Sat. Feb 7th, 2026

  • ರಷ್ಯಾದಿಂದ ಭಾರತದ ತೈಲ ಖರೀದಿ ಶೀಘ್ರದಲ್ಲೇ ಸ್ಥಗಿತ

ಸಂದರ್ಭ: ಭಾರತವು ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ಮತ್ತೆ ಹೇಳಿದ್ದಾರೆ.

  • ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ಕಚ್ಚಾತೈಲ ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಮಯ ಬೇಕಾಗುತ್ತದೆ’ ಎಂದೂ ಹೇಳಿದ್ದಾರೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಗೆ ಸಂಬಂಧಿಸಿ ಟ್ರಂಪ್‌ ಅವರ ಹೇಳಿಕೆಗೆ ಭಾರತ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ,‘ಈ ಪ್ರಕ್ರಿಯೆ ನಡೆಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಈ ವಿಚಾರದಲ್ಲಿ ಚೀನಾದ ಮನವೊಲಿಸಲು ಯತ್ನಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
  • ರಷ್ಯಾದಿಂದ ಚೀನಾ ಹಾಗೂ ಭಾರತವು ದೊಡ್ಡ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸುತ್ತಿರುವ ರಾಷ್ಟ್ರಗಳಾಗಿವೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್‌ ವಿರುದ್ಧದ ಸಂಘರ್ಷಕ್ಕೆ ಭಾರತವು ಪರೋಕ್ಷವಾಗಿ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ.

ವ್ಯಾಪಾರ: ಮೋದಿ, ಟ್ರಂಪ್ಮಾತುಕತೆ

  • ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚರ್ಚಿಸಿದ್ದಾರೆ.
  • ಸುಂಕ ಹೇರಿಕೆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿರುವ ಮಧ್ಯೆಯೇ, ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ದೀಪ ಬೆಳಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಮೋದಿ ಅವರೊಂದಿಗೆ ವ್ಯಾಪಾರ ಕುರಿತು ಮಾತನಾಡಿರುವೆ’ ಎಂದು ಹೇಳಿದ್ದಾರೆ.

ಹಿನ್ನೆಲೆ

  • ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆಯ ದೇಶವಾಗಿದೆ. ಇದು ದಿನಕ್ಕೆ ಸುಮಾರು 5.5 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಬಳಕೆಯಲ್ಲಿ 87 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ.
  • ರಷ್ಯಾ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕರು ಮತ್ತು ರಫ್ತುದಾರರಲ್ಲಿ ಒಂದಾಗಿದೆ.

ತೈಲ ವ್ಯಾಪಾರ

  • ಸಾಂಪ್ರದಾಯಿಕವಾಗಿ, ಭಾರತವು ತನ್ನ ಎಲ್ಲಾ ಕಚ್ಚಾ ತೈಲದ ಮೂರನೇ ಎರಡರಷ್ಟು ಭಾಗವನ್ನು ಮಧ್ಯಪ್ರಾಚ್ಯ ದೇಶಗಳಾದ ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇಯಿಂದ ಖರೀದಿಸಿತು.
  • ಪಾಶ್ಚಿಮಾತ್ಯ ದೇಶಗಳು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಮತ್ತು ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ಅದರ ಪೂರೈಕೆಯನ್ನು ದೂರವಿಟ್ಟ ನಂತರ ಭಾರತವು ರಿಯಾಯಿತಿಯಲ್ಲಿ ಮಾರಾಟವಾದ ರಷ್ಯಾದ ತೈಲವನ್ನು ಖರೀದಿಸಲು ತಿರುಗಿತು.
  • ಪರಿಣಾಮವಾಗಿ, 2019-20 (FY20) ನಲ್ಲಿ ಒಟ್ಟು ತೈಲ ಆಮದುಗಳಲ್ಲಿ ಕೇವಲ 1.7 ಪ್ರತಿಶತದಷ್ಟು ಪಾಲನ್ನು ಹೊಂದಿದ್ದ ರಷ್ಯಾದ ಪಾಲು 2023-24 ರಲ್ಲಿ 40 ಪ್ರತಿಶತಕ್ಕೆ ಏರಿತು ಮತ್ತು ಈಗ ಅದು ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆದಾರ.
  • ಪರಿಮಾಣದ ವಿಷಯದಲ್ಲಿ, ಭಾರತವು FY25 ರಲ್ಲಿ ರಷ್ಯಾದಿಂದ 88 ಮಿಲಿಯನ್ ಟನ್ಗಳನ್ನು ಆಮದು ಮಾಡಿಕೊಂಡಿತು, ಇದು ಒಟ್ಟು 245 ಮಿಲಿಯನ್ ಟನ್ಗಳ ಸಾಗಣೆಯಾಗಿದೆ.
  • ರಷ್ಯಾದ ತೈಲ ಖರೀದಿಗೆ ಚಾಲನೆ ನೀಡಲು ಪ್ರಮುಖ ಕಾರಣವೆಂದರೆ ಅಂತರರಾಷ್ಟ್ರೀಯವಾಗಿ ವ್ಯಾಪಾರ ಮಾಡುವ ಇತರ ಕಚ್ಚಾ ತೈಲಕ್ಕೆ ಹೋಲಿಸಿದರೆ ರಿಯಾಯಿತಿಗಳು. ರಿಯಾಯಿತಿಗಳು 2023 ರಲ್ಲಿ ಪ್ರತಿ ಬ್ಯಾರೆಲ್ಗೆ USD 19-20 ಕ್ಕೆ ತಲುಪಿದವು, ಆದರೆ ಅಂದಿನಿಂದ ಪ್ರತಿ ಬ್ಯಾರೆಲ್ಗೆ USD 3.5-5 ಕ್ಕೆ ಕುಗ್ಗಿದೆ.

