‘ಬ್ರಹ್ಮೋಸ್‌ನಿಂದ ಪಾಕ್ ತಪ್ಪಿಸಿಕೊಳ್ಳಲಾಗದು’
ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ. ಇದು ಭಾರತದ ಹೆಚ್ಚುತ್ತಿರುವ ಶಕ್ತಿಯ ಸಂಕೇತ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಪ್ರಮುಖ ಆಧಾರಸ್ತಂಭವಾಗಿದೆ.
●‘ಭಾರತದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ಮೂಲೆಮೂಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ’ ಎಂದು ರಕ್ಷಣಾ ಸಚಿವ.
●ಉತ್ತರ ಪ್ರದೇಶದ ಸರೋಜಿನಿ ನಗರದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಅನ್ನು ಉದ್ಘಾಟಿಸಿದರು.
●‘ಬ್ರಹ್ಮೋಸ್ ಕ್ಷಿಪಣಿಗಳ ಯಶಸ್ವಿ ತಯಾರಿಕೆಯು ಒಂದು ಕಾಲದಲ್ಲಿ ಕನಸು ಎಂದು ಭಾವಿಸಿದ್ದು ಈಗ ನನಸಾಗಿದೆ ಎಂಬುದನ್ನು ತೋರಿಸುತ್ತದೆ.
●ಮುಖ್ಯಮಂತ್ರಿ ಆದಿತ್ಯನಾಥ ಅವರು, ‘ಇದು ಉತ್ತರ ಪ್ರದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಈ ಸಾಧನೆಯ ಹಿಂದಿದೆ’ ಎಂದರು.
ಪ್ರಮುಖ ಅಂಶಗಳು
- ಮೊದಲ ಬ್ಯಾಚ್‌ನ ಬ್ರಹ್ಮೋಸ್ ಕ್ಷಿಪಣಿಗಳಿಗೆ ಹಸಿರು ನಿಶಾನೆ ತೋರಿದ ರಕ್ಷಣಾ ಸಚಿವ
- ಬ್ರಹ್ಮೋಸ್ ಏರೋಸ್ಪೇಸ್‌ನ ಅತ್ಯಾಧುನಿಕ ಘಟಕದಲ್ಲಿ ತಯಾರಾದ ಕ್ಷಿಪಣಿ
- ಉತ್ತರ ಪ್ರದೇಶದ ಸರೋಜಿನಿ ನಗರದಲ್ಲಿ ಇದೇ ವರ್ಷ ಮೇ 11ರಂದು ಕಾರ್ಯಾರಂಭ ಮಾಡಿರುವ ಘಟಕ.
ಆರ್ಚರಿ: ಜ್ಯೋತಿಗೆ ಚಾರಿತ್ರಿಕ ಕಂಚು
ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರು ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾರಿತ್ರಿಕ ಕಂಚಿನ ಪದಕ ಗೆದ್ದರು. ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಬಿಲ್ಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
●ಏಷ್ಯನ್ ಗೇಮ್ಸ್ ಹಾಲಿ ಚಾಂಪಿಯನ್ ಜ್ಯೋತಿ ಅವರು ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ 150–145 ಅಂಕಗಳಿಂದ ಎರಡನೇ ಶ್ರೇಯಾಂಕದ ಎಲ್ಲಾ ಗಿಬ್ಸನ್ (ಬ್ರಿಟನ್) ಅವರಿಗೆ ಆಘಾತ ನೀಡಿದರು.
2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ 29 ವರ್ಷ ವಯಸ್ಸಿನ ಜ್ಯೋತಿ ಅವರಿಗೆ ಇದು ಮೂರನೇ ವಿಶ್ವಕಪ್ ಫೈನಲ್ ಆಗಿದೆ. ಈ ಹಿಂದೆ ಟ್ಲಾಕ್ಸ್‌ಕಲಾ (2022) ಮತ್ತು ಹರ್ಮೊಸಿಲೊ (2023) ಆವೃತ್ತಿಗಳಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದರು.
ಈ ಋತುವಿನ ವಿಶ್ವಕಪ್ ಫೈನಲ್‌ಗೆ ರಿಕರ್ವ್ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿ ಅರ್ಹತೆ ಪಡೆದಿಲ್ಲ.
20th, 21st & 22nd October
- ‘ರಾಜ್ಯಕ್ಕೆ ₹384 ಕೋಟಿ ಪ್ರವಾಹ ಪರಿಹಾರ’
ಸಂದರ್ಭ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ₹1,950.80 ಕೋಟಿ ಪರಿಹಾರವನ್ನು 2025–26ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಅಡಿ ಮುಂಗಡವಾಗಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ. ಪರಿಹಾರದ ಎರಡನೇ ಕಂತಿನ ಮೊತ್ತ ಇದಾಗಿದೆ.
- ಈ ವರ್ಷದ ನೈರುತ್ಯ ಮುಂಗಾರಿನಿಂದ ತೀವ್ರ ಹಾನಿಗೊಳಗಾದ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ ₹384.40 ಕೋಟಿ ಹಾಗೂ ಮಹಾರಾಷ್ಟ್ರಕ್ಕೆ ₹1,566.40 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ.
- ‘ಪ್ರವಾಹ, ಭೂಕುಸಿತ ಹಾಗೂ ಮೇಘಸ್ಫೋಟಕ್ಕೆ ಒಳಗಾದ ರಾಜ್ಯಗಳಿಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಧಾನಿ ಹಾಗೂ ಗೃಹ ಸಚಿವ ಸಲಹೆಯಂತೆ ಕೇಂದ್ರ ಸರ್ಕಾರ ತನ್ನ ಬದ್ಧತೆ ವ್ಯಕ್ತಪಡಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಎಸ್‌ಡಿಆರ್‌ಎಫ್‌ನ ಅಡಿಯಲ್ಲಿ ಕೇಂದ್ರದ ಪಾಲಾದ ₹13,603.20 ಕೋಟಿಯನ್ನು 27 ರಾಜ್ಯಗಳಿಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಅಡಿಯಲ್ಲಿ 15 ರಾಜ್ಯಗಳಿಗೆ ₹2,189.28 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರವು ಈ ವರ್ಷ ಬಿಡುಗಡೆ ಮಾಡಿದೆ.
- ಇದಲ್ಲದೇ, ಹೆಚ್ಚುವರಿಯಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಎಂಎಫ್)ನ ಅಡಿಯಲ್ಲಿ 21 ರಾಜ್ಯಗಳಿಗೆ ₹4,571.30 ಕೋಟಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಎಂಎಫ್) ಅಡಿಯಲ್ಲಿ 9 ರಾಜ್ಯಗಳಿಗೆ ₹372.09 ಕೋಟಿ ನೆರವು ನೀಡಲಾಗಿದೆ.
- ಚಂದ್ರಶೇಖರ ಶಿಲ್ಪಿಗೆ ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ
ಸಂದರ್ಭ: ಹಿರಿಯ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಜವಳಿ ಸಚಿವಾಲಯವು ನೀಡುವ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಶಿಲ್ಪಿ ಅವರು ಕೆತ್ತನೆ ಮಾಡಿದ ವಿಶಿಷ್ಟ ಕಲಾ ನೈಪುಣ್ಯದ ಬಾಗಿಲಿಗೆ ಪ್ರಶಸ್ತಿ ಲಭಿಸಿದೆ.
- ಸಾಂಪ್ರದಾಯಿಕ ಕುಸುರಿ ಕೆತ್ತನೆಯ ಹಿರಿಯ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಜವಳಿ ಸಚಿವಾಲಯವು ನೀಡುವ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ದೊರೆತಿದೆ.
- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಶಿಲ್ಪಿ ಅವರು ಕೆತ್ತನೆ ಮಾಡಿದ ವಿಶಿಷ್ಟ ಕಲಾ ನೈಪುಣ್ಯದ ಬಾಗಿಲಿಗೆ ಪ್ರಶಸ್ತಿ ಲಭಿಸಿದೆ.
- ಪ್ರಶಸ್ತಿ ₹2 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ.
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಡಿ.9ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
- ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ ಭಾಗದಲ್ಲಿ ಪ್ರಸಿದ್ಧಿಯಾದ ಸಗರನಾಡು ಕಲಾ ಶೈಲಿಗೆ ಸಾಂಪ್ರದಾಯಿಕ ಶೈಲಿ ಸಂಯೋಜಿಸಿ ಚಂದ್ರಶೇಖರ ಶಿಲ್ಪಿ ಅವರು ಎತ್ತರಕ್ಕೆ ಒಯ್ದಿದ್ದಾರೆ ಎಂದು ಆಯ್ಕೆ ಸಮಿತಿಯು ಬಣ್ಣಿಸಿದೆ.
- ಚಂದ್ರಶೇಖರ ಶಿಲ್ಪಿ ಅವರು ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರು, ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
- 15 ಜಿಲ್ಲೆಗಳ ಕೈತಪ್ಪಲಿದೆ ‘ಪಿಎಂಜಿಎಸ್ವೈ’
ಸಂದರ್ಭ: ‘ಪಿಎಂಜಿಎಸ್ವೈ’ 4ನೇ ಹಂತದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ರಸ್ತೆಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಜನಸಂಖ್ಯೆಯ ಮಾನದಂಡವನ್ನು 200ಕ್ಕೆ ಇಳಿಸಿದರೆ ಅನುಕೂಲ ಸಿಇಒ, ಜಿಲ್ಲಾ ಪಂಚಾಯಿತಿ, ದಾವಣಗೆರೆ
- ‘500ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ, ಸಂಪರ್ಕರಹಿತ ವಸತಿ ಪ್ರದೇಶಗಳಲ್ಲಷ್ಟೇ ರಸ್ತೆ ನಿರ್ಮಿಸಬಹುದು’ ಎಂಬ ಮಾರ್ಗಸೂಚಿ ಯಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು (ಪಿಎಂಜಿಎಸ್ವೈ) 4ನೇ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ ಕೈತಪ್ಪುವ ಸಾಧ್ಯತೆ ಇದೆ.
- ಪಿಎಂಜಿಎಸ್ವೈ 4ನೇ ಹಂತವನ್ನು 2024ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದು, 25,000 ಜನವಸತಿ ಪ್ರದೇಶಗಳಿಗೆ ಸರ್ವಋತು ಸಂಪರ್ಕ ರಸ್ತೆ ಕಲ್ಪಿಸುವ ಆಶ್ವಾಸನೆ ನೀಡಿತ್ತು. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 16 ಜಿಲ್ಲೆಗಳ 225 ಜನವಸತಿ ಪ್ರದೇಶಗಳು ಮಾತ್ರವೇ ಯೋಜನೆಗೆ ಅರ್ಹತೆ ಪಡೆದಿವೆ.
- ಕೆಲವು ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿರುವ ಬಹುತೇಕ ಗ್ರಾಮಗಳ ಜನಸಂಖ್ಯೆ 500ಕ್ಕಿಂತ ಕಡಿಮೆ ಇರುವುದರಿಂದ ಹಾಗೂ ಈಗಾಗಲೇ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಕೆಲವೊಂದು ರಸ್ತೆಗಳು ಅಭಿವೃದ್ಧಿ ಹೊಂದಿರುವುದರಿಂದ ಯೋಜನೆಯಿಂದ ವಂಚಿತವಾಗುತ್ತಿವೆ.
- ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು 2000–2001ನೇ ಸಾಲಿನಲ್ಲಿ ಯೋಜನೆ ಜಾರಿಗೊಳಿಸಲಾಯಿತು. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಇದು ಯಶಸ್ಸು ಕಂಡಿದೆ. 2013ರಲ್ಲಿ 2ನೇ ಹಂತ, 2019ರಲ್ಲಿ 3ನೇ ಹಂತ ಜಾರಿಗೊಳಿಸಲಾಗಿತ್ತು.
- 4ನೇ ಹಂತವು 2024ರ ಡಿಸೆಂಬರ್‌ನಲ್ಲಿ ಅನುಷ್ಠಾನಕ್ಕೆ ಬಂದಿದೆ. ಐದು ವರ್ಷಗಳಲ್ಲಿ ₹ 70,125 ಕೋಟಿ ಅಂದಾಜು ವೆಚ್ಚದಲ್ಲಿ 62,500 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
- ರಾಜ್ಯದಲ್ಲಿ ಸಂಪರ್ಕರಹಿತ ಜನವಸತಿ ಪ್ರದೇಶಗಳ ಸಂಖ್ಯೆ ವಿರಳ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಸೇರಿದಂತೆ ಹಲವು ಯೋಜನೆಯಡಿ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
- ಹೊಸದಾಗಿ ನಿರ್ಮಾಣವಾಗಿರುವ ಜನವಸತಿ ಪ್ರದೇಶಗಳು 500ಕ್ಕೂ ಕಡಿಮೆ ಜನಸಂಖ್ಯೆ ಹೊಂದಿವೆ. ಪಿಎಂಜಿಎಸ್‌ವೈ 4ನೇ ಹಂತದ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರ ಹೇಳಿಕೆ.
- ಯೋಜನೆಗೆ ಕೇಂದ್ರ ಮತ್ತು ರಾಜ್ಯ 60:40ರ ಅನುಪಾತದಲ್ಲಿ ವೆಚ್ಚ ಭರಿಸಿವೆ. 2022–23ರಿಂದ 2024–2025ನೇ ಸಾಲಿನವರೆಗೆ ರಾಜ್ಯದಲ್ಲಿ 2,254 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ₹ 837 ಕೋಟಿ, ರಾಜ್ಯ ಸರ್ಕಾರ ₹ 585 ಕೋಟಿ ವ್ಯಯಿಸಿವೆ.
- ‘ಗ್ರಾಮದಲ್ಲಿ ಒಂದು ರಸ್ತೆ ಅಭಿವೃದ್ಧಿಪಡಿಸಿದ್ದರೆ ಮತ್ತೊಂದು ರಸ್ತೆ ನಿರ್ಮಿಸಲು ಯೋಜನೆಯ 4ನೇ ಹಂತದಲ್ಲಿ ಅವಕಾಶವಿಲ್ಲ. ರಸ್ತೆ ದುರಸ್ತಿಗೂ ಅವಕಾಶವಿಲ್ಲ. ಇದರಿಂದ ರಾಜ್ಯವು ಯೋಜನೆಯ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಮಾರ್ಗಸೂಚಿಗೆ ತಿದ್ದುಪಡಿ ತಂದರೆ ಮಾತ್ರ ರಾಜ್ಯಕ್ಕೆ ಅನುಕೂಲ ಆಗಲಿದೆ’ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ದರೋಜಿ ಬಳಿ ಸ್ಕಾಪ್ಸ್ ಗೂಬೆ ಗೋಚರ
ಸಂದರ್ಭ: ತಾಲ್ಲೂಕಿನ ದರೋಜಿ ಕರಡಿಧಾಮದ ಬಳಿ ಈ ಭಾಗದಲ್ಲಿ ಅತ್ಯಂತ ವಿರಳವಾಗಿರುವ ಭಾರತೀಯ ಸ್ಕಾಪ್ಸ್ ಗೂಬೆ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ.
- ಕಿವಿಯಂತಹ ಗರಿಯನ್ನು ಹೊಂದಿರುವ ಬೂದು ಬಣ್ಣದ ಗೂಬೆ 20ರಿಂದ 25 ಸೆಂ.ಮೀ ಉದ್ದವಿದೆ. ಕಣ್ಣು ಕಡು ಕಪ್ಪು. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಗುರುತಿಸುವುದು ಕಷ್ಟ. ಈ ಗೂಬೆಗೆ ‘ಛದ್ಮವೇಷಧಾರಿ’ ಎಂದೂ ಕರೆಯಲಾಗುತ್ತದೆ.
- ರಾತ್ರಿ ಗೂಬೆಯ ‘ವಟ್ ವಟ್’ ಸದ್ದಿನಿಂದ ಜಾಗೃತರಾದ ಪಕ್ಷಿ ವೀಕ್ಷಕರಾದ ಸವ್ಯಸಾಚಿ ರಾಯ್, ಶ್ರೀಧರ ಪೆರುಮಾಳ್, ಪಂಪಯ್ಯ ಸ್ವಾಮಿ ಮಳೀಮಠ ಅವರು ಗೂಬೆಯ ಚಲನವಲನ ಹಿಂಬಾಲಿಸಿದ್ದರು. ಶ್ರೀಧರ ಪೆರುಮಾಳ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು.
- ‘ಪಶ್ಚಿಮಘಟ್ಟದಲ್ಲಿ ಇಂತಹ ಗೂಬೆ ಗೋಚರಿಸುವುದು ಅಪರೂಪ. ಬಳ್ಳಾರಿ– ಹೊಸಪೇಟೆ ವ್ಯಾಪ್ತಿಯಲ್ಲಿ ಇದು ಕಾಣಿಸಿದ್ದೇ ಇಲ್ಲ’ ಎಂದು ಪಂಪಯ್ಯಸ್ವಾಮಿ ಮಳೀಮಠ.
- 24 ದೇಶಗಳಿಗೆ ಭಾರತದ ರಫ್ತು ಹೆಚ್ಚಳ
ಸಂದರ್ಭ: ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ₹11.37 ಲಕ್ಷ ಕೋಟಿ ಮೌಲ್ಯದ ವಹಿವಾಟು. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್ ಅಂತ್ಯದವರೆಗೆ) 24 ದೇಶಗಳಿಗೆ ದೇಶದ ರಫ್ತು ಏರಿಕೆ ಕಂಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
- ಇದೇ ಅವಧಿಯಲ್ಲಿ ಹೆಚ್ಚಿನ ಸುಂಕ ದಿಂದಾಗಿ ಅಮೆರಿಕಕ್ಕೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಕೊರಿಯಾ, ಯುಎಇ, ಜರ್ಮನಿ, ಈಜಿಪ್ಟ್, ವಿಯೆಟ್ನಾಂ, ಇರಾಕ್, ಮೆಕ್ಸಿಕೊ, ರಷ್ಯಾ, ಕೆನ್ಯಾ, ನೈಜೀರಿಯಾ, ಕೆನಡಾ ಸೇರಿದಂತೆ 24 ರಾಷ್ಟ್ರಗಳಿಗೆ ದೇಶದಿಂದ ಆಗುವ ರಫ್ತು ಹೆಚ್ಚಾಗಿದೆ.
- ಭಾರತವು ತನ್ನ ಸರಕುಗಳನ್ನು ಬೇರೆ ಬೇರೆ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣ ದಲ್ಲಿ ರಫ್ತು ಮಾಡಲು ಆದ್ಯತೆ ನೀಡುತ್ತಿರುವುದನ್ನು ಇದು ತೋರಿಸುತ್ತಿದೆ.
- ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಒಟ್ಟು ರಫ್ತಿನಲ್ಲಿ ಶೇ 3.02ರಷ್ಟು ಹೆಚ್ಚಳವಾಗಿದ್ದು, ₹19.35 ಲಕ್ಷ ಕೋಟಿಯಷ್ಟಾಗಿದೆ. ದೇಶದ ಆಮದು ಶೇ 4.53ರಷ್ಟು ಏರಿಕೆಯಾಗಿದ್ದು, ₹33 ಲಕ್ಷ ಕೋಟಿಯಷ್ಟಾಗಿದೆ. ವ್ಯಾಪಾರ ಕೊರತೆ ₹13.63 ಲಕ್ಷ ಕೋಟಿಯಾಗಿದೆ.
- ಇದೇ ಅವಧಿಯಲ್ಲಿ ಈ 24 ದೇಶಗಳಿಗೆ ₹11.37 ಲಕ್ಷ ಕೋಟಿ ಮೌಲ್ಯದಷ್ಟು ರಫ್ತು ವಹಿವಾಟು ದೇಶದಿಂದ ನಡೆದಿದೆ. ಇದು ದೇಶದ ಒಟ್ಟು ರಫ್ತಿನಲ್ಲಿ ಶೇ 59ರಷ್ಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಆದರೆ, ಕೇಂದ್ರ ವಾಣಿಜ್ಯ ಸಚಿವಾಲ ಯದ ಅಂಕಿ ಅಂಶಗಳ ಪ್ರಕಾರ, ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 16 ದೇಶಗಳಿಗೆ ದೇಶದ ರಫ್ತು ಪ್ರಮಾಣ ಇಳಿಕೆಯಾಗಿದೆ. ಈ ದೇಶಗಳು ದೇಶದ ಒಟ್ಟು ರಫ್ತಿನಲ್ಲಿ ಶೇ 27ರಷ್ಟು ಪಾಲು ಹೊಂದಿವೆ.
- ಅಮೆರಿಕವು ಭಾರತದಿಂದ ಆಮದಾ ಗುವ ಸರಕುಗಳ ಮೇಲೆ ವಿಧಿಸಿರುವ ಶೇ 50ರಷ್ಟು ಸುಂಕವು, ಅಮೆರಿಕಕ್ಕೆ ರಫ್ತು ಮಾಡಲು ತೊಂದರೆ ಉಂಟು ಮಾಡಿದೆ. ಆದರೆ, ರಫ್ತುದಾರರು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಪಶ್ಚಿಮ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲೂ ಈ ರಫ್ತು ಹೆಚ್ಚಳವಾಗಲಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.
- ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಅಮೆರಿಕಕ್ಕೆ ದೇಶದ ರಫ್ತು ಶೇ 13.37ರಷ್ಟು ಹೆಚ್ಚಳವಾಗಿದೆ. ಇದು ರೂಪಾಯಿ ಮೌಲ್ಯದಲ್ಲಿ ₹4 ಲಕ್ಷ ಕೋಟಿಯಷ್ಟಾಗಿದೆ. ಆಮದು ಶೇ 9ರಷ್ಟು ಏರಿಕೆಯಾಗಿದ್ದು, ₹2.25 ಲಕ್ಷ ಕೋಟಿ ಆಗಿದೆ.
- 2024–25ರ ಆರ್ಥಿಕ ವರ್ಷದಲ್ಲಿ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
ಅಮೆರಿಕಕ್ಕೆ ರಫ್ತು ಇಳಿಕೆ
- ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ಸರಕುಗಳ ರಫ್ತು ಇಳಿಕೆ ಆಗಿದೆ. ಇದೇ ಅವಧಿಯಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ ರಫ್ತು ಹೆಚ್ಚಳವಾಗಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ವರದಿ ಹೇಳಿದೆ.
- ಆಗಸ್ಟ್ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದಿಂದ ರಫ್ತಾದ ಸರಕುಗಳಲ್ಲಿ ಶೇ 7ರಷ್ಟು ಬೆಳವಣಿಗೆ ಆಗಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ 11.9ರಷ್ಟು ಇಳಿಕೆಯಾಗಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹48,372 ಕೋಟಿಯಷ್ಟಾಗಿದೆ.
- ಇದೇ ಅವಧಿಯಲ್ಲಿ ಅಮೆರಿಕ ಹೊರತುಪಡಿಸಿ ಬೇರೆ ದೇಶಗಳಿಗೆ, ಭಾರತದಿಂದಾದ ಸರಕುಗಳ ರಫ್ತು ಶೇ 10.9ರಷ್ಟು ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ರಫ್ತು ಶೇ 6.6ರಷ್ಟು ಮಾತ್ರ ಇತ್ತು.
- ಅಮೆರಿಕದ ಹೆಚ್ಚುವರಿ ಸುಂಕವು ದೇಶದ ಸರಕುಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ಎಚ್ಚರಿಸಿದೆ.
- ಕದನ ವಿರಾಮಕ್ಕೆ ಒಪ್ಪಿದ ಪಾಕ್– ಅಫ್ಗಾನಿಸ್ತಾನ
ಸಂದರ್ಭ: ಗಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಿ, ಶಾಂತಿ ಮರುಸ್ಥಾಪನೆಗೆ ಮುಂದಾಗಲು ಪಾಕಿಸ್ತಾನ–ಅಫ್ಗಾನಿಸ್ತಾನ ಒಪ್ಪಿಗೆ ಸೂಚಿಸಿವೆ.
- ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತು ಅಫ್ಗಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ದೋಹಾದಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೇ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿವೆ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಸಂಧಾನಕ್ಕೆ ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆ ವಹಿಸಿದ್ದವು.
- ಶಾಂತಿ ಮರುಸ್ಥಾಪನೆ ಮತ್ತು ಸ್ಥಿರತೆ ತರುವ ವಿಚಾರದಲ್ಲಿ ಸಭೆಗಳು ನಡೆಯಲಿವೆ ಎಂದು ಉಭಯ ದೇಶಗಳು ಹೇಳಿವೆ. ನಿಷೇಧಿತ ತೆಹ್ರೀಕ್–ಎ–ತಾಲಿಬಾನ್ ಪಾಕಿಸ್ತಾನ್‌ನ (ಟಿಟಿಪಿ) ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವು ದೋಹಾ ಸಭೆಯಲ್ಲಿ ಅಘ್ಗಾನಿಸ್ತಾನವನ್ನು ಒತ್ತಾಯಿಸಿದೆ.
- ಕದನ ವಿರಾಮದ ನಡುವೆಯೇ ಇಸ್ರೇಲ್ ದಾಳಿ
ಸಂದರ್ಭ: ಕದನ ವಿರಾಮದ ನಡುವೆಯೇ ಇಸ್ರೇಲ್ ಸೇನೆ ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ಗಾಜಾಪಟ್ಟಿಯ ಹಲವೆಡೆ ದಾಳಿ ನಡೆಸಿದೆ.
- ಸೇನೆಯ ನಿಯಂತ್ರಣದಲ್ಲಿರುವ ಗಾಜಾದಲ್ಲಿ ಹಮಾಸ್ ಬಂಡುಕೋರರು ಇಸ್ರೇಲ್ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಆದರೆ, ಗಾಜಾಪಟ್ಟಿಯ ದಕ್ಷಿಣ ಭಾಗದ ರಫಾದಲ್ಲಿ ಯಾವುದೇ ಘರ್ಷಣೆಯಲ್ಲಿ ಭಾಗಿಯಾಗಿಲ್ಲ ಎಂದು ಹಮಾಸ್ ಹೇಳಿದೆ.
- ‘ಹಮಾಸ್‌ನಿಂದ ಕದನ ವಿರಾಮ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಿ’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಸೇನಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆದರೆ, ಮತ್ತೊಮ್ಮೆ ಯುದ್ಧ ಪುನರಾರಂಭಿಸುವ ಬೆದರಿಕೆ ಒಡ್ಡಿಲ್ಲ. ಇದರ ಬೆನ್ನಲ್ಲೇ, ಕದನ ವಿರಾಮಕ್ಕೆ ಸಂಬಂಧಿಸಿದ ಎರಡನೆಯ ಸುತ್ತಿನ ಮಾತುಕತೆ ಆರಂಭಗೊಂಡಿದೆ ಎಂದು ಪ್ಯಾಲೆಸ್ಟೀನ್ ಹೇಳಿದೆ. ಹಮಾಸ್‌ನ ಸಂಪೂರ್ಣ ನಿಶ್ಶಸ್ತ್ರೀಕರಣ, ಗಾಜಾದ ಭವಿಷ್ಯದ ಆಡಳಿತ ಎರಡನೆಯ ಸುತ್ತಿನ ಕದನ ವಿರಾಮ ಮಾತುಕತೆಯ ಪ್ರಮುಖ ಅಂಶಗಳು.
- ಬಾಕಿ ಉಳಿದಿದ್ದ ಇಬ್ಬರು ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಶನಿವಾರ ರಾತ್ರೋರಾತ್ರಿ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ, ಇಸ್ರೇಲ್ ಸೇನೆಯಿಂದ ದಾಳಿ ನಡೆದಿದೆ. ಹಮಾಸ್ ಕದನ ವಿರಾಮ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವರೆಗೆ ಗಾಜಾ–ಈಜಿಪ್ಟ್ ನಡುವಿನ ರಫಾ ಗಡಿಯನ್ನು ಮುಚ್ಚುವುದಾಗಿ ಇಸ್ರೇಲ್ ಎಚ್ಚರಿಸಿದೆ.
- ಮೃತದೇಹ ಹಸ್ತಾಂತರ: ಕದನ ವಿರಾಮ ಘೋಷಣೆಯಾದ ನಂತರ, ಕಳೆದ ಒಂದು ವಾರದಲ್ಲಿ ಹಮಾಸ್ ಇಸ್ರೇಲ್‌ಗೆ 13 ಮೃತದೇಹಗಳನ್ನು ಹಸ್ತಾಂತರಿಸಿದೆ. ಇದರಲ್ಲಿ 12 ಮೃತದೇಹಗಳು ಒತ್ತೆಯಾಳುಗಳದ್ದು ಎಂದು ಇಸ್ರೇಲ್ ಸೇನೆ ಗುರುತಿಸಿದೆ. ಇಸ್ರೇಲ್, ಹಮಾಸ್‌ಗೆ 150 ಪ್ಯಾಲೆಸ್ಟೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
- ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ
ಸಂದರ್ಭ: ವಿಶ್ವ ಜೂ. ಬ್ಯಾಡ್ಮಿಂಟನ್: ಥಾಯ್ಲೆಂಡ್‌ನ ಅನ್ಯಪತ್ಗೆ ಚಿನ್ನ: ಥಾಯ್ಲೆಂಡ್‌ನ ಅನ್ಯಪತ್ ಫಿಚಿಟ್ಪ್ರೀಚಸಕ್ ಅವರು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ನೇರ ಆಟಗಳಿಂದ ಅಗ್ರ ಶ್ರೇಯಾಂಕದ ಭಾರತದ ಆಟಗಾರ್ತಿಯನ್ನು ಅವರನ್ನು ಮಣಿಸಿ ಚಾಂಪಿಯನ್ ಆದರು.
- ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಅಪರ್ಣಾ ಪೊಪಟ್ ಬಳಿಕ ಈ ಟೂರ್ನಿಯ ಫೈನಲ್ ತಲುಪಿದ ಭಾರತದ ಮೂರನೇ ಆಟಗಾರ್ತಿಎನಿಸಿರುವ 16 ವರ್ಷ ವಯಸ್ಸಿನ ತನ್ವಿ 7–15, 12–15 ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿಗೆ ಸೋತರು.
- ಇದು 17 ವರ್ಷಗಳಲ್ಲಿ ಭಾರತದ ಆಟಗಾರ್ತಿಯೊಬ್ಬರು ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಗೆಲ್ಲುತ್ತಿರುವ ಮೊದಲ ಬೆಳ್ಳಿ ಪದಕವಾಗಿದೆ. ಸೈನಾ (2008ರಲ್ಲಿ ಚಿನ್ನ, 2006ಲ್ಲಿ ಬೆಳ್ಳಿ), ಅಪರ್ಣಾ (1996ರಲ್ಲಿ ಬೆಳ್ಳಿ) ಈ ಹಿಂದೆ ಪದಕ ಗೆದ್ದ ಭಾರತದ ಇನ್ನಿಬ್ಬರು ಆಟಗಾರ್ತಿಯರಾಗಿದ್ದಾರೆ.
- ಲಿಯು ಯಾಂಗ್‌ಗೆ ಪ್ರಶಸ್ತಿ: ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಲಿಯು ಯಾಂಗ್ ಮಿಂಗ್ ಯು ಅವರು 15–10, 15–11 ರಿಂದ ಇಂಡೊನೇಷ್ಯಾದ ಮೊಹಮ್ಮದ್ ಝಕಿ ಉಬೈದಿಲ್ಲಾ ಅವರನ್ನು ಸೋಲಿಸಿದರು. ಮೂರನೇ ಶ್ರೇಯಾಂಕದ ಆಟಗಾರ, ಅಗ್ರ ಶ್ರೇಯಾಂಕದ ಉಬೈದಿಲ್ಲಾ ಅವರನ್ನು ಮಣಿಸಲು 35 ನಿಮಿಷ ತೆಗೆದುಕೊಂಡರು.
- ಏಷ್ಯನ್ ರೋಯಿಂಗ್: ಭಾರತಕ್ಕೆ 10 ಪದಕ
ಸಂದರ್ಭ: ಒಲಿಂಪಿಯನ್ ಬಲರಾಜ್ ಪನ್ವರ್ ನೇತೃತ್ವದಲ್ಲಿ ವಿಯೆಟ್ನಾಮಿನ ಹಾಯ್ ಫಾಂಗ್ನಲ್ಲಿ ನಡೆದ ಏಷ್ಯನ್ ರೋಯಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತ ಉತ್ತಮ ಸಾಧನೆ ತೋರಿತು. ಈ ಕೂಟದಲ್ಲಿ ಮೂರು ಚಿನ್ನ, ಐದು ಬೆಳ್ಳಿ, ಎರಡು ಕಂಚು ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿತು.
- ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನ ಇದೆನಿಸಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಪನ್ವರ್ ಪುರುಷರ ಸಿಂಗಲ್ ಸ್ಕಲ್ (ಎಂ1ಎಕ್ಸ್) ರೇಸ್‌ನಲ್ಲಿ ಅಧಿಕಾರಯುತ ಪ್ರದರ್ಶನದೊಡನೆ ಚಿನ್ನ ಗೆದ್ದರು.
- ಲೈಟ್‌ವೇಟ್ ಮೆನ್ಸ್ ಡಬಲ್ ಸ್ಕಲ್‌ನಲ್ಲಿ ಭಾರತ ಮತ್ತೊಂದು ಚಿನ್ನ ಗೆದ್ದುಕೊಂಡಿತು. ಲಕ್ಷಯ್ ಮತ್ತು ಅಜಯ್ ತ್ಯಾಗಿ ಈ ತಂಡದಲ್ಲಿದ್ದರು. ಪುರುಷರ ಕ್ವಾಡ್ರಾಪಲ್ ಸ್ಕಲ್ ಸ್ಪರ್ಧೆ ಯಲ್ಲೂ ತಂಡದ (ಕುಲ್ವಿಂದರ್ ಸಿಂಗ್, ನವದೀಪ್ ಸಿಂಗ್, ಸತ್ನಾಮ್ ಸಿಂಗ್ ಮತ್ತು ಜೇಕರ್ ಖಾನ್) ಉತ್ತಮ ಸಮನ್ವಯದಿಂದ ಚಿನ್ನ ಒಲಿಯಿತು.
- ಭಾರಿ ಸುಂಕ: ಟ್ರಂಪ್ ಎಚ್ಚರಿಕೆ: ತೈಲ ಖರೀದಿ ಹೆಚ್ಚಳ
ಸಂದರ್ಭ: 2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಭಾರತವು ರಷ್ಯಾದಿಂದ ಖರೀದಿಸುವ ಕಚ್ಚಾತೈಲದ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
- 2025ರ ಮೊದಲ ಒಂಬತ್ತು ತಿಂಗಳಲ್ಲಿ ರಷ್ಯಾದಿಂದ ಪ್ರತಿದಿನ 19 ಲಕ್ಷ ಬ್ಯಾರಲ್‌ನಷ್ಟು ತೈಲ ಖರೀದಿಸಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ. ಆಂದರೆ, ಈ ಅವಧಿಯಲ್ಲಿ ರಷ್ಯಾದ ಒಟ್ಟು ರಫ್ತಿನ ಶೇ 40ರಷ್ಟು ತೈಲ ಭಾರತಕ್ಕೆ ಬಂದಿದೆ.
- ಉಕ್ರೇನ್ ಸೇನೆಯು ರಷ್ಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿಯನ್ನು ಹೆಚ್ಚಿಸಿದೆ. ಇದರ ನಡುವೆಯೇ ಭಾರತದ ಮೇಲೆ ಅಮೆರಿಕದ ಒತ್ತಡ ಬಂದಿದೆ.
- ತಾಯಂದಿರ ಮರಣ ದರ ಇಳಿಸಲು ಅಭಿಯಾನ
ಸಂದರ್ಭ: ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆಯು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಈ ಸಂಬಂಧ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಬಲವರ್ಧನೆ, ಉಪಕರಣಗಳ ಖರೀದಿ ಸೇರಿ ವಿವಿಧ ಕ್ರಮಗಳಿಗೆ ₹139 ಕೋಟಿ ಅನುದಾನ ಬಳಸಿಕೊಳ್ಳಲು ಅನುಮೋದನೆ ದೊರೆತಿದೆ.
- ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಮುಖವಾಗಿವೆ. 2024–25ನೇ ಸಾಲಿನಲ್ಲಿ ರಾಜ್ಯದಲ್ಲಿ 9.31 ಲಕ್ಷ ಹೆರಿಗೆಗಳಾಗಿದ್ದು, 530 ತಾಯಂದಿರ ಮರಣ ಪ್ರಕರಣ ವರದಿಯಾಗಿದೆ. ಈ ಸಾವಿನ ನಿಖರ ಕಾರಣ ತಿಳಿಯಲು ಸಾವಿನ ಲೆಕ್ಕಗಳ ವರದಿ (ಡೆತ್ ಆಡಿಟ್) ಸಿದ್ಧಪಡಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
- ರಕ್ತಸ್ರಾವ, ಗರ್ಭಪಾತ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಕಾರಣಗಳಿಂದ ತಾಯಂದಿರ ಮರಣ ವರದಿ ಆಗುತ್ತಿದ್ದು, ಶೇ 70 ರಷ್ಟು ಪ್ರಕರಣಗಳಲ್ಲಿ ಮರಣವನ್ನು ತಡೆಯಬಹುದಾಗಿದೆ. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯ ಗುಣಮಟ್ಟ ಸುಧಾರಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದೆ.
- ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆಯಲ್ಲಿನ ತೀವ್ರತರಹದ ರಕ್ತಸ್ರಾವ ತಡೆಗಟ್ಟಲು, ಚಿಕಿತ್ಸೆ ನೀಡಲು ಅಗತ್ಯ ಇರುವ ಉಪಕರಣಗಳ ಖರೀದಿ, ಹಾಸಿಗೆಗಳ ಹೆಚ್ಚಳ, ಆಸ್ಪತ್ರೆಗಳ ಮೇಲ್ದರ್ಜೆ, ಮೇಲ್ವಿಚಾರಣೆ ಸೌಲಭ್ಯ, ವಿಶ್ರಾಂತಿ ಕೊಠಡಿ, ಸಹಾಯವಾಣಿ ಸೇರಿ ವಿವಿಧ ವ್ಯವಸ್ಥೆಗೆ ಅನುದಾನ ಹಂಚಿಕೆ ಮಾಡಲಾಗಿದೆ.
- ‘₹50 ಸಾವಿರ ಕೋಟಿ ವಿದೇಶಿ ಹೂಡಿಕೆ’
ಸಂದರ್ಭ: ದೇಶದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯಗಳಲ್ಲಿ ₹50 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ವಿದೇಶಿ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಲ್ಲಿ ಪ್ರಕಟಿಸಿದ್ದಾರೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
- ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗುತ್ತಿದ್ದರೂ ಭಾರತವು ಹೂಡಿಕೆಯ ಓಯಸಿಸ್‌ನಂತೆ ಕಾಣುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಭಾರತವು ಆದ್ಯತೆಯ ಹೂಡಿಕೆ ತಾಣವಾಗಿ ಮುಂದೆ ಬರುತ್ತಿದೆ ಎಂದು ಹೇಳಿದ್ದಾರೆ.
- ಅಸ್ಥಿರತೆಯ ಕಾಲಘಟ್ಟದಲ್ಲಿಯೂ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್ಡಿಐ) ಹರಿವು ಚೆನ್ನಾಗಿಯೇ ಇದೆ. ಎಫ್ಡಿಐನಲ್ಲಿನ ಹೆಚ್ಚಳವು ದೇಶದ ಅರ್ಥ ವ್ಯವಸ್ಥೆಯು ಹೂಡಿಕೆದಾರರಿಗೆ ಹೆಚ್ಚೆಚ್ಚು ಆಕರ್ಷಕವಾಗಿ ಕಾಣುತ್ತಿದೆ ಎಂಬುದನ್ನು ಹೇಳುತ್ತಿದೆ ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.
- ಏಷ್ಯನ್ ಯೂತ್ ಗೇಮ್ಸ್: ಭಾರತಕ್ಕೆ ಎರಡು ಪದಕ
ಸಂದರ್ಭ: ಹದಿನಾಲ್ಕು ವರ್ಷದ ಕನಿಷ್ಕಾ ಬಿಧುರಿ ಮತ್ತು ಅರವಿಂದ್ ಅವರು ಏಷ್ಯನ್ ಯೂತ್ ಗೇಮ್ಸ್ನ ಕುರಾಶ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
- ಕನಿಷ್ಕಾ ಅವರು ಬಾಲಕಿಯರ 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 0–3ರಿಂದ ಉಜ್ಬೇಕಿಸ್ತಾನದ ಕರಿಮೋವಾ ಮುಬಿನಾಬೋನುಗೆ ಅವರಿಗೆ ಮಣಿದು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
- ಇದಕ್ಕೂ ಮೊದಲು ಸೆಮಿಫೈನಲ್ ನಲ್ಲಿ ಕನಿಷ್ಕಾ 10–0 ಅಂತರದಿಂದ ಜಲಲೋದ್ದೀನ್ ಸೆಟಾಯೇಶ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಖುಂಡಿ ವಾರಾಚಯಾ ಎದುರು ಗೆಲುವು ಸಾಧಿಸಿದ್ದರು.
- ಬಾಲಕರ 83 ಕೆ.ಜಿ. ವಿಭಾಗದಲ್ಲಿ ಅರವಿಂದ ಅವರು ಕಂಚಿನ ಪದಕದ ಹೋರಾಟದಲ್ಲಿ 10–0ಯಿಂದ ದವ್ಲಾಟ್ಜೋಡಾ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅರವಿಂದ 0–10ರಿಂದ ಉಜ್ಬೇಕಿ ಸ್ತಾನದ ಗೋಲಿಬೊವ್ ಶೋಹ್ಜಾ ಹೋನ್ ವಿರುದ್ಧ ಸೋತಿದ್ದರು.
- 15 ವರ್ಷದ ಖುಷಿ ಭಾನುವಾರ ಬಾಲಕಿಯರ 70 ಕೆ.ಜಿ. ಕುರಾಶ್ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಭಾರತದ ಪರ ಮೊದಲ ಪದಕ ಗೆದ್ದಿದ್ದರು.
- ಇದೇ 31ರವರೆಗೆ ನಡೆಯಲಿರುವ ಕೂಟದಲ್ಲಿ 222 ಮಂದಿಯ ಭಾರತ ಅಥ್ಲೀಟುಗಳ ತಂಡ ಭಾಗವಹಿಸುತ್ತಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ.
- ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ ದತ್ ಅವರು ತಂಡದ ಷೆಫ್–ಡಿ– ಮಿಷನ್ ಆಗಿದ್ದಾರೆ.
- ವಿಷವನ್ನು ಸೋಸೋಣ ಬನ್ನಿ!
ಸಂದರ್ಭ: ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಈ ಮಾಲಿನ್ಯಗಳಲ್ಲಿ ‘ಪರ್ಪ್ಲೂರೋಆಲ್ಕೈಲ್’ನ ಮಾಲಿನ್ಯವೂ ಒಂದು.
- ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಿಂದ ಸೋರುವ ಈ ಬಗೆಯ ರಾಸಾಯನಿಕಗಳು ಬಡಪೆಟ್ಟಿಗೆ ನಾಶವಾಗುವುದಿಲ್ಲ. ಇಂತಹ ಶಾಶ್ವತ ಮಲಿನಕಗಳನ್ನೂ ನೀರಿನಿಂದ ಹೊರ ತೆಗೆದು ಶುಚಿಗೊಳಿಸುವ ಹೊಸ ವಿಧಾನವೊಂದನ್ನು ದಕ್ಷಿಣ ಕೊರಿಯಾದ ಕೊರಿಯಾ ಅಡ್ವಾನ್ಸಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ಸೋಟೆ ಕಾಂಗ್ ಮತ್ತು ಸಂಗಡಿಗರು ರೂಪಿಸಿದ್ದಾರಂತೆ.
- ನೀರು ಹಾಗೂ ಕೊಳಚೆ ನೀರಿನಲ್ಲಿ ಇರುವ ಪರ್‌ಫ್ಲೂರೋಆಲ್ಕೈಲ್ ಹಾಗೂ ಪಾಲಿಫ್ಲೂರೋಆಲ್ಕೈಲ್ ರಾಸಾಯನಿಕಗಳನ್ನು ಸಾವಿರ ಪಟ್ಟು ಹೆಚ್ಚು ಹಾಗೂ ನೂರು ಪಟ್ಟು ವೇಗವಾಗಿ ಈ ವಿಧಾನ ಶುಚಿಗೊಳಿಸಲಿದೆ.
- ‘ಪರ್ಫ್ಲೂರೋಆಲ್ಕೈಲ್’ ಹಾಗೂ ‘ಪಾಲಿಫ್ಲೂರೋ ಆಲ್ಕೈಲ್’ ಎನ್ನುವವು ವಿಶಿಷ್ಟ ರಾಸಾಯನಿಕಗಳು. ‘ಪಿಎಫ್‌ಎ’ ಎಂದು ಚುಟುಕಾಗಿ ಕರೆಸಿಕೊಳ್ಳುವ ಇವು ಫ್ಲೂರೀನಿನ ಜೊತೆಗೆ ಇಥಿಲೀನಿನಂತಹ ಅಣುಗಳು ಬೆಸೆದುಕೊಂಡು ರೂಪುಗೊಂಡ ರಾಸಾಯನಿಕಗಳ ವರ್ಗ.
- ಈ ವರ್ಗದಲ್ಲಿರುವ ರಾಸಾಯನಿಕಗಳು ನೀರಿನಂತಹ ದ್ರವಗಳಿಂದ, ಗಟ್ಟಿಯಾದ ಅಂಟುಗಳವರೆಗೂ ಹಲವು ರೀತಿಯಲ್ಲಿ ರೂಪುಗೊಳ್ಳಬಲ್ಲವು. ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಲ್ಲಿ ಇವು ಬೆರೆತಿರುತ್ತವೆ. ಉದಾಹರಣೆಗೆ, ಅಡುಗೆಮನೆಯಲ್ಲಿ ಬಳಸುವ ನಾನ್ ಸ್ಟಿಕ್ ಪಾತ್ರೆಗಳಿಗೆ ಹಚ್ಚಿರುವ ನಯವಾದ ಲೇಪಗಳಲ್ಲಿ, ಚಾಟ್ ಅಂಗಡಿಗಳಿಂದ ತರುವ ತಿನಿಸುಗಳನ್ನು ಪ್ಯಾಕ್ ಮಾಡಿದ ಪೇಪರ್ ಪ್ಯಾಕಿನ ಒಳಭಾಗದಲ್ಲಿನ ತೇವ ಅಂಟದ ನಯವಾದ ಲೇಪಗಳಲ್ಲಿ, ಕಲೆಗಳು ಹತ್ತದಂತಹ ನೆಲಹಾಸು ಕಂಬಳಿ, ಉಡುಪುಗಳಲ್ಲಿ, ನೀರಿನ ಕೊಳವೆಗಳನ್ನು ಅಂಟಿಸುವ ಗೋಂದುಗಳಲ್ಲಿ, ಬೆಂಕಿಯನ್ನು ಆರಿಸುವ ಪೋಮುಗಳಲ್ಲಿ, ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಈ ವರ್ಗದ ರಾಸಾಯನಿಕಗಳು ಬಳಕೆಯಾಗುತ್ತವೆ.
- ಇಷ್ಟೊಂದು ಉಪಯುಕ್ತವಾಗಿರುವ ಈ ರಾಸಾಯನಿಕಗಳಲ್ಲೊಂದು ದೋಷವಿದೆ. ಇವು ಒಮ್ಮೆ ನೀರು–ಮಣ್ಣುಗಳನ್ನು ಸೇರಿದರೆ ಹಾಗೆಯೇ ಉಳಿದುಬಿಡುತ್ತವೆ. ಬೇರೆ ವಸ್ತುಗಳು ಬಿಸಿಲು, ನೀರು, ಆಕ್ಸಿಜನ್‌ನಿಂದಾಗಿ ಶಿಥಿಲವಾಗಬಹುದು. ಆದರೆ ಪರ್‌ಫ್ಲೂರೋಆಲ್ಕೈಗಳು ಹಾಗಲ್ಲ. ಇವು ಸುಲಭವಾಗಿ ಬೇರೆ ರಾಸಾಯನಿಗಳ ಜೊತೆಗೆ ಪ್ರತಿಕ್ರಿಯಿಸುವುದಿಲ್ಲ, ಕೊಳೆಯುವುದಿಲ್ಲ, ಸುಟ್ಟರೆ ಬೂದಿಯೂ ಆಗುವುದಿಲ್ಲ. ಹೀಗಾಗಿ ನಿತ್ಯ ಬಳಸುವ ಎಲ್ಲ ವಸ್ತುಗಳಿಂದಲೂ ಸ್ವಲ್ಪ, ಸ್ವಲ್ಪವೇ ಸೋರಿ ಎಲ್ಲ ಜಲಮೂಲಗಳಲ್ಲೂ, ಆಹಾರಮೂಲ ಗಳಲ್ಲಿಯೂ ಬೆರೆತಿರುತ್ತವೆ.
- ಮಾಲಿನ್ಯವೊಂದೇ ಸಮಸ್ಯೆ ಅಲ್ಲ. ಮಾಲಿನ್ಯದಿಂದ ಹೊರಸೂಸುವ ರಾಸಾಯನಿಕಗಳು ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಆತಂಕದ ವಿಷಯ. ಪರ್‌ಫ್ಳೂರೋಆಲ್ಕೈಲುಗಳ ಸೇವನೆಯಿಂದಾಗಿ ಲಿವರ್‌ನ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ದೇಹದ ರೋಗನಿರೋಧಕ ಶಕ್ತಿ ಕುಗ್ಗಬಹುದು. ಕೆಲವು ಕ್ಯಾನ್ಸರ್‌ಗಳು ಕೂಡ ಉಂಟಾಗುತ್ತವೆಂದು ಸುಳಿವುಗಳು ತಿಳಿಸಿವೆ. ಅಮೆರಿಕದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಅಧ್ಯಯನವೊಂದು, ಒಂದು ಬಗೆಯ ಲ್ಯೂಕೀಮಿಯ ಹಾಗೂ ವಿಲ್ಮ್ಸ್ ಟ್ಯೂಮರ್ ಎನ್ನುವ ಕ್ಯಾನ್ಸರಿಗೆ ತುತ್ತಾಗಿದ್ದ ಎಳೆಯರ ತಾಯಂದಿರು ಬಸುರಾಗಿದ್ದಾಗ ಪರ್‌ಫ್ಲೂರೋಆಕ್ಟೇನ್ ಸಲ್ಫೂನಿಕ್ ಆಮ್ಲ ಹಾಗೂ ಪರ್‌ಫ್ಲೂರೋಆಕ್ಟನಾಯಿಕ್ ಆಮ್ಲಗಳ ಪ್ರಮಾಣ ಹೆಚ್ಚಿದ್ದ ನೀರನ್ನು ಸೇವಿಸಿದ್ದರು ಎಂದು ತಿಳಿಸಿದೆ.
- ಅತ್ಯಲ್ಪ ಪ್ರಮಾಣದಲ್ಲಿಯೂ ಇಂತಹ ರಾಸಾಯನಿಕಗಳ ಸೇವನೆ ಅಪಾಯಕಾರಿಯಾಗಿದ್ದರಿಂದ ಕುಡಿಯುವ ನೀರಿನಲ್ಲಿ ಅವುಗಳ ಪ್ರಮಾಣವನ್ನು ಮಿತಿಗೊಳಿಸಲಾಗಿದೆ. ಪಿಎಫ್‌ಎ ಇರುವಂತಹ ನೀರನ್ನು ಶುಚಿಗೊಳಿಸಿ ಸರಬರಾಜು ಮಾಡಬೇಕೆನ್ನುವ ನಿಯಮವೂ ಇದೆ. ಈ ರಾಸಾಯನಿಕಗಳು ನೀರಿನ ಮೂಲಕ ಹಸುವಿನ ಹಾಲು, ತಾಯಿಯ ಹಾಲಿನಲ್ಲಿಯೂ ಸೇರಿಕೊಳ್ಳುತ್ತವೆ. ಮಕ್ಕಳು ಹಾಗೂ ದೊಡ್ಡವರ ರಕ್ತದಲ್ಲಿಯೂ ಇವುಗಳನ್ನು ಪತ್ತೆ ಮಾಡಲಾಗಿದೆ.
- ಕುಡಿಯುವ ನೀರನ್ನು ಈ ವಿಷವಸ್ತುಗಳಿಂದ ಮುಕ್ತಗೊಳಿಸಲು ಹಲವು ವಿಧಾನಗಳನ್ನು ಬಳಸಲಾಗುತ್ತಿದೆ. ಪ್ರಮುಖವಾಗಿ ಆಕ್ಟಿವೇಟೆಡ್ ಕಾರ್ಬನ್ ಅಥವಾ ಅತಿ ಕ್ರಿಯಾಶೀಲವಾದ ಇದ್ದಿಲಿನಿಂದ ಅವನ್ನು ಪ್ರತ್ಯೇಕಿಸಬಹುದು. ಅಥವಾ ರಿವರ್ಸ್ ಆಸ್ಮಾಸಿಸ್ ತಂತ್ರದ ಮೂಲಕ, ಅತಿ ಸೂಕ್ಷ್ಮವಾದ ಕೃತಕ ಪೊರೆಗಳನ್ನು ಬಳಸಿ ನೀರನ್ನು ಶುಚಿ ಗೊಳಿಸಬಹುದು. ಆದರೆ ಇವು ಅಲ್ಪ ಪ್ರಮಾಣದಲ್ಲಿ ಆಗಬಹುದೇ ಹೊರತು, ಕೊಳಚೆ ನೀರಿನಲ್ಲಿರುವಷ್ಟು ಪ್ರಮಾಣದ ಪಿಎಫ್‌ಎಗಳನ್ನು ಈ ವಿಧಾನಗಳಿಂದ ಶುಚಿಗೊಳಿಸುವುದು ಕಷ್ಟ. ಈ ನಿಟ್ಟಿನಲ್ಲಿ ಹೊಸದೊಂದು ವಿಧಾನದ ಅಗತ್ಯವಿತ್ತು. ಕಾಂಗ್ ಮತ್ತು ಸಂಗಡಿಗರು ಅದನ್ನು ಈಗ ಒದಗಿಸಿದ್ದಾರೆ.
- ಕಾಂಗ್ ತಂಡವು ತಾಮ್ರ ಹಾಗೂ ಅಲ್ಯುಮಿನಿಯಂ ಲೋಹಗಳ ನೈಟ್ರೇಟ್‌ಗಳು ಹೈಡ್ರಾಕ್ಸೈಡ್‌ಗಳ ಜೊತೆಗೆ ಬೆಸೆದುಕೊಂಡು, ಪದರ ಪದರವಾಗಿ ಇರುವಂತಹ ವಿಶೇಷ ರಾಸಾಯ ನಿಕವನ್ನು ತಯಾರಿಸಿದ್ದಾರೆ. ಈ ವರ್ಷ ರಸಾಯನಶಾಸ್ತ್ರದ ನೊಬೆಲ್ ಪಾರಿತೋಷಕವನ್ನು ಗಳಿಸಿದ ಸಂಶೋಧನೆಗಳ ಫಲ ಇದು ಎನ್ನಬಹುದು. ಈ ಲೋಹ ಹಾಗೂ ಸಾವಯವ ಬೆರೆತ ರಾಸಾಯನಿಕಗಳಲ್ಲಿ ಆಕ್ಟಿವೇಟೆಡ್ ಕಾರ್ಬನ್‌ನಲ್ಲಿ ಇರುವುದ ಕ್ಕಿಂತಲೂ ಹೆಚ್ಚು ರಂಧ್ರಗಳೂ, ಪಿಎಫ್‌ಎ ಅಣುಗಳು ಕೂಡಲು ಅವಕಾಶಗಳೂ ಇರುತ್ತವೆ. ಪ್ರತಿ ಗ್ರಾಂ ವಸ್ತುವೂ ಗರಿಷ್ಠ ಸುಮಾರು 1.72 ಗ್ರಾಂನಷ್ಟು ಪಿಎಫ್‌ಎಯನ್ನು ಅಂಟಿಸಿಕೊಳ್ಳಬಹುದು. ಅದುವೂ ಇದನ್ನು ಬಿಸಿ ಮಾಡಬೇಕಿಲ್ಲ. ನೀರಿನ ಆಮ್ಲೀಯತೆಯಲ್ಲಿಯೇ ಇಷ್ಟು ಪಿಎಫ್‌ಎಯನ್ನು ಅದು ಹೀರಿಕೊಳ್ಳುತ್ತದೆ. ಅಂಟಿಕೊಂಡ ಪಿಎಫ್‌ಎಯನ್ನು ಕಾಯಿಸಿ ಬೇರ್ಪಡಿಸಿ, ಅದರಲ್ಲಿರುವ ಫ್ಲೂರೀನನ್ನು ಕಿತ್ತೊಗೆದು, ಸುರಕ್ಷಿತ ರಾಸಾಯನಿಕವನ್ನಾಗಿಸಬಹುದು. ಹೀಗೆ ಕೇವಲ ನೀರನ್ನು ಶುಚಿಗೊಳಿಸುವುದಷ್ಟೆ ಅಲ್ಲ, ಪಿಎಫ್‌ಎಯನ್ನೂ ನಾಶಗೊಳಿಸುವ ವಿಧಾನ ಇದು ಎನ್ನುತ್ತಾರೆ, ಕಾಂಗ್.
- ಪಿಎಫ್‌ಎಯನ್ನು ಕಿತ್ತೊಗೆದ ನಂತರ ಅದು ಮತ್ತೆ ಮೊದಲಿನಂತೆಯೇ ಆಗುತ್ತದೆ. ಇನ್ನಷ್ಟು ಪಿಎಫ್‌ಎ ಅಂಟಿಸಿಕೊಳ್ಳಲು ಸಿದ್ಧವಾಗುತ್ತದೆ. ಹೀಗೆ ಆರೇಳು ಬಾರಿ ಈ ವಸ್ತುವನ್ನು ಬಳಸಿ ನೀರನ್ನು ಶುಚಿಗೊಳಿಸಬಹುದು. ತಾವೇ ನಿರ್ದಿಷ್ಟ ಪ್ರಮಾಣದ ಪಿಎಫ್‌ಎ ಬೆರೆಸಿ ಮಲಿನಗೊಳಿಸಿದ ನೀರನ್ನು ಈ ವಸ್ತುವಿನ ಮೂಲಕ ಸೋಸಿ, ಎಷ್ಟು ಶುಚಿಗೊಳ್ಳುತ್ತದೆ ಎಂದು ಗಮನಿಸಿದ್ದಾರೆ. ಒಂದು ನಿಮಿಷದಲ್ಲಿ ಅರ್ಧ ಲೀಟರ್ ನೀರಿನಿಂದ ಏಳುನೂರು ಮಿಲಿಗ್ರಾಮಿನಷ್ಟು ಪಿಎಫ್‌ಎಯನ್ನು ಈ ವಸ್ತು ಶುಚಿಗೊಳಿಸುತ್ತದೆ. ಹೀಗೆ ಸೋಸುವ ಹಾಗೂ ಅನಂತರ ಬಿಸಿ ಮಾಡಿ ಪಿಎಫ್‌ಎ ಬೇರ್ಪಡಿಸುವ ಮೂಲಕ, ನಿರಂತರವಾಗಿ ನೀರನ್ನು ಶುಚಿಗೊಳಿಸಬಹುದು.
- ಓದಿನ ಓಘಕ್ಕೆ ಓಗೊಟ್ಟ ಓಮರ್ ಯಾಘಿ
ಸಂದರ್ಭ: ಅದು ನಮ್ಮದೇ ಕಾಶ್ಮೀರವಾಗಲೀ, ದೂರದ ಗಾಜಾ ಆಗಲೀ, ಪರ–ವಿರೋಧಗಳ ನಡುವೆ, ಕುತಂತ್ರ–ಕುಯುಕ್ತಿಗಳ ನಡುವೆ, ಯಾರದ್ದೋ ಹಟಕ್ಕೆ, ಯಾರದ್ದೋ ಮೂಲಭೂತವಾದಕ್ಕೆ ಸಿಲುಕಿ ಸಮಸ್ಯೆ ಅನುಭವಿಸುವವರು ಸಾಮಾನ್ಯ ಜನರೇ.
- ಗಾಜಾದಲ್ಲಿ ಈಗಿರುವಂತಹ ಯುದ್ಧದ ಪರಿಸ್ಥಿತಿಯಲ್ಲಿಯೇ ಗುಳೇ ಹೊರಟ ಕುಟುಂಬದ ಸಾಮಾನ್ಯ ಹುಡುಗನೊಬ್ಬ, ಇಂದು ರಸಾಯನnವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಥೆಯಿದು.
- ಈ ವರ್ಷದ ರಸಾಯನವಿಜ್ಞಾನ ನೊಬೆಲ್ ಸಿಕ್ಕಿದ್ದು ‘ಲೋಹ–ಸಾವಯವ ಚೌಕಟ್ಟು’ಗಳ ಬಗೆಗಿನ ಸಂಶೋಧನೆಗೆ ಎಂಬುದು ನಿಮಗೀಗಾಲೇ ತಿಳಿದಿರಬಹುದು. ಅದಕ್ಕೆ ಮುನ್ನುಡಿ ಬರೆದದ್ದು ರಿಚರ್ಡ್ ರಾಬ್ಸನ್. ಆದರೆ ಅವರ ಸಿದ್ಧಾಂತಕ್ಕೆ ಅನ್ವಯಿಕತೆ ಮತ್ತು ಪ್ರಾಯೋಗಿಕತೆಗಳನ್ನು ತಂದದ್ದು ಓಮರ್ ಯಾಘಿ ಮತ್ತು ಸುಸುಮು ಕಿಟಾಗವಾ ಎಂಬ ಇಬ್ಬರು ರಸಾಯನವಿಜ್ಞಾನಿಗಳು. ಓಮರ್ ಯಾಘಿ ಅವರ ಬದುಕು ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೂ ಸ್ಫೂರ್ತಿದಾಯಕ.
- ಓಮರ್ ಯಾಘಿಯವರು 1965ರ ಫೆಬ್ರುವರಿ 9ರಂದು ಪ್ಯಾಲೆಸ್ತೀನ್ ಮೂಲದ ಯುದ್ಧನಿರಾಶ್ರಿತ ಕುಟುಂಬದಲ್ಲಿ ಜನಿಸಿದರು. ವಿದ್ಯುತ್ತು, ಸ್ವಚ್ಛವಾದ ಕುಡಿಯುವ ನೀರಿನಂತಹ ಮೂಲಭೂತ ಸಂಪನ್ಮೂಲಗಳೂ ಲಭ್ಯವಿಲ್ಲದ ಪರಿಸ್ಥಿತಿ ಯಲ್ಲಿ ಓಮರ್ ತಮ್ಮ ಬಾಲ್ಯ ಕಳೆದರು. ದನದ ಕೊಟ್ಟಿಗೆಯಲ್ಲಿ ಹತ್ತಾರು ಮಕ್ಕಳ ಜೊತೆ ಮಲಗಬೇಕಿದ್ದ ಪರಿಸ್ಥಿತಿ. ಇಂಥ ಕಷ್ಟಗಳ ನಡುವೆಯೇ ತಮ್ಮ ತಂದೆಯ ಪ್ರೋತ್ಸಾಹ ಓಮರ್ ಅವರನ್ನು ಓದಿನ ಕಡೆಗೆ ಹೊರಳಿಸಿತು. ಕೆಳಕ್ಕೆಳೆಯುವ ಕೆಸರಿನೊಳಗೆ ಇದ್ದುಕೊಂಡೂ ಮೇಲಕ್ಕೇಳುವ ಉಮೇದಿಯಲ್ಲಿ ಅರಳುವ ಕಮಲದಂತೆ, ‘ತಾನು ಓದಬೇಕು’ ಎಂಬ ಹಂಬಲ ಓಮರ್ ಅವರನ್ನು ಇತರರಿಗಿಂತ ಭಿನ್ನವಾಗಿ ಬೆಳೆಯುವಂತೆ ಮಾಡಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲೇ ವಿಜ್ಞಾನದ ಬಗ್ಗೆ ಮತ್ತು ಕಲಿಕೆಯ ಬಗ್ಗೆ ಇವರಿಗಿದ್ದ ಆಸಕ್ತಿಯ ಮೇರೆಗೆ, ಓಮರ್ ಅವರ ತಂದೆ ಈ 15 ವರ್ಷದ ಹುಡುಗನನ್ನು ಅಮೆರಿಕಕ್ಕೆ ಮುಟ್ಟಿಸಿದರು. ಕಷ್ಟದ ಬದುಕನ್ನೇ ಉಂಡು ಬಂದಿದ್ದ ಓಮರ್ ಅವರಿಗೆ, ಅಮೆರಿಕದಲ್ಲಿ ದಿನನಿತ್ಯದ ಅನಿವಾರ್ಯ ಅಸೌಕರ್ಯಗಳು ಕಂಗೆಡಿಸಲಿಲ್ಲ. ಅವರ ಲಕ್ಷ್ಯವೇನಿದ್ದರೂ ಓದಿನ ಕಡೆಗೆ, ರಸಾಯನವಿಜ್ಞಾನದ ಅದ್ಭುತಲೋಕದ ಕಡೆಗೆ. ಹಡ್ಸನ್ ವ್ಯಾಲಿ ಸಾಮುದಾಯಿಕ ಕಾಲೇಜು, ನ್ಯೂಯಾರ್ಕ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸುತ್ತಾ, ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪದವಿ ಪಡೆದರು. ನೀರನ್ನು ಹೊರತು ಪಡಿಸಿ, ಇತರ ಮಾಧ್ಯಮದಲ್ಲಿ ‘ಪಾಲಿ–ಆಕ್ಸೋವಾನಡೇಟ್’ಗಳ ಸಂಶ್ಲೇಷಣೆ, ರಚನೆ, ರಾಸಾಯನಿಕತೆಯ ಸಾಧ್ಯತೆಯ ಬಗ್ಗೆ ಸಂಶೋಧನೆ ನಡೆಸಿ 1990ರಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದರು.
- ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಓಮರ್, ನಂತರ ಮಿಶಿಗನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಂತಹ ಅನೇಕ ಪ್ರತಿಷ್ಠಿತ ವಿದ್ಯಾಲಯಗಳ ಭಾಗವಾಗಿ, ಪ್ರಾಧ್ಯಾಪಕರಾಗಿ ಮಾತ್ರವಲ್ಲದೇ, ಕಮಿಟಿಗಳ, ಅಧ್ಯಯನಪೀಠಗಳ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದರು.
- ಓಮರ್ ಅವರು ಹೆಚ್ಚು ಸಂಶೋಧನೆ ನಡೆಸಿದ್ದು, ‘ರೆಟಿಕ್ಯುಲಾರ್ ಕೆಮಿಸ್ಟ್ರಿ’ ಎಂಬ ರಸಾಯನವಿಜ್ಞಾನದ ಶಾಖೆಯಲ್ಲಿ. ವಿವಿಧ ಸಾವಯವ ಸಂಯುಕ್ತ ಪದಾರ್ಥಗಳಿಗೆ, ಲೋಹದ ಸಂಯುಕ್ತಗಳಿಗೆ ಪರಮಾಣುಗಳನ್ನು ಸೇರಿಸುವ, ರಾಸಾಯನಿಕ ಬಂಧಗಳನ್ನು ರಚಿಸುವ, ಹೊಸ ರಚನೆಗಳನ್ನು ಸೃಜಿಸುವ ಕ್ರಿಯಾತ್ಮಕ ಶಾಖೆಯಿದು. ಇಲ್ಲಿ ಮೂರು ಆಯಾಮದ ಸ್ಫಟಿಕಗಳ ರಚನೆಗೆ ಪ್ರಾಶಸ್ತ್ಯ; ಅದೇ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಓಮರ್ ಅವರನ್ನು ನೊಬೆಲ್ ಪ್ರಶಸ್ತಿಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು, ಲೋಹ-ಸಾವಯವ ಚೌಕಟ್ಟುಗಳ ಧೃಡತೆಯ ಬಗ್ಗೆ ಅವರ ವಿಶಿಷ್ಟವಾದ ಅನ್ವೇಷಣೆಯೇ!
- ರಸಾಯನವಿಜ್ಞಾನದ ಭಾಷೆಯಲ್ಲಿ ‘ಕೊಆರ್ಡಿನೇಶನ್ ಪಾಲಿಮರ್’ ಎಂಬ ಹೆಸರಿನಿಂದ ಗುರುತಿಸಲಾಗುವ ರಚನೆಗಳಿಗೆ ಭೌತಿಕ ದೃಢತೆ ತಂದುಕೊಡುವುದು ಕಷ್ಟದ ಮಾತೇ ಸರಿ. ಇಲ್ಲಿ ಲೋಹವೂ ಉಂಟು, ಸಾವಯವ ಗುಣ ತಂದುಕೊಡುವ ಇಂಗಾಲವೂ ಉಂಟು; ಜೊತೆಗೆ ಅನೇಕ ಅಯಾನುಗಳ, ಎಲೆಕ್ಟ್ರಾನುಗಳ ಕೊಡು-ಕೊಳ್ಳುವಿಕೆ, ಹಂಚಿಕೊಳ್ಳುವಿಕೆ ಮತ್ತು ಧನಾತ್ಮಕ-ಋಣಾತ್ಮಕ ಚಾರ್ಜ್‌ಗಳ ನರ್ತನ – ಇವೆಲ್ಲದರ ನಡುವೆ ರಾಸಾಯನಿಕ ಕ್ರಿಯಾತ್ಮಕತೆಗೂ ಮೀರಿ ಭೌತಿಕ ದೃಢತೆ ಅತಿ ಮುಖ್ಯವೆನಿಸುತ್ತದೆ. ಹೇಗೆಂದರೆ, ಫಳಫಳ ಪೈಂಟು, ಥಳ ಥಳ ಟೈಲ್ಸು, ಮಿರ ಮಿರ ಮಿಂಚುವ ಒಳಾಂಗಣ ವಿನ್ಯಾಸವೆಲ್ಲವೂ ಇದ್ದು ಮನೆಯ ಭೌತಿಕ ರಚನೆಗೆ, ಬುನಾದಿಗೆ, ಗೋಡೆಗೆ ಬಲವಿಲ್ಲದಿದ್ದರೆ ಪ್ರಯೋಜನವೇನು? ಹಾಗೆಯೇ, ಈ ಲೋಹ-ಸಾವಯವ ಚೌಕಟ್ಟುಗಳು ತಮ್ಮ ರಚನೆಯಿಂದ ಕೈಗಾರಿಕೆಗಳಲ್ಲಿ, ವೈದ್ಯಕೀಯ ಲೋಕದಲ್ಲಿ, ಪ್ರಯೋಗಾಲಯಗಳಲ್ಲಿ ಅನೇಕ ಅನ್ವಯಿಕೆಗಳನ್ನು ಸಾಧ್ಯವಾಗಿಸಬಹುದಾಗಿದ್ದರೂ, ಅದರ ಮೂಲಭೂತ ರಚನೆಗೆ ಭೌತಿಕವಾಗಿ ಬಲವಿಲ್ಲದಿಲ್ಲರೆ ಪ್ರಯೋಜನವೇನು?
- ಹೀಗಾಗಿ, ಓಮರ್ ಅವರು ಆ ಸಮಸ್ಯೆಯನ್ನು ಪರಿಹರಿಸಲು ಮೂರು ಮುಖ್ಯ ಬದಲಾವಣೆಗಳನ್ನು ತಂದರು. ಈ ಚೌಕಟ್ಟುಗಳನ್ನು ತಯಾರಿಸುವಾಗ, ಲೋಹ ಮತ್ತು ಕಾರ್ಬಾಕ್ಸಿಲೇಟ್ ಅಯಾನುಗಳ ನಡುವೆ ರಾಸಾಯನಿಕ ಬಂಧವನ್ನು ಗಟ್ಟಿಗೊಳಿಸಿದರು. ಸ್ಪಟಿಕೀಕರಣದ ವೇಳೆ ಹೆಚ್ಚುವರಿ ಆಧಾರ ಸ್ತಂಭಗಳಾಗಿ ಲೋಹ-ಕಾರ್ಬಾಕ್ಸಿಲೇಟ್ ಗುಂಪುಗಳನ್ನು ಬಳಸಿದರು. ಈ ಚೌಕಟ್ಟಿನೊಳಗಿರುವ ಪರಮಾಣುಗಳ, ಅಣುಗಳ ನಡುವೆ ಇರುವ ಅಂತರವು, ಹೆಚ್ಚು ರಂಧ್ರ ಮಯವಾಗಿರುವಂತೆ ನೋಡಿಕೊಂಡರು. ಈ ಮೂರೂ ಬದಲಾವಣೆಗಳು ಅಪರಿಮಿತ ಹೊಸ ಸಾಧ್ಯತೆಗಳಿಗೆ ಎಡೆಮಾಡಿಕೊಟ್ಟಿತು. ಇದರಿಂದಾಗಿ ರಿಚರ್ಡ್ ರಾಬ್ಸನ್ ಅವರ ಸಿದ್ಧಾಂತವು 3-ಡಿ ರೂಪವನ್ನು ಪಡೆದು, ಹೊಸ ಅನ್ವಯಿಕೆಗಳಿಗೆ ತೆರೆದುಕೊಂಡಿತು. ವಿಷಾನಿಲ ಸೋರುವಲ್ಲಿ ಅನಿಲದ ಅಣುಗಳನ್ನು ಹಿಡಿದಿಡಲು, ಬಿರುಬಿಸಿಲ ಮರಳುಗಾಡಲ್ಲಿ ಗಾಳಿಯಿಂದ ನೀರನ್ನು ತಯಾರಿಸಲು, ದೇಹದ ನಿರ್ದಿಷ್ಟ ಭಾಗಕ್ಕೆ ಔಷಧವನ್ನು ತಲುಪಿಸಲು ಸಹಾಯಕವಾದ ಲೋಹ-ಸಾವಯವ ಚೌಕಟ್ಟಿಗೆ ಓಮರ್ ಅವರ ಈ ಸಂಶೋಧನೆಯು ಬಲ ತಂದಿದೆ; ಆಧುನಿಕ ಮಾನವನ ಅನೇಕ ಸಮಸ್ಯೆಗಳಿಗೆ ಇದು ಪರಿಹಾರಗಳನ್ನೂ ತಂದಿದೆ.
- ಕಾಸರಗೋಡು ಚಿನ್ನಾಗೆ ಕಲಾಕಾರ್ ಪುರಸ್ಕಾರ
ಸಂದರ್ಭ: ಕುಂದಾಪುರದ ಕಾರ್ವಾಲ್ ಮನೆತನ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 21ನೇ ವರ್ಷದ ಕಲಾಕಾರ್ ಪುರಸ್ಕಾರಕ್ಕೆ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್.) ಅವರನ್ನು ಆಯ್ಕೆ ಮಾಡಲಾಗಿದೆ.
- ಪುರಸ್ಕಾರ ₹50 ಸಾವಿರ ನಗದು ಒಳಗೊಂಡಿದೆ. ನ.2ರಂದು ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ತಿಳಿಸಿದ್ದಾರೆ.
- ರೂಪಾಯಿ ಮೌಲ್ಯ ಕುಸಿತ ತಡೆಯಲು 7.7 ಬಿಲಿಯನ್ ಡಾಲರ್ ಮಾರಾಟ
ಸಂದರ್ಭ: ವಿನಿಮಯ ದರದ ಏರಿಳಿತವನ್ನು ನಿಯಂತ್ರಿಸಲು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಗಸ್ಟ್ ತಿಂಗಳಿನಲ್ಲಿ 7.7 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ. ಇದು ರೂಪಾಯಿ ಲೆಕ್ಕದಲ್ಲಿ ₹67,751 ಕೋಟಿ ಆಗುತ್ತದೆ.
- ಈ ಡಾಲರ್ ಮಾರಾಟವು ಜುಲೈ ತಿಂಗಳಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಆರ್‌ಬಿಐ ಡಾಲರ್‌ಗಳನ್ನು ಖರೀದಿಸಿಲ್ಲ ಎಂದು ಸಹ ತಿಳಿಸಿದೆ. ಆಗಸ್ಟ್‌ನಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಶೇ 1.6ರಷ್ಟು ಕುಸಿದಿತ್ತು.
- ಹೆಚ್ಚಿದ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.
- ಸಿಆರ್ಜೆಡ್ ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ
ಸಂದರ್ಭ: ದೇಶದ ‘ಕರಾವಳಿ ನಿಯಂತ್ರಣ ವಲಯ’ದ(ಸಿಆರ್ಜೆಡ್) ಮಿತಿಯನ್ನು ಕಡಿತಗೊಳಿಸುವ ನೀತಿ ಆಯೋಗದ ಪ್ರಸ್ತಾವಕ್ಕೆ ಪರಿಸರ ಪರ ಗುಂಪುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಮಂತ್ರಿ ಕಚೇರಿಯು (ಪಿಎಂಒ) ಮಧ್ಯಪ್ರವೇಶಿಸಿದ್ದು, ಪರಿಸರ ಪರ ಸಂಘಟನೆಗಳು ಎತ್ತಿರುವ ಆಕ್ಷೇಪಗಳ ಕುರಿತು ಗಮನ ಹರಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸೂಚಿಸಿದೆ.
- ಈ ವಿಚಾರವನ್ನು ಸಚಿವಾಲಯದ ಸಿಆರ್‌ಜೆಡ್ ಪರಿಣಾಮ ಮೌಲ್ಯಮಾಪನ ವಿಭಾಗಕ್ಕೆ ಶಿಫಾರಸು ಮಾಡಿರುವುದು ಪಿಎಂಒ ಪೋರ್ಟಲ್‌ನಿಂದ ತಿಳಿದುಬರುತ್ತದೆ.
- ಕರಾವಳಿ ನಿಯಂತ್ರಣ ವಲಯದ ಮಿತಿಯನ್ನು ಈಗಿನ 500 ಮೀಟರ್ನಿಂದ 200 ಮೀಟರ್ಗೆ ಕಡಿತಗೊಳಿಸುವಂತೆ ನೀತಿ ಆಯೋಗ ಪ್ರಸ್ತಾವ ಮುಂದಿಟ್ಟಿದೆ. ಮುಂಬೈ ಮೂಲದ ಪರಿಸರ ಸಂರಕ್ಷಣೆಗೆ ಹೋರಾಡುವ ಸಂಘಟನೆಗಳಾದ ‘ನ್ಯಾಟ್‌ಕನೆಕ್ಟ್ ಫೌಂಡೇಷನ್’ ಹಾಗೂ ‘ಸಾಗರ ಶಕ್ತಿ’, ಈ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿವೆ.
- ‘ನೀತಿ ಆಯೋಗದ ಈ ಶಿಫಾರಸು ದೇಶದ ಕರಾವಳಿಗಳ ಪರಿಸರಕ್ಕೆ ಮಾರಕ’ ಎಂದು ಹೇಳಿರುವ ಈ ಸಂಘಟನೆಗಳು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಆಯೋಗದ ಶಿಫಾರಸನ್ನು ತಿರಸ್ಕರಿಸ ಬೇಕು ಎಂದು ಆಗ್ರಹಿಸಿವೆ.
- ‘ಕರಾವಳಿ ನಿಯಂತ್ರಣ ವಲಯದ ಮಿತಿಯು ಸದ್ಯ ‘ಹೈ ಟೈಡ್ ಲೈನ್'(ಎಚ್ಟಿಎಲ್)ನಿಂದ 500 ಮೀಟರ್ ಇದೆ. ಇದನ್ನು 200 ಮೀಟರ್ಗೆ ಕಡಿತಗೊಳಿಸಬೇಕು’ ಎಂದು ನೀತಿ ಆಯೋಗದ ಸದಸ್ಯ ರಾಜೀವ್ ಗೌಬಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸಲಹೆ ನೀಡಿತ್ತು.
- ‘ಈಗ ಇರುವ ಸಿಆರ್ಜೆಡ್ ಮಿತಿಯು ಅಗತ್ಯಕ್ಕಿಂತ ಹೆಚ್ಚು ನಿರ್ಬಂಧ ಹೇರುತ್ತದೆ. ಸಣ್ಣ ಪ್ರಮಾಣದ ಪ್ರವಾಸೋದ್ಯಮ, ಮೀನುಗಾರಿಕೆ, ಹೋಂ ಸ್ಟೇಗಳ ಕಾರ್ಯಾಚರಣೆ ಹಾಗೂ ಕರಾವಳಿ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಇದರಿಂದ ಅಡ್ಡಿ ಉಂಟಾಗಿದೆ’ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ನ್ಯಾಟ್‌ಕನೆಕ್ಟ್ ಫೌಂಡೇಷನ್ ವಾದವೇನು?
- ಸಿಆರ್‌ಜೆಡ್ ಮಿತಿಯನ್ನು ಕಡಿತ ಮಾಡುವುದರಿಂದ ಸಮುದ್ರತೀರದ ಸಮೀಪ ಅಪಾಯಕಾರಿ ಎನಿಸುವಷ್ಟು ವಿಪರೀತ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ನ್ಯಾಟ್‌ಕನೆಕ್ಟ್ ಫೌಂಡೇಷನ್ ನಿರ್ದೇಶಕ ಬಿ.ಎನ್.ಕುಮಾರ್ ಹೇಳುತ್ತಾರೆ.
- ‘ಕರ್ನಾಟಕದ ಕರಾವಳಿ ಪೈಕಿ ಶೇ 23.7ರಷ್ಟು ಪ್ರದೇಶ ಸವೆಯುತ್ತಿದೆ. ದೇಶದ ಕರಾವಳಿಯ ಶೇ33.6ರಷ್ಟು ಪ್ರದೇಶ ಸವೆಯುವ ಅಪಾಯ ಎದುರಿಸುತ್ತಿದೆ ಎಂಬುದಾಗಿ ಸಂಸತ್‌ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಲಾಗಿದೆ’ ಎನ್ನುತ್ತಾರೆ.
- ‘ವಾಸ್ತವ್ಯ ಅವಧಿ ವಿಸ್ತರಣೆ ಪ್ರಕರಣಗಳಿಗೆ ಅನ್ವಯಿಸದು’
ಸಂದರ್ಭ: ಎಚ್–1ಬಿ ವೀಸಾಕ್ಕೆ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಿಸಿ ಮಾಡಲಾಗಿರುವ ಶುಲ್ಕ ಹೆಚ್ಚಳವು ‘ಸ್ಥಾನ ಬದಲಾವಣೆ’ ಅಥವಾ ‘ವಾಸ್ತವ್ಯದ ಅವಧಿಯ ವಿಸ್ತರಣೆ’ ಕೋರಿದ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.
- ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ (ಯುಎಸ್‌ಸಿಐಎಸ್) ಇಲಾಖೆಯು ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳು ಇಂತಹ ಹಲವಾರು ಅಂಶಗಳನ್ನು ಒಳಗೊಂಡಿದೆ.
- ಎಚ್–1ಬಿ ವೀಸಾಕ್ಕಾಗಿ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದ್ದರು.
- ‘ವೀಸಾ ಅರ್ಜಿ ಶುಲ್ಕ ಹೆಚ್ಚಳ ಕುರಿತ ಆದೇಶವು ಈ ಮೊದಲು ನೀಡಲಾಗಿರುವ ಎಚ್–1ಬಿ ವೀಸಾಗಳು ಅಥವಾ ವೀಸಾ ಕೋರಿ ಅಮೆರಿಕ ಕಾಲಮಾನ ಪ್ರಕಾರ ಸೆಪ್ಟೆಂಬರ್ 21ರ ತಡರಾತ್ರಿ 12.01ಕ್ಕೂ ಮೊದಲು ಸಲ್ಲಿಸಿರುವ ಅರ್ಜಿಗಳಿಗೆ ಅನ್ವಯವಾಗುವುದಿಲ್ಲ’ ಎಂದು ಯುಎಸ್‌ಸಿಐಎಸ್ ಹೇಳಿದೆ.
- ಎಚ್–1ಬಿ ವೀಸಾ ಹೊಂದಿರುವವರು ಅಮೆರಿಕಕ್ಕೆ ಬರಲು ಇಲ್ಲವೇ ಅಮೆರಿಕದಿಂದ ಇತರ ದೇಶಗಳಿಗೆ ಸಂಚರಿಸುವುದಕ್ಕೆ ಕೂಡ ಈ ಆದೇಶ ನಿರ್ಬಂಧ ಹೇರುವುದಿಲ್ಲ ಎಂದೂ ತಿಳಿಸಿದೆ.
- ಹೊಸ ಶುಲ್ಕ ನೀತಿ ಪ್ರಶ್ನಿಸಿ ಅಮೆರಿಕ ವಾಣಿಜ್ಯ ಮಂಡಳಿ ಅಕ್ಟೋಬರ್ 16ರಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ, ಈ ಹೊಸ ಮಾರ್ಗಸೂಚಿಗಳನ್ನು ಯುಎಸ್‌ಸಿಐಎಸ್ ಬಿಡುಗಡೆ ಮಾಡಿದೆ.
- ಜಪಾನ್: ಸನೇ ತಕೈಚಿ ಮೊದಲ ಮಹಿಳಾ ಪ್ರಧಾನಿ
ಸಂದರ್ಭ: ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ, ಲಿಬರಲ್ ಡೆಮಾಕ್ರಟಿಕ್ ಪಕ್ಷದ ಕಟ್ಟಾ ಸಂಪ್ರದಾಯವಾದಿ ಸನೇ ತಕೈಚಿ (64) ಅವರನ್ನು ಸಂಸತ್ತು ಆಯ್ಕೆ ಮಾಡಿತು.
- ಪ್ರಧಾನಿಯಾಗಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ ನಿರಂತರ ಸೋಲುಗಳನ್ನು ಕಂಡಿತು. ಈ ಕಾರಣದಿಂದ ಬೇಸತ್ತ ಅವರು ಸಂಪುಟಕ್ಕೆ ಬೆಳಿಗ್ಗೆ ರಾಜೀನಾಮೆ ನೀಡಿ, ತಮ್ಮ ಉತ್ತರಾಧಿಕಾರಿ ಆಯ್ಕೆಗೆ ದಾರಿ ಮಾಡಿಕೊಟ್ಟರು.
- ಇತರ ಪಾಲುದಾರರ ಜತೆ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಮೈತ್ರಿ ಒಪ್ಪಂದವನ್ನು ಮಾಡಿಕೊಂಡ ಬಳಿಕ ಸನೇ ತಕೈಚಿ ಅವರ ಆಯ್ಕೆಯಾಗಿದೆ.
- ಜಪಾನಿನ ಕೆಳಮನೆಯಲ್ಲಿ ತಕೈಚಿ ಅವರು 237 ಮತಗಳನ್ನು ಪಡೆದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ವಿರೋಧ ಪಕ್ಷ ‘ಕಾನ್‌ಸ್ಟಿಟ್ಯೂಷನಲ್ ಡೆಮಾಕ್ರಟಿಕ್ ಪಕ್ಷ’ದ ಮುಖ್ಯಸ್ಥ ಯೋಶಿಕೊಕೊ ನೋಡಾ ಅವರು 149 ಮತ ಪಡೆದರು.
- ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದೇ ಇದ್ದದ್ದು ತಕೈಚಿ ಆಯ್ಕೆಗೆ ವರದಾನವಾಯಿತು. ಎಲ್‌ಡಿಪಿಯು ‘ಜಪಾನ್ ಇನ್ನೋವೇಷನ್ ಪಾರ್ಟಿ’ (ಜೆಐಪಿ) ಜತೆ ಮೈತ್ರಿ ಮಾಡಿಕೊಂಡು, ಪ್ರಧಾನಿ ಆಯ್ಕೆ ಖಚಿತಪಡಿಸಿಕೊಂಡಿತು.