- ತ್ವರಿತ ನ್ಯಾಯಕ್ಕೆ ‘ಎಐ’ ತಂತ್ರಜ್ಞಾನ
ಸಂದರ್ಭ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ, ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ತ್ವರಿತ ನ್ಯಾಯಾಲಯ ಸ್ಥಾಪಿಸುವುದೂ ಸೇರಿದಂತೆ ಜಿಲ್ಲಾ ನ್ಯಾಯಾಂಗಕ್ಕೆ ಸಮಗ್ರ ಸುಧಾರಣೆ ತರಲು ಸರ್ಕಾರ ಮುಂದಡಿ ಇಟ್ಟಿದೆ.

- ಈ ಉದ್ದೇಶದಿಂದ ‘ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳ ಮಸೂದೆ– 2025’ರ ಕರಡು ಸಿದ್ಧಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡಿಸುವ ತಯಾರಿಯೂ ನಡೆದಿದೆ.
- ನ್ಯಾಯಾಂಗ ಪ್ರಕ್ರಿಯೆ ಗಳಲ್ಲಿ ವೇಗ, ನಿಖರತೆ, ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನ ಬಳಸಬೇಕು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಆ ಮೂಲಕ ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯದಾನ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಸಮನ್ವಯದಿಂದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪ್ರಸ್ತಾವ ಮಸೂದೆಯಲ್ಲಿದೆ.
- ಮಸೂದೆಯಲ್ಲಿ ಏನಿದೆ?: ರೈತರು, ನಿರುದ್ಯೋಗಿಗಳು, ಉದ್ಯೋಗ ವಂಚಿತರು, ಭೂ ವಿವಾದಗಳು, ಕೃಷಿ ಸಾಲಗಳು, ಬೆಳೆ ವಿಮೆ ಮತ್ತು ಹಿಡುವಳಿ ಸಮಸ್ಯೆಗಳು ಸೇರಿದಂತೆ ಕೃಷಿ ವಿವಾದಗಳನ್ನು ಒಳಗೊಂಡ ಸಿವಿಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕೆ ಅನುಗುಣವಾಗಿ ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ‘ತ್ವರಿತ ನ್ಯಾಯಾಲಯ’ ಸ್ಥಾಪಿಸಬೇಕು.
- ಈ ನ್ಯಾಯಾಲಯಗಳ ಮುಂದಿರುವ ಎಲ್ಲ ಪ್ರಕರಣಗಳಿಗೆ ಮಧ್ಯಸ್ಥಿಕೆ ಕೇಂದ್ರಗಳು, ಲೋಕ ಅದಾಲತ್ಗಳು ಅಥವಾ ಪರ್ಯಾಯ ವಿವಾದ ಪರಿಹಾರ ಕೇಂದ್ರಗಳ ಮೂಲಕ ಪೂರ್ವ ವಿಚಾರಣೆಯ ಮಧ್ಯಸ್ಥಿಕೆ ಕಡ್ಡಾಯವಾಗಿ ಮಾಡಬೇಕು.
- ತ್ವರಿತ ನ್ಯಾಯಾಲಯಗಳ ಕಾರ್ಯಕ್ಷಮತೆಯ ಬಗ್ಗೆ ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿಯು ತ್ರೈಮಾಸಿಕ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಬೇಕು. ಈ ನ್ಯಾಯಾಲಯಗಳ ಪೀಠಾಸೀನ ಅಧಿಕಾರಿಯು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೊಂದಿಗೆ ಸಮನ್ವಯ ಸಾಧಿಸಿ, ರೈತರಿಗೆ, ನಿರುದ್ಯೋಗಿಗಳಿಗೆ ಮತ್ತು ಉದ್ಯೋಗ ವಂಚಿತರಿಗೆ ಕಾನೂನು ನೆರವಿನ ಲಭ್ಯತೆಯನ್ನು ಖಾತರಿಪಡಿಸಬೇಕು.
- 10 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಇರುವ ಪ್ರಕರಣ ಗಳನ್ನು (ವಿಶೇಷ ಕಾರಣಗಳಿಗಾಗಿ ಹೈಕೋರ್ಟ್ ನಿರ್ದೇಶನ ನೀಡದ ಹೊರತು) ಪ್ರಾದೇಶಿಕ ಮತ್ತು ವಿಷಯದ ಅಧಿಕಾರ ವ್ಯಾಪ್ತಿ ಹೊಂದಿರುವ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬೇಕು.
- ಐದು ಮತ್ತು ಹತ್ತು ವರ್ಷಗಳ ನಡುವೆ ಬಾಕಿ ಉಳಿದಿರುವ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶರ ಶಿಫಾರಸಿನ ಆಧಾರದಲ್ಲಿ ಅಥವಾ ಹೈಕೋರ್ಟ್ ನಿರ್ದೇಶನದ ಮೂಲಕ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಹೀಗೆ ವರ್ಗಾಯಿಸಿದ ಪ್ರತಿಯೊಂದು ಪ್ರಕರಣವನ್ನು ಸಾಧ್ಯವಾದಷ್ಟು ಮಟ್ಟಿಗೆ ವರ್ಗಾವಣೆಯಾದ ದಿನದಿಂದ 12 ತಿಂಗಳ ಒಳಗೆ ವಿಲೇವಾರಿ ಮಾಡಬೇಕು. ಈ ಬಗ್ಗೆ ಹೈಕೋರ್ಟ್ಗೆ ಪ್ರಗತಿ ವರದಿ ಸಲ್ಲಿಸಬೇಕು.
- ಮೇಲ್ವಿಚಾರಣಾ ಸಮಿತಿ ರಚನೆ: ಪ್ರತಿ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ, ಇಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ವಕೀಲರ ಸಂಘದ ಒಬ್ಬ ಪ್ರತಿನಿಧಿಯನ್ನು ಒಳಗೊಂಡ ‘ಜಿಲ್ಲಾ ನ್ಯಾಯಾಂಗ ಮೇಲ್ವಿಚಾರಣಾ ಸಮಿತಿ’ಯನ್ನು ಹೈಕೋರ್ಟ್ ಸ್ಥಾಪಿಸಬೇಕು ಎಂದೂ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
- ಸಂಡೂರಿನಲ್ಲಿ ಕೌಶಲ ವಿ.ವಿ ಸ್ಥಾಪನೆ: 30 ಲಕ್ಷ ಯುವಜನರಿಗೆ ಕೌಶಲ ತರಬೇತಿ ಗುರಿ
ಸಂದರ್ಭ: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
- ರಾಜ್ಯದ ಜನಸಂಖ್ಯೆಯ ಶೇಕಡ 60ಕ್ಕಿಂತ ಹೆಚ್ಚು ಜನರು 35 ವರ್ಷದ ಒಳಗೆ ಇದ್ದಾರೆ. ಯುವಪೀಳಿಗೆಯನ್ನು ಸರಿಯಾದ ಕೌಶಲ ಮತ್ತು ಆತ್ಮ ವಿಶ್ವಾಸದಿಂದ ಸಜ್ಜುಗೊಳಿಸ ಬೇಕಿದೆ.ನವೋದ್ಯಮ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ, ಈಗ ಭಾರತದ ಕೌಶಲ ರಾಜಧಾನಿ ಆಗಿರುವುದು ಹೆಮ್ಮೆಎಂದರು.
- ‘ಬಜೆಟ್ನಲ್ಲಿ ಘೋಷಿಸಿದ್ದ ಕರ್ನಾಟಕ ಕೌಶಲಾಭಿವೃದ್ಧಿ ನೀತಿ 2025-32 ಅನ್ನು ಕೌಶಲ ಶೃಂಗಸಭೆ–2025ರ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಏಳು ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ ₹4,432 ಕೋಟಿ ಅನುದಾನ ನೀಡಿ, ರಾಜ್ಯವನ್ನು ಕೌಶಲಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧ ವಾಗಿಸುವ ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ’ ಎಂದು ವಿವರಿಸಿದರು.
- 2032ರ ವೇಳೆಗೆ ಸುಮಾರು 30 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು. ಐಟಿಐಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇಕಡ 33ಕ್ಕೆ ಹೆಚ್ಚಿಸುವ ಹಾಗೂ ಅಂತರರಾಷ್ಟ್ರೀಯ ವಲಸೆ ಕೇಂದ್ರ ಮೂಲಕ ಜಾಗತಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು..
- ನೀಲನಕ್ಷೆ ಬಿಡುಗಡೆ: 2025–2032 ಹಾಗೂ ಕರ್ನಾಟಕ ವರ್ಕ್ಫೋರ್ಸ್ ಬ್ಲೂಪ್ರಿಂಟ್–2030 ಬಿಡುಗಡೆ ಮಾಡಲಾಯಿತು.
- ‘ಆಹಾರ ಸುರಕ್ಷತೆಗೆ ಮಾನದಂಡ ರೂಪಿಸಿ’
ಸಂದರ್ಭ: ‘ಬೀದಿ ಬದಿ ವ್ಯಾಪಾರಿಗಳು ಹಾಗೂ ದೊಡ್ಡ–ದೊಡ್ಡ ರೆಸ್ಟೋರೆಂಟ್ಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡ ನಿಯಮಗಳನ್ನು ಚಾಚೂ ತಪ್ಪದೆ ಅನುಸರಣೆ ಮಾಡುವ ಜತೆಗೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿಗಾ ಇರಿಸುವುದಕ್ಕೆ ಸೂಕ್ತ ಕಾರ್ಯ ವಿಧಾನವೊಂದನ್ನು ರೂಪಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
- ‘ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಸಂಘ’ದ ಗೌರವ ಕಾರ್ಯದರ್ಶಿ ನಾಗರಾಜ ಧನ್ಯ ಮತ್ತು ‘ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ’ದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.
ನ್ಯಾಯಪೀಠ ಹೇಳಿದ್ದೇನು?
- ‘ಮಾನವನ ಆಹಾರ ಸೇವನೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಸೇವಿಸುವ ಆಹಾರ ಆರೋಗ್ಯಕರವಾಗಿ ಇರಬೇಕು. ಆರೋಗ್ಯ ಕಾರಣಗಳಿಗಾಗಿ, ಪ್ರತಿಯೊಬ್ಬ ನಾಗರಿಕನೂ ತನ್ನ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
- ‘ಭಾರತದಲ್ಲಿ ಬೀದಿ ಬದಿ ಆಹಾರಕ್ಕೆ ಅದರದೇ ಆದ ಸಾಂಸ್ಕೃತಿಕ ಆಯಾಮವಿದೆ. ರಸ್ತೆಬದಿಯ ಸಾಮಾನ್ಯ ಅಂಗಡಿಗಳಿಂದ ಹಿಡಿದು ಆಧುನಿಕ ರೆಸ್ಟೋರೆಂಟ್ಗಳವರೆಗೆ, ಭಾರತೀಯ ಪಾಕಪದ್ಧತಿಯ ವಿಶೇಷ ಘಮಲು ಚೈತನ್ಯಶೀಲ ಅಭಿವೃದ್ಧಿ ಉದ್ಯಮದ ಸಂಕೇತವಾಗಿದೆ. ಆದ್ದರಿಂದ, ಈ ಎಲ್ಲ ಉದ್ಯಮಗಳ ವಾರ್ಷಿಕ ವಹಿವಾಟನ್ನು ಆರ್ಥಿಕ ಮಾಪಕದ ಮೂಲಕ ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ ನಿಯಮಗಳು-2011ರಡಿ ಸಣ್ಣ ಮತ್ತು ದೊಡ್ಡ ರೆಸ್ಟೋರೆಂಟ್ಗಳೆಂದು ಪ್ರತ್ಯೇಕಿಸುತ್ತವೆ ಎಂಬುದು ಗಮನಾರ್ಹ.’
- ‘ಮನುಷ್ಯರ ಆರೋಗ್ಯಕ್ಕೆ ಎದುರಾಗುವ ಅಪಾಯಗಳ ಬಗ್ಗೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ನಿಯಮಗಳ ಅಡಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ರೆಸ್ಟೋರೆಂಟ್ಗಳಿಗೆ ತ್ರಿಪಕ್ಷೀಯ ಮಾರ್ಗಸೂಚಿಯೊಂದನ್ನು ರೂಪಿಸಬೇಕು’ ಎಂದೂ ನ್ಯಾಯಪೀಠ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ.
- ‘ಅರ್ಜಿದಾರರು ಆಕ್ಷೇಪಿಸಿರುವ ನಿಬಂಧನೆಗಳನ್ನು ಅಸಾಂವಿಧಾನಿಕ ಎಂದು ನಿರ್ಣಯಿಸಿ ಅವುಗಳನ್ನು ರದ್ದುಗೊಳಿಸಲು ಯಾವುದೇ ಕಾರಣಗಳಿಲ್ಲ’ ಎಂದು ಸ್ಪಷ್ಟಪಡಿಸಿದೆ.
- ಏನಿದು ಅರ್ಜಿ?: ‘ಆಹಾರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ರೂಪಿಸಿ, ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು’ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಆಹಾರ ಸುರಕ್ಷಾ ಆಯುಕ್ತರು 2012ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದ್ದರು.
- ‘ಈ ಅಧಿಸೂಚನೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಂತ್ರಣ, (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು-2011, ಆಹಾರ ಸುರಕ್ಷತೆ ಮತ್ತು ಮಾನದಂಡಗಳು, ಆಹಾರ ಉತ್ಪನ್ನಗಳ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳ ನಿಯಮಗಳು-2011 ಮತ್ತು ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಕಾಯ್ದೆ-2006ರ 50 ರಿಂದ 65 ರವರೆಗಿನ ಕಲಂಗಳು ಅಸಾಂವಿಧಾನಿಕ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
- ‘ಮಾನದಂಡಗಳನ್ನು ಅನ್ವಯಿಸಲು ನಮಗೆ ಸಾಧ್ಯವಿಲ್ಲ’ ಎಂದು ಅರ್ಜಿದಾರರಾದ ಹೋಟೆಲ್ ಸಂಘಗಳು ಪ್ರತಿಪಾದಿಸಿದ್ದವು.
- ದೇಶದ ಆರನೇ ಕಲುಷಿತ ನಗರ ದೆಹಲಿ: ವರದಿ
ಸಂದರ್ಭ: ಅಕ್ಟೋಬರ್ನಲ್ಲಿ ಗಾಳಿಯು ಅತಿ ಹೆಚ್ಚು ಕಲುಷಿತಗೊಂಡ ದೇಶದ 10 ನಗರಗಳ ಪಟ್ಟಿಯಲ್ಲಿ ದೆಹಲಿ ಆರನೇ ಸ್ಥಾನ ಪಡೆದಿದ್ದು, ಗಾಜಿಯಾಬಾದ್ ಮತ್ತು ನೊಯಿಡಾ ನಂತರದ ಸ್ಥಾನದಲ್ಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.
- ಶಕ್ತಿ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರ್ಇಎ) ಬಿಡುಗಡೆ ಮಾಡಿದ ಅಕ್ಟೋಬರ್ ತಿಂಗಳ ವಾಯು ಗುಣಮಟ್ಟದ ವರದಿಯ ಪ್ರಕಾರ, ಹರಿಯಾಣದ ಧಾರುಹೆಡಾ ನಗರವು ಅಕ್ಟೋಬರ್ನಲ್ಲಿ ವಾಯು ಮಾಲಿನ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಅಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ 123 ಮೈಕ್ರೋ ಗ್ರಾಂನಷ್ಟು ಮಾಲಿನ್ಯಕಾರಕ ಕಣಗಳು ಪತ್ತೆಯಾಗಿದ್ದವು.
- ದೇಶದಾದ್ಯಂತ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇಂಡೋ–ಗಂಗಾ ಬಯಲು (ಐಜಿಪಿ), ವಿಶೇಷವಾಗಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್ಆರ್ಸಿ) ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
- ‘ಪೋಕ್ಸೊ’ ದುರ್ಬಳಕೆ: ‘ಸುಪ್ರೀಂ’ ಕಳವಳ
ಸಂದರ್ಭ: ವೈವಾಹಿಕ ಕಲಹ ಮತ್ತು ಹದಿಹರೆಯದವರ ನಡುವಿನ ಸಹಮತದ ಸಂಬಂಧಗಳ ಪ್ರಕರಣಗ ಳಲ್ಲಿ ‘ಪೋಕ್ಸೊ’ ಕಾಯ್ದೆ ದುರುಪಯೋಗ ಆಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
- ಈ ಸಂಬಂಧ ಕಾನೂನು ನಿಬಂಧನೆಗಳ ಕುರಿತು ಬಾಲಕರು ಮತ್ತು ಪುರುಷರಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್. ಮಹದೇವನ್ ಅವರ ಪೀಠ ಒತ್ತಿ ಹೇಳಿದೆ.
- ‘ದೇಶದಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಸುರಕ್ಷಿತ ವಾತಾವರಣ ಮೂಡಿಸಲು ‘ಪೋಕ್ಸೊ’ ಕಾಯ್ದೆ ಬಗ್ಗೆ ಜನರಲ್ಲಿ ಸಂವೇದನಾಶೀಲತೆ ಬೆಳೆಯುವಂತೆ ಮಾಡಬೇಕಿದೆ. ಅದಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು’ ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ಪೀಠ ನಡೆಸಿತು.
- ಎಸ್ಐಆರ್ ಪ್ರಕ್ರಿಯೆ ಆರಂಭ
ಸಂದರ್ಭ: 2002ರಲ್ಲಿ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯು ಎರಡು ವರ್ಷದವರೆಗೆ ನಡೆದಿತ್ತು. ಈ ಬಾರಿ ಒಂದೇ ತಿಂಗಳಿಗೆ ಇದನ್ನು ಮುಗಿಸಿಬಿಡುವ ಆತುರ ಆಯೋಗಕ್ಕೆ ಏಕೆ? ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ.
- ಮೂರು ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಚುನಾವಣಾ ಆಯೋಗವು ಆರಂಭಿಸಿದೆ.
- ಮತಗಟ್ಟೆ ಹಂತದ ಅಧಿಕಾರಿಗಳು ಮನೆ ಮನೆಗೆ ತೆರಳಿ ಸ್ವಯಂ ಮಾಹಿತಿ ಗಳನ್ನು ತುಂಬುವ ನಮೂನೆಗಳನ್ನು ವಿತರಿಸಿದರು.
- ಪಶ್ವಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಎಸ್ಐ ಆರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಎಸ್ಐಆರ್ ಅಂದರೆ ಮತ್ತೇನೂ ಅಲ್ಲ, ಅದು ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)’ ಇದ್ದಂತೆ’ ಎಂದಿರುವ ತಮಿಳುನಾಡು ಸರ್ಕಾರ, ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
- ಎಸ್ಐಆರ್ ಕುರಿತು ನಿರ್ಧಾರ ಕೈಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಆನ್ಲೈನ್ ಮೂಲಕ ಸರ್ವ ಪಕ್ಷ ಸಭೆ ಕರೆದಿದ್ದಾರೆ.
- ವ್ಯಕ್ತಿ ಆತ್ಮಹತ್ಯೆ:‘ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡ ಕಾರಣ, ದಾಖಲೆಗಳಲ್ಲಿ ಇರುವ ತನ್ನ ಹೆಸರಿನ ಕಾಗುಣಿತದಲ್ಲಿ ತಪ್ಪುಗಳಿವೆ ಎಂದು ಹೆದರಿ ಹೌರಾ ಜಿಲ್ಲೆಯ ಜಾಹಿರ್ ಮಲ್ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ’ ಎಂದು ಪೊಲೀಸರು ತಿಳಿಸಿದರು.
- ಪಿಎಲ್ಐ 3ನೇ ಸುತ್ತು ಶುರು
ಸಂದರ್ಭ: ಹೂಡಿಕೆ ಇನ್ನಷ್ಟು ಆಕರ್ಷಿಸುವುದು ಕೇಂದ್ರದ ಉದ್ದೇಶ: ವಿಶೇಷ ಬಳಕೆ ಉದ್ದೇಶದ ಉಕ್ಕು ತಯಾರಿಕಾ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರನೆಯ ಸುತ್ತಿನ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ.
- ದೇಶಿ ಉತ್ಪಾದನೆ ಹೆಚ್ಚಿಸುವುದು ಹಾಗೂ ಆಮದನ್ನು ತಗ್ಗಿಸುವುದು ಕೂಡ ಪಿಎಲ್ಐ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಯೋಜನೆಗೆ ಚಾಲನೆ ನೀಡಿದರು.
- ರಕ್ಷಣೆ, ವೈಮಾಂತರಿಕ್ಷ, ಇಂಧನ, ವಾಹನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಳಕೆ ಮಾಡುವ ‘ವಿಶೇಷ ಬಳಕೆ ಉದ್ದೇಶದ ಉಕ್ಕು’ ತಯಾರಿಕಾ ವಲಯಕ್ಕೆ ಸಂಬಂಧಿಸಿದ ಪಿಎಲ್ಐ ಯೋಜನೆಗೆ ಕೇಂದ್ರ ಸಚಿವ ಸಂಪುಟವು 2021ರ ಜುಲೈನಲ್ಲಿ ಒಪ್ಪಿಗೆ ನೀಡಿತ್ತು. ಇದಕ್ಕೆ ₹6,322 ಕೋಟಿ ಅನುದಾನ ನಿಗದಿ ಮಾಡಲಾಗಿತ್ತು.
- ಈ ಯೋಜನೆಯು ಮೊದಲ ಎರಡು ಸುತ್ತುಗಳಲ್ಲಿ ಇದುವರೆಗೆ ₹43,874 ಕೋಟಿ ಹೂಡಿಕೆಯನ್ನು ಆಕರ್ಷಿಸಿದೆ. ಈ ಪೈಕಿ ₹22,973 ಕೋಟಿ ಈಗಾಗಲೇ ಹೂಡಿಕೆ ಆಗಿದೆ. ಅಲ್ಲದೆ, ಮೊದಲ ಎರಡು ಸುತ್ತುಗಳ ಮೂಲಕ 13 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ.
- ‘ಮೊದಲ ಎರಡು ಸುತ್ತುಗಳಲ್ಲಿ ದೊರೆತ ಸ್ಪಂದನೆಯು ಉತ್ತೇಜನಕಾರಿ ಯಾಗಿದೆ. ಆ ಯಶಸ್ಸು ಸುಧಾರಣೆ ಆಧಾರಿತ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ನೀತಿಗಳ ಶಕ್ತಿಯನ್ನು ಹೇಳುತ್ತಿದೆ’ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
- ‘ಈ ಯೋಜನೆಯ ಮೂಲಕ ನಾವು ಭಾರತದಲ್ಲಿ ಉಕ್ಕು ತಯಾರಿಕೆ ಮಾಡುವುದಕ್ಕೆ ಮಾತ್ರ ಗಮನ ನೀಡುತ್ತಿಲ್ಲ. ಬದಲಿಗೆ, ಭಾರತದಿಂದ ಜಗತ್ತಿಗೆ ಉಕ್ಕು ಪೂರೈಕೆ ಮಾಡುವತ್ತಲೂ ಆಲೋಚನೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.
- ಯೋಜನೆಯ ಮೂರನೆಯ ಸುತ್ತು ಹೊಸ ಉದ್ದಿಮೆಗಳಿಗೆ ಹಾಗೂ ಈಗಾಗಲೇ ಇರುವ ಉದ್ದಿಮೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
- ಸುಡಾನ್: ಕದನ ವಿರಾಮಕ್ಕೆ ಆಗ್ರಹ
ಸಂದರ್ಭ: ಸುಡಾನ್ನಲ್ಲಿನ ಆಂತರಿಕ ಸಂಘರ್ಷ ಶಮನಗೊಳಿಸಲು ತಕ್ಷಣವೇ ಕದನ ವಿರಾಮ ಜಾರಿಗೊಳಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಆಗ್ರಹಿಸಿದ್ದಾರೆ.
- ಎಲ್ ಫಾಶರ್ನ ಡಾರ್ಫರ್ ನಗರವನ್ನು ಅರೆಸೈನಿಕ ಪಡೆಗಳು ವಶಪಡಿಸಿಕೊಂಡ ಬೆನ್ನಿಗೆ, ‘ಸುಡಾನ್ನಲ್ಲಿನ ಆಂತರಿಕ ಸಂಘರ್ಷವು ಯಾರ ನಿಯಂತ್ರಣಕ್ಕೂ ಸಿಗದಾಗಿದೆ’ ಎಂದಿದ್ದಾರೆ.
- ಕತಾರ್ನಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಮಾತನಾಡಿದ ಗುಟೆರೆಸ್, ‘ಗಂಭೀರ ಎಚ್ಚರಿಕೆ ನೀಡಿದ್ದರೂ ಎಲ್ ಫಾಶರ್ ವಶಪಡಿಸಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
- ಸುಡಾನ್ನಲ್ಲಿನ ಆಂತರಿಕ ಸಂಘರ್ಷವು ಎರಡು ವರ್ಷದಿಂದಲೂ ಜಗತ್ತಿನ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾಗಿದೆ.
- ಈ ಸಂಘರ್ಷದಲ್ಲಿ ಅಪಾರ ಸಂಖ್ಯೆಯ ನಾಗರಿಕರು ಸಿಲುಕಿಕೊಂಡಿದ್ದು, ತುರ್ತಾಗಿ ಕದನ ವಿರಾಮ ಒಪ್ಪಂದ ಏರ್ಪಡಬೇಕು ಎಂದು ಹೇಳಿದ್ದಾರೆ.
- ‘ಬ್ಯಾಂಕ್ ಖಾಸಗೀಕರಣದಿಂದ ಧಕ್ಕೆ ಇಲ್ಲ’
ಸಂದರ್ಭ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಖಾಸಗೀಕರಣದಿಂದ ಹಣಕಾಸಿನ ಒಳಗೊಳ್ಳುವಿಕೆಯ ಉದ್ದೇಶಕ್ಕೆ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ಆಗುತ್ತದೆ ಎಂಬ ಆತಂಕದಲ್ಲಿ ಹುರುಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
- 1969ರಲ್ಲಿ ನಡೆದ ಬ್ಯಾಂಕ್ಗಳ ರಾಷ್ಟ್ರೀಕರಣ ಪ್ರಕ್ರಿಯೆಯು ಹಣಕಾಸಿನ ಒಳಗೊಳ್ಳುವಿಕೆಯ ವಿಚಾರದಲ್ಲಿ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಎಂದು ಅವರು ಹೇಳಿದರು.
- ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರೀಕರಣದಿಂದಾಗಿ ಆದ್ಯತಾ ವಲಯಗಳಿಗೆ ಸಾಲ ನೀಡುವ ವಿಚಾರದಲ್ಲಿ, ಸರ್ಕಾರದ ಯೋಜನೆಗಳ ವಿಚಾರದಲ್ಲಿ ಅನುಕೂಲ ಆಗಿದ್ದು ನಿಜ. ಆದರೆ ಸರ್ಕಾರದ ನಿಯಂತ್ರಣದ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ವೃತ್ತಿಪರತೆ ಯನ್ನು ಕಳೆದುಕೊಂಡವು’ ಎಂದು ಹೇಳಿದರು.
- ‘ನಾವು ಬ್ಯಾಂಕ್ಗಳನ್ನು ವೃತ್ತಿಪರವಾಗಿಸಿದ ನಂತರದಲ್ಲಿ’ ರಾಷ್ಟ್ರೀಕರಣದ ಉದ್ದೇಶಗಳು ‘ಬಹಳ ಚೆಂದವಾಗಿ ಅನುಷ್ಠಾನ ಗೊಳ್ಳುತ್ತಿವೆ’ ಎಂದು ನಿರ್ಮಲಾ ವಿವರಿಸಿದರು. ‘ಬ್ಯಾಂಕ್ಗಳನ್ನು ವೃತ್ತಿಪರವಾಗಿ ಸಲು ಯತ್ನಿಸಿದಾಗ, ಅಥವಾ ಅವುಗಳ ಖಾಸಗೀಕರಣದ ಉದ್ದೇಶ ಹೊಂದಿದಾಗ, ಬ್ಯಾಂಕ್ಗಳನ್ನು ಎಲ್ಲರಿಗೂ ತೆರೆದು ಕೊಳ್ಳುವಂತೆ ಮಾಡುವ ಉದ್ದೇಶವು ಸೋಲುತ್ತದೆ ಎಂಬ ಗ್ರಹಿಕೆ ತಪ್ಪು’ ಎಂದು ವಿವರಿಸಿದರು.
- ಬ್ಯಾಂಕ್ಗಳು ವೃತ್ತಿಪರವಾಗಿ ನಡೆಯಲು ಅವಕಾಶ ಕಲ್ಪಿಸಿದಾಗ, ಬ್ಯಾಂಕ್ಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ಅಲ್ಲಿನ ಆಡಳಿತ ಮಂಡಳಿಗಳೇ ತೆಗೆದುಕೊಂಡಾಗ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಬ್ಯಾಂಕಿನ ಹಿತಾಸಕ್ತಿಗಳು ಈಡೇರುತ್ತವೆ ಎಂದು ಹೇಳಿದರು.
- ಬ್ಯಾಂಕ್ ಖಾಸಗೀಕರಣದ ಭಾಗವಾಗಿ ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್ನ ಶೇ 51ರಷ್ಟು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್ಐಸಿ) 2019ರಲ್ಲಿ ಮಾರಾಟ ಮಾಡಿದೆ.
- ಮಹಿಳೆಯರ ಏಕದಿನ ರ್ಯಾಂಕಿಂಗ್ ಅಗ್ರಸ್ಥಾನ ಕಳೆದುಕೊಂಡ ಮಂದಾನ
ಸಂದರ್ಭ: ಭಾರತ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಜೆಮಿಮಾ ರಾಡ್ರಿಗಸ್ ಅವರು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.
- ಮಹಿಳಾ ಏಕದಿನ ವಿಶ್ವಕಪ್ನ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಅಮೋಘ ಶತಕ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಎರಡು ಸ್ಥಾನಗಳ ಬಡ್ತಿ ಪಡೆದು, ಮಂದಾನ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
- ಟೂರ್ನಿಯಲ್ಲಿ ದಾಖಲೆಯ 571 ರನ್ ಗಳಿಸಿದ ವೋಲ್ವಾರ್ಟ್ ಅವರು ವೃತ್ತಿಜೀವನದಲ್ಲೇ ಗರಿಷ್ಠ ರೇಟಿಂಗ್ (814) ಸಂಪಾದಿಸಿದ್ದಾರೆ. ಮಂದಾನ ಎರಡನೇ ಸ್ಥಾನ ಸ್ಥಾನಕ್ಕೆ ಸರಿದಿದ್ದಾರೆ.
- ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ದಾಖಲಿಸಿದ್ದ ಜೆಮಿಮಾ ಒಂಬತ್ತು ಸ್ಥಾನಗಳ ಬಡ್ತಿ ಪಡೆದು 10ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕಿ ಹರ್ಮನ್ಪ್ರೀತ್ ಕೌರ್ ನಾಲ್ಕು ಸ್ಥಾನಗಳ ಬಡ್ತಿಯೊಂದಿಗೆ 14ನೇ ಸ್ಥಾನದಲ್ಲಿದ್ದಾರೆ.
- ಬೌಲರ್ಗಳ ರ್ಯಾಂಕಿಂಗ್ನಲ್ಲಿ ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೊನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ದೀಪ್ತಿ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ.
- ಐಸಿಸಿ ತಂಡದಲ್ಲಿ ಭಾರತದ ಮೂವರು
ಸಂದರ್ಭ: ಭಾರತ ತಂಡದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
- ಭಾರತದ ತಂಡದ ಜಯದಲ್ಲಿ ಈ ಮೂವರೂ ಉತ್ತಮ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನು ತಂಡಕ್ಕೆ ಪರಿಗಣಿಸ ಲಾಗಿದೆ.
- ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡದ ಲಾರಾ ವೊಲ್ವಾರ್ಟ್ ಅವರನ್ನು ಈ ತಂಡಕ್ಕೆ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನದ ಸಿದ್ರಾ ನವಾಜ್ ಅವರನ್ನು ವಿಕೆಟ್ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
- ತಂಡ: ಲಾರಾ ವೊಲ್ವಾರ್ಟ್ (ನಾಯಕಿ/ದಕ್ಷಿಣ ಆಫ್ರಿಕಾ), ಸ್ಮೃತಿ ಮಂದಾನ (ಭಾರತ), ಜೆಮಿಮಾ ರಾಡ್ರಿಗಸ್ (ಭಾರತ), ಮರೈಝಾನ್ ಕಾಪ್ (ದಕ್ಷಿಣ ಆಫ್ರಿಕಾ), ಆ್ಯಷ್ಲೆ ಗಾರ್ಡನರ್ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ಅನಾಬೆಲ್ ಸದರ್ಲೆಂಡ್ (ಆಸ್ಟ್ರೇಲಿಯಾ), ನದೀನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ), ಸಿದ್ರಾ ನವಾಜ್ (ವಿಕೆಟ್ಕೀಪರ್/ ಪಾಕಿಸ್ತಾನ), ಅಲನಾ ಕಿಂಗ್ (ಆಸ್ಟ್ರೇಲಿಯಾ), ಸೋಫಿ ಎಕ್ಲೆಸ್ಟೊನ್ (ಇಂಗ್ಲೆಂಡ್), ನ್ಯಾಟ್ ಶಿವರ್ ಬ್ರಂಟ್ (ಇಂಗ್ಲೆಂಡ್/12ನೇ ಆಟಗಾರ್ತಿ).
- ಪ್ರಧಾನಿ ಭೇಟಿ ಇಂದು: ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿಯರು ನರೇಂದ್ರ ಮೋದಿ ಅವರನ್ನು ಭೇಟಿ ಯಾಗಲಿದ್ದಾರೆ. ತಂಡದ ಸದಸ್ಯೆಯರು ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ.
- ನವಿ ಮುಂಬೈನಲ್ಲಿ ನಡೆದಿದ್ದ ಫೈನಲ್ನಲ್ಲಿ ಹರ್ಮನ್ಪ್ರೀತ್ ಬಳಗವು ಜಯಿಸಿ ಪ್ರಶಸ್ತಿ ಗಳಿಸಿತ್ತು.
- 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೀರಾಬಾಯಿ ತೂಕ ವಿಭಾಗಕ್ಕೆ ಕೊಕ್
ಸಂದರ್ಭ: ಭಾರತದ ವೇಟ್ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಅವರ ತೂಕ ವಿಭಾಗವನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ತೆಗೆದುಹಾಕಲಾಗಿದೆ. ಅವರು ಮುಂದಿನ ಕ್ರೀಡೆಗಳಲ್ಲಿ 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ.
- 31 ವರ್ಷ ವಯಸ್ಸಿನ ಚಾನು 2020ರ ಟೋಕಿಯೊ ಕ್ರೀಡೆಗಳ 49 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದರು. ಆದರೆ 2028ರ ಕ್ರೀಡೆಗಳ ವೇಟ್ಲಿಫ್ಟಿಂಗ್ ಸ್ಪರ್ಧೆಗಳು 53 ಕೆ.ಜಿ. ತೂಕ ವಿಭಾಗದಿಂದ ಆರಂಭವಾಗಲಿವೆ. ವೇಟ್ಲಿಫ್ಟಿಂಗ್ನಲ್ಲಿ ಒಟ್ಟು ಸ್ಪರ್ಧೆಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧರಿಸಿದೆ.
- 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿ ಸುವುದರಿಂದ ಚಾನು ಅವರಿಗೆ ಅನು ಕೂಲವಾಗಲಿದೆ. ಆದರೆ ಮಣಿಪುರದ ಸ್ಪರ್ಧಿಯು ಮುಂದಿನ ವರ್ಷದ ಏಷ್ಯನ್ ಗೇಮ್ಸ್ವರೆಗೆ ಈ ಹಿಂದಿನಂತೆ 49 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲಿದ್ದಾರೆ ಎಂದು ರಾಷ್ಟ್ರೀಯ ಮುಖ್ಯ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.
- ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಆರು ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ವರ್ಷ ಎರಡನೇ ಬಾರಿ ಅಂತರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಷನ್ ತೂಕ ವಿಭಾಗಗಳಲ್ಲಿ ಬದಲಾವಣೆ ತಂದಿದೆ. ಈ ಹಿಂದಿನ ಪಟ್ಟಿಯ ಪ್ರಕಾರ ಅವರು 48 ಕೆ.ಜಿ. ವಿಭಾಗದಲ್ಲಿ (49 ಕೆ.ಜಿ. ತೆಗೆದುಹಾಕಿದ ಕಾರಣ) ಕಣಕ್ಕಿಳಿಯಲು ಯೋಚಿಸಿದ್ದರು.
- 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಆಗುತ್ತಿರುವ ದೈಹಿಕ ಸವಾಲುಗಳ ಬಗ್ಗೆ ಚಾನು ಹಲವು ಬಾರಿ ಮಾತನಾಡಿದ್ದರು. ‘ಏಷ್ಯನ್ ಗೇಮ್ಸ್ ನಂತರ 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸಲು ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ’ ಎಂದು ಶರ್ಮಾ ಹೇಳಿದ್ದಾರೆ.