ರಿಲಯನ್ಸ್ಇಂಡಸ್ಟ್ರೀಸ್ಲಿಮಿಟೆಡ್

  • ರಷ್ಯಾದ ತೈಲ ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ಹೇರಿರುವ ಪರಿಣಾಮವಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವ ಆಲೋಚನೆಯಲ್ಲಿದೆ ಎಂದು ಮೂಲಗಳು ಹೇಳಿವೆ.
  • ರಷ್ಯಾ ಕಂಪನಿಗಳ ಮೇಲಿನ ನಿರ್ಬಂಧದ ಪರಿಣಾಮಗಳ ಬಗ್ಗೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಶೀಲನೆ ನಡೆಸುತ್ತಿವೆ. ಆದರೆ ಅವು ಬಹುಪಾಲು ಕಚ್ಚಾ ತೈಲವನ್ನು ಯುರೋಪಿನ ವರ್ತಕರಿಂದ (ಇವರ ಮೇಲೆ ನಿರ್ಬಂಧ ಇಲ್ಲ) ಖರೀದಿಸುತ್ತಿವೆ. ಹೀಗಾಗಿ ಅವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ತಕ್ಷಣಕ್ಕೆ ನಿಲ್ಲಿಸಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
  • ರಿಲಯನ್ಸ್ ಕಂಪನಿಯು ರಷ್ಯಾದಿಂದ ಪ್ರತಿದಿನ ಸರಿಸುಮಾರು 8.5 ಲಕ್ಷ ಬ್ಯಾರಲ್‌ ಕಚ್ಚಾ ತೈಲವನ್ನು ರಿಯಾಯಿತಿ ಬೆಲೆಗೆ ಖರೀದಿಸಿದೆ. ಈ ಕಚ್ಚಾ ತೈಲವನ್ನು ಸಂಸ್ಕರಿಸಿ ಅದು ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ಅನ್ನು ಅಮೆರಿಕ, ಯುರೋಪಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಉತ್ತಮ ಲಾಭ ಗಳಿಸುತ್ತಿದೆ.
  • ಆದರೆ ಅಮೆರಿಕವು ರಷ್ಯಾದ ರೊಸ್ನೆಫ್ಟ್‌ ಮತ್ತು ಲುಕಾಯಿಲ್‌ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿರುವ ಪರಿಣಾಮವಾಗಿ, ರಿಲಯನ್ಸ್‌ನ ವಹಿವಾಟಿನ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರಷ್ಯಾದ ಈ ಎರಡು ಕಂಪನಿಗಳಿಂದ ಕಚ್ಚಾ ತೈಲ ಖರೀದಿಸುವವರು ಸಿವಿಲ್‌ ಹಾಗೂ ಕ್ರಿಮಿನಲ್ ಕ್ರಮ ಎದುರಿಸಬೇಕಾಗುತ್ತದೆ.
  • ರಿಲಯನ್ಸ್ ಕಂಪನಿಯು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳು ವುದನ್ನು ಕಡಿಮೆ ಮಾಡುವ, ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ರಿಲಯನ್ಸ್‌ ಕಂಪನಿಯು ಅಮೆರಿಕದಲ್ಲಿ ಹೆಚ್ಚಿನ ವಾಣಿಜ್ಯ ಹಿತಾಸಕ್ತಿ ಹೊಂದಿದೆ. ಈ ವಿಚಾರವಾಗಿ ರಿಲಯನ್ಸ್‌ನಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
  • ರಿಲಯನ್ಸ್‌ ಕಂಪನಿಯು ಕಚ್ಚಾ ತೈಲ ಖರೀದಿಯನ್ನು ಇತರ ಕಡೆಗಳಿಂದ ಮಾಡುವ ಪ್ರಕ್ರಿಯೆ ಶುರುಮಾಡಿದೆ ಎಂದು ಗೊತ್ತಾಗಿದೆ. ರೊಸ್ನೆಫ್ಟ್‌ ಹಾಗೂ ಲುಕಾಯಿಲ್‌ ಕಂಪನಿಗಳ ಜೊತೆಗಿನ ವಹಿವಾಟನ್ನು ನವೆಂಬರ್‌ 21ಕ್ಕೆ ಮೊದಲು ನಿಲ್ಲಿಸಬೇಕಿದೆ.
  • ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಯಾರಾ ಎನರ್ಜಿ (ಇದಕ್ಕೆ ರೊಸ್ನೆಫ್ಟ್‌ ಹೂಡಿಕೆ ಇದೆ) ಕಂಪನಿ ಕೂಡ ಅಮೆರಿಕ ಹೇರಿರುವ ನಿರ್ಬಂಧದ ಬಿಸಿ ಅನುಭವಿಸಬೇಕಿದೆ.
  • ರಷ್ಯಾದ ಕಚ್ಚಾ ತೈಲ ಸಂಸ್ಕರಿಸಿ ಸಿದ್ಧಪಡಿಸಿದ ಇಂಧನ ಆಮದನ್ನು ಜನವರಿ 21ರಿಂದ ಅನ್ವಯವಾಗುವಂತೆ ಐರೋಪ್ಯ ಒಕ್ಕೂಟ ನಿರ್ಬಂಧಿಸಿದೆ. ರಿಲಯನ್ಸ್‌ ಮತ್ತು ಎಂಆರ್‌ಪಿಎಲ್‌ ಐರೋಪ್ಯ ಒಕ್ಕೂಟಕ್ಕೆ ಇಂಧನ ರಫ್ತು ಮಾಡಬೇಕು ಎಂದಾರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಕಂಪನಿಗಳಿಂದ ಖರೀದಿ ಅಬಾಧಿತ?

  • ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಮಧ್ಯವರ್ತಿ ವರ್ತಕರ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ಸದ್ಯಕ್ಕಂತೂ ಮುಂದುವರಿಸುವ ನಿರೀಕ್ಷೆ ಇದೆ.
  • ಸರ್ಕಾರಿ ಸ್ವಾಮ್ಯದ ಕಂಪನಿಗಳು ರೊಸ್ನೆಫ್ಟ್‌ ಅಥವಾ ಲುಕಾಯಿಲ್‌ ಕಂಪನಿ ಜೊತೆ ಒಪ್ಪಂದ ಹೊಂದಿಲ್ಲ. ಅವು ಟೆಂಡರ್‌ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ. ಈ ಟೆಂಡರ್‌ ಪ್ರಕ್ರಿಯೆಗಳಲ್ಲಿ ಯುರೋಪಿನ ಅಥವಾ ದುಬೈ, ಸಿಂಗಪುರ ಮೂಲದ ತೈಲ ವ್ಯಾಪಾರಿಗಳು ಇರುತ್ತಾರೆ. ನಿರ್ಬಂಧದ ವ್ಯಾಪ್ತಿಯಲ್ಲಿ ಈ ವ್ಯಾಪಾರಿಗಳು ಇಲ್ಲ.
  • ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ, ಎಂಆರ್‌ಪಿಎಲ್‌ ಹಾಗೂ ಎಚ್‌ಪಿಸಿಎಲ್‌–ಮಿತ್ತಲ್‌ ಎನರ್ಜಿ ಕಂಪನಿಗಳು ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ.
  • ಕೆಲವು ವರ್ತಕರು ರಷ್ಯಾದ ಕಚ್ಚಾ ತೈಲ ಖರೀದಿಸಲು ಹಿಂದೇಟು ಹಾಕಿದರೂ, ದುಬೈನಲ್ಲಿ ಹೊಸ ವರ್ತಕರನ್ನು ರಾತ್ರೋರಾತ್ರಿ ನೋಂದಾಯಿಸುವ ಶಕ್ತಿ ರಷ್ಯಾಕ್ಕೆ ಇದೆ. ಈ ವರ್ತಕರು ರಷ್ಯಾದ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಿ, ಅದನ್ನು ಭಾರತ ಮತ್ತು ಚೀನಾಕ್ಕೆ ಮಾರಾಟ ಮಾಡಬಲ್ಲರು ಎಂದು ಮೂಲಗಳು ವಿವರಿಸಿವೆ.
  • ತೈಲ ಮಾರುಕಟ್ಟೆಯು ಅಮೆರಿಕದ ನಿರ್ಬಂಧದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಿರ್ಬಂಧಗಳು ಬಹಳ ಕಠಿಣ ಎಂದಾಗಿದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 5ರಿಂದ 10 ಡಾಲರ್‌ನಷ್ಟು ಹೆಚ್ಚಾಗುತ್ತಿತ್ತು. ಆದರೆ 2 ಡಾಲರ್‌ನಷ್ಟೇ ಹೆಚ್ಚಳ ಆಗಿದೆ. ಅಂದರೆ, ರಷ್ಯಾದಿಂದ ಸಿಗುವ ಅಷ್ಟೂ ಕಚ್ಚಾ ತೈಲ ಇನ್ನು ಮುಂದೆ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿ ಇಲ್ಲ ಎಂದು ಮೂಲವೊಂದು ವಿವರಿಸಿದೆ.
  • ಹೊಸ ಸಿಜೆಐ ಪ್ರಕ್ರಿಯೆಗೆ ಚಾಲನೆ

ಸಂದರ್ಭ: ಇದೇ ನವೆಂಬರ್‌ 23ರಂದು ಸುಪ್ರೀಂ ಕೋರ್ಟ್ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದಿನ ಸಿಜೆಐ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.

  • ತಮ್ಮ ಉತ್ತರಾಧಿಕಾರಿ ಯಾರಾಗಬೇಕು ಎಂಬುದರ ಕುರಿತು ಹಾಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಜ್ಞಾಪನಾಪತ್ರ, ದಾಖಲಾತಿಗಳನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಬೇಕು.
  • ಸುಪ್ರೀಂ ಕೋರ್ಟ್‌ನಲ್ಲಿರುವ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಹಾಲಿ ಸಿಜೆಐ ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ. ತನ್ನ ಉತ್ತರಾಧಿಕಾರಿಯ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಸಮಯದಲ್ಲಿ ಶಿಫಾರಸು ಕೋರಲಿದ್ದಾರೆ ಎಂದು ಕಾನೂನು ಸಚಿವಾಯವು ತಿಳಿಸಿದೆ.
  • ಹಾಲಿ ಸಿಜೆಐ ನಿವೃತ್ತಿಯಾಗುವ ತಿಂಗಳು ಮುನ್ನ ಈ ಪತ್ರವನ್ನು ಕಳುಹಿಸುವ ಪದ್ಧತಿಯಿದೆ.
  • ಗವಾಯಿ ನಂತರ ಸೂರ್ಯಕಾಂತ್ಅವರೇ ಸುಪ್ರೀಂ ಕೋರ್ಟ್ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆ ಅಲಂಕರಿಸುವ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
  • ಸೂರ್ಯಕಾಂತ್ಅವರು ನವೆಂಬರ್‌ 24ರಂದು ಮುಂದಿನ ಸಿಜೆಐ ಆಗಿ ನೇಮಕಗೊಂಡರೆ, ಮುಂದಿನ 15 ತಿಂಗಳು ಅಥವಾ 2027 ಫೆಬ್ರುವರಿ 9 ತನಕ ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ.
  • ಮರಣದಂಡನೆ ಯಾವುದುಮಾನವೀಯವಿಧಾನ?

ಮರಣದಂಡನೆಯನ್ನು ಅನೇಕ ದೇಶಗಳಲ್ಲಿ ರದ್ದುಪಡಿಸಲಾಗಿದೆ. ಭಾರತದಲ್ಲಿ ವಿರಳ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ವಿಧಿಸಲಾಗುತ್ತಿದೆ. ಈ ಶಿಕ್ಷೆ ವಿಧಿಸಲ್ಪಟ್ಟವರ ಪ್ರಾಣಹರಣವನ್ನು ಯಾವ ವಿಧಾನದ ಮೂಲಕ ಮಾಡಬೇಕು ಎನ್ನುವುದು ದೇಶದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ.   

ಅಪರಾಧಿಗಳಿಗೆ ನೇಣು ಹಾಕುವುದು ಅತ್ಯಂತ ಕ್ರೂರ ಹಾಗೂ ಅನಾಗರಿಕ ಪದ್ಧತಿ. ಇದು ಹಳೆಯ ಹಾಗೂ ಅತ್ಯಂತ ಯಾತನಾದಾಯಕ ಪದ್ಧತಿಯಾಗಿದೆ ಎನ್ನುವ ಆಕ್ಷೇಪಣೆಗಳು ಹಿಂದೆಯೇ ಕೇಳಿಬಂದಿದ್ದವು. ಗಲ್ಲಿಗೇರಿಸುವಾಗ ಕುತ್ತಿಗೆಯ ಮೂಳೆ ಮುರಿಯುವುದು, ಕಣ್ಣು ಗುಡ್ಡೆ ಹೊರಬರುವುದು, ನಾಲಗೆ ಹೊರಚಾಚಿಕೊಂಡಿರುವುದು, ದೇಹದ ಭಾಗಗಳು ನೋಡಲಾಗದಂತೆ ವಿರೂಪಗೊಳ್ಳುವುದು ವರದಿಯಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧಿಗಳು ಮಲ, ಮೂತ್ರ ವಿಸರ್ಜನೆಯನ್ನೂ ಮಾಡಿಕೊಳ್ಳುತ್ತಾರೆ. ಈ ವಿಧಾನದಲ್ಲಿ ಅಪರಾಧಿಯ ಪ್ರಾಣ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕ್ಷಿಪ್ರವಾದ, ಕಡಿಮೆ ಯಾತನೆಯ ಮಾರ್ಗಗಳನ್ನು ಹುಡುಕಬೇಕು; ವಿಷದ ಚುಚ್ಚುಮದ್ದು ನೀಡುವುದು, ಗುಂಡು ಹಾರಿಸಿ ಸಾಯಿಸುವುದು, ವಿದ್ಯುತ್ ಸ್ಪರ್ಶದ ಮೂಲಕ ಸಾವು, ಸಾರಜನಕದಿಂದ ಉಸಿರುಗಟ್ಟಿಸಿ ಸಾಯುವಂತೆ ಮಾಡುವುದು.. ಹೀಗೆ ಮರಣದಂಡನೆ ಜಾರಿಗೆ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಪರಿಗಣಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.

ಗಲ್ಲು ಶಿಕ್ಷೆಯ ಸಾಂವಿಧಾನಿಕತೆ: ಮರಣದಂಡನೆಯ ವಿಧಾನವು ನಾಲ್ಕು ಮುಖ್ಯ ಆಶಯಗಳನ್ನು ಒಳಗೊಳ್ಳಬೇಕು ಎಂದು 1983ರ ದೀನಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಸಾವಿನ ವಿಧಾನವು ಸರಳವಾಗಿರಬೇಕು ಮತ್ತು ಕ್ಷಿಪ್ರವಾಗಿ ಸಾವು ತರುವಂತಿರಬೇಕು, ಅಪರಾಧಿಯು ಬೇಗ ಪ್ರಜ್ಞಾಶೂನ್ಯನಾಗಿ ಸಾವಿಗೀಡಾಗಬೇಕು, ಘನತೆಯಿಂದ ಕೂಡಿರಬೇಕು ಮತ್ತು ದೇಹ/ಅಂಗ ವಿರೂಪಗೊಳ್ಳುವಂತೆ ಇರಬಾರದು ಎಂದು ಉನ್ನತ ನ್ಯಾಯಾಲಯ ಸೂಚಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ವಿಧಾನದ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿತ್ತು. ದೇಶದಲ್ಲಿ ಗಲ್ಲು ಶಿಕ್ಷೆಯೊಂದೇ ಮರಣದಂಡನೆಯ ಜಾರಿ ವಿಧಾನ ಎಂದು ಸ್ಪಷ್ಟಪಡಿಸಿತ್ತು. ವಿಷದ ಇಂಜೆಕ್ಷನ್ ಮೂಲಕ ಪ್ರಾಣಹರಣ ಮಾಡುವ ವಿಧಾನವು ಎಲ್ಲ ಸಂದರ್ಭಗಳಲ್ಲಿಯೂ ಕ್ಷಿಪ್ರವಾಗಿ ಸಾವು ತರುತ್ತದೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು. 

ಆದರೆ, ಗಲ್ಲಿಗೇರಿಸುವ ವಿಧಾನವನ್ನು ಪುನರ್ ಪರಿಶೀಲಿಸಬೇಕು ಎಂದು ಭಾರತದ ಕಾನೂನು ಆಯೋಗವು 2003ರಲ್ಲಿ ಸೂಚಿಸಿತು. ಇದು ಹೆಚ್ಚು ಮಾನವೀಯವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಧಾನವನ್ನು ಬಳಸಲಾಗುತ್ತಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿತ್ತು.

ಗಲ್ಲು ಏಕೆ ಬೇಡ?: 2017ರಲ್ಲಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ, ನೇಣಿಗೆ ಬದಲು ಮರಣದಂಡನೆಗೆ ಪರ್ಯಾಯ ಮಾರ್ಗ ಅನುಸರಿಸಲು ಆದೇಶಿಸಬೇಕು ಎಂದು ಕೋರಿದರು. ಗಲ್ಲಿಗೇರಿಸಿದರೆ, ಅವರ ದೇಹವು ನೇಣು ಹಗ್ಗದಲ್ಲಿಯೇ 40 ನಿಮಿಷಗಳವರೆಗೆ ಇರುತ್ತದೆ; ಅದು ಕ್ರೂರ ಮತ್ತು ಬರ್ಬರ. ಅದರ ಬದಲು ಮಾನವೀಯವಾದ, ಘನತೆಯಿಂದ ಕೂಡಿದ ವಿಷದ ಚುಚ್ಚುಮದ್ದಿನ ಮಾರ್ಗ ಅನುಸರಿಸುವುದು ಉತ್ತಮ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕುಗಳನ್ನು ಒಳಗೊಂಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ನೀಡಿದೆ; ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ನೀಡುವ ಪದ್ಧತಿ ಇದೆ ಎನ್ನುವುದು ಅವರ ವಾದ.   

ನೇಣಿಗೇರಿಸುವುದಕ್ಕಿಂತ ಇತರ ಮಾರ್ಗಗಳು ಕಡಿಮೆ ಯಾತನಾದಾಯಕ ಎನ್ನುವುದನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರವು, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಇದರ ಬಗ್ಗೆ ತಜ್ಞರ ಸಮಿತಿ ರಚನೆಗೆ ‌ಕ್ರಮ ಕೈಗೊಳ್ಳಬೇಕು ಎಂದು 2023ರಲ್ಲಿ ತಿಳಿಸಿದ್ದ ನ್ಯಾಯಾಲಯವು, ಈ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಕೇಂದ್ರವನ್ನು ಕೇಳಿತ್ತು. ಆದರೆ, ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಧಾನದ ಬಗ್ಗೆ ನ್ಯಾಯಾಂಗವು ಶಾಸಕಾಂಗಕ್ಕೆ ನಿರ್ದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು.

ಬದಲಾಗದ ಕೇಂದ್ರದ ಧೋರಣೆ: ತಾನು ಯಾವ ವಿಧಾನದ ಮೂಲಕ ಸಾಯಬೇಕು ಎನ್ನುವ ಆಯ್ಕೆಯನ್ನು ಮರಣದಂಡನೆ ವಿಧಿಸಲ್ಪಟ್ಟಿರುವ ಅಪರಾಧಿಗೇ ನೀಡಬೇಕು ಎನ್ನುವುದು ಮಲ್ಹೋತ್ರಾ ಅವರ ವಾದ. ಆದರೆ, ಅದು ಕಾರ್ಯಸಾಧುವಲ್ಲ ಎಂದು ಕೇಂದ್ರವು ಪ್ರತಿಕ್ರಿಯಿಸಿದೆ.

ಪ್ರಸ್ತುತ ಈ ಕುರಿತ ವಾದ–ಪ್ರತಿವಾದ ನಡೆಯುತ್ತಿದ್ದು, ನ್ಯಾಯಾಲಯ ವಿಚಾರಣೆ ಮುಂದುವರಿಸುತ್ತಿದೆ. ಕಾಲ ಬದಲಾಗಿದೆ; ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಮನೋಭಾವವು ವಿಕಾಸಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚ್ಯವಾಗಿ ಹೇಳಿದೆ. ಇನ್ನೊಂದೆಡೆ, ಮರಣದಂಡನೆಯೇ ಅಮಾನವೀಯ ಶಿಕ್ಷಾ ಪದ್ಧತಿಯಾಗಿದ್ದು, ಅದನ್ನು ರದ್ದುಪಡಿಸಬೇಕು ಎನ್ನುವ ಬೇಡಿಕೆ ಇದೆ.

ಆಧಾರ: ಪಿಟಿಐ, ಎಎಫ್‌ಪಿ, ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ದೆಹಲಿಯ ನ್ಯಾಷನಲ್ ಲಾ ಕಾಲೇಜ್ ಯೂನಿವರ್ಸಿಟಿ ವರದಿ

32%

2023ಕ್ಕಿಂತ 2024ರಲ್ಲಿ ಜಗತ್ತಿನಲ್ಲಿ ಮರಣದಂಡನೆಯಿಂದ ಸಾವಿಗೀಡಾದವರ ಪ್ರಮಾಣ ಹೆಚ್ಚಳ

ಗಲ್ಲು ಶಿಕ್ಷೆಯ ವಿಧಾನದಲ್ಲಿ, ಅಪರಾಧಿ ಸತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸುವುದಕ್ಕಷ್ಟೇ ವೈದ್ಯರ ಪಾತ್ರವು ಸೀಮಿತವಾಗಿರುತ್ತದೆ. ಆದರೆ, ವಿಷದ ಇಂಜೆಕ್ಞನ್ ಚುಚ್ಚುವ ವಿಧಾನದಲ್ಲಿ ವೈದ್ಯರೇ ಮರಣದಂಡನೆ ಜಾರಿ ಮಾಡುವವರೂ ಆಗಿರುತ್ತಾರೆ. ಹಲವು ದೇಶಗಳಲ್ಲಿ ವೈದ್ಯರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ವೈದ್ಯರ ಕಾರ್ಯವು ಜೀವ ಉಳಿಸುವುದೇ ವಿನಾ ಜೀವ ತೆಗೆಯುವುದಲ್ಲ ಎನ್ನುವುದು ಅವರ ವಾದ. ಮರಣದಂಡನೆ ಜಾರಿಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿರುವ ಯಾವುದೇ ವಿಧಾನವನ್ನು ತಾನು ವಿರೋಧಿಸುವುದಾಗಿ ಬ್ರಿಟಿಷ್ ಮೆಡಿಕಲ್ ಕೌನ್ಸಿಲ್ ಹೇಳಿತ್ತು. ವಿಶ್ವ ವೈದ್ಯಕೀಯ ಸಂಘವೂ ಇದರ ವಿರುದ್ಧ ನಿಲುವು ತಳೆದಿದೆ. ಅಮೆರಿಕದಲ್ಲಿಯೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಮೆರಿಕದಲ್ಲಿ ವೈದ್ಯರು ಜೈಲು ಅಧಿಕಾರಿಗಳಿಗೇ ಚುಚ್ಚುಮದ್ದು ನೀಡುವ ತರಬೇತಿ ನೀಡುವ ಪದ್ಧತಿ ಅನುಸರಿಸಲಾಯಿತು. ಆದರೆ, ವೈದ್ಯರ ಅನುಪಸ್ಥಿತಿಯಲ್ಲಿ ಈ ವಿಧಾನವು ದೀರ್ಘವೂ ತ್ರಾಸದಾಯಕವೂ ಆಗಿದೆ ಎನ್ನುವ ವರದಿಗಳಿವೆ. 

ಮರಣದಂಡನೆ ಹೆಚ್ಚಳ

ಜಗತ್ತಿನ ಶೇ 70ರಷ್ಟು ರಾಷ್ಟ್ರಗಳಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ. ಆದರೂ, ಸುಮಾರು 50 ದೇಶಗಳಲ್ಲಿ ಈ ಶಿಕ್ಷೆ ಕಾನೂನುಬದ್ಧವಾಗಿದೆ. ಇದರಲ್ಲಿ ಭಾರತ, ಅಮೆರಿಕ, ಚೀನಾ, ಅಘ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್, ಇರಾನ್, ಇರಾಕ್, ಸೌದಿ ಅರೇಬಿಯಾ, ಥಾಯ್ಲೆಂಡ್ ಮುಂತಾದ ದೇಶಗಳಿವೆ. 2024ರಲ್ಲಿ ಚೀನಾ, ಇರಾನ್, ಸೌದಿ ಅರೇಬಿಯಾ, ಇರಾಕ್, ಯೆಮನ್‌ನಲ್ಲಿ ಹೆಚ್ಚು ಮಂದಿಗೆ ಮರಣದಂಡನೆ ವಿಧಿಸಲಾಗಿದೆ.

ಚೀನಾದಲ್ಲಿ ಅತಿ ಹೆಚ್ಚು ಮಂದಿಗೆ ಸಾವಿನ ಶಿಕ್ಷೆ ನೀಡಲಾಗಿದೆ.ಹೆಚ್ಚು ರಾಷ್ಟ್ರಗಳಲ್ಲಿ ಮರಣದಂಡನೆ ರದ್ದುಪಡಿಸಲಾಗುತ್ತಿದೆಯಾದರೂ ಈ ಶಿಕ್ಷೆಗೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತಿದ್ದು, 2025ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಏರಿಕೆ ಕಾಣಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅಮೆರಿಕದಲ್ಲಿ ಪ್ರಸಕ್ತ ವರ್ಷ 39 ಮಂದಿಯನ್ನು ಮರಣದಂಡನೆಗೆ ಈಡು ಮಾಡಲಾಗಿದೆ. ಅವುಗಳಲ್ಲಿ 33 ಮಂದಿಗೆ ವಿಷದ ಇಂಜೆಕ್ಷನ್ ನೀಡಿ, ಇಬ್ಬರಿಗೆ ಗುಂಡು ಹೊಡೆದು, ನಾಲ್ವರ ಮಾಸ್ಕ್‌ಗಳ ಒಳಗೆ ಸಾರಜನಕ ಪೂರೈಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಾರಜನಕದಿಂದ ಉಸಿರುಗಟ್ಟಿಸುವ ವಿಧಾನವು ಕ್ರೂರ ಮತ್ತು ಅಮಾನವೀಯ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿದೆ. ಅಮೆರಿಕದ 50 ರಾಜ್ಯಗಳ ಪೈಕಿ 23ರಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ.

ಭಾರತದಲ್ಲಿ ಹೆಚ್ಚು

ಜಗತ್ತಿನಲ್ಲಿ ಅತಿ ಹೆಚ್ಚು ಮರಣದಂಡನೆ ‌ವಿಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರಲ್ಲೂ ಕೆಳಹಂತದ ನ್ಯಾಯಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಮರಣದಂಡನೆ ವಿಧಿಸುತ್ತಿವೆ.  ಮರಣದಂಡನೆ ವಿಧಿಸಲ್ಪಟ್ಟ ಪ್ರತಿ ನಾಲ್ವರಲ್ಲಿ ಒಬ್ಬರು ಉತ್ತರ ಪ್ರದೇಶಕ್ಕೆ (130) ಸೇರಿದವರು. ನಂತರದ ಸ್ಥಾನಗಳಲ್ಲಿ ಗುಜರಾತ್ (71), ಮಹಾರಾಷ್ಟ್ರ (42), ಹರಿಯಾಣ (38), ಪಶ್ಚಿಮ ಬಂಗಾಳ (37), ಕೇರಳ (35), ಮಧ್ಯಪ್ರದೇಶ ಇವೆ. ಕರ್ನಾಟಕದಲ್ಲಿ 22 ಮಂದಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಸ್ತುತ ಭಾರತದ ವಿವಿಧ ಜೈಲುಗಳಲ್ಲಿ ಮರಣದಂಡನೆ ವಿಧಿಸಲ್ಪಟ್ಟ 564 ಮಂದಿ (2024ರ ಕೊನೆಗೆ) ಇದ್ದು, ಶಿಕ್ಷೆ ಜಾರಿಯನ್ನು ಎದುರು ನೋಡುತ್ತಿದ್ದಾರೆ. ಇದು ಎರಡು ದಶಕಗಳಲ್ಲಿಯೇ ಅತಿ ದೊಡ್ಡ ಸಂಖ್ಯೆಯಾಗಿದೆ.

  • ಎಐ, ಡೀಪ್ಫೇಕ್ಗೆ ನಿಯಮ ಬಿಗಿ

ಸಂದರ್ಭ: ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತುಡೀಪ್ಫೇಕ್ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.

  • ‘ಎಐ’ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಹರಡುವುದು ಹೆಚ್ಚುತ್ತಿದ್ದು, ಜನರನ್ನು ದಾರಿ ತಪ್ಪಿಸಲು, ಚುನಾವಣಾ ಅಕ್ರಮಗಳಿಗೆ, ಹಣಕಾಸು ವಂಚನೆಗಳಿಗೆ ಎಐ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ನಿಯಮ ಗಳನ್ನು ಬಿಗಿಗೊಳಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.
  • ಪ್ರಸ್ತಾವಿತ ಐಟಿ ನಿಯಮದಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಐ ಆಧಾರಿತ ಕಂಟೆಂಟ್‌ಗಳನ್ನು ಗುರುತಿಸಲು ಲೇಬಲಿಂಗ್‌ ಕಡ್ಡಾಯಗೊಳಿಸಲಾಗಿದೆ. ಕಂಟೆಂಟ್‌ ತೆಗೆದು ಹಾಕುವ ಅಧಿಕಾರವು ಉನ್ನತ ಅಧಿಕಾರಿಗಳಿಗೆ ಮಾತ್ರ ಇರುತ್ತದೆ.
  • ಈ ನಿಯಮವು  ಜಾಲತಾಣದಲ್ಲಿ ಡೀಪ್‌ಫೇಕ್‌ ವಿಡಿಯೊ, ತಿದ್ದುಪಡಿ ಮಾಡಿದ ಚಿತ್ರ, ಧ್ವನಿಯನ್ನು ಪತ್ತೆಹಚ್ಚಲೂ ನೆರವಾಗಲಿದೆ. ಕರಡು ಪ್ರಸ್ತಾವಕ್ಕೆ ಆಕ್ಷೇಪಗಳಿದ್ದಲ್ಲಿ ನವೆಂಬರ್‌ 6ರೊಳಗೆ ದಾಖಲಿಸುವಂತೆ ಸಚಿವಾಲಯವು ಸಾಮಾಜಿಕ ಜಾಲತಾಣ, ಎಐ ಕಂಟೆಂಟ್‌ ಸೃಷ್ಟಿಸುವ ಸಂಸ್ಥೆಗಳಿಗೆ ಸೂಚಿಸಿದೆ. 
  • ಭಾರತ ಮೂಲದ ಸುನೀಲ್ ಅಮೃತ್ಗೆಬ್ರಿಟಿಷ್ ಅಕಾಡೆಮಿಪುಸ್ತಕ ಪ್ರಶಸ್ತಿ

ಸಂದರ್ಭ: ಭಾರತೀಯ ಮೂಲದ ಇತಿಹಾಸಕಾರ ಸುನೀಲ್ ಅಮೃತ್ ಅವರದಿ ಬರ್ನಿಂಗ್ಅರ್ಥ್: ಆ್ಯನ್ ಎನ್ವಿರಾನ್ಮೆಂಟಲ್ ಹಿಸ್ಟರಿ ಆಫ್ ದಿ ಲಾಸ್ಟ್ 500 ಇಯರ್ಸ್ ಕೃತಿಯು ವರ್ಷದಬ್ರಿಟಿಷ್ಅಕಾಡೆಮಿ ಪುಸ್ತಕ ಪ್ರಶಸ್ತಿಗೆ ಭಾಜನವಾಗಿದೆ.

  • ಸೃಜನೇತರ ಕೃತಿಗಳಿಗಾಗಿ ನೀಡುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯು ಒಟ್ಟು 25 ಸಾವಿರ ಪೌಂಡ್‌ (ಅಂದಾಜು ₹29 ಲಕ್ಷ) ಮೊತ್ತವನ್ನು ಒಳಗೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಅಮೃತ್, ದಕ್ಷಿಣ ಭಾರತ ಮೂಲದ ದಂಪತಿಗೆ ಕೆನ್ಯಾದಲ್ಲಿ ಜನಿಸಿದರು.
  • ಸಿಂಗಪುರದಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬುಧವಾರ ಸಂಜೆ ಲಂಡನ್‌ನ ಬ್ರಿಟಿಷ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತೀರ್ಪುಗಾರರ ತಂಡದ ಅಧ್ಯಕ್ಷೆ ರೆಬೆಕಾ ಅರ್ಲ್ ಈ ಪ್ರಶಸ್ತಿ ಘೋಷಿಸಿದರು.
  • ಎಸ್ಬಿಐಗೆ ವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್ ಪ್ರಶಸ್ತಿ

ಸಂದರ್ಭ: 2025ನೇ ಸಾಲಿನವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್ ಮತ್ತುಭಾರತದಲ್ಲಿನ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ಬ್ಯಾಂಕ್‌ (ಎಸ್ಬಿಐ) ಭಾಜನವಾಗಿದೆ.

  • ವಿಶ್ವ ಬ್ಯಾಂಕ್‌, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವಾರ್ಷಿಕ ಸಭೆಯಲ್ಲಿ ನ್ಯೂಯಾರ್ಕ್‌ ಮೂಲದ ಗ್ಲೋಬಲ್‌ ಫೈನಾನ್ಸ್‌ ಸಂಸ್ಥೆ ಈ ಪ್ರಶಸ್ತಿ ಪ್ರದಾನ ಮಾಡಿದೆ.
  • ಈ ಎರಡು ಪ್ರಶಸ್ತಿಗಳು ನಾವೀನ್ಯ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಗ್ರಾಹಕರಿಗೆ ಶ್ರೇಷ್ಠವಾಗಿದ್ದನ್ನು ನೀಡುವುದಕ್ಕೆ ಬದ್ಧವಾಗಿರುವ ಜಾಗತಿಕ ಬ್ಯಾಂಕಿಂಗ್ ನಾಯಕನಾಗಿ ಎಸ್‌ಬಿಐ ಸ್ಥಾನವನ್ನು ಸದೃಢಗೊಳಿಸುತ್ತದೆ ಎಂದು ಬ್ಯಾಂಕ್‌ ಗುರುವಾರ ತಿಳಿಸಿದೆ.
  • ಗ್ಲೋಬಲ್ ಫೈನಾನ್ಸ್‌ನಿಂದ ಎಸ್‌ಬಿಐಗೆ ಈ ಪ್ರಶಸ್ತಿ ಬಂದಿದ್ದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಸ್ತುತ ಬ್ಯಾಂಕ್ 52 ಕೋಟಿ ಗ್ರಾಹಕರನ್ನು ಹೊಂದಿದೆ.
  • ರಾಣಿ ಚನ್ನಮ್ಮ ನೆನಪಿನ ವಿಶೇಷ ನಾಣ್ಯ

ಸಂದರ್ಭ: ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಅವರ 200ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರವು ₹200 ಮೌಲ್ಯದ ವಿಶೇಷ ನಾಣ್ಯ ರೂಪಿಸಿದೆ.

  • ನಾಣ್ಯವು ಶೇ 50ರಷ್ಟು ಬೆಳ್ಳಿಯನ್ನು ಒಳಗೊಂಡಿದೆ. ಉಳಿದಂತೆ ಶೇ 40ರಷ್ಟು ತಾಮ್ರ, ಶೇ 5ರಷ್ಟು ಸತು ಮತ್ತು ಶೇ 5ರಷ್ಟು ನಿಕೆಲ್ ಅನ್ನು ಈ ನಾಣ್ಯ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
  • ಹೈದರಾಬಾದ್ನಲ್ಲಿ ನಾಣ್ಯ ತಯಾರಾಗಿದೆ.
  • ನಾಣ್ಯದ ಒಂದು ಬದಿಯಲ್ಲಿ ರಾಣಿ ಚನ್ನಮ್ಮರ ಚಿತ್ರವಿರಲಿದೆ. ನಾಣ್ಯದ ಮೇಲೆ ಮತ್ತು ಕೆಳಭಾಗದಲ್ಲಿ ‘ಕಿತ್ತೂರಿನ ರಾಣಿ ಚನ್ನಮ್ಮರ ಜಯದ 200ನೇ ವರ್ಷಾಚರಣೆ’ ಎಂಬ ಬರಹ ಇರಲಿದೆ. ಇನ್ನೊಂದು ಬದಿಯಲ್ಲಿ ₹200 ಸಂಕೇತ ಮತ್ತು ರಾಷ್ಟ್ರ ಲಾಂಛನ ಇರಲಿದೆ. ನಾಣ್ಯದ ಸುತ್ತಳತೆ 44 ಮಿ.ಮೀ. ಇದ್ದು, 35 ಗ್ರಾಂ ತೂಕ ಹೊಂದಿದೆ ಎಂದು ತಿಳಿಸಿದೆ.
  • ಅಸಿಯಾನ್ ಶೃಂಗ: ವರ್ಚುವಲ್ಮೂಲಕ ಮೋದಿ ಭಾಗಿ

ಸಂದರ್ಭ:ಮುಂದಿನ ವಾರ ಮಲೇಷ್ಯಾದಲ್ಲಿ ನಡೆಯಲಿರುವ ಅಸಿಯಾನ್ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ಆಗಿ ಹಾಜರಾಗಲಿದ್ದಾರೆ.

  • ಅಸಿಯಾನ್‌ ಸಭೆಯು ಅಕ್ಟೋಬರ್‌ 26ರಿಂದ 28ರವರೆಗೆ ನಡೆಯಲಿದೆ.
  • ‘ಅಸಿಯಾನ್‌ ಶೃಂಗಸಭೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ಮೋದಿ ಅವರು ವರ್ಚುವಲ್‌ ಆಗಿ ಭಾಗಿಯಾಗುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.
  • ₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ

ಸಂದರ್ಭ: ಸೇನಾ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹79,000 ಕೋಟಿ ಮೌಲ್ಯದ ಖರೀದಿ ಪ್ರಸ್ತಾವನೆ ಗಳಿಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

  • ನಾಗ್ ಕ್ಷಿಪಣಿಗಳು, ಮೂರೂ ಸಶಸ್ತ್ರ ಪಡೆಗಳು ಬಳಸಬಹುದಾದ ಯುದ್ಧ ಹಡಗುಗಳು ಮತ್ತು ಎಲೆಕ್ಟ್ರಾನಿಕ್ ಗುಪ್ತಚರ ಹಾಗೂ ಕಣ್ಗಾವಲು ವ್ಯವಸ್ಥೆಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸೇನಾ ಹಾರ್ಡ್‌ವೇರ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
  • ‘ಆಪರೇಷನ್ ಸಿಂಧೂರ’ ನಡೆದ ನಂತರ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಎರಡನೇ ನಿರ್ಧಾರ ಇದಾಗಿದೆ. ಆಗಸ್ಟ್ 5ರಂದು ₹67,000 ಕೋಟಿ ಮೌಲ್ಯದ ಖರೀದಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು.
  • ಭಾರತ ಕಬಡ್ಡಿ ತಂಡಗಳಿಗೆ ಚಿನ್ನ

ಸಂದರ್ಭ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಗುರುವಾರ  ಏಷ್ಯನ್ ಯೂತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡವು.

  • ಭಾರತ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚು ಗೆದ್ದು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಚೀನಾ ಆರು ಚಿನ್ನ, 10 ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದೆ, ನಂತರದಲ್ಲಿ ಥಾಯ್ಲೆಂಡ್‌, ಉಜ್ಬೇಕಿಸ್ತಾನ ದೇಶಗಳಿವೆ.
  • ಮಹಿಳೆಯರ ಕಬಡ್ಡಿ ಫೈನಲ್‌ನಲ್ಲಿ ಭಾರತ 75–21ರಿಂದ ಇರಾನ್‌ ತಂಡವನ್ನು ಮಣಿಸಿತು. ಪುರುಷರ ತಂಡವು 35–32ರಿಂದ ಇರಾನ್‌ ತಂಡವನ್ನು ಸೋಲಿಸಿತು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments