Sat. Feb 7th, 2026
  • ಉತ್ತರಕ್ಕೆ ವೆಚ್ಚ ₹31,198 ಕೋಟಿ: ಎಸ್ಡಿಪಿಯಿಂದ ₹17,710 ಕೋಟಿ, ಕೆಕೆಆರ್ಡಿಬಿ: ₹13,488 ಕೋಟಿ ವೆಚ್ಚ

‌ಸಂದರ್ಭ: ಪ್ರಾದೇಶಿಕ ಅಸಮತೋಲನಕ್ಕೆ ಸಂಬಂಧಿಸಿದಂತೆ ಎಲ್ಲ ವಿಭಾಗ, ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ಈ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಪ್ರೊ. ಎಂ. ಗೋವಿಂದ ರಾವ್, ಅಧ್ಯಕ್ಷರು, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ.

  • ಉತ್ತರ ಕರ್ನಾಟಕ ಭಾಗದಲ್ಲಿ ಅಸಮತೋಲನ ನಿವಾರಣೆ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ವಿಶೇಷ ಅಭಿವೃದ್ಧಿ ಯೋಜನೆ’ (ಎಸ್‌ಡಿಪಿ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ರಾಜ್ಯ ಸರ್ಕಾರ ₹31,198 ಕೋಟಿ ಸುರಿದಿದೆ.
  • ಇಷ್ಟು ಹಣ ಸುರಿದರೂ ಈ ಭಾಗದಲ್ಲಿನ ಜ್ವಲಂತ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ಎನ್ನುವುದು ಈ ಭಾಗದ ಜನಪ್ರತಿನಿಧಿಗಳ ಒಕ್ಕೊರಲ ಕೊರಗು. ಪ್ರತಿ ಬಾರಿಯಂತೆ ಈ ಬಾರಿಯೂ ಬೆಳಗಾವಿ ಅಧಿವೇಶನ ದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಬೇಡಿಕೆಗಳ ಪಟ್ಟಿ ಮುಂದಿಡಲು ನಿರ್ಧರಿಸಿದ್ದಾರೆ.
  • ನೀರಾವರಿ ಯೋಜನೆಗಳು, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ, ಕನ್ನಡ ಶಾಲೆಗಳ ಶಿಥಿಲಾವಸ್ಥೆ, ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳು, ಮೂಲಸೌಕರ್ಯ, ಪ್ರವಾಸೋದ್ಯಮ ಹೀಗೆ ವಿವಿಧ ವಿಚಾರಗಳಲ್ಲಿ ಈ ಭಾಗ ಹಿಂದುಳಿದಿ ರುವುದನ್ನು ಪ್ರಸ್ತಾಪಿಸಿ, ಅನುದಾನ– ಅಭಿವೃದ್ಧಿಗೆ ಒತ್ತು ನೀಡುವಂತೆ ಪಕ್ಷಾತೀತವಾಗಿ ಪಟ್ಟು ಹಿಡಿಯಲು ಮುಂದಾಗಿದ್ದಾರೆ.
  • ‘ಉತ್ತರ ಕರ್ನಾಟಕ ಭಾಗಕ್ಕೆ ಡಿ.ಎಂ. ನಂಜುಂಡಪ್ಪ ವರದಿಯ ಅನ್ವಯ 2008–09ರಿಂದ 2024–25ರ ಅವಧಿಯಲ್ಲಿ ‘ವಿಶೇಷ ಅಭಿವೃದ್ಧಿ ಯೋಜನೆ’ಯಡಿ (ಎಸ್‌ಡಿಪಿ)‌ ₹17,710.28 ಕೋಟಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ 2013–14ರಿಂದ ಈವರೆಗೆ ₹13,488.45 ಕೋಟಿ ಸೇರಿ ಒಟ್ಟು ₹31,198 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಆರ್ಥಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
  • ಉತ್ತರ ಮತ್ತು ದಕ್ಷಿಣ ಕರ್ನಾಟಕ ನಡುವಿನ ಅಸಮಾನತೆ ಯನ್ನು ಅಧ್ಯಯನ ಮಾಡಿ, ಆ ಅಸಮಾನತೆ ಯನ್ನು ತಗ್ಗಿಸಲು ಸೂಕ್ತ ಅಭಿವೃದ್ಧಿ ವಿಧಾನಗಳನ್ನು ಶಿಫಾರಸು ಮಾಡಲು 2000ದ ಅಕ್ಟೋಬರ್‌ ನಲ್ಲಿ ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿಯನ್ನು ಅಂದಿನ ಸರ್ಕಾರ ರಚಿಸಿತ್ತು.

ಕೆಕೆಆರ್ಡಿಬಿ: ವೆಚ್ಚದಲ್ಲಿ ಹಿಂದೆ

  • ಕಲ್ಯಾಣ ಕರ್ನಾಟಕ ಪ್ರದೇಶಾ ಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರತಿ ವರ್ಷ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆ, ಅಂದಾಜು ಪಟ್ಟಿ ತಯಾರಿ ಮತ್ತು ಟೆಂಡರ್‌ ಪ್ರಕ್ರಿಯೆ ವಿಳಂಬವೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆಯಂತೆ ವೆಚ್ಚ ಆಗಿಲ್ಲ.
  • ರಾಜ್ಯ ಸರ್ಕಾರ 2013–14ನೇ ಸಾಲಿನಿಂದ ಈವರೆಗೆ ಕೆಕೆಆರ್‌ಡಿಬಿಗೆ ₹26 ಸಾವಿರ ಕೋಟಿ ಅನುದಾನ ನಿಗದಿಪಡಿಸಿದೆ. 2024–25 ಮತ್ತು 2025–26ನೇ ಸಾಲಿನಲ್ಲಿ ಮಂಡಳಿಗೆ ತಲಾ ₹5 ಸಾವಿರ ಕೋಟಿ ನಿಗದಿಪಡಿಸಿದ್ದು, ಆ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಿ, ₹3 ಸಾವಿರ ಕೋಟಿಗೆ ಸೀಮಿತಗೊಳಿಸಿ ವೆಚ್ಚ ಭರಿಸಲು ಮತ್ತು ಉಳಿದ ಕಾಮಗಾರಿ ಗಳನ್ನು ಮುಂದುವರಿದ ಕಾಮಗಾರಿಯಾಗಿ ಮುಂದಿನ ವರ್ಷದಲ್ಲಿ ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆ ಸೂಚಿಸಿದೆ. ಈ ಮಧ್ಯೆ, ಕೆಕೆಆರ್‌ಡಿಬಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ತೀರಾ ಕಳಪೆಯಾಗಿದ್ದು, ಸರ್ಕಾರದ ಹಣ ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇತ್ತೀಚೆಗೆ ವಿವಿಧ ಸಂಘಟನೆಗಳು ಕಲಬುರಗಿಯಲ್ಲಿರುವ ಕೆಕೆಆರ್‌ಡಿಬಿ ಕಚೇರಿ ಎದುರು ಧರಣಿಯನ್ನೂ ನಡೆಸಿವೆ.
  • ಈ ಸಮಿತಿಯು ಆಗ ಇದ್ದ 176 ತಾಲ್ಲೂಕುಗಳಲ್ಲಿನ ಕೃಷಿ, ಉದ್ದಿಮೆ, ಆರ್ಥಿಕ, ಸಾಮಾಜಿಕ, ಜನಸಂಖ್ಯೆ ಹೀಗೆ ಐದು ವಲಯಗಳಲ್ಲಿ 35 ಸೂಚಕಗಳನ್ನು ಬಳಸಿ ಅಧ್ಯಯನ ನಡೆಸಿ 2002ರ ಜೂನ್‌ನಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ಸಮಿತಿಯು 176 ತಾಲ್ಲೂಕುಗಳ ಪೈಕಿ 114 ತಾಲ್ಲೂಕುಗಳು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಗುರುತಿಸಿತ್ತು. ಅವುಗಳಲ್ಲಿ ಅತ್ಯಂತ ಹಿಂದುಳಿದ 39, ಅತೀ ಹಿಂದುಳಿದ 40, ಹಿಂದುಳಿದ 35 ತಾಲ್ಲೂಕುಗಳಾಗಿದ್ದವು. ಈಗ ತಾಲ್ಲೂಕುಗಳ ಒಟ್ಟು ಸಂಖ್ಯೆ 240 ಆಗಿದೆ. ಈ ಪೈಕಿ, ನಾಲ್ಕು ತಾಲ್ಲೂಕುಗಳು ಇನ್ನೂ ರಚನೆ ಆಗಿಲ್ಲ.
  • ನಂಜುಂಡಪ್ಪ ವರದಿಯ ಶಿಫಾರಸಿನ ಅನ್ವಯ ರಾಜ್ಯದಲ್ಲಿರುವ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ 2007–08ರಿಂದ 2024–25ನೇ ಸಾಲಿನವರೆಗೆ 18 ವರ್ಷಗಳಲ್ಲಿ ಒಟ್ಟಾರೆ 48,866.49 ಕೋಟಿ ನಿಗದಿಪಡಿಸಿ, ₹40,159.42 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ₹36,866.56 ಕೋಟಿ ವೆಚ್ಚ ಮಾಡಲಾಗಿದೆ. ಈ ಮೊತ್ತದಲ್ಲಿ ಶೇ 60ರಷ್ಟು ಅನುದಾನವನ್ನು ಉತ್ತರ ಕರ್ನಾಟಕ ಭಾಗದ ತಾಲ್ಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗಿದೆ.
  • ದೊಡ್ಡ ಮೊತ್ತದ ಅನುದಾನ ವೆಚ್ಚ ಮಾಡಿದರೂ ರಾಜ್ಯದಲ್ಲಿ ಉತ್ತರ– ದಕ್ಷಿಣ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸಾಧ್ಯವಾಗಿಲ್ಲ. ಅಲ್ಲದೆ, ನಂಜುಂಡಪ್ಪ ವರದಿ 25 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2023ರ ಡಿ. 15ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ, ಆಗ ಇದ್ದ 240 ತಾಲ್ಲೂಕುಗಳ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಉನ್ನತಮಟ್ಟ ಸಮಿತಿ ರಚಿಸಲಾಗುವುದು ಎಂದು ಘೋಷಿಸಿದ್ದರು.
  • ‘ಕಳೆದ 24 ವರ್ಷಗಳಲ್ಲಿ ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ಪ್ರದೇಶಗಳಲ್ಲಿನ ಅಸಮತೋಲನ ನಿವಾರಿಸಲು ಬಹಳಷ್ಟು ಯೋಜನೆಗಳನ್ನು ರೂಪಿಸಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಇದರಿಂದ ಆಗಿರುವ ಬದಲಾವಣೆ ಮತ್ತು ಪರಿಣಾಮ ಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು’ ಎಂದು 2024–25ನೇ ಸಾಲಿನ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ 2024ರ ಮಾರ್ಚ್‌ 16ರಂದು ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಚಿವರು, ಶಾಸಕರು, ಕೆಕೆಆರ್‌ಡಿಬಿ ಅಧ್ಯಕ್ಷರು, ಸಂಘ–ಸಂಸ್ಥೆಗಳು, ಕೈಗಾರಿಕೋದ್ಯಮಿ ಗಳೊಂದಿಗೆ ಚರ್ಚಿಸಿ ಸಂವಾದ ನಡೆಸಿ, ಮಾಹಿತಿಗಳನ್ನು, ಅಭಿಪ್ರಾಯಗಳನ್ನು ಕ್ರೋಡೀಕರಿಸಿದೆ. ಸಮಿತಿಯು ವರದಿಯ ಕರಡು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಲು ತಯಾರಿ ನಡೆಸಿದೆ.
  • ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಲ್

ಸಂದರ್ಭ: ಪ್ರತಿ ರೈತರಿಂದ ಮೆಕ್ಕೆಜೋಳ ಖರೀದಿಸಲು ವಿಧಿಸಿದ್ದ ಗರಿಷ್ಠ 20 ಕ್ವಿಂಟಲ್ಮಿತಿಯನ್ನು ರಾಜ್ಯ ಸರ್ಕಾರವು 50 ಕ್ವಿಂಟಲ್ಗೆ ಹೆಚ್ಚಿಸಿದೆ.

  • ಪ್ರತಿ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆಯಲ್ಲಿ, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರುವ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಎಂದು ಸಹಕಾರ ಇಲಾಖೆಯು ಇದೇ 2ರಂದು ಆದೇಶ ಹೊರಡಿಸಿತ್ತು.
  • ಇಲಾಖೆಯು ಹೇರಿದ್ದ ಈ ಮಿತಿಗೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಲಾಖೆಯು ಭಾನುವಾರ ಆದೇಶ ಹೊರಡಿಸಿದ್ದು, ಮಿತಿಯನ್ನು 50 ಕ್ವಿಂಟಲ್‌ಗೆ ಹೆಚ್ಚಿಸಿದೆ.
  • ಉತ್ತರ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

ರಾಜ್ಯದ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಹಲವು ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಸರ್ಕಾರವು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಈ ಜಿಲ್ಲೆಗಳ ಹೋರಾಟಗಾರರ ಆರೋಪ. ಚುನಾವಣೆಯಲ್ಲಿ ಗೆಲವು ಸಾಧಿಸಿದ ಶಾಸಕರು, ಸಂಸದರು ಕೂಡ ತಮ್ಮ ಜಿಲ್ಲೆಗಳು ಎದುರಿಸುವ ಸಮಸ್ಯೆಗಳನ್ನು ವಿಧಾನಸಭೆ, ಲೋಕಸಭೆಗಳಲ್ಲಿ ಪ್ರಸ್ತಾಪಿಸುವುದಿಲ್ಲ. ಹೀಗಾಗಿ ತಮ್ಮ ನೋವು ನೀಗುವುದೆಂದು, ಅಭಿವೃದ್ಧಿಯ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು ಎಂದು ಜನ ನೋವು ತೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೇ ಆಗಾಗ ‍ಪ್ರತ್ಯೇಕ ರಾಜ್ಯದ ಕೂಗು ಏಳುತ್ತಿರುತ್ತದೆ. 

ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಿದರೂ ಈ ಭಾಗದ ಜಿಲ್ಲೆಗಳು ಇನ್ನೂ ಅಭಿವೃದ್ಧಿಯತ್ತ ಹೆಜ್ಜೆ ಹಾಕಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ, ಕೃಷಿ, ನೀರಾವರಿ, ನಗರ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. 

ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜುಗೊಂಡಿದೆ. ರಾಜ್ಯದ ಉತ್ತರದ ಜಿಲ್ಲೆಗಳು, ಅಲ್ಲಿನ ಜನರ ಸಂಕಷ್ಟಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲಾಗುತ್ತದೆ. ಆದರೆ, ಪ್ರತಿ ಬಾರಿಯೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ವಾದ, ಕಲಹಗಳಲ್ಲೇ ಅಧಿವೇಶನ ಮುಗಿದು ಹೋಗುತ್ತಿದೆ. ಈ ಬಾರಿಯಾದರೂ ಹಲವು ವರ್ಷಗಳಿಂದ ಪರಿಹಾರವಾಗದೇ ಉಳಿದಿರುವ ತಮ್ಮ ಸಮಸ್ಯೆಗಳು, ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆಯಲಿ ಎಂಬುದು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಆಶಯ.

ಈ ಭಾಗದ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆಗಬೇಕಿರುವ ಕೆಲಸಗಳನ್ನು ಇಲ್ಲಿ ನೀಡಲಾಗಿದೆ.  

ಬೆಳಗಾವಿ

lಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಗೋಕಾಕ ಹಾಗೂ ಚಿಕ್ಕೋಡಿ ಕೇಂದ್ರಗಳಾಗಿ ಇನ್ನೆರಡು ಹೊಸ ಜಿಲ್ಲೆ ರಚಿಸಬೇಕು ಎಂಬ ಬೇಡಿಕೆ ಎರಡು ದಶಕಗಳಿಂದ ಇದ್ದು, ಹೋರಾಟ ಮುಂದುವರಿದಿದೆ

lಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡಲಾಗುವುದು ಎಂದು ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿತ್ತು. ಕಾಂಗ್ರೆಸ್‌ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿಲ್ಲ 

lಹಿಂದಿನ ಸರ್ಕಾರವು ಬೆಳಗಾವಿ ಜಿಲ್ಲೆಯ 14 ಏತ ನೀರಾವರಿಗಳಿಗೆ ಅನುಮೋದನೆ ನೀಡಿ, ₹5,000 ಕೋಟಿ ಅನುದಾನ ಒದಗಿಸಿತ್ತು. ಹಾಲಿ ಸರ್ಕಾರ ಬಂದ ಮೇಲೆ ಯಾವೊಂದು ಏತ ನೀರಾವರಿಗೂ ಹಣ ನೀಡಿಲ್ಲ

lಗೋಕಾಕ ಜಲಪಾತವನ್ನು ಜೋಗದ ಮಾದರಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿಸಬೇಕು ಎಂಬ ಕೂಗು ಮೂರು ದಶಕಗಳಿಂದ ಇದೆ

lಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ ಹಾಗೂ ನೆರೆಯ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ 80ರಷ್ಟು ‌ದ್ರಾಕ್ಷಿಯನ್ನು ಒಣಗಿಸಿ ಮಾರಾಟ ಮಾಡಲಾಗುತ್ತದೆ. ಶೇ 20ರಷ್ಟು ಮಾತ್ರ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ದ್ರಾಕ್ಷಿ ಶೀಥಲೀಕರಣ ಘಟಕ ನಿರ್ಮಾಣ ಮಾಡುವುದು ಹಾಗೂ ರಫ್ತು ಮಾಡಲು ಕಾರ್ಗೊ ವಿಮಾನ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ

ಧಾರವಾಡ

lಧಾರವಾಡದ ವಿದ್ಯಾಲಯಗಳಲ್ಲಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳ ಕೊರತೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಪಿ.ಜಿ, ಬಾಡಿಗೆ ಕೊಠಡಿ ಮೊದಲಾದವನ್ನು ಅವಲಂಬಿಸಬೇಕಾದ ಸ್ಥಿತಿ ಇದೆ

lಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಘೋಷಣೆಯಾಗಿದೆ. ಆದರೆ, ಈವರೆಗೆ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಧಾರವಾಡಕ್ಕೆ ವರ್ತುಲ ರಸ್ತೆ ನಿರ್ಮಾಣ ಪ್ರಸ್ತಾವ, ಮಹದಾಯಿ ಯೋಜನೆ ನನೆಗುದಿಗೆ ಬಿದ್ದಿವೆ

lಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗಾಗಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕಿಲ್ಲ

lಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜವಳಿ ಪಾರ್ಕ್‌ ನಿರ್ಮಿಸುವುದಾಗಿ 2022ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈವರೆಗೂ ಅದು ಕಾರ್ಯಗತವಾಗಿಲ್ಲ

lಉತ್ತರ ಕರ್ನಾಟಕ ಭಾಗದ ಜನಪದ ಕಲೆಗಳನ್ನು ಉಳಿಸಿ, ಬೆಳೆಸಲು ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸಮೀಪದ ಅಧ್ಯಾಪಕ ನಗರದಲ್ಲಿ ನಿರ್ಮಿಸಲಾಗುತ್ತಿರುವ ‘ಜಾನಪದ ಜಗತ್ತು’ ಕಾಮಗಾರಿ 14 ವರ್ಷಗಳಿಂದ ನನೆಗುದಿಗೆ ಬಿದ್ದಿದೆ

ಬಳ್ಳಾರಿ

lಜಿಲ್ಲೆಯಲ್ಲಿ ವ್ಯಾಪಕವಾಗಿ ಮೆಣಸಿನಕಾಯಿ ಬೆಳೆಯುತ್ತಿದ್ದರೂ ಮೆಣಸಿನಕಾಯಿ ಮಾರುಕಟ್ಟೆ ಇಲ್ಲ

lಸಂಡೂರಿನಲ್ಲಿ ಮೈನಿಂಗ್ ಕಾಲೇಜು ಆರಂಭಿಸುವುದಾಗಿ ಹೇಳಿದ್ದ ಸರ್ಕಾರ ಈವರೆಗೆ ಕ್ರಮ ಜರುಗಿಸಿಲ್ಲ 

ವಿಜಯನಗರ

lಹೊಸಪೇಟೆಯಲ್ಲಿ 250 ಹಾಸಿಗೆಗಳ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಇನ್ನೂ ಆರಂಭವಾಗದ ಕಾರಣ ಆರೋಗ್ಯ ಸೇವೆಗಳ ಸ್ಥಿತಿಯು ಚಿಂತಾಜನಕ ಸ್ಥಿತಿಯಲ್ಲಿದೆ

lರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಮಾಜಿ ದೇವದಾಸಿಯರು ಇರುವ ಜಿಲ್ಲೆ ಇದು. ಅಪೌಷ್ಟಿಕತೆ ಸಮಸ್ಯೆ ಇಲ್ಲಿನ ಮಕ್ಕಳನ್ನು ಕಾಡುತ್ತಿದ್ದು, ಸದ್ಯ ಜಿಲ್ಲೆಯಲ್ಲಿ 580 ಅಪೌಷ್ಟಿಕ ಮಕ್ಕಳಿರುವುದನ್ನು ಗುರುತಿಸಲಾಗಿದೆ. ಸುಮಾರು 100 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಶಾಲಾ ಕಟ್ಟಡಗಳ ಸ್ಥಿತಿಯೂ ಅಷ್ಟೇ

l ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಷೆಯ ಅಭಿವೃದ್ಧಿ, ಸಂಶೋಧನೆಗಾಗಿ ಸ್ಠಾಪನೆಯಾಗಿರುವ ದೇಶದ ಏಕೈಕ ವಿಶ್ವವಿದ್ಯಾಲಯ. ಇಲ್ಲಿ ಬೋಧಕರು, ಅನುದಾನದ ಕೊರತೆ ಕಾಡುತ್ತಿದೆ

ವಿಜಯಪುರ

lಜಿಲ್ಲೆಯವರೇ ಆದ ಎಂ.ಬಿ.ಪಾಟೀಲ ಅವರು ಬೃಹತ್‌ ಕೈಗಾರಿಕಾ ಸಚಿವರಾಗಿದ್ದರೂ ಇದುವರೆಗೆ ಕೈಗಾರಿಕೆಗಳು ಆರಂಭವಾಗಿಲ್ಲ. ಮೈಸೂರು ಸ್ಯಾಂಡಲ್‌ ಸೋಪ್‌ ಘಟಕ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರೂ ಆರಂಭವಾಗಿಲ್ಲ

lವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಬೇಕು, ಉದ್ದೇಶಿತ ಖಾಸಗಿ ಸಹಭಾಗಿತ್ವವನ್ನು (ಪಿಪಿಪಿ) ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿಪರ, ದಲಿತ ಪರ, ಮಹಿಳಾ ಪರ, ರೈತ, ಕಾರ್ಮಿಕ ಪರ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಮೂರು ತಿಂಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ

l ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಕಾರ್ಯಾರಂಭಿಸಿಲ್ಲ

lವಿಜಯಪುರದ ಇಟ್ಟಂಗಿಹಾಳದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಫುಡ್‌ ಪಾರ್ಕ್‌ ಸ್ಥಾಪನೆ ಕಾರ್ಯ ಹಾಗೂ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ ಅನುಷ್ಠಾನವಾಗದೇ ನನೆಗುದಿಗೆ ಬಿದ್ದಿವೆ

ಗದಗ

lಕಪ್ಪತ್ತಗುಡ್ಡವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂತೆ ಜನರ ಕೂಗಿಗೆ ಇನ್ನೂ ಬಲ ಬಂದಿಲ್ಲ. ನೀಲನಕ್ಷೆ ಸಿದ್ಧವಾಗಿದ್ದರೂ ಅನುದಾನ ಬಿಡುಗಡೆ ಆಗಿಲ್ಲ

lಗದಗ ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ತಜ್ಞರು ಅಧ್ಯಯನ ನಡೆಸಿ ಅಂದಾಜು ₹804 ಕೋಟಿ ಅನುದಾನ ಬೇಕು ಎಂದು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ

lಗದಗ -ಬೆಟಗೇರಿ ಅವಳಿ ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಗೊಂಡು ಹಲವು ವರ್ಷಗಳು ಕಳೆದರೂ ಪ್ರತಿದಿನವೂ ನೀರು ಸಿಗುತ್ತಿಲ್ಲ. ಕೆಲವೊಮ್ಮೆ ಮಳೆಗಾಲದಲ್ಲೂ ನೀರಿಗೆ ತತ್ವಾರ ಎದುರಾಗುತ್ತಿದೆ

ಬಾಗಲಕೋಟೆ

1964ರಲ್ಲಿ ಆರಂಭಗೊಂಡ ಕೃಷ್ಣಾ ಮೇಲ್ದಂಡೆ ಯೋಜನೆ ಆರು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಇದು ವಿಜಯಪುರ, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ 12.14 ಲಕ್ಷ‌ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಬೃಹತ್ ಯೋಜನೆಯಾಗಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಈಗಾಗಲೇ 6.12 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗಿದೆ. ಇನ್ನೂ 6 ಲಕ್ಷ‌ ಹೆಕ್ಟೇರ್‌ಗೆ ನೀರು ಒದಗಿಸುವ ಮೂರನೇ ಹಂತದ ಕಾಮಗಾರಿ ಆಗಬೇಕಿದೆ

ಹಾವೇರಿ

lಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ವರದಾ, ತುಂಗಭದ್ರಾ ನದಿಗಳು ಹರಿದಿರುವ ಜಿಲ್ಲೆಯಲ್ಲಿ, ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳಿಲ್ಲ

lಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯವಿದೆ. ಹಾವೇರಿಯಲ್ಲಿಯೂ ನೂತನವಾಗಿ ಹಾವೇರಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಎರಡು ವಿಶ್ವವಿದ್ಯಾಲಯಗಳಿಗೂ ಅನುದಾನವಿಲ್ಲ

lಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕುಗಳು ಸಾಕಷ್ಟು ಹಿಂದುಳಿದಿವೆ. ಎಲ್ಲ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳ ಅಗತ್ಯವಿರುವುದಾಗಿ ಜನರು ಒತ್ತಾಯಿಸುತ್ತಿದ್ದಾರೆ

ಕಲಬುರಗಿ

lಜಿಲ್ಲೆಯ ಬಹುತೇಕ ನೀರಾವರಿ ಯೋಜನೆಗಳು ವಿಫಲವಾಗಿದ್ದು, ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್, ಚಿಂಚೋಳಿ ತಾಲ್ಲೂಕಿನ ನಾಗರಾಳ, ಚಂದ್ರಂಪಳ್ಳಿ ಜಲಾಶಯದ ನೀರು ಹರಿಸಲು ವಿತರಣಾ ಜಾಲವನ್ನು ಬಲಪಡಿಸಲು ಅನುದಾನದ ಅಗತ್ಯವಿದೆ

lಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಬಳಿ ಪಿಎಂ ಮಿತ್ರಾ ಯೋಜನೆಯಡಿ ಆರಂಭಿಸಲು ಉದ್ದೇಶಿಸಿರುವ ಜವಳಿ ಪಾರ್ಕ್ ಅನುಷ್ಠಾನ ಮಾಡಲು ಅನುದಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ

lಹೊಸದಾಗಿ ರಚನೆಯಾದ ಶಹಬಾದ್, ಕಾಳಗಿ, ಕಮಲಾಪುರ, ಯಡ್ರಾಮಿ ತಾಲ್ಲೂಕುಗಳಿಗೆ ತಾಲ್ಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡಬೇಕು ಎಂಬುದು ಇಲ್ಲಿನ ಜನರ ಆಗ್ರಹ

ಕೊಪ್ಪಳ

lಕೊಪ್ಪಳ ಸಮೀಪದಲ್ಲಿ ಬಲ್ಡೋಟಾ, ಕಿರ್ಲೋಸ್ಕರ್‌, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಕಾರ್ಖಾನೆಗಳು ವಿಸ್ತರಣೆಗೆ ಮುಂದಾಗಿದ್ದು, ಈ ಕಾರ್ಖಾನೆಗಳು ಆರಂಭವಾದರೆ ಜಿಲ್ಲಾ ಕೇಂದ್ರ ದೂಳುಮಯವಾಗುತ್ತದೆ. ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ತಾಲ್ಲೂಕಿನ 20 ಹಳ್ಳಿಗಳು ನಲುಗಿ ಹೋಗಿವೆ. ಅದೇ ಪರಿಸ್ಥಿತಿ ಜಿಲ್ಲಾ ಕೇಂದ್ರಕ್ಕೂ ಬರುತ್ತದೆ ಎನ್ನುವ ಆತಂಕ ಜನರಲ್ಲಿದ್ದು ಜಿಲ್ಲಾ ಬಚಾವೊ ಆಂದೋಲನ ಸಮಿತಿ ಅನಿರ್ದಿಷ್ಟ ಅವಧಿ ಧರಣಿ ನಡೆಸುತ್ತಿದೆ. ಜಿಲ್ಲೆಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗಾಗಲೇ ಭೇಟಿಯಾಗಿದ್ದಾರೆ. ಬಲ್ಡೋಟಾ ವಿಸ್ತರಣೆ ನಿಲ್ಲಿಸಬೇಕು ಎಂದು ಮೌಖಿಕವಾಗಿ ಹೇಳಿದ್ದಾರೆ. ಈ ಕುರಿತು ಸರ್ಕಾರ ಸ್ಪಷ್ಟನಿರ್ಧಾರ ಕೈಗೊಳ್ಳಬೇಕು, ಲಿಖಿತವಾಗಿ ಆದೇಶ ಹೊರಡಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹ

lತುಂಗಭದ್ರಾ ಜಲಾಶಯದಲ್ಲಿ ಅಂದಾಜು 30 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದೆ. ಜಲಾಶಯ ತುಂಬಿದ ಬಳಿಕ ವ್ಯರ್ಥವಾಗಿ ಹರಿಯುವ ನೀರು ನದಿ ಪಾಲಾಗುವ ಬದಲು ಸಂಗ್ರಹಿಸಲು ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ₹13,040 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ತುಂಗಭದ್ರಾ ಜಲಾಶಯದ ನೀರಿನಲ್ಲಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಪಾಲು ಹೊಂದಿದ್ದು, ಆ ರಾಜ್ಯಗಳಿಂದ ಸ್ಪಂದನೆ ಸಿಗದ ಕಾರಣ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ 

ಬೀದರ್

l1987ರಲ್ಲಿ ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡು ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡಬೇಕೆನ್ನುವುದು ನಾಲ್ಕು ದಶಕಗಳ ಪ್ರಮುಖ ಬೇಡಿಕೆಯಾಗಿದೆ. ಹೋದ ವರ್ಷ ರೈತರು ಸುದೀರ್ಘ ಒಂದು ವರ್ಷ ಧರಣಿ ನಡೆಸಿದ್ದರು. ಸರ್ಕಾರ ವಿವಿಧ ರೀತಿಯ ನೆಪಗಳನ್ನು ಒಡ್ಡಿ ಪರಿಹಾರ ವಿಳಂಬ ಮಾಡುತ್ತಲೇ ಇದೆ

lಕಾರಂಜಾ–ಮಾಂಜ್ರಾ ನದಿ ಜಲಾನಯನ ಪ್ರದೇಶದಲ್ಲಿ ಎರಡು ಏತ ನೀರಾವರಿ ವ್ಯವಸ್ಥೆಗಳನ್ನು ನಿರ್ಮಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದೆ. ಈ ಯೋಜನೆಗಳು ಕೃಷ್ಣಾ ನದಿ ಜಲಾನಯನ ಪ್ರದೇಶದಿಂದ 8.4 ಟಿಎಂಸಿ ಅಡಿ ನೀರನ್ನು ಮತ್ತು ಬಚಾವತ್ ನದಿ ನೀರು ಹಂಚಿಕೆ ಪ್ರಕಾರ ಗೋದಾವರಿ ಜಲಾನಯನ ಪ್ರದೇಶದಿಂದ ಬಳಕೆಯಾಗದ ನೀರನ್ನು ಬಳಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಅನುದಾನ ನೀಡಿಲ್ಲ.

lಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸುವ 371 (ಜೆ) ಸಮರ್ಪಕ ಅನುಷ್ಠಾನಗೊಳಿಸಬೇಕು. ಬ್ಯಾಕ್‌ಲಾಗ್‌ ಸೇರಿದಂತೆ ಎಲ್ಲಾ ರೀತಿಯ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಬೇಕು ಎನ್ನುವ ಆಗ್ರಹವೂ ಇದೆ

ಯಾದಗಿರಿ

lಯಾದಗಿರಿ ಜಿಲ್ಲೆಯಾಗಿ 15 ವರ್ಷಗಳು ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ಭೀಮಾ ನದಿಗೆ ಬಿಡಲಾಗುತ್ತಿದೆ. ಇದರ ಜೊತೆಗೆ ಯಾದಗಿರಿ ನಗರಕ್ಕೆ ರಿಂಗ್ ರಸ್ತೆಯೂ ಇಲ್ಲ

lಯಾದಗಿರಿ ತಾಲ್ಲೂಕಿನ ಕಡೇಚೂರು–ಬಾಡಿಯಾಳ ಸೀಮೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ 3,300 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಆದರೆ, ಸೂಕ್ತ ಕೈಗಾರಿಕೆಗಳು ಬರದೆ ಇದು ಈಗ ರಾಸಾಯನಿಕ ಔಷಧಿ ಕಂಪನಿಗಳಿಗೆ ಜಾಗ ಮಾಡಿಕೊಟ್ಟಂತೆ ಆಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವೂ ಬಂದಿಲ್ಲ

lಜಿಲ್ಲೆಯು ಭತ್ತದ ಕಣಜ‌ ಎಂದು ಕರೆಸಿಕೊಳ್ಳುತ್ತಿದ್ದರೂ ಅಕ್ಕಿ ಗಿರಣಿಗಳು ಸ್ಥಾಪನೆಯಾಗಿಲ್ಲ. ರೈತರು ಹೆಚ್ಚಾಗಿ ಹತ್ತಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಾರೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ. ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬೇಡಿಕೆಗೆ ಮನ್ನಣೆ ಸಿಗುತ್ತಿಲ್ಲ

ರಾಯಚೂರು

lಜಿಲ್ಲೆಯ ನದಿ ತೀರದ ಗ್ರಾಮಗಳ ರೈತರ ಹೊಲಗಳಿಗೆ ಪ್ರಸ್ತುತ ಮಾರ್ಚ್‌ 30ರ ವರೆಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಆಲಮಟ್ಟಿ ಡ್ಯಾಂ ಎತ್ತರಿಸಿದರೆ ಏಪ್ರಿಲ್ 15ರ ವರೆಗೂ ನೀರು ಲಭಿಸಲಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲಿದೆ. ಜಿಲ್ಲೆಯಲ್ಲಿ ಮುಖ್ಯ ಕಾಲುವೆಗಳು ನಿರ್ಮಾಣವಾಗಿವೆ. ಇದರ ಜತೆಗೆ ಹೊಲಗಾಲುವೆಗಳೂ ನಿರ್ಮಾಣವಾಗಬೇಕು ಎಂಬುದು ರೈತರ ಒತ್ತಾಯ

lಜಿಲ್ಲೆಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ‘ಬಿ’ ಸ್ಕೀಮ್ (ಅಣೆಕಟ್ಟು ಎತ್ತರ ಕಾಮಗಾರಿ ನಡೆದಾಗ ನೀರು ಹರಿಸುವುದು) ಯೋಜನೆಯಡಿ ನಾರಾಯಣಪುರ ಬಲದಂಡೆ 9 (ಎ) ವಿತರಣಾ ಕಾಲುವೆ ಕಾಮಗಾರಿ 13 ವರ್ಷಗಳಿಂದ ನನೆಗುದಿಗೆ ಬಿದ್ದಿದೆ

