- ನವಲಗುಂದ ಧುರಿ; ತಯಾರಕರ ಕೊರತೆ
ಸಂದರ್ಭ: ಶತಮಾನಗಳ ಇತಿಹಾಸವುಳ್ಳ ಮತ್ತು ಭೌಗೋಳಿಕ ಮಾನ್ಯತೆ (ಜಿಐ) ಪಡೆದಿರುವ ಧಾರವಾಡ ಜಿಲ್ಲೆ ನವಲಗುಂದದ ಧುರಿಗಳ (ಜಮಖಾನ) ತಯಾರಿಕೆಗೆ ತಯಾರಕರ ಕೊರತೆ ಕಾಡುತ್ತಿದೆ.
- ನವಲಗುಂದದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ (ಕಾವೇರಿ ಎಂಪೋರಿಯಂ) ಘಟಕದಲ್ಲಷ್ಟೇ ಸದ್ಯ ಜಮಖಾನಗಳ ಉತ್ಪಾದನೆ ಆಗುತ್ತಿದೆ. ಇವುಗಳ ತಯಾರಿಕೆ ಮಾಡುವವರ ಸಂಖ್ಯೆ 17ಕ್ಕೆ ಇಳಿದಿದೆ.
- ‘ಪಾರಂಪರಿಕ ನೇಯ್ಗೆ ಕಲೆಯನ್ನು ಮಕ್ತುಲ್ ಸಾಬ್ ಜಮಖಾನ್ದಾರ್ ಅವರು ನಮಗೆ ಕಲಿಸಿದರು. ನಾನು ತರಬೇತಿ ಪಡೆದಾಗ 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ತಯಾರಿಸುತ್ತಿದ್ದರು. ಕ್ರಮೇಣ ಅವರ ಸಂಖ್ಯೆ ಕುಸಿಯುತೊಡಗಿತು’ ಎಂದ ನವಲಗುಂದ ನೇಕಾರರ ಸಂಘದ ಅಧ್ಯಕ್ಷೆ.
- ‘ಜಮಖಾನ ತಯಾರಿಸುವವರಿಗೆ ಸರ್ಕಾರದಿಂದ ವಿಶೇಷ ನೆರವು ಇಲ್ಲ. ಜಮಖಾನ ಮಾರಾಟದಿಂದ ತಿಂಗಳಿಗೆ ₹2 ಲಕ್ಷದವರೆಗೆ ಆದಾಯಗಳಿಸುವ ಸಾಧ್ಯತೆ ಇದ್ದರೂ, ತಯಾರಕರ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಒಂದೊಂದು ಜಮಖಾನ ದರ ₹ 1 ಸಾವಿರದಿಂದ ₹ 10 ಸಾವಿರದವರೆಗೆ ಇರುತ್ತದೆ. ಸದ್ಯ ತಿಂಗಳಿಗೆ 100 ರಿಂದ 200 ಜಮಖಾನ ತಯಾರಿಸಲಾಗುತ್ತಿದೆ’.
‘ಪರಂಪರೆಯೂ ಕಾರಣ’
- ‘ಜಮಖಾನ ತಯಾರಿಕೆ, ಮಾರಾಟದ ಹೊಣೆಯನ್ನು ಸರ್ಕಾರ ವಹಿಸಿಕೊಂಡಿದೆ. ಹೊಸದಾಗಿ ತರಬೇತಿ ಪಡೆದವರು ಆ ಕೆಲಸ ಮುಂದುವರಿಸುವುದಿಲ್ಲ. ಮುಖ್ಯವಾಗಿ ಕೌಶಲ ಗೊತ್ತಿರುವವರು ಮನೆಯ ಹೆಣ್ಣುಮಕ್ಕಳಿಗೆ ಕಲಿಸುವುದಿಲ್ಲ. ಹೊಸ ಪೀಳಿಗೆಗೆ ಈ ಬಗ್ಗೆ ಆಸಕ್ತಿ ಇಲ್ಲ. ತಯಾರಕರ ಸಂಖ್ಯೆ ಕುಸಿಯಲು ಇದೂ ಕಾರಣ’ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
- ‘ಗುತ್ತಿಗೆದಾರರಿಗಾಗಿ ವಿದ್ಯುತ್ ಪಂಪ್ಡ್ ಸ್ಟೋರೇಜ್ ಯೋಜನೆ’
ಸಂದರ್ಭ: ಗುತ್ತಿದಾರರಿಗೆ ಅನುಕೂಲ ಮಾಡಿಕೊಡಲೆಂದೇ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಲಿ ಆರೋಪಿಸಿದರು.
- ಕೇಂದ್ರ ಅರಣ್ಯ, ಪರಿಸರ ಮತ್ತು ವನ್ಯಜೀವಿ ಸಚಿವಾಯಲದಿಂದ ಅನುಮತಿ ಸಿಕ್ಕಿಲ್ಲ. ಈ ಅನುಮತಿಗಾಗಿ ರಾಜ್ಯ ಸರ್ಕಾರವು ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, 2024ರಲ್ಲಿಯೇ ಆಂಧ್ರಪ್ರದೇಶದ ‘ಮೇಘಾ ಎಂಜಿನಿಯರಿಂಗ್ ವರ್ಕ್ಸ್’ ಎಂಬ ಕಂಪನಿಗೆ ಟೆಂಡರ್ ಆಗಿದೆ ಎಂದು ಹೇಳಿದರು.
- ಬ್ಯಾಟರಿ ಸ್ಟೋರೇಜ್ ಎನರ್ಜಿ ಸಿಸ್ಟಂ ಮೂಲಕ ಎಲ್ಲಿ ಬೇಕಾದರೂ ವಿದ್ಯುತ್ ಸ್ಟೋರೇಜ್ ಮಾಡಲು ಅವಕಾಶವಿದೆ. ಆದರೂ ಪಶ್ಚಿಮ ಘಟ್ಟದ ಸಂರಕ್ಷಿತ ಪ್ರದೇಶದಲ್ಲಿ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
- ಗುಂಡಿಬೈಲು, ಹೆನ್ನಿ, ಹಿರೇಹೆನ್ನಿ ಮುಂತಾದ ಪ್ರದೇಶಗಳಲ್ಲಿ 350ಕ್ಕೂ ಅಧಿಕ ಕುಟುಂಬಗಳು ಯಾವುದೇ ಹಕ್ಕುಪತ್ರ ಇಲ್ಲದೇ ಬಹಳ ವರ್ಷಗಳಿಂದ ಬದುಕುತ್ತಿವೆ. ಈ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಈ ಕುಟುಂಬಗಳನ್ನು ಕೂಡ ಒಕ್ಕಲೆಬ್ಬಿಸಲಾಗುತ್ತದೆ. ಆದರೆ, ಹಕ್ಕುಪತ್ರ ಇಲ್ಲದೇ ಇರುವುದರಿಂದ ಇವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
- 1,800 ಟನ್ ಸ್ಫೋಟಕಗಳನ್ನು ಬಳಸಿ ಇಲ್ಲಿ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಮೇಲಕ್ಕೆ ಹರಿಸಬೇಕಿರುವುದರಿಂದ ಉತ್ಪಾದನೆಗಿಂತ ಶೇ 25ರಷ್ಟು ಅಧಿಕ ವಿದ್ಯುತ್ ಇಲ್ಲಿ ವ್ಯಯವಾಗಲಿದೆ ಎಂದು ವಿವರಿಸಿದರು.
- ಪರಿಸರವಾದಿ ಶಂಕರ್ ಶರ್ಮ ಮಾತನಾಡಿ, ‘ಈ ಯೋಜನೆ ಕುರಿತು ತಯಾರಿಸಿದ ವಿಸ್ತೃತ ಯೋಜನಾ ವರದಿಯು ಹಸಿ ಸುಳ್ಳುಗಳಿಂದ ಕೂಡಿದೆ. ಮಾಡಲೇಬೇಕಾದ ಯೋಜನೆ ಎಂದು ಎಲ್ಲಿಯೂ ಹೇಳಿಲ್ಲ. ಈ ಯೋಜನೆಗಾಗಿ 400 ಎಕರೆ ಕಾಡು ಕಡಿಯಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. ವಿನಾಶದ ಅಂಚಿನಲ್ಲಿರುವ ಸಿಂಹಬಾಲದ ಸಿಂಗಲೀಕ ಸಹಿತ ಅನೇಕ ಜೀವಜಂತುಗಳು ನಾಶವಾಗಲಿವೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಉಪಸ್ಥಿತರಿದ್ದರು.
- ತಾಲಿಬಾನ್: ಪಾಕ್ಗೆ ದೂರ ಭಾರತಕ್ಕೆ ಇನ್ನಷ್ಟು ಹತ್ತಿರ

- ದೇಶದಲ್ಲಿ ಲಕ್ಷಕ್ಕೂ ಅಧಿಕ ಏಕೋಪಾಧ್ಯಾಯ ಶಾಲೆಗಳು
ಸಂದರ್ಭ: ದೇಶದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಇಂಥ ಶಾಲೆಗಳಲ್ಲಿ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
- ಆಂಧ್ರಪ್ರದೇಶದಲ್ಲಿ ಇಂಥ ಶಾಲೆಗಳ ಸಂಖ್ಯೆ ಹೆಚ್ಚು ಇದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಲಕ್ಷದ್ವೀಪ ಇವೆ. ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ 2024–25ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ.
- ಏಕೋಪಾಧ್ಯಾಯ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ, ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ಇವೆ ಎಂದು ಸಚಿವಾಲಯ ತಿಳಿಸಿದೆ.
- ಡೀಪ್ಫೇಕ್, ಎ.ಐ ನಿಯಂತ್ರಣಕ್ಕೆ ಕಾನೂನು ಅಗತ್ಯ: ನ್ಯಾ. ನಾಗರತ್ನ
ಸಂದರ್ಭ: ಡೀಪ್ಫೇಕ್ ಮತ್ತು ಎ.ಐ ಮೂಲಕ ಮಕ್ಕಳ ಮೇಲೆ ನಡೆಯಬಹುದಾದ ದೌರ್ಜನ್ಯ ಗಳ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ ವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಹೇಳಿದರು.
- ಕಾರ್ಯಕ್ರಮವೊಂದರಲ್ಲಿ ಮಾತ ನಾಡಿದ ಅವರು, ‘ಸೂಕ್ತ ಮುನ್ನೆಚ್ಚ ರಿಕೆಯ ಮೂಲಕ ನಾವು ದೌರ್ಜನ್ಯ ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಯಲು ಸಾಧ್ಯವಿದೆ’ ಎಂದು ತಿಳಿಸಿದರು.
- ‘ವಿಕಾಸಗೊಳ್ಳುತ್ತಿರುವ ಹೊಸ ತಂತ್ರಜ್ಞಾನಗಳು ಉಂಟು ಮಾಡುತ್ತಿರುವ ಅಪಾಯಗಳು ಜಗತ್ತಿಗೆ ತೂಗುಗತ್ತಿ ಯಂತಾಗಿವೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರ ಗಳ ಮೇಲೆ ನಿಗಾ ಇಡಲು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ವಯಸ್ಸಿನ ಮಿತಿ ಹೇರಲು ಕಾನೂನು ರೂಪಿಸಬೇಕು’ ಎಂದರು.
- ‘ಎಐ ಮತ್ತು ಇತರ ತಂತ್ರಜ್ಞಾನಗಳು ಹೆಣ್ಣುಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅವುಗಳನ್ನು ಹೇಗೆ ನಿಗ್ರಹಿಸಬಹುದು ಎಂಬುವುದರ ಕುರಿತು ಅಧ್ಯಯನಕ್ಕೆ ‘ಹೆಣ್ಣುಮಕ್ಕಳ ವಿರುದ್ಧದ ಎ.ಐ ಸೈಬರ್ ಅಪರಾಧಗಳ ನಿಗ್ರಹ ಸಲಹಾ ಸಮಿತಿ’ ರಚನೆಯ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಬಹುದು’ ಎಂದು ತಿಳಿಸಿದರು.
- ನೆರವು ಸಾಮಗ್ರಿ: ಗಾಜಾ ಪ್ರವೇಶಕ್ಕೆ ಸಿದ್ಧತೆ
ಸಂದರ್ಭ: ಗಾಜಾ ಪಟ್ಟಿಯೊಳಗೆ ಹೆಚ್ಚಿನ ನೆರವು ಸಾಮಗ್ರಿಗಳನ್ನು ಕೊಂಡೊಯ್ಯುವ ಸಿದ್ಧತೆಗಳು ಭಾನುವಾರ ಆರಂಭಗೊಂಡಿವೆ. ‘ಭಾನುವಾರದಿಂದ ಪ್ರತಿ ದಿನವು ನೆರವು ಸಾಮಗ್ರಿಗಳನ್ನು ಹೊತ್ತ 600 ಟ್ರಕ್ಗಳು ಗಾಜಾ ಪ್ರವೇಶಿಸಲಿವೆ’ ಎಂದು ಇಸ್ರೇಲ್ ಹೇಳಿದೆ.
- ಕದನ ವಿರಾಮದ ಒಪ್ಪಂದದಂತೆ ಸಕಲ ಸಿದ್ಧತೆ ನಡೆಯುತ್ತಿದೆ. ‘ನಾವು ಸುಮಾರು 400 ಟ್ರಕ್‌ಗಳನ್ನು ಕಳುಹಿಸುತ್ತಿದ್ದೇವೆ’ ಎಂದು ಈಜಿಪ್ಟ್ ಹೇಳಿದೆ. ಆದರೆ, ಇಸ್ರೇಲ್ ಸೇನೆಯ ಪರಿಶೀಲನೆ ಬಳಿಕವೇ ಎಲ್ಲ ಟ್ರಕ್‌ಗಳು ಗಾಜಾ ಪ್ರವೇಶಿಸಲಿವೆ.
- ಇಸ್ರೇಲ್ ನೆರವು ಕೇಂದ್ರ ಧ್ವಂಸ: ವಿಶ್ವಸಂಸ್ಥೆಯ ನೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಇಸ್ರೇಲ್ ತನ್ನದೇ ನೆರವು ಕೇಂದ್ರಗಳನ್ನು ಸ್ಥಾಪಿಸಿತ್ತು. ಇದಕ್ಕೆ ಅಮೆರಿಕದ ಬೆಂಬಲವೂ ಇತ್ತು. ಇವುಗಳನ್ನು ‘ಗಾಜಾ ಮಾನವೀಯ ನೆರವು ಫೌಂಡೇಶನ್’ ನಿರ್ವಹಿಸುತ್ತಿತ್ತು.ಗಾಜಾ ಪಟ್ಟಿಯ ವಿವಿಧೆಡೆ ಸ್ಥಾಪಿಸಲಾಗಿದ್ದ ಈ ಕೇಂದ್ರಗಳನ್ನು ಜನರು ಕಿತ್ತುಹಾಕುತ್ತಿದ್ದಾರೆ. ಈ ಕೇಂದ್ರಕ್ಕೆ ಬರುವ ಜನರನ್ನು ನಿಯಂತ್ರಿಸುವ ಸಲುವಾಗಿ ಅಳವಡಿಸಲಾಗಿದ್ದ ಬೇಲಿಗಳನ್ನೂ ಕಿತ್ತೆಸೆದಿದ್ದಾರೆ.
- ‘ನೆರವು ಕಾರ್ಯಗಳಲ್ಲಿ ಹಮಾಸ್ ಮಧ್ಯ ಪ್ರವೇಶಿಸುತ್ತಿತ್ತು, ಇದನ್ನು ತಡೆಯಲು ಇಂಥ ಕೇಂದ್ರಗಳನ್ನು ತೆರೆಯಲಾಗಿತ್ತು. ಇವುಗಳು ಉತ್ತಮ ಕೆಲಸ ಮಾಡಿವೆ’ ಎಂದು ಇಸ್ರೇಲ್ ಮತ್ತು ಅಮೆರಿಕ ಹೊಗಳಿವೆ. ಈ ಕೇಂದ್ರದ ಮುಂದೆ ಆಹಾರಕ್ಕಾಗಿ ನಿಂತಿದ್ದ ನೂರಾರು ಜನರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿತ್ತು.
ಇಸ್ರೇಲ್‌ಗೆ ಟ್ರಂಪ್ ಭೇಟಿ
- ಕದನ ವಿರಾಮ ಒಪ್ಪಂದಕ್ಕೆ ಬರುವಂತೆ ಇಸ್ರೇಲ್ ಮತ್ತು ಹಮಾಸ್ ಸಂಘಟನೆಯನ್ನು ಒತ್ತಾಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಒತ್ತೆಯಾಳುಗಳ ಕುಟುಂಬಗಳನ್ನು ಅವರು ಇಸ್ರೇಲ್ ಸಂಸತ್ತಿನಲ್ಲಿ ಭೇಟಿ ಮಾಡಲಿದ್ದಾರೆ. ಶ್ವೇತಭವನವು ಬಿಡುಗಡೆ ಮಾಡಿದ ಅಧ್ಯಕ್ಷರ ಕಾರ್ಯಕ್ರಮ ಪಟ್ಟಿಯಲ್ಲಿ ಈ ಮಾಹಿತಿ ಇದೆ.
- ಇಸ್ರೇಲ್ ಬಳಿಕ ಟ್ರಂಪ್ ಅವರು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ನಾಯಕರು ಪಾಲ್ಗೊಳ್ಳುವ ‘ಶಾಂತಿ ಶೃಂಗಸಭೆ’ಯಲ್ಲಿ ಟ್ರಂಪ್ ಸೋಮವಾರ ಭಾಗವಹಿಸಲಿದ್ದಾರೆ ಎಂದು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸೀಸಿ ಕಚೇರಿ ಮಾಹಿತಿ ನೀಡಿದೆ.