಾಪಕರಾಗಿ ಸೇರಿಕೊಂಡರು. ಪ್ರಸ್ತುತ, ಅವರು ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಗೂಗಲ್ ಕ್ವಾಂಟಮ್ ಎಐ Google Quantum AI)ನಲ್ಲಿ ಮುಖ್ಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಕೊಡುಗೆಗಳು: ಪ್ರೊ. ಡೆವೊರೆಟ್ ಅವರ ಸಂಶೋಧನೆಯು ಹಲವು ನವೀನ ತಂತ್ರಜ್ಞಾನಗಳಿಗೆ ಕಾರಣವಾಗಿದೆ. ಅವರ ಸಂಶೋಧನೆಯು ಕ್ಯೂಬಿಟ್‌ಗಳನ್ನು ನಿರ್ಮಿಸಲು ಮತ್ತು ನಿಯಂತ್ರಿಸಲು ಅಗತ್ಯವಾದ ಮೂಲಭೂತ ತತ್ವಗಳನ್ನು ಒದಗಿಸಿದೆ; ಇದು ಕ್ವಾಂಟಮ್ ಕಂಪ್ಯೂಟರ್‌ಗಳ ಕಾರ್ಯಸಾಧ್ಯತೆಗೆ ನಿರ್ಣಾಯಕವಾಗಿದೆ. ಅದಲ್ಲದೆ ಸೂಪರ್‌ಕಂಡಕ್ಟಿಂಗ್ ಕ್ವಾಂಟಮ್ ಇಂಟರ್‌ಫೆರೆನ್ಸ್ ಡಿವೈಸಸ್ (SQUIDs) ಎಂಬ ಅತಿ ಸೂಕ್ಷ್ಮ ಕಾಂತೀಯ ಸಂವೇದಕಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ‘ಸಿಂಗಲ್-ಎಲೆಕ್ಟ್ರಾನ್ ಪಂಪ್’ ಸಾಧನವು ವಿದ್ಯುತ್ ಪ್ರವಾಹದ ಮೂಲಭೂತ ಮಾನದಂಡವನ್ನು ಸ್ಥಾಪಿಸಲು ಸಹಾಯ ಮಾಡಿದ್ದು, ‘ಮೆಟ್ರೋಲಾಜಿಕಲ್ ಟ್ರಯಾಂಗಲ್’ ಅನ್ನು ಮುಚ್ಚುವಲ್ಲಿ ಪ್ರಗತಿ ಸಾಧಿಸಿಸಲು ಸಾಧ್ಯವಾಗಿದೆ. ಸೂಪರ್‌ಕಂಡಕ್ಟಿಂಗ್ ಸರ್ಕ್ಯೂಟ್‌ಗಳನ್ನು ತಯಾರಿಸಲು ಅಗತ್ಯವಾದ ಇ-ಬೀಮ್ ನಾನೋಲಿಥೋಗ್ರಫಿ (e-beam nanolithography) ತಂತ್ರಗಳಲ್ಲಿ ಇವರ ಕೊಡುಗೆ ಇದೆ.
  • ಪ್ರಶಸ್ತಿಗಳು: ನೊಬೆಲ್ ಪ್ರಶಸ್ತಿಯ ಜೊತೆಗೆ ಪ್ರೊಫೆಸರ್ ಡೆವೊರೆಟ್ ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. 1991ರಲ್ಲಿ ಫ್ರಿಟ್ಜ್ ಲಂಡನ್ ಮೆಮೋರಿಯಲ್ ಪ್ರಶಸ್ತಿ (Fritz London Memorial Award)); 1999ರಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿಯ ಜೋಸೆಫ್ ಎಫ್. ಕೀತ್ಲಿ ಅವಾರ್ಡ್ ಫಾರ್ ಅಡ್ವಾನ್ಸಸ್ ಇನ್ ಮೆಷರ್‌ಮೆಂಟ್ ಸೈನ್ಸ್ (Joseph F. Keithley Award for Advances in Measurement Science); 2006ರಲ್ಲಿ IEEE ಡೇವಿಡ್ ಸಾರ್ನಾಫ್ ಪ್ರಶಸ್ತಿ (IEEE David Sarnoff Award); ಹಾಗು 2021ರಲ್ಲಿ ಮಿಸಿಯಸ್ ಕ್ವಾಂಟಮ್ ಪ್ರಶಸ್ತಿ (Micius Quantum Prize) – ಹೀಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  • ಪ್ರೊ. ಮೈಕೆಲ್ ಡೆವೊರೆಟ್ ಅವರ ಸಂಶೋಧನೆಯು ಕ್ವಾಂಟಮ್ ಭೌತಶಾಸ್ತ್ರದ ಮೂಲಭೂತ ತಿಳಿವಳಿಕೆಯನ್ನು ಆಳಗೊಳಿಸಿದೆ ಮತ್ತು ಕ್ವಾಂಟಮ್ ಕಂಪ್ಯೂಟರ್‌ಗಳಂತಹ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡಿದೆ. ಅವರ ಈ ನೊಬೆಲ್ ಪ್ರಶಸ್ತಿ ವಿಜ್ಞಾನಜಗತ್ತಿಗೆ ಅಪ್ರತಿಮ ಸ್ಫೂರ್ತಿಯಾಗಿದೆ.
  • ಕಂಬಿಗಳ ಹಿಂದೆ ಬದುಕು ಕಠೋರ

ಕಂಬಿಗಳ ಹಿಂದೆ ಬದುಕು ಕಠೋರದೇಶದ ಜೈಲುಗಳಲ್ಲಿಯೂ ಮಹಿಳೆಯರಿಗಿಲ್ಲ ರಕ್ಷಣೆ, ಪೋಷಣೆ; ಗರ್ಭಿಣಿ, ಬಾಣಂತಿಯರ ಸ್ಥಿತಿ ಅಸಹನೀಯ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೆಲವು ಕೈದಿಗಳು ಮೊಬೈಲ್, ಟಿ.ವಿ ಬಳಸುತ್ತಿದ್ದ ವಿಡಿಯೊಗಳು ಬಹಿರಂಗಗೊಂಡು, ಭಾರಿ ಗದ್ದಲವೇ ಉಂಟಾಗಿದೆ. ಕರ್ನಾಟಕವೂ ಸೇರಿದಂತೆ, ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇಂಥ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಜೈಲಿನಲ್ಲಿರುವ ಪುರುಷ ಕೈದಿಗಳ ಪೈಕಿ ಕೆಲವರು ಹೇಗೋ ಮಾಡಿ ಇಂಥ ವಿಐಪಿ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ, ಜೈಲುಗಳಲ್ಲಿರುವ ಮಹಿಳಾ ಬಂದಿಗಳ ಬದುಕು ಅಸಹನೀಯವಾಗಿದೆ. ಮೂಲಭೂತ ಅಗತ್ಯಗಳನ್ನು ‍ಪಡೆಯುವುದರಿಂದ ಹಿಡಿದು ತಮ್ಮ ವೈಯಕ್ತಿಕ ಸ್ವಚ್ಛತೆ, ಘನತೆ ಕಾಪಾಡಿಕೊಳ್ಳಲು ಅಗತ್ಯವಾದ ಸ್ಥಳ, ಸೌಕರ್ಯಗಳನ್ನು ಪಡೆಯುವವರೆಗೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಜೈಲಿನಲ್ಲಿರುವ ಮಹಿಳೆಯರ ಸ್ಥಿತಿಗತಿ ಸುಧಾರಿಸಲು 210 ಸಂಸ್ಥೆಗಳು (ಎನ್‌ಜಿಒ) ದುಡಿಯುತ್ತಿವೆ.

ಜೈಲುಗಳಲ್ಲಿರುವ ಪುರುಷರ ಸಂಖ್ಯೆಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯು ಕಡಿಮೆ ಇದ್ದರೂ, ಮಹಿಳೆಯರಿಗೆ ಒದಗಿಸಲಾಗಿರುವ (ಸ್ನಾನಗೃಹ, ಶೌಚ ಇತ್ಯಾದಿ) ಸೌಕರ್ಯಗಳು ಅವರ ಅಗತ್ಯಕ್ಕಿಂತಲೂ ತುಂಬಾ ಕಡಿಮೆ ಇವೆ. ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅನೇಕ ಜೈಲುಗಳಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು, ಗರ್ಭಿಣಿ ತಾಯಂದಿರು ಮಕ್ಕಳಿಗೆ ಹಾಲೂಡಿಸಲು ಪ್ರತ್ಯೇಕ ಸ್ಥಳದ ಕೊರತೆ ಇದೆ. ಮುಟ್ಟಿನ ಸಂದರ್ಭಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಕಷ್ಟಕರವಾಗಿದೆ ಎನ್ನುವುದು ವರದಿಯಾಗಿದೆ. ಆಗಿಂದಾಗ್ಗೆ ನಡೆಯುವ ತಪಾಸಣೆಯ ಹೆಸರಿನಲ್ಲಿ ಪೊಲೀಸರು ಜೈಲುಗಳಲ್ಲಿರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಅನೇಕ ಘಟನೆಗಳು ವರದಿಯಾಗಿವೆ.  

ಜೈಲುಗಳು ರಾಜ್ಯ ಪಟ್ಟಿಯಲ್ಲಿ ಬರುವುದರಿಂದ ಮೂಲಸೌಕರ್ಯ ಕಲ್ಪಿಸುವುದು, ಬಂದಿಗಳಿಗೆ ಸೂಕ್ತ ಪ್ರಮಾಣದಲ್ಲಿ ಆಹಾರ ಒದಗಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ವಿಶೇಷ ಆಹಾರ ಒದಗಿಸಬೇಕು. ಕೆಲವು ಜೈಲುಗಳ ಕ್ಯಾಂಟೀನ್‌ಗಳಲ್ಲಿ ಆಹಾರ ಸಿಗುತ್ತದೆಯಾದರೂ ಹೆಚ್ಚಿನ ಮಹಿಳಾ ಕೈದಿಗಳು ಅದಕ್ಕೆ ಹಣ ತೆರುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ.

ಗರ್ಭಿಣಿಯರ ಪರಿಸ್ಥಿತಿ ದುರ್ಬರವಾಗಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಬೇಕು. ಆದರೆ, ದೇಶದ ಬಹುತೇಕ ಜೈಲುಗಳಲ್ಲಿ ನಿಯಮಗಳು ಕಾಗದದ ಮೇಲಷ್ಟೇ ಇವೆ. ಮಹಾರಾಷ್ಟ್ರದ ಬೈಕುಲ್ಲಾ ಜೈಲಿನಲ್ಲಿ 2012ರಲ್ಲಿ ಗರ್ಭಿಣಿಯೊಬ್ಬರು ಜೈಲಿನ ಶೌಚಾಲಯದಲ್ಲಿಯೇ ಮಗುವನ್ನು ಹೆತ್ತು, ಜೈಲಿನ ಪರಿಸ್ಥಿತಿಗೆ ಹೆದರಿ ಆ ಮಗುವನ್ನು ಬಕೆಟ್‌ನಲ್ಲಿ ಮುಳುಗಿಸಿ ಕೊಂದು ಹಾಕಿದ್ದರು. ಮಹಿಳಾ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಗರ್ಭಿಣಿಯ ಬಗ್ಗೆ ಗಮನ ಕೊಡಲು ಸಾಧ್ಯವಾಗಿರಲಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದರು.    

ದೇಶದಲ್ಲಿರುವ ವಿವಿಧ ರೀತಿಯ ಜೈಲುಗಳಲ್ಲಿ ಶೇ 4ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯ‌ರಿದ್ದಾರೆ. ಆದರೆ, ಮಹಿಳೆಯರಿಗಷ್ಟೇ ಮೀಸಲಾದ ಜೈಲುಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ರತಿ ಐವರಲ್ಲಿ ಒಬ್ಬ ಮಹಿಳಾ ಬಂದಿಗೆ ಮಾತ್ರ ಮಹಿಳಾ ಜೈಲಿನಲ್ಲಿರುವ ಅವಕಾಶ ಸಿಕ್ಕಿದೆ. 2018 ಮತ್ತು 2023ರ ನಡುವೆ ಮಹಿಳಾ ಜೈಲುಗಳ ಸಾಮರ್ಥ್ಯವನ್ನು ಶೇ 26.7ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಇದೇ ಅವಧಿಯಲ್ಲಿ ಮಹಿಳಾ ಬಂದಿಗಳ ಪ್ರಮಾಣವು ಶೇ 32ರಷ್ಟು ಹೆಚ್ಚಾಗಿದೆ.

ಆಧಾರ: ಎನ್‌ಸಿಆರ್‌ಬಿ ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ 2023, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಪುಲಿಟ್ಜರ್ ಸೆಂಟರ್, ದಿ ಗಾರ್ಡಿಯನ್  

ದೇಶದಲ್ಲಿ ಜೈಲುಗಳ ಸ್ಥಿತಿಗತಿ

lದೇಶದ 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,332 ಜೈಲುಗಳಿವೆ. ಆದರೆ, ಈ ಪೈಕಿ ಕೇವಲ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಮಹಿಳಾ ಜೈಲುಗಳಿವೆ. ಅವುಗಳಲ್ಲಿ 4,293 ಬಂದಿಗಳಿದ್ದಾರೆ (ಈ ಜೈಲುಗಳ ಒಟ್ಟು ಸಾಮರ್ಥ್ಯ 7,086).ಕರ್ನಾಟಕದಲ್ಲಿ ಒಂದು ಮಹಿಳಾ ಜೈಲು ಇದ್ದು, ಅದರಲ್ಲಿ 100 ಮಂದಿ (2023ರ ಅಂತ್ಯಕ್ಕೆ) ಬಂದಿಗಳಿದ್ದಾರೆ. ಉಳಿದ 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ ಮೀಸಲಾದ ಜೈಲುಗಳೇ ಇಲ್ಲ

lರಾಜಸ್ಥಾನದಲ್ಲಿ ಏಳು, ತಮಿಳುನಾಡಿನಲ್ಲಿ ಐದು, ಕೇರಳದಲ್ಲಿ ಮೂರು ಮತ್ತು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ತಲಾ ಎರಡು ಮಹಿಳಾ ಜೈಲುಗಳಿವೆ. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಮಹಿಳಾ ಜೈಲು ಇದೆ

lದೇಶದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 5,30,333 ಬಂದಿಗಳಿದ್ದು, ಅವರಲ್ಲಿ 5,08,715 ಪುರುಷರಾದರೆ, 21,510 ಮಹಿಳೆಯರು, 108 ಮಂದಿ ಲಿಂಗತ್ವ ಅಲ್ಪಸಂಖ್ಯಾತರು  

lಉತ್ತರ ‍ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಮಹಿಳೆಯರು ಜೈಲುಗಳಲ್ಲಿದ್ದರೆ (3,926), ಬಿಹಾರದಲ್ಲಿ 2,029 ಮತ್ತು ಮಧ್ಯಪ್ರದೇಶದಲ್ಲಿ 1,803 ಮಹಿಳೆಯರು ಜೈಲಿನಲ್ಲಿದ್ದಾರೆ

lಮಹಿಳಾ ಜೈಲುಗಳ ಪೈಕಿ ಮಿಜೋರಾಂನಲ್ಲಿ ನಿಗದಿತ ಸಂಖ್ಯೆಗಿಂತ ಬಂದಿಗಳು ಹೆಚ್ಚು ಇದ್ದಾರೆ (ಶೇ 227.1). ತ್ರಿಪುರಾದಲ್ಲಿ ಈ ಪ್ರಮಾಣವು ಶೇ 184, ಮಹಾರಾಷ್ಟ್ರದಲ್ಲಿ ಶೇ 143.9 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 110.2 ಇದೆ

ಜೈಲಿನ ‘ಅಮಾನವೀಯ’ ಮುಖ

ಪಶ್ಚಿಮ ಬಂಗಾಳದ ಕಿಕ್ಕಿರಿದ ಜೈಲುಗಳ ಬಗ್ಗೆ ತನಿಖೆ ಮಾಡಲು ಕಲ್ಕತ್ತ ಹೈಕೋರ್ಟ್ 1990ರಲ್ಲಿ ವಕೀಲ ತಪಸ್ ಕುಮಾರ್ ಭಂಜಾ ಅವರನ್ನು ನೇಮಿಸಿತ್ತು. ಹಲವು ಮಹಿಳಾ ಬಂದಿಗಳ ಮೇಲೆ ಅತ್ಯಾಚಾರ ನಡೆದಿದ್ದು ಅವರ ಗಮನಕ್ಕೆ ಬಂದಿತ್ತು. ಅದರಿಂದ ಅನೇಕರು ಗರ್ಭಿಣಿಯರಾಗಿ, ಜೈಲಿನಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ್ದರು. ಮಹಿಳೆಯು ಜೈಲಿಗೆ ಅಡಿಯಿಟ್ಟ ದಿನದಿಂದಲೆ ಆಕೆಗೆ ಲೈಂಗಿಕ ಕಿರುಕುಳ ಆರಂಭವಾಗುತ್ತದೆ ಎನ್ನುವುದನ್ನು ಅವರು ಬಂದಿಗಳಿಂದ ತಿಳಿದರು. ಜೈಲಿನ ಪರಿಸ್ಥಿತಿಯನ್ನು ‘ಅಮಾನವೀಯ’ ಎಂದು ಬಣ್ಣಿಸಿದ್ದ ಅವರು ಕಲ್ಕತ್ತ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿನ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಜೈಲುಗಳಲ್ಲಿ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ ಎಂದು ಅವರು ‘ದಿ ಗಾರ್ಡಿಯನ್’ ಪತ್ರಿಕೆಗೆ (2024, ಫೆ.23) ತಿಳಿಸಿದ್ದರು. 

ದೇಶದಾದ್ಯಂತ ಮಹಿಳಾ ಬಂದಿಗಳ ಮೇಲೆ ಜೈಲಿನಲ್ಲಿರುವ ಪುರುಷರು ಮತ್ತು ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಹಿಂಸೆ ನಡೆದಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2018ರ ವರದಿ ಉಲ್ಲೇಖಿಸಿದೆ.

ಹಿಂದುಳಿದವರೇ ಅಧಿಕ

ಮಹಿಳಾ ಬಂದಿಗಳ ಪೈಕಿ ಶೇ 75ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಎಲ್ಲ ಧರ್ಮಗಳಲ್ಲಿನ ಹಿಂದುಳಿದ ವರ್ಗದವರು, ಬಡವರು ಆಗಿದ್ದಾರೆ. ಸಮಾಜದಲ್ಲಿ ಹೆಚ್ಚು ಶೋಷಣೆಗೆ ಗುರಿಯಾಗುವ ಈ ಮಹಿಳೆಯರು ಜೈಲುಗಳಲ್ಲಿಯೂ ಹೆಚ್ಚು ಶೋಷಣೆ, ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಹಿಳೆಯರ ಜಾತಿ, ವರ್ಗ, ಧರ್ಮ, ರಾಷ್ಟ್ರೀಯತೆ ಮುಂತಾದ ಅಂಶಗಳನ್ನು ಆಧರಿಸಿ ಮಹಿಳಾ ಕೈದಿಗಳೊಂದಿಗಿನ ಅಧಿಕಾರಿಗಳ ವರ್ತನೆಯು ನಿರ್ಧಾರವಾಗುತ್ತದೆ ಎನ್ನಲಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ ಪ್ರಕರಣ ಭಾರಿ ಸುದ್ದಿಯಾಗಿತ್ತು. ಆದರೆ, ಹಣ ನೀಡಿ ಅಕ್ರಮವಾಗಿ ಈ ರೀತಿ ಸೌಲಭ್ಯ ಪಡೆದ ಮಹಿಳಾ ಕೈದಿಗಳ ಪ್ರಮಾಣವು ತೀರಾ ಕಡಿಮೆ.

ಮಕ್ಕಳಿಗೂ ಜೈಲುವಾಸ

ಮಕ್ಕಳನ್ನು ಬೆಳೆಸಲು ಜೈಲುಗಳು ಯಾವ ಕಾರಣಕ್ಕೂ ಉತ್ತಮ ಸ್ಥಳಗಳಲ್ಲ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ ಆರು ವರ್ಷದವರೆಗಿನ ಮಕ್ಕಳು ತಮ್ಮ ತಾಯಿಯೊಂದಿಗೆ ಜೈಲಿನಲ್ಲಿ ಇರಲು ಅವಕಾಶವಿದೆ. ಮಕ್ಕಳಿಗೆ ಆರು ವರ್ಷವಾಗುವವರೆಗೆ ಅವರನ್ನು ಜೈಲಿನಲ್ಲಿಯೇ ಅವರ ತಾಯಂದಿರ ಜೊತೆ ಇರಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆರ್.ಡಿ.ಉಪಾಧ್ಯಾಯ ಮತ್ತು ಆಂಧ್ರ ಪ್ರದೇಶ ನಡುವಿನ ಪ್ರಕರಣದಲ್ಲಿ (2006) ಆದೇಶಿಸಿತ್ತು. 

ದೇಶದ ಜೈಲುಗಳಲ್ಲಿ 1,318 ಮಹಿಳೆಯರು 1,492 ಮಕ್ಕಳೊಂದಿಗೆ ಇದ್ದಾರೆ. ಇವರ ಪೈಕಿ 1,049 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದು, ಅವರೊಂದಿಗೆ 1,191 ಮಕ್ಕಳಿದ್ದಾರೆ. ಉಳಿದಂತೆ, 249 ಮಹಿಳಾ ಕೈದಿಗಳು ತಪ್ಪಿತಸ್ಥರೆಂದು ನಿರ್ಧಾರವಾಗಿದ್ದು, ಅವರೊಂದಿಗೆ 272 ಮಕ್ಕಳಿದ್ದಾರೆ.

  • ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್‌: ಎಸ್ಐಆರ್ ಸಾಂವಿಧಾನಿಕ ಸಿಂಧುತ್ವ

ಸಂದರ್ಭ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್‌) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ನೋಟಿಸ್ಜಾರಿಗೊಳಿಸಿದೆ.

  • ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಆಯೋಗಕ್ಕೆ ನೋಟಿಸ್‌ ನೀಡಿದ್ದು, ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ನವೆಂಬರ್‌ 26ಕ್ಕೆ ನಡೆಯಲಿದೆ.
  • ಈ ವಿಚಾರಣೆ ಪೂರ್ಣ ಆಗು ವವರೆಗೆ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಬೇರೆ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳ ವಿಚಾರಣೆ ತಡೆಹಿಡಿಯುವಂತೆ ಅಥವಾ ಮುಂದೂಡುವಂತೆಯೂ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
  • ಡಿಎಂಕೆ ಪಕ್ಷದ ಪರವಾಗಿ ಹಾಜರಾದ ವಕೀಲ ಕಪಿಲ್‌ ಸಿಬಲ್‌ ಅವರು, ‘ಮತದಾರರ ಪಟ್ಟಿ ಪರಿಷ್ಕರಣೆಗೆ ಸಾಮಾನ್ಯವಾಗಿ ಮೂರು ವರ್ಷಗಳು ಬೇಕಾಗುತ್ತವೆ. ಆದರೆ, ಈಗ, ತರಾತುರಿಯಲ್ಲಿ ಎಸ್‌ಐಆರ್‌ ಜಾರಿಗೊಳಿಸಲಾಗಿದೆ. ಪರಿಷ್ಕರಣೆ ವೇಳೆ ಮತದಾರರ ವಿವರಗಳನ್ನು ಒಳಗೊಂಡ ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು 5ಜಿ ನೆಟ್‌ವರ್ಕ್‌ ಬೇಕಾಗುತ್ತದೆ. ಆದರೆ, ಹಲವೆಡೆ ನೆಟ್‌ವರ್ಕ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ’ ಎಂದು ಪೀಠದ ಗಮನಕ್ಕೆ ತಂದರು. 
  • ಆಯೋಗದ ಪರವಾಗಿ ಹಾಜರಾದ ವಕೀಲ ರಾಕೇಶ್‌ ದ್ವಿವೇದಿ ಅವರು, ‘ರಾಜ್ಯಗಳು ಅಭಿವೃದ್ಧಿ ಹೊಂದಿವೆ ಎಂದು ಹೇಳಿಕೊಳ್ಳುವ ಬದಲು, ಎಷ್ಟು  ಹಿಂದುಳಿದಿವೆ ಎನ್ನುವುದನ್ನು ತೋರಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ’ ಎಂದರು.
  • ವಾದ ಆಲಿಸಿದ ಪೀಠವು, ‘ಎಸ್‌ಐಆರ್‌ ಬಗ್ಗೆ ಇಷ್ಟೊಂದು ಭಯವೇಕೆ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಈ ಬಗ್ಗೆ ವಿವರಣೆ ನೀಡಿದ ಕಪಿಲ್‌ ಸಿಬಲ್‌, ‘ಎಸ್‌ಐಆರ್‌ ವಿರೋಧಿಸಲು ರಾಜ್ಯಗಳಿಗೆ ವಿಭಿನ್ನ ಕಾರಣಗಳಿವೆ. ತಮಿಳುನಾಡಿನಲ್ಲಿ ಎಸ್‌ಐಆರ್‌ ನಡೆಯುವ ಸಮಯದಲ್ಲಿ ಮಳೆಗಾಲ ಇರುತ್ತದೆ. ಬೂತ್‌ ಮಟ್ಟದ ಅಧಿಕಾರಿಗಳು ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ನೇಮಕಗೊಂಡಿರುತ್ತಾರೆ. ಡಿಸೆಂಬರ್‌–ಜನವರಿಯಲ್ಲಿ ಕಟಾವಿನ ಸಮಯವಾಗಿದ್ದು, ಆಗಲೂ ಸೂಕ್ತ ಸಮಯವಲ್ಲ’ ಎಂದರು.

12 ರಾಜ್ಯಗಳಲ್ಲಿ ಎಸ್ಐಆರ್

  • ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಟಿಎಂಸಿ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ, ಸಿಪಿಐಎಂ ಮತ್ತು ಡಿಎಂಕೆ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. 
  • ಬಿಹಾರದಲ್ಲಿ, ವಿಧಾನಸಭೆ ಚುನಾವಣೆಗೆ ಮುನ್ನ ಜೂನ್‌ 24ರಂದು ಎಸ್‌ಐಆರ್‌ ಜಾರಿಗೊಳಿಸಲಾಗಿತ್ತು. ನಂತರ ಇದನ್ನು ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ ಸೇರಿ 12 ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಸುಮಾರು 51 ಕೋಟಿ ಮತದಾರರು ಎಸ್‌ಐಆರ್‌ ವ್ಯಾಪ್ತಿಗೆ ಬರಲಿದ್ದಾರೆ.
  • ನಮಗೆ ನ್ಯಾಯಸಮ್ಮತ ಒಪ್ಪಂದ ಬೇಕು’  

ಸಂದರ್ಭ:  ಭಾರತವು ಅಮೆರಿಕದ ಜೊತೆ ನ್ಯಾಯ ಸಮ್ಮತವಾದ, ಸಮಾನ ನೆಲೆಯ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

  • ರೈತರು, ಮೀನುಗಾರರು, ಕಾರ್ಮಿಕರು ಮತ್ತು ಹೈನುಗಾರರ ಹಿತಾಸಕ್ತಿಗಳ ವಿಚಾರದಲ್ಲಿ ದೇಶವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಗೋಯಲ್ ಅವರು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಅಮೆರಿಕದ ನಡುವೆ ಒಳ್ಳೆಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಮಾತುಕತೆ ನಡೆದಿದೆ ಎಂದಿದ್ದಾರೆ.
  • ‘ಭಾರತದ ಹಿತಾಸಕ್ತಿಗಳಿಗೆ ಪೂರಕವಾದ ಉತ್ತಮ ವ್ಯಾಪಾರ ಒಪ್ಪಂದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ರಾಜ್ಯಗಳ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರ ಸಮಾವೇಶದಲ್ಲಿ ಹೇಳಿದ್ದಾರೆ.
  • ‘ಅಮೆರಿಕದ ಜೊತೆ ನ್ಯಾಯಸಮ್ಮತ, ಸಮಾನ ನೆಲೆಯ ವ್ಯಾಪಾರ ಒಪ್ಪಂದವು ನಮಗೆ ಬೇಕು. ಅದು ಯಾವತ್ತು ಬೇಕಿದ್ದರೂ ಸಾಧ್ಯವಾಗಬಹುದು. ಅದು ನಾಳೆಯೇ ಆಗಬಹುದು, ಮುಂದಿನ ತಿಂಗಳು ಆಗಬಹುದು, ಮುಂದಿನ ವರ್ಷ ಆಗಬಹುದು. ಆದರೆ ಸರ್ಕಾರವಾಗಿ ನಾವು ಎಲ್ಲದಕ್ಕೂ ಸಿದ್ಧವಾಗುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
  • ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳಿಗೆ ರಷ್ಯಾದಲ್ಲಿ ಹೊಸ ಮಾರುಕಟ್ಟೆ ಅರಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ. ದೇಶದ ಮೀನುಗಾರಿಕಾ ವಲಯದ ಉತ್ಪನ್ನಗಳ ಮೇಲೆ ಅಮೆರಿಕವು ಹೆಚ್ಚಿನ ಸುಂಕ ವಿಧಿಸಿದೆ.
  • ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ವಿಚಾರವಾಗಿ ಐದು ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಒಪ್ಪಂದದ ಮೊದಲ ಹಂತವು ಈ ವರ್ಷದ ಅಂತ್ಯದ ಮೊದಲು ಸಾಧ್ಯವಾಗಲಿದೆ ಎಂದು ಎರಡೂ ದೇಶಗಳು ಹೇಳಿವೆ.
  • ‘ಬೇರೆ ದೇಶಗಳು ಅಮೆರಿಕದ ಜೊತೆ ನಡೆಸಿದ ಮಾತುಕತೆಗಳಿಗೆ ಹೋಲಿಸಿದರೆ ಭಾರತ ನಡೆಸಿರುವ ವಾಣಿಜ್ಯ ಒಪ್ಪಂದ ಕುರಿತ ಮಾತುಕತೆಯು ಹೆಚ್ಚು ಸಮಗ್ರವಾಗಿದೆ, ಡಬ್ಲ್ಯುಟಿಒ ನಿಯಮಗಳಿಗೆ ಅನುಗುಣವಾಗಿದೆ. ಮಾತುಕತೆಯು ಹೆಚ್ಚು ಸಮಯ ತೆಗೆದು ಕೊಂಡಿರಬಹುದು. ಆದರೆ ನಾವು ನಮ್ಮ ಸೂಕ್ಷ್ಮ ವಲಯಗಳ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಬಹಳ ಎಚ್ಚರಿಕೆಯಿಂದ ಮಾತುಕತೆ ನಡೆಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಭಾರತದ ಜೊತೆ ನ್ಯಾಯ ಸಮ್ಮತವಾದ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳುವ ಹಂತದ ಸನಿಹಕ್ಕೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಭಾರತದ ಸರಕುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಒಂದು ಹಂತದಲ್ಲಿ ಕಡಿಮೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
  • ಸಕ್ಕರೆ ಉತ್ಪಾದನೆ ಶೇ 18ರಷ್ಟು ಹೆಚ್ಚಳ

ಸಂದರ್ಭ: ಅಕ್ಟೋಬರ್ಗೆ ಶುರುವಾದ 2025–26ನೇ ಸಾಲಿನ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ದೇಶದ ಸಕ್ಕರೆ ಉತ್ಪಾದನೆ ಪ್ರಮಾಣವು ಶೇ 18.58ರಷ್ಟು ಹೆಚ್ಚಳವಾಗಿ, 3.09 ಕೋಟಿ ಟನ್ಗೆ ತಲುಪುವ ನಿರೀಕ್ಷೆ ಇದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟ (ಐಎಸ್ಎಂಎ) ಹೇಳಿದೆ.

  • ಕಳೆದ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 2.61 ಕೋಟಿ ಟನ್‌ ಸಕ್ಕರೆ ಉತ್ಪಾದನೆ ಆಗಿತ್ತು. ಈ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆಯ ದಾಸ್ತಾನು 50 ಲಕ್ಷ ಟನ್‌ ಆಗಿದೆ. ಎಥೆನಾಲ್‌ಗಾಗಿ ಈ ವರ್ಷ 34 ಲಕ್ಷ ಟನ್ ಸಕ್ಕರೆಯನ್ನು ಬಳಸಿಕೊಳ್ಳುವ ಅಂದಾಜು ಇದೆ ಎಂದು ಐಎಸ್‌ಎಂಎ ಹೇಳಿದೆ.
  • ವರ್ಷದ ಆರಂಭದಲ್ಲಿ ಇದ್ದ ಸಕ್ಕರೆ ದಾಸ್ತಾನು ಹಾಗೂ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಪರಿಗಣಿಸಿದರೆ ಈ ಬಾರಿ ಸಕ್ಕರೆಯ ಲಭ್ಯತೆಯು 3.59 ಕೋಟಿ ಟನ್‌ ಆಗಲಿದೆ. ಇದು ದೇಶದ ಮಾರುಕಟ್ಟೆಗೆ ಅಗತ್ಯವಿರುವ ಸಕ್ಕರೆಯ ಪ್ರಮಾಣವಾದ 2.85 ಕೋಟಿ ಟನ್‌ಗಿಂತ ಹೆಚ್ಚು ಎಂದು ಐಎಸ್‌ಎಂಎ ಹೇಳಿದೆ.
  • ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನೆಯು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ದೇಶದ ಒಟ್ಟಾರೆ ಸಕ್ಕರೆ ಉತ್ಪಾದನೆಯೂ ಜಾಸ್ತಿ ಆಗಬಹುದು ಎಂದು ಅಂದಾಜು ಮಾಡಿದೆ. 2025–26ರಲ್ಲಿ ಕರ್ನಾಟಕದಲ್ಲಿ 63.5 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗುವ ನಿರೀಕ್ಷೆ ಇದೆ.
  • ‘ದೇಶದಲ್ಲಿ ಸಕ್ಕರೆ ಲಭ್ಯತೆಯು ಈ ಬಾರಿ ಉತ್ತಮ ಮಟ್ಟದಲ್ಲಿ ಇರುವ ಅಂದಾಜು ಇದೆ. ಹೀಗಾಗಿ ಭಾರತದಿಂದ ಸರಿಸುಮಾರು 20 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಅವಕಾಶ ಇದೆ. ರಫ್ತು ನೀತಿಯನ್ನು ಆದಷ್ಟು ಬೇಗ ಪ್ರಕಟಿಸುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ’ ಎಂದು ಐಎಸ್‌ಎಂಎ ಹೇಳಿದೆ.
  • ಫ್ಲೆಷ್‌’ ಕೃತಿಗೆ ಬುಕರ್

ಸಂದರ್ಭ:  ಹಂಗೇರಿ– ಬ್ರಿಟನ್‌ ಲೇಖಕ ಡೇವಿಡ್ ಝಲೈ ಅವರ ‘ಫ್ಲೆಷ್’ ಕಾದಂಬರಿಗೆ 2025ರ ಪ್ರತಿಷ್ಠಿತ ‘ಬುಕರ್ ಪ್ರಶಸ್ತಿ’ ಸಂದಿದೆ.

  • ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರದಿ ಲೋನ್ಲಿನೆಸ್ಆಫ್ ಸೊನಿಯಾ ಆ್ಯಂಡ್ ಸನ್ನಿಕಾದಂಬರಿ ಸೇರಿದಂತೆ ಆರು ಲೇಖಕರ ಕೃತಿಗಳು ಬುಕರ್ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದವು
  • ಲಂಡನ್‌ನ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಕಳೆದ ವರ್ಷದ ಬುಕರ್‌ ಪ್ರಶಸ್ತಿ ವಿಜೇತೆ ಸಂತಾ ಹಾರ್ವಿ ಅವರು ಡೇವಿಡ್ ಝಲೈ ಅವರಿಗೆ ಪಾರಿತೋಷಕವನ್ನು ನೀಡಿದರು.
  • ಪ್ರಶಸ್ತಿಯು ಪಾರಿತೋಷಕದ ಜೊತೆಗೆ ₹50 ಸಾವಿರ ಪೌಂಡ್‌ (₹58.25 ಲಕ್ಷ) ನಗದನ್ನೂ ಒಳಗೊಂಡಿದೆ.
  • ಒಂದು ವೇಳೆ ಕಿರಣ್‌ ದೇಸಾಯಿ ಅವರಿಗೆ ಈ ಪ್ರಶಸ್ತಿ ದೊರೆತಿದ್ದರೆ, ಬುಕರ್‌ ಪ್ರಶಸ್ತಿಯ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ 5ನೇ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಿದ್ದರು.
  • 2006ರಲ್ಲಿ ದೇಸಾಯಿ ಅವರ ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್’ ಕೃತಿಗೆ ಬುಕರ್‌ ಪ್ರಶಸ್ತಿ ಲಭಿಸಿತ್ತು. ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಅಮೆರಿಕನ್ ಕೊರಿಯನ್ ಲೇಖಕಿ ಸುಸಾನ್ ಚೋಯ್ ಅವರ ‘ಫ್ಲಾಶ್ ಲೈಟ್‌’ ಅಮೆರಿಕನ್ ಜಪಾನೀಸ್ ಲೇಖಕಿ ಕೇಟಿ ಕಿಟಮುರಾ ಅವರ ‘ಆಡಿಷನ್‌’, ಬ್ರಿಟಿಷ್ ಅಮೆರಿಕನ್ ಲೇಖಕಿ ಬೆನ್‌ ಮಾರ್ಕೊವಿಟ್ಸ್‌ ಅವರ ‘ದಿ ರೆಸ್ಟ್‌ ಆಫ್ ಅವರ್ ಲೈವ್ಸ್‌’ ಮತ್ತು ಇಂಗ್ಲಿಷ್ ಕಾದಂಬರಿಕಾರ ಆಂಡ್ರ್ಯೂ ಮಿಲ್ಲರ್ ಅವರ ‘ದಿ ಲ್ಯಾಂಡ್ ಇನ್‌ ವಿಂಟರ್‌’ ಕೃತಿಗಳು ಇದ್ದವು.
  • ವಿಶ್ವ ಶೂಟಿಂಗ್: ಐಶ್ವರಿ ಪ್ರಸಾದ್ಗೆ ಬೆಳ್ಳಿ ಪದಕ

ಸಂದರ್ಭ: ಒಲಿಂಪಿಯನ್ ಐಶ್ವರಿ ಪ್ರಸಾದ್ ಸಿಂಗ್ ತೋಮಾರ್ ಅವರು ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 50 ಮೀ. ರೈಫಲ್‌ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ಸರಿಗಟ್ಟಿದರು.

  • ಐಶ್ವರಿ ಅವರು 466.9 ಸ್ಕೋರ್‌ನೊಡನೆ ಎರಡನೇ ಸ್ಥಾನ ಗಳಿಸಿದರು. ಚೀನಾದ ಯುಕುನ್ ಲಿಯು (467.1) ಅವರು ಚಿನ್ನ ಗೆದ್ದರೆ, ಫ್ರಾನ್ಸ್‌ನ ರೊಮೇನ್‌ ಆಫ್ರೆರಿ (454.8) ಕಂಚಿನ ಪದಕ ಗಳಿಸಿದರು.
  • ಫೈನಲ್‌ನಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ನೀರಜ್ ಕುಮಾರ್ (432.6) ಅವರು ಐದನೇ ಸ್ಥಾನ ಪಡೆದರು.
  • ಐಶ್ವರಿ ಪ್ರಸಾದ್ ಇದಕ್ಕೆ ಮೊದಲು ತಮ್ಮ ಸ್ಪರ್ಧೆಯ ಫೈನಲ್ ತಲುಪುವ ಮೊದಲು ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆ (597–40x) ಸರಿಗಟ್ಟಿದ್ದರು. ನೀರಜ್ 592ರ ಸ್ಕೋರ್‌ನೊಡನೆ ಅಂತಿಮ ಸುತ್ತು ತಲುಪಿದ್ದರು.
  • ರಾಣಾ–ಇಶಾಗೆ ಬೆಳ್ಳಿ: ಏರ್ ಪಿಸ್ತೂಲ್ ವಿಶ್ವ ಚಾಂಪಿಯನ್ ಆದ ಸಾಮ್ರಾಟ್ ರಾಣಾ –ಹಾಲಿ ಚಾಂಪಿಯನ್ ಇಶಾ ಸಿಂಗ್ ಅವರು 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದರು.
  • ಎರಡನೇ ಸ್ಥಾನ: ಮೂರು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗಳೊಂದಿಗೆ ಭಾರತವು ಪದಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾ (8 ಚಿನ್ನ ಸಹಿತ 14 ಪದಕ) ಅಗ್ರಸ್ಥಾನದಲ್ಲಿದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments