ಮಾರ್ಚ್ ವೇಳೆಗೆ ಏಳು ಉಡ್ಡಯನ ಕಾರ್ಯಾಚರಣೆ
ಸಂದರ್ಭ: ಮುಂದಿನ ವರ್ಷದ ಮಾರ್ಚ್ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಏಳು ಉಡಾವಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಇದರಲ್ಲಿ ಉಪಗ್ರಹ ಮತ್ತು ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ತಂತ್ರಜ್ಞಾನಗಳಿಗಾಗಿ ಸ್ವದೇಶಿ ನಿರ್ಮಿತ ವಿದ್ಯುತ್ ಪ್ರೊಪಲ್ಷನ್ ವ್ಯವಸ್ಥೆಗಳನ್ನು ಪ್ರದರ್ಶಿಸುವುದು ಹಾಗೂ ಗಗನಯಾನ ಯೋಜನೆಯ ಮೊದಲ ಮಾನವರಹಿತ ಕಾರ್ಯಾಚರಣೆಯೂ ಸೇರಿವೆ.
- ಏಳು ಕಾರ್ಯಾಚರಣೆಗಳ ಪೈಕಿ ಮೊದಲನೆಯ ಉಡಾವಣೆ ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ.
- ‘ಇಸ್ರೊದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಹಾಗೂ ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ನಡುವಿನ ವಾಣಿಜ್ಯ ಒಪ್ಪಂದ ದಂತೆ ‘ಬ್ಲೂಬರ್ಡ್–6’ ಸಂವಹನ ಉಪಗ್ರಹವನ್ನು ಭಾರತದ ‘ಬಾಹುಬಲಿ’ ರಾಕೆಟ್ ಎಲ್‌ವಿಎಂ–3 ಮೂಲಕ ಕಕ್ಷೆಗೆ ಸೇರಿಸಲಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಸಂಸತ್‌ಗೆ ತಿಳಿಸಿದ್ದರು.
- ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸ ಗೊಳಿಸಲಾಗಿರುವ ‘ವ್ಯೋಮಮಿತ್ರ’ ರೋಬೊಟ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಎಲ್‌ವಿಎಂ–3 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕಾರ್ಯಗಳು ಭರದಿಂದ ಸಾಗಿವೆ.
- ‘2027ರಲ್ಲಿ ಇಸ್ರೊ ಭಾರತೀಯ ಗಗನ ಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವ ಮೊದಲು, ಮುಂದಿನ ವರ್ಷದ ಕೊನೆಯಲ್ಲಿ ಮತ್ತೊಂದು ಮಾನವರಹಿತ ಕಾರ್ಯಾಚರಣೆ ಕೈಗೊಳ್ಳಲು ಯೋಜಿಸಲಾಗಿದೆ.
- ಮುಂದಿನ ವರ್ಷ ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಕಂಪನಿಗಳು ನಿರ್ಮಿಸಿದ ಮೊದಲ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಉಡ್ಡಯನವಾಗಲಿದ್ದು, ಇದು ಓಷನ್‌ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಪಿಎಸ್‌ಎಲ್‌ವಿ ಇನ್ನೂ ಎರಡು ಉಪಗ್ರಹಗಳಾದ ಭಾರತ ಮತ್ತು ಮಾರಿಷಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಉಪಗ್ರಹ ಹಾಗೂ ಭಾರತದ ಖಾಸಗಿ ಬಾಹ್ಯಾಕಾಶ ಕಂಪನಿ ‘ಧ್ರುವ ಸ್ಪೇಸ್’ನ ಎಲ್‌ಇಎಪಿ–2 ಉಪಗ್ರಹವನ್ನು ಹೊತ್ತೊಯ್ಯಲಿದೆ.
- ಐದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ತಯಾರಿಸಲು ಎಚ್‌ಎಎಲ್ ಹಾಗೂ ಎಲ್ ಆ್ಯಂಡ್ ಟಿ ಒಕ್ಕೂಟದೊಂದಿಗೆ ಎನ್‌ಎಸ್‌ಐಎಲ್ ಒಪ್ಪಂದ ಮಾಡಿಕೊಂಡಿತ್ತು.
- ಇಸ್ರೊ ನಿರ್ಮಿತ ಪಿಎಸ್‌ಎಲ್‌ವಿ, ಭೂ ವೀಕ್ಷಣಾ ಉಪಗ್ರಹ (ಇಒಎಸ್–ಎನ್1), ಭಾರತ ಮತ್ತು ವಿದೇಶಗಳ 18 ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸ ಲಾಗುತ್ತದೆ.
- ಪಂಜಾಯತ್ರಾಜ್ ಅಧಿಕಾರಿಗಳಿಗೆ ಎನ್ಎಚ್ಆರ್ಸಿ ಸಮನ್ಸ್
ಸಂದರ್ಭ: ಪಂಚಾಯಿತಿ ಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ‘ಪರೋಕ್ಷ ಆಡಳಿತ’ ಇರುವ ಕುರಿತ ಆರೋಪಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ವಿಫಲವಾಗಿರುವ 24 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ರಾಜ್ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ) ಸಮನ್ಸ್ ಜಾರಿ ಮಾಡಿದೆ.
- ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ‘ಪರೋಕ್ಷ ಆಡಳಿತ’ ಇದೆ ಎಂದು ಹರಿಯಾಣದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಸುಶೀಲ್ ವರ್ಮಾ ದೂರು ನೀಡಿದ್ದರು. ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ ಪೀಠವು ಈ ದೂರನ್ನು ಡಿ. 12ರಂದು ವಿಚಾರಣೆಗೆ ಕೈಗೆತ್ತಿ ಕೊಂಡು, ಈ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಹಿಳೆಯರ ಪರವಾಗಿ ಅವರ ಪತಿ ಅಥವಾ ಮಹಿಳೆಯ ಸಂಬಂಧಿಕ ಪುರುಷರೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದನ್ನು ‘ಸರಪಂಚ ಪತಿ’ ಎಂದು ಕರೆಯಲಾಗುತ್ತದೆ.
- ಆಡಳಿತ ನಡೆಸುವ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚುನಾಯಿತ ಮಹಿಳೆಯಿಂದ ಕಸಿದುಕೊಳ್ಳಲಾಗಿದೆ. ಅವರನ್ನು ಹೆಸರಿಗೆ ಮಾತ್ರ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.
- ಇಂತಹ ನಡೆಗಳು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ಹಲವಾರು ತೀರ್ಪುಗಳಲ್ಲಿ ಹೇಳಿದೆ. ‘ಸರಪಂಚ ಪತಿ’ ವ್ಯವಸ್ಥೆಯು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ತಿಳಿಸಿದೆ.
- ‘ಭಾರತ ಎಸ್ಎಎಫ್ ಜಾಗತಿಕ ರಫ್ತು ಕೇಂದ್ರ ಆಗುವ ನಿರೀಕ್ಷೆ’
ಸಂದರ್ಭ:‘ಭಾರತವು ಸುಸ್ಥಿರ ವಿಮಾನ ಇಂಧನ (ಎಸ್ಎಎಫ್) ರಫ್ತು ಮಾಡುವ ಜಾಗತಿಕ ಕೇಂದ್ರ ಆಗಬಹುದು’ ಎಂದು ತ್ರಿವೇಣಿ ಎಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಿಇಒ (ಸಕ್ಕರೆ ವ್ಯವಹಾರ) ಸಮೀರ್ ಸಿನ್ಹಾ ಹೇಳಿದ್ದಾರೆ.
- ದೇಶವು, ಎಸ್‌ಎಎಫ್ ರಫ್ತು ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಬ್ರೆಜಿಲ್‌ನಂತಹ ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚುವರಿ ಎಥೆನಾಲ್ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
- 2029ರ ವೇಳೆಗೆ ಸುಸ್ಥಿರ ವಿಮಾನ ಇಂಧನ ಘಟಕ ಕಾರ್ಯಾರಂಭ ಮಾಡಬಹುದು ಎಂದು ತಿಳಿಸಿದ್ದಾರೆ.
- ಸುಸ್ಥಿರ ವಿಮಾನ ಇಂಧನದ ರಫ್ತು ಕೇಂದ್ರವಾಗಿ ಹೊರಹೊಮ್ಮಲು ಭಾರತವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಬೆಳೆದ ಕಬ್ಬಿನಿಂದ ಪಡೆದ ಎಥೆನಾಲ್, ಬ್ರೆಜಿಲ್ ದೇಶದ ಎಥೆನಾಲ್‌ಗಿಂತ ಕಡಿಮೆ ಇಂಗಾಲದ ತೀವ್ರತೆಯನ್ನು ಹೊಂದಿದೆ. ಬ್ರೆಜಿಲ್‌ನ ಎಥೆನಾಲ್‌ಗಿಂತ ಭಾರತದ ಎಥೆನಾಲ್ ಅನ್ನು ಬಳಸಿದರೆ ವಾಯುಮಾಲಿನ್ಯ ಇಳಿಕೆಯು ಹೆಚ್ಚಿನ ಪ್ರಮಾಣದಲ್ಲಿ ರುತ್ತದೆ ಎಂದು ಹೇಳಿದ್ದಾರೆ.
- ಕಚ್ಚಾ ತೈಲ ಆಮದಿಗೆ ಸಂಘರ್ಷ ಸಮಸ್ಯೆ
ಸಂದರ್ಭ: ಸರ್ಕಾರಿ ಉದ್ದಿಮೆಗಳ ಕುರಿತ ಸಂಸತ್ತಿನ ಸಮಿತಿಯ ವರದಿ ಕಳೆದ ವಾರ ಮಂಡನೆ : ಭಾರತವು ಕಚ್ಚಾ ತೈಲಕ್ಕಾಗಿ ಆಮದನ್ನು ನೆಚ್ಚಿಕೊಂಡಿ ರುವುದು ಹಾಗೂ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಾಗುತ್ತಿರುವುದು ಬಹುದೊಡ್ಡ ಸವಾಲುಗಳು ಎಂದು ಸಂಸತ್ತಿನ ಸಮಿತಿಯೊಂದು ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಇಂಧನ ಆಮದು ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅದು ಒತ್ತಾಯಿಸಿದೆ.
- ಸರ್ಕಾರಿ ಉದ್ದಿಮೆಗಳ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಕಳೆದ ವಾರ ಮಂಡಿಸಲಾಗಿದೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇಕಡ 89ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ, ಸಂಘರ್ಷ, ನಿರ್ಬಂಧ, ಕಚ್ಚಾ ತೈಲ ಉತ್ಪಾದಿಸುವ ದೇಶಗಳಲ್ಲಿ ನಾಗರಿಕ ಅಶಾಂತಿ, ಹಡಗುಗಳ ಮಾರ್ಗದಲ್ಲಿ ಸಮಸ್ಯೆ ಉಂಟಾದಲ್ಲಿ ಭಾರತವು ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವರದಿಯು ಹೇಳಿದೆ.
- ರಷ್ಯಾ–ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಭಾರತ ನೆಚ್ಚಿಕೊಂಡಿರುವ ಇಂಧನ ಪೂರೈಕೆ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸಿವೆ ಎಂದು ಹೇಳಿದೆ.
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಚ್ಚಾ ತೈಲ ಆಮದು ಮೂಲಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಚುರುಕುಗೊಳಿಸಬೇಕು. ಪರ್ಯಾಯ ಆಮದು ಮಾರ್ಗಗಳನ್ನು ರೂಪಿಸಿಕೊಳ್ಳಬೇಕು, ಪೆಟ್ರೋಲಿಯಂ ಸಂಗ್ರಹಾಗಾರಗಳ ಸಾಮರ್ಥ್ಯ ಹೆಚ್ಚು ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
- ‘ಸಂಘರ್ಷಗಳು, ನಿರ್ಬಂಧಗಳು, ಅಶಾಂತಿಯ ಪರಿಣಾಮವಾಗಿ ಭಾರತವು ಕಚ್ಚಾ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಎದುರಿಸಬಹುದು. ಪೂರೈಕೆಯಲ್ಲಿ ವ್ಯತ್ಯಾಸ ಆದರೆ ಬೆಲೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಸಮಿತಿಯ ವರದಿ ಹೇಳಿದೆ.
- ಕಚ್ಚಾ ತೈಲ ಉತ್ಪಾದನೆ ಮಾಡುವ ದೇಶಗಳ ಜೊತೆಗಿನ ರಾಜತಾಂತ್ರಿಕ ಒಡನಾಟವನ್ನು ಬಲಪಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವಿದೇಶಾಂಗ ವ್ಯವ ಹಾರಗಳ ಸಚಿವಾಲಯದ ಜೊತೆಗೂಡಿ ಕೆಲಸ ಮಾಡಬೇಕು ಎಂದು ಹೇಳಿದೆ.
- ಭಾರತದ ಮುಡಿಗೆ ಸ್ಕ್ವಾಷ್ ವಿಶ್ವಕಪ್
ಸಂದರ್ಭ: ಭಾರತ ಸ್ಕ್ವಾಷ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತು.

- ಎರಡನೇ ಶ್ರೇಯಾಂಕದ ಭಾರತ ತಂಡವು, ಇಲ್ಲಿನ ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 3–0ಯಿಂದ ಹಾಂಗ್‌ಕಾಂಗ್ ತಂಡದ ವಿರುದ್ಧ ಗೆಲುವು ಸಾಧಿಸಿತು.
- 2023ರ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದು ಭಾರತ ತಂಡದ ಈವರೆಗಿನ ಉತ್ತಮ ಸಾಧನೆಯಾಗಿತ್ತು.
- 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟದಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿದೆ.
- ನರೇಗಾ ಸ್ವರೂಪ ಬದಲಿಗೆ ಮಸೂದೆ: ವಿಕಸಿತ ಭಾರತಕ್ಕೆ ‘ಜಿ ರಾಮ್ ಜಿ ಯೋಜನೆ l ರಾಜ್ಯಗಳಿಗೂ ಹೊರೆ
ಸಂದರ್ಭ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಜಾರಿಗೆ ತಂದಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯ (ನರೇಗಾ) ಹೆಸರನ್ನೂ ಸೇರಿದಂತೆ ಕಾಯ್ದೆಯಲ್ಲಿನ ಹಲವು ಪ್ರಮುಖ ಅಂಶಗಳಿಗೆ ಬದಲಾವಣೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಹೆಸರನ್ನು ಮಾತ್ರವಲ್ಲ ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ನರೇಗಾ ಬದಲಿಗೆ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ, 2025’ಅನ್ನು ಮಂಡಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.
ಮಸೂದೆ ಹೇಳುವುದೇನು?


- ಕೇಂದ್ರ ಸರ್ಕಾರವು ಮೊದಲೇ ನಿಗದಿಪಡಿಸಿದ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಗಳಿಗೆ ಹಣ ಮಂಜೂರು ಮಾಡುತ್ತದೆ. ಹಂಚಿಕೆ ಮಾಡಿದ ಅನುದಾನಕ್ಕಿಂತ ಹೆಚ್ಚುವರಿ ಕೆಲಸ ದಿನಗಳನ್ನು ಮಾಡಿಸಿದರೆ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣವನ್ನು ಭರಿಸಬೇಕಾಗುತ್ತದೆ.
ಅನುದಾನ: ರಾಜ್ಯಗಳಿಗೆ ಶೇ 40ರಷ್ಟು ಹೊರೆ
- ನರೇಗಾ ಯೋಜನೆಗೆ ಬೇಕಾದ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ರಾಜ್ಯ ಸರ್ಕಾರಗಳೂ ಹಣ ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಶೇ 60ರಷ್ಟು ಹಣವನ್ನು, ರಾಜ್ಯ ಸರ್ಕಾರವು ಶೇ 40ರಷ್ಟು ಹಣವನ್ನು ಭರಿಸ ಬೇಕಾಗುತ್ತದೆ (ಎಲ್ಲ ರಾಜ್ಯ ಸರ್ಕಾರಗಳು ಮತ್ತು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು).
- ಈಶಾನ್ಯ ರಾಜ್ಯಗಳು, ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುದಾನ ಹಂಚಿಕೆ ಅನುಪಾತವು ಶೇ 90:10ರಷ್ಟಿರುತ್ತದೆ. ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಕೇಂದ್ರ ಸರ್ಕಾರವೇ ಪೂರ್ತಿ ಹಣ ಭರಿಸುತ್ತದೆ.
- ನಿರುದ್ಯೋಗ ಭತ್ಯೆ: ಹೊಸ ಕಾಯ್ದೆಯ ಅನ್ವಯ, ಉದ್ಯೋಗ ಖಾತರಿ ಪಡೆಯದ ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಈ ಭತ್ಯೆಯನ್ನು ರಾಜ್ಯ ಸರ್ಕಾರವೇ ನೀಡಬೇಕು ಎನ್ನುತ್ತದೆ ಮಸೂದೆ.
- ಸಮಿತಿಗಳ ರಚನೆ: ರಾಜ್ಯ ಸರ್ಕಾರಗಳಿಗೆ ಹಣ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಮಟ್ಟದ ಸಂಚಾಲನಾ ಸಮಿತಿ’ಯನ್ನು ರಚಿಸಬೇಕು. ಜೊತೆಗೆ, ಈ ಕಾಯ್ದೆಯ ಎಲ್ಲ ಕೆಲಸ ಕಾರ್ಯಗಳ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳಬೇಕು. ಅಂತೆಯೇ, ಕಾಯ್ದೆಯ ಕುರಿತು ಮಾರ್ಗದರ್ಶನ ನೀಡಲು ರಾಜ್ಯ ಸರ್ಕಾರಗಳೂ ‘ರಾಜ್ಯ ಮಟ್ಟದ ಸಂಚಾಲನಾ ಸಮಿತಿ’ಯನ್ನು ರಚಿಸಿಕೊಳ್ಳಬೇಕು ಎನ್ನುತ್ತದೆ ಮಸೂದೆ.
ಕೇಂದ್ರ, ರಾಜ್ಯಗಳಲ್ಲಿ ಮಂಡಳಿ ರಚನೆ
- ಕಾಯ್ದೆ ಜಾರಿ ಸಂಬಂಧ ನಿಗಾ ಇರಿಸಲು ಕೇಂದ್ರ ಮಟ್ಟದಲ್ಲಿ ‘ಕೇಂದ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ’ ಮತ್ತು ರಾಜ್ಯ ಮಟ್ಟದಲ್ಲಿ ‘ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ’ಯನ್ನು ರಚಿಸಲಾಗುತ್ತದೆ.
ನಾಲ್ಕು ವಿಭಾಗಗಳಲ್ಲಿ ಕೆಲಸ
- ಉದ್ಯೋಗ ಖಾತರಿ ಮೂಲಕ ಯಾವೆಲ್ಲ ಕೆಲಸಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಮಸೂದೆಯಲ್ಲಿ ಹೇಳಲಾಗಿದೆ. ಇದನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.
1. ಜಲ ಸಂಬಂಧಿತ ಕಾರ್ಯಗಳು
2. ಗ್ರಾಮೀಣ ಭಾಗದ ಮೂಲಸೌಕರ್ಯ ನಿರ್ಮಾಣ
3. ಜೀವನೋಪಾಯಕ್ಕೆ ಸಂಬಂಧಿತ ಮೂಲಸೌಕರ್ಯ ನಿರ್ಮಾಣ (ತರಬೇತಿ ಕೇಂದ್ರಗಳು, ಸಂತೆ ಮಾರುಕಟ್ಟೆ ನಿರ್ಮಾಣ, ಆಹಾರ ಸಂಗ್ರಹಿಸಲು ಸಲುವಾಗಿ ಕಟ್ಟಡ ನಿರ್ಮಾಣ, ಹೈನುಕಾರಿಕೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ)
4. ವಿಪತ್ತು ತಡೆ ಸಂಬಂಧಿತ ನಿರ್ಮಾಣ ಕಾರ್ಯಗಳು (ನಿರಾಶ್ರಿತ ಶಿಬಿರಗಳ ನಿರ್ಮಾಣ, ಕೆರೆ–ಕಟ್ಟೆಗಳು ಉಕ್ಕಿ ಹರಿಯದಂಥ ನಿರ್ಮಾಣ ಕಾರ್ಯ, ನೈಸರ್ಗಿಕ ವಿಪತ್ತಿನಿಂದ ಹಾಳಾದ ರಸ್ತೆಗಳ ದುರಸ್ತಿ, ಬಿರುಗಾಳಿಯಿಂದ ನಾಶವಾದ ತೋಟ ಮತ್ತು ಮನೆ ಮರು ನಿರ್ಮಾಣ, ಕಾಳ್ಗಿಚ್ಚು ನಿಯಂತ್ರಣ ಕಾರ್ಯಗಳು)
- 125 ಕೆಲಸದ ದಿನಗಳು ಎನ್ನುವುದು ತಲೆಬರಹ ಮಾತ್ರ. 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತದೆ ಎನ್ನುವುದನ್ನು ಸಣ್ಣದಾಗಿ ಒಳಗೆ ಸೇರಿಸಲಾಗಿದೆ: ನರೇಗಾಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತದೆ. ಆದರೆ, ಹೊಸ ಮಸೂದೆಯ ಪ್ರಕಾರ, ರಾಜ್ಯ ಸರ್ಕಾರವು ಶೇ 40ರಷ್ಟು ಅನುದಾನ ನೀಡಬೇಕು. ಅಂದರೆ, ರಾಜ್ಯ ಸರ್ಕಾರಗಳು ₹50 ಸಾವಿರ ಕೋಟಿಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ. ಅನುದಾನ ನೀಡುವ ಜವಾಬ್ದಾರಿಯನ್ನು ರಹಸ್ಯ ವಿಧಾನದಲ್ಲಿ ರಾಜ್ಯ ಸರ್ಕಾರಗಳ ತಲೆಮೇಲೆ ಹಾಕುವುದನ್ನು ಸುಧಾರಣೆ ಎನ್ನುವುದಿಲ್ಲ
- ನರೇಗಾವು ಬೇಡಿಕೆ ಕೇಂದ್ರಿತವಾಗಿತ್ತು: ಒಂದು ವೇಳೆ ಕಾರ್ಮಿಕನು ಕೆಲಸ ಬೇಕು ಎಂದು ಕೇಳಿದರೆ, ಕೇಂದ್ರ ಸರ್ಕಾರವು ಅದಕ್ಕೆ ಹಣ ನೀಡಬೇಕಿತ್ತು. ಆದರೆ, ಹೊಸ ಮಸೂದೆಯಲ್ಲಿ ಈ ಅವಕಾಶವನ್ನು ಕಿತ್ತುಕೊಂಡು, ಪೂರ್ವ ನಿಗದಿತ ನಿಯಮಾನುಸಾರ ಹಂಚಿಕೆ ಮತ್ತು ಗರಿಷ್ಠ ಮಿತಿಯನ್ನು ಹೇರಲಾಗಿದೆ. ಒಮ್ಮೆ ಕೇಂದ್ರ ಸರ್ಕಾರ ನೀಡಿದ ಅನುದಾನ ಮುಗಿದರೆ, ಜನರ ಹಕ್ಕು ಮೊಟಕುಗೊಳ್ಳುತ್ತದೆ
- ಪಂಚಾಯಿತಿಗಳನ್ನು ಬದಿಗೊತ್ತಿ, ಡ್ಯಾಶ್‌ಬೋರ್ಡ್‌ಗಳಿಗೆ ಅಧಿಕಾರ ನೀಡಿಕೆ: ಸ್ಥಳೀಯವಾದ ಅಗತ್ಯಕ್ಕೆ ತಕ್ಕಂತೆ ಗ್ರಾಮ ಸಭೆ ಮತ್ತು ಪಂಚಾಯಿತಿಗಳು ಕೆಲಸದ ಯೋಜನೆ ರೂಪಿಸುತ್ತಿದ್ದವು. ಆದರೆ, ಈಗ ಜಿಐಎಸ್ ತಂತ್ರಾಂಶ, ಪಿಎಂ ಗತಿ ಶಕ್ತಿ ದತ್ತಾಂಶಗಳ ಮೇಲೆ ಯೋಜನೆಗಳು ರೂಪುಗೊಳ್ಳುತ್ತವೆ. ಬಯೊಮೆಟ್ರಿಕ್, ಜಿಯೊ ಟ್ಯಾಗಿಂಗ್, ಡ್ಯಾಶ್‌ಬೋರ್ಡ್, ಕೃತಕ ಬುದ್ಧಿಮತ್ತೆ ಸಹಾಯದಿಂದ ಮಾಡುವ ಲೆಕ್ಕಪರಿಶೋಧನೆಯನ್ನು ಕಡ್ಡಾಯ ಮಾಡಲಾಗಿದೆ. ತಂತ್ರಜ್ಞಾನ ಕೈಕೊಟ್ಟರೆ ಗ್ರಾಮೀಣ ಭಾಗದ ಕೋಟಿಗಟ್ಟಲೆ ಜನರು ಕೆಲಸದಿಂದ ವಂಚಿತರಾಗುತ್ತಾರೆ
- ಇನ್ನೂ ಕೆಟ್ಟ ಅಂಶವೇನೆಂದರೆ, ನೆಟ್ಟಿ–ಕಟಾವು ಎಂಬ ಕೃಷಿ ಋತುವಿನ ಹೆಸರಿನಲ್ಲಿ 60 ಕೆಲಸ ದಿನಗಳನ್ನು ಕಡಿತ ಮಾಡಲಾಗಿದೆ. ಇದು ಕಾರ್ಮಿಕ ಗ್ಯಾರಂಟಿಯೊ ಕಾರ್ಮಿಕ ನಿಯಂತ್ರಣವೊ? ನೀವು ಕೆಲಸ ಮಾಡಬೇಡಿ, ಹಣ ಗಳಿಸಬೇಡಿ ಎಂದು ಕಾನೂನುಬದ್ಧವಾಗಿ ಕೇಂದ್ರ ಸರ್ಕಾರ ಹೇಳಿದಂತಾಗಿದೆ
ಕೇಂದ್ರ ಹೇಳುವುದೇನು?
- ಕೌಶಲರಹಿತ ಕೂಲಿ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಬರುವ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಪ್ರತಿ ವಯಸ್ಕ ವ್ಯಕ್ತಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೆಲಸಕ್ಕೆ ಶಾಸನಬದ್ಧ ಖಾತರಿ ನೀಡುವುದು ಈ ಕಾಯ್ದೆಯ ಉದ್ದೇಶ.
- 2047ರ ಹೊತ್ತಿಗೆ ವಿಕಸಿತ ಭಾರತದ ಮುನ್ನೋಟಕ್ಕೆ ಅನುಗುಣವಾಗಿ ಗ್ರಾಮೀಣ ಚೌಕಟ್ಟನ್ನು ರೂಪಿಸಲು ಈ ಕಾಯ್ದೆ ಸಿದ್ಧಪಡಿಸಲಾಗಿದೆ. ಸಮೃದ್ಧ ಮತ್ತು ಚೈತನ್ಯಯುತ ಗ್ರಾಮೀಣ ಭಾರತಕ್ಕಾಗಿ ಸಶಕ್ತೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶವನ್ನೂ ಇದು ಹೊಂದಿದೆ.
- ಅಪಘಾತ ತಡೆಗೆ ಮಾರ್ಗಸೂಚಿ ರೂಪಿಸಲು ‘ಸುಪ್ರೀಂ’ ಚಿಂತನೆ
ಸಂದರ್ಭ: ಎಕ್ಸ್‌ಪ್ರೆಸ್ ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲಿಕ್ಕಾಗಿ ದೇಶದಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ.
- ರಾಜಸ್ಥಾನದ ಫಲೋದಿಯಲ್ಲಿ ನ. 2ರಂದು ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸುತ್ತಿದೆ.
- ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠವು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್ ವೇಗಳ ಎರಡೂ ಬದಿಗಳಲ್ಲಿ ಅಕ್ರಮವಾಗಿ ತಲೆಎತ್ತಿರುವ ಢಾಬಾಗಳು ಅಪಘಾತಗಳಿಗೆ ಕಾರಣ ಆಗಿರಲೂಬಹುದು ಎಂದು ಸೋಮವಾರ ಹೇಳಿತು.
- ಇಂತಹ ಢಾಬಾಗಳ ವಿರುದ್ಧ ಕ್ರಮಕೈಗೊಳ್ಳಲು ಲಭ್ಯವಿರುವ ನಿಯಮಗಳ ವಿವರ ಸಲ್ಲಿಸುವಂತೆ ಪೀಠವು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
- ಅಕ್ರಮ ಢಾಬಾಗಳ ವಿರುದ್ಧ ಇಲ್ಲಿಯ ವರೆಗೆ ತೆಗೆದುಕೊಂಡಿರುವ ಕ್ರಮ ಗಳು, ಇಂತಹ ಕ್ರಮ ತೆಗೆದುಕೊಳ್ಳುವ ಅಧಿಕಾರವು ಯಾವ ಪ್ರಾಧಿಕಾರದ್ದು ಮತ್ತು ಯಾವೆಲ್ಲಾ ಸಂಸ್ಥೆಗಳು ನಿಬಂಧನೆ ಗಳನ್ನು ಪಾಲಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆಯೂ ತಿಳಿಸಿದೆ.
- ‘ಹೆದ್ದಾರಿ ಬದಿಗಳಲ್ಲಿರುವ ಅನಧಿಕೃತ ಢಾಬಾಗಳು ಮತ್ತು ಸಣ್ಣ ಹೋಟೆಲ್‌ಗಳನ್ನು ತೆರವುಗೊಳಿಸುವ ಅಧಿಕಾರ ನಮಗೆ ಇದೆ. ಆದರೆ ಜಿಲ್ಲಾಡಳಿತದ ಕೈಕೆಳಗಿರುವ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರಿಗೆ ಆ ವಿಷಯದಲ್ಲಿ ನಮಗಿಂತಲೂ ಹೆಚ್ಚಿನ ಅಧಿಕಾರ ಇದೆ. ಆದ್ದರಿಂದ, ಈ ವಿಚಾರದಲ್ಲಿ ನಾವು ಪರಿಹಾರವೊಂದನ್ನು ಕಂಡುಕೊಳ್ಳಬೇಕಿದೆ’ ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
- ಭಾರತ್‌ಮಾಲಾ ಹೆದ್ದಾರಿಯಲ್ಲಿ ರಾಜಸ್ಥಾನದ ಫಲೋದಿ ಎಂಬಲ್ಲಿ ನಿಂತಿದ್ದ ಟ್ರಕ್‌ವೊಂದಕ್ಕೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದು 10 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದರು.
- ಈ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ.10ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿ ಸಿತ್ತು. ಫಲೋದಿ ಮೂಲಕ ಹಾದು ಹೋಗುವ ಹೆದ್ದಾರಿ ಬದಿಯಲ್ಲಿರುವ ಢಾಬಾಗಳ ಸಂಖ್ಯೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವನ್ನು ಕೇಳಿತ್ತು.
‘ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ’
- ‘ಈ ವಿಷಯವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ಚಿಂತಿಸುತ್ತಿದೆ’ ಎಂದು ನ್ಯಾಯಮೂರ್ತಿ ಜೆ.ಕೆ.ಮಾಹೇಶ್ವರಿ ತಿಳಿಸಿದರು.
- ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಎ.ಎನ್.ಎಸ್.ನಾಡಕರ್ಣಿ, ‘ಹೆದ್ದಾರಿಗಳ ಬದಿಗಳಲ್ಲಿ ವ್ಯಾಪಕವಾಗಿ ಒತ್ತುವರಿ ನಡೆದಿರುವುದನ್ನು ತೋರಿಸಲು ಗೂಗಲ್ ಚಿತ್ರಗಳನ್ನು ಸಲ್ಲಿಸಿದ್ದೇನೆ’ ಎಂದು ಹೇಳಿದರು.
- ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ
ಸಂದರ್ಭ: ಸಾರಿಗೆ ನಿಗಮಗಳ ವಾಹನಗಳು ಮತ್ತು ವಿವಿಧ ಇಲಾಖೆಗಳ ಚಾಲಕರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ, ಬೆಳ್ಳಿ ಪದಕ ಪುರಸ್ಕೃತರಿಗೆ ನೀಡುವ ನಗದು ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ.
- ಚಿನ್ನದ ಪದಕ ಪುರಸ್ಕೃತರಿಗೆ ನೀಡುತ್ತಿದ್ದ ₹5,000 ನಗದನ್ನು ₹10 ಸಾವಿರಕ್ಕೆ ಏರಿಸಲಾಗಿದೆ. ತಿಂಗಳ ಭತ್ಯೆ ₹ 500 ಅನ್ನು ₹1000ಕ್ಕೆ ಏರಿಸ ಲಾಗಿದೆ. ಬೆಳ್ಳಿ ಪದಕ ಪುರಸ್ಕೃತರಿಗೆ ನಗದು ಬಹುಮಾನವನ್ನು ₹ 2,500ರಿಂದ ₹ 5,000ಕ್ಕೆ, ತಿಂಗಳ ಭತ್ಯೆ ₹250 ಅನ್ನು ₹ 500ಕ್ಕೆ ಏರಿಸಲಾಗಿದೆ.
- ಪರಿಷ್ಕೃತ ನಗದು ಪುರಸ್ಕಾರವು 2026ರ ಜನವರಿ 1ರಿಂದ ಜಾರಿಗೆ ಬರಲಿದೆ. ಈ ಹಿಂದೆ ಪುರಸ್ಕಾರ ಪಡೆದವರಿಗೂ 2026ರಿಂದ ಪರಿಷ್ಕೃತ ಭತ್ಯೆ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.
- ₹9.07 ಕೋಟಿ ಮೊತ್ತದ ‘ಗ್ಲೋಬಲ್ ಟೀಚರ್ ಪ್ರಶಸ್ತಿ’ ಸ್ವರ್ಧೆಯಲ್ಲಿ ಭಾರತದ ಮೂವರು
ಸಂದರ್ಭ: ಭಾರತದ ಮೂವರು ಶಿಕ್ಷಣ ತಜ್ಞರು ಒಂದು ಮಿಲಿಯನ್ ಡಾಲರ್ (ಸುಮಾರು ₹9.07 ಕೋಟಿ) ಮೊತ್ತದ ‘ಗ್ಲೋಬಲ್ ಟೀಚರ್ ಪ್ರಶಸ್ತಿ– 2026’ರ ಟಾಪ್ 50ರ ಶಾರ್ಟ್ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ.
- ಮೀರಠ್‌ನ ಶಾಲಾ ಶಿಕ್ಷಕ ಸುಧಾಂಶು ಶೇಖರ್ ಪಾಂಡಾ, ಜಮ್ಮು ಮತ್ತು ಕಾಶ್ಮೀರದ ಶಿಕ್ಷಕ ಮೆಹ್ರಾಜ್ ಖುರ್ಷಿದ್ ಮಲಿಕ್ ಮತ್ತು ಗ್ರಾಮೀಣ ಜನರಿಗೆ ಶಿಕ್ಷಣ ದೊರೆಯಲು ಶ್ರಮಿಸುತ್ತಿರುವ ರೂಬಲ್ ನಾಗಿ ಸ್ಪರ್ಧೆಯಲ್ಲಿದ್ದಾರೆ.
- ಎತ್ತಿನ ಹೊಳೆ: 2027 ಅಕ್ಟೋಬರ್ಗೆ ಪೂರ್ಣ?
ಸಂದರ್ಭ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2027ರ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.
- ವಿಧಾನಸಭೆಯಲ್ಲಿ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ.
- ಈಗಾಗಲೇ ಮೀಸಲಿರಿಸಿರುವ ಅನುದಾನದಲ್ಲಿ ಯೋಜನೆ ಪೂರ್ಣಗೊ ಳಿಸಲು ತೀರ್ಮಾನಿಸಲಾಗಿದೆ. ಬಯಲು ಸೀಮೆ ಪ್ರದೇಶಗಳಾದ ಕೋಲಾರ,ಚಿಕ್ಕ ಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆ ಯಡಿ ಕೋಲಾರ ಗುರುತ್ವ ಪೈಪ್‌ಲೈನ್ ಪ್ಯಾಕೇಜ್ 3 ಮತ್ತು 4, ಕೋಲಾರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ 5 ಮತ್ತು 6 ಹಾಗೂ ಶ್ರೀನಿವಾಸಪುರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ 1 ರಿಂದ 3ರ ಕಾಮ ಗಾರಿಗಳನ್ನು ಆರಂಭಿಸಲು ಕಳೆದ ಮೇ 16ರಂದೇ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
- ಪ್ರಸ್ತುತ ಕಾಮಗಾರಿಗಳ ಪೈಪ್‌ಲೈನ್ ಅಲೈನ್‌ಮೆಂಟ್, ವಿನ್ಯಾಸ, ನಕ್ಷೆಗಳ ತಯಾರಿಕೆ ಕಾರ್ಯ ಪೂರ್ಣಗೊಂಡಿದೆ. ಗುಣಮಟ್ಟ ಖಾತರಿ ಯೋಜನೆ ಕೂಡ ಅನುಮೋದನೆ ಹಂತದಲ್ಲಿದೆ. ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಗುತ್ತಿಗೆ ಕರಾರಿನ ಅನ್ವಯ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
- ರೈತರೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ಈ ಎಲ್ಲ ಪ್ರಕ್ರಿಯೆ ಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗು ವುದು ಎಂದು ಭರವಸೆ ನೀಡಿದ್ದಾರೆ.
- ‘ಬಾಂಗ್ಲಾದೊಂದಿಗಿನ ಸಂಬಂಧ ಶಾಶ್ವತ’
ಸಂದರ್ಭ: ಪ್ರಸ್ತುತ ಭಾರತದಲ್ಲಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ನೀಡಿದ ‘ಪ್ರಚೋದನಕಾರಿ ಹೇಳಿಕೆ’ಗಳ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಕಚೇರಿಯು ಗಂಭೀರ ಕಳವಳ ವ್ಯಕ್ತಪಡಿಸಿ, ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ನೀಡಿದೆ.
- ಇದಾಗಿ ಗಂಟೆಗಳ ನಂತರ ಹೇಳಿಕೆ ನೀಡಿರುವ ಪ್ರಣಯ್ ಅವರು, ‘ಬಾಂಗ್ಲಾದೊಂದಿಗಿನ ಭಾರತದ ಸಂಬಂಧಗಳು ಅಲ್ಪಕಾಲಿಕವಲ್ಲ, ಬದಲಾಗಿ ಶಾಶ್ವತ’ ಎಂದು ಭಾನುವಾರ ಹೇಳಿದ್ದಾರೆ.
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ‘ಇತಿಹಾಸ್ ಒ ಒಯಿಟ್ಟಿಜ್ಜೋ ಪರಿಷತ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಪ್ರಣಯ್ ಅವರು, ‘ಭಾರತ–ಬಾಂಗ್ಲಾ ಸಂಬಂಧ ಶಾಶ್ವತವಾಗಿದ್ದು, ಅದು ರಕ್ತ ಮತ್ತು ತ್ಯಾಗದಲ್ಲಿ ಬೆಸೆದು ಕೊಂಡಿದೆ. ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
- ಉನ್ನತ ಶಿಕ್ಷಣ ಕೇಂದ್ರೀಕೃತ ನಿಯಂತ್ರಣ? ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025

- ಆಂಧ್ರದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ, ಅಂಡಮಾನ್ನಲ್ಲಿ ಅಗ್ಗ
ಸಂದರ್ಭ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಅತಿ ಕಡಿಮೆ. ಕೇಂದ್ರ ಸರ್ಕಾರ ಸೋಮವಾರ ರಾಜ್ಯಸಭೆಗೆ ನೀಡಿರುವ ಉತ್ತರವೊಂದರಲ್ಲಿ ಈ ಮಾಹಿತಿ ಇದೆ.
- ಆಂಧ್ರಪ್ರದೇಶವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತಿಹೆಚ್ಚು ಪ್ರಮಾಣದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತದೆ. ಇದು ಅಲ್ಲಿನ ದುಬಾರಿ ಬೆಲೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
- ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹109.74, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಅದು ₹82.46 ಎಂದು ತಿಳಿಸಿದ್ದಾರೆ.
- ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಿಮ ಮಾರಾಟ ಬೆಲೆಯು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಕ್ಸೈಸ್ ಸುಂಕ ಹಾಗೂ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರ ನಿಗದಿಮಾಡಿದ ವ್ಯಾಟ್ ಪ್ರಮಾಣವನ್ನು ಒಳಗೊಂಡಿ ರುತ್ತದೆ. ಹೀಗಾಗಿ, ಸರಕು ಸಾಗಣೆ ಮತ್ತು ಸ್ಥಳೀಯ ತೆರಿಗೆಯಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದ್ದಾರೆ.
- ಆಂಧ್ರಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹29.06 ವ್ಯಾಟ್ ವಿಧಿಸಲಾಗುತ್ತದೆ. ಇದು ದೇಶದಲ್ಲಿ ಅತ್ಯಧಿಕ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಕೇವಲ ₹0.82 ಮಾತ್ರ ಇದೆ. ಪ್ರತಿ ಲೀಟರ್ ಡೀಸೆಲ್ ಬೆಲೆಯು ಆಂಧ್ರಪ್ರದೇಶದಲ್ಲಿ ₹97.57, ವ್ಯಾಟ್ ₹21.56 ಇದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಡೀಸೆಲ್ ಬೆಲೆ ₹78.05, ವ್ಯಾಟ್ ₹0.77ರಷ್ಟು ಇದೆ.
- ‘ಸಕ್ಕರೆ ಮಾರಾಟ ದರ ಹೆಚ್ಚಿಸಿ’: ಕೇಂದ್ರ ಸರ್ಕಾರಕ್ಕೆ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮನವಿ
ಸಂದರ್ಭ: ಪ್ರಸಕ್ತ ಹಂಗಾಮಿನಲ್ಲಿ ದೇಶದಲ್ಲಿ ಸಕ್ಕರೆ ಉತ್ಪಾದನೆಯು ಶೇಕಡ 28.33ರಷ್ಟು ಹೆಚ್ಚಳ ಕಂಡು 77.90 ಲಕ್ಷ ಟನ್ಗೆ ತಲುಪಿರುವ ಕಾರಣದಿಂದ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಹೆಚ್ಚು ಮಾಡಬೇಕು ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
- ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಕೆ.ಜಿ.ಗೆ ₹41ಕ್ಕೆ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಬೇಕು. ಹೆಚ್ಚುವರಿಯಾಗಿ 5 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅವಕಾಶ ನೀಡಬೇಕು ಎಂದು ಅವು ಕೋರಿವೆ.
- ಮಾರುಕಟ್ಟೆಯಲ್ಲಿ ಸಕ್ಕರೆ ದರ ಇಳಿಕೆ ಹಾಗೂ ವೆಚ್ಚಗಳ ಹೆಚ್ಚಳವು ರೈತರಿಗೆ ನೀಡಬೇಕಿರುವ ಮೊತ್ತದ ಮೇಲೆ ಪರಿಣಾಮ ಉಂಟುಮಾಡುತ್ತಿವೆ ಎಂದು ಅವು ಎಚ್ಚರಿಸಿವೆ.
- ಪ್ರಸಕ್ತ ಹಂಗಾಮು ಆರಂಭವಾದ ನಂತರದಲ್ಲಿ ಸಕ್ಕರೆ ಕಾರ್ಖಾನೆಗಳು ಸಗಟು ವಹಿವಾಟುದಾರರಿಗೆ ಮಾರಾಟ ಮಾಡುವ ಸಕ್ಕರೆಯ ಬೆಲೆಯು ಪ್ರತಿ ಟನ್‌ಗೆ ₹2,300ರಷ್ಟು ಕುಸಿದಿದೆ. ಈಗ ಅದು ಟನ್‌ಗೆ ₹37,700ರಷ್ಟು ಇದೆ ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟವು (ಎನ್‌ಎಫ್‌ಸಿಎಸ್‌ಎಫ್) ಹೇಳಿದೆ.
- ಡಿಸೆಂಬರ್ 15ರವರೆಗಿನ ದತ್ತಾಂಶದ ಪ್ರಕಾರ ದೇಶದ ಒಟ್ಟು 479 ಸಕ್ಕರೆ ಕಾರ್ಖಾನೆಗಳು ಒಟ್ಟು 77.90 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದ 60.70 ಲಕ್ಷ ಟನ್ ಸಕ್ಕರೆ ಉತ್ಪಾದನೆಗಿಂತ ಹೆಚ್ಚು ಎಂದು ಎನ್‌ಎಫ್‌ಸಿಎಸ್‌ಎಫ್ ನೀಡಿರುವ ದತ್ತಾಂಶಗಳು ಹೇಳುತ್ತಿವೆ.
- ಕಬ್ಬು ಅರೆಯುವಿಕೆಯು ಈ ಹಂಗಾಮಿನಲ್ಲಿ ಶೇ 25.6ರಷ್ಟು ಹೆಚ್ಚಾಗಿ 900.75 ಲಕ್ಷ ಟನ್‌ಗೆ ಹೆಚ್ಚಾಗಿದೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ.
- ದೇಶದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರ ದಲ್ಲಿ ಉತ್ಪಾದನೆಯು ದುಪ್ಪಟ್ಟಾಗಿದೆ. ಕರ್ನಾಟಕದಲ್ಲಿ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆಯು 13.50 ಲಕ್ಷ ಟನ್ ಇದ್ದಿದ್ದು ಈ ಬಾರಿ 15.50 ಲಕ್ಷ ಟನ್ ಆಗಿದೆ.
- ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರವು ಅನುಮತಿ ನೀಡಿದೆ. ಆದರೆ ಈ ಕ್ರಮವೊಂದೇ ಸಕ್ಕರೆ ಕಾರ್ಖಾನೆಗಳ ನಗದು ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದೆ.
- ಪುಟಿದೆದ್ದ ರಫ್ತು ವಹಿವಾಟು
ಸಂದರ್ಭ: ನವೆಂಬರ್ನಲ್ಲಿ ದೇಶದ ರಫ್ತು ಪ್ರಮಾಣವು ಪುಟಿದೆದ್ದಿದ್ದು, ಶೇಕಡ 19.37ರಷ್ಟು ಏರಿಕೆ ಕಂಡಿದೆ. ಇದು ಆರು ತಿಂಗಳ ಗರಿಷ್ಠ ಮಟ್ಟ. ನವೆಂಬರ್ನಲ್ಲಿ ಒಟ್ಟು ₹3.45 ಲಕ್ಷ ಕೋಟಿಯಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ.
- ನವೆಂಬರ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ.
- ನವೆಂಬರ್‌ನಲ್ಲಿ ಆಮದು ಪ್ರಮಾಣವು ಶೇ 1.88ರಷ್ಟು ಕಡಿಮೆ ಆಗಿದ್ದು ₹5.68 ಲಕ್ಷ ಕೋಟಿಗೆ ತಲುಪಿದೆ. ಚಿನ್ನ, ಕಚ್ಚಾ ತೈಲ, ಕಲ್ಲಿದ್ದಲು ಮತ್ತು ಕಲ್ಲಿದ್ದಲ ಕಿಟ್ಟದ ಆಮದು ಕಡಿಮೆ ಆಗಿದ್ದುದು ಇದಕ್ಕೆ ಕಾರಣ.
- ನವೆಂಬರ್‌ನಲ್ಲಿ ರಫ್ತು ಮಾಡಲಾಗಿರುವ ಸರಕುಗಳ ಒಟ್ಟು ಮೌಲ್ಯವು ಮೇ ತಿಂಗಳ ನಂತರದ ಗರಿಷ್ಠವಾಗಿದೆ. ಚಿನ್ನದ ಆಮದು ನವೆಂಬರ್‌ನಲ್ಲಿ ಶೇ 59.15ರಷ್ಟು ಕಡಿಮೆ ಆಗಿದೆ. ಕಚ್ಚಾ ತೈಲದ ಆಮದು ಶೇ 11.27ರಷ್ಟು ತಗ್ಗಿದೆ.
- ಆಮದು ಕಡಿಮೆ ಆಗಿರುವ ಕಾರಣದಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವು ಕೂಡ ನವೆಂಬರ್‌ನಲ್ಲಿ ಕಡಿಮೆ ಆಗಿದೆ.
- ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದರೂ ರಫ್ತು ಪ್ರಮಾಣ ಹೆಚ್ಚಾಗಿದೆ. ‘ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ರಾಸಾಯನಿಕಗಳು, ಮುತ್ತು ಮತ್ತು ಆಭರಣಗಳ ರಫ್ತು ಹೆಚ್ಚಾಗಿದ್ದುದು ಒಟ್ಟು ರಫ್ತಿನ ಪ್ರಮಾಣ ಏರಿಕೆ ಕಾಣಲು ನೆರವಾಗಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.
- ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಭಾರತದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗಿರುವ ದೇಶಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.
- ಸಗಟು ಹಣದುಬ್ಬರ ಏರಿಕೆ
ಸಂದರ್ಭ: ದೇಶದಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ನವೆಂಬರ್ ತಿಂಗಳಿನಲ್ಲಿ ಶೇ (–)0.32ರಷ್ಟಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.
- ದ್ವಿದಳ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯಲ್ಲಿನ ಏರಿಕೆಯು ಸಗಟು ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎಂದು ಅದು ತಿಳಿಸಿದೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಶೇ (–)1.21ರಷ್ಟಿತ್ತು, ಕಳೆದ ವರ್ಷದ ನವೆಂಬರ್‌ನಲ್ಲಿ ಇದು ಶೇ 2.16ರಷ್ಟಿತ್ತು.
- ‘ಆಹಾರ ಪದಾರ್ಥಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿದ್ಯುತ್, ಮೂಲ ಲೋಹಗಳ ಉತ್ಪಾದನಾ ವೆಚ್ಚದಲ್ಲಿನ ಇಳಿಕೆಯಿಂದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಋಣಾತ್ಮಕ ದರದಲ್ಲಿದೆ’ ಎಂದು ತಿಳಿಸಿದೆ.
- ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯು ಶೇ 8.31ರಷ್ಟಿತ್ತು. ನವೆಂಬರ್‌ನಲ್ಲಿ ಶೇ 4.16ರಷ್ಟಿದೆ. ತರಕಾರಿಗಳ ಸಗಟು ಬೆಲೆ ಇಳಿಕೆಯು ಶೇ 20.23ರಷ್ಟಾಗಿದೆ. ಇದು ಅಕ್ಟೋಬರ್‌ನಲ್ಲಿ ಶೇ 34.97ರಷ್ಟಿತ್ತು.
- ದ್ವಿದಳ ಧಾನ್ಯಗಳ ಬೆಲೆ ಇಳಿಕೆಯು ಶೇ 15.21ರಷ್ಟು, ಆಲೂಗೆಡ್ಡೆ ಮತ್ತು ಈರುಳ್ಳಿ ಸಗಟು ದರ ಇಳಿಕೆವು ಕ್ರಮವಾಗಿ ಶೇ 36.14ರಷ್ಟು ಮತ್ತು ಶೇ 64.70ರಷ್ಟು ಆಗಿದೆ.
- ತಯಾರಿಸಿದ ಸರಕುಗಳ ಹಣದುಬ್ಬರ ಶೇ 1.54ರಿಂದ ಶೇ 1.33ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಸಗಟು ದರ ಇಳಿಕೆಯು ಶೇ 2.55ರಿಂದ ಶೇ 2.27ಕ್ಕೆ ಬಂದಿದೆ ಎಂದು ತಿಳಿಸಿದೆ.
- ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.71ರಷ್ಟು ಆಗಿದೆ.
- ವ್ಯಾಪಾರ ಮಾತುಕತೆಯಲ್ಲಿ ಪ್ರಗತಿ
ಸಂದರ್ಭ: ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟು ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸುವ ಹಂತವನ್ನು ಅಮೆರಿಕ ಮತ್ತು ಭಾರತ ತಲುಪಿವೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
- ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಟ್ಜರ್ ಅವರು ವ್ಯಾಪಾರ ಮಾತುಕತೆಗಾಗಿ ಕಳೆದ ವಾರ ಭಾರತಕ್ಕೆ ಬಂದಿದ್ದರು. ‘ವ್ಯಾಪಾರ ಒಪ್ಪಂದದ ಚೌಕಟ್ಟಿನ ವಿಚಾರವಾಗಿ ನಾವು ಬಹಳ ಮುಂದೆ ಬಂದಿದ್ದೇವೆ. ಅದು ಅಲ್ಪಾವಧಿಯಲ್ಲೇ ಸಾಧ್ಯವಾಗಬಹುದು. ಆದರೆ ಅದಕ್ಕೆ ಸಮಯಮಿತಿ ವಿಧಿಸಲು ನಾನು ಬಯಸುವುದಿಲ್ಲ’ ಎಂದು ಅಗರ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
- ಮಾತುಕತೆ ಪೂರ್ಣಗೊಂಡು, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದವೊಂದು ಜಾರಿಗೆ ಬರುವುದನ್ನು ಭಾರತದ ರಫ್ತುದಾರರು ಕಾತರದಿಂದ ಕಾಯುತ್ತಿದ್ದಾರೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿರುವುದರಿಂದಾಗಿ ರಫ್ತು ವಲಯಕ್ಕೆ ತೊಂದರೆ ಆಗಿದೆ.
- ಶೂಟಿಂಗ್: ಮನುಗೆ ಚಿನ್ನ, ದಿವ್ಯಾಗೆ ಬೆಳ್ಳಿ
ಸಂದರ್ಭ: ಒಲಿಂಪಿಕ್ ಅವಳಿ ಪದಕ ವಿಜೇತೆ ಮನು ಭಾಕರ್ ಮತ್ತು ಸಿಮ್ರನ್ಪ್ರೀತ್ ಕೌರ್ ಬ್ರಾರ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಷಿಪ್ನ ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕ್ರಮವಾಗಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರು.
- ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ 36 ಅಂಕಗಳೊಂದಿಗೆ ಹರಿಯಾಣದ ಮನು ಅಗ್ರಸ್ಥಾನಿ ಯಾದರು.
- ಕರ್ನಾಟಕದ ಶೂಟರ್ ದಿವ್ಯಾ ಟಿ.ಎಸ್. 32 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಹರಿಯಾಣದ ಅಂಜಲಿ ಚೌಧರಿ (28) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಅರ್ಹತಾ ಸುತ್ತಿನಲ್ಲಿ ದಿವ್ಯಾ 587 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಮನು (581) ನಾಲ್ಕನೇ ಸ್ಥಾನ ಗಳಿಸಿದರು. ಅಂಜಲಿ ಚೌಧರಿ (582) ಮತ್ತು ಅನ್ನು ರಾಜ್ ಸಿಂಗ್ (582) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
- ಕುಸ್ತಿ: ಶ್ವೇತಾಗೆ ಬೆಳ್ಳಿ ಪದಕ
ಸಂದರ್ಭ: ಕರ್ನಾಟಕದ ಶ್ವೇತಾ ಎಸ್.ಅಣ್ಣಿಕೆರೆ ಅವರು ಅಹಮದಾಬಾದಿನಲ್ಲಿ ಭಾನುವಾರ ಮುಕ್ತಾಯಗೊಂಡ ಸೀನಿ ಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಷಿಪ್‌ನ ಮಹಿಳೆಯರ 50 ಕೆ.ಜಿ. ವಿಭಾಗ ದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

- ಹಳಿಯಾಳದ ಅರ್ಲವಾಡ ಗ್ರಾಮದ ಶ್ವೇತಾ ಅವರು ಫೈನಲ್‌ನಲ್ಲಿ ರೈಲ್ವೇಸ್‌ನ ಅಂತರರಾಷ್ಟ್ರೀಯ ಕುಸ್ತಿಪಟು, ಅಗ್ರ ಶ್ರೇಯಾಂಕದ ನೀಲಂ ಅವರಿಗೆ ಮಣಿದರು.
- ಕರ್ನಾಟಕದ ಆಟಗಾರ್ತಿ ಸೆಮಿ ಫೈನಲ್‌ನಲ್ಲಿ ಮಹಾರಾಷ್ಟ್ರದ ಗೌರಿ ಪಾಟೀಲ್ ಅವರನ್ನು 2 ಪಾಯಿಂಟ್ ಗಳಿಂದ, ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣದ ಮುಸ್ಕಾನ್ ಅವರನ್ನು 10–0ಯಿಂದ ಸೋಲಿಸಿದ್ದರು.
- 19 ವರ್ಷ ವಯಸ್ಸಿನ ಶ್ವೇತಾ, ಉತ್ತರಾಖಂಡದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
- ಪುರುಷರ 70 ಕೆ.ಜಿ. ವಿಭಾಗದಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ರೋಹನ್ ಎನ್.ಘೆವಡಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಹಳಿಯಾಳದ ರೋಹನ್ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸರ್ವಿಸಸ್‌ನ ನವೀನ್ ಅವರನ್ನು 8–4 ಪಾಯಿಂಟ್‌ಗಳಿಂದ ಸೋಲಿಸಿದರು. ಹರಿಯಾಣದ ಅಭಿಮನ್ಯು ಚಿನ್ನದ ಪದಕ ಗೆದ್ದರೆ, ಉತ್ತರ ಪ್ರದೇಶದ ರವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.