ಪೂರ್ವಭಾವಿ ಪರೀಕ್ಷೆ
ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
ಸುಮಿತ್ಗೆ ಜಾವೆಲಿನ್ ಚಿನ್ನ

ಸಂದರ್ಭ: ಪ್ಯಾರಾಲಿಂಪಿಕ್ ಡಬಲ್ ಚಿನ್ನ ವಿಜೇತ ಜಾವೆಲಿನ್ ಥೋಪಟು ಸುಮಿತ್ ಆಂಟಿಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾನ್ಪ್ರಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
- ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾ ಲಿಂಪಿಕ್ಸ್ನಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಸುಮಿತ್ ಅವರು ಇಲ್ಲಿ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ (ಎಫ್43/ಎಫ್44/ಎಫ್64) ಸ್ಪರ್ಧೆಯಲ್ಲಿ 69.25 ಮೀಟರ್ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು.
- ಪುಷ್ಪಂದ್ರ ಸಿಂಗ್ ಅವರು ಈಟಿಯನ್ನು 56.91 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಪೂನಂ ರಾಮ್ (49.48 ಮೀ) ಕಂಚಿನ ಪದಕ ಗೆದ್ದರು.
ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
ಗಿಲ್ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ, ದ್ರಾವಿಡ್ಗೆ ಜೀವಮಾನ ಸಾಧನೆ ಗೌರವ
ಸಂದರ್ಭ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಗೌರವ ಪ್ರದಾನ ಮಾಡಲಿದೆ.
- ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕ ಶುಭಮನ್ ಗಿಲ್ ಅವರೂ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
- ಭಾರತ ತಂಡವು 2024ರ ಟಿ20 ವಿಶ್ವಕಪ್ ಜಯಿಸಿದ್ದ ಸಂದರ್ಭದಲ್ಲಿ ರಾಹುಲ್ ಮುಖ್ಯ ಕೋಚ್ ಆಗಿದ್ದರು. ಕರ್ನಾಟಕದ ರಾಹುಲ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತದ ಕ್ರಿಕೆಟ್ ಬೆಳವಣಿಗೆಗೆ ನೀಡಿರುವ ಕಾಣಿಕೆಗಳನ್ನು ಪರಿಗಣಿಸಿ ಬಿಸಿಸಿಐನ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಲಾಗುತ್ತಿದೆ.
- ಅವರು ಕೆಲವು ವರ್ಷಗಳ ಹಿಂದೆ ಜೂನಿಯರ್ ತಂಡಗಳ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತ 19 ವರ್ಷದೊಳಗಿನವರ ತಂಡವು ವಿಶ್ವಕಪ್ ಜಯಿಸಿತ್ತು.

- 26 ವರ್ಷದ ಗಿಲ್ ಅವರು ಈಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಇನ್ನುಳಿದ ಎರಡೂ ಮಾದರಿಗಳಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
- ಹೋದ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 983 ರನ್ ಪೇರಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಎದುರು ನಡೆದಿದ್ದ ಟೆಸ್ಟ್ ಸರಣಿಯಲ್ಲಿ 754 ರನ್ ಗಳಿಸಿದ್ದರು. ಸುಮಾರು 70ರ ಸರಾಸರಿಯಲ್ಲಿ ಈ ರನ್ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅವರು ಒಟ್ಟು 490 ರನ್ ಗಳಿಸಿದ್ದಾರೆ. ಅದರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯಿಸಿದ ತಂಡದಲ್ಲಿದ್ದ ಅವರು 188 ರನ್ ಗಳಿಸಿದ್ದರು. ಎರಡೂ ಮಾದರಿ ಸೇರಿ 49ರ ಸರಾಸರಿಯಲ್ಲಿ ಒಟ್ಟು 1764 ರನ್ ಗಳಿಸಿದ್ದಾರೆ. ಅದರಲ್ಲಿ ಏಳು ಶತಕ ಮತ್ತು ಮೂರು ಅರ್ಧಶತಕಗಳು ಇವೆ. ಆದರೆ ಅವರು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಫಾರ್ಮ್ನಲ್ಲಿ ಇರಲಿಲ್ಲ. ಹೋದ ಸಲದ ಐಪಿಎಲ್ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿ, 650ರನ್ ಗಳಿಸಿದ್ದರು.
- ದೇಶಿ ಕ್ರಿಕೆಟ್ನ ‘ಉತ್ತಮ ಸಂಘಟನೆ’ ಗೌರವಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಭಾಜನವಾಗಿದೆ.
ಮುಖ್ಯ ಪರೀಕ್ಷೆ
ಪತ್ರಿಕೆ-I: ಪ್ರಬಂಧಗಳು
ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ
“ಕಾವೇರಿ ಜಲ ವಿವಾದ: ನ್ಯಾಯಮಂಡಳಿ ತೀರ್ಪುಗಳ ಅನುಷ್ಠಾನ, ಮೇಕೆದಾಟು ಯೋಜನೆ ಮತ್ತು ಅಂತರರಾಜ್ಯ ಹಂಚಿಕೆಯ ಸವಾಲುಗಳು.”
ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ
“ಬೆಂಗಳೂರಿನ ಸಂಚಾರ ಚಕ್ರವ್ಯೂಹ: ಸಮಸ್ಯೆಗಳು, ಸವಾಲುಗಳು ಮತ್ತು ಸುಸ್ಥಿರ ಪರಿಹಾರಗಳು.”
ಪತ್ರಿಕೆ-II: ಸಾಮಾನ್ಯ ಅಧ್ಯಯನ-1
ಬೇಸಿಗೆ ಅವಧಿಯ ದ್ವಿತೀಯಾರ್ಧದಲ್ಲಿ ಬೀಳುವ ಮಳೆ: ಹವಾಮಾನ ತಜ್ಞರ ವಿಶ್ಲೇಷಣೆ: ಮುಂಗಾರು ಮೇಲೆ ಎಲ್ನಿನೊ ಪರಿಣಾಮ
ಸಂದರ್ಭ: ಈ ಬಾರಿ ಬೇಸಿಗೆ ಅವಧಿಯ ದ್ವಿತೀಯಾರ್ಧದಲ್ಲಿ ಬೀಳುವ ಮಳೆ ಮೇಲೆ ಎಲ್ ನಿನೊ ಪರಿಣಾಮ ಬೀರಲಿದೆ. ಇದು ಮುಂದಿನ ವರ್ಷದ ಮುಂಗಾರಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚು ಎಂದು ಹವಾಮಾನತಜ್ಞರು ಹೇಳಿದ್ದಾರೆ.
- ‘ಎಲ್ ನಿನೊ ಬೀರುವ ಪರಿಣಾಮ ಸಾಧಾರಣ ಅಥವಾ ಪ್ರಬಲವಾಗಿರಬಹುದು, ಆದರೆ, ಪೆಸಿಫಿಕ್ ಸಾಗರದಲ್ಲಿ ಉಷ್ಣತೆಯಲ್ಲಿ ಕಂಡುಬರುವ ಹೆಚ್ಚಳವು ‘ಸೂಪರ್ ಎಲ್ನೊ’ ಆಗಿ ಪರಿವರ್ತನೆಗೊಳ್ಳಲಿದೆಯೇ ಎಂಬುದನ್ನು ಈಗಲೇ ಅಂದಾಜಿಸಲಾಗದು’ ಎಂದೂ ಹೇಳಿದ್ದಾರೆ.
- ‘ಆಗಸ್ಟ್ ವೇಳೆಗೆ ಎಲ್ನೊ ಪರಿಣಾಮ ಸಾಧಾರಣ ಇರುವ ಸಾಧ್ಯತೆ ಶೇಕಡ 98ರಷ್ಟು ಹಾಗೂ ಪ್ರಬಲವಾಗಿರುವ ಸಾಧ್ಯತೆ ಶೇ 80ರಷ್ಟು ಇರಲಿದೆ. ಸೂಪರ್ ಎಲ್ ನಿನೊ ಆಗಿ ಪರಿವರ್ತನೆಯಾಗುವ ಸಾಧ್ಯತೆ ಶೇ 22ರಷ್ಟು’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.
- ‘ಸೂಪರ್ ಎಲ್ ನಿನೊ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣವು ಮೇ ಅಂತ್ಯದ ವೇಳೆಗೆ ಸಿಗಲಿದೆ’ ಎಂದು ಐಎಂಸಿ ಪ್ರಧಾನ ನಿರ್ದೇಶಕ ತಿಳಿಸಿದ್ದಾರೆ.
- ಎಲ್ನಿನೊ ಎಂದರೆ ಸಮುದ್ರದ ಉಷ್ಣತೆ ಹೆಚ್ಚಾಗುವುದು. ಲಾನಿನಾ ಎಂದರೆ ಸಮುದ್ರದ ಉಷ್ಣತೆ ಕಡಿಮೆ ಆಗುವುದು. ಎಲ್ ನಿನೊ ಎಂದರೆ ಮಳೆ ಕಡಿಮೆ, ಲಾನಿನಾ ಎಂದರೆ ಮಳೆ ಹೆಚ್ಚು ಬರುವುದು. ಇವೆರಡೂ ಭಾರತದ ಮುಂಗಾರಿನ ಮೇಲೆ ಪರಿಣಾಮ ಬೀರುವಂತಹ ಬೆಳವಣಿಗೆಗಳು.
- ಎಲ್ ನಿನೋವನ್ನು ಆಧರಿಸಿ ಭಾರತದ ಮಳೆಯ ಪರಿಸ್ಥಿತಿಯನ್ನು ಮೂರು ತಿಂಗಳ ಮುಂಚೆ ಹೇಳಬಹುದು.
ಎಲ್ ನಿನೊ (El Niño) ಮತ್ತು ಲಾ ನಿನಾ (La Niña) ಎಂಬುದು ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನದಲ್ಲಿ ಉಂಟಾಗುವ ಬದಲಾವಣೆಗಳಾಗಿವೆ. ಇವು ಪ್ರಪಂಚದಾದ್ಯಂತದ ಹವಾಮಾನದ ಮೇಲೆ, ಅದರಲ್ಲೂ ವಿಶೇಷವಾಗಿ ಭಾರತದ ಮಾನ್ಸೂನ್ ಮಳೆಯ ಮೇಲೆ ಭಾರಿ ಪ್ರಭಾವ ಬೀರುತ್ತವೆ.
| ವೈಶಿಷ್ಟ್ಯ | ಎಲ್ ನಿನೊ (El Niño) | ಲಾ ನಿನಾ (La Niña) |
| ಅರ್ಥ | ಪೆಸಿಫಿಕ್ ಸಾಗರದ ಉಷ್ಣತೆಯ ಹೆಚ್ಚಳ | ಪೆಸಿಫಿಕ್ ಸಾಗರದ ಉಷ್ಣತೆಯ ಇಳಿಕೆ |
| ಗಾಳಿಯ ದಿಕ್ಕು | ವಾಣಿಜ್ಯ ಮಾರುತಗಳು ದುರ್ಬಲಗೊಳ್ಳುತ್ತವೆ | ವಾಣಿಜ್ಯ ಮಾರುತಗಳು ಬಲಗೊಳ್ಳುತ್ತವೆ |
| ಹವಾಮಾನದ ಮೇಲೆ ಪ್