- ಕಬ್ಬಿಗೆ ₹3,300 ದರ, ₹50 ಪ್ರೋತ್ಸಾಹಧನ
ಸಂದರ್ಭ: ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ನಡೆಸಿದ ಸುದೀರ್ಘ ಮಾತುಕತೆ ಬಳಿಕ ರಾಜ್ಯ ಸರ್ಕಾರ, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿದೆ.
- ‘ಕೇಂದ್ರದಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರಿಗೆ ಅನ್ಯಾಯವಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಲೀಕರು, ರೈತರನ್ನು ಒಳಗೊಂಡು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
- ಸಕ್ಕರೆಯ ಎಂಎಸ್‌ಪಿ ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.
- ಕಾರ್ಖಾನೆಗಳು ಒಂದು ಟನ್ಗೆ ಹಿಂದೆ ನಿಗದಿಯಾಗಿದ್ದ ₹3,200ರ ಜತೆಗೆ ಹೆಚ್ಚುವರಿಯಾಗಿ ₹50 ನೀಡಿದರೆ, ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ₹50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ 11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ₹3,300 ಹಾಗೂ ಶೇ 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ದರ ಸಿಗಲಿದೆ.
- ಕೇಂದ್ರ ಸರ್ಕಾರ ಕಟಾವು ಮತ್ತು ಸಾಗಣೆ ವೆಚ್ಚ ಸೇರಿಸಿ ಶೇ 10.5 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ₹3,550 ನಿಗದಿಪಡಿಸಿದೆ. ಸಾಗಣೆ, ಕಟಾವು ವೆಚ್ಚ ಹೊರತುಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ ಮತ್ತು ಕಲಬುರಗಿ ಸೇರಿದಂತೆ ವಿವಿಧೆಡೆ ರೈತರು ಅ.30ರಿಂದ ಪ್ರತಿಭಟನೆ ನಡೆಸುತ್ತಿದ್ದರು.
- ಸಚಿವರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ನಿಗದಿ ಮಾಡಿದ್ದ ₹3,200 ದರವನ್ನೂ ಬೆಳೆಗಾರರು ತಿರಸ್ಕರಿಸಿದ್ದರು.
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆ ನಡೆಸಿ, ಪರಿಷ್ಕೃತ ದರ ಘೋಷಣೆ ಮಾಡಿದರು. ಕಬ್ಬಿನ ಇಳುವರಿ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ಹಾಗಾಗಿ, ಎಲ್ಲ ಇಳುವರಿ ಪ್ರಮಾಣದ ಕಬ್ಬಿಗೂ ಪ್ರತಿ ಟನ್ಗೆ ₹100ರೂ ಹೆಚ್ಚಳ ಅನ್ವಯವಾಗಲಿದೆ ಎಂದು ಖಚಿತಪಡಿಸಿದರು.
- ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ), ಕಬ್ಬಿಗೆ ಎಫ್ಆರ್ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ, ಸಕ್ಕರೆ ರಫ್ತು ಮಿತಿ ನಿಗದಿಪಡಿಸುವುದೂ ಕೇಂದ್ರ ಸರ್ಕಾರ.
- ಹಣಕಾಸು ವಲಯದಲ್ಲಿ ಸುಧಾರಣೆ ಅಗತ್ಯ: ವಿಶ್ವಬ್ಯಾಂಕ್
ಸಂದರ್ಭ: 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಡಾಲರ್ (₹2,660 ಲಕ್ಷ ಕೋಟಿ) ಆರ್ಥಿಕತೆಯಾಗಲು ಹಣಕಾಸು ವಲಯದಲ್ಲಿ ಹೆಚ್ಚಿನ ಸುಧಾರಣೆಗಳು ಮತ್ತು ಖಾಸಗಿ ಬಂಡವಾಳಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
- ಭಾರತದ ‘ವಿಶ್ವ ದರ್ಜೆ’ಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸರ್ಕಾರದ ಕಾರ್ಯಕ್ರಮಗಳಿಂದ ಪುರುಷರು ಮತ್ತು ಮಹಿಳೆಯರಿಗೆ ಹಣಕಾಸು ಸೇವೆಗಳು ಸುಲಭವಾಗಿ ಲಭ್ಯವಾಗುವಂತಾಗಿವೆ ಎಂದು ವಿಶ್ವ ಬ್ಯಾಂಕ್‌ನ ಹಣಕಾಸು ವಲಯದ ಮೌಲ್ಯಮಾಪನ ವರದಿ ತಿಳಿಸಿದೆ.
- ವಿಶೇಷವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಳವಾಗಬೇಕು. ವ್ಯಕ್ತಿಗಳು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಹಣಕಾಸು ಸೌಲಭ್ಯ ಲಭ್ಯವಾಗುವಂತೆ ಮಾಡಬೇಕು. ಸಹಕಾರಿ ಬ್ಯಾಂಕ್‌ಗಳ ಮೇಲೆ ಪ್ರಾಧಿಕಾರದ ನಿಯಂತ್ರಣ ಅಗತ್ಯ ಎಂದು ಸಲಹೆ ನೀಡಿದೆ.
- ಹಣಕಾಸು ವಲಯದ ಮೌಲ್ಯಮಾಪನ ಕಾರ್ಯಕ್ರಮವು (ಎಫ್‌ಎಸ್‌ಎಪಿ) ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಜಂಟಿ ಕಾರ್ಯಕ್ರಮವಾಗಿದೆ. ಇದು ದೇಶದ ಹಣಕಾಸು ವಲಯದ ಸಮಗ್ರ ಮತ್ತು ಆಳವಾದ ವಿಶ್ಲೇಷಣೆಯನ್ನು ಮಾಡುತ್ತದೆ.
- ‘ಜಿಡಿಪಿ: ಶೇ 6.8ರಷ್ಟು ನಿರೀಕ್ಷೆ’
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ಕ್ಕಿಂತಲೂ ಹೆಚ್ಚಾಗುವ ವಿಶ್ವಾಸವಿದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.
- ಜಿಎಸ್‌ಟಿ ಇಳಿಕೆ ಮತ್ತು ಆದಾಯ ತೆರಿಗೆ ವಿನಾಯಿತಿಯಿಂದ ಜನರು ಹೆಚ್ಚು ಹಣ ವ್ಯಯಿಸಲು ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.
- ಆರ್ಥಿಕ ಸಮೀಕ್ಷೆ ವರದಿ ಸಹ ಜಿಡಿಪಿ ಬೆಳವಣಿಗೆ ಶೇ 6.3ರಿಂದ ಶೇ 6.8ರಷ್ಟಾಗಲಿದೆ ಎಂದು ಅಂದಾಜಿಸಿದೆ. ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಈ ಒಪ್ಪಂದ ಶೀಘ್ರ ಆಗಲಿದೆ ಎಂದು ಹೇಳಿದ್ದಾರೆ.
- ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟಾಗಿತ್ತು. ಕೃಷಿ ವಲಯ ಮತ್ತು ಸೇವಾ ವಲಯದಿಂದ ಈ ಪ್ರಗತಿ ಸಾಧಿಸಿತ್ತು.
- ರಾಜ್ಯದ ಕಚ್ಚಾ ಗೇರು ಆಮದು ಹೆಚ್ಚಳ
ಸಂದರ್ಭ: 14ರಿಂದ 16ರವರೆಗೆ ಗೋಡಂಬಿ ಶತಮಾನೋತ್ಸವ ಶೃಂಗ: ‘ಜಗತ್ತಿನ ಒಟ್ಟು ಗೋಡಂಬಿ ಬಳಕೆಯಲ್ಲಿ ಭಾರತದ ಪ್ರಮಾಣ ಮೂರನೇ ಒಂದರಷ್ಟಿದೆ. ದೇಶದ ಗೋಡಂಬಿ ಸಂಸ್ಕರಣೆಯಲ್ಲಿ ಕರ್ನಾಟಕದ ಪಾಲು ಶೇ 25ರಷ್ಟಿದೆ. ರಾಜ್ಯದ ಕಚ್ಚಾಗೇರು ಆಮದು ಪ್ರಮಾಣ 5 ಲಕ್ಷ ಟನ್ಗೆ ತಲುಪಿದೆ’ ಎಂದು ಕರ್ನಾಟಕ ಗೇರು ಉತ್ಪಾದಕರ ಸಂಘ ಹೇಳಿದೆ.
- ‘ಮಂಗಳೂರಿನ ಗೇರು ಸಂಸ್ಕರಣಾ ಉದ್ಯಮಕ್ಕೆ (1925ರಲ್ಲಿ ಆರಂಭ) ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ‘ಗೋಡಂಬಿ ಶತಮಾನೋತ್ಸವ ಶೃಂಗ’ವನ್ನು ಇದೇ 14ರಿಂದ 16ರವರೆಗೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್. ಅನಂತ ಕೃಷ್ಣ ರಾವ್ ಹಾಗೂ ಶೃಂಗದ ಸಂಚಾಲಕ ಕೆ. ಪ್ರಕಾಶ್ ಕಲ್ಬಾವಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
- ‘ಗೇರು ಸಂಸ್ಕರಣೆಯಲ್ಲಿ ಹೊಸ ಆವಿಷ್ಕಾರಗಳ ಪರಿಚಯ, ಸಮಸ್ಯೆಗಳ ಬಗ್ಗೆ ಚರ್ಚೆ ಇರಲಿದೆ. ದೇಶದಲ್ಲಿ ಗೋಡಂಬಿ ಸಂಸ್ಕರಣೆಯಲ್ಲಿ ತೊಡಗಿರುವ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.
- ‘ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅದರಲ್ಲೂ ಮಂಗಳೂರು ಗೋಡಂಬಿಗೆ ಬೇಡಿಕೆ ಹೆಚ್ಚಿದೆ. ಆರಂಭದಲ್ಲಿ ವರ್ಷಕ್ಕೆ 50 ಸಾವಿರ ಟನ್ ಇದ್ದ ಕಚ್ಚಾ ಗೇರು ಬೀಜ ಸಂಸ್ಕರಣೆಯ ಪ್ರಮಾಣ ಈಗ ವರ್ಷಕ್ಕೆ 5 ಲಕ್ಷ ಟನ್ಗೆ ತಲುಪಿದೆ. ನವಮಂಗಳೂರು ಬಂದರಿಗೆ ಏಳು ತಿಂಗಳಲ್ಲಿ 3.45 ಲಕ್ಷ ಟನ್ ಕಚ್ಚಾಗೇರು ಆಮದಾಗಿದ್ದು, ಒಂದು ವರ್ಷದಲ್ಲಿ ಇದರ ಪ್ರಮಾಣ 5 ಲಕ್ಷ ಟನ್ ಆಗಲಿದೆ’ ಎಂದರು.
- ಭಾರತದ ಸಂಸ್ಕರಣಾ ಉದ್ಯಮಕ್ಕೆ 20 ಲಕ್ಷ ಟನ್ ಕಚ್ಚಾ ಗೇರು ಬೀಜ ಬೇಕು. ಆದರೆ, ನಮ್ಮ ದೇಶದಲ್ಲಿ ಬೆಳೆಯುವುದು ಸರಾಸರಿ 5 ಲಕ್ಷ ಟನ್ ಮಾತ್ರ. ನಮಗೆ ಬೇಕಿರುವ ಕಚ್ಚಾ ಗೇರು ಬೀಜಗಳ ಪೈಕಿ ಶೇ 25ರಷ್ಟು ಮಾತ್ರ ದೇಶೀಯವಾಗಿ ಬೆಳೆಯಲಾಗುತ್ತಿದೆ. ಶೇ 75ರಷ್ಟು ಹೊರದೇಶಗಳನ್ನೇ ಅವಲಂಬಿಸಿದ್ದೇವೆ.
- ಕರ್ನಾಟಕದಲ್ಲಿ ಕಚ್ಚಾ ಗೇರು ಬೆಳೆಯುವ ಪ್ರಮಾಣ 50 ಸಾವಿರ ಟನ್‌ನಷ್ಟು ಮಾತ್ರ. ರಾಜ್ಯದ 26 ಜಿಲ್ಲೆಗಳಲ್ಲಿ ಗೇರು ಕೃಷಿ ಇದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕು. ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ, ಆ ಹಣ್ಣು (ಹಣ್ಣಿನ ಶೇ 80ರಷ್ಟು ಭಾಗ) ಈಗ ವ್ಯರ್ಥವಾಗುತ್ತಿದೆ. ಅದರಿಂದ ಉಪ ಉತ್ಪನ್ನ ತಯಾರಿಸಿ ಈ ಬೆಳೆಯನ್ನು ಲಾಭದಾಯಕವಾಗಿಸಬೇಕಿದೆ ಎಂದರು.
- ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ದರ ಹೆಚ್ಚಾಗಿದೆ. ಹೀಗಾಗಿ ನಮ್ಮ ದೇಶದ ಗೋಡಂಬಿ ರಫ್ತು ಪ್ರಮಾಣ ಕೇವಲ 50 ಸಾವಿರ ಟನ್‌ನಷ್ಟು ಮಾತ್ರ ಇದೆ ಎಂದು ಹೇಳಿದರು.
- ರಾಜ್ಯದ ಕರಾವಳಿಯಲ್ಲಿ ಅಂದಾಜು 400 ಗೋಡಂಬಿ ಸಂಸ್ಕರಣಾ ಘಟಕಗಳು ಇದ್ದವು. ಈಗ 250 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಯಾಂತ್ರೀಕರಣಕ್ಕೆ ಒಗ್ಗಿಕೊಳ್ಳದಿರುವುದು ಮತ್ತಿತರ ಕಾರಣ ಕೆಲ ಘಟಕಗಳು ಮುಚ್ಚಿವೆ. ಘಟಕಗಳು ಕಡಿಮೆಯಾದರೂ, ಗೋಡಂಬಿ ಸಂಸ್ಕರಣೆಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದರು.
- ಬೆಂಗಳೂರು– ಎರ್ನಾಕುಳಂ ‘ವಂದೇ ಭಾರತ್ಗೆ’ ಹಸಿರು ನಿಶಾನೆ ಇಂದು
ಸಂದರ್ಭ: ಬೆಂಗಳೂರು– ಎರ್ನಾಕುಳಂ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ.
- ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ರೈಲು ತ್ರಿಶ್ಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ, ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ. ಕೇರಳ–ತಮಿಳುನಾಡು–ಕರ್ನಾಟಕದಲ್ಲಿ ಸಂಚರಿಸುವ ಈ ರೈಲು ಎಂಟು ಕೋಚ್‌ಗಳನ್ನು ಒಳಗೊಂಡಿರಲಿದೆ.
- 97 ಜೆಟ್ ಎಂಜಿನ್ ಖರೀದಿಗೆ ಒಪ್ಪಂದ
ಸಂದರ್ಭ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ತೇಜಸ್ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 97 ಜೆಟ್ ಎಂಜಿನ್ಗಳನ್ನು ಖರೀದಿಸಲು ಜಿಇ ಏರೋಸ್ಪೇಸ್ ಜತೆ ಒಪ್ಪಂದ ಮಾಡಿಕೊಂಡಿದೆ.
- ಒಪ್ಪಂದದ ಪ್ರಕಾರ, ಎಫ್404–ಜಿಇ–ಐಎನ್20 ಎಂಜಿನ್‌ಗಳ ವಿತರಣೆಯು 2027ರಿಂದ ಪ್ರಾರಂಭವಾಗಲಿದ್ದು, 2032ರ ವೇಳೆಗೆ ಪೂರೈಕೆ ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- 97 ಲಘು ಯುದ್ಧ ವಿಮಾನ ಎಂಕೆ1ಎ ಕಾರ್ಯಕ್ರಮವನ್ನು ಕಾರ್ಯಗತ ಗೊಳಿಸಲು ಎಂಜಿನ್‌ಗಳು ಹಾಗೂ ‘ಪೂರಕ ಪ್ಯಾಕೇಜ್’ ಖರೀದಿಗೆ ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
- ಭಾರತೀಯ ವಾಯುಪಡೆಗೆ 97 ತೇಜಸ್ ಎಂಕೆ–1ಎ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಎಚ್‌ಎಎಲ್‌ನೊಂದಿಗೆ ಸೆಪ್ಟೆಂಬರ್‌ನಲ್ಲಿ ₹62,370 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.
- ಭಾರತ ಹಾಕಿಗೆ ಶತಮಾನ ಸಂಭ್ರಮ
ಸಂದರ್ಭ: ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ದಿಗ್ಗಜರು ಅಪರೂಪದ ಛಾಯಾಚಿತ್ರ, ಸ್ಮರಣಿಕೆಗಳ ಪ್ರದರ್ಶನ: ಇಲ್ಲಿನ ಹೆಗ್ಗುರುತಾದ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣ ಸಂಭ್ರಮದಿಂದ ಕಳೆಗಟ್ಟಿತ್ತು. ತಲೆಮಾರು ಗಳನ್ನು ಪ್ರಭಾವಿಸಿದ ದಿಗ್ಗಜ ಆಟಗಾರರು, ಒಲಿಂಪಿಕ್ ಸ್ವರ್ಣ ವಿಜೇತ ಆಟಗಾರರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
- ಭಾರತದ ಹಾಕಿ ಸುವರ್ಣಯುಗದಲ್ಲಿ ಆಡಿದ್ದ ಗುರುಬಕ್ಷ್ ಸಿಂಗ್, ಅಸ್ಲಂ ಶೇರ್ ಖಾನ್, ಹರ್ಬಿಂದರ್ ಸಿಂಗ್, ಅಜಿತ್ ಪಾಲ್ ಸಿಂಗ್, ಅಶೋಕ್ ಕುಮಾರ್, ಬಿ.ಪಿ.ಗೋವಿಂದ, ಜಾಫರ್ ಇಕ್ಬಾಲ್, ಬ್ರಿಗೇಡಿಯರ್ ಹರಚರಣ್ ಸಿಂಗ್, ವಿನೀತ್ ಕುಮಾರ್, ಮಿರ್ ರಂಜನ್ ನೇಗಿ, ರೋಮಿಯೊ ಜೇಮ್ಸ್, ಅಸುಂತ ಲಾಕ್ರಾ, ಸುಭದ್ರ ಪ್ರಧಾನ್ ಇವರಲ್ಲಿ ಒಳಗೊಂಡಿದ್ದರು.
- ಈ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಭಾರತದ ರಾಷ್ಟ್ರೀಯ ಕ್ರೀಡೆಯ ವೈಭವಯುತ ಪಯಣವನ್ನು ಕೊಂಡಾಡಿದರು. ದೇಶದ ಕ್ರೀಡಾ ಪರಂಪರೆಯಲ್ಲಿ ಈ ಆಟದ ಗಟ್ಟಿ ಬೇರುಗಳನ್ನು ನೆನಪಿಸಿದರು.
- ‘ಈ ಕ್ರೀಡೆಯು ದೇಶದಲ್ಲಿ ವಿವಿಧ ಹಂತಗಳನ್ನು ದಾಟಿದೆ. ಭಾರತ ಕ್ರೀಡಾ ಕ್ಷೇತ್ರದಲ್ಲಿ ಮೆರೆಯಬಹುದು ಎಂಬುದನ್ನು ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಸಾಧಿಸಿ ತೋರಿಸಿತು’ ಎಂದು ಮಾಂಡವೀಯ ಬಣ್ಣಿಸಿದರು.