- ಒಳಮೀಸಲು ಮಸೂದೆ ಅಂಗೀಕಾರ
ಸಂದರ್ಭ: ಪರಿಶಿಷ್ಟಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀ ಕರಣ) ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿದೆ.

- ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಕೆಲ ಮಾರ್ಪಾಡಿನೊಂದಿಗೆ ಅನುಮೋದಿಸಿದ್ದ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು.
- ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ 17 ರಷ್ಟು ಮೀಸಲಾತಿಯಲ್ಲಿ ಪ್ರವರ್ಗ–ಎ(16 ಜಾತಿಗಳು) ಶೇ 6, ಪ್ರವರ್ಗ–ಬಿ (19 ಜಾತಿಗಳು) ಶೇ 6, ಪ್ರವರ್ಗ–ಸಿ(63 ಜಾತಿಗಳು) ಶೇ 5, ಒಟ್ಟು 98 ಜಾತಿಗಳಿಗೆ ಒಳ ಮೀಸಲು ಹಂಚಿಕೆಯಾಗಲಿದೆ. ಈ ಮಸೂದೆಗೆ ಹಸಿರು ನಿಶಾನೆ ಸಿಗುತ್ತದೆ ಎಂದು ಕಾದಿದ್ದ ಬಹುದೊಡ್ಡ ಸಮುದಾಯ ನಿರೀಕ್ಷೆ ಈಗ ಫಲ ಕಂಡಿದೆ.
- ಒಳಮೀಸಲಾತಿ ಕಾಯ್ದೆ 2025ರ ಆ.25 ರಿಂದ ಅನ್ವಯವಾಗಲಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಮಸೂದೆ ಮಂಡಿಸಿದರು. ಚರ್ಚೆ ಇಲ್ಲದೇ ಮಸೂದೆ ಅಂಗೀಕಾರ ಪಡೆಯಿತು.
- ಅಡವಿಟ್ಟ ಚಿನ್ನ ರಕ್ಷಣೆಗೆ ಮಸೂದೆ
ಸಂದರ್ಭ: ತ್ವರಿತ ಸಾಲಕ್ಕಾಗಿ ಅಡವಿಟ್ಟ ಚಿನ್ನವನ್ನು ನಿಗದಿತ ಅವಧಿಯ ಒಳಗೆ ಬಿಡಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುವ ಬಡವರು, ಮಧ್ಯಮ ವರ್ಗದ ಜನರ ನೆರವಿಗೆ ಕಾಯ್ದೆಯ ಬಲ ತುಂಬಲು ಮಸೂದೆಯೊಂದು ಸಿದ್ಧವಾಗಿದೆ.
- ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು, ‘ಕರ್ನಾಟಕ ಬಂಗಾರ ಅಡವಿಟ್ಟ ಸಾಲಗಾರರ ರಕ್ಷಣಾ ಮಸೂದೆ– 2025’ ಹೆಸರಿನಲ್ಲಿ ಖಾಸಗಿ ಮಸೂದೆ ಸಿದ್ಧಪಡಿಸಿದ್ದಾರೆ. ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅಧ್ಯಕ್ಷತೆಯ ಸಮಿತಿ ಮಸೂದೆ ಮಂಡನೆಗೆ ಸಮ್ಮತಿ ನೀಡಿದೆ.
- ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಚಿನ್ನದ ಆಭರಣಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತವೆ. ನಿಗದಿತ ಅವಧಿಯ ಒಳಗೆ ಸಾಲದ ಅಸಲು ಹಾಗೂ ಬಡ್ಡಿ ಮರುಪಾವತಿ ಮಾಡದಿದ್ದರೆ, ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಅಡವಿಟ್ಟ ಆಭರಣಗಳನ್ನು ಹರಾಜು ಹಾಕುತ್ತವೆ.
- ಅಡವಿಟ್ಟುಕೊಳ್ಳುವಾಗ ನೀಡುವ ಸಾಲದ ಪ್ರಮಾಣ ಚಿನ್ನದ ಮೌಲ್ಯದ ಶೇ 50ಕ್ಕಿಂತ ಕಡಿಮೆ ಇರುತ್ತದೆ. ಅಸಲು–ಬಡ್ಡಿ ಸೇರಿದರೂ ಚಿನ್ನದ ವರ್ತಮಾನದ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಇಂತಹ ಹಲವು ಪ್ರಕರಣಗಳಲ್ಲಿ ಉಳಿಕೆ ಮೊತ್ತವನ್ನು ಸಾಲಗಾರರಿಗೆ ವರ್ಗಾಯಿಸುವುದೇ ಇಲ್ಲ.
- ಬದಲಿಗೆ ಹರಾಜಿನ ನಂತರವೂ ಉಳಿಕೆ ಸಾಲದ ಬಾಕಿ ಪಾವತಿಸುವಂತೆ ನೋಟಿಸ್ ನೀಡಲಾಗುತ್ತದೆ. ಅಂತಹ ಸಾಲಗಾರರ ರಕ್ಷಣೆ ಹಾಗೂ ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸಲು ಹಾಗೂ ಅನುಸಂಧಾನ ವ್ಯವಸ್ಥೆ ಬಲಪಡಿಸಲು ಕಾಯ್ದೆಯ ಅಗತ್ಯವಿದೆ ಎಂದು ಮಸೂದೆ ರಚನೆಯ ಕಾರಣಗಳನ್ನು ವಿವರಿಸಲಾಗಿದೆ.
- ಚಿನ್ನದ ಅಡಮಾನ ಸಾಲ ನೀಡುವ ಯಾವುದೇ ವಾಣಿಜ್ಯ ಬ್ಯಾಂಕ್, ಖಾಸಗಿ ಕಂಪನಿ, ಖಾಸಗಿ ಸಂಸ್ಥೆ, ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಬ್ಯಾಂಕ್, ಖಾಸಗಿ ಪ್ರತಿಷ್ಠಾನ, ಲೇವಾದೇವಿಗಾರರು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದ್ದು, ಅಡಮಾನ ಸಾಲ ಪಡೆದ ಚಿನ್ನವನ್ನು ಹರಾಜು ಹಾಕುವ ಮೊದಲು ಹಲವು ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
- ಅವಧಿ ಮುಗಿದ ದಿನಾಂಕದಿಂದ 180 ದಿನಗಳನ್ನು ನಿಗದಿ ಮಾಡಿ, ನೋಟಿಸ್ ನೀಡುವುದು. ಪಡೆದ ಸಾಲ, ವಿಧಿಸಿದ ಬಡ್ಡಿ, ಅಡವಿಟ್ಟ ಸಮಯದ ಚಿನ್ನದ ಮೌಲ್ಯ, ಪ್ರಸ್ತುತ ಮಾರುಕಟ್ಟೆ ಮೌಲ್ಯ, ಮರುಪಾವತಿ ವಿವರಗಳನ್ನು ಒದಗಿಸುವುದು ಕಡ್ಡಾಯ. ಒಟ್ಟು ಮೌಲ್ಯ ಹಾಗೂ ನೋಟಿಸ್ ಅವಧಿಯ ಒಳಗೆ ಬಾಕಿ ಮೊತ್ತ ಮತ್ತು ಅನ್ವಯವಾಗುವ ಬಡ್ಡಿಯನ್ನು ಪಾವತಿಸುವ ಸಾಲಗಾರರಿಗೆ ತಮ್ಮ ಚಿನ್ನವನ್ನು ಮರಳಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. 180 ದಿನಗಳ ನೋಟಿಸ್ ನೀಡಿದ ನಂತರವೂ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 90 ದಿನಗಳ ಗಡುವು ವಿಧಿಸಬೇಕೆಂದು ಪ್ರಸ್ತಾವವಿದೆ.
ಉಲ್ಲಂಘನೆಗೆ ₹10 ಲಕ್ಷ ದಂಡ
- ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಹಣಕಾಸು ವಹಿವಾಟು ಸಂಸ್ಥೆಗಳಿಗೆ 6 ತಿಂಗಳು ಕಾರಾಗೃಹ ಶಿಕ್ಷೆ, ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಬೇಕೆಂದು ಪ್ರಸ್ತಾಪಿಸಲಾಗಿದೆ.
- ಅಪರಾಧ ಪುನರಾವರ್ತನೆಯಾದರೆ ಸಂಸ್ಥೆಯ ನೋಂದಣಿ, ಪರವಾನಗಿ ರದ್ದು ಮಾಡುವುದು, ಅಗತ್ಯ ಕ್ರಮ ಕೈಗೊಳ್ಳಲು, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರದಿ ನೀಡಲು ಅಧಿಕಾರ ನೀಡಲಾಗಿದೆ. ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಪಲವಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಅವಕಾಶವನ್ನು ಒದಗಿಸಬೇಕೆಂದು ಉಲ್ಲೇಖಿಸಲಾಗಿದೆ.
ಹರಾಜಿಗೆ ಅಧಿಕಾರಿಗಳ ಕಣ್ಗಾವಲು
- ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ಪರವಾನಗಿ ಹೊಂದಿದ ಹರಾಜುಗಾರರ ಮೂಲಕ ಮಾತ್ರ ಚಿನ್ನದ ಹರಾಜು ಪ್ರಕ್ರಿಯೆ ನಡೆಸಬೇಕು. ಸ್ಥಳೀಯ ತಹಶೀಲ್ದಾರ್ ಅಥವಾ ಸರ್ಕಾರ ನಿಯೋಜಿಸಿದ ಸರ್ಕಾರಿ ಪ್ರತಿನಿಧಿಯ ಸಮ್ಮುಖದಲ್ಲಿ ನಡೆಸುವುದುನ್ನು ಕಡ್ಡಾಯಗೊಳಿಸಬೇಕೆಂದು ಹೇಳಲಾಗಿದೆ.
- ಹರಾಜಿನ ನಂತರ ಸಾಲದ ಬಾಕಿ ಮೊತ್ತ ಹಾಗೂ ಹರಾಜು ವೆಚ್ಚಗಳನ್ನು ಕಡಿತಗೊಳಿಸಿ, ಉಳಿಯುವ ಹೆಚ್ಚುವರಿ ಮೊತ್ತವನ್ನು 15 ದಿನಗಳ ಒಳಗೆ ಸಾಲಗಾರರಿಗೆ ಮರುಪಾವತಿಸಬೇಕು ಎಂಬ ವಿವರಗಳನ್ನು ಮಸೂದೆ ಒಳಗೊಂಡಿದೆ.
- ಚಿನ್ನದ ಅಡಮಾನ ಸಾಲದ ಮೇಲ್ವಿಚಾರಣೆ ಬಿಗಿಗೊಳಿಸುವುದು, ಅಡವಿಟ್ಟ ಚಿನ್ನವನ್ನು ಮರಳಿ ಪಡೆಯುವ ಅವಕಾಶವನ್ನು ವಿಸ್ತರಿಸುವುದು, ಸಾಲಗಾರರ ರಕ್ಷಣಾ ಮಾನದಂಡಗಳನ್ನು ಖಚಿತಪಡಿಸುವುದು, ನ್ಯಾಯಸಮ್ಮತ ವ್ಯಾಪಾರ ಕ್ರಮಗಳನ್ನು ಜಾರಿಗೊಳಿಸುವ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
- 10 ಮಸೂದೆಗಳಿಗೆ ಅಂಗೀಕಾರ
ಸಂದರ್ಭ: ವಿಧಾನ ಸಭೆಯಲ್ಲಿ ಅಂಗೀಕೃತವಾಗಿದ್ದ 10 ಮಸೂದೆಗಳಿಗೆ ಬುಧವಾರ ವಿಧಾನ ಪರಿಷತ್ನಲ್ಲೂ ಅಂಗೀಕಾರ ದೊರೆಯಿತು.
- ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಶ್ರೀ ಚಾwಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲ ಕಾನೂನುಗಳ ತಿದ್ದುಪಡಿ ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮರಾಯ ದತ್ತಿ ತಿದ್ದುಪಡಿ ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಮಸೂದೆ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಸೂದೆ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ, ಕರ್ನಾಟಕ ಮನೆ ಬಾಡಿಗೆ ಮಸೂದೆ, ಶ್ರೀ ಮಲೆ ಮಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಎರಡನೇ ತಿದ್ದುಪಡಿ ಮಸೂದೆಗಳನ್ನು ಪರಿಷತ್ ಅಂಗೀಕರಿಸಿತು.
- ಭೇದವಿಲ್ಲ, ಸರ್ವರೂ ಸಮಾನ

ದೇಶದ ಸಮಸ್ತ ನಾಗರಿಕರು ಸಮಾನರು ಎಂದು ಸಾರಿ ಹೇಳುವ ನಮ್ಮ ಹೆಮ್ಮೆಯ ಸಂವಿಧಾನವು, ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ಗಳನ್ನು ನೀಡಿದೆ. ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಆರ್ಥಿಕ ಸ್ಥಿತಿ ಯಾವುದನ್ನೂ ಪರಿಗಣಿಸದೆ ಮೂಲಭೂತ ಹಕ್ಕುಗಳು ಎಲ್ಲರಿಗೂ ಅನ್ವಯ ವಾಗುತ್ತವೆ. ಪ್ರತಿ ನಾಗರಿಕರೂ ಸಂವಿಧಾನದ ಮುಂದೆ ಒಂದೇ ಎಂದು ಮೂಲಭೂತ ಹಕ್ಕುಗಳು ಪ್ರತಿಪಾದಿಸುತ್ತವೆ.
ಸಮಾನತೆ ಹಕ್ಕು: ಸಮಾನತೆಯ ವಿವಿಧ ಸ್ವರೂಪ ಮತ್ತು ಅವುಗಳನ್ನು ಕಾಯ್ದುಕೊಳ್ಳಬೇಕಾದ ಬಗೆಯನ್ನು ಸಂವಿಧಾನದ 14ರಿಂದ 18ನೇ ವಿಧಿಯವರೆಗೆ ವಿವರಿಸಲಾಗಿದೆ.
ಕಾನೂನಿನ ಮುಂದೆ ಸಮಾನತೆ: ದೇಶದ ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು ಮತ್ತು ಕಾನೂನಿನ ರಕ್ಷಣೆ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂದು ಈ ಹಕ್ಕು ಪ್ರತಿಪಾದಿಸುತ್ತದೆ.
ತಾರತಮ್ಯ ನಿಷೇಧ: ಧರ್ಮ, ಮೂಲವಂಶ, ಜಾತಿ, ಲಿಂಗ, ಭಾಷೆ, ಜನ್ಮಸ್ಥಳದ ಆಧಾರದಲ್ಲಿ ವ್ಯಕ್ತಿಯನ್ನು ತಾರತಮ್ಯಕ್ಕೆ ಗುರಿ ಮಾಡುವಂತಿಲ್ಲ ಎಂದು ಈ ಹಕ್ಕು ಪ್ರತಿಪಾದಿಸುತ್ತದೆ. ಇವುಗಳ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ಹೋಟೆಲು, ಅಂಗಡಿ, ದೇವಾಲಯ, ಸಾರ್ವಜನಿಕ ಮನೋರಂಜನ ಸ್ಥಳಕ್ಕೆ ಪ್ರವೇಶ ನಿರಾಕರಿಸುವಂತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಬಹುದು ಎಂದು 15 (2ಬಿ, 3, 4, 5, 6)ನೇ ಉಪವಿಧಿಗಳಲ್ಲಿ ವಿವರಿಸಲಾಗಿದೆ.
ಸರ್ಕಾರಿ ನೇಮಕಾತಿಯಲ್ಲಿ ಸಮಾನ ಅವಕಾಶ: ಸರ್ಕಾರದ ಯಾವುದೇ ನೇಮಕಾತಿಯಲ್ಲಿ ದೇಶದ ಎಲ್ಲ ನಾಗರಿಕರಿಗೂ ಸಮಾನ ಅವಕಾಶ ಇರಬೇಕು. ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗ ಗಳು, ಆರ್ಥಿಕವಾಗಿ ದುರ್ಬಲ ವರ್ಗಗಳ ಜನರಿಗೆ, ಸರ್ಕಾರಿ ನೇಮಕಾತಿಯಲ್ಲಿ ವಿಶೇಷ ಸವಲತ್ತು ಕಲ್ಪಿಸಲು 16ನೇ ವಿಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಸ್ಪೃಶ್ಯತೆಯ ನಿರ್ಮೂಲನೆಯನ್ನು 18ನೇ ವಿಧಿ ಯಲ್ಲಿ ವಿವರಿಸಲಾಗಿದೆ. ಯಾವುದೇ ರೂಪದ ಅಸ್ಪೃಶ್ಯತೆ ಆಚರಣೆಯನ್ನು ಈ ವಿಧಿಯು ನಿಷೇಧಿಸುತ್ತದೆ. ಜತೆಗೆ ಅಸ್ಪೃಶ್ಯತೆಯ ಆಚರಣೆಯು ದಂಡನೀಯ ಅಪರಾಧ ಎಂಬುದನ್ನೂ ಈ ವಿಧಿ ವಿವರಿಸುತ್ತದೆ.
ಸ್ವಾತಂತ್ರ್ಯದ ಹಕ್ಕು: ಸಂವಿಧಾನ 19ನೇ ವಿಧಿಯಲ್ಲಿ ಸ್ವಾತಂತ್ರ್ಯದ ಹಕ್ಕುಗಳನ್ನು ವಿವರಿಸಲಾಗಿದೆ. ಯಾವುದೇ ವ್ಯಕ್ತಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ, ನಿರಾಯುಧರಾಗಿ ಸಭೆ ಸೇರುವ, ಸಂಘ–ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಅವುಗಳ ಮೂಲಕ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ, ದೇಶದ ಯಾವುದೇ ಭಾಗದಲ್ಲಿ ತನ್ನ ಇಚ್ಛೆಯ ಕುಲಕಸುಬು/ಕಸುಬು/ಉದ್ಯೋಗ/ವ್ಯವಹಾರ/ ವ್ಯಾಪಾರ ನಡೆಸುವ ಸ್ವಾತಂತ್ರ್ಯವನ್ನು ಈ ಹಕ್ಕು ನೀಡುತ್ತದೆ.
lಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು 21ನೇ ವಿಧಿಯು ನೀಡುತ್ತದೆ. ಈ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಸರ್ಕಾರವು ದೇಶದ ನಾಗರಿಕರ ಜೀವಿಸುವ ಹಕ್ಕಿಗೆ ಧಕ್ಕೆ ತರುವಂತಿಲ್ಲ.
lಉಚಿತ ಮತ್ತು ಕಡ್ಡಾಯ ಶಿಕ್ಷಣ: ದೇಶದ ಪ್ರತಿಯೊಂದು ಮಗುವಿಗೂ ಅದರ 6ನೇ ವಯಸ್ಸಿನಿಂದ 14ನೇ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು ಎಂದು 21(ಎ) ವಿಧಿ ಹೇಳುತ್ತದೆ.
lಕಾನೂನು ಬಾಹಿರ ಬಂಧನದಿಂದ ರಕ್ಷಣೆ: ಕಾರಣವನ್ನು ತಿಳಿಸದೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಹೆಚ್ಚು ಅವಧಿಗೆ ಬಂಧನದಲ್ಲಿ ಇರಿಸುವಂತಿಲ್ಲ.
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಪ್ರತಿ ನಾಗರಿಕರು ತಮ್ಮ ಇಷ್ಟದ ಧರ್ಮವನ್ನು ಅನುಸರಿಸುವ, ಅದರ ಆಚರಣೆಗಳಲ್ಲಿ ಭಾಗಿಯಾಗುವ, ಆ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನದ 25ನೇ ವಿಧಿ ನೀಡುತ್ತದೆ. ವ್ಯಕ್ತಿಯು ತಾನು ಅನುಸರಿಸುತ್ತಿರುವ ಧರ್ಮಕ್ಕೆ ಸಂಬಂಧಿಸಿದ ಧರ್ಮಾರ್ಥ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿ ಸುವ, ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ, ಆ ಸಂಸ್ಥೆ ಮೂಲಕ ಚರ, ಸ್ಥಿರಾಸ್ತಿ ಹೊಂದುವ, ನಿರ್ವಹಣೆ ಮಾಡುವ ಹಕ್ಕನ್ನು 26ನೇ ವಿಧಿಯು ನೀಡುತ್ತದೆ.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು
ಅಲ್ಪಸಂಖ್ಯಾತರ ಹಕ್ಕುಗಳು: ದೇಶದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರು ತಮ್ಮದೇ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ, ಅದನ್ನು ಅವರು ರಕ್ಷಿಸಿಕೊಳ್ಳಬಹುದಾಗಿದೆ. ಅದು ಸರ್ಕಾರದ ಹೊಣೆಗಾರಿಕೆಯೂ ಹೌದು. ಅಲ್ಪಸಂಖ್ಯಾತ ಸಮುದಾಯವು ತನ್ನದೇ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವ, ಅದನ್ನು ನಡೆಸುವ ಹಕ್ಕನ್ನು 30ನೇ ವಿಧಿಯು ನೀಡುತ್ತದೆ.
ಸಾಂವಿಧಾನಿಕ ಪರಿಹಾರದ ಹಕ್ಕು: ದೇಶದ ಯಾವುದೇ ನಾಗರಿಕರೂ ಯಾವುದೇ ವಿಚಾರದಲ್ಲಿ ಸಂವಿಧಾನಬದ್ಧ ಪರಿಹಾರ ಕೋರಿ ಅಧೀನ ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮೊರೆ ಹೋಗುವ ಹಕ್ಕನ್ನು 32ನೇ ವಿಧಿಯು ನೀಡುತ್ತದೆ.
ಕರ್ತವ್ಯಗಳು
ದೇಶದ ಪ್ರತಿಯೊಬ್ಬ ನಾಗರಿಕರೂ ನಿರ್ವಹಿಸಲೇಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನವು ವಿವರಿಸಿದೆ. ಇವುಗಳನ್ನು ನಿರ್ವಹಿಸದೇ ಇರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಸಂವಿಧಾನಕ್ಕೆ ಬದ್ಧವಾಗಿರಬೇಕು. ಅದರ ಆದರ್ಶ ಮತ್ತು ಸಂಸ್ಥೆಗಳನ್ನು ಗೌರವಿಸುವುದು
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು
ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕು ಹಾಗೂ ಸಂರಕ್ಷಿಸಬೇಕು
ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ದೇಶದ ಸೇವೆಗೆ ಧಾವಿಸಬೇಕು
ಧರ್ಮ, ಭಾಷೆ, ಪ್ರದೇಶ, ಜಾತಿ-ಪಂಗಡಗಳ ಭೇದಭಾವಗಳನ್ನು ಬಿಟ್ಟು, ದೇಶದ ಎಲ್ಲ ನಾಗರಿಕರಲ್ಲೂ ಸಾಮರಸ್ಯ ಮತ್ತು ಭ್ರಾತೃತ್ವ ಭಾವನೆಯನ್ನು ಬೆಳೆಸುವುದು. ಮಹಿಳೆಯರ ಗೌರವಕ್ಕೆ ಧಕ್ಕೆತರುವಂತಹ ಆಚರಣೆಗಳನ್ನು ಬಿಟ್ಟುಬಿಡಬೇಕು
ನಮ್ಮ ಸಮ್ಮಿಶ್ರ ಮತ್ತು ವೈವಿಧ್ಯ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸಬೇಕು ಹಾಗೂ ಕಾಪಾಡಬೇಕು
ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆ ಮತ್ತು ಅಭಿವೃದ್ಧಿ. ವನ್ಯಜೀವಿಗಳಿಗೆ ಅನುಕಂಪ ತೋರಬೇಕು
ವೈಜ್ಞಾನಿಕ, ಮಾನವೀಯತೆ, ಪ್ರಶ್ನಿಸುವ ಮತ್ತು ಸುಧಾರಣೆಯ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು
ಹಿಂಸೆಯನ್ನು ತ್ಯಜಿಸಬೇಕು ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು
ದೇಶವು ನಿರಂತರ ಸಾಧನೆಯ ಹಾದಿಯಲ್ಲಿರಲು ಮತ್ತು ಉನ್ನತ ಸಾಧನೆಗಳನ್ನು ಸಿದ್ಧಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು
- ಭಾರತ, ಒಮಾನ್ ನಡುವೆ ವ್ಯಾಪಾರ ಒಪ್ಪಂದ ಇಂದು
ಸಂದರ್ಭ: ಭಾರತ ಮತ್ತು ಒಮಾನ್ ದೇಶದ ನಡುವೆ ಮಸ್ಕತ್ನಲ್ಲಿ ಗುರುವಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧ ವನ್ನು ಬಲಪಡಿಸುವ ನಿರೀಕ್ಷೆ ಇದೆ.
- ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕಾರ್ಯಕ್ರಮ ದಲ್ಲಿ ಭಾಗಿಯಾಗಲಿದ್ದಾರೆ.
- ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ ಎಂಬುದು ಈ ಮುಕ್ತ ವ್ಯಾಪಾರ ಒಪ್ಪಂದದ ಅಧಿಕೃತ ಹೆಸರು. ಇದಕ್ಕೆ ಸಂಬಂಧಿಸಿದ ಮಾತುಕತೆಗಳು 2023ರ ನವೆಂಬರ್‌ನಲ್ಲಿ ಶುರುವಾದವು. ಈ ವರ್ಷ ದಲ್ಲಿ ಮಾತುಕತೆ ಪೂರ್ಣಗೊಂಡಿತು.
- ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರಗಳ ಪೈಕಿ ಭಾರತದ ಸರಕುಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಒಮಾನ್ ಮೂರನೆಯ ಸ್ಥಾನದಲ್ಲಿದೆ.
- ಜಿಡಿಪಿ ಬೆಳವಣಿಗೆ ಶೇ 7ರಷ್ಟು: ಗೀತಾ
ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಸುಮಾರು ಶೇ 7ರಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
- ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.4ರಷ್ಟು ಆಗಲಿದೆ ಎಂದು ಈ ಮೊದಲು ಅಂದಾಜಿಸಿತ್ತು. ಅಕ್ಟೋಬರ್‌ನಲ್ಲಿ ಈ ದರವನ್ನು ಪರಿಷ್ಕರಿಸಿ ಶೇ 6.6ಕ್ಕೆ ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ.
- ‘ಸಾಲ ತಗ್ಗಿಸಲು ರಾಜ್ಯಗಳು ಶ್ರಮಿಸಲಿ’
ಸಂದರ್ಭ:‘ವಿತ್ತೀಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ ಕೇಂದ್ರವು ಸ್ಪಷ್ಟ ಗುರಿಗಳನ್ನು ಹಾಕಿಕೊಂಡಿದೆ. ಇದರಿಂದಾಗಿ ಸಾಲದ ಮಟ್ಟ ಕಡಿಮೆ ಆಗಿದೆ. ಇದೇ ಕ್ರಮಗಳನ್ನು ರಾಜ್ಯ ಸರ್ಕಾರಗಳು ಸಹ ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
- ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಮುಂದಿನ ಆರ್ಥಿಕ ವರ್ಷದಿಂದ ವಿತ್ತೀಯ ಕೊರತೆ ಸೇರಿದಂತೆ ಸಾಲದ ಮಟ್ಟವನ್ನು ಕಡಿಮೆ ಮಾಡುವುದರತ್ತ ಹೆಚ್ಚಿನ ಗಮನ ನೀಡಲಾಗುತ್ತದೆ. 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲು ರಾಜ್ಯಗಳು ತಮ್ಮ ಸಾಲದ ಮಟ್ಟವನ್ನು ಕಡಿಮೆ ಮಾಡಬೇಕು’ ಎಂದು ರಾಜ್ಯಗಳಿಗೆ ಹೇಳಿದ್ದಾರೆ.
- ಕೇಂದ್ರ ಸರ್ಕಾರವು ಬಜೆಟ್ ರೂಪಿಸುವಿಕೆಯಲ್ಲಿ ಪಾರದರ್ಶಕತೆಗಾಗಿ ಸ್ಪಷ್ಟವಾದ ಗುರಿಗಳನ್ನು ನಿಗದಿಪಡಿಸಿದೆ. ಕೋವಿಡ್ ನಂತರದ ಅವಧಿಯಲ್ಲಿ ಸಾಲ–ಜಿಡಿಪಿ ಅನುಪಾತ ಶೇ 60ರಷ್ಟಿತ್ತು. ಇದು ಈಗ ಇಳಿಕೆಯ ಹಾದಿ ಹಿಡಿದಿದೆ ಎಂದಿದ್ದಾರೆ.
- ಕೋವಿಡ್ ನಂತರದ ಅವಧಿಯಲ್ಲಿ ದೇಶದ ಸಾಲ–ಜಿಡಿಪಿಯು ಶೇ 61.4ರಷ್ಟಿತ್ತು. ಆದರೆ, ಕೇಂದ್ರ ಸರ್ಕಾರ ಅಳವಡಿಸಿಕೊಂಡ ನಿಯಮಗಳಿಂದಾಗಿ 2023–24ರಲ್ಲಿ ಈ ಪ್ರಮಾಣ ಶೇ 57.1ಕ್ಕೆ ಇಳಿಯಿತು. ಪ್ರಸಕ್ತ ವರ್ಷದಲ್ಲಿ ಇದು ಶೇ 56.1ಕ್ಕೆ ಬರುವ ನಿರೀಕ್ಷೆ ಇದೆ.
- ಪ್ರತಿ ವರ್ಷ ಸಾಲದ ಮಟ್ಟವನ್ನು ಕಡಿಮೆ ಮಾಡುತ್ತಿರುವ ಕೇಂದ್ರ ಸರ್ಕಾರದಂತೆ, ರಾಜ್ಯಗಳು ಹಣಕಾಸು ನಿರ್ವಹಣೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕೆಂದು ಸಚಿವರು ಕರೆ ನೀಡಿದ್ದಾರೆ.
- ಅಣುಶಕ್ತಿ: ಖಾಸಗಿ ಹೂಡಿಕೆ: ಮಸೂದೆಗೆ ಲೋಕಸಭೆ ಅಸ್ತು
ಸಂದರ್ಭ: ಜಗತ್ತು ಈಗ ಶುದ್ಧ ಇಂಧನ ಯುಗದತ್ತ ಹೆಜ್ಜೆ ಹಾಕುತ್ತಿದೆ. ನಾವು ಕೂಡ 2047ರ ವೇಳೆಗೆ 100 ಗಿಗಾವಾಟ್ ಅಣುಶಕ್ತಿ ಉತ್ಪಾದಿಸುವ ಗುರಿ ನಿಗದಿ ಮಾಡಿದ್ದೇವೆ ಜಿತೇಂದ್ರ ಸಿಂಗ್ ಕೇಂದ್ರ ಸಚಿವ.
- ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
- ಕೂಲಂಕಷ ಪರಾಮರ್ಶೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಲಿಲ್ಲ. ನಂತರ, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
- ಇದರ ನಡುವೆಯೇ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆ’ಯನ್ನು ಧ್ವನಿಮತ ಮೂಲಕ ಸದನ ಅಂಗೀಕರಿಸಿತು.
- ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ‘2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ ಸಾಧಿಸಲು ಈ ಮಸೂದೆ ನೆರವಾಗಲಿದೆ’ ಎಂದು ಹೇಳಿದರು.
- ಪರ–ವಿರೋಧ ಮಾತು: ಇದಕ್ಕೂ ಮುನ್ನ ನಡೆದ ಚರ್ಚೆ ವೇಳೆ, ಆಡಳಿತಾ ರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಈ ಮಸೂದೆಯನ್ನು ಬೆಂಬಲಿಸಿದರೆ, ವ್ಯಾಪಕ ಸಮಾಲೋಚನೆಗಳಿಗಾಗಿ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಪಟ್ಟು ಹಿಡಿದರು.
- ವಿದ್ಯುತ್ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಈ ಮಸೂದೆ ನೆರವಾಗಲಿದೆ ಎಂಬುದು ಎನ್‌ಡಿಎ ಪಾಳಯದ ಸಂಸದರ ಪ್ರತಿಪಾದನೆಯಾದರೆ, ಈ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು ಅಪಾಯಕಾರಿ ಎಂದು ಹೇಳುವ ಮೂಲಕ ವಿಪಕ್ಷಗಳ ಸಂಸದರು ಮಸೂದೆಗೆ ಬಲವಾದ ಪ್ರತಿರೋಧ ವ್ಯಕ್ತಪಡಿಸಿದರು.
- ಬಿಜೆಪಿಯ ಶಶಾಂಕ ಮಣಿ ಮಾತನಾಡಿ, ‘ನಾಗರಿಕ ಅಣು ವಿದ್ಯುತ್ ಕ್ಷೇತ್ರ ಪ್ರವೇಶಿಸುವುದಕ್ಕೆ ಖಾಸಗಿ ಯವರಿಗೂ ಅವಕಾಶ ಕಲ್ಪಿಸುವುದರಿಂದ ಪ್ರತಿಯೊಬ್ಬ ಭಾರತೀಯನಿಗೂ ಪ್ರಯೋಜನವಾಗಲಿದೆ’ ಎಂದು ಹೇಳಿದರು. ಅಣು ಶಕ್ತಿ ಕಾಯ್ದೆ–1962 ಹಾಗೂ ನಾಗರಿಕ ಹೊಣೆಗಾರಿಕೆ (ಪರಮಾಣು ಹಾನಿ) ಕಾಯ್ದೆ–2010ರಲ್ಲಿದ್ದ ಅಂಶಗಳನ್ನು ನೂತನ ಮಸೂದೆಯಲ್ಲಿ ತೆಗೆದು ಹಾಕಿರುವುದಕ್ಕೂ ತಿವಾರಿ ವಿರೋಧ ವ್ಯಕ್ತಪಡಿಸಿದರು.
- ‘ಈ ಮಸೂದೆ ಕುರಿತು ಕೂಲಂಕಷ ಪರಿಶೀಲನೆ ಅಗತ್ಯ ಇದೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು’ ಎಂದು ತಿವಾರಿ ಆಗ್ರಹಿಸಿದರು.
- ಈ ವಿಷಯವಾಗಿ ಮಾತನಾಡಿದ ಡಿಎಂಕೆಯ ಅರುಣ್ ನೆಹರು, ಟಿಎಂಸಿಯ ಸೌಗತ ರಾಯ್, ಶಿವಸೇನಾದ(ಯುಬಿಟಿ) ಅರವಿಂದ ಸಾವಂತ್ ಕೂಡ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
- 2026ರ ಅಂತ್ಯಕ್ಕೆ ಎಐ ಆಧಾರಿತ ಡಿಜಿಟಲ್ ಟೋಲ್: ಗಡ್ಕರಿ
ಸಂದರ್ಭ: ದೇಶದಾದ್ಯಂತ ಬಹು ಪಥ ಮುಕ್ತ ಹರಿವು (ಎಂಎಲ್ಎಫ್ಎಫ್) ಟೋಲ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಹೆದ್ದಾರಿ ನಿರ್ವಹಣೆ ವ್ಯವಸ್ಥೆಯು 2026ರ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
- ಈ ಯೋಜನೆ ಮತ್ತು ತಂತ್ರಜ್ಞಾನದ ಅನುಷ್ಠಾನದ ನಂತರ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರು ಕಾಯುವುದು ತಪ್ಪಲಿದೆ ಎಂದು ರಾಜ್ಯಸಭೆಯಲ್ಲಿ ತಿಳಿಸಿದರು.
- ಪ್ರಶ್ನೋತ್ತರ ಅವಧಿ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ. ಇದರಿಂದ ಪ್ರಯಾಣಿಕರ ಸಮಯ ಮತ್ತು ₹1,500 ಕೋಟಿ ಮೌಲ್ಯದ ಇಂಧನವು ಉಳಿತಾಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹6,000 ಕೋಟಿ ಹೆಚ್ಚುವರಿ ವರಮಾನ ಬರಲಿದೆ’ ಎಂದು ತಿಳಿಸಿದರು.
- 2026ರ ಅಂತ್ಯದೊಳಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ನಿಶ್ಚಿತ. ಆ ಬಳಿಕ ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಕಾದು ನಿಲ್ಲಬೇಕಾದ ಅಗತ್ಯವೇ ಇರುವುದಿಲ್ಲ ಎಂದರು.
- ಮಂಗನ ಕಾಯಿಲೆ ಮಲೆನಾಡಿನಲ್ಲಿ ಆತಂಕದ ಛಾಯೆ
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಎಫ್‌ಡಿಕೆಎಫ್‌ಡಿ ನಿಯಂತ್ರಣಕ್ಕೆ ಮಲೆನಾಡಿನಲ್ಲಿ ಅಕ್ಟೋಬರ್ ತಿಂಗಳಿಂದಲೇ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಮನೆ ಮನೆಗೆ ತೆರಳಿ ಕಾಯಿಲೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದೇವೆ. ಪ್ರತಿ ಮನೆಗೆ ಎರಡು ಬಾಟಲಿ ಡೆಪಾ ಎಣ್ಣೆ ವಿತರಣೆ ಮಾಡಲಾಗುತ್ತಿದೆಡಾ.ಎಲ್.ನಾಗರಾಜ ನಾಯ್ಕ, ಸರ್ವೇಕ್ಷಣಾ ಅಧಿಕಾರಿ,ಆರೋಗ್ಯ ಇಲಾಖೆ, ಶಿವಮೊಗ್ಗ
ಮಲೆನಾಡಿನಲ್ಲಿ ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಮಂಗನ ಕಾಯಿಲೆ) ಕಾಣಿಸಿಕೊಂಡಿದೆ. ಡಿ.1ರಿಂದ 17ರವರೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 10 ಮಂದಿಗೆ ಕೆಎಫ್‌ಡಿ ಬಾಧಿಸಿದೆ. 36 ಮಂಗಗಳು ಸತ್ತಿವೆ. ಚಳಿ ಕರಗಿ ಬಿಸಿಲು ಹೆಚ್ಚುತ್ತಿದ್ದಂತೆಯೇ ಕಾಯಿಲೆ ವ್ಯಾಪಕಗೊಳ್ಳುತ್ತದೆ. ಹೀಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ.
ಆರೋಗ್ಯ ಇಲಾಖೆಯೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಜಾಗೃತಿ ಆರಂಭಿಸಿದ್ದು, ಡೆಪಾ (DEPA) ತೈಲ ವಿತರಣೆ ಮಾಡುತ್ತಿದೆ. ರೋಗ ಬಾಧಿತರಿಗೆ ವೈದ್ಯಕೀಯ ನೆರವಿಗೆ ಸಿದ್ಧತೆ ಆರಂಭಿಸಿದೆ.
ಏನಿದು ಕೆಎಫ್‌ಡಿ?: ಕೆಎಫ್‌ಡಿ ಮೊದಲ ಬಾರಿಗೆ 1957ರಲ್ಲಿ ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಇದು ಕ್ಯಾಸನೂರು ಕಾಡಿನ ಕಾಯಿಲೆ. ಆದರೆ ಆಡುಭಾಷೆಯಲ್ಲಿ ಇದು ಮಂಗನ ಕಾಯಿಲೆ. ‘ರಷ್ಯನ್ ಎನ್‌ಸಫಲೈಟಿಸ್’ ಹೆಸರಿನ ವೈರಸ್‌ನಿಂದ ಈ ಕಾಯಿಲೆ ಬರುತ್ತದೆ. ಮಲೆನಾಡಿನ ಕಾಡಿಗೆ ಸೈಬೀರಿಯಾ ಭಾಗದಿಂದ ಬಂದ ಯಾವುದೋ ವಲಸೆ ಹಕ್ಕಿಯ ಮೈಯಲ್ಲಿ ಈ ವೈರಸ್ ಹೊತ್ತ ಉಣ್ಣಿ (ಉಣುಗು) ಮಲೆನಾಡಿಗೆ ಬಂದಿರಬಹುದು ಎಂಬುದು ವಿಜ್ಞಾನಿಗಳ ಊಹೆ.
ರೋಗದ ಲಕ್ಷಣಗಳೇನು?: ಮೊದಲ ಹಂತದಲ್ಲಿ ಮೂರರಿಂದ ಎಂಟು ದಿನ ಜ್ವರ, ಕತ್ತಿನ ಹಿಂಭಾಗ, ಸ್ನಾಯುಗಳಲ್ಲಿ ನೋವು ಜೊತೆಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ರೋಗಲಕ್ಷಣ ಆಧರಿಸಿ ವೈದ್ಯರು ಔಷಧಿ ಕೊಟ್ಟು ರೋಗಿ ಗುಣಮುಖರಾದರೂ ವಾರದ ಅಂತರದಲ್ಲಿಯೇ ಎರಡನೇ ಹಂತದ ಲಕ್ಷಣಗಳು ಬಾಧಿಸುತ್ತವೆ. ಎರಡನೇ ಹಂತದಲ್ಲಿ ವಿಪರೀತ ಜ್ವರ, ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಶಕ್ತಿ, ಕ್ಷೋಭೆ, ರಕ್ತಸ್ರಾವ, ಪ್ರಜ್ಞಾಹೀನತೆ ಉಂಟಾಗುತ್ತದೆ. ಈ ಹಂತದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಸಾವು ಬರಬಹುದು.
ಕೆಎಫ್‌ಡಿಗೆ ಕಾಡಂಚಿನ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಶೇ 50ರಿಂದ 60ರಷ್ಟು ತುತ್ತಾಗುತ್ತಿದ್ದಾರೆ. ಇವರಲ್ಲಿ ಅತಿಯಾಗಿ ಮದ್ಯಪಾನ–ತಂಬಾಕು ಸೇವನೆ ಚಟ, ಪೌಷ್ಟಿಕಾಂಶದ ಕೊರತೆ ಇದ್ದವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸಾವಿಗೀಡಾಗುತ್ತಿದ್ದಾರೆ. ಅವರಲ್ಲಿ ಮಹಿಳೆಯರ ಸಾವಿನ ಪ್ರಮಾಣ ಹೆಚ್ಚಿದೆ. ಮುಟ್ಟಿನ ದಿನಗಳಲ್ಲಿ ಕಾಯಿಲೆ ಬಾಧಿಸಿದರೆ ಅತಿಹೆಚ್ಚು ರಕ್ತಸ್ರಾವ ಆಗುತ್ತದೆ. ಋತುಚಕ್ರದ ಸ್ರಾವ ನಿಲ್ಲಿಸುವುದು ಕಷ್ಟ. ಕೊನೆಗೆ ರಕ್ತಹೀನತೆಯಿಂದ ಸಾವಿಗೀಡಾಗುತ್ತಾರೆ.
ಮಂಗನಿಂದ ಬರುವ ಕಾಯಿಲೆ ಅಲ್ಲ : ಮಂಗನಿಗೂ ಕೆಎಫ್‌ಡಿಗೂ ಸಂಬಂಧವಿಲ್ಲ. ಆದರೆ ಜನರ ಬಾಯಲ್ಲಿ ಮಂಗನ ಕಾಯಿಲೆ ಆಗಿದೆ. ವಾಸ್ತವವಾಗಿ ಮಂಗ ಕೂಡ ಮನುಷ್ಯನಿಗಿಂತ ಹೆಚ್ಚು ಸಂತ್ರಸ್ತ. ಉಣುಗು ಕಡಿತದಿಂದ ರಷ್ಯನ್ ಎನ್‌ಸಫಲೈಟಿಸ್ ವೈರಸ್ ಮನುಷ್ಯನ ರೀತಿಯಲ್ಲೇ ಮಂಗನ ದೇಹಕ್ಕೂ ಸೇರುತ್ತದೆ. ಕೆಎಫ್‌ಡಿ ಬಾಧಿತರು ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದು ಬದುಕುತ್ತಾರೆ. ಆದರೆ ಸೋಂಕು ಬಾಧಿತ ಮಂಗಗಳು ಸಾಯುತ್ತವೆ.
ಕಾಡಿನಲ್ಲಿ ಮಂಗಗಳ ಕಳೇಬರ ದೊರೆತರೆ ಅಲ್ಲಿ ವೈರಸ್‌ನ ಸುಳಿವು ಇರುತ್ತದೆ. ಮಂಗನ ಹೆಸರಲ್ಲಿ ಕಾಯಿಲೆಯ ಗುರುತಿಸುವುದರಿಂದ ಬಾಧಿತರಲ್ಲಿ ಒಂದು ಬಗೆಯ ಸಾಮಾಜಿಕ ಕಳಂಕದ ಭಾವನೆ ಮೂಡುತ್ತಿದ್ದು, ಅವರು ತಕ್ಷಣ ವೈದ್ಯರ ಬಳಿಗೆ ತೆರಳದೇ ಮನೆ ಮದ್ದಿಗೆ ಸೀಮಿತರಾಗುತ್ತಾರೆ. ರೋಗ ಉಲ್ಬಣಿಸಿದಾಗ ವೈದ್ಯರ ಬಳಿ ತೆರಳುತ್ತಿದ್ದು, ಇದು ಜೀವ ಹಾನಿಗೂ ಕಾರಣವಾಗುತ್ತಿದೆ.
ಲಸಿಕೆ ಅಭಿವೃದ್ಧಿ ಟ್ರಯಲ್ಸ್ ಹಂತದಲ್ಲಿ: ಕೆಎಫ್‌ಡಿಗೆ ಈಗ ನಿರ್ದಿಷ್ಟ ಔಷಧಿ ಇಲ್ಲ. ಆರೋಗ್ಯ ಇಲಾಖೆ ಸದ್ಯ ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಿದೆ. 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಅಭಿವೃದ್ಧಿಪಡಿಸಿದ್ದ ಲಸಿಕೆ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಆದರೆ ಅದು ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಹೀಗಾಗಿ ಆ ಲಸಿಕೆ ಬಳಕೆಯನ್ನು ಆರೋಗ್ಯ ಇಲಾಖೆ ಮೂರು ವರ್ಷಗಳಿಂದ ನಿಲ್ಲಿಸಿದೆ.
‘ಹೊಸದಾಗಿ ಲಸಿಕೆ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈಗ
ಅದು ಕ್ಲಿನಿಕಲ್ ಟ್ರಯಲ್ಸ್ ಹಂತದಲ್ಲಿದೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗಬಹುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ ನಾಯ್ಕ ಹೇಳುತ್ತಾರೆ.
ಲಸಿಕೆ ಅಭಿವೃದ್ಧಿ ಟ್ರಯಲ್ಸ್ ಹಂತದಲ್ಲಿ
ಕೆಎಫ್‌ಡಿಗೆ ಈಗ ನಿರ್ದಿಷ್ಟ ಔಷಧಿ ಇಲ್ಲ. ಆರೋಗ್ಯ ಇಲಾಖೆ ಸದ್ಯ ರೋಗದ ಲಕ್ಷಣಗಳ ಆಧರಿಸಿ ಚಿಕಿತ್ಸೆ ನೀಡುತ್ತಿದೆ. 1992ರಲ್ಲಿ ಮಹಾರಾಷ್ಟ್ರದ ವಿಜ್ಞಾನಿ ಡಾ.ದಂಡಾವತೆ ಅಭಿವೃದ್ಧಿಪಡಿಸಿದ್ದ ಲಸಿಕೆ ಇಲ್ಲಿಯವರೆಗೂ ಬಳಕೆಯಲ್ಲಿತ್ತು. ಆದರೆ ಅದು ವೈರಸ್‌ನ ರೂಪಾಂತರದಿಂದ (ಮ್ಯುಟೇಶನ್) ತನ್ನ ಪರಿಣಾಮ ಕಳೆದುಕೊಂಡಿದೆ. ಹೀಗಾಗಿ ಆ ಲಸಿಕೆ ಬಳಕೆಯನ್ನು ಆರೋಗ್ಯ ಇಲಾಖೆ ಮೂರು ವರ್ಷಗಳಿಂದ ನಿಲ್ಲಿಸಿದೆ.
‘ಹೊಸದಾಗಿ ಲಸಿಕೆ ಅಭಿವೃದ್ಧಿಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈಗ ಅದು ಕ್ಲಿನಿಕಲ್ ಟ್ರಯಲ್ಸ್ ಹಂತದಲ್ಲಿದೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಸಿದ್ಧವಾಗಬಹುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಲ್.ನಾಗರಾಜ ನಾಯ್ಕ ಹೇಳುತ್ತಾರೆ.
‘ತಕ್ಷಣ ಪರೀಕ್ಷೆ ಮಾಡಿಸಿ’
ಕೆಎಫ್‌ಡಿ ಬಾಧಿತರಿಗೆ ಚಿಕಿತ್ಸೆ ನೀಡಲು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಲೆನಾಡು ಭಾಗದ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯ ಪ್ರತ್ಯೇಕ ವೈರಲ್ ವಾರ್ಡ್ ರೂಪಿಸಲಾಗಿದೆ. ತೀವ್ರ ರೋಗ ಬಾಧಿತರ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್, ಸುಬ್ಬಯ್ಯ ಹಾಗೂ ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಗಳನ್ನು ಗುರುತಿಸಿದ್ದು, ಅಲ್ಲಿ ಎಲ್ಲ ರೋಗಿಗಳಿಗೂ ಸಂಪೂರ್ಣ ಉಚಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.
‘ಕೆಎಫ್‌ಡಿ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ. ಮಲೆನಾಡಿನಲ್ಲಿ ಜ್ವರ ಬಾಧಿತರು ಆರ್‌ಎಂಪಿ, ನಾಟಿ ವೈದ್ಯರ ಬಳಿ ತೆರಳದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕು. ಅಲ್ಲಿ ರಕ್ತ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಬಹುದು’ ಎಂದು ಡಾ.ನಾಗರಾಜ ನಾಯ್ಕ ಮನವಿ ಮಾಡುತ್ತಾರೆ.
ಉಣುಗು ಕಡಿತದಿಂದ ರಕ್ಷಣೆಗೆ ಸಲಹೆ
ಕೆಎಫ್‌ಡಿ ಹರಡುವ ಉಣುಗುಗಳು ಕಾಡಿನಲ್ಲಿರುತ್ತವೆ. ಇವು ಜೀವಿತಾವಧಿಯಲ್ಲಿ ತಾವಾಗಿಯೇ 100 ಮೀ. ಮಾತ್ರ ಕ್ರಮಿಸಬಹುದು. ಆದರೆ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಮಂಗ, ಕಾಡಿಗೆ ಮೇಯಲು ಹೋಗುವ ದನಗಳ ಮೂಲಕ ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಕಾಡಿಗೆ ಹೋದವರಿಗೆ ಉಣುಗು ಕಚ್ಚಿದರೂ ರೋಗ ಹರಡುತ್ತದೆ. ಕಾಡಿಗೆ ಹೋಗುವಾಗ ಡೆಪಾ ಎಣ್ಣೆ ಕೈ ಕಾಲಿಗೆ ಹಚ್ಚಿಕೊಳ್ಳಬೇಕು, ಪೂರ್ಣ ತೋಳಿನ ಶರ್ಟು, ಪ್ಯಾಂಟ್, ಶೂ ಧರಿಸಬೇಕು. ವಾಪಸ್ ಮರಳಿದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಬಟ್ಟೆಗಳನ್ನೂ ಬಿಸಿ ನೀರಿನಲ್ಲಿ ಒಗೆದು ಹಾಕಬೇಕು. ದನ–ಕರುಗಳ ಮೈ ತೊಳೆಯಬೇಕು ಎಂದು ಎಂಬುದು ವೈದ್ಯರ ಸಲಹೆ.

- ಭಾರತ– ಇಥಿಯೋಪಿಯಾ: ಒಪ್ಪಂದಗಳಿಗೆ ಸಹಿ
ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರ ಇಥಿಯೋಪಿಯಾ ಭೇಟಿ ವೇಳೆ ಉಭಯ ದೇಶಗಳ ನಡುವೆ ಕಸ್ಟಮ್ಸ್ ವಿಷಯಗಳಲ್ಲಿ ಪರಸ್ಪರ ಆಡಳಿ ತಾತ್ಮಕ ನೆರವು ಸೇರಿದಂತೆ ಮಹತ್ವದ ಮೂರು ಒಪ್ಪಂದಗಳಿಗೆ ಬುಧವಾರ ಸಹಿ ಹಾಕಲಾಯಿತು.
- ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾ ಚರಣೆ ತರಬೇತಿ, ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆ ಕುರಿತ ಒಪ್ಪಂದಕ್ಕೆ ಈ ವೇಳೆ ಸಹಿ ಮಾಡಲಾಯಿತು.
- ಇದಕ್ಕೂ ಮುನ್ನ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರ ಜತೆಗೆ ಮೋದಿ ಅವರು ವ್ಯಾಪಕ ಮಾತುಕತೆ ನಡೆಸಿದರು.
- ‘ಈ ಒಪ್ಪಂದಗಳು ಜನ ಕೇಂದ್ರಿತ ಅಭಿವೃದ್ದಿ ಮೇಲೆ ಕೇಂದ್ರೀಕರಿಸಿದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ’ ಎಂದು ನರೇಂದ್ರ ಮೋದಿ ಬಣ್ಣಿಸಿದರು.
- ಉಭಯ ದೇಶಗಳ ನಡುವೆ ಕಾರ್ಯ ತಂತ್ರದ ಪಾಲುದಾರಿಕೆ ನವೀಕರಣ, ಜಿ–20 ಅಡಿಯಲ್ಲಿ ಸಾಲ ಪುನರ್‌ರಚನೆ, ಶಿಕ್ಷಣ, ಆರೋಗ್ಯ, ಸಂಸ್ಕತಿ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಸಂಬಂಧ ವೃದ್ಧಿಸಲು ಉಭಯ ನಾಯಕರು ಸಮ್ಮತಿಸಿದರು.
- ‘ಎರಡೂ ದೇಶಗಳ ನಡುವೆ ದೀರ್ಘ ಕಾಲೀನ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ ಯಲ್ಲಿ ಇವು ಪ್ರಮುಖ ನಿರ್ಧಾರಗಳಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
- ‘ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಇಥಿಯೋಪಿಯಾ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ಸಂಬಂಧ) ಸುಧಾಕರ್ ದಲೇಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
- ಮೋದಿ ಅವರು ಇಥಿಯೋಪಿಯಾದಿಂದ ಒಮಾನ್‌ಗೆ ತೆರಳಿದರು.
‘ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣ’
- ಭಾರತ ಮತ್ತು ಇಥಿಯೋಪಿಯಾ ದೇಶಗಳು ಪ್ರಾದೇಶಿಕ ಶಾಂತಿ, ಭದ್ರತೆ ಕ್ಷೇತ್ರದಲ್ಲಿ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
- ಇಥಿಯೋಪಿಯಾದ ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಎರಡೂ ದೇಶಗಳ ಪೂರ್ವಿಕರು ಕೇವಲ ಪದಾರ್ಥಗಳನ್ನಷ್ಟೇ ಅಲ್ಲದೆ ವಿಚಾರ ಮತ್ತು ಜೀವನ ವಿಧಾನವನ್ನು ವಿನಿಮಯ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
- ‘ಪ್ರಜಾಪ್ರಭುತ್ವವು ಒಂದು ಜೀವನ ವಿಧಾನ ಮತ್ತು ಪ್ರಯಾಣ ಎಂಬುದನ್ನು ಎರಡೂ ದೇಶಗಳು ಅರ್ಥಮಾಡಿ ಕೊಂಡಿವೆ’ ಎಂದು ಅವರು ವಿವರಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ ವಿಶ್ವದ 18ನೇ ಸಂಸತ್ತು ಇದಾಗಿದೆ.
- ಎನ್ಪಿಎಸ್ ಆಧರಿಸಿ ಇನ್ನು ಸಾಲ ಸೌಲಭ್ಯ
ಸಂದರ್ಭ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್ಪಿಎಸ್) ನಿಯಮಗಳನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್ಡಿಎ) ಪರಿಷ್ಕರಿಸಿದ್ದು, ಎನ್ಪಿಎಸ್ ಖಾತೆಯನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವ ಸೌಲಭ್ಯ ಕಲ್ಪಿಸಿದೆ.
- ಪಿಎಫ್‌ಆರ್‌ಡಿಎ ನಿಗದಿಪಡಿಸಿದ ಮಿತಿಯ ಒಳಗೆ, ನಿಯಂತ್ರಣಕ್ಕೆ ಒಳಪಟ್ಟ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು ಎಂದು ಡಿಸೆಂಬರ್ 12ರ ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು – 2025’ರಲ್ಲಿ ಹೇಳಲಾಗಿದೆ.
- ಸರ್ಕಾರೇತರ ಚಂದಾದಾರರು ಎನ್‌ಪಿಎಸ್ ವ್ಯವಸ್ಥೆಯಿಂದ ಹೊರನಡೆಯುವ ಸಂದರ್ಭದಲ್ಲಿ ಖಾತೆಯಲ್ಲಿನ ಶೇಕಡ 80ರವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಶೇ 60ರವರೆಗಿನ ಮೊತ್ತವನ್ನು ಮಾತ್ರ ಹಿಂಪಡೆಯಲು ಅವಕಾಶ ಇತ್ತು. ಇನ್ನುಳಿದ ಶೇ 40ರಷ್ಟು ಮೊತ್ತವನ್ನು ಆ್ಯನ್ಯುಟಿ ಯೋಜನೆ ಖರೀದಿಸಲು ಬಳಸಬೇಕಿತ್ತು.
- ಹೊಸ ನಿಯಮಗಳು ಅವು ಅಧಿಸೂಚನೆ ಯಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರಲಿವೆ.
- ಪಿಂಚಣಿ ನಿಧಿಯಲ್ಲಿ ಒಗ್ಗೂಡಿರುವ ಮೊತ್ತವು ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಷ್ಟೂ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯುವ ಅವಕಾಶ ಇರುತ್ತದೆ. ಅಥವಾ, ಆ ಮೊತ್ತವನ್ನು ಕಾಲಕಾಲಕ್ಕೆ ವ್ಯವಸ್ಥಿತ ಹಿಂತೆಗೆತದ ಮೂಲಕ ಪಡೆಯಲು ಕೂಡ ಅವಕಾಶ ಇರಲಿದೆ.
- ಎನ್‌ಪಿಎಸ್ ಮೊತ್ತವನ್ನು ಇನ್ನು ಮುಂದೆ ಒಟ್ಟು ನಾಲ್ಕು ಬಾರಿ ಭಾಗಶಃ ಹಿಂಪಡೆಯಲು ಅವಕಾಶ ಇರಲಿದೆ. ಆದರೆ ಒಂದು ಬಾರಿ ಹಿಂಪಡೆದ ನಂತರ ನಾಲ್ಕು ವರ್ಷ ಮತ್ತೆ ಹಿಂಪಡೆಯಲು ಅವಕಾಶ ಸಿಗುವುದಿಲ್ಲ.
- ಸರ್ಕಾರಿ ವಲಯದ ಎನ್‌ಪಿಎಸ್ ಚಂದಾದಾರರಿಗೆ 85 ವರ್ಷ ವಯಸ್ಸಾಗುವವರೆಗೂ ಎನ್‌ಪಿಎಸ್‌ನಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಈ ಮೊದಲು ಇದಕ್ಕೆ 75 ವರ್ಷ ವಯಸ್ಸಿನ ಮಿತಿ ಇತ್ತು.
- ರಾಜೀನಾಮೆ, ಕೆಲಸದಿಂದ ವಜಾ ಕಾರಣದಿಂದಾಗಿ ಎನ್‌ಪಿಎಸ್‌ನಿಂದ ಹೊರನಡೆಯುವ ಸರ್ಕಾರಿ ನೌಕರರು ಎನ್‌ಪಿಎಸ್‌ನಲ್ಲಿ ಶೇ 80ರಷ್ಟು ಮೊತ್ತವನ್ನು ಆ್ಯನ್ಯುಟಿ ಖರೀದಿಗೆ ಬಳಸಬೇಕು. ಇನ್ನುಳಿದ ಮೊತ್ತವನ್ನು ಅವರು ಹಿಂಪಡೆಯಬಹುದು.
- ಸರ್ಕಾರೇತರ ವಿಭಾಗ ಹಾಗೂ ಎನ್‌ಪಿಎಸ್–ಲೈಟ್ ವಿಭಾಗದವರು ಕೂಡ ತಮಗೆ 85 ವರ್ಷ ವಯಸ್ಸಾಗುವವರೆಗೂ ಹೂಡಿಕೆಯನ್ನು ಮುಂದುವರಿಸಲು ಹೊಸ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.
- ಫಿಫಾ ವಿಶ್ವಕಪ್ ವಿಜೇತ ತಂಡಕ್ಕೆ ₹452 ಕೋಟಿ ಬಹುಮಾನ
ಸಂದರ್ಭ: 2026ರ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡವು ₹452.06 ಕೋಟಿ ಬಹುಮಾನ ಪಡೆಯಲಿದೆ ಎಂದು ಫಿಫಾ ತಿಳಿಸಿದೆ.
- ಟೂರ್ನಿಯು ಒಟ್ಟು ₹5921 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. 2022ರಲ್ಲಿ ಕತಾರ್‌ನಲ್ಲಿ ನಡೆದ ಕೊನೆಯ ಟೂರ್ನಿಗಿಂತ ಶೇ 50ರಷ್ಟು (₹3978 ಕೋಟಿ) ಬಹುಮಾನ ಮೊತ್ತ ಹೆಚ್ಚಳವಾಗಿದೆ.
- ಮುಂದಿನ ವರ್ಷ ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ.