- ‘ಬೆಂಗಳೂರಿನಲ್ಲಿ 943 ಟನ್ ಆಹಾರ ವ್ಯರ್ಥ’
ಸಂದರ್ಭ: ‘ಪ್ರತಿವರ್ಷ ಬೆಂಗಳೂರು ಒಂದರಲ್ಲೇ 943 ಟನ್ ಆಹಾರ ವ್ಯರ್ಥವಾಗುತ್ತಿದೆ. ಅಂದಾಜು ₹ 360 ಕೋಟಿ ಮೌಲ್ಯದ ಆಹಾರವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನ ಹೇಳಿದೆ.
- ‘ಅನ್ನ ಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆ ಮಾರಾಟ ತಪ್ಪಿಸಲು 5 ಕಿಲೋ ಅಕ್ಕಿ ಕೊಟ್ಟು, ಉಳಿದ ಐದು ಕಿಲೋ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ.
- ‘ನಾವು ಒಂದು ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ.
- ‘ಅನ್ನ ಸುವಿಧಾ’ ಜಾರಿ: ‘2024-25ನೇ ಸಾಲಿನ ಬಜೆಟ್ ಘೋಷಣೆಯಂತೆ 75 ವರ್ಷ ದಾಟಿದ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸುವ ‘ಅನ್ನ ಸುವಿಧಾ ಯೋಜನೆ’ಯನ್ನು ಜಾರಿಗೊಳಿಸ ಲಾಗಿದೆ.
- ಮೋದಿ ಭೇಟಿಯಾದ ಶ್ರೀಲಂಕಾ ಪ್ರಧಾನಿ
ಸಂದರ್ಭ: ದೆಹಲಿಯ ತಮ್ಮ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘ ಚರ್ಚೆ ನಡೆಸಿದರು.
- ಉಭಯ ದೇಶಗಳ ನಡುವಿನ ಸಹಕಾರ ವೃದ್ಧಿ, ಶಿಕ್ಷಣ, ಮಹಿಳಾ ಸ್ವಾವಲಂಬನೆ, ಸಂಶೋಧನೆ ಮತ್ತು ಭಾರತೀಯ ಮೀನುಗಾರರ ಸುರಕ್ಷತೆಯ ವಿಚಾರಗಳೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಚರ್ಚೆ ನಡೆಯಿತು ಎಂದು ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
- ‘ನಾಗರಿಕರ ಸಮೃದ್ಧಿಯ ಆಶೋತ್ತರ ಈಡೇರಿಸುವುದು ಮತ್ತು ಪ್ರಾದೇಶಿಕ ಸಹಕಾರಕ್ಕೆ ಮತ್ತಷ್ಟು ಮಹತ್ವ ನೀಡುವುದು ಎರಡೂ ಆತ್ಮೀಯ ನೆರೆಯ ದೇಶಗಳ ಮಹತ್ವದ ಉದ್ದೇಶವಾಗಿದೆ’ ಎಂದು ಮೋದಿ ಹೇಳಿದ್ದಾರೆ.
- ಬಿಹಾರ: ಆಮಿಷ ತಡೆಗೆ ಆಯೋಗ ಸೂಚನೆ
ಸಂದರ್ಭ: ಬಿಹಾರ ಚುನಾವಣೆ ವೇಳೆ ಮತದಾರರನ್ನು ಓಲೈಸಲು ಮಾದಕವಸ್ತು, ಮದ್ಯ ಮತ್ತು ನಗದು ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಕಾನೂನು ಜಾರಿ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳಿಗೆ ಸೂಚಿಸಿದೆ.
- ಮತದಾರರಿಗೆ ಆಮಿಷ ಒಡ್ಡುವ ಕಾರ್ಯಗಳನ್ನು ತಡೆಗಟ್ಟುವ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡುವ ಉದ್ದೇಶದಿಂದ ಆಯೋಗವು ವಿವಿಧ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿತು. ಅಕ್ರಮಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಮಾಹಿತಿ ನೀಡಿದರು.
- ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ವೆಚ್ಚಗಳು ಹಾಗೂ ಗೋಪ್ಯವಾಗಿ ನಡೆಸುವ ವೆಚ್ಚಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು. ಅಲ್ಲದೆ ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆಯಲು ತಿಳಿಸಲಾಯಿತು.
- ಆರ್ಥಿಕ ಅಪರಾಧಗಳ ಕುರಿತ ಗುಪ್ತಚರ ಮಾಹಿತಿಯು ಕಾನೂನು ಜಾರಿ ಸಂಸ್ಥೆಗಳ ನಡುವೆ ಹಂಚಿಕೆಯಾಗಬೇಕು. ಅಲ್ಲದೆ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರ ಪ್ರಮುಖವಾಗಿರಬೇಕು ಎಂದು ತಿಳಿಸಲಾಯಿತು.
- ಅಂತರರಾಜ್ಯ ಮತ್ತು ಅಂತರ ರಾಷ್ಟ್ರೀಯ (ನೇಪಾಳ) ಗಡಿಗಳ ಮೇಲೆ ಹದ್ದಿನ ಕಣ್ಣಿಡಬೇಕು. ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಅಕ್ರಮ ವಸ್ತುಗಳ ಸಾಗಣೆ, ಮಾದಕ ವಸ್ತುಗಳು, ಮದ್ಯ, ನಗದು, ನಕಲಿ ನೋಟುಗಳು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಇವುಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
- ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಶೂನ್ಯ ಸಹಿಷ್ಣು ನೀತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಯಿತು. ಬಿಹಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
- ಸಿಬಿಡಿಟಿ, ಸಿಬಿಐಸಿ, ಇ.ಡಿ, ಸಿಇಐಬಿ, ಎಫ್‌ಐಯು–ಐಎನ್‌ಡಿ, ಆರ್‌ಬಿಐ, ಐಬಿಎ, ಎನ್‌ಸಿಬಿ, ಸಿಐಎಸ್‌ಎಫ್, ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ, ಬಿಸಿಎಎಸ್, ಎಎಐ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
- ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
- ಬ್ರಹ್ಮೋಸ್: ಹಸಿರು ನಿಶಾನೆ ಇಂದು
ಸಂದರ್ಭ: ಲಖನೌದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ಮೊದಲ ಬ್ಯಾಚ್ನ ಬ್ರಹ್ಮೋಸ್ ಕ್ಷಿಪಣಿಗಳ ತಯಾರಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
- ‘ಉತ್ತರ ಪ‍್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ (ಯುಪಿಡಿಐಸಿ) ಮಹತ್ವದ ಮೈಲಿಗಲ್ಲಾಗಿರುವ ಇದು, ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಸಂಕಲ್ಪಕ್ಕೆ ನವಚೈತನ್ಯವನ್ನು ತುಂಬುತ್ತದೆ’ ಎಂದಿದೆ.
- ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಗಳ ತಯಾರಕರಾದ ಬ್ರಹ್ಮೋಸ್ ಏರೋಸ್ಪೇಸ್, ಲಖನೌದಲ್ಲಿನ ತನ್ನ ಘಟಕದಲ್ಲಿ ಮೊದಲ ಬ್ಯಾಚ್ನ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉತ್ಪಾದಿಸಿದೆ. ಈ ಅತ್ಯಾಧುನಿಕ ಘಟಕವು ಸಕಲ ಸೌಲಭ್ಯಗಳನ್ನು ಒಳಗೊಂಡಿದ್ದು, 2025ರ ಮೇ 11ರಂದು ಆರಂಭಗೊಂಡಿತ್ತು.
- ಲಿಂಗತ್ವ ಅಲ್ಪಸಂಖ್ಯಾತರಿಗೆ ನೀತಿ ರೂಪಿಸಿ
ಸಂದರ್ಭ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ 2019ರಲ್ಲಿ ಕಾನೂನು ಜಾರಿಯಾದರೂ ಆ ಸಮುದಾಯದವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
- ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸಲು ಹೊಸ ನೀತಿಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
- ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ‘2019ರ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ’ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು ಕಡತ ಗಳಲ್ಲಿ ಮಾತ್ರ ಉಳಿದಿವೆ’ ಎಂದು ಹೇಳಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯ್ದೆ ಜಾರಿ ಬಗ್ಗೆ ‘ನಿರಾಸಕ್ತಿ’ತೋರಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
- ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವದ ಸಲಹಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತು.
- ಈ ತೀರ್ಪು ಹೊರಬಂದ ದಿನಾಂಕದಿಂದ ಆರು ತಿಂಗಳ ಒಳಗಾಗಿ ವರದಿ ಅಥವಾ ಕರಡು ನೀತಿಯನ್ನು ಸಿದ್ಧಪಡಿಸುವಂತೆ ಪೀಠವು ಸಮಿತಿಗೆ ಸೂಚಿಸಿತು. ಸಮಿತಿಯು ವರದಿ ಸಲ್ಲಿಸಿದ ಮೂರು ತಿಂಗಳ ಒಳಗಾಗಿ ತನ್ನದೇ ಆದ ‘ಸಮಾನ ಅವಕಾಶ ನೀತಿ’ಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
- ‘ಲಿಂಗತ್ವ ಅಲ್ಪಸಂಖ್ಯಾತರು ತಾರತಮ್ಯವನ್ನು ಎದುರಿಸುತ್ತಲೇ ಇದ್ದಾರೆ. ಆರೋಗ್ಯ ರಕ್ಷಣೆ, ಆರ್ಥಿಕ ಅವಕಾಶಗಳು ಮತ್ತು ಶೈಕ್ಷಣಿಕ ನೀತಿಯಿಂದ ಹೊರಗೆ ಇಟ್ಟಿರುವುದು ಅವರ ಸಂಕಷ್ಟ ಹೆಚ್ಚಲು ಕಾರಣವಾಗಿದೆ’ ಎಂದು ಹೇಳಿತು.
- ಉದ್ಯೋಗದಲ್ಲಿ ಎದುರಿಸಿದ ತಾರತಮ್ಯ ಮತ್ತು ಅವಮಾನದಿಂದ ನೊಂದ ಲಿಂಗತ್ವ ಅಲ್ಪಸಂಖ್ಯಾತ ರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಉತ್ತರ ಪ್ರದೇಶ ಮತ್ತು ಗುಜರಾತ್‌ನ ಎರಡು ಖಾಸಗಿ ಶಾಲೆಗಳಿಂದ ತಮ್ಮನ್ನು ವಜಾಗೊಳಿಸಲಾಯಿತು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ‘ಸುಪ್ರೀಂ’
- ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ‘ಮೃತ ವ್ಯಕ್ತಿಗೆ ಸೇರಿದ ಎಲ್ಲಾ ಸ್ವತ್ತುಗಳು ಮುಸ್ಲಿಂ ಕಾನೂನಿನ ಪ್ರಕಾರ ಹಂಚಬೇಕಾದ ಪಿತ್ರಾರ್ಜಿತ ಆಸ್ತಿಯ ಭಾಗವಾಗಿರುತ್ತವೆ’ ಎಂದು ತೀರ್ಪು ನೀಡಿದೆ.
- ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಜೊಹರಾಬಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಮೃತಪಟ್ಟ ಚಾಂದ್ ಖಾನ್ ಅವರಿಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದ ಕೌಟುಂಬಿಕ ವಿವಾದ ಇದಾಗಿದೆ. ‘ಚಾಂದ್ ಖಾನ್ ಅವರ ಆಸ್ತಿಯು ಮುಸ್ಲಿಂ ಕಾನೂನಿನಡಿ ಪಿತ್ರಾರ್ಜಿತ ಆಸ್ತಿಯಾಗಿದೆ. ಆಸ್ತಿಯ ಮುಕ್ಕಾಲು ಭಾಗ ತಮಗೆ ಸೇರಬೇಕು’ ಎಂಬುದು ವಿಧವೆ ಜೊಹರಾಬಿ ಅವರ ವಾದವಾಗಿದೆ.
- ಆದರೆ, ಜೊಹರಾಬಿ ಅವರ ವಾದವನ್ನು ಚಾಂದ್ ಖಾನ್ ಅವರ ಸಹೋದರ ಇಮಾಮ್ ಖಾನ್ ಪ್ರಶ್ನಿಸಿದರು. ‘ಚಾಂದ್ ಖಾನ್ ಅವರ ಜೀವಿತಾವಧಿಯಲ್ಲಿ ಆಸ್ತಿಗಳ ಮಾರಾಟದ ಒಪ್ಪಂದದ ಮೂಲಕ ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗಿದೆ’ ಎಂಬ ವಾದವನ್ನು ಇಮಾಮ್ ಮುಂದಿಟ್ಟರು.
- ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಅಥವಾ ನಿರ್ದಿಷ್ಟ ಆಸ್ತಿಯನ್ನು ಖರೀದಿಸಲು ಮುಂದಾಗಿರುವವರಿಗೂ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ನೀಡುವುದಿಲ್ಲ’ ಎಂದು ಪೀಠ ಹೇಳಿತು.
- ಭಾರತದ ಗ್ರಾಹಕರಲ್ಲಿ ಹೊಸ ಹುರುಪು
ಸಂದರ್ಭ: ಭಾರತದ ಗ್ರಾಹಕರು ಹೊಸ ಹುರುಪು ಮತ್ತು ವಿಶ್ವಾಸದೊಂದಿಗೆ ಹಬ್ಬದ ಋತುವನ್ನು ಬರ ಮಾಡಿಕೊಂಡಿದ್ದಾರೆ, ಹಣಕಾಸಿನ ವಿಚಾರವಾಗಿ ಅವರಲ್ಲಿ ಹೊಸ ಆಶಾವಾದ ಮೂಡಿದೆ ಎಂದು ಡೆಲಾಯ್ಟ್ ಇಂಡಿಯಾ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.
- ‘ಹಣದುಬ್ಬರದ ಪ್ರಮಾಣವು ಕಡಿಮೆ ಆಗಿದೆ, ಈಚೆಗೆ ಜಾರಿಗೆ ಬಂದಿರುವ ಜಿಎಸ್‌ಟಿ ದರ ಪರಿಷ್ಕರಣೆ ಕ್ರಮವು ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದೆ. ಈ ಸಂದರ್ಭದಲ್ಲಿ ಬಂದಿ ರುವ ಹಬ್ಬಗಳ ಖುಷಿಯು ಬೇಡಿಕೆಯ ಹೊಸ ಅಲೆಯನ್ನು ಸೃಷ್ಟಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
- ಭಾರತದ ಹಣಕಾಸಿನ ಆರೋಗ್ಯ ಸೂಚ್ಯಂಕವು (ಎಫ್‌ಡಬ್ಲ್ಯುಬಿಐ) ಸೆಪ್ಟೆಂಬರ್‌ನಲ್ಲಿ 110.3ಕ್ಕೆ ಏರಿಕೆ ಆಗಿದೆ. ಇದು ಜಾಗತಿಕ ಸರಾಸರಿಯಾದ 103.6ಕ್ಕಿಂತ ಹೆಚ್ಚು. ಕೌಟುಂಬಿಕ ಮಟ್ಟದಲ್ಲಿ ಹಣಕಾಸಿನ ಸ್ಥಿರತೆ ಹೆಚ್ಚಾಗಿ ರುವುದನ್ನು ಹಾಗೂ ಗ್ರಾಹಕರಲ್ಲಿ ಆಶಾಭಾವ ಹೆಚ್ಚಿರುವುದನ್ನು ಇದು ಸೂಚಿಸುತ್ತಿದೆ.
- ಆಹಾರ ಮಿತವ್ಯಯ ಸೂಚ್ಯಂಕವು (ಎಫ್‌ಎಫ್ಐ) ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರುವುದು ವರದಿಯಲ್ಲಿನ ಪ್ರಮುಖ ಅಂಶಗಳ ಪೈಕಿ ಒಂದು. ಈ ಸೂಚ್ಯಂಕವು ಈಗ ಮೂರು ವರ್ಷಗಳ ಎರಡನೆಯ ಕನಿಷ್ಠ ಮಟ್ಟದಲ್ಲಿ ಇದೆ. ಅಂದರೆ ಗ್ರಾಹಕರು ಖರೀದಿಯ ಸಂದರ್ಭದಲ್ಲಿ ಬಹಳ ಲೆಕ್ಕಾಚಾರ ಹಾಕುತ್ತಿಲ್ಲ. ಅದರ ಬದಲಿಗೆ ಅವರು, ಉತ್ತಮ ಮೌಲ್ಯದ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.
- ವಾಹನ ಖರೀದಿ ಉದ್ದೇಶವನ್ನು ಹೇಳುವ ಸೂಚ್ಯಂಕವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದ್ದ ಮಟ್ಟಕ್ಕೆ ಹೋಲಿಸಿದರೆ ಶೇಕಡ 6.6ರಷ್ಟು ಹೆಚ್ಚಳ ಕಂಡಿದೆ. ಅಂದರೆ, ದೊಡ್ಡ ಮೊತ್ತದ ಖರ್ಚುಗಳನ್ನು ಮಾಡುವ ವಿಶ್ವಾಸವು ಜನರಲ್ಲಿ ಹೆಚ್ಚಾಗಿದೆ ಎಂಬುದನ್ನು ಇದು ಹೇಳುತ್ತಿದೆ. ವಿದ್ಯುತ್ ಚಾಲಿತ (ಇ.ವಿ) ವಾಹನದ ಬಗ್ಗೆ ಒಲವು ಹೆಚ್ಚಾಗಿದೆ, ಶೇ 60ರಷ್ಟು ಗ್ರಾಹಕರು ಇ.ವಿ.ಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
- ಪ್ರವಾಸ, ಮನರಂಜನೆ, ವೈಯಕ್ತಿಕ ಆರೈಕೆಯಂತಹ ಉದ್ದೇಶಗಳಿಗೆ ವೆಚ್ಚ ಮಾಡುವುದು ಹೆಚ್ಚಾಗುತ್ತಿದೆ. ಹಣದುಬ್ಬರ ಕಡಿಮೆ ಆಗಿರುವುದು ಹಾಗೂ ಜಿಎಸ್‌ಟಿ ದರವನ್ನು ತಗ್ಗಿಸಿರುವುದು ಈ ವೆಚ್ಚಗಳಿಗೆ ಪೂರಕವಾಗಿ ಒದಗಿಬಂದಿದೆ ಎಂದು ವರದಿಯು ವಿವರಿಸಿದೆ.
- ಭಾರತದ ಗ್ರಾಹಕರು ಈಗ ಹಣಕಾಸಿನ ವಿಚಾರದಲ್ಲಿ ಹಿಂದೆಂದಿ ಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದು ಡೆಲಾಯ್ಟ್ ಸಂಸ್ಥೆಯ ದಕ್ಷಿಣ ಭಾರತ ವಲಯದ ಪಾಲುದಾರ ಆನಂದ್ ರಾಮನಾಥನ್ ಹೇಳಿದ್ದಾರೆ.
- ಲಾಂಗ್ಜಂಪ್: 8 ಮೀ. ಕ್ಲಬ್ಗೆ ಅನುರಾಗ್
ಸಂದರ್ಭ: ಇಂಡಿಯನ್ ಓಪನ್ ಅಥ್ಲೆಟಿಕ್ಸ್: ರಾಜ್ಯದ ಕೃಷಿಕ್ಗೆ ಚಿನ್ನ: ಕೇರಳದ ಲಾಂಗ್ಜಂಪರ್ ಸಿ.ವಿ.ಅನುರಾಗ್ ಅವರು ಇಂಡಿಯನ್ ಓಪನ್ 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ 8.06 ಮೀ. ದೂರ ಜಿಗಿದು ಚಿನ್ನ ಗೆದ್ದರು. ಎಂಟು ಮೀಟರ್ ಜಿಗಿದವರ ಕ್ಲಬ್ಗೆ ಸಾಲಿಗೆ ಹೊಸದಾಗಿ ಸೇರ್ಪಡೆಯಾದರು.
- ಇದು 21 ವರ್ಷ ವಯಸ್ಸಿನ ಅನುರಾಗ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದ್ದು ಎರಡನೇ ಯತ್ನದಲ್ಲಿ ಈ ದೂರ ದಾಖಲಿಸಿದರು. ಆ ಮೂಲಕ 2024ರಲ್ಲಿ ತಾವೇ ಸ್ಥಾಪಿಸಿದ್ದ 7.87 ಮೀ.ಗಳ ದಾಖಲೆಯನ್ನು ಅವರು ಸುಧಾರಿಸಿದರು.
- ಮೊದಲ ಯತ್ನದಲ್ಲಿ 7.88 ಮಿ. ಜಿಗಿದಿದ್ದರು. ಎರಡನೇ ಯತ್ನದಲ್ಲಿ 8.06 ಮೀ. ಜಿಗಿದ ಅವರು ನಂತರದ ಯತ್ನಗಳಲ್ಲಿ ಕ್ರಮವಾಗಿ 7.96 ಮೀ, 6.62 ಮೀ ಮತ್ತು 7.88 ಮೀ. ದೂರ ಜಿಗಿದರು.
- ತಮಿಳುನಾಡಿನ ಶರನ್ ಜೆ. (7.82 ಮೀ.) ಮತ್ತು ಪೊಲೀಸ್ ತಂಡದ ಆರ್ಯನ್ ಚೌಧರಿ (7.67 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
- ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ
ಸಂದರ್ಭ: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ನಾಯಕಿ ಯಾಗಿದ್ದ ಶಾಂತಾ ರಂಗಸ್ವಾಮಿ ಅವರನ್ನು ಭಾರತೀಯ ಕ್ರಿಕೆಟಿಗರ ಸಂಘಟನೆ (ಐಸಿಎ)ಗೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಶಾಂತಾ ಅವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
- ಚುನಾವಣೆ ಪ್ರಕ್ರಿಯೆಯಲ್ಲಿ ವೆಂಕಿಟ್ಟು ಸುಂದರಂ ಮತ್ತು ದೀಪಕ್ ಜೈನ್ ಅವರು ಕ್ರಮವಾಗಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಆಯ್ಕೆಯಾದರು. ಸಂತೋಷ್ ಸುಬ್ರಮಣಿಯಂ ಮತ್ತು ಜ್ಯೋತಿ ಜಿ ತಟ್ಟೆ ಅವರನ್ನು ಸದಸ್ಯ ಪ್ರತಿನಿಧಿಗಳನ್ನಾಗಿ ನೇಮಕ ಮಾಡಲಾಯಿತು ಎಂದು ಐಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ವೆಂಕಿನಾ ಚಾಮುಂಡೇಶ್ವರ್ ನಾಥ್ ಮತ್ತು ಸುಧಾ ಶಾ ಅವರು ಕ್ರಮವಾಗಿ ಬಿಸಿಸಿಐನಲ್ಲಿ ಐಸಿಸಿ ಪ್ರತಿನಿಧಿ ಗಳಾಗಿ ಆಯ್ಕೆಯಾಗಿದ್ದಾರೆ. ಶುಭಾಂಗಿ ಡಿ ಕುಲಕರ್ಣಿ ಅವರನ್ನು ಐಪಿಎಲ್ ಆಡಳಿತ ಸಮಿತಿಗೆ ನಾಮನಿರ್ದೇಶನ ಮಾಡಲಾಯಿತು.
- 71 ವರ್ಷದ ಶಾಂತಾ, ಮೂಲತಃ ಬೆಂಗಳೂರಿನವರು. 1976 ರಿಂದ 1991ರ ಅವಧಿಯಲ್ಲಿ ಭಾರತ ಮಹಿಳಾ ತಂಡದಲ್ಲಿ ಆಡಿದ್ದರು.
- ಅವರು 16 ಟೆಸ್ಟ್‌ಗಳಲ್ಲಿ ಆಡಿ ಒಂದು ಶತಕ ಹಾಗೂ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟು 750 ರನ್ ಗಳಿಸಿದ್ದಾರೆ. ಜೊತೆಗೆ 21 ವಿಕೆಟ್‌ಗಳನ್ನೂ ಪಡೆದಿದ್ದಾರೆ. 19 ಏಕದಿನ ಪಂದ್ಯಗಳಿಂದ 287 ರನ್ ಪೇರಿಸಿದ್ದಾರೆ.
- ರ್ಯಾಂಕಿಂಗ್: 136ನೇ ಸ್ಥಾನಕ್ಕಿಳಿದ ಭಾರತ
ಸಂದರ್ಭ: ಭಾರತ ಪುರುಷರ ಫುಟ್ಬಾಲ್ ತಂಡ, ಶುಕ್ರವಾರ ಪ್ರಕಟವಾದ ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ 136ನೇ ಸ್ಥಾನಕ್ಕೆ ಕುಸಿದಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ರ್ಯಾಂಕಿಂಗ್ನಲ್ಲಿ ಈ ಮಟ್ಟಕ್ಕೆ ಇಳಿದಿದೆ.
- ಈ ಹಿಂದಿನ ರ್‍ಯಾಂಕಿಂಗ್‌ನಲ್ಲಿ ಭಾರತ 134ನೇ ಸ್ಥಾನ ದಲ್ಲಿದಲ್ಲಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಾರತ ತಂಡವು ಎಎಫ್‌ಸಿ ಏಷ್ಯನ್ ಕಪ್ ರ‍್ಯಾಂಕಿಂಗ್‌ನಲ್ಲಿ ಸಿಂಗಪುರಕ್ಕೆ ಸೋತು, ಪ್ರಧಾನ ಸುತ್ತಿಗೆ ತಲುಪುವ ಕ್ಷೀಣ ಅವಕಾಶವನ್ನೂ ಕಳೆದುಕೊಂಡಿತ್ತು. ಭಾರತವು, ಕುವೈತ್‌ಗಿಂತ ಒಂದು ಸ್ಥಾನ ಕೆಳಗಿದ್ದು, ಬೋಟ್ಸ್‌ವಾನಾಗಿಂತ ಒಂದು ಸ್ಥಾನ ಮೇಲಿದೆ.
- 2016ರ ಅಕ್ಟೋಬರ್ ನಲ್ಲಿ ಭಾರತ 137ನೇ ಸ್ಥಾನಕ್ಕೆ ಇಳಿದಿದ್ದು, ಈವರೆಗಿನ ಕಳಪೆ ಎನಿಸಿದೆ. 1996ರ ಫೆಬ್ರುವರಿ ಯಲ್ಲಿ 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.
- ಸ್ಪೇನ್‌ಗೆ ಅಗ್ರಸ್ಥಾನ: ವಿಶ್ವ ರ್‍ಯಾಂಕಿಂಗ್‌ನಲ್ಲಿ ಸ್ಪೇನ್ ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ. ಜರ್ಮನಿ ಎರಡು ಸ್ಥಾನ ಮೇಲೇರಿದ್ದು ಅಗ್ರ 10ರೊಳಗೆ ಮರಳಿದೆ. 2018ರ ವಿಶ್ವಕಪ್ ರನ್ನರ್ ಅಪ್ ಕ್ರೊವೇಷ್ಯಾ 11ನೇ ಸ್ಥಾನದಲ್ಲಿದೆ.
- ವಿಶ್ವ ಕಪ್ ವಿಜೇತ ಅರ್ಜೆಂಟೀನಾ ಎರಡನೇ, ಫ್ರಾನ್ಸ್ ಮೂರನೇ ಸ್ಥಾನದಲ್ಲಿವೆ. ಇಂಗ್ಲೆಂಡ್, ಪೋರ್ಚುಗಲ್, ನೆದರ್ಲೆಂಡ್ಸ್, ಬ್ರೆಜಿಲ್ ಮತ್ತು ಬೆಲ್ಜಿಯಂ ಕ್ರಮವಾಗಿ ನಾಲ್ಕರಿಂದ ಎಂಟರವರೆಗಿನ ಸ್ಥಾನಗಳನ್ನು ಪಡೆದಿವೆ.