l ಯುಕೆಪಿ–3ರಲ್ಲಿ ನಾರಾಯಣಪುರ ಬಲದಂಡೆ ಕಾಲುವೆ 150 ಕಿಮೀ ವರೆಗೆ ವಿಸ್ತರಣೆ ಹಾಗೂ ರಾಂಪುರ ಏತ ನೀರಾವರಿ ಯೋಜನೆ 20ರಿಂದ 27 ಕಿ.ಮೀ ವರೆಗೆ ವಿಸ್ತರಣೆ ಕಾಮಗಾರಿ ಮುಗಿದಿದೆ. ಲಿಂಗಸುಗೂರು ತಾಲ್ಲೂಕಿನ ಹೊನ್ನಹಳ್ಳಿ, ಯರಡೋಣಾ, ಗುಡದನಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿನ ರೈತರ ಜಮೀನು ದಾಖಲೆಯಲ್ಲಿ ಕೆಲ ದೋಷಗಳು ಇರುವುದರಿಂದ ಭೂ ಪರಿಹಾರ ಬಂದಿಲ್ಲ

l ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಕಾರಣ ಸಾರಿಗೆ ಸಂಪರ್ಕ ಹಾಗೂ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ರಸ್ತೆಗಳು ಸರಿಯಾಗಿ ಇಲ್ಲದ ಕಾರಣ ರೈತರರು ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ಸಾಗಿಸಲು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ

lಜಿಲ್ಲೆಯಲ್ಲಿ 110 ಜಿನ್ನಿಂಗ್‌ ಫ್ಯಾಕ್ಟರಿಗಳಿದ್ದರೂ ಜವಳಿ ಪಾರ್ಕ್‌ ನಿರ್ಮಿಸಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಸಾರಿಗೆ ಸಮಸ್ಯೆಯೇ ಅಭಿವೃದ್ಧಿಗೆ ತೊಡಕಾಗಿದೆ

ಆಧಾರ್: ಗುರುತು ತಾಳೆಗೆ ಹೊಸ ನಿಯಮ

ಸಂದರ್ಭ: ಹೋಟೆಲ್ಗಳು, ಕಾರ್ಯಕ್ರಮ ಸಂಘಟಕರು ತಮ್ಮ ಗ್ರಾಹಕರಿಂದ ಆಧಾರ್ಕಾರ್ಡ್ ನೆರಳಚ್ಚು ಪ್ರತಿ ಪಡೆದು, ಅವುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗೆ ಆಧಾರ್ ಕಾರ್ಡ್‌ ಪ್ರತಿ ಪಡೆದುಕೊಳ್ಳುವುದು ಆಧಾರ್ ಕಾಯ್ದೆಗೆ ವಿರುದ್ಧ.

  • ಹೋಟೆಲ್‌ ಪ್ರತಿನಿಧಿಗಳು, ಕಾರ್ಯಕ್ರಮ ಸಂಘಟಕರು ಮುಂತಾದವರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ವ್ಯಕ್ತಿಯ ಗುರುತನ್ನು ತಾಳೆ ಮಾಡುವ ತಂತ್ರಜ್ಞಾನವನ್ನು ಪಡೆಯಬೇಕು ಎಂದಾದರೆ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸುವುದು ಕಡ್ಡಾಯ ಎನ್ನುವ ನಿಯಮಕ್ಕೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಒಪ್ಪಿಗೆ ನೀಡಿದೆ ಎಂದು ಅದರ ಸಿಇಒ ಭುವನೇಶ್ ಕುಮಾರ್ ಹೇಳಿದ್ದಾರೆ.
  • ‘ಹೊಸ ನಿಯಮವನ್ನು ಶೀಘ್ರದಲ್ಲಿಯೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ. ಆಧಾರ್‌ ಸಂಖ್ಯೆಯನ್ನು ಆಧರಿಸಿ ವ್ಯಕ್ತಿಯ ಗುರುತು ತಾಳೆ ಮಾಡುವ ಸಂಸ್ಥೆಗಳು ತಮ್ಮ ಹೆಸರನ್ನು ನೋಂದಣಿ ಮಾಡುವುದನ್ನು ಈ ನಿಯಮವು ಕಡ್ಡಾಯಗೊಳಿಸುತ್ತದೆ’ ಎಂದು ಕುಮಾರ್ ತಿಳಿಸಿದ್ದಾರೆ.
  • ಆಧಾರ್‌ನ ಕೇಂದ್ರ ದತ್ತಾಂಶ ಕೋಶದ ಜೊತೆ ಸಂಪರ್ಕ ಹೊಂದದೆಯೂ ವ್ಯಕ್ತಿಯ ಗುರುತು ತಾಳೆ ನೋಡುವ ಹೊಸ ಆ್ಯಪ್‌ ಒಂದನ್ನು ಯುಐಡಿಎಐ ಪರೀಕ್ಷಿಸುತ್ತಿದೆ. ಈ ಹೊಸ ಆ್ಯಪ್‌ಅನ್ನು ವಿಮಾನ ನಿಲ್ದಾಣಗಳಲ್ಲಿ, ಗ್ರಾಹಕರ ವಯಸ್ಸಿನ ಆಧಾರದಲ್ಲಿ ಉತ್ಪನ್ನ ಗಳನ್ನು ಮಾರಾಟ ಮಾಡಬೇಕಿರುವ ಅಂಗಡಿಗಳಲ್ಲಿ ಬಳಕೆ ಮಾಡಬಹುದು.
  • ಸೌರ ಕೃಷಿ ಪಂಪ್ಸೆಟ್ : ಮಹಾರಾಷ್ಟ್ರಕ್ಕೆ ಅಗ್ರ ಸ್ಥಾನ: ಮೂವತ್ತು ದಿನಗಳಲ್ಲಿ 45 ಸಾವಿರಕ್ಕೂ ಹೆಚ್ಚು ಕೃಷಿ ಪಂಪ್ಅಳವಡಿಕೆ

ಸಂದರ್ಭ: ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ನಿಯಮಿತವು (ಎಂಎಸ್ಇಡಿಸಿಎಲ್‌) ‘ಪಿಎಂಕುಸುಮ್ಬಿ ಯೋಜನೆಯಡಿ ಕೇವಲ 30 ದಿನಗಳಲ್ಲಿ ರಾಜ್ಯದಾದ್ಯಂತ 45,911 ಸೌರ ಕೃಷಿ ಪಂಪ್ಸೆಟ್ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಸಾಧನೆಯ ಮೈಲಿಗಲ್ಲು ಗಿನ್ನೆಸ್ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

  • ಈ ಸಾಧನೆಯ ಮೂಲಕ ಭಾರತದಲ್ಲಿ ವೇಗವಾಗಿ ಸೌರಶಕ್ತಿ ಆಧಾರಿತ ಚಟುವಟಿಕೆಗಳನ್ನು ಅಳವಡಿಸುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅಗ್ರಸ್ಥಾನ ದಲ್ಲಿದೆ. ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಸರ್ಕಾರವೊಂದು ವೇಗವಾಗಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸೌರ ಕೃಷಿ ಪಂಪ್‌ಗಳನ್ನು ಅಳವಡಿಸುತ್ತಿರುವುದರಲ್ಲಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
  • ‌ಈ ಸಾಧನೆಯು, ಕೇಂದ್ರ ಸರ್ಕಾರದ ಪಿಎಂ–ಕುಸಮ್‌ ಬಿ ಮತ್ತು ಮಗೇಲ್‌ ತ್ಯಾಲಾ ಸೌರ್ ಕೃಷಿ ಪಂಪ್‌ ಯೋಜನೆಗಳ (ಎಂಟಿಎಸ್‌ಕೆಪಿವೈ) ಪರಿಣಾಮಕಾರಿ ಅನುಷ್ಠಾನದ ಮೂಲಕ ಭಾರತದಲ್ಲಿ ಶುದ್ಧ ಇಂಧನದ ಪರಿವರ್ತನೆ, ರೈತರ ಜೀವನೋಪಾಯ ಸುಧಾರಣೆ ಮತ್ತು ಸುಸ್ಥಿರ ನೀರಾವರಿಯನ್ನು ಪ್ರೋತ್ಸಾಹಿಸುವ ರಾಜ್ಯ ಸರ್ಕಾರದ ಬದ್ಧತೆಯ ಪ್ರತಿಬಿಂಬವಾಗಿದೆ.
  • ‘ರಾಜ್ಯದಾದ್ಯಂತ ಒಂದು ತಿಂಗಳಲ್ಲಿ 45,911ಕ್ಕೂ ಹೆಚ್ಚು ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಗಳನ್ನು ಅನುಷ್ಠಾನಗೊಳಿ ಸಲಾಗಿದೆ. ಈ ಮೂಲಕ ಸೌರ ಕೃಷಿ ಚಟುವಟಿಕೆಗಳ ಅನುಷ್ಠಾನದಲ್ಲಿ ಮಹಾರಾಷ್ಟ್ರವನ್ನು, ದೇಶದ ಪ್ರಥಮ ರಾಜ್ಯವನ್ನಾಗಿ ಮಾಡಿದ್ದೇವೆ. ಈ ಸಾಧನೆಯು ಸುಸ್ಥಿರ ನೀರಾವರಿಯನ್ನು ಖಚಿತಪಡಿಸುತ್ತ್ತದೆ. ಅಷ್ಟೇ ಅಲ್ಲದೇ, ಕೃಷಿಯಲ್ಲಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸುತ್ತದೆ, ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ’ ಎಂದು ಮಹಾರಾಷ್ಟ್ರ ಸರ್ಕಾರದ ಇಂಧನ ಸಚಿವರೂ ಆಗಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ.
  • ಎಂಎಸ್‌ಇಡಿಸಿಎಲ್‌, ರಾಜ್ಯ ದಾದ್ಯಂತ ಈವರೆಗೆ 7.47 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. 10.45 ಲಕ್ಷ ಕೃಷಿ ಪಂಪ್‌ಗಳ ಸ್ಥಾಪನೆಯ ಗುರಿ ಹೊಂದಿದೆ. ಇದು ರಾಜ್ಯ, ದೇಶ ವಲ್ಲದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಮಾದರಿಯನ್ನು ಸೃಷ್ಟಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
  • ಹೈದರಾಬಾದ್‌: ರಸ್ತೆಗೆ ಟ್ರಂಪ್ಹೆಸರು

ಸಂದರ್ಭ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾವಿರ್ಯಾಲ್ದಲ್ಲಿರುವ ನೆಹರೂ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ  ಪ್ರಸ್ತಾವಿತ ರೇಡಿಯಲ್ಹೊರವರ್ತುಲ ರಸ್ತೆ (ಆರ್ಆರ್ಆರ್‌)ಗೆ  ಪದ್ಮಭೂಷಣ ರತನ್ಟಾಟಾ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆರಾವಿರ್ಯಾಲ್ದಲ್ಲಿರುವ ಇಂಟರ್ಚೇಂಜ್ಗೆಟಾಟಾ ಇಂಟರ್ಚೇಂಜ್ ಎಂದು ಈಗಾಗಲೇ ನಾಮಕರಣ ಮಾಡಲಾಗಿದೆ.

  • ಹೈದರಾಬಾದ್‌ನ (ಫೈನಾನ್ಸಿಯಲ್‌ ಡಿಸ್ಟ್ರಿಕ್ಟ್‌) ನಾನಕ್‌ರಾಮಗೂಡದಲ್ಲಿರುವ ಅಮೆರಿಕ ಕಾನ್ಸುಲೆಟ್‌ ಜನರಲ್‌ ಕಟ್ಟಡವಿರುವ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿಡಲು ಪ್ರಸ್ತಾಪ ಸಿದ್ಧಪಡಿಸಿದೆ. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಅಮೆರಿಕ ರಾಯಭಾರ ಕಚೇರಿಗೆ ತೆಲಂಗಾಣ ಸರ್ಕಾರ ಪತ್ರ ಬರೆದಿದೆ.
  • ನವದೆಹಲಿಯಲ್ಲಿ ಭಾರತ–ಅಮೆರಿಕ ಕಾರ್ಯತಂತ್ರದ ಪಾಲುದಾರಿಗೆ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಹೈದರಾಬಾದ್‌ ನಗರದ ಪ್ರಮುಖ ರಸ್ತೆಗಳಿಗೆ ಗಣ್ಯವಕ್ತಿ, ಪ್ರಮುಖ ಕಂಪನಿಗಳ ಹೆಸರಿಡುವ ಪ್ರಸ್ತಾಪವಿದೆ ಎಂದು ತಿಳಿಸಿದ್ದರು.
  • ಸಿಮ್ರನ್ಪ್ರೀತ್ಕೌರ್ಗೆ ಪಿಸ್ತೂಲ್ಚಿನ್ನ
  • ವಿಶ್ವಕಪ್‌ ಶೂಟಿಂಗ್‌ 50 ಮೀ. ರೈಫಲ್ ತ್ರೀ ಪೊಸಿಷನ್‌: ಐಶ್ವರಿ ಪ್ರಸಾದ್‌ಗೆ ಬೆಳ್ಳಿ
  • ಯುವ ಪ್ರತಿಭೆ ಸಿಮ್ರನ್‌ಪ್ರೀತ್ ಕೌರ್‌ ಬ್ರಾರ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾನುವಾರ ಪ್ರಬಲ ಕಣದ ಸವಾಲನ್ನು ಎದುರಿಸಿ ಚಿನ್ನದ ಪದಕ ಗೆದ್ದುಕೊಂಡರು. ಪುರುಷರ 50 ಮೀ. ರೈಫಲ್ ತ್ರೀ ಪೊಸಿಷನ್ಸ್ ಸ್ಪರ್ಧೆಯಲ್ಲಿ ಐಶ್ವರಿ ಪ್ರಸಾದ್ ಸಿಂಗ್‌ ತೋಮಾರ್ ಅವರು ಪದಾರ್ಪಣೆಯಲ್ಲೇ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು.
  • 21 ವರ್ಷ ವಯಸ್ಸಿನ ಸಿಮ್ರನ್‌ಪ್ರೀತ್‌ ಅವರು ಫೈನಲ್‌ನಲ್ಲಿ ಅಮೋಘ 41 ಸ್ಕೋರ್ ಶೂಟ್‌ ಮಾಡಿ ತಮ್ಮ ವೃತ್ತಿ ಬದುಕಿನ ಅತಿ ದೊಡ್ಡ ಸಾಧನೆ ದಾಖಲಿಸಿದರು. ಆ ಹಾದಿಯಲ್ಲಿ, ಒಲಿಂಪಿಕ್ ಚಾಂಪಿಯನ್, ಕೊರಿಯಾದ ಯಾಂಗ್ ಜಿ ಇನ್ ಹೆಸರಿನಲ್ಲಿದ್ದ ವಿಶ್ವ ಜೂನಿಯರ್ ದಾಖಲೆ ಸರಿಗಟ್ಟಿ ಪೋಷಕರಿಗೆ ಹೆಮ್ಮೆ ಮೂಡಿಸಿದರು. ಸಿಮ್ರನ್ ಅವರಿಗೆ ಬೆಂಬಲ ನೀಡಲು ತಂದೆ ಸರ್ಕಾರಿ ನೌಕರಿಯನ್ನು ತ್ಯಜಿಸಿದ್ದರು.
  • ಚೀನಾದ ಯಾವೊ ಕ್ಸಿಯಾನ್‌ಕ್ಸುನ್ (36 ಸ್ಕೋರ್) ಬೆಳ್ಳಿ ಮತ್ತು ಜರ್ಮನಿಯ ದೊರೀನ್ ವೆನ್ನೆಕಾಂಪ್ (30) ಅವರು ಕಂಚಿನ ಪದಕ ಪಡೆದರು. ಅನುಭವಿ ಯಾವೊ ಅವರು 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.
  • ಫೈನಲ್‌ಗೆ ಅರ್ಹತೆ ಪಡೆದ ಭಾರತದ ಮತ್ತೋರ್ವ ಶೂಟರ್ ಇಶಾ ಸಿಂಗ್ ಅವರು ಏಳನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಪಡೆದಿದ್ದ ಮನು ಭಾಕರ್ (581 ಪಾಯಿಂಟ್‌) ಅವರು ಅರ್ಹತಾ ಸುತ್ತಿನಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದರು.
  • ಈ ವರ್ಷದ ಏಪ್ರಿಲ್‌ನಲ್ಲಿ ಲಿಮಾದಲ್ಲಿ (ಪೆರು) ನಡೆದಿದ್ದ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಮ್ರನ್‌ಪ್ರೀತ್ ಭಾನುವಾರ ಕ್ವಾಲಿಫಿಕೇಷನ್‌ನಲ್ಲಿ 584 ಪಾಯಿಂಟ್ಸ್ ಸ್ಕೋರ್ ಮಾಡಿ ಐದನೇ ಹಾಗೂ ಇಶಾ 585 ಸ್ಕೋರ್‌ನೊಡನೆ ನಾಲ್ಕನೇ ಸ್ಥಾನ ಗಳಿಸಿ ಫೈನಲ್‌ಗೇರಿದ್ದರು.
  • ಐಶ್ವರಿಗೆ ಬೆಳ್ಳಿ: ಇದಕ್ಕೆ ಮೊದಲು, ಪುರು ಷರ ರೈಫಲ್ ತ್ರೀ ಪೊಸಿಷನ್ ಸ್ಪರ್ಧೆಯ ಫೈನಲ್‌ನಲ್ಲಿ ಝೆಕ್‌ ಗಣರಾಜ್ಯದ ಜಿರಿ ಪ್ರಿವ್ರಾಟ್‌ಸ್ಕಿ 414.2 ಪಾಯಿಂಟ್ಸ್‌ ಸ್ಕೋರ್ ಮಾಡಿ ಚಿನ್ನ ಗೆದ್ದುಕೊಂಡಿದ್ದರು. ಐಶ್ವರಿ ಅವರಿಗಿಂತ ಕೇವಲ 09.9 ಪಾಯಿಂಟ್‌ ಅಂತರದಿಂದ ಹಿಂದೆಬಿದ್ದು ಎರಡನೇ ಸ್ಥಾನಕ್ಕೆ ಸರಿದರು. ಒಲಿಂಪಿಕ್ ಚಾಂಪಿಯನ್, ಚೀನಾದ ಲಿಯು ಯುಕುನ್ ಕಂಚಿನ ಪದಕ ಗಳಿಸಿದರು.
  • ಆ ಮೂಲಕ ಐಶ್ವರಿ ವಿಶ್ವ ಮತ್ತು ಏಷ್ಯಾ ಮಟ್ಟದ ಎಲ್ಲಾ ಸ್ಪರ್ಧೆಗಳಲ್ಲಿ ಐಶ್ವರಿ ಪ್ರಸಾದ್ ಪದಕ ಗೆದ್ದಂತಾಯಿತು. ಎರಡು ಬಾರಿಯ ಒಲಿಂಪಿಯನ್ ಆಗಿರುವ ಐಶ್ವರಿ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದಾರೆ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಅವರು ಅಕ್ಟೋಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
  • ಅರ್ಹತಾ ಸುತ್ತಿನಲ್ಲಿ ಅವರು 595 ಪಾಯಿಂಟ್‌ ಸ್ಕೋರ್ ಮಾಡಿ ಎರಡನೇ ಸ್ಥಾನ ಗಳಿಸಿದ್ದರು. ಈ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಚೀನಾದ ಟಿಯಾನ್ ಜಿಯಾಮಿಂಗ್ ಅವರು ವಿಶ್ವದಾಖಲೆಯ 598 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದಿದ್ದರು. ಅಂತಿಮ ಎಂಟರಲ್ಲಿ ಚೀನಾದ ಮೂವರ ಜೊತೆ, ವರ್ಷದ ಅಥ್ಲೀಟ್‌ ಜಾನ್–ಹೆರ್ಮನ್ ಹೆಗ್‌ (ನಾರ್ವೆ) ಮತ್ತು ಇಸ್ತವಾನ್ ಪೆನಿ (ಹಂಗೆರಿ) ಅವರೂ ಸ್ಥಾನ ಪಡೆದಿದ್ದರು.
  • ಮಂಡಿಯೂರಿ ಶೂಟ್‌ ಮಾಡುವ ಸ್ಪರ್ಧೆಯ 10 ಶಾಟ್‌ಗಳ ನಂತರ ಐಶ್ವರಿ 102.8 ಸ್ಕೋರ್‌ನೊಡನೆ ನಾಲ್ಕನೇ ಸ್ಥಾನ ದಲ್ಲಿದ್ದರು. ಪ್ರೋನ್‌ (ಅಂಗಾತ ಸ್ಥಿತಿಯಲ್ಲಿ ಶೂಟ್‌ ಮಾಡುವ) ಪೊಸಿಷನ್‌ ನಂತರ ಅವರು ಎರಡನೇ ಸ್ಥಾನಕ್ಕೇರಿದರು. ಜಿರಿ ಪ್ರಿವ್ರಾಟ್‌ಸ್ಕಿ ಆಗ ಐಶ್ವರಿ ಅವರಿಗಿಂತ 3.3 ಪಾಯಿಂಟ್‌ ಮುಂದಿದ್ದರು. ಲಿಯು ಮೂರನೇ ಸ್ಥಾನದಲ್ಲಿದ್ದರು.
  • ಮಹಿಳೆಯರ ರೈಫಲ್ ತ್ರೀ ಪೊಸಿಷನ್‌ ನಲ್ಲಿ ಸಿಫ್ತ್‌ ಕೌರ್ ಸಮ್ರಾ, ಮಹಿಳೆಯರ 25 ಮೀ.ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಅವರು ಅವರು ಅರ್ಹತಾ ಸುತ್ತಿಗಿಂತ ಮೇಲೇರಲು ವಿಫಲರಾದರು.
  • ಅರ್ಹತಾ ಸುತ್ತಿನಲ್ಲಿ ಸಿಫ್ತ್‌ 584 ಸ್ಕೋರ್‌ನೊಡನೆ ಹತ್ತನೇ ಸ್ಥಾನ ಪಡೆದರೆ, ಮನು 581 ಸ್ಕೋರ್‌ನೊಡನೆ 9ನೇ ಸ್ಥಾನ ಪಡೆದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments