- ಸರ್ಕಾರದ ನಡೆಗೆ ಕೋರ್ಟ್ ಅಂಕುಶ
ಸಂದರ್ಭ: ಸರ್ಕಾರಿ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ಜನರ ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ನಿಯಮ: ಸರ್ಕಾರದ ಆದೇಶವು ಸಂವಿಧಾನದ ಅಧ್ಯಾಯ IIIರಲ್ಲಿ ಪ್ರತಿಪಾದಿಸಲಾದ ಹಕ್ಕುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ 19(1)(ಎ) ಮತ್ತು (ಬಿ) ಅಡಿಯಲ್ಲಿ ಕೊಡಮಾಡಲಾಗಿರುವ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುತ್ತದೆಎಂ.ನಾಗಪ್ರಸನ್ನ, ನ್ಯಾಯಮೂರ್ತಿ.
- ‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆ ಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ತಡೆ ನೀಡಿದೆ.
- ರಾಜ್ಯ ಸಚಿವ ಸಂಪುಟದ ಈ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಶ್ಚೇತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.
- ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ಈ ಆದೇಶವು ಸಂವಿಧಾನದ 13(2)ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಈ ಆಕ್ಷೇಪಾರ್ಹ ಆದೇಶದ ಕಾರ್ಯಾಚರಣೆ ಮತ್ತು ಅದರಿಂದ ಈಗಾಗಲೇ ಹೊರಹೊಮ್ಮಿರುವ ಎಲ್ಲಾ ಪರಿಣಾಮಗಳ ಪ್ರಕ್ರಿಯೆಗಳನ್ನು ಮುಂದಿನ ವಿಚಾರಣೆ ಯವರೆಗೆ ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಿ ಈ ಆದೇಶ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿತು.
- ‘ಆಕ್ಷೇಪಾರ್ಹ ಆದೇಶವು ಸಂವಿಧಾನದ 13(2)ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಈ ಮೂಲಕ 19(1)(ಎ) ಮತ್ತು (ಬಿ) ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಮೂಲಭೂತ ಹಕ್ಕುಗಳನ್ನು ಕಾರ್ಯಕಾರಿ ಆದೇಶಗಳಿಂದ ಮೊಟಕುಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
- ‘ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುವ ಬಗ್ಗೆ, ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 31ರಲ್ಲಿ ಈಗಾಗಲೇ ವಿಶೇಷವಾಗಿ ವಿವರಿಸಲಾಗಿದೆ. ಇಂತಹ ಸಂದರ್ಭಗಳ ನಿಯಂತ್ರಣದ ಬಗ್ಗೆ ಕಲಂ 31ರ ಉಪ ವಿಭಾಗ (6)ರಲ್ಲಿ ಏನೆಲ್ಲಾ ವಿಧಾನಗಳನ್ನು ಅನುಸರಿಸ ಬೇಕೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಇಂತಹುದೊಂದು ಶಾಸನಬದ್ಧ ಕಲಂ ಅಸ್ತಿತ್ವದಲ್ಲಿ ಇರುವಾಗ ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
- ನೋಟಿಸ್: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಕಾರ್ಯದರ್ಶಿ, ಡಿಜಿ-ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಶನರ್ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 17ರ ಮಧ್ಯಾಹ್ನ 2:30ಕ್ಕೆ ನಿಗದಿ ಮಾಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮಲ್ಲಿಕಾರ್ಜುನ ಹಿರೇಮಠ ವಕಾಲತ್ತು ವಹಿಸಿದ್ದಾರೆ.
ಅಶೋಕ ಹಾರನಹಳ್ಳಿ ವಾದಾಂಶ
- l ಕರ್ನಾಟಕ ರಾಜ್ಯದಾದ್ಯಂತ ನಾಗರಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು, ನಡಿಗೆದಾರರ ಸಂಘಗಳು, ಯೋಗ ಕ್ಲಬ್‌ಗಳು ಮತ್ತು ಓಟಗಾರರ ಗುಂಪುಗಳು, ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ನಿಯಮಿತ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ, ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ಪೂರ್ವಾನುಮತಿ ಕೊರತೆಯಿಂದಾಗಿ ಕ್ರಿಮಿನಲ್ ಕ್ರಮಕ್ಕೆ ಗುರಿಯಾಗಬಹುದು.
- lಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಕೂಡಿದ ಸಂಘ, ಸಂಸ್ಥೆಗಳು, ಅಥವಾ ವ್ಯಕ್ತಿಗಳ ಗುಂಪು ಅಥವಾ ಅವರ ಪರವಾಗಿ ಯಾವುದೇ ಇತರ ವ್ಯಕ್ತಿಯ ಸಂಸ್ಥೆಯು ಈ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ನಡೆಸಿದರೆ, ಅಂತಹುದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಕಲಂಗಳ ಪ್ರಕಾರ ಸಭೆ ಸೇರುವುದನ್ನು ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ.
- l ಸರ್ಕಾರಿ ಆಸ್ತಿ ಎಂದರೆ: ಸ್ಥಳೀಯ ಪ್ರಾಧಿಕಾರ ಅಥವಾ ಇಲಾಖೆ, ಮಂಡಳಿಗಳು, ಬೆಳೆಗಾರರ ಒಡೆತನದಲ್ಲಿರುವ ಮತ್ತು ನಿರ್ವಹಿಸುವ ಯಾವುದೇ ಭೂಮಿ, ಕಟ್ಟಡ, ರಚನೆ, ರಸ್ತೆ, ಉದ್ಯಾನವನ, ಆಟದ ಮೈದಾನ, ಜಲಮೂಲ ಅಥವಾ ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ನಿಹಿತವಾಗಿರುವ, ವಹಿಸಲಾಗಿರುವ ಅಥವಾ ನಿರ್ವಹಿಸುವ ಯಾವುದೇ ಇತರ ಸ್ಥಿರ ಆಸ್ತಿ.
ಅರ್ಜಿದಾರರ ಪ್ರಶ್ನೆಯ ಮುಖ್ಯಾಂಶಗಳು
- l16.10.2025: ಖಾಸಗಿ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ‘ಪರಿಹಾರ ಮತ್ತು ನಿಯಂತ್ರಣ’ಕ್ಕಾಗಿ ಸಂಪುಟ ಸಭೆ ಕೈಗೊಂಡ ನಿರ್ಧಾರ
- l ಇದಕ್ಕೆ ಅನುಗುಣವಾಗಿ 18.10.2025ರಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶ.
- l19.10.2025 ಮತ್ತು 20.10.2025ರಂದು ಕೆಲವು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡರು
- lಅದರಲ್ಲೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಜಾಗ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಉಚ್ಚರಿಸಿದರು. ಈ ಮಾತುಗಳಲ್ಲಿ ಅವರು ಯಾರನ್ನು ಉದ್ದೇಶಿಸಿ ಈ ನಿರ್ಧಾರ ಕೈಗೊಂಡರು ಎಂಬುದು ಸ್ಪಷ್ಟವಾಗಿದೆ
- lಕೋರಿಕೆ ಏನು?: ಸರ್ಕಾರಿ ಸ್ಥಳಗಳಲ್ಲಿ ಅನುಮತಿಯಿಲ್ಲದ ಮೆರವಣಿಗೆ, ಸಭೆ ನಡೆಸುವುದನ್ನು ನಿರ್ಬಂಧಿಸಿ ಸರ್ಕಾರ ಇದೇ 18ರಂದು ಹೊರಡಿಸಿರುವ ಆದೇಶವು ಸಂವಿಧಾನದ 13, 14 ಮತ್ತು 19ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಆದೇಶವನ್ನು ರದ್ದುಗೊಳಿಸಬೇಕು
ಸರ್ಕಾರಿ ಸ್ಥಳದಲ್ಲಿ ಜನ ಜಮಾವಣೆ ಸ್ವರೂಪ
- l‘ಮೆರವಣಿಗೆ ಅಥವಾ ರ್‍ಯಾಲಿ’ ಎಂದರೆ ಮದುವೆ ಮತ್ತು ಅಂತ್ಯಕ್ರಿಯೆ ಸಭೆಗಳು ಮತ್ತು ಚಳವಳಿಗಳನ್ನು ಹೊರತುಪಡಿಸಿ, ಸಂಗೀತ ಅಥವಾ ಇತರ ರೀತಿಯಲ್ಲಿ, ಸರ್ಕಾರಿ ಆಸ್ತಿಯ ಮೂಲಕ ಹಾದುಹೋಗುವ ಸಾಮಾನ್ಯ ಚಳವಳಿ ಅಥವಾ ಮಾರ್ಗ ಮೆರವಣಿಗೆಯನ್ನು ನಡೆಸಲು ಸಾಮಾನ್ಯ ಉದ್ದೇಶ ಹೊಂದಿರುವ ಅಥವಾ ಯಾವುದೇ ಇತರ ಚಟುವಟಿಕೆಯೊಂದಿಗೆ ಯಾವುದೇ ಹೆಸರಿನಿಂದ ಕರೆಯಲಾಗುವ 10ಕ್ಕೂ ಹೆಚ್ಚು ಜನರ ಸಭೆ.
- lಪೂರ್ವಾನುಮತಿ ಇಲ್ಲದೆ 10ಕ್ಕೂ ಹೆಚ್ಚು ವ್ಯಕ್ತಿಗಳು ಸಭೆ ಸೇರುವುದನ್ನು ಸರ್ಕಾರದ ಹೊಸ ಆದೇಶ ನಿಷೇಧಿಸುತ್ತದೆ. ಅಂತಹ ಸಭೆಯನ್ನು ಕಾನೂನುಬಾಹಿರ ಸಭೆ ಎಂದು ಘೋಷಿಸುತ್ತದೆ. ಇದರಿಂದಾಗಿ ಈ ರೀತಿ ಸಭೆಯಲ್ಲಿ ಭಾಗವಹಿಸು ವವರು ಬಿಎನ್‌ಎಸ್ ಕಾಯ್ದೆಯ ಅಡಿಯಲ್ಲಿ ದಂಡದ ಪರಿಣಾಮಗಳಿಗೆ ಗುರಿಯಾಗುತ್ತಾರೆ. ಅನುಮತಿ ಉಲ್ಲಂಘಿಸಿ ನಡೆಸುವ ಅಪರಾಧಗಳನ್ನು ತಡೆಗಟ್ಟಲು ಅಥವಾ ವಿಚಾರಣೆಗೆ ಒಳಪಡಿಸಲು ನ್ಯಾಯವ್ಯಾಪ್ತಿಯ ಅನುಸಾರ ಆದೇಶವು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
- 8ನೇ ವೇತನ ಆಯೋಗ: ಸಂಪುಟ ಒಪ್ಪಿಗೆ : 2026ರ ಜನವರಿ 1ರಿಂದ ಜಾರಿ ಸಾಧ್ಯತೆ
ಸಂದರ್ಭ: 8ನೇ ವೇತನ ಆಯೋಗದ ಶಿಫಾರಸು ಜಾರಿಯು ಮಧ್ಯಂತರ ವರದಿ ಬಂದ ನಂತರ ಖಚಿತವಾಗುತ್ತದೆ. ಆದರೂ, ಇದು 2026ರ ಜ.1ರಿಂದಲೇ ಜಾರಿಗೆ ಬರಬಹುದುಅಶ್ವಿನಿ ವೈಷ್ಣವ್, ಕೇಂದ್ರ ಸಚಿವ 8ನೇ ವೇತನ ಆಯೋಗ ರಚನೆಯ ನಿಯಮ ಮತ್ತು ನಿಬಂಧನೆಗಳಿಗೆ (ಟಿಒಆರ್) ಕೇಂದ್ರ ಸಚಿವ ಸಂಪುಟವು ಮಂಗಳವಾರ ಅನುಮೋದನೆ ನೀಡಿದೆ.
- ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗ ರಚಿಸಲಾಗಿದೆ. ಆಯೋಗಕ್ಕೆ ತಾತ್ವಿಕ ಒಪ್ಪಿಗೆ ಲಭಿಸಿ ಒಂಬತ್ತು ತಿಂಗಳಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟ ‘ಟಿಒಆರ್‌ಗೆ’ ಅನುಮೋದನೆ ನೀಡಿದೆ.
- ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.
- ಆಯೋಗ ರಚನೆಯಾದ ದಿನದಿಂದ 18 ತಿಂಗಳ ಒಳಗಾಗಿ ಅಂತಿಮ ವರದಿ ಸಲ್ಲಿಸಬೇಕಿದೆ. ಆಯೋಗದ ಶಿಫಾರಸುಗಳು 2026ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗುವ ಸಾಧ್ಯತೆ ಇದೆ.
- ‘ಕೇಂದ್ರ ಸರ್ಕಾರದ ಸುಮಾರು 50 ಲಕ್ಷದಷ್ಟು ನೌಕರರಿಗೆ, 69 ಲಕ್ಷದಷ್ಟು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಶಿಫಾರಸಿನ ಪ್ರಯೋಜನ ಗಳು ದೊರೆಯಲಿವೆ. ಆಯೋಗವು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದ ನೌಕರರಿಗೆ ಈಗಿರುವ ವೇತನ, ಭತ್ಯೆ ಮತ್ತಿತರೆ ಸೌಲಭ್ಯಗಳು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಲಭ್ಯ ಇರುವ ಸಂಪನ್ಮೂಲಗಳನ್ನು ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಲಿದೆ.
- 8ನೇ ವೇತನ ಆಯೋಗದಲ್ಲಿ ಬೆಂಗಳೂರಿನ ಐಐಎಂನ ಪ್ರೊ. ಪುಲಕ್ ಘೋಷ್ ಅರೆಕಾಲಿಕ ಸದಸ್ಯರಾಗಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
- ರಂಜನಾ ಪ್ರಕಾಶ್ ದೇಸಾಯಿ ಅವರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆಯೂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಮತ್ತು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ತಜ್ಞರ ಸಮಿತಿ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಅವರು ವಹಿಸಿಕೊಳ್ಳುತ್ತಿರುವ ನಾಲ್ಕನೆಯ ಮಹತ್ವದ ಹೊಣೆಗಾರಿಕೆ ಇದಾಗಿದೆ.
ರಸಗೊಬ್ಬರ ಸಬ್ಸಿಡಿ ಏರಿಕೆ
- 2025–26ನೇ ಸಾಲಿನ ಹಿಂಗಾರು ಹಂಗಾಮಿಗೆ ಯೂರಿಯಾ ಹೊರತು ಪಡಿಸಿ, ರಂಜಕ –ಪಿ ಮತ್ತು ಗಂಧಕ–ಎಸ್ (ಡಿಎಪಿ, ಎಂಒಪಿ, ಎಸ್‌ಎಸ್‌ಪಿ, ಎನ್‌ಪಿಕೆ, ಕಾಂಪ್ಲೆಕ್ಸ್) ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ₹37,952 ಕೋಟಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
- ಹಿಂಗಾರು ಹಂಗಾಮು ಅಕ್ಟೋಬರ್ 10ರಿಂದ ಆರಂಭಗೊಂಡಿದ್ದು, ಮುಂದಿನ ವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. 2025ರ ಮುಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗೆ ಹೋಲಿಸಿದರೆ ಈ ಮೊತ್ತವು ₹736 ಕೋಟಿಯಷ್ಟು ಹೆಚ್ಚಿದೆ.
- ಕೆ.ಜಿಗೆ ₹43.60 ಇದ್ದ ರಂಜಕದ ಸಬ್ಸಿಡಿಯು ಈಗ ₹47.96ಕ್ಕೆ ಏರಿಕೆಯಾಗಿದೆ. ಗಂಧಕದ ಸಬ್ಸಿಡಿ ಕೆ.ಜಿಗೆ ₹1.77ರಿಂದ ₹2.87ಕ್ಕೆ ಏರಿಕೆಯಾಗಿದೆ. ನೈಟ್ರೊಜನ್ ಮತ್ತು ಪೊಟ್ಯಾಶ್ ರಸಗೊಬ್ಬರದ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇವು ಕ್ರಮವಾಗಿ ಕೆ.ಜಿಗೆ ₹43.02 ಮತ್ತು ₹2.38 ಇವೆ. ಡಿಎಪಿ ಮತ್ತು ಟಿಎಸ್‌ಪಿ ರಸಗೊಬ್ಬರದ ದರದಲ್ಲಿ ಸರ್ಕಾರ ಪರಿಷ್ಕರಣೆ ಮಾಡಿಲ್ಲ.
10 ವರ್ಷಗಳಿಗೊಮ್ಮೆ ಶಿಫಾರಸು ಜಾರಿ
- ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೊಳಿಸಲಾಗುತ್ತದೆ. ಇದೇ ಸಂಪ್ರದಾಯದಂತೆ 8ನೇ ವೇತನ ಆಯೋಗದ ಶಿಫಾರಸುಗಳು 2026ರ ಜ.1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
- 7ನೇ ವೇತನ ಆಯೋಗವನ್ನು 2014ರ ಫೆಬ್ರುವರಿಯಲ್ಲಿ ರಚಿಸಲಾಗಿತ್ತು. ಆಯೋಗದ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿದ್ದವು.
- ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’
ಸಂದರ್ಭ: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ರಾತ್ರಿ 7ರ ಹೊತ್ತಿಗೆ ಅಪ್ಪಳಿಸಿದೆ. ಈ ವೇಳೆ ಗಾಳಿಯ ವೇಗವು ಗಂಟೆಗೆ 110 ಕಿ.ಮೀನಷ್ಟು ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
- ‘ರಾತ್ರಿ 7.23ರ ಸುಮಾರಿಗೆ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ನಂತರದ 6 ತಾಸು ಮುಂದುವರಿದಿದೆ’ ಎಂದು ಇಲಾಖೆ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾದ ಮೇಲೆಯೇ ಚಂಡ ಮಾರುತವು ಹೆಚ್ಚು ಪರಿಣಾಮ ಬೀರಲಿದೆ.
- ‘ಯಾವುದೇ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳುವುದೇ ಸರ್ಕಾರದ ಗುರಿ’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಹೇಳಿದರು. ತೀವ್ರ ಮಳೆಯಾಗುವ ಪ್ರದೇಶಗಳು, ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಶಾಲೆಗಳು, ಅಂಗನ ವಾಡಿಗಳಿಗೆ ಅ.30ರವರೆಗೆ ಇಲ್ಲಿ ರಜೆ ಘೋಷಿಸಲಾಗಿದೆ.
ಒಡಿಶಾ: ಭೂಕುಸಿತ
- ‘ಮೊಂಥಾ’ದಿಂದ ಒಡಿಶಾದ ಕರಾವಳಿ ಮತ್ತು ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿದೆ. ಹಲವು ಮರಗಳು ಧರೆಗೆ ಉರುಳಿದ್ದು, ಕೆಲವು ಮನೆಗಳು ನೆಲಸಮವಾಗಿವೆ.
- ಗಜಪತಿ ಜಿಲ್ಲೆಯ ಅನಕ ಗ್ರಾ.ಪಂ.ನಲ್ಲಿ ಗುಡ್ಡಗಳಿಂದ ದೊಡ್ಡ ಗಾತ್ರದ ಬಂಡೆಗಳು ರಸ್ತೆಗೆ ಉರುಳಿವೆ. ಇದರಿಂದ ಈ ಭಾಗದ ಐದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ಜಿಲ್ಲೆಯ ಮತ್ತೊಂದು ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಭೂಕುಸಿತ ವಾಗಿದೆ. ಇದೇ ಜಿಲ್ಲೆಯಲ್ಲಿ ಮಣ್ಣಿನ ಮನೆಯೊಂದು ಕುಸಿದು ಬಿದ್ದು, ವ್ಯಕ್ತಿಗೆ ಗಾಯವಾಗಿದೆ.
- ಆಂಧ್ರದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಒಡಿಶಾದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮೊಂಥಾ ಪರಿಣಾಮವು ರಾಜಸ್ಥಾನದವರೆಗೂ ಹಬ್ಬಿಕೊಂಡಿದ್ದು, ಬೂಂದಿ ಜಿಲ್ಲೆಯಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ಅ.13ರಂದು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
- ಆಂಧ್ರದಲ್ಲಿ ಬೆಳೆ ನಾಶ: ‘ತೀವ್ರ ಮಳೆಯ ಕಾರಣ ಆಂಧ್ರಪ್ರದೇಶದ 38 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ನಾಶವಾಗಿದೆ ಮತ್ತು 1.38 ಲಕ್ಷ ಹೆಕ್ಟೇರ್ ನಲ್ಲಿನ ತೋಟಗಾರಿಕಾ ಬೆಳೆ ನಾಶವಾಗಿದೆ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
- ನೆರೆ ರಾಜ್ಯಗಳ ಜವಳಿ ನೀತಿ ಅಧ್ಯಯನ
ಸಂದರ್ಭ: ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜವಳಿ ನೀತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
- ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ‘ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು’ ಎಂದರು.
- ‘ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ. ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಪಿಎಂ ಮಿತ್ರ ಪಾರ್ಕ್’ಗೆ ಸಾವಿರ ಎಕರೆ
- ‘ಪಿಎಂ ಮಿತ್ರ ಪಾರ್ಕ್’ ಯೋಜನೆಗೆ ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿ ಜಮೀನು ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದೆ. ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು.
- ‘ನೂರಾರು ವರ್ಷಗಳಿಂದ ಮನೆಯಲ್ಲೇ ಕೈಮಗ್ಗ ಹಾಕಿಕೊಂಡವರಿಗೆ, ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲೊನಿಗಳಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ ಕೊಡಿಸುವ ಪ್ರಯತ್ನ ಆಗಬೇಕಿದೆ. ಬೆಂಗಳೂರಿನ ಕಬ್ಬನ್ ಪೇಟೆ, ಕಾಟನ್ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಯಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
- ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್ ಒಪ್ಪಂದಕ್ಕೆ ಸಹಿ
ಸಂದರ್ಭ: ಪ್ರಾದೇಶಿಕ ಸಂಪರ್ಕ ಯೋಜನೆಗಳ ವಿಸ್ತರಣೆಯೊಂದಿಗೆ ಭಾರತದಲ್ಲಿ ವಿಮಾನಯಾನ ಮಾರುಕಟ್ಟೆ ವೃದ್ಧಿಯಾಗುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನದ ವಾಣಿಜ್ಯ ತಯಾರಿಕೆಗಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್ಎಲ್), ರಷ್ಯಾದ ಪ್ರಮುಖ ವಾಣಿಜ್ಯ ವಿಮಾನ ಉತ್ಪಾದಕ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
- ಮಾಸ್ಕೊದ ಯುನೈಟೆಡ್ ಏರ್ ಕಾರ್ಪೊರೇಷನ್‌ನೊಂದಿಗೆ ಎಚ್‌ಎಎಲ್ ಸಂಸ್ಥೆ ಸೋಮವಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಎಚ್‌ಎಎಲ್ ಸಿಎಂಡಿ ಡಿ.ಕೆ ಸುನೀಲ್ ಮತ್ತು ಯುಎಸಿ ಕಂಪನಿಯ ಮಹಾನಿರ್ದೇಶಕ ವಾಡಿಮ್ ಬಡೇಖಾ ಅವರ ಸಮ್ಮುಖದಲ್ಲಿ ಎಚ್‌ಎಲ್‌ನ ಪ್ರಭಾತ್ ರಂಜನ್ ಮತ್ತು ಯುಎಸಿ ಕಂಪನಿಯ ಒಲೆಗ್ ಬೊಗೊಮೊಲೊವ್ ಈ ಒಪ್ಪಂದಕ್ಕೆ ಸಹಿ ಹಾಕಿದರು.
- ಈ ಒಪ್ಪಂದದ ಪ್ರಕಾರ ಎಚ್‌ಎಲ್, ದೇಶೀಯ ಗ್ರಾಹಕರಿಗಾಗಿ ಡಬ್ಬಲ್ ಎಂಜಿನ್ ಹೊಂದಿರುವ, ಸಣ್ಣ ಗಾತ್ರದ, ಎಸ್–ಜೆ 100(SJ-100) ವಿಮಾನವನ್ನು ತಯಾರಿಸಲಿದೆ. ಈಗಾಗಲೇ 200 ಕ್ಕೂ ಹೆಚ್ಚು ಎಸ್‌ಜೆ–100 ವಿಮಾನಗಳನ್ನು ತಯಾರಿಸಲಾಗಿದ್ದು, ವಿಶ್ವದ 16 ಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಕಂಪನಿಗಳು ಇವುಗಳನ್ನು ಬಳಸುತ್ತಿವೆ.
- ‘ಎಸ್‌ಜೆ–100 ವಿಮಾನವು, ಭಾರತದಲ್ಲಿ ‘ಉಡಾನ್’ ಯೋಜನೆಯಡಿಯಲ್ಲಿ ಕಡಿಮೆ ದೂರ ಸಂಪರ್ಕದಲ್ಲಿ ಗೇಮ್ ಚೇಂಜರ್ ಆಗಲಿದೆ’ ಎಂದು ಎಚ್‌ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
- ಈ ವಿಮಾನವು ರಷ್ಯಾದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿದ್ದು, ಅಲ್ಲಿನ ಒಂಬತ್ತು ವಿಮಾನಯಾನ ಸಂಸ್ಥೆಗಳು ಈ ಇವುಗಳನ್ನು ಬಳಕೆ ಮಾಡುತ್ತಿವೆ. ಇದು ಗರಿಷ್ಠ 103 ಆಸನಗಳ ಸಾಮರ್ಥ್ಯ ವನ್ನು ಹೊಂದಿದ್ದು, 3500 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯ ರೇಂಜ್ ಹೊಂದಿದೆ.
- ‘ಎಸ್‌ಜೆ–100 ವಿಮಾನಗಳ ತಯಾರಿಕೆಯು ಭಾರತೀಯ ವಾಯುಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭದ ಸೂಚನೆಯಾಗಿದೆ. ಇದು ಖಾಸಗಿ ವಲಯವನ್ನು ಬಲಪಡಿಸುತ್ತದೆ. ಮಾತ್ರವಲ್ಲ, ವಾಯುಯಾನ ಉದ್ಯಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ಎಚ್‌ಎಎಲ್ ಹೇಳಿದೆ.
- ಇಸ್ರೇಲ್–ಹಮಾಸ್ ಮಧ್ಯೆ ಮತ್ತೆ ಸಂಘರ್ಷ
ಸಂದರ್ಭ: ಗಾಜಾ ಮೇಲೆ ಕೂಡಲೇ ‘ಪ್ರಬಲವಾದ ದಾಳಿ’ ನಡೆಸಲು ಸೇನೆಗೆ ಆದೇಶ ನೀಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.
- ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್, ಒತ್ತೆಯಾಳುಗಳ ಮೃತದೇಹ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುವುದಾಗಿ ಹೇಳಿದೆ.
- ಈ ಹಠಾತ್ ಬೆಳವಣಿಗೆಯು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಮುರಿಯಲು ಕಾರಣವಾಗುವ ಸಾಧ್ಯತೆ ಇದೆ. ಗಾಜಾ ನಗರ ಮತ್ತು ದೀರ್ ಅಲ್–ಬಲಾಹ್ ಸೇರಿದಂತೆ ಗಾಜಾದ ಹಲವೆಡೆ ಟ್ಯಾಂಕರ್ ದಾಳಿ ಮತ್ತು ಸ್ಫೋಟದ ಸದ್ದು ಕೇಳಿಬಂದಿದೆ.
- ಹಮಾಸ್ ಬಂಡುಕೋರರು ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಸೇನಾಪಡೆಗಳ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ ಬೆನ್ನಲ್ಲೇ ನೆತನ್ಯಾಹು ಅವರು ಈ ಆದೇಶ ನೀಡಿದ್ದಾರೆ.
- ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್
ಸಂದರ್ಭ: ಪ್ರಾಣಿಗಳ ತಾಣದಲ್ಲಿ ವಿದ್ಯುತ್ ಸ್ವಾವಲಂಬಿ ಯೋಜನೆ ಜಾರಿಗೆ ಸಿದ್ಧತೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ನಿಂದಲೇ ಪೂರೈಸುವ ಯೋಜನೆಗೆ ಮುಂದಿನ ವಾರ ಚಾಲನೆ ನೀಡಲಾಗುವುದುಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ.
- ರಾಜಧಾನಿಯ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದೆ.
- ಸೌರ ವಿದ್ಯುತ್ ಒದಗಿಸುವ ವಾಹನ ಮತ್ತು ಉಪಕರಣಗಳನ್ನು ಮೃಗಾಲಯಗಳಲ್ಲಿ ಬಳಸುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಘಟಕ ಇರಲಿಲ್ಲ. ಇದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಮುಂದಿನ ವಾರ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ಸಿಗಲಿದೆ. ಐದಾರು ತಿಂಗಳಲ್ಲಿ ಸುಸಜ್ಜಿತ ವಿದ್ಯುತ್ ಘಟಕ ಸೇವೆಗೆ ಅಣಿಯಾಗಲಿದೆ. ಬಳಕೆ ಪ್ರಮಾಣ ನೋಡಿಕೊಂಡು ಘಟಕದ ಸಾಮರ್ಥ್ಯ ಹೆಚ್ಚಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ನಿರ್ಧರಿಸಿದೆ.
- ಸಾಮಾಜಿಕ ಹೊಣೆಗಾರಿಕೆ ನಿಧಿ ( ಸಿಎಸ್ಆರ್) ಬಳಸಿಕೊಂಡು ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರ ಅನುಷ್ಠಾನದ ಜವಾಬ್ದಾರಿ ಯನ್ನು ಐಸಿಐಸಿಐ ಫೌಂಡೇಷನ್ ಹೊತ್ತುಕೊಂಡಿದೆ. ಉದ್ಯಾನದ ಒಳಗೆ ಮೂರು ಎಕರೆ ವಿಶಾಲ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಘಟಕವನ್ನು ಆರಂಭಿಸಲಾಗುತ್ತಿದೆ.
- ಬನ್ನೇರುಘಟ್ಟ ಜೈವಿಕ ಉದ್ಯಾನವೇ ವಿದ್ಯುತ್ ವಿತರಣೆಗೆ ಬೇಕಾದ ಗ್ರಿಡ್ ಅನ್ನು ನಿರ್ಮಿಸಿಕೊಳ್ಳಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ಬಳಕೆ, ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಬೇಕಾದ ಅನುಮತಿ ಪಡೆಯುವ ಹೊಣೆ ಹೊತ್ತುಕೊಳ್ಳಲಿದೆ.
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವಿಭಾಜ್ಯ ಅಂಗವಾಗಿ ರುವ ಜೈವಿಕ ಉದ್ಯಾನವು 2002ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ.
- ಉದ್ಯಾನಗಳ ನಿರ್ವಹಣೆ ಸಹಿತ ಹಲವು ಉದ್ದೇಶಗಳಿಗೆ ವಿದ್ಯುತ್ ಬಳಸಲಾಗುತ್ತಿದೆ. ಪ್ರತಿವರ್ಷ ವಿದ್ಯುತ್ ನಿರ್ವಹಣೆಗೆ ₹40 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಬೆಸ್ಕಾಂನಿಂದಲೇ ವಿದ್ಯುತ್ ಅನ್ನು ಪಡೆದುಕೊಳ್ಳಲಾಗುತ್ತಿದೆ. ತುರ್ತು ಬಳಕೆಗೆ ಜನರೇಟರ್ ವ್ಯವಸ್ಥೆಯಿದೆ.
- ಸೌರ ವಿದ್ಯುತ್ ಘಟಕ ಸ್ಥಾಪನೆಯಾದರೆ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಅದರಲ್ಲೂ ಆದಾಯ ಪಡೆಯುವ ಉದ್ಧೇಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- ‘ದೇಶದ ಯಾವುದೇ ಜೈವಿಕ ಉದ್ಯಾನ, ಮೃಗಾಲಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುವ ಘಟಕವಿಲ್ಲ. ಅಗತ್ಯ ನೋಡಿಕೊಂಡು ಯೋಜನೆ ವಿಸ್ತರಿಸಲಾಗುವುದು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದರು.
‘ಮೆಗಾವಾಟ್’ನ ಮೊದಲ ಕೇಂದ್ರ
- ಚೆನ್ನೈನ ವ್ಯಾಂಡಲೂರ್ ಮೃಗಾಲಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕ ವಿದ್ದರೂ ಅಲ್ಲಿ ಬರೀ 100 ಕಿಲೋ ವಾಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ಅದನ್ನು ಬಿಟ್ಟರೆ ಭಾರತದಲ್ಲಿರುವ ಪ್ರಮುಖ ಮೃಗಾಲಯ ಹಾಗೂ ಜೈವಿಕ ಉದ್ಯಾನಗಳಲ್ಲಿ 1 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಬನ್ನೇರುಘಟ್ಟ ಉದ್ಯಾನ ಪಾತ್ರವಾಗಲಿದೆ.
- ಸೋಲಿಗೆ ಸೋಲದ ಸುಸುಮು: ನೊಬೆಲ್ ವಿಜ್ಞಾನಿಗಳು 3
ಸಂದರ್ಭ: ಅದು ಯಾವುದೇ ಕ್ಷೇತ್ರವಿರಲಿ, ಗೆದ್ದವರು ಮತ್ತು ಸೋತವರ ನಡುವೆ ಒಂದು ಸ್ಪಷ್ಟ ವ್ಯತ್ಯಾಸವಿರುತ್ತದೆ; ಅದೇ, ಅವರ ಮನೋಬಲ. ನಾವು ಸೋಲುವುದು ಯಾವಾಗ? ಮತ್ತ್ಯಾರೋ ಗೆದ್ದಾಗ ಅಲ್ಲ, ನಾವು ಸೋಲನ್ನು ಒಪ್ಪಿಕೊಂಡಾಗ ಮಾತ್ರ, ಅಲ್ಲವೇ? ಸವಾಲುಗಳೆಂದರೆ ಹೆದರಿ ಹಿಂದೋಡದೆ, ಸವಾಲಿನ ಹಿಂದೋಡಿ, ಅದಕ್ಕೆ ಸರಿಯಾದ ಜವಾಬು ನೀಡುವವರೆಗೂ ಕೈಕಟ್ಟಿಕೂರದ ವಿಜ್ಞಾನಿಯ ಬಗ್ಗೆ ತಿಳಿಯೋಣ ಬನ್ನಿ.
- ‘ಯಾವುದೇ ಒಂದು ಕೆಲಸವನ್ನು ಅಸಾಧ್ಯ ಎಂದು ನೀವು ಒಪ್ಪಲು ತಯಾರಿಲ್ಲದಿದ್ದರೆ, ಅದು ಹೇಗೆ ಅಸಾಧ್ಯವಾಗಲು ಸಾಧ್ಯ?’ ಎನ್ನುತ್ತಾರೆ, ಡಾ. ಸುಸುಮು ಕಿಟಾಗವಾ. ಈ ಬಾರಿ ರಸಾಯನ ವಿಜ್ಞಾನದಲ್ಲಿ ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿಯವರ ಜೊತೆಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸುಸುಮು ಅವರ ಮಾತುಗಳನ್ನು ಕೇಳಿದರೆ, ಸ್ಥೈರ್ಯಗುಂದಿದ ಯಾರೇ ಆದರೂ, ಮತ್ತೊಮ್ಮೆ ಫೀನಿಕ್ಸ್‌ನಂತೆ ಎದ್ದುನಿಲ್ಲುವಂತಾಗುತ್ತದೆ; ಅಷ್ಟು ಧನಾತ್ಮಕತೆ, ಅಷ್ಟು ಗುರಿ ಕೇಂದ್ರೀಕೃತ ಮನಸ್ಸು ಮತ್ತು ಅಂತಹ ಛಲ ಬಿಡದ ಮನೋಭಾವ ಇವರದ್ದು.
- 2025ರ ರಸಾಯನವಿಜ್ಞಾನ ನೊಬೆಲ್ ದೊರೆತಿದ್ದು ಲೋಹ–ಸಾವಯವ ಚೌಕಟ್ಟುಗಳಿಗೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆಯಲ್ಲವೇ? ಅದರ ರಚನೆಯ ಹಿಂದಿನ ಸಿದ್ಧಾಂತ, ರಿಚರ್ಡ್ ರಾಬ್ಸನ್ ಅವರದ್ದು, ಆ ಚೌಕಟ್ಟಿಗೆ ಭೌತಿಕ ಬಲ ತುಂಬಿದ್ದು ಓಮರ್ ಯಾಘಿ ಅವರ ಸಂಶೋಧನೆ ಮತ್ತು ಈ ಚೌಕಟ್ಟುಗಳ ಆನ್ವಯಿಕತೆಯನ್ನು ಸಾಧ್ಯವಾಗಿಸಿದ್ದು ಸುಸುಮು ಕಿಟಾಗವಾ ಅವರ ಪ್ರಯೋಗಗಳು.
- ಜಗತ್ತನ್ನು ಪೊರೆದದ್ದು ಅಚಾನಕ್ಕಾಗಿ ಆದ ಅನೇಕ ಆವಿಷ್ಕಾರಗಳು ಎಂಬ ಮಾತಿದೆ. ಏನೋ ಮಾಡಲು ಹೋಗಿ ಮತ್ತೇನೋ ಆದ ಕಥೆಗಳು ವಿಜ್ಞಾನಲೋಕದಲ್ಲಿ ಸಾಮಾನ್ಯ. ‘ಪೆನಿಸಿಲಿನ್’ ಎಂಬ ಮೊದಲ ಆ್ಯಂಟಿಬಯೋಟಿಕ್, ಎಕ್ಸ್–ರೇ, ಪೇಸ್‌ಮೇಕರ್, ಮೈಕ್ರೋವೇವ್ ಓವನ್ – ಹೀಗೆ ಪಟ್ಟಿ ದೊಡ್ಡದಿದೆ. ‘ಅಂತಹದ್ದೇ ಒಂದು ಅಚಾನಕ್ಕಾಗಿ ಆದ ಆವಿಷ್ಕಾರವೇ ಈ ಲೋಹ-ಸಾವಯವ ಚೌಕಟ್ಟುಗಳೊಳಗೆ ರಂಧ್ರಗಳಿವೆ ಮತ್ತು ಅವುಗಳನ್ನು ಅನಿಲದ ಅಣುಗಳನ್ನು, ಲೋಹದ ಅಣುಗಳನ್ನು ಹಿಡಿದಿಡಲು ಬಳಸಬಹುದು ಎಂಬುದು’ ಎನ್ನುತ್ತಾರೆ. ಸುಸುಮು.
ಹಿನ್ನೆಲೆ
- 1951ರ ಜುಲೈ 4ರಂದು ಜಪಾನಿನ ಕ್ಯೋಟೋದಲ್ಲಿ ಜನಿಸಿದ ಸುಸುಮು ಅವರು, ಚಿಕ್ಕಂದಿನಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು; ಕ್ಯೋಟೋದಲ್ಲಿಯೇ ತಮ್ಮ ಶಿಕ್ಷಣ ಮತ್ತು ಸಂಶೋಧನೆಯನ್ನು ನಡೆಸಿದರು. ಅಸಾವಯವ ರಸಾಯನವಿಜ್ಞಾನ ಇವರ ಕಾರ್ಯಕ್ಷೇತ್ರ. ಕಿಂಡೈ ವಿಶ್ವವಿದ್ಯಾಲಯ, ಟೋಕ್ಯೋ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ, ಟೆಕ್ಸಸ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲೂ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದರು; ತಮ್ಮ ವೃತ್ತಿಬದುಕಿನಲ್ಲಿ ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಸೆಳೆಯುವ ಮತ್ತು ವೈಜ್ಞಾನಿಕ ಮನೋಭಾವವನ್ನು ಅವರಲ್ಲಿ ಹಾಸುಹೊಕ್ಕಾಗಿಸುವ ಜವಾಬ್ದಾರಿಯನ್ನು ಹೊತ್ತ ಸುಸುಮು ಅವರು, ಐ.ಸಿ.ಇ.ಎಂ.ಎಸ್. ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯಪ್ರವೃತ್ತರಾಗಿದ್ದರು. ನೊಬೆಲ್ ಪ್ರಶಸ್ತಿ ಘೋಷಣೆಯಾದ ನಂತರ ನಡೆದ ಇವರ ಸಂದರ್ಶನದಲ್ಲಿ, ಸುಸುಮು ಕಿಟಾಗವಾ ಅವರು ನಗುತ್ತಾ, ‘ಯಾರಾದರೂ ಅಸಾಧ್ಯವೆಂದದ್ದನ್ನು ಸಾಧ್ಯ ಮಾಡಿತೋರಿಸಲು ನನಗೆ ಬಹಳ ಹುರುಪು’ ಎಂದು ಹೇಳಿದ್ದು, ಸಣ್ಣ ಸೋಲುಗಳಿಗೆ, ಚಿಕ್ಕ ಟೀಕೆಯೊಂದಕ್ಕೇ ಕೈಚೆಲ್ಲುವ ಹಲವರಿಗೆ ಸ್ಫೂರ್ತಿ ನೀಡುವಂತಿದೆ.
- 90ರ ದಶಕದಲ್ಲಿ ಲೋಹ-ಸಾವಯವ ಚೌಕಟ್ಟಿನ ರಂಧ್ರಗಳೊಳಗೆ ಅನಿಲದ ಅಣುಗಳನ್ನು ಹಿಡಿದಿಡಬಹುದು ಎಂದು ಸುಸುಮು ಮತ್ತು ಇನ್ನಿತರ ರಸಾಯನವಿಜ್ಞಾನಿಗಳು ಪ್ರತಿಪಾದಿಸಿದಾಗ, ಅದನ್ನು ಒಪ್ಪಲು ಬಹುಪಾಲು ವಿಜ್ಞಾನಿಗಳು ತಯಾರಿರಲಿಲ್ಲ. ‘ಅವರ ಅಪನಂಬಿಕೆಯೇ ನನ್ನ ಬಲವಾಯ್ತು’ ಎನ್ನುತ್ತಾರೆ, ಸುಸುಮು. ಬೇರೆ ಯಾವುದೇ ಸಂಶೋಧನೆ ಮಾಡುತ್ತಿದ್ದರೂ, ಈ ವಿಷಯವೊಂದು ಅವರ ಮನಸ್ಸಿನ ಮೂಲೆಯಲ್ಲಿ ಕುಳಿತು ಕುದಿಯುತ್ತಲೇ ಇತ್ತು. ಮತ್ತೇನೋ ವಿಷಯದ ಸಲುವಾಗಿ, ಲೋಹ-ಸಾವಯವ ಚೌಕಟ್ಟಿನ ಸ್ಫಟಿಕದ ರಚನೆಯನ್ನು ವಿಶ್ಲೇಷಣೆ ಮಾಡಲು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸುಸುಮು ಹೋಗಿದ್ದರು. ಅಲ್ಲಿ ಕಂಪ್ಯೂಟರ್ ಕೇಂದ್ರದಲ್ಲಿ, ಸ್ಫಟಿಕದ ವಿಶ್ಲೇಷಣೆಯ ಸಮಯದಲ್ಲಿ, ಈ ಲೋಹ-ಸಾವಯವ ಚೌಕಟ್ಟಿನಲ್ಲಿರುವ ವಿಶಿಷ್ಟ, ನಿರ್ದಿಷ್ಟ ಬಗೆಯ ರಂಧ್ರಗಳು ಅಚಾನಕ್ಕಾಗಿ ಕಣ್ಣಿಗೆ ಬಿದ್ದವು. ಇಂತಹ ಅಚಾನಕ್ ಆವಿಷ್ಕಾರವೇ, ನಿಜಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಲೋಹ-ಸಾವಯವ ಚೌಕಟ್ಟಿನ ಸಾರ್ಥಕ ಅನ್ವಯಿಕೆಗೆ, ನೊಬೆಲ್ ಪ್ರಶಸ್ತಿಯು ಒಲಿಯುವುದಕ್ಕೆ, ಜನರ ಅಪನಂಬಿಕೆಯನ್ನು ಹುಸಿಯಾಗಸಲು ದಾರಿ ಮಾಡಿಕೊಟ್ಟಿತು.
- ಒಂದೇ ಗುಂಗಿನಲ್ಲಿ, ಅಪರಿಮಿತ ಏಕಾಗ್ರತೆಯಲ್ಲಿ ಸಂಶೋಧನೆಯಲ್ಲಿ ತೊಡಗುವುದು ಎಷ್ಟು ಮುಖ್ಯವೋ, ಸಂಶೋಧನಾ ಪರಿಸರವೂ ಅಷ್ಟೇ ಮುಖ್ಯ ಎಂಬ ಸುಸುಮು ಅವರ ಮಾತನ್ನು ಎಲ್ಲ ವಿಜ್ಞಾನಿಗಳೂ ಖಂಡಿತವಾಗಿ ಒಪ್ಪುತ್ತಾರೆ. ಜಪಾನಿಗೆ ವಿಜ್ಞಾನದಲ್ಲಿ ನೊಬೆಲ್ ತಂದುಕೊಟ್ಟ ಅನೇಕ ಸಂಶೋಧಕರು ಸುಸುಮು ಅವರ ಮಾರ್ಗದರ್ಶಿಗಳು ಮತ್ತು ಒಡನಾಡಿಗಳು. ನೊಬೆಲ್ ವಿಜೇತ ಕೆನಿಚಿ ಫುಕುಯಿ ಅವರನ್ನಂತೂ ಸುಸುಮು ಅವರು ತಮ್ಮ ‘ಶೈಕ್ಷಣಿಕ ಪಿತಾಮಹ’ ಎಂದೇ ಬಣ್ಣಿಸುತ್ತಾರೆ.
- ಕೆನಿಚಿ ಫುಕುಯಿ, ಅಕಿರಾ ಯೊಶಿನೋರಂತಹ ವಿಜ್ಞಾನಲೋಕದ ದಿಗ್ಗಜಗಳು ಕಾರ್ಯನಿರ್ವಹಿಸಿದ ಪ್ರಯೋಗಾಲಯಗಳಲ್ಲೇ ತಾವೂ ಸಂಶೋಧನೆ ಮಾಡುತ್ತಾ, ಅವರ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತಾ, ಮುಂದಿನ ತಲೆಮಾರಿಗೆ ಪ್ರೇರಣೆ ಒದಗಿಸಿದ್ದಾರೆ, ಸುಸುಮು ಕಿಟಾಗವಾ. ಇವರ ಲೋಹ-ಸಾವಯವ ಚೌಕಟ್ಟುಗಳು ಅನಿಲದ ಅಣುಗಳನ್ನು, ವೇಗವರ್ಧಕಗಳನ್ನು ಹಿಡಿದಿಟ್ಟುಕೊಳ್ಳುವ ಹಾಗೆ, ಇವರ ಕಾರ್ಯವೈಖರಿಯು ಯುವಜನರನ್ನೂ ಸೆಳೆದು, ವಿಜ್ಞಾನದೆಡೆಗೆ ಗಮನ ಹರಿಯುವಂತೆ ಮಾಡಿದ ಇವರಿಗೆ ಅಭಿನಂದನೆಗಳು ಸಲ್ಲಿಸಲೇಬೇಕು. v
- ಮತ್ತೆರಡು ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪ್ರಸ್ತಾವ
ಸಂದರ್ಭ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಲ್ಲದೇ ಬೆಳಗಾವಿ ಜಿಲ್ಲೆ ಸವದತ್ತಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿ ಕೊಳ್ಳುವ ಪ್ರಸ್ತಾವ ಇದೆ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯಪಾಲಕ ಎಂಜಿನಿಯರ್ ವಿ.ಎಂ.ವಿಜಯ ತಿಳಿಸಿದರು.
- ‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 1,600 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವಕ್ಕೆ ಸಮ್ಮತಿ ಸಿಕ್ಕಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಅವಧಿಯಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ 2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಈ ಯೋಜನೆಗೆ ಪರಿಸರ, ವನ್ಯಜೀವಿ ಮತ್ತು ಅರಣ್ಯ ಅನುಮತಿ ಸಿಗುವುದು ಬಾಕಿ ಇದೆ’ ಎಂದರು.
- ‘ಡ್ರಗ್ಸ್ ಕಡಿವಾಣಕ್ಕೆ ಎಎನ್ಟಿಎಫ್’
ಸಂದರ್ಭ: ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಪೀಕ್– ಕ್ಯಾಪ್ ವಿತರಣೆ: 8,500 ಪೊಲೀಸ್ ಕಾನ್ಸ್ಟೆಬಲ್ಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಇನ್ನೊಂದು ವಾರದಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದುಜಿ.ಪರಮೇಶ್ವರ, ಗೃಹ ಸಚಿವ.
- ಮಾದಕವಸ್ತು (ಡ್ರಗ್ಸ್) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ಎಎನ್‌ಟಿಎಫ್) ಅಸ್ತಿತ್ವಕ್ಕೆ ಬಂದಿದೆ.
- ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರ್ಯಪಡೆಗೆ ಚಾಲನೆ ನೀಡಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ‘ಪೀಕ್ ಕ್ಯಾಪ್’ ವಿತರಿಸಿದರು.
- ಸಿದ್ದರಾಮಯ್ಯ ಮಾತನಾಡಿ, ‘ಎಡಿಜಿಪಿ ಮಟ್ಟದ ಅಧಿಕಾರಿ ಕಾರ್ಯಪಡೆ ಮುಖ್ಯಸ್ಥರಾಗಿ ಇರಲಿದ್ದು, ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಸೇರಿ 56 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
- ‘ಐದು ದಶಕಗಳ ಬಳಿಕ ಪೊಲೀಸ್ ಸಿಬ್ಬಂದಿಯ ಕ್ಯಾಪ್‌ನಲ್ಲಿ ಬದಲಾವಣೆ ಆಗಿದೆ. ಕಾರ್ಯಕ್ಷಮತೆಯೂ ಬದಲಾಗಬೇಕು. ದಕ್ಷವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ತರಬೇಕು’ ಎಂದು ಕಿವಿಮಾತು ಹೇಳಿದರು.
- ‘ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿದ್ದ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್ ಕ್ಯಾಪ್’ಗಳನ್ನು ಆಯ್ಕೆ ಮಾಡಿದ್ದು ನಾನೇ. ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ತಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನ ಪಡೆದಿರುವುದು ರಾಜ್ಯದ ಘನತೆ ಹೆಚ್ಚಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
- ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿ ಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಶಾಮೀಲಾಗುತ್ತಾರೆ. ಡ್ರಗ್ಸ್ ಪೆಡ್ಲರ್ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್ಗಳಾಗುತ್ತಾರೆ ಎಂದು ಎಚ್ಚರಿಸಿದರು. ‘ಅಪರಾಧಿ ಹಾಗೂ ಕ್ರಿಮಿನಲ್ಗಳೊಂದಿಗೆ ಸಂಬಂಧ ಇಟ್ಟುಕೊಳ್ಳ ಬಾರದು. ದಿನೇ ದಿನೇ ಪೊಲೀಸರೆಂದರೆ ಕ್ರಿಮಿನಲ್ಗಳಿಗೆ ಭಯ ಕಡಿಮೆಯಾ ಗುತ್ತಿದೆ. ಯಾಕೆ ಕಡಿಮೆಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದರು.
- ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರು ನಗರ ಹಾಗೂ ಇತರೆ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ. ನೆರೆ ಮನೆಯ ಆದಿಕೇಶವಲು ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ’ ಎಂದು ಸಲಹೆ ನೀಡಿದರು.
- ‘ಯಾವುದೇ ಸರ್ಕಾರ ಬಂದರೂ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ. ರಾಜಕಾರಣಿಗಳ ಹಿಂಬಾಲಕರಾದರೇ ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ಅವಕಾಶ ಮಾಡಿಕೊಡಬೇಡಿ’ ಎಂದು ಕಿವಿ ಮಾತು ಹೇಳಿದರು.
- ‘ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ವಿಸ್ತರಣೆ ಕಷ್ಟವಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಸಂಚಾರ ದಟ್ಟಣೆ ನಿವಾರಣೆಗೆ ಇರುವ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ’ ಎಂದು ತಿಳಿಸಿದರು.
- ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಶೇಕಡ 85ರಷ್ಟು ಸಿಬ್ಬಂದಿಯ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದರಿಂದ ಸಿಬ್ಬಂದಿಯ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದರು.
- ಶಾಸಕ ರಿಜ್ವಾನ್ ಅರ್ಷದ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಡಿಜಿಪಿಗಳಾದ ರಾಮಚಂದ್ರರಾವ್, ಪ್ರಣವ್ ಮೊಹಾಂತಿ ಹಾಜರಿದ್ದರು.
‘ಸನ್ಮಿತ್ರ’ ಪರಿಚಯ
- ಮಾದಕ ವಸ್ತು ಸೇವನೆ ಪ್ರಕರಣ ದಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದ ವ್ಯಕ್ತಿ ಮತ್ತೆ ವ್ಯಸನಕ್ಕೆ ಒಳಗಾಗದಂತೆ ನಿಗಾವಹಿಸಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಕಾರ್ಯಕ್ರಮವನ್ನು ಪರಿಚಯಿಸಿದೆ. ಮತ್ತೆ ಡ್ರಗ್ಸ್ ಚಟಕ್ಕೆ ಬೀಳಬಾರದು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಆ ವ್ಯಕ್ತಿಯ ಮೇಲೆ ನಿಗಾ ಇಡಲು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನಿಯೋಜಿಸಲಾಗು ತ್ತದೆ. ಮೂರು ವರ್ಷದವರೆಗೆ ಈ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಲಿದ್ದು, ಅವರಿಗೆ ಚಿಕಿತ್ಸೆ, ಪುನರ್ವಸತಿ ಮತ್ತು ಆರೈಕೆಗೆ ನೆರವು ನೀಡಲಿದ್ದಾರೆ.
- ಆಂಧ್ರ, ಒಡಿಶಾ ಮೊಂಥಾ ಮೊರೆತ

ಮೊಂಥಾ ಚಂಡಮಾರುತವು ಅಬ್ಬರಿಸಲು ಶುರುವಿಟ್ಟಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬುಡ ಮೇಲಾಗಿ ಬಿದ್ದ ಮರಗಳು. ಸಮುದ್ರ ತೀರದಲ್ಲಿ ಕಟ್ಟೆಚ್ಚರ. ಎತ್ತರದ ಅಲೆಗಳಿಗೆ ಮುಖ ಮಾಡಿ ಓಡುವ ಜನರನ್ನು ಕೂಗಿ ಕರೆದು, ಮನೆಗೆ ಕಳುಹಿಸುತ್ತಿರುವ ಪೊಲೀಸರು. ಸಮುದ್ರ ತೀರದ ರಸ್ತೆಗಳ ಮೇಲೆ ಹರಿದು ಸಾಗುತ್ತಿರುವ ಸಮುದ್ರದ ಅಲೆಗಳು. ಹೀಗೆ ಹರಿಯುವಾಗ ರಸ್ತೆಗಳ ಮೇಲೆಲ್ಲಾ ಕಲ್ಲುಗಳನ್ನು ಹೊತ್ತು ತರುತ್ತಿರುವ ಅಲೆಗಳು. ತೀರದಲ್ಲಿ ವಿರಮಿಸುತ್ತಿರುವ ಮೀನುಗಾರಿಕೆ ದೋಣಿಗಳು… ‘ಮೊಂಥಾ’ದಿಂದಾಗಿ ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಕಂಡುಬಂದ ಚಿತ್ರಣವಿದು.
ಈ ರಾಜ್ಯಗಳು ‘ಮೊಂಥಾ’ವನ್ನು ಎದುರಿಸಲು ಸಜ್ಜುಗೊಂಡಿವೆ. ಆಂಧ್ರ ಪ್ರದೇಶದ 19 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಚಂಡಮಾರುತದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರವನ್ನು ಆಂಧ್ರ ಪ್ರದೇಶದಲ್ಲಿ ರದ್ದು ಮಾಡಲಾಗಿದೆ. ಒಡಿಶಾಕ್ಕೆ ಚಂಡಮಾರುತವು ಹೊಸ ವಿಚಾರವೇನೂ ಅಲ್ಲ. ಭಾರಿ ಚಂಡಮಾರುತಗಳನ್ನು ಎದುರಿಸಿರುವ ಅನುಭವಿಯಾದ ಒಡಿಶಾವು ‘ಮೊಂಥಾ’ಕ್ಕೂ ಸಕಲ ತಯಾರಿ ನಡೆಸಿದೆ. ಎರಡೂ ರಾಜ್ಯಗಳಲ್ಲಿ ‘ಮೊಂಥಾ’ ಪರಿಣಾಮದ ಜಿಲ್ಲೆಗಳಲ್ಲಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ಎರಡನೇ ಚಂಡಮಾರುತ
ಈ ವರ್ಷ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಹಲವು ಬಾರಿ ವಾಯುಭಾರ ಕುಸಿತ ಉಂಟಾಗಿದ್ದರೂ ಅದು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು ಎರಡು ಬಾರಿ ಮಾತ್ರ. ಈ ತಿಂಗಳ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ‘ಶಕ್ತಿ’ ಮೊದಲನೆಯದ್ದಾದರೆ, ಈಗಿನ ‘ಮೊಂಥಾ’ ಎರಡನೆಯದ್ದು. ‘ಶಕ್ತಿ’ ಚಂಡಮಾರುತವು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಮಹಾರಾಷ್ಟ್ರ, ಗುಜರಾತ್, ಗೋವಾ ಕರಾವಳಿಗೆ ಅಪ್ಪಳಿಸಿತ್ತು. ಗುಜರಾತ್ ಕರಾವಳಿ ಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚಾಗಿತ್ತು. ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ.
ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ‘ಮೊಂಥಾ’ ಚಂಡಮಾರುತದ ವೇಗ ತೀವ್ರಗೊಳ್ಳುವ ಹೊತ್ತಿನಲ್ಲೇ ಪಶ್ಚಿಮದ ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ ಕಂಡುಬಂದಿದೆ. ಇದರ ಪರಿಣಾಮದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ, ಗಾಳಿಯ ತೀವ್ರತೆ ಹೆಚ್ಚಿಲ್ಲ. ಮಂಗಳವಾರ ಬೆಳಿಗ್ಗೆ ಸಮುದ್ರದ ಪೂರ್ವ–ಕೇಂದ್ರ ಪ್ರದೇಶದಲ್ಲಿ ಕಂಡು ಬಂದಿದ್ದ ವಾಯುಭಾರ ಕುಸಿತವು ಪ್ರತಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಈಶಾನ್ಯದತ್ತ ಸಾಗಿದೆ. ಮುಂದಿನ 24 ಗಂಟೆಗಳಲ್ಲಿ ಅದೇ ದಿಕ್ಕಿನಲ್ಲಿ ಸಾಗುವ ಅಂದಾಜು ಇದೆ. ಪ್ರತಿ ಗಂಟೆಗೆ 46ರಿಂದ 65 ಕಿ.ಮೀವರೆಗೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
l ಚಂಡಮಾರುತಕ್ಕೆ ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣದಲ್ಲಿನ ಇಲಾಖೆಯ ಸಿದ್ಧತೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಪೂರ್ವ ಕರಾವಳಿ ರೈಲ್ವೆ ವಲಯದ ಹಲವು ರೈಲುಗಳ ಸಂಚಾರವನ್ನು ಮಂಗಳವಾರ ರದ್ದು ಮಾಡಲಾಗಿತ್ತು
l ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 32 ವಿಮಾನಗಳ (ದೇಶೀಯ ಹಾಗೂ ಅಂತರರಾಷ್ಟ್ರೀಯ) ಹಾರಾಟವನ್ನು ಮಂಗಳವಾರ ರದ್ದು ಮಾಡಲಾಯಿತು
l ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಚಂಡಮಾರುತ ಬಾಧಿತ ರಾಜ್ಯಗಳಲ್ಲಿ ಒಟ್ಟು 45 ತಂಡಗಳನ್ನು ಎನ್‌ಡಿಆರ್‌ಎಫ್ ನಿಯೋಜಿಸಲಾಗಿದೆ
l ಆಂಧ್ರ ಪ್ರದೇಶದಲ್ಲಿ ಸಮುದ್ರದ ಅಲೆಗಳು 4.7 ಮೀ. ಎತ್ತರಕ್ಕೆ ಏಳಲಿವೆ ಎಂದು ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ ಹೇಳಿದೆ
ಚಂಡಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ?
ನವದೆಹಲಿಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರವು (ಆರ್‌ಎಸ್‌ಎಂಸಿ) ಉತ್ತರ ಹಿಂದೂ ಮಹಾಸಾಗರದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತಗಳ ನಾಮಕರಣವನ್ನು ಮಾಡುತ್ತದೆ. ಆರ್‌ಎಸ್‌ಎಂಸಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ಏಷ್ಯಾ ಮತ್ತು ಪೆಸಿಫಿಕ್) ಉಸ್ತುವಾರಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ವಹಿಸುತ್ತದೆ.
ಚಂಡಮಾರುತಗಳ ಹೆಸರುಗಳನ್ನು ಆ ಪ್ರದೇಶದ ವ್ಯಾಪ್ತಿಯಲ್ಲಿರುವ 13 ದೇಶಗಳು ಸರತಿ ಪ್ರಕಾರ ನಿರ್ಧರಿಸುತ್ತವೆ. ಈ ಪ್ರದೇಶದಲ್ಲಿರುವ ಭಾರತ, ಬಾಂಗ್ಲಾದೇಶ, ಮಾಲ್ದೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್, ಯೆಮನ್, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ದೇಶಗಳು ಹೆಸರುಗಳನ್ನು ಸೂಚಿಸುತ್ತವೆ. ಪ್ರತಿ ದೇಶವೂ 13 ಹೆಸರುಗಳ ಪಟ್ಟಿಯನ್ನು ಪೂರ್ವಭಾವಿಯಾಗಿಯೇ ಸಲ್ಲಿಸಿರುತ್ತದೆ. ಹೊಸ ಚಂಡಮಾರುತ ಕಾಣಿಸಿಕೊಂಡಾಗ, 169 ಹೆಸರುಗಳ ಪಟ್ಟಿಯಿಂದ ಒಂದು ಹೆಸರನ್ನು ಸರತಿಯ ಪ್ರಕಾರ ಐಎಂಡಿ ಆಯ್ಕೆ ಮಾಡುತ್ತದೆ.
ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ, ಸುಂದರವಾದ ಅಥವಾ ಸುವಾಸನೆಯುಕ್ತ ಹೂವು.
- ದೆಹಲಿ: ಮೋಡಬಿತ್ತನೆ‘
ಸಂದರ್ಭ: ಚಳಿಗಾಲದಲ್ಲಿ ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ಐಐಟಿ–ಕಾನ್ಪುರದ ಸಹಯೋಗದಲ್ಲಿ ದೆಹಲಿ ಸರ್ಕಾರ ನಗರದ ಸುತ್ತಮುತ್ತ ಲಿನ ಪ್ರದೇಶದಲ್ಲಿ ಮೋಡಬಿತ್ತನೆ ಕಾರ್ಯ ಕೈಗೊಂಡಿದೆ.
- ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶದಲ್ಲಿ ಈ ಪ್ರಯೋಗವನ್ನು ವಿಸ್ತರಿಸಲಾಗುವುದು ಎಂದು ಪರಿಸರ ಇಲಾಖೆ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
- ಮೋಡಬಿತ್ತನೆ ಮಾಡುವ ವಿಮಾನವು ಕಾನ್ಪುರದಿಂದ ಹಾರಾಟ ಆರಂಭಿಸಿ, ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ಬುರಾರಿ, ಉತ್ತರ ಕರೋಲ್ ಬಾಘ್ ಮತ್ತು ಮಯೂರ್ ವಿಹಾರ ಪ್ರದೇಶಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿ, ಮೀರತ್ ವಾಯ ನೆಲೆಯಲ್ಲಿ ಇಳಿಯಿತು.
- ‘ಎಂಟು ಗನ್‌ಗಳ ಮೂಲಕ ಅರ್ಧ ಗಂಟೆಗಳ ಕಾಲ ರಾಸಾಯನಿಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿತು’ ಎಂದು ಸಚಿವ ಸಿರ್ಸಾ ವಿಡಿಯೊ ಮೂಲಕ ಮಾಹಿತಿ ನೀಡಿದ್ದಾರೆ.
- ಮೋಡ ಬಿತ್ತನೆಯ ಎರಡನೇ ಪ್ರಯೋಗ ದೆಹಲಿಯ ಹೊರವಲಯದಲ್ಲಿ ನಡೆಸಲಾಗುತ್ತದೆ. ಇಂಥ ಸುಮಾರು ಹತ್ತು ಪ್ರಯೋಗಗಳನ್ನು ದೆಹಲಿಯ ಸುತ್ತಮುತ್ತ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
- ‘ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಪ್ರಯೋಗಗಳು ಯಶಸ್ವಿಯಾದರೆ, ದೀರ್ಘಾವಧಿಯಲ್ಲಿ ಯೋಜನೆಯನ್ನು ರೂಪಿಸಲಿದ್ದೇವೆ’ ಎಂದು ಸಿರ್ಸಾ ಭವಿಷ್ಯದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
- ಕಳೆದ ವಾರ ಬುರಾರಿ ಪ್ರದೇಶದಲ್ಲಿ ಪರೀಕ್ಷಾರ್ಥವಾಗಿ ಮೋಡಬಿತ್ತನೆ ಕಾರ್ಯವನ್ನು ನಡೆಸಲಾಗಿತ್ತು. ಮೋಡಬಿತ್ತನೆಗೆ ಬಳಸುವ ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಸಂಯುಕ್ತಗಳ ರಾಸಾಯನಿಕ ವನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಲಾಗಿತ್ತು.
- ಕೈಗಾರಿಕಾ ಉತ್ಪಾದನೆ ಪ್ರಮಾಣ ಸ್ಥಿರ
ಸಂದರ್ಭ: ಜಿಎಸ್ಟಿ ಇಳಿಕೆ, ತಯಾರಿಕಾ ವಲಯದ ಚುರುಕಿನ ಚಟುವಟಿಕೆ ಪರಿಣಾಮ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಪರಿಷ್ಕರಣೆ ಹಾಗೂ ಹಬ್ಬಗಳ ಸಂದರ್ಭದಲ್ಲಿನ ಬೇಡಿಕೆ ಹೆಚ್ಚಳವು ತಯಾರಿಕಾ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿದೆ.
- ತಯಾರಿಕಾ ವಲಯದಲ್ಲಿ ಉತ್ತಮ ಪ್ರಮಾಣದ ಚಟುವಟಿಕೆ ಕಂಡುಬಂದ ಕಾರಣದಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇಕಡ 4ರಷ್ಟು ಆಗಿದೆ.
- ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) ಶೇ 3.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
- ‘ಜಿಎಸ್‌ಟಿ ದರದಲ್ಲಿ ಆಗಿರುವ ಪರಿಷ್ಕರಣೆ, ಹಬ್ಬಗಳ ಋತು ಬೇಗನೆ ಶುರುವಾಗಿದ್ದುದು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಿರುವಂತಿವೆ. ಅಕ್ಟೋಬರ್ ತಿಂಗಳಲ್ಲಿಯೂ ತಯಾರಿಕಾ ವಲಯದ ಚಟುವಟಿಕೆಗಳು ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥ ಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
- ಜಿಎಸ್‌ಟಿ ದರ ಪರಿಷ್ಕರಣೆಯು ಸಣ್ಣ ಮೊತ್ತದ, ದಿನಬಳಕೆಯ ಉತ್ಪನ್ನ ಗಳಿಗೆ ಬೇಡಿಕೆಯನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತದೆ. ಆದರೆ ಹೆಚ್ಚಿನ ಬೆಲೆಯ ಉತ್ಪನ್ನಗಳಿಗೆ ಬೇಡಿಕೆಯು ಉಳಿದು ಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದು ನಾಯರ್ ಹೇಳಿದ್ದಾರೆ.
- ಸೆಪ್ಟೆಂಬರ್‌ನಲ್ಲಿ ಐಐಪಿ ಹೆಚ್ಚಳ ಕಂಡಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್–ಸೆಪ್ಟೆಂಬರ್ ಅವಧಿ) ಕೈಗಾರಿಕಾ ಉತ್ಪಾದನೆಯು ಶೇ 3ರಷ್ಟು ಮಾತ್ರ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಮೊದಲಾರ್ಧದಲ್ಲಿ ಇದು ಶೇ 4.1ರಷ್ಟು ಬೆಳವಣಿಗೆ ದಾಖಲಿಸಿತ್ತು.
- ‘ಚಾಟ್ಜಿಪಿಟಿ ಗೊ’ ಒಂದು ವರ್ಷ ಉಚಿತ
ಸಂದರ್ಭ: ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹಾಗೂ ಹೆಚ್ಚು ಚಿತ್ರಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡುವ ‘ಚಾಟ್ಜಿಪಿಟಿ ಗೊ’ ಆವೃತ್ತಿಯನ್ನು ಭಾರತದ ಬಳಕೆ ದಾರರಿಗೆ1 ವರ್ಷದ ಅವಧಿಗೆ ಉಚಿತ ವಾಗಿ ನೀಡುವುದಾಗಿ ಓಪನ್ಎಐ ಕಂಪನಿ ಮಂಗಳವಾರ ಹೇಳಿದೆ.
- ನವೆಂಬರ್ 4ರಿಂದ ಆರಂಭವಾಗುವ ಸೀಮಿತ ಅವಧಿಯ ಕೊಡುಗೆ ಸಂದರ್ಭದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಳಕೆ ದಾರರಿಗೆ ಮಾತ್ರ ಇದು ಸಿಗಲಿದೆ.
- ‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಚಂದಾ ಆಧಾರದಲ್ಲಿ ಓಪನ್‌ಎಐ ಕಂಪನಿಯು ಆಗಸ್ಟ್‌ನಲ್ಲಿ ಅನಾವರಣ ಮಾಡಿದೆ. ಅನಾವರಣಗೊಳಿಸಿದ ಒಂದೇ ತಿಂಗಳಲ್ಲಿ ಭಾರತದಲ್ಲಿ ಚಾಟ್‌ಜಿಪಿಟಿ ಚಂದಾದಾರರ ಸಂಖ್ಯೆಯು ಎರಡು ಪಟ್ಟಿಗಿಂತ ಹೆಚ್ಚಳ ಕಂಡಿದೆ. ಓಪನ್‌ಎಐ ಪಾಲಿಗೆ ಭಾರತವು ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ.‘ಚಾಟ್‌ಜಿಪಿಟಿ ಗೊ’ ಆವೃತ್ತಿಗೆ ಈಗಾಗಲೇ ಚಂದಾದಾರರಾಗಿರುವ ಭಾರತೀಯರು 12 ತಿಂಗಳ ಉಚಿತ ಕೊಡುಗೆಗೆ ಅರ್ಹರು.
- ‘ರಷ್ಯಾ ತೈಲ ಖರೀದಿ ನಿಲ್ಲದು’
ಸಂದರ್ಭ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹಾಗೂ ಭಾರತದ ಇತರ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಸಂಪೂರ್ಣವಾಗಿ ಕೈಬಿಡುವ ಸಾಧ್ಯತೆ ಇಲ್ಲ.
- ಅಮೆರಿಕವು ನಿರ್ಬಂಧ ವಿಧಿಸಿರುವುದು ರಷ್ಯಾದ ಕೆಲವು ಕಂಪನಿಗಳ ಮೇಲೆ; ನಿರ್ಬಂಧವು ರಷ್ಯಾದ ಕಚ್ಚಾ ತೈಲದ ಮೇಲೆ ಇಲ್ಲ. ಹೀಗಾಗಿ ನಿರ್ಬಂಧ ಇಲ್ಲದ ಕಂಪನಿಗಳ ಮೂಲಕ ಖರೀದಿಯು ಮುಂದುವರಿಯುವ ಸಾಧ್ಯತೆ ಇದೆ.
- ರೊಸ್ನೆಫ್ಟ್ ಸೇರಿ ರಷ್ಯಾದ ನಾಲ್ಕು ಕಂಪನಿಗಳ ಮೇಲೆ ಇದುವರೆಗೆ ನಿರ್ಬಂಧ ಹೇರಲಾಗಿದೆ. ಆದರೆ ರೊಸ್ನೆಫ್ಟ್ ಕಂಪನಿಯು ತೈಲ ಉತ್ಪಾದಕ ಅಲ್ಲ; ಅದು ಉತ್ಪಾದಕರಿಂದ ಕಚ್ಚಾ ತೈಲವನ್ನು ಗ್ರಾಹಕರಿಗೆ ಒದಗಿಸಿಕೊಡುವ ಕಂಪನಿ. ರೊಸ್ನೆಫ್ಟ್ ಮಾಡುವ ಕೆಲಸವನ್ನು ರಷ್ಯಾದಲ್ಲಿ ಇತರ ಕಂಪನಿಗಳು ಮಾಡಬಹುದು, ಆಗ ಕಚ್ಚಾ ತೈಲದ ಪೂರೈಕೆಗೆ ಅಡ್ಡಿ ಇರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
- ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧವಿದೆ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ. ನಿರ್ಬಂಧಕ್ಕೆ ಗುರಿಯಾಗಿರದ ರಷ್ಯಾದ ಇತರ ಕಂಪನಿಗಳಿಂದ ಖರೀದಿಯನ್ನು ಪರಿಗಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
- ‘ನಿರ್ಬಂಧದ ನಿಯಮಗಳನ್ನು ಪಾಲಿಸಲಾಗುತ್ತದೆ. ಆದರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಾವು ನಿಲ್ಲಿಸುವುದಿಲ್ಲ. ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಇಲ್ಲ’ ಎಂದು ಐಒಸಿ ನಿರ್ದೇಶಕ ಅನುಜ್ ಜೈನ್ ಹೇಳಿದ್ದಾರೆ.
- ಸ್ಮೃತಿ ಜೀವನಶ್ರೇಷ್ಠ ರೇಟಿಂಗ್
- ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
29 ವರ್ಷದ ಎಡಗೈ ಬ್ಯಾಟರ್ ಮಂದಾನ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ವಿರುದ್ಧ 109 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಔಟಾಗದೇ 34 ರನ್ ಗಳಿಸಿದ್ದಾರೆ. ಇದರೊಂದಿಗೆ ರೇಟಿಂಗ್ ಪಾಯಿಂಟ್ಸ್‌ಗಳನ್ನು 828ಕ್ಕೆ ಹೆಚ್ಚಿಸಿಕೊಂಡಿದ್ದಾರೆ.