ಭಾರತವು ‘ರಾಜ್ಯಗಳ ಒಕ್ಕೂಟ’ (Union of States) ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ‘ಭಾರತೀಯ ಸಂವಿಧಾನ’ದಮೊದಲ ವಿಧಿಯಲ್ಲಿಯೇ ಈ ಉಲ್ಲೇಖವಿದೆ. ಕೇಂದ್ರ ಮತ್ತು ರಾಜ್ಯ ಎಂಬ ಎರಡು ಹಂತದ ಆಡಳಿತ ವ್ಯವಸ್ಥೆ ದೇಶದಲ್ಲಿದೆ. ಒಕ್ಕೂಟ ವ್ಯವಸ್ಥೆ ಸುಗಮವಾಗಿ ಸಾಗಲು ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿ ಅಧಿಕಾರ ವರ್ಗೀಕರಿಸಲಾಗಿದೆ
ಸಂವಿಧಾನ ರಚನಾ ಸಮಿತಿ 1949ರ ನ.26 ರಂದು ಒಕ್ಕೂಟ ವ್ಯವಸ್ಥೆಗೆ ಸಮ್ಮತಿ ಸೂಚಿಸಿತು. 1950 ಜ.26ರಂದು ಸಂವಿಧಾನ ಅನುಷ್ಠಾನಗೊಂಡಿತು. ಅಂದಿನಿಂದಲೇ ಒಕ್ಕೂಟ ವ್ಯವಸ್ಥೆಗೆ ಸಾಂವಿಧಾನಿಕ ಮುದ್ರೆ ಸಿಕ್ಕಿತು. ‘ರಾಜ್ಯಗಳ ಒಕ್ಕೂಟ’ವು ದೇಶದ ಸಮಗ್ರತೆಯನ್ನು ರಕ್ಷಿಸಿ, ‘ವೈವಿಧ್ಯದಲ್ಲಿ ಏಕತೆ’ಯನ್ನು ಕಾಪಾಡಿಕೊಳ್ಳಲು ರೂಪಿಸಿದ ವಿಶಿಷ್ಟ ವ್ಯವಸ್ಥೆಯಾಗಿದೆ.
ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಸಂವಿಧಾನ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಘರ್ಷಗಳು ನಡೆದಿದ್ದರೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾಪಾಡಿದೆ.ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ವಾಗಿಗೆಲ್ಲುವುದಕ್ಕೆ ಸಂವಿಧಾನದ ಕೊಡುಗೆ ಅನನ್ಯ. ‘ರಾಜ್ಯಗಳ ಒಕ್ಕೂಟ’ದಲ್ಲಿ ಪ್ರತಿ ರಾಜ್ಯ ತನ್ನದೇ ಆಗಿರುವ ಅಸ್ಮಿತೆ, ಅನನ್ಯತೆ ಹಾಗೂ ಸಂಪನ್ಮೂಲ ಕಾಪಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.
1947ರ ಅ.15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶದೊಳಗಿನ 570ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ರಾಜಾಡಳಿತವಿತ್ತು.ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಅನೇಕರು ಹಿಂದೇಟು ಹಾಕಿದರು. ಈ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತೀಯತೆಯ ಸ್ವರೂಪ ನೀಡುವುದು ಆರಂಭದಲ್ಲಿ ಸವಾಲಾಗಿತ್ತು.
ಭಾಷಾವಾರು ರಾಜ್ಯ ರಚನೆ ದೇಶದ ಒಕ್ಕೂಟ ವ್ಯವಸ್ಥೆಯನ್ನು ಭದ್ರಪಡಿಸಿತು.
ದೇಶದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ. ಒಡಿಶಾ, ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು, ಕರ್ನಾಟಕ ದಲ್ಲಿ ಕಬ್ಬಿಣದ ಅದಿರು ಲಭ್ಯವಿವೆ.ಪರಿಸರವನ್ನು ಕಾಪಾಡಿಕೊಂಡು ಸಂಪತ್ತು ಅನುಭವಿಸಬೇಕಿದೆ.
ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಭವಿಷ್ಯದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು, ಜಲ, ಗಣಿ ಸೇರಿದಂತೆ ದೇಶದ ಸಂಪನ್ಮೂಲಗಳ ಹಂಚಿಕೆಯಾಗಿದೆ. ಸಂವಿಧಾನವು ಸ್ಪಷ್ಟ ಮಾರ್ಗದರ್ಶನ ಕೂಡ ನೀಡಿದೆ.
ಪ್ರಮುಖ ಅಂಶಗಳು
ಸ್ವಾತಂತ್ರ್ಯಪೂರ್ವದ, 1935ರ ‘ಭಾರತ ಸರ್ಕಾರದ ಕಾಯ್ದೆ’ ಒಕ್ಕೂಟ ವ್ಯವಸ್ಥೆಯ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆಗ ಭಾರತದಲ್ಲಿ ಪ್ರಾಂತೀಯ ಮತ್ತು ಕೇಂದ್ರೀಯ ವ್ಯವಸ್ಥೆ ಜಾರಿಯಲ್ಲಿತ್ತು.
1946ರಲ್ಲಿ ಮೀರತ್‌ನಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸಿದರು.
ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ವ್ಯವಸ್ಥೆ ರೂಪಿಸಿದೆ. ನ್ಯಾಯಾಂಗ ಸ್ವತಂತ್ರವಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಮೂಡುವ ಗೊಂದಲ, ವ್ಯಾಜ್ಯಗಳನ್ನು ಬಗೆಹರಿಸುವ ಜವಾಬ್ದಾರಿ ಹೊಂದಿದೆ.
ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗುವ ಸಂದರ್ಭ ತೀರಾ ವಿರಳ. ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಸಬಲವಾಗಿದೆ. ಲಿಖಿತ ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟತೆ ಇದೆ.
ನೇರ ತೆರಿಗೆ, ಪರೋಕ್ಷ ತೆರಿಗೆ, ಖನಿಜ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸ್ಕೂಲವಾದ ಮಾರ್ಗದರ್ಶನವಿದೆ.
Source: Prajavani