ಸಂದರ್ಭ: ರಷ್ಯಾದಿಂದ ತೈಲ ಖರೀಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.
• ರಷ್ಯಾ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವ ಈ ಮಸೂದೆಯು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸುತ್ತಿರುವ ಭಾರತ, ಚೀನಾ ಮತ್ತು ಇತರ ದೇಶಗಳ ಮೇಲೆ ಅತ್ಯಧಿಕ ಸುಂಕ ವಿಧಿಸಲು ಶ್ವೇತಭವನಕ್ಕೆ ಅವಕಾಶ ನೀಡುತ್ತದೆ.
• ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಸೆನೆಟರ್ ಲಿಂಡ್ರೆ ಗ್ರಹಾಂ, ‘ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ದೇಶಗಳು ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿವೆ. ಅದನ್ನು ತಡೆಯುವುದಕ್ಕೆ ಈ ಮಸೂದೆಯು ಶ್ವೇತಭವನಕ್ಕೆ ಅಪರಿಮಿತ ಅಧಿಕಾರ ನೀಡುತ್ತದೆ’ ಎಂದರು. ‘ರಷ್ಯಾ ವಿರುದ್ಧದ ದ್ವಿಪಕ್ಷೀಯ ನಿರ್ಬಂಧ ಮಸೂದೆ ಬಗ್ಗೆ ನಾನು, ಸೆನೆಟರ್ ಬಂದರಿಂದಾಲ್ ಮತ್ತು ಇತರರ ಜತೆಗೆ ಹಲವು ತಿಂಗಳು ಕೆಲಸ ಮಾಡಿದ್ದೇನೆ. ಅಧ್ಯಕ್ಷ ಟ್ರಂಪ್ ಅವರ ಜತೆ ಈ ಕುರಿತು ಇಂದು ಮಹತ್ವದ ಸಭೆ ನಡೆಯಿತು. ಅವರು ಈ ಮಸೂದೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಗ್ರಹಾಂ ತಿಳಿಸಿದರು.
• ‘ಇದು ಸಂದರ್ಭೋಚಿತ ನಿರ್ಧಾರ. ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಲು ಅಮೆರಿಕ ಸರ್ವ ಪ್ರಯತ್ನ ಮಾಡುತ್ತಿದೆ. ಆದರೆ, ರಷ್ಯಾ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಅವರು ಮುಗ್ಧರ ಹತ್ಯೆಯನ್ನು ಮುಂದುವರಿಸಿ-ದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಮೂಲಕ ಕೆಲ ದೇಶಗಳು ಯುದ್ಧವನ್ನು ಉತ್ತೇಜಿಸುತ್ತಿವೆ’ ಎಂದಿದ್ದಾರೆ.
• ಉಕ್ರೇನ್ನಲ್ಲಿ ಪುಟಿನ್ ಹರಿಸುತ್ತಿರುವ ರಕ್ತಪಾತಕ್ಕೆ ಹಣಕಾಸು ಒದಗಿಸುತ್ತಿವೆ. ಅದನ್ನು ತಡೆಯಲು ಮತ್ತು ತೈಲ ಖರೀದಿ ದೇಶಗಳನ್ನು ಶಿಕ್ಷಿಸಲು ಈ ಮಸೂದೆಯು ಟ್ರಂಪ್ ಅವರಿಗೆ ಅಧಿಕಾರ ನೀಡುತ್ತದೆ’ ಎಂದೂ ಹೇಳಿದ್ದಾರೆ.
• ಮುಂದಿನ ವಾರದ ಆರಂಭದಲ್ಲಿ ಈ ಮಸೂದೆಗೆ ಎರಡೂ ಪಕ್ಷಗಳ ಸದಸ್ಯರು ಬಹುಮತದಿಂದ ಅಂಗೀಕಾರ ನೀಡುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಗ್ರಹಾಂಭರವಸೆ ವ್ಯಕ್ತಪಡಿಸಿದರು.
• ಗ್ರಹಾಂ ಮತ್ತು ಬ್ಲೂಮೆಂಥಾಲ್ ಅವರು ಈ ಮಸೂದೆಯನ್ನು ಕಳೆದ ವರ್ಷ ಪರಿಚಯಿಸಿದ್ದರು. ರಷ್ಯಾದಿಂದ ತೈಲ ಖರೀದಿಸುವ ಮತ್ತು ಅದನ್ನು ಮರು ಮಾರಾಟ ಮಾಡುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸುವುದನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಸೆನೆಟ್ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದರು.
• ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕವನ್ನು ಈಗಾಗಲೇ ವಿಧಿಸಿದ್ದಾರೆ. ಇದರಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿರುವುದಕ್ಕೆ ಶೇ 25ರಷ್ಟು ಸುಂಕವೂ ಸೇರಿದೆ.
Source: Prajavani