Sat. Feb 7th, 2026

ಆಫ್ರಿಕಾದಿಂದ ಮತ್ತೆ 8 ಚೀತಾಗಳು ಭಾರತಕ್ಕೆ
ಭೋಪಾಲ್ (ಪಿಟಿಐ): ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ 2022ರ ಕಾರ್ಯಕ್ರಮದ ಅಡಿಯಲ್ಲಿ ಸ್ಥಳಾಂತರಿಸಲು 8 ಚೀತಾಗಳನ್ನು ದಕ್ಷಿಣ ಆಫ್ರೀಕಾದ ಬೋಟ್ಸ್‌ವಾನಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ಹೇಳಿದ್ದಾರೆ.

ಎರಡು ಗಂಡು ಚೀತಾಗಳು ಸೇರಿ ಒಟ್ಟು ಎಂಟು ಚೀತಾಗಳನ್ನು ಒಂದು ತಿಂಗಳ ಕಾಲ ಪ್ರತ್ಯೇಕವಾಸದಲ್ಲಿ ಇರಿಸಲಾಗುತ್ತದೆ. ಭಾರತಕ್ಕೆ ಕಳುಹಿಸುವ ಮೊದಲು ಅವುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಂಗೋಲಾ ಪ್ರವಾಸಕ್ಕೆ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಫ್ರಿಕಾದ ದಕ್ಷಿಣ ಭಾಗದ ಅಂಗೋಲಾ ಹಾಗೂ ಬೋಟ್ಸ್‌ವಾನಾ ದೇಶಗಳಿಗೆ 6 ದಿನಗಳ ಪ್ರವಾಸಕ್ಕೆ ಶನಿವಾರ ತೆರಳಿದರು. ಈ ದೇಶಗಳಿಗೆ ಭಾರತದ ರಾಷ್ಟ್ರಪತಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.

ಆ ದೇಶಗಳೊಂದಿಗೆ ಸಹಯೋಗ ಹಾಗೂ ಪಾಲುದಾರಿಕೆಯನ್ನು ವಿಸ್ತರಿಸುವ ಭಾರತದ ಪ್ರಯತ್ನದ ಭಾಗವಾಗಿ ಈ ಪ್ರವಾಸ ಕೈಗೊಂಡಿದ್ದಾರೆ.

ಮೊದಲು ಅಂಗೋಲಾ ರಾಜಧಾನಿ ಲೌಂಡಾಕ್ಕೆ ಮುರ್ಮು ಬಂದಿಳಿಯಲಿದ್ದಾರೆ. ಇಲ್ಲಿ ನ.8 ರಿಂದ 11ರವರೆಗೆ ಪ್ರವಾಸದಲ್ಲಿರಲಿರುವ ಅವರು ದೇಶದ 50ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಅಂಗೋಲಾ ಅಧ್ಯಕ್ಷ ಜಾವೊ ಮ್ಯಾನುಯೆಲ್‌ ಗೊಂಕ್ಲಾವೆಸ್‌ ಲಿಯೊರೆಂಕೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆ ದೇಶದ ಸಂಸತ್ತನ್ನು ಉದ್ದೇಶಿಸಿ ಮುರ್ಮು ಮಾತನಾಡಲಿದ್ದಾರೆ.

‘ಸ್ವಾವಲಂಬಿ ಭಾರತದ ಪ್ರತೀಕ ವಂದೇ ಭಾರತ್‌’
ಎರ್ನಾಕುಲಂ-–ಬೆಂಗಳೂರು ರೈಲಿಗೆ ಸಚಿವ ಎಚ್‌ಡಿಕೆ ಸ್ವಾಗತ
ರೈಲ್ವೆ ಜಾಲಕ್ಕೆ ಸೇರ್ಪಡೆ ಯಾಗುವ ಪ್ರತಿಯೊಂದು ‘ವಂದೇ ಭಾರತ್‌’ ರೈಲು ಕೂಡ ಸ್ವಾವಲಂಬಿ ಭಾರತದ ಪ್ರತೀಕವಾಗಿದೆ. ಭವಿಷ್ಯವನ್ನು ರೂಪಿಸುವ ನಾವೀನ್ಯತೆ, ವಿಶ್ವಾಸ ಮತ್ತು ಸಾಮರ್ಥ್ಯದ ದ್ಯೋತಕ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಮೂಲಕ ಸಂಚರಿಸುವ ಎರ್ನಾಕುಲಂ-ಬೆಂಗಳೂರು ‘ವಂದೇ ಭಾರತ್‌’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಶನಿವಾರ ಚಾಲನೆ ನೀಡಿದ್ದರು. ಈ ರೈಲು ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದಾಗ ಸ್ವಾಗತಕೋರಿ ಕುಮಾರಸ್ವಾಮಿ ಅವರು ಮಾತನಾಡಿದರು.

‘ಮೇಕ್‌ ಇನ್‌ ಇಂಡಿಯಾದ ಅಡಿ ಯಲ್ಲಿ ನಮ್ಮದೇ ಎಂಜಿನಿಯರ್‌ಗಳು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಈ ರೈಲುಗಳು ಭಾರತವು ತಾಂತ್ರಿಕವಾಗಿ ಮತ್ತು ವೇಗವಾಗಿ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಬಿಂಬಿಸುತ್ತಿವೆ’ ಎಂದು ಹೇಳಿದರು.

ಅಂತರ ರಾಜ್ಯ ಸಂಪರ್ಕ ಮಾರ್ಗವು ಅಗತ್ಯವಾಗಿದ್ದು, ವಾಣಿಜ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಎರಡು ಕೇಂದ್ರಗಳಾದ ಎರ್ನಾಕುಲಂ–ಬೆಂಗಳೂರನ್ನು ಈ ‘ವಂದೇ ಭಾರತ್’ ರೈಲು ಜೋಡಿಸುತ್ತಿದೆ ಎಂದು ಅವರು ಹೇಳಿದರು.

ಸಂಸದ ಪಿ.ಸಿ. ಮೋಹನ್ ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಕಬ್ಬಿಗೆ ಪರಿಷ್ಕೃತ ದರ ಇಲಾಖೆ ಅಧಿಕೃತ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಪ್ರತಿ ಟನ್‌ ಕಬ್ಬಿಗೆ ನಿಗದಿ ಮಾಡಿದ್ದ ಪರಿಷ್ಕೃತ ದರಕ್ಕೆ ಸಂಬಂಧಿಸಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ) ಶನಿವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರ 2025–26ನೇ ಸಾಲಿನ ಹಂಗಾಮಿಗೆ ಅನ್ವಯವಾಗಲಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಈ ಮೊತ್ತ ಪಾವತಿಸಬೇಕಿದೆ. ಕಾರ್ಖಾನೆಗಳು ಮೊದಲ ಕಂತಿನಲ್ಲಿ ಶೇ 10.25 ಸಕ್ಕರೆ ಇಳುವರಿ ಪ್ರಮಾಣ ಇರುವ ಪ್ರತಿ ಟನ್‌ ಕಬ್ಬಿಗೆ ₹3,100, ಶೇ 11.25 ಇಳುವರಿ ಇರುವ ಕಬ್ಬಿಗೆ ₹3,200 ಪಾವತಿಸುತ್ತವೆ. ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ದರ ಪ್ರತಿ ಟನ್‌ಗೆ ₹50 ಹಾಗೂ ರಾಜ್ಯ ಸರ್ಕಾರ ಒಂದು ಬಾರಿಗೆ ನೀಡುತ್ತಿರುವ ಆರ್ಥಿಕ ನೆರವು ₹50 ಎರಡನೇ ಕಂತಿನಲ್ಲಿ ಪಾವತಿಸಲಾಗುತ್ತದೆ.

ಶೇ 10.25–ಶೇ 9.5ರ ನಡುವಿನ ಇಳುವರಿ ಪ್ರಮಾಣದ ನಡುವೆ ಪ್ರತಿ 0.1 ಕಡಿಮೆ ಇಳುವರಿಗೆ ಅನುಪಾತಕ್ಕೆ ಅನುಗುಣವಾಗಿ ಪ್ರತಿ ಕ್ವಿಂಟಲ್‌ಗೆ ₹3.46 ಮೊತ್ತವನ್ನು ಪರಿಗಣಿಸಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕರು ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ ಸಾಗಣೆ ವೆಚ್ಚ ಸೇರಿ ಶೇ 9.5 ಇಳುವರಿ ಇರುವ ಪ್ರತಿ ಟನ್‌ ಕಬ್ಬಿಗೆ ₹3,290.50, ಶೇ 10.25 ಇಳುವರಿಗೆ ₹3,550 ಹಾಗೂ ಶೇ 11.25 ಇಳುವರಿಗೆ ₹3,896 ನ್ಯಾಯಯುತ ಮತ್ತು ಲಾಭದಾಯಕ ದರವನ್ನು (ಎಫ್‌ಆರ್‌ಪಿ) ನಿಗದಿ ಮಾಡಿತ್ತು. ನಂತರ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಕಬ್ಬು ಕಟಾವು, ಸಾಗಣೆ ವೆಚ್ಚ ಕುರಿತು ಮಾರ್ಗಸೂಚಿ ಹೊರಡಿಸಿತ್ತು.

ಕೇಂದ್ರ ಸರ್ಕಾರ ಹೊರಡಿಸಿದ ಎಫ್‌ಆರ್‌ಪಿ, ಮಾರ್ಗಸೂಚಿ ನ್ಯಾಯಯುತ ವಾಗಿಲ್ಲ. ರೈತರು ಬೆಳೆದ ಕಬ್ಬಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೆ ದರ ನಿಗದಿ ಮಾಡಲಾಗಿದೆ. ಇಳುವರಿ ನಿಗದಿಯೂ ಪಾರದರ್ಶಕವಾಗಲಿಲ್ಲ. ಹೆಚ್ಚಿನ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಪರಿಷ್ಕೃತ ದರ ಘೋಷಣೆ ಮಾಡಿದ್ದರು.

ಶೂಟಿಂಗ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು
ಕೈರೊ (ಪಿಟಿಐ): ಸೇನೆಯ ಅನುಭವಿ ಶೂಟರ್ ರವಿಂದರ್ ಸಿಂಗ್ ಅವರು ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.

ಆದರೆ ಮಹಿಳೆಯರ ವಿಭಾಗದಲ್ಲಿ ಎರಡು ಬಾರಿಯ ಒಲಿಂಪಿಯನ್ ಇಳವನಿಲ್ ವಳರಿವನ್‌ ಅವರು 10 ಮೀ. ಏರ್‌ ರೈಫೆಲ್‌ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

ದಕ್ಷಿಣ ಕೊರಿಯಾದ ಬಾನ್ ಹ್ಯೊಜಿನ್ (255.0) ಚಿನ್ನ ಗೆದ್ದರೆ, ಚೀನಾದ ವಾಂಗ್‌ ಜಿಫೀ (254) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 19ನೇ ಶಾಟ್‌ವರೆಗೆ ಚೀನಾ ಸ್ಪರ್ಧಿಯು ವಳರಿವನ್ ಅವರಿಗಿಂತ ಹಿಂದೆಯಿದ್ದರು.

ವಳರಿವನ್, ಮೇಘನಾ ಸಜ್ಜನರ ಮತ್ತು ಶ್ರೇಯಾ ಅಗರವಾಲ್ ಅವರನ್ನೊಳಗೊಂಡ ಭಾರತ ತಂಡ (1893.3) ತಂಡ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯಿತು.

ನಾಯಕ್ ಸುಬೇದಾರ್ ಆಗಿರುವ 29 ವರ್ಷ ವಯಸ್ಸಿನ ರವಿಂದರ್ ಸಿಂಗ್ ಅವರು 569 ಪಾಯಿಂಟ್ ಸ್ಕೋರ್ ಮಾಡಿದರೆ, ದಕ್ಷಿಣ ಕೊರಿಯಾದ ಕಿಮ್‌ ಚಿಯಾಂಗ್‌ಯಾಂಗ್ (556) ಅವರು ಬೆಳ್ಳಿ ಮತ್ತು ತಟಸ್ಥ ರಾಷ್ಟ್ರದ ಆ್ಯಂಟನ್‌ ಅರಿಸ್ಟರ್ಕೊವ್‌ (555) ಕಂಚು ಗೆದ್ದರು. ರವಿಂದರ್‌, ಕಮಲಜೀತ್‌ ಮತ್ತು ಯೋಗೇಶ್ ಕುಮಾರ್ ಅವರನ್ನು ಒಳಗೊಂಡ ತಂಡವು ಟೀಮ್‌ ವಿಭಾಗದಲ್ಲಿ ಬೆಳ್ಳಿ ಗೆದ್ದಿತು.

ವಂದೇ ಭಾರತ್‌-: 4 ರೈಲಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು– ಎರ್ನಾಕುಳಂ ಸೇರಿದಂತೆ ನಾಲ್ಕು ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಬನಾರಸ್‌ ರೈಲು ನಿಲ್ದಾಣದಿಂದ ಶನಿವಾರ ಹಸಿರು ನಿಶಾನೆ ತೋರಿದರು.

ನೂತನ ರೈಲುಗಳು ಬನಾರಸ್‌–ಖಜುರಾಹೊ, ಲಖನೌ–ಸಹಾರನಪುರ, ಫಿರೋಜ್‌ಪುರ–ದೆಹಲಿ, ಎರ್ನಾಕುಳಂ–ಬೆಂಗಳೂರಿನ ನಡುವೆ ಸಂಚರಿಸಲಿವೆ.

ಈ ಸೆಮಿ ಹೈಸ್ಪೀಡ್‌ ರೈಲುಗಳು ಪ್ರಮುಖ ರೈಲು ನಿಲ್ದಾಣಗಳ ನಡುವಣ ಪ್ರಯಾಣದ ಅವಧಿಯನ್ನು ತಗ್ಗಿಸಲಿವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಮತ್ತು ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,‘ವಂದೇ ಭಾರತ್‌, ನಮೋ ಭಾರತ್‌ ಮತ್ತು ಅಮೃತ ಭಾರತ್‌ ರೈಲುಗಳು ಭಾರತೀಯ ರೈಲ್ವೆಯ ಹೊಸ ಪೀಳಿಗೆಗಳು’ ಎಂದರು.

‘ದೇಶದಲ್ಲಿ ಸಾಕಷ್ಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ, ವಿಮಾನಗಳು ಜಗತ್ತಿನಾದ್ಯಂತ ಹಾರಾಡುತ್ತಿವೆ. ಈ ಎಲ್ಲ ಅಭಿವೃದ್ಧಿಯು ದೇಶದ ಬೆಳವಣಿಗೆ ಯೊಂದಿಗೆ ಸಂಬಂಧ ಹೊಂದಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲ ಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಅಭಿವೃದ್ಧಿಯ ಪಥದಲ್ಲಿ ಭಾರತವೂ ವೇಗವಾಗಿ ಸಾಗುತ್ತಿದೆ’ ಎಂದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉಪಸ್ಥಿತರಿದ್ದರು.

‘ಅಭಿವೃದ್ಧಿಯ ಪಯಣದಲ್ಲಿ ಭಾಗಿ’

‘ವಂದೇ ಭಾರತ್’ ರೈಲು ಜಾಲವು ಭಾರತದ ಪ್ರಮುಖ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ಮೂಲಕ ದೇಶದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿಯ ಪಯಣದಲ್ಲಿ ಜೊತೆಯಾಗಿದೆ. ದೇಶದಲ್ಲಿ ಯಾತ್ರೆಯನ್ನು ‘ಧ್ಯಾನದ ಮಾರ್ಗ’ ಎಂದೇ ಶತಮಾನಗಳಿಂದ ಪರಿಗಣಿಸಲಾಗುತ್ತದೆ’ ಎಂದು ಪ್ರಧಾನಿ ಹೇಳಿದರು.‌

ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ: ಪಿಣರಾಯಿ ಖಂಡನೆ

ತಿರುವನಂತಪುರ: ನೂತನವಾಗಿ ಉದ್ಘಾಟನೆಗೊಂಡ ಎರ್ನಾಕುಳಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆಯನ್ನು ಹಾಡಿಸಲಾಗಿದೆ ಎಂದು ಹೇಳಲಾಗಿದ್ದು, ಈ ನಡೆ ಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ.

ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ದೃಶ್ಯ ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ.

‘ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನಾತ್ಮಕ ನೀತಿಗಳನ್ನು ಉಲ್ಲಂಘಿಸಲಾಗಿದೆ. ಸಂಘ ಪರಿವಾರವು ತನ್ನ ಕೋಮು ರಾಜಕೀಯದ ಪ್ರಚಾರಕ್ಕಾಗಿ ಅತಿದೊಡ್ಡ ಸಾರ್ವಜನಿಕ ವಲಯವಾದ ರೈಲ್ವೆಯನ್ನು ಬಳಸಿಕೊಂಡಿರುವುದು ಸ್ವೀಕಾರಾರ್ಹವಲ್ಲ’ ಎಂದು ಹರಿಹಾಯ್ದಿದ್ದಾರೆ.

  • ಮಧುಗುಂಡಿ: ಅಪರೂಪದ ಜೇಡ ಗೋಚರ

ಸಂದರ್ಭ: 123 ವರ್ಷಗಳ ನಂತರ ಸಂಶೋಧಕರಿಗೆ ಕಾಣಿಸಿಕೊಂಡ ‘ಪಿಲಿಯಾ’ ಪ್ರಭೇದ: ಮಧುಗುಂಡಿಯಲ್ಲಿ ಪರಿಸರ ಅಧ್ಯಯನಕ್ಕೆ ಹೆಚ್ಚು ಅವಕಾಶವಿರುವುದು ಮತ್ತೆ ಸಾಬೀತಾಗಿದೆ. ಹಾಗಾಗಿ ಅಧ್ಯಯನ ಆಸಕ್ತಿ ಇರುವ ಅತಿಥಿಗಳಿಗೇ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ ಶ್ರೀಜಿತ್, ರಿವರ್‌ ಮಿಸ್ಟ್ ಮುಖ್ಯಸ್ಥ .

  • ಪಶ್ಚಿಮ ಘಟ್ಟದ ಜೀವವೈವಿಧ್ಯದ ಅಧ್ಯಯನ ಕೈಗೊಂಡಿರುವ ಸಂಶೋಧಕರ ತಂಡವು ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯಲ್ಲಿ ಕುಪ್ಪಳಿಸುವ ಜೇಡಗಳ ‘ಪಿಲಿಯಾ’ ಗುಂಪಿಗೆ ಸೇರಿದ ಹೊಸ ಪ್ರಭೇದದ ಜೇಡವು ಗೋಚರಿಸಿದೆ.
  • ಈ ಕುರಿತ ವರದಿ ಅಂತರರಾಷ್ಟ್ರೀಯ ಜೀವವೈವಿಧ್ಯ ಅಧ್ಯಯನ ಪತ್ರಿಕೆ ಝೂಟಾಕ್ಸಾನಲ್ಲಿ(Zootaxa) ಪ್ರಕಟವಾಗಿದೆ. ಈ ತಳಿಯ ಜೇಡ ಕೊನೆಯದಾಗಿ 1902ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಈಗ, 123 ವರ್ಷಗಳ ನಂತರ ಮಧುಗುಂಡಿಯಲ್ಲಿ ಈ ಸಂಕುಲ ಕಾಣಿಸಿಕೊಂಡಿರುವುದು ದಾಖಲಾಗಿದೆ.
  • ಸಂಶೋಧಕರು ಮೊದಲ ಬಾರಿಗೆ ಈ ಪ್ರಬೇಧದ ಗಂಡು, ಹೆಣ್ಣು ಜೇಡಗಳನ್ನು ಗುರುತಿಸಿದ್ದಾರೆ. ಈ ಗುಂಪಿಗೆ ‘‍ಪಿಲಿಯಾ ಮಲೆನಾಡು’ ಎಂಬ ಹೆಸರನ್ನು ಸಂಶೋಧಕರು ಸೂಚಿಸಿದ್ದಾರೆ. ಗೋಚರಿಸಿದ ಸ್ಥಳಕ್ಕೆ ಗೌರವ ಸೂಚಿಸಲು ಈ ಹೆಸರು ನೀಡಲಾಗಿದೆ ಎಂದೂ ಹೇಳುತ್ತಾರೆ.
  • ಮಧುಗುಂಡಿಯ ರಿವರ್‌ ಮಿಸ್ಟ್‌ ರೆಸಾರ್ಟ್‌ನಲ್ಲಿ ನೈಸರ್ಗಿಕ ತಜ್ಞರಾಗಿರುವ, ವನ್ಯಜೀವಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಜಿತ್ ಪಡಿಯಾರ್ ಈ ಹೊಸ ಪ್ರಭೇದವನ್ನು ಮೊದಲಿಗೆ ಗಮನಿಸಿದ್ದಾರೆ. ಒಟ್ಟು 24 ಜೇಡ ಪತ್ತೆಯಾಗಿವೆ. ಅವುಗಳಲ್ಲಿ 17 ಗಂಡು, ಮೂರು ಹೆಣ್ಣು ಮತ್ತು ನಾಲ್ಕು ಎಳೆಯ ಜೇಡಗಳಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಅಪರೂಪದ ‘ಕೇಸರಿ ರೀಡ್‌ಟೇಲ್’ ಚಿಟ್ಟೆಗಳನ್ನು ಅಜಿತ್ ಪಡಿಯಾರ್ ಗುರುತಿಸಿದ್ದರು.
  • ‘ಸಾಮಾನ್ಯವಾಗಿ ಮನೆ ಮತ್ತು ತೋಟಗಳಲ್ಲಿ ಕಾಣಿಸುವ ಜೇಡಗಳಿಗಿಂತ ಈ ಪಿಲಿಯಾ ಪ್ರಭೇದದ ಜೇಡಗಳು ವಿಭಿನ್ನವಾಗಿವೆ. ಅದರಲ್ಲೂ ಹೆಣ್ಣು ಜೇಡ ಮೊದಲ ಬಾರಿಗೆ ಗುರುತಿಸಲ್ಪಟ್ಟಿದೆ. ಇದು ಈ ಪ್ರಭೇದದ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ’ ಎಂದು ಪಡಿಯಾರ್ ಅಭಿಪ್ರಾಯಪಡುತ್ತಾರೆ.
  • ಗಮನಾರ್ಹವೆಂದರೆ ಈ ಜೇಡಗಳು ಅಪರೂಪದ ಸಸ್ಯ ಪ್ರಭೇದಗಳಾದ ‘ಮೆಮೆಸಿಲಾನ್ ಅಂಬ ಲಾಟಮ್’ ಮತ್ತು ‘ಮೆಮೆಸಿಲಾನ್ ಮಲಬಾರಿಕಮ್’ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಈ ಸಸ್ಯಗಳ ಎಲೆಗಳ ನಡುವೆ ಅಡಗಿಕೊಂಡಿರುವುದು ಕಂಡುಬಂದಿದೆ ಎಂದು ವಿವರಿಸಿದರು.
  •  
  • ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು

ಸಂದರ್ಭ: ಬಹುಪತ್ನಿತ್ವ ನಿಷೇಧಕ್ಕೆ ಸಂಬಂಧಿಸಿದ ಮಸೂದೆಯನ್ನು ಅಸ್ಸಾಂ ಸಚಿವ‌‌ ಸಂಪುಟ ಸಭೆ ಅನುಮೋದಿ ಸಿದೆ. ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ ನಿಯಮ ಉಲ್ಲಂಘಿಸಿ, ಬಹುಪತ್ನಿತ್ವ ಅನುಸರಿಸುವವರಿಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

  • ವಿಧಾನ ಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಬಹುಪತ್ನಿತ್ವ ನಿಷೇಧದ ಕಾರಣಕ್ಕೆ ಸಂತ್ರಸ್ತರಾಗುವವರಿಗೆ ನೆರವು ಕಲ್ಪಿಸಲು ಪ್ರತ್ಯೇಕ ಹಣಕಾಸು ನಿಧಿ ಸ್ಥಾಪಿಸಲಾಗುವುದು ಎಂದೂ ಹೇಳಿದ್ದಾರೆ.
  • 15 ಲಕ್ಷ ಟನ್ಸಕ್ಕರೆ ರಫ್ತಿಗೆ ಒಪ್ಪಿಗೆ

ಸಂದರ್ಭ: ಅಕ್ಟೋಬರ್ನಿಂದ ಆರಂಭವಾಗಿರುವ ಪ್ರಸ್ತಕ ವರ್ಷದ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ 15 ಲಕ್ಷ ಟನ್ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

  • ಕಾಕಂಬಿ (ಮೊಲಾಸಿಸ್‌) ರಫ್ತು ಮೇಲಿನ ಶೇಕಡ 50ರಷ್ಟು ಸುಂಕವನ್ನು ತೆಗೆಯಲು ಕೇಂದ್ರ ನಿರ್ಧರಿಸಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವೆಂಬರ್ 7ರಂದು ಬರೆದ ಪತ್ರದಲ್ಲಿ ಜೋಶಿ ತಿಳಿಸಿದ್ದಾರೆ.
  • ದೇಶದಲ್ಲಿನ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಪತ್ರದಲ್ಲಿ ವಿವರಿಸಿದ್ದಾರೆ.
  • 2024–25ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) 10 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಕೇಂದ್ರ ಅನುಮತಿ ನೀಡಿತ್ತು. ಈ ಪೈಕಿ 8 ಲಕ್ಷ ಟನ್‌ ಸಕ್ಕರೆ ಮಾತ್ರ ರಫ್ತಾಗಿತ್ತು.
  • ಈ ಬಾರಿ ಉದ್ಯಮವು 20 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಬೇಡಿಕೆ ಇಟ್ಟಿತ್ತು. ಆದರೆ, 15 ಲಕ್ಷ ಟನ್‌ ರಫ್ತಿಗೆ ಅನುಮತಿ ನೀಡಿದೆ.
  • ಸಕ್ಕರೆ ದಾಸ್ತಾನು ಹೆಚ್ಚಳದಿಂದಾಗಿ ಸಕ್ಕರೆ ರಫ್ತಿಗೆ ಅನುಮತಿ ನೀಡಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಇತ್ತೀಚೆಗೆ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಹೇಳಿದ್ದರು.
  • ಕಳೆದ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ 34 ಲಕ್ಷ ಟನ್‌ ಸಕ್ಕರೆಯನ್ನು ಎಥೆನಾಲ್‌ ತಯಾರಿಕೆಗೆ ಕೈಗಾರಿಕೆಗಳು ಬಳಕೆ ಮಾಡಿವೆ. ಇದು ಅಂದಾಜು ಮಾಡಿದ್ದ 45 ಲಕ್ಷ ಟನ್‌ಗಿಂತ ಕಡಿಮೆ. ಇದರ ಪರಿಣಾಮವಾಗಿ ಹೆಚ್ಚಿನ ದಾಸ್ತಾನು ಇದೆ ಎಂದು ಚೋಪ್ರಾ ತಿಳಿಸಿದ್ದರು.
  • ಪ್ರಸಕ್ತ ಋತುವಿನಲ್ಲಿ 3.4 ಕೋಟಿ ಟನ್‌ ಸಕ್ಕರೆ ಉತ್ಪಾದನೆ ಆಗಲಿದೆ. ಈ ಪೈಕಿ 2.85 ಕೋಟಿ ಟನ್‌ ಸಕ್ಕರೆಗೆ ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದು ಹೇಳಿದ್ದರು.
  • ಅತಿದೊಡ್ಡ ಸ್ಕಾಚ್ ವಿಸ್ಕಿ ಮಾರುಕಟ್ಟೆಯಾಗುವತ್ತ ಭಾರತ

ಸಂದರ್ಭ: ಸ್ಕಾಚ್ ವಿಸ್ಕಿಗಳ ಪಾಲಿಗೆ ಜಾಗತಿಕ ಮಟ್ಟದಲ್ಲಿ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಸ್ಕಾಚ್ವಿಸ್ಕಿ ಅಸೋಸಿಯೇಷನ್ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ಕೆಂಟ್ಹೇಳಿದ್ದಾರೆ.

  • ಭಾರತದ ಸಿಂಗಲ್ ಮಾಲ್ಟ್‌ ವಿಸ್ಕಿಗೆ ಬೇಡಿಕೆ ಹೆಚ್ಚಿರುವುದನ್ನು ಮಾರ್ಕ್‌ ಕೆಂಟ್ ಅವರು ಶ್ಲಾಘಿಸಿದ್ದಾರೆ.
  • ಸ್ಕಾಚ್‌ ವಿಸ್ಕಿಗಳು 180 ದೇಶಗಳ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಈ ಪೈಕಿ ಭಾರತದ ಮಾರುಕಟ್ಟೆಯು ಸ್ಕಾಚ್ ವಿಸ್ಕಿಗಳ ಪಾಲಿಗೆ ಪ್ರಮಾಣದ ಲೆಕ್ಕದಲ್ಲಿ ಈಗಾಗಲೇ ಅತಿದೊಡ್ಡದು. ಆದರೆ ಮೌಲ್ಯದ ಲೆಕ್ಕದಲ್ಲಿ ಭಾರತದ ಮಾರುಕಟ್ಟೆಯು ಮೊದಲ ಐದು ಮಾರುಕಟ್ಟೆಗಳ ಪೈಕಿ ಒಂದಾಗಿದೆ ಎಂದು ಕೆಂಟ್ ಹೇಳಿದ್ದಾರೆ.
  • ಭಾರತ ಮತ್ತು ಬ್ರಿಟನ್ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್ಟಿಎ) ಅನುಷ್ಠಾನಕ್ಕೆ ಬಂದ ನಂತರದಲ್ಲಿ, ಹಲವು ವಿಧದ ಸ್ಕಾಚ್ವಿಸ್ಕಿಗಳು ಭಾರತಕ್ಕೆ ಬರಲಿವೆ. ಅದರಲ್ಲೂ ಮುಖ್ಯವಾಗಿ, ಸ್ಕಾಟ್ಲೆಂಡಿನ ಸಣ್ಣ ಕಂಪನಿಗಳ ಸ್ಕಾಚ್‌ ವಿಸ್ಕಿಗಳು ಕೂಡ ಭಾರತದಲ್ಲಿ ಲಭ್ಯವಾಗಲಿವೆ ಎಂದು ಮಾರ್ಕ್‌ ಕೆಂಟ್‌ ಹೇಳಿದ್ದಾರೆ.
  • ಜಪಾನ್‌: ಪ್ರಬಲ ಭೂಕಂಪನ, ಸುನಾಮಿ ಎಚ್ಚರಿಕೆ

ಸಂದರ್ಭ: ಉತ್ತರ ಜಪಾನ್ನಲ್ಲಿ ಭಾನುವಾರ ಸಂಜೆ ಪ್ರಬಲ ಭೂಕಂಪನ ಸಂಭವಿಸಿದ್ದು, ಬಳಿಕ ಹಲವು ಬಾರಿ ಭೂಮಿ ಕಂಪಿಸಿದೆ ಎಂದು ಜಪಾನ್ಹವಾಮಾನ ಇಲಾಖೆ ತಿಳಿಸಿದೆ. ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಸಿದೆ.

  • ಮೊದಲಿಗೆ 6.7 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇವಾಟೆ ಕರಾವಳಿಯ 10 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆ ಯಾಗಿದೆ ಎಂದು ತಿಳಿಸಿದೆ.
  • ಸುನಾಮಿ ಕಾರಣ ಕರಾವಳಿ ಪ್ರದೇಶಗಳಿಂದ ದೂರ ಇರುವಂತೆ ಜನರಿಗೆ ಮುನ್ಸೂಚನೆ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಮತ್ತೆ ಭೂಮಿ ಕಂಪಿಸುವ ಸಾಧ್ಯತೆ ಇದೆ ಎಂದೂ ಎಚ್ಚರಿಸಲಾಗಿದೆ. ಭೂಕಂಪನದಿಂದ ಉಂಟಾದ ಹಾನಿಯ ಬಗ್ಗೆ ಸದ್ಯಕ್ಕೆ ಯಾವುದೇ ವರದಿಯಾಗಿಲ್ಲ.
  • 50 ಸಂಸ್ಥೆ ಜೊತೆ ಡಿಪಿಐಐಟಿ ಒಪ್ಪಂದ

ಸಂದರ್ಭ: ತಯಾರಿಕೆಗೆ ಉತ್ತೇಜನ ನೀಡಲು ಮತ್ತು ನವೋದ್ಯಮಗಳಿಗೆ ಪೂರಕವಾದ ನಾವೀನ್ಯ ಪರಿಸರದ ವ್ಯವಸ್ಥೆ ರೂಪಿಸಲು ಐಟಿಸಿ, ಫ್ಲಿಪ್ಕಾರ್ಟ್‌, ಮರ್ಸಿಡಿಸ್ಬೆಂಜ್ ಸೇರಿದಂತೆ 50ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (ಡಿಪಿಐಐಟಿ) ಒಪ್ಪಂದ ಮಾಡಿಕೊಂಡಿದೆ.

  • ಈ ಕುರಿತ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೋಟ್, ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್‌, ಹೀರೊ ಮೋಟೊ, ಜೆಪ್ಟೊ, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಪೇಟಿಎಂ, ವಾಲ್‌ಮಾರ್ಟ್‌ ಮತ್ತು ಏಥರ್‌ ಎನರ್ಜಿ ಒಪ್ಪಂದ ಮಾಡಿಕೊಂಡ ಕಂಪನಿಗಳ ಪಟ್ಟಿಯಲ್ಲಿವೆ.
  • ಈ ಒಪ್ಪಂದದ ಭಾಗವಾಗಿ ನವೋದ್ಯಮಗಳಿಗೆ ಪೂರಕವಾದ ವ್ಯವಸ್ಥೆಗೆ ಉತ್ತೇಜನ ನೀಡಲಾಗುವುದು. ನವೋದ್ಯಮಗಳ ಆರಂಭಿಕ ಹಂತದಲ್ಲಿ ಅಗತ್ಯವಾಗಿ ಬೇಕಿರುವ ಎಲ್ಲ ನೆರವು ಒದಗಿಸುವ ತಯಾರಿಕಾ ವಲಯದ ಇನ್‌ಕ್ಯುಬೇಟರ್‌ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ಪಾದನೆಯಲ್ಲಿ ನಾವೀನ್ಯವನ್ನು ಹೆಚ್ಚಿಸುವ ಉದ್ದೇಶ ಇದೆ ಎಂದು ಅಧಿಕಾರಿ ಹೇಳಿದ್ದಾರೆ.
  • ಶೂಟಿಂಗ್ವಿಶ್ವಕಪ್: ಅನೀಶ್ಗೆ ಬೆಳ್ಳಿ

ಸಂದರ್ಭ: ಭಾರತದ ಅನೀಶ್ಭಾನವಾಲಾ ಅವರು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ವಿಶ್ವ ಶೂಟಿಂಗ್ಚಾಂಪಿಯನ್ಷಿಪ್ ಪುರುಷರ 25 ಮೀ. ರ್ಯಾಪಿಡ್ಫೈಯರ್ಪಿಸ್ತೂಲ್ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು.

  • 23 ವರ್ಷ ವಯಸ್ಸಿನ ಹರಿಯಾಣದ ಶೂಟರ್‌ ಫೈನಲ್‌ ಸುತ್ತಿನಲ್ಲಿ 28 ಪಾಯಿಂಟ್ಸ್‌ ಕಲೆಹಾಕಿದರು. ಫ್ರಾನ್ಸ್‌ನ ಕ್ಲೆಮೆಂಟ್‌ ಬೆಸಾಗೆಟ್‌ (31) ಸ್ವರ್ಣ ಗೆದ್ದರೆ, ಉಕ್ರೇನ್‌ನ ಮಾಕ್ಸಿಮ್‌ ಹರೊಡಿನೆಟ್ಸ್‌ (25) ಕಂಚಿನ ಪದಕ ತಮ್ಮದಾಗಿಸಿಕೊಂಡರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments