- ಜಾತಿವಾರು ಸಮೀಕ್ಷೆಯಲ್ಲಿ ‘ಕಲ್ಯಾಣ’ದ 6 ಜಿಲ್ಲೆ ಹಿಂದೆ
ಸಂದರ್ಭ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಸಂಗ್ರಹದಲ್ಲಿ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು ಹಿಂದೆ ಬಿದ್ದಿವೆ.
- ರಾಜ್ಯದಲ್ಲಿ 1.48 ಕೋಟಿ ಕುಟುಂಬಗಳ ಸುಮಾರು 6.14 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸುವುದು ಗುರಿ. ಅಕ್ಟೋಬರ್ 13ರ ಸಂಜೆ 6.30ರ ವೇಳೆಗೆ ಸಮೀಕ್ಷೆ ಯಲ್ಲಿ 4.92 ಕೋಟಿ ಜನರ ಮಾಹಿತಿ ಯನ್ನು ಕ್ರೋಡೀಕರಣ ಮಾಡಿ ಶೇ 80.15ರಷ್ಟು ಪೂರ್ಣಗೊಳಿಸಲಾಗಿದೆ.
- ಕೊಪ್ಪಳ ಹೊರತುಪಡಿಸಿ ‘ಕಲ್ಯಾಣ’ದ ಉಳಿದ ಆರು ಜಿಲ್ಲೆಗಳು ಕೊನೆಯಲ್ಲಿರುವ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಕೊಡಗು, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳೂ ಇವೆ.
- ಯಾದಗಿರಿ ಜಿಲ್ಲೆಯಲ್ಲಿ ಶೇ 69.37ರಷ್ಟು ಪ್ರಗತಿಯಾ ಗಿದ್ದು, ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಜನಸಂಖ್ಯೆ ಮಾಹಿತಿ ಸಂಗ್ರಹದಲ್ಲಿ ಚಿಕ್ಕಮಗಳೂರು (ಶೇ 91.32), ತುಮಕೂರು (90.03), ಮಂಡ್ಯ (90) ಮೊದಲ ಮೂರು ಸ್ಥಾನಗಳಲ್ಲಿವೆ. ಹಾವೇರಿ (89.87), ದಾವಣಗೆರೆ (87), ಬೆಂಗಳೂರು ದಕ್ಷಿಣ (87.35), ಹಾಸನ (86), ಶಿವಮೊಗ್ಗ (86), ಚಿತ್ರದುರ್ಗ (86.11), ಉಡುಪಿ (85.11) ಅಗ್ರ 10 ಸ್ಥಾನಗಳಲ್ಲಿವೆ.
- ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1.44 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಇತ್ತು. ಈವರೆಗೆ 1.07 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಕೊಪ್ಪಳ (ಶೇ 82.27) ರಾಜ್ಯದಲ್ಲಿ 14ನೇ ಸ್ಥಾನದಲ್ಲಿದೆ. ಉಳಿದಂತೆ ಬೀದರ್ 25, ರಾಯಚೂರು 26, ಬಳ್ಳಾರಿ 27, ಕಲಬುರಗಿ 28ನೇ ಸ್ಥಾನದಲ್ಲಿವೆ.
- ‘ಕೆಲ ಕುಟುಂಬಗಳು ಹಳೇ, ಹೊಸ ಪಡಿತರ ಚೀಟಿ ಹೊಂದಿವೆ. ಹೊಸ ಪಡಿತರ ಚೀಟಿ ಅನ್ವಯ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಮಾಡಿದ್ದರೂ ಹಳೇ ಪಡಿತರ ಚೀಟಿಯಲ್ಲಿನ ಹೆಸರುಗಳು ಸಮೀಕ್ಷೆಯ ಉಳಿಕೆ ಪಟ್ಟಿಯಲ್ಲಿ ಕಾಣಿಸಿಕೊಳ್ಳು ತ್ತಿವೆ’ ಇದೂ ಹಿನ್ನಡೆಗೆ ಕಾರಣ’ ಎನ್ನುತ್ತಾರೆ ಡಿಡಿಪಿಐ ಚನ್ನಬಸಪ್ಪ ಮುಧೋಳ.
- ಕೆಮ್ಮಿನ ಕಲುಷಿತ ಸಿರಪ್: ಡಬ್ಲ್ಯುಎಚ್‌ಒ ಎಚ್ಚರಿಕೆ
ಸಂದರ್ಭ: ಭಾರತದಲ್ಲಿ ಮಾರಾಟವಾದ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.
- ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್, ಮತ್ತು ರಿಲೈಫ್ ಕಂಪನಿಗಳ ಕೆಮ್ಮಿನ ಕಲುಷಿತ ಸಿರಪ್‌ಗಳು ವಿಶ್ವದಾದ್ಯಂತ ಎಲ್ಲಿ ಪತ್ತೆಯಾದರೂ ತಕ್ಷಣ ತಿಳಿಸುವಂತೆ ಸೂಚಿಸಿದೆ.
- ಮಧ್ಯಪ್ರದೇಶ ಮತ್ತು ರಾಜಸ್ಥಾನ ದಲ್ಲಿ ಇಂಥ ಸಿರಪ್ ಸೇವಿಸಿ 5 ವರ್ಷ ದೊಳಗಿನ 22 ಮಕ್ಕಳು ಮೃತಪಟ್ಟಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ಡಬ್ಲ್ಯುಎಚ್‌ಒ, ವಿಶ್ವದಾದ್ಯಂತ ಈ ಎಚ್ಚರಿಕೆ ರವಾನಿಸಿದೆ.
- ‘ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು (ಎನ್‌ಆರ್‌ಎ) ತಮ್ಮ ದೇಶದಲ್ಲಿ ಕೆಮ್ಮಿನ ಕಳಪೆ ಸಿರಪ್ ಮಾರಾಟ ಆಗುತ್ತಿಲ್ಲ ಎನ್ನುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಎಲ್ಲಾದರೂ ಕಂಡುಬಂದರೆ ತಕ್ಷಣವೇ ಕ್ರಮ ವಹಿಸಬೇಕು’ ಎಂದು ಡಬ್ಲ್ಯುಎಚ್‌ಒ ಹೇಳಿದೆ.
- ಕೆಮ್ಮಿನ ಕಳಪೆ ಸಿರಪ್ ಮಾರಾಟ ಮತ್ತು ಇಂತಹ ಸಿರಪ್ ಸೇವೆನೆಯಿಂದ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಂಡುಬಂದರೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಅದನ್ನು ತಕ್ಷಣ ರಾಷ್ಟ್ರೀಯ ಔಷಧ ವಿಜಿಲೆನ್ಸ್ ಕೇಂದ್ರ ಮತ್ತು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
- ಕೆಮ್ಮಿನ ಕಳಪೆ ಸಿರಪ್ ಪೂರೈಕೆ ಜಾಲದ ಮೇಲೆ ಕಣ್ಗಾವಲು ಇರಿಸುವಂತೆ ಮತ್ತು ಇಂತಹ ಕಳಪೆ ಉತ್ಪನ್ನದಿಂದ ಭಾದಿತವಾಗಿರುವ ಪ್ರದೇಶ ಗಳಲ್ಲಿ ಅತೀವ ಶ್ರದ್ಧೆ ವಹಿಸುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಸೂಚಿಸಿದೆ.
ಸಿರಪ್‌ನಲ್ಲಿ ‘ಡಿಇಜಿ’ ವಿಷ
- ಭಾರತದಲ್ಲಿ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್, ರೆಡ್‌ನೆಕ್ಸ್ ಮತ್ತು ಶೇಪ್ ಫಾರ್ಮಾ ತಯಾರಿಸಿದ ಕೆಮ್ಮಿನ ಸಿರಪ್‌ಗಳಲ್ಲಿ ಡಿ– ಎಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ವಿಷಕಾರಿ ಅಂಶ ಇದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ವಿಶ್ವ ಆರೋಗ್ಯ ಸಂಸ್ಥೆಗೆ ಅಕ್ಟೋಬರ್ 8ರಂದು ಸಲ್ಲಿಸಿದ ವರದಿಯಲ್ಲಿ ಹೇಳಿತ್ತು.
- ಡಬ್ಲ್ಯುಎಚ್‌ಒ ಕೂಡ ಇದನ್ನು ದೃಢಪಡಿಸಿತ್ತು. ಇದರ ಬೆನ್ನಲ್ಲೇ, ಈ ಸಿರಪ್‌ಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿತ್ತು. ಈ ಸಿರಪ್‌ಗಳನ್ನು ಭಾರತದಿಂದ ಬೇರೆಲ್ಲಿಗೂ ರಫ್ತು ಮಾಡುತ್ತಿಲ್ಲ ಎಂದು ಸಿಡಿಎಸ್‌ಸಿಒ ಹೇಳಿದೆ.
- ರಾಬ್ಸನ್: ಅಣುರಚನೆಯ ಚಂದಕ್ಕೆ ಸಂದ ನೊಬೆಲ್
ಸಂದರ್ಭ:2025ನೇ ಸಾಲಿನ ರಸಾಯನವಿಜ್ಞಾನದ ನೊಬೆಲ್ ಲಭಿಸಿದ್ದು ಸುಸುಮು ಕಿಟಾಗವಾ, ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿ ಅವರಿಗೆ; ಬೇರೆ ಬೇರೆ ಹಿನ್ನೆಲೆಯ ಈ ಮೂವರು ರಸಾಯನವಿಜ್ಞಾನಿಗಳನ್ನು ಒಂದೆಡೆ ಸೇರಿಸಿದ್ದು ಲೋಹ–ಸಾವಯವ ಚೌಕಟ್ಟುಗಳು!
- ‘ಲೋಹ-ಸಾವಯವ ಚೌಕಟ್ಟು’ಗಳು ಎಂಬ ಈ ಅಪರಿಮಿತ ಅನ್ವಯಿಕೆಗಳನ್ನುಳ್ಳ ರಚನೆ ತಯಾರಾಗಲು ನಾಂದಿ ಹಾಡಿದ್ದು ರಾಬ್ಸನ್. ಇಂಗ್ಲೆಂಡ್‌ನಲ್ಲಿ 1937ರ ಜೂನ್ 4ರಂದು ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲೇ ಮುಗಿಸಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರೆಸಿದರು; ಕ್ಯಾಲ್ ಟೆಕ್ ಮತ್ತು ಸ್ಟಾನ್ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಪೋಸ್ಟ್ ಡಾಕ್ಟರಲ್ ಸಂಶೋಧನೆಗಳನ್ನು ನಡೆಸಿ, ನಂತರ ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿ, ಅಲ್ಲಿಯೇ, ತಮ್ಮ ನಿವೃತ್ತಿಯವರೆಗೂ ಕಾರ್ಯನಿರ್ವಹಿಸಿದರು.
- ರಸಾಯನವಿಜ್ಞಾನದ ವಿದ್ಯಾರ್ಥಿಗಳಿಗೆ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ಗೊತ್ತೇ ಇರುತ್ತದೆ; ರಾಸಾಯನಿಕ ಸಂಯುಕ್ತ ಪದಾರ್ಥಗಳ 3-ಆಯಾಮದ ರಚನೆಯನ್ನು ಅರ್ಥೈಸಿಕೊಳ್ಳಲು ಪುಟಾಣಿ ಚೆಂಡುಗಳು ಮತ್ತು ಕಡ್ಡಿಗಳನ್ನು ಬಳಸಿ ಮಾದರಿಗಳನ್ನು ತಯಾರಿಸಬಹುದು. ರಾಸಾಯನಿಕ ಬಂಧವನ್ನು, ಅಣುವಿನ ಜೋಡಣೆಯನ್ನು ಸರಳವಾಗಿ ತಿಳಿದುಕೊಳ್ಳುವುದಕ್ಕೆ ಈ ಮಾದರಿ ಅತ್ಯಂತ ಸಹಾಯಕ. ಮೊದಲ ಬಾರಿಗೆ 1883ರಲ್ಲಿ ಆಗಸ್ಟ್ ಹಾಫ್ಮನ್ ಎಂಬ ಜರ್ಮನ್ ವಿಜ್ಞಾನಿ ಉಲನ್ ಉಂಡೆಗಳು ಮತ್ತು ಕ್ರೋಷಕಡ್ಡಿಗಳನ್ನು ಬಳಸಿ ಆಣ್ವಿಕ ರಚನೆಯನ್ನು ಸರಳವಾಗಿ ಎಲ್ಲರಿಗೂ ಅರ್ಥಮಾಡಿಸಲು ಮೊದಲ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ತಯಾರಿಸಿದರು. ಮುಂದಿನ ದಿನಗಳಲ್ಲಿ ಮರದಲ್ಲಿ ಕೆತ್ತಿ, ಕೊರೆದು ತಯಾರಿಸುತ್ತಿದ್ದರು.
- ರಿಚರ್ಡ್ ರಾಬ್ಸನ್ ಅವರು ತಮ್ಮ ರಸಾಯನವಿಜ್ಞಾನದ ಸಂಶೋಧಕರಿಗೊಂದು ಕಾರ್ಯಾಗಾರ ನಡೆಸುತ್ತಿದರು. ಅಲ್ಲಿ ಅವರೆಲ್ಲ ಮರದಲ್ಲಿ ಕೊರೆದು ತಯಾರಿಸುತ್ತಿದ್ದ ಗುಂಡುಗಳು ಮತ್ತು ಕಡ್ಡಿಗಳಿಗೆ ನಿರ್ದಿಷ್ಟವಾದ ರೂಪ, ಆಕಾರವಿರಬೇಕಾಗುತ್ತಿತ್ತು. ಆ ಗುಂಡುಗಳಲ್ಲಿ ಎಷ್ಟು ರಂಧ್ರಗಳಿರಬೇಕು ಎಂಬುದು ಅದು ಯಾವ ಅಣುವಿನ ಪ್ರತಿರೂಪ ಎಂಬುದರ ಮೇಲೆ ಆಧಾರಿತ. ಉದಾಹರಣೆಗೆ, ಅದು ಇಂಗಾಲವಾದರೆ ನಾಲ್ಕು ರಂಧ್ರ, ಆಮ್ಲಜನಕವಾದರೆ ಎರಡು ರಂಧ್ರ – ಹೀಗೆ! ಅಷ್ಟೇ ಅಲ್ಲದೆ, ಆ ರಂಧ್ರಗಳು ಯಾವ ಕೋನದಲ್ಲಿರಬೇಕು ಎಂಬುದು ಕೂಡ, ಆ ಪರಮಾಣುವು ಎಂತಹ ರಾಸಾಯನಿಕ ಬಂಧದಲ್ಲಿ ಪಾಲ್ಗೊಳ್ಳುತ್ತದೆ ಎಂಬುದರ ಮೇಲೆ ನಿರ್ಭರವಾಗುತ್ತದೆ. ಇಂತಹ ವಿವರಗಳನ್ನು ಗಮನಿಸುತ್ತಾ, ರಾಬ್ಸನ್ ಅವರಿಗೆ ಈ 3–ಡಿ ರಚನೆಗಳಲ್ಲಿರುವ ನಿಗಧಿತ ಅಂತರಗಳು ಗಮನ ಸೆಳೆದವು; ಒಂದಕ್ಕೊಂದು ಸೇರುತ್ತಾ ಈ ಲೋಹದ ಮತ್ತು ಇಂಗಾಲದ ಅಣುಗಳು ಉಂಟುಮಾಡುವ ಚೌಕಟ್ಟುಗಳಲ್ಲಿ, ನಿರ್ದಿಷ್ಟವಾಗಿಯೇ ಇರುವ ಕೋನ, ರಂಧ್ರ, ಜೋಡಣೆಯಂತಹ ವಿಷಯಗಳು ಅವರಲ್ಲಿ ಹೊಸ ಹೊಳಹನ್ನು ಹುಟ್ಟಿಸಿತ್ತು.
- ಸುಮಾರು ಹತ್ತು ವರ್ಷಗಳು ಅದೇ ಯೋಚನೆಯಲ್ಲಿದ್ದ ರಾಬ್ಸನ್ ಅವರು, ಪ್ರತಿ ವರ್ಷದ ಕಾರ್ಯಾಗಾರದಲ್ಲೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಇಂತಹ ಚೌಕಟ್ಟುಗಳಲ್ಲಿ ಹೇಗೆ ಅನಿಲಗಳನ್ನು ಸೆರೆಹಿಡಿಯಬಹುದು, ವೇಗವರ್ಧಕಗಳನ್ನು ಹಿಡಿದಿಡಬಹುದು ಎಂಬಂತಹ ಯೋಚನೆಗಳು ಯೋಜನೆಗಳಾಗಿ ಬದಲಾದವು. ತಾಮ್ರದ ಅಣುಗಳೊಂದಿಗೆ ಸಾವಯವ ಆಣ್ವಿಕ ಗುಂಪುಗಳಾದ ‘ನೈಟ್ರೈಲ್’ಗಳನ್ನು ಸೇರಿಸಿದಾಗ, 3–ಆಯಾಮದ ರಚನೆ ಹೇಗಿರುತ್ತದೆಂಬ ಸಿದ್ಧಾಂತವನ್ನು ರಾಬ್ಸನ್ ಸೃಜಿಸಿದರು.
- ಈ ಲೋಹ-ಸಾವಯವ ಉತ್ಪನ್ನದ ಭೌತಿಕ ರಚನೆಯ ಮಾದರಿಯನ್ನು ತಯಾರಿಸಿದಾಗ, ವಜ್ರವು ಇಂಗಾಲದ ಅಣುಗಳ ಜೋಡಣೆಯಿಂದ ಹೇಗೆ ರಚನೆಯಾಗಿರುತ್ತದೋ, ಅಂತಹದ್ದೇ ಸ್ಫಟಿಕದ ರೂಪ ತಯಾರಾಗುತ್ತದೆ ಎಂದು ಪ್ರತಿಪಾದಿಸಿದರು. ಆ ರಚನೆಯಲ್ಲಿ, ಅಣುಗಳು ಮತ್ತು ಬಂಧಗಳ ನಡುವೆ ಇರುವ ನಿರ್ದಿಷ್ಟ ರೂಪದ, ಆಕಾರದ, ಗಾತ್ರದ ಅಂತರಗಳಲ್ಲಿ ನಿರ್ದಿಷ್ಟ ಪರಮಾಣುಗಳನ್ನು, ಅಯಾನುಗಳನ್ನು, ಅಣುಗಳನ್ನು ಕೂರಿಸಬಹುದು ಎಂಬುದನ್ನು ವಿವರಿಸಿದರು. ಇದನ್ನು ಅವರು ಅನೇಕ ಕೋಣೆಗಳಿರುವ ಹೋಟೆಲ್ ಮಳಿಗೆಗೆ ಹೋಲಿಸಿದರು; ತಮಗೆ ಹೊಂದುವ ಕೋಣೆಗೆ ಸೂಕ್ತ ಅತಿಥಿ ಬಂದು ಹೋಗುವ ಹಾಗೆ, ವಿವಿಧ ಅಣುಗಳಿಗೆ ತಕ್ಕ ಹಾಗೆ ಚೌಕಟ್ಟಿನೊಳಗಿನ ಅಂತರಗಳನ್ನು ರಚಿಸಬಹುದು ಎಂಬುದನ್ನು ರಾಬ್ಸನ್ ಅವರ ಮಾದರಿಯು ವಿವರಿಸಿತು.
- ಈ ಮೂಲಭೂತ ಕಲ್ಪನೆಯ ಮೇಲೆ ಮತ್ತಿಬ್ಬರು ರಸಾಯನ ವಿಜ್ಞಾನಿಗಳಾದ ಸುಸುಮು ಕಿಟಾಗವಾ ಮತ್ತು ಓಮರ್ ಯಾಘಿ ತಮ್ಮ ಪರಿಶ್ರಮ ಮತ್ತು ಪರಿಣಿತಿಯನ್ನು ಧಾರೆಯೆರೆದು, ರಾಬ್ಸನ್ ಅವರೊಂದಿಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
- ರಾಬ್ಸನ್ ಅವರು ನೊಬೆಲ್ ಪಡೆದ ಸುದ್ದಿ ತಿಳಿದ ನಂತರ, ಫೋನಿನಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಹಂಚಿಕೊಳ್ಳುತ್ತಾ, ‘ತಾನೇನೂ ವಿಶೇಷವಾಗಿ ಮಾಡಿಲ್ಲ; ಯಾವುದೋ ಅಣುಗಳನ್ನು ಮಿಕ್ಸ್ ಮಾಡಿ, ಏನೋ ಒಂದನ್ನು ತಯಾರಿಸಿದೆ ಅಷ್ಟೇ’ ಎಂದು ವಿನಮ್ರರಾಗಿ ಹೇಳಿ ನಗೆಯಾಡಿದರು. ‘ಆದರೆ, ಎಲ್ಲಾ ಜವಾಬ್ದಾರಿಗಳನ್ನೂ ಮರೆತು ವಿಜ್ಞಾನದ ಬಗ್ಗೆ, ಸಂಶೋಧನೆಯ ಬಗ್ಗೆ ಒಂದು ಬಗೆಯ ಗೀಳಿದ್ದರೆ ಮಾತ್ರ ಇಂತಹದ್ದೇನಾದರೂ ಸಾಧ್ಯವಾಗುತ್ತದೆಯಷ್ಟೇ! ಹತ್ತು ವರ್ಷಗಳಿಂದಲೂ ಗುಂಗು ಹಿಡಿಸಿದ್ದ ಆಣ್ವಿಕ ರಚನೆಯ ನಡುವಿನ ಅಂತರಗಳು, ಹೀಗೆ ಮುಂದೆ ಅನೇಕ ಅದ್ಭುತ ಬೆಳವಣಿಗೆಗಳಿಗೆ ಕಾರಣವಾಗುತ್ತದೆ ಎಂಬ ಅಚಲ ನಂಬಿಕೆಯಿತ್ತು’ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡರು. ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಮತ್ತು ಅಪರಿಮಿತ ಶ್ರದ್ಧೆ, ಅನನ್ಯ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
- ಎ.ಐ. ನೀರಾವರಿ
ಸಂದರ್ಭ: ಇದು ಎ.ಐ. ಜಮಾನಾ. ಇದೀಗ ಕೃಷಿಕ್ಷೇತ್ರದಲ್ಲೂ ಎ.ಐ. ಬಳಕೆ ಶುರುವಾಗಿದ್ದು, ಇದೊಂದು ಕ್ರಾಂತಿಕಾರಕ ಹೆಜ್ಜೆ ಎನ್ನಬಹುದು.
- ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಎ.ಐ. ಆಧಾರಿತ ನೀರಾವರಿ ಹಾಗೂ ಗೊಬ್ಬರ ಯಾಂತ್ರಿಕೃತ ವ್ಯವಸ್ಥೆ’ ತಂತ್ರಜ್ಞಾನ ಈಗ ಕೃಷಿಕ್ಷೇತ್ರವನ್ನು ಮತ್ತಷ್ಟು ಸ್ಮಾರ್ಟ್ ಆಗಿಸುತ್ತಿದೆ.
- ರೈತರು ತಮ್ಮ ಜಮೀನಿನಲ್ಲಿ ಈ ತಂತ್ರಜ್ಞಾನ ಅಳವಡಿಸಿದರೆ ತಮ್ಮ ಬೆಳೆಗಳಿಗೆ ಎಷ್ಟು ನೀರು ಕೊಡಬೇಕು, ಯಾವ ಬೆಳೆಗೆ ಎಷ್ಟು ಗೊಬ್ಬರ ನೀಡಬೇಕು, ಹವಾಮಾನ ಹೇಗಿದೆ, ಮಣ್ಣಿನ ತೇವಾಂಶ ಹೇಗಿದೆ, – ಎಂಬಿತ್ಯಾದಿ ಮಾಹಿತಿಗಳನ್ನು ‘ಡಿಕಾನ್‌ಎಜ್’ ಮೊಬೈಲ್ ಆ‍್ಯಪ್ ಮೂಲಕ ರೈತರಿಗೆ ತಲುಪುತ್ತದೆ.
- ಕೃಷಿಭೂಮಿಗೆ ನೀರುಣಿಸಲು ಬಳಸುವ ಪಂಪ್‌ಸೆಟ್‌ಗಳಿಗೆ ರೈತರು ವಿದ್ಯುತ್‌ಚ್ಛಕ್ತಿಯ ಮೊರೆ ಹೋಗುವುದು ಸಾಮಾನ್ಯ. ಆದರೆ, ಲೋಡ್‌ಶೆಡ್ಡಿಂಗ್, ಸಿಂಗಲ್ ಫೇಸ್‌ನಂತಹ ಹಲವಾರು ಕಾರಣಗಳಿಂದ ಯಾವಾಗ ವಿದ್ಯುತ್ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದು ರೈತರಿಗೆ ಗೊತ್ತೇ ಆಗುವುದಿಲ್ಲ. ವೊಲ್ಟೇಜ್ ಹೆಚ್ಚು ಕಡಿಮೆಯಿಂದ ಮೋಟಾರ್ ಪಂಪ್‌ಸೆಟ್‌ಗಳು ಸುಟ್ಟುಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಸುಟ್ಟ ಪಂಪ್‌ಸೆಟ್‌ಗಳನ್ನು ಸರಿಪಡಿಸಿ, ಮತ್ತೆ ಅವನ್ನು ಅಳವಡಿಸಲು ರೈತರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ; ಜೊತೆಗೆ ಸಾಕಷ್ಟು ಹಣವನ್ನೂ ವ್ಯಯಿಸಬೇಕಾಗುತ್ತದೆ. ಇದರಿಂದ ತೋಟ, ಗದ್ದೆಗಳ ಕೆಲಸಗಳಿಗೂ ಸಮಸ್ಯೆ ಉಂಟಾಗುತ್ತದೆ. ಆದರೆ, ಎ.ಐ. ಆಧಾರಿತ ತಂತ್ರಜ್ಞಾನ ಇದಕ್ಕೆಲ್ಲ ಪರಿಹಾರ ಎನಿಸಿದೆ.
- ರೈತರು ತಮ್ಮ ಮನೆಯಲ್ಲಿಯೇ ಕುಳಿತು ಅಥವಾ ಯಾವುದೇ ಸ್ಥಳದಿಂದಲಾದರೂ ತಮ್ಮ ತೋಟ ಅಥವಾ ಹೊಲಗಳಿಗೆ ವಿದ್ಯುತ್ ಚಾಲಿತ ಪಂಪ್‌ಸೆಟ್ ಮೋಟಾರನ್ನು ಮೊಬೈಲ್ ಮೂಲಕ ನಿಯಂತ್ರಿಸಬಹುದು. ಕರೆಂಟ್ ಯಾವಾಗ ಬರುತ್ತೆ, ಯಾವಾಗ ಹೋಗುತ್ತದೆ ಎಂಬುದನ್ನು ತಿಳಿಯಬಹುದು. ಇದರಿಂದ ರಾತ್ರಿ ಹೊತ್ತು ಬೆಳೆಗಳಿಗೆ ನೀರುಣಿಸಲು ಜಮೀನಿಗೆ ಹೋಗುವುದು ತಪ್ಪುತ್ತದೆ.
- ಎಲ್ಲ ರೀತಿಯ ಅಳತೆಯ ತೋಟ ಮತ್ತು ಗದ್ದೆಗಳಿಗೆ ಉಪಯುಕ್ತವಾಗಿದ್ದು, ಒಂದು ಮೊಬೈಲ್ ಸಿಮ್ ಕಾರ್ಡ್‌ನಿಂದ ಹಲವು ತೋಟಗಳನ್ನು ನಿಯಂತ್ರಿಸಬಹುದು. ಸೋಲಾರ್ ಆಧಾರಿತ ಕಾರ್ಯನಿರ್ವಹಣೆ ಸೌರಫಲಕದೊಂದಿಗೆ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಅಷ್ಟೇ ಅಲ್ಲದೆ ಸದೃಢ ಬ್ಯಾಟರಿ ನೆರವು, ಮೋಡ ಕವಿದ ವಾತಾವರಣದಲ್ಲೂ 24 ಗಂಟೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಾರ್ಯವಿಧಾನ ಹೇಗೆ ?
- ಮೋಟಾರ್ ಪಂಪ್‌ಸೆಟ್ ಸ್ಟಾರ್ಟರ್ ಬೋರ್ಡ್‌ನಲ್ಲಿ ‘ಡಿಒಲ್ ಸ್ಟಾರ್ಟರ್’ (ಮೇನ್ ಕಂಟ್ರೊಲರ್) ಇರುತ್ತದೆ. ಇದನ್ನು ಕಂಟ್ರೋಲ್ ಮಾಡಲು ಎಂಸಿಯು (ಮೋಟಾರ್ ಕಂಟ್ರೋಲ್ ಯುನಿಟ್) ಹಾಗೂ ಎಂಎಸ್‌ಯು (ಮೋಟಾರ್ ಸ್ಟಾರ್ಟರ್ ಯೂನಿಟ್) ಬರುತ್ತದೆ. ಇವೆರಡು ಡಿವೈಸ್‌ಗಳನ್ನು ವೈಯರ್‌ಲೆಸ್ ಮೂಲಕ ಮೇನ್ ಮಾಸ್ಟರ್ ಕಂಟ್ರೋಲರ್ ಡಿಕ್ಯಾನ್ ಏಜ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ.
- ಮೇನ್ ಕಂಟ್ರೋಲ್ ಬೋರ್ಡ್‌ನಲ್ಲಿ ಆಟೋ ಬ್ಯಾಕ್‌ವರ್ಡ್ (ಎಬಿಡಬ್ಲು) ಎನ್ನುವ ಡಿವೈಸ್ ಕೂಡ ಇರುತ್ತದೆ. ಇದು ನೀರಿನ ಹಾಗೂ ಗೊಬ್ಬರದ ಫಿಲ್ಡರ್ ಕ್ಲೀನ್ ಮಾಡಲು ಸಹಾಯ ಮಾಡುತ್ತದೆ. ವಾಟರ್ ಲೆವೆಲ್ ಕಂಟ್ರೊಲ್ ಯುನಿಟ್ ಅಳವಡಿಸಲಾಗುತ್ತದೆ.
- ಹವಾಮಾನ ಮಾಹಿತಿ ಯುನಿಟ್ ರೈತರಿಗೆ ತಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶದ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಎಲ್ಲಾ ಡಿವೈಸ್‌ಗಳು ಸೌರ ವಿದ್ಯುತ್ತನ್ನು ಬಳಸುವುದರಿಂದ ದಿನದ 24 ಗಂಟೆಯೂ ವಿದ್ಯುತ್ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತವೆ.
- ಈ ಎಲ್ಲಾ ಡಿವೈಸ್‌ಗಳು ಕಾರ್ಯನಿರ್ವಹಿಸಲು ಕೇವಲ ಒಂದು ಸಿಮ್ ಕಾರ್ಡ್ ಮಾತ್ರ ಸಾಕು. ಈ ಸಿಮ್ ಕಾರ್ಡ್ ಅಳವಡಿಸಿದರೆ ಸಾಕು, ರೈತರಿಗೆ ಪ್ರತಿ ದಿನ ತಮ್ಮ ಬೆಳೆಗಳು, ಅದಕ್ಕೆ ಬೇಕಾಗುವ ನೀರು, ಗೊಬ್ಬರದ ಮಾಹಿತಿಗಳು ಅವರನ್ನು ತಲುಪುತ್ತದೆ. ಮೊಬಿಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.
- ಗಾಜಾದಲ್ಲಿ ಹೊಸ ಬೆಳಕು?
ಒಂದು ಕಡೆ ಕಣ್ಣೀರು. ಮತ್ತೊಂದು ಕಡೆ ಹರ್ಷೋದ್ಗಾರ. ಕೆಲವರಂತೂ ಮಾತೇ ಹೊರಡದೇ ಗದ್ಗದಿತ ರಾಗಿದ್ದರು. ಇನ್ನೆಂದಿಗೂ ಮುಖ ಕಾಣಲು ಸಾಧ್ಯವಿಲ್ಲ ಎಂದು ಕೊಂಡಿದ್ದಂಥವರು, ಜೀವಂತ ಇರಲಾರರು ಎಂದುಕೊಂಡಿದ್ದ ಪ್ರೀತಿಪಾತ್ರರು ಎದುರಿಗೆ ಬಂದು ನಿಂತ ಗಳಿಗೆ ಅದು. ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ, ಅದು ಸಾಧ್ಯವಾಗಿದ್ದ ಕ್ಷಣ…
ಎರಡು ವರ್ಷಗಳ ಯುದ್ಧದಿಂದ ಜರ್ಜರಿತವಾಗಿರುವ ಗಾಜಾ ಪಟ್ಟಿಯಲ್ಲಿ ಈಗ ಮನ ಕಲುಕುವ ದೃಶ್ಯಗಳು ಕಾಣುತ್ತಿವೆ. ಅಮೆರಿಕ ಮತ್ತು ಇತರ ದೇಶಗಳ ಪ್ರಯತ್ನದಿಂದ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಒಪ್ಪಂದಕ್ಕೆ ಅಮೆರಿಕದೊಂದಿಗೆ ಈಜಿಪ್ಟ್, ಕತಾರ್, ಟರ್ಕಿ ದೇಶಗಳೂ ಸಾಕ್ಷಿದಾರರಾಗಿ ಸಹಿ ಹಾಕಿವೆ. ಸೋಮವಾರ, ಹಮಾಸ್ ತನ್ನ ವಶದಲ್ಲಿದ್ದ 20 ಇಸ್ರೇಲಿಗರನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 2,000 ಕೈದಿಗಳು ಮತ್ತು ತಾನು ವಶಕ್ಕೆ ಪಡೆದಿದ್ದ ಪ್ಯಾಲೆಸ್ಟೀನ್‌ನ 1,700 ಮಂದಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ತಾನು ಅರ್ಹ ವ್ಯಕ್ತಿ ಎಂದು ಸ್ವಯಂ ಪ್ರತಿಪಾದಿಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶಾಂತಿ ಒಪ್ಪಂದದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಗಮನಾರ್ಹ. ಆದರೆ, ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆ, ಮರು ನಿರ್ಮಾಣ ಸುಲಭದ ಕೆಲಸವಲ್ಲ. ಅದು ಬಹು ದೊಡ್ಡ ಸವಾಲು. ಅಂತರರಾಷ್ಟ್ರೀಯ ಸಮುದಾಯದ ಆಶಯದಂತೆ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ನೆಲಸುವಂತೆ ಮಾಡಲು ಅವರು ಇದುವರೆಗೆ ವಹಿಸಿದ ಪಾತ್ರಕ್ಕಿಂತಲೂ ಹೆಚ್ಚಿನ ಶ್ರಮವನ್ನು ಮುಂದಿನ ದಿನಗಳಲ್ಲಿ ಹಾಕಬೇಕಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.
ಯಾಕೆಂದರೆ, ಈ ಹಿಂದೆಯೂ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಘೋಷಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಇಸ್ರೇಲ್ ಇದಕ್ಕೆ ಪೂರಕವಾಗಿ ನಡೆದುಕೊಂಡಿರಲಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕೆಲವು ನಿರ್ಧಾರಗಳು ಶಾಂತಿ ಪ್ರಕ್ರಿಯೆಗೆ ತಡೆ ಒಡ್ಡಿದ ನಿದರ್ಶನಗಳುಂಟು.
ಮಾತು ಬದಲಿಸುವರೇ ನೆತನ್ಯಾಹು?: ನೆತನ್ಯಾಹು ಅವರೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜೋ ಬೈಡನ್ ಅವರಿಗೂ ಇದರ ಅನುಭವ ಆಗಿದೆ. ಅಮೆರಿಕದ ಸಲಹೆಯನ್ನೂ ಮೀರಿ ಹಲವು ಬಾರಿ ಗಾಜಾ ಪಟ್ಟಿಯ ಮೇಲೆ ಸೇನಾ ದಾಳಿ ನಡೆಸುವ ಮೂಲಕ ಟ್ರಂಪ್ ಅವರ ಆಡಳಿತಕ್ಕೂ ನೆತನ್ಯಾಹು ಹಲವು ಸಂದರ್ಭಗಳಲ್ಲಿ ತಲೆನೋವು ತಂದಿದ್ದರು.
ಆದರೆ, ಈ ಬಾರಿ ಟ್ರಂಪ್ ಬಿಗಿ ಪಟ್ಟು ಹಿಡಿದು ನೆತನ್ಯಾಹು ಅವರನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ. ತಮ್ಮ ಮಿತ್ರ ಪಕ್ಷಗಳ ವಿರೋಧದ ನಡುವೆಯೂ ನೆತನ್ಯಾಹು ಅವರು ಒಲ್ಲದ ಮನಸ್ಸಿನಿಂದಲೇ ಕದನವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿಯಲ್ಲಿ ಇತ್ತ, ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಅನ್ನು ಒಪ್ಪಿಸುವಂತೆ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮುಖಂಡರ ಮೇಲೆ ಟ್ರಂಪ್ ಒತ್ತಡ ಹಾಕಿದ್ದರು. ಟ್ರಂಪ್ ಅವರ ಪ್ರಯತ್ನ ಫಲಿಸಿ, ಒಪ್ಪಂದ ಏರ್ಪಟ್ಟಿದೆ. ಆದರೆ, ಮುಂದಿನ ದಾರಿ ಇಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.
ಟ್ರಂಪ್ ಉಸ್ತುವಾರಿಯಲ್ಲಿ ರೂಪು ತಳೆದಿರುವ ಒಪ್ಪಂದದ 20 ಅಂಶಗಳಲ್ಲಿ ಕೆಲವು ವಿಚಾರಗಳ ಬಗ್ಗೆ ಹಮಾಸ್ ಮತ್ತು ಇಸ್ರೇಲ್ ಭಿನ್ನಮತ ವ್ಯಕ್ತಪಡಿಸಿವೆ. ಜತೆಗೆ, ಇಸ್ರೇಲ್‌ನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ತಮ್ಮ ಬಲಪಂಥೀಯ ಮಿತ್ರರನ್ನು ಉಳಿಸಿಕೊಳ್ಳಲು, ವಿರೋಧಿಗಳನ್ನು ಅಧಿಕಾರದಿಂದ ದೂರವಿಡಲು ನೆತನ್ಯಾಹು ಕದನ ವಿರಾಮ ಕುರಿತ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಟ್ರಂಪ್ ರೂಪಿಸಿರುವ ಶಾಂತಿ ಸೂತ್ರದ ಸಾಮರ್ಥ್ಯವೇ ಅದರ ದೌರ್ಬಲ್ಯವೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದದಲ್ಲಿ ಅನೇಕ ಅಂಶಗಳನ್ನು ವಿವರವಾಗಿ ನಮೂದಿಸಿಲ್ಲ. ವಾಸ್ತವವಾಗಿ, ಅದರಲ್ಲಿನ ಅಸ್ಪಷ್ಟತೆಯೇ ಎರಡೂ ಗುಂಪುಗಳು ಕದನ ವಿರಾಮಕ್ಕೆ ಸಮ್ಮತಿಸಲು ಕಾರಣವಾಗಿದೆ. ಟ್ರಂಪ್ ಒಪ್ಪಂದದ ಬಗ್ಗೆ ಅತ್ಯುತ್ಸಾಹ ತೋರುತ್ತಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಿದೆ ಎಂದೂ, ಇದು ಚಾರಿತ್ರಿಕ ಎಂದೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಶಾಂತಿ ಮಾತುಕತೆಯ ಮುಖ್ಯ ಭಾಗ ಈಗಷ್ಟೇ ಆರಂಭವಾಗಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗಾಜಾ ಜನರ ಶಾಂತಿಯ ಕನಸು ನನಸಾಗುವುದೇ ಇಲ್ಲಾ, ಕನಸಾಗಿಯೇ ಉಳಿಯುವುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಆಧಾರ: ರಾಯಿಟರ್ಸ್, ಬಿಬಿಸಿ, ಟೈಮ್ ಮ್ಯಾಗಜಿನ್, ಸಂಘರ್ಷದ ಕುರಿತ ಬ್ರೌನ್ ವಿವಿ ವರದಿ
ಮರುನಿರ್ಮಾಣದ ಸವಾಲು
ಗಾಜಾವನ್ನು ಮರುನಿರ್ಮಿಸುವುದು ಒಂದು ಸವಾಲಾಗಿದೆ. ಸಂಘರ್ಷದಿಂದ ಗಾಜಾ ಪಟ್ಟಿಯಲ್ಲಿ ಶೇ 10ರಷ್ಟು ಮಂದಿ ಸತ್ತಿದ್ದರೆ, ಶೇ 90ರಷ್ಟು ಮಂದಿ ನಿರ್ವಸಿತರಾಗಿದ್ದಾರೆ. ಈ ಪ್ರದೇಶದ ಶೇ 80ರಷ್ಟು ಕಟ್ಟಡಗಳು ಹಾನಿಗೊಳಗಾಗಿವೆ. ಶೇ 95ರಷ್ಟು ಆಸ್ಪತ್ರೆಗಳು, ಶೇ 90ರಷ್ಟು ಶಾಲೆಗಳು ಹಾನಿಗೊಳಗಾಗಿವೆ. ಗಾಜಾ ನಗರದಲ್ಲಿ ಹಾನಿಯ ಪ್ರಮಾಣ ಶೇ 92ರಷ್ಟು ಎನ್ನಲಾಗಿದೆ. ವಿಶ್ವಸಂಸ್ಥೆ ಯು ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.
ಈ ಪ್ರದೇಶದಲ್ಲಿ ಕನಿಷ್ಠ 5.5 ಕೋಟಿ ಟನ್‌ಗಳಷ್ಟು ಅವಶೇಷಗಳನ್ನು ತೆರವುಗೊಳಿಸಬೇಕಿದೆ. ಅವಶೇಷಗಳಡಿ ಶವಗಳು ಸಿಗುತ್ತಿದ್ದು, ಅವುಗಳನ್ನು ಪತ್ತೆ ಹಚ್ಚುವುದು, ಸಂಬಂಧಪಟ್ಟವರನ್ನು ಹುಡುಕಿ ಹಸ್ತಾಂತರಿಸುವುದು ಪ್ರಯಾಸದ ಕೆಲಸವಾಗಿದೆ. ಗಾಜಾ ವನ್ನು ವಾಸಯೋಗ್ಯ ಪ್ರದೇಶವನ್ನಾಗಿ ರೂಪಿಸಲು 7,000 ಕೋಟಿ ಡಾಲರ್ (₹6.21 ಲಕ್ಷ ಕೋಟಿ) ಅಗತ್ಯವಿದೆ ಎಂದು ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ವಿಶ್ವಬ್ಯಾಂಕ್ ಅಂದಾಜಿಸಿವೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಡುತ್ತಿದ್ದಂತೆಯೇ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಅಮೆರಿಕವನ್ನು ಬಿಟ್ಟು ಇತರೆ ಪಶ್ಚಿಮದ ರಾಷ್ಟ್ರಗಳು ಕೂಡ ಪ್ಯಾಲೆಸ್ಟೀನ್ ಅನ್ನು ರಾಷ್ಟ್ರವಾಗಿ ಘೋಷಿಸುವುದಕ್ಕೆ ಬೆಂಬಲ ಸೂಚಿಸಿವೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 157 ದೇಶಗಳು ಪ್ಯಾಲೆಸ್ಟೀನ್ ಅನ್ನು ‘ಸಾರ್ವಭೌಮ ರಾಷ್ಟ್ರ’ ಎಂದು ಪರಿಗಣಿಸಿವೆ. ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್ ದಶಕಗಳಿಂದ ಯತ್ನಿಸುತ್ತಿದೆಯಾದರೂ, ಅಮೆರಿಕ ಈ ನಿರ್ಣಯವನ್ನು ವಿರೋಧಿಸುತ್ತಿರುವುದರಿಂದ ಪ್ಯಾಲೆಸ್ಟೀನ್ ಈಗಲೂ ವಿಶ್ವಸಂಸ್ಥೆಯಲ್ಲಿ ಸದಸ್ಯಯೇತರ ವೀಕ್ಷಕ ರಾಷ್ಟ್ರವಾಗಿಯೇ ಇದೆ.
ಈಗ ಇಸ್ರೇಲ್ ಮತ್ತು ಹಮಾಸ್ ನಡುವೆ ಏರ್ಪಟ್ಟಿರುವ 20 ಅಂಶಗಳ ಕದನವಿರಾಮ ಒಪ್ಪಂದದಲ್ಲಿ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಆದರೆ, 19ನೇ ಅಂಶದಲ್ಲಿ ಇದರ ಬಗ್ಗೆ ಪ್ರಸ್ತಾಪವಿದೆ.
ಗಾಜಾದ ಮರು ಅಭಿವೃದ್ಧಿ ಮತ್ತು ಪ್ಯಾಲೆಸ್ಟೀನ್ ಪ್ರಾಧಿಕಾರದ (ಪಿಎ) ಸುಧಾರಣಾ ಕಾರ್ಯಕ್ರಮಗಳು ಯೋಜಿಸಿದಂತೆಯೇ ಪೂರ್ಣವಾದಾಗ, ಜನರ ಬಯಕೆಯಂತೆ ಪ್ಯಾಲೆಸ್ಟೀನಿಯನ್ನರ ದೃಢ ಸಂಕಲ್ಪ ಮತ್ತು ರಾಷ್ಟ್ರದ ಸ್ಥಾನಮಾನ ಹೊಂದುವ ವಿಶ್ವಾಸಾರ್ಹ ಸನ್ನಿವೇಶಗಳು ನಿರ್ಮಾಣವಾಗಲಿವೆ ಎಂದು ಒಪ್ಪಂದದ 19ನೇ ಅಂಶ ಹೇಳುತ್ತದೆ.
ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗಾಗಿ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕಾಗಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವೆ ಮಾತುಕತೆ ನಡೆಯುವಂತೆ ಅಮೆರಿಕ ನೋಡಿಕೊಳ್ಳಲಿದೆ ಎಂದು ಒಪ್ಪಂದದ 20ನೇ ಅಂಶದಲ್ಲಿ ಹೇಳಲಾಗಿದೆ.
ಇಸ್ರೇಲ್ ವಿರೋಧ: ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವುದಕ್ಕೆ ಇಸ್ರೇಲ್ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಪೂರ್ವ ಜೆರುಸಲೇಂ, ವೆಸ್ಟ್‌ಬ್ಯಾಂಕ್ ಮತ್ತು ಗಾಜಾ ತನಗೆ ಸೇರಿದ್ದು ಎಂಬುದು ಪ್ಯಾಲೆಸ್ಟೀನ್‌ನ ವಾದ. ಆದರೆ, ಇದನ್ನು ಇಸ್ರೇಲ್ ಒಪ್ಪುತ್ತಿಲ್ಲ. ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಹಿಂದೆ ಪ್ರಧಾನಿಯಾಗಿದ್ದಾಗಲೂ ಪ್ಯಾಲೆಸ್ಟೀನ್ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಮಧ್ಯಂತರ ಸರ್ಕಾರ
2007ರಿಂದ ಗಾಜಾವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಹಮಾಸ್ ಬಂಡುಕೋರ ಸಂಘಟನೆಯು ಶಾಂತಿ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರೂ, ಗಾಜಾದ ನಿಯಂತ್ರಣವನ್ನು ಬಿಟ್ಟುಕೊಡಲು ಅದಕ್ಕೆ ಮನಸ್ಸಿಲ್ಲ ಎಂದು ಹೇಳಲಾಗುತ್ತಿದೆ.
ಗಾಜಾ ಪಟ್ಟಿಯನ್ನು ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡಲಾಗುವುದು; ಅದು ನೆರೆ ರಾಷ್ಟ್ರಗಳಿಗೆ ಇನ್ನು ಮುಂದೆ ಬೆದರಿಕೆ ಒಡ್ಡದು ಎಂಬುದು 20 ಅಂಶಗಳ ಒಪ್ಪಂದದ ಮೊದಲ ಅಂಶ. ಬಂಡುಕೋರರು ಶಸ್ತ್ರ ತ್ಯಜಿಸಬೇಕು. ಅಂತಹವರಿಗೆ ಕ್ಷಮಾದಾನ ನೀಡಲಾಗುವುದು ಎಂದೂ ಒಪ್ಪಂದದಲ್ಲಿ ಹೇಳಲಾಗಿದೆ.
ಗಾಜಾದಲ್ಲಿ ತಾತ್ಕಾಲಿಕವಾಗಿ ಮಧ್ಯಂತರ ಸರ್ಕಾರ ರಚನೆಯಾಗಲಿದ್ದು, ರಾಜಕೀಯಯೇತರ ವ್ಯಕ್ತಿಗಳಿಂದ ಕೂಡಿದ ಪ್ಯಾಲೆಸ್ಟೀನ್ ಸಮಿತಿಯು ಗಾಜಾಪಟ್ಟಿ ಆಡಳಿತ ನಿರ್ವಹಿಸಲಿದೆ. ಪ್ಯಾಲೆಸ್ಟೀನ್ ಮತ್ತು ಅಂತರರಾಷ್ಟ್ರೀಯ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯ ‘ಶಾಂತಿ ಸ್ಥಾಪನಾ ಮಂಡಳಿ’ಯು ಮಧ್ಯಂತರ ಸರ್ಕಾರದ ಮೇಲ್ವಿಚಾರಣೆ ಮಾಡಲಿದೆ ಎಂದು ಒಪ್ಪಂದ ಹೇಳಿದೆ.
- ಕಾಡಾನೆ ಸಂಖ್ಯೆಯಲ್ಲಿ ಶೇ18ರಷ್ಟು ಇಳಿಕೆ
ಸಂದರ್ಭ: ದೇಶದಲ್ಲಿ ಕಾಡಾನೆಗಳ ಸಂಖ್ಯೆ ಪ್ರಸ್ತುತ 22,446 ಇದ್ದು, ಇವುಗಳ ಸಂಖ್ಯೆಯಲ್ಲಿ ಶೇಕಡ 18ರಷ್ಟು ಇಳಿಕೆ ಕಂಡುಬಂದಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ನಡೆಸಿದ ಡಿಎನ್‌ಎ ಆಧಾರಿತ ಗಣತಿಯಿಂದ ಈ ಅಂಶ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ, ‘ಅಖಿಲ ಭಾರತ ಸಮಕಾಲಿಕ ಆನೆ ಗಣತಿ’ (ಎಸ್‌ಎಐಇಇ)–2025ರ ವರದಿಯಲ್ಲಿ ಈ ಮಾಹಿತಿ ಇದೆ. 2021ರಲ್ಲಿ ಈ ಗಣತಿ ನಡೆದಿತ್ತು.
- 2017ರಲ್ಲಿ ಕಾಡಾನೆಗಳ ಸಂಖ್ಯೆ 27,312 ಇತ್ತು. ಸದ್ಯ, ದೇಶದಲ್ಲಿ ಕಾಡಾನೆಗಳ ಸಂಖ್ಯೆ ಸರಾಸರಿ 22,446 ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
- ‘ಪ್ರತಿ ಸಲ ವಾಡಿಕೆಯಂತೆ ನಡೆಯುವ ಗಣತಿ ಹಾಗೂ ಡಿಎನ್‌ಎ ಆಧಾರಿತ ಗಣತಿಗೆ ಬಳಸುವ ವಿಧಾನಗಳು ಬೇರೆ. ಹೀಗಾಗಿ ಈ ಎರಡೂ ವಿಧಾನಗಳನ್ನು ಹೋಲಿಕೆ ಮಾಡಬಾರದು’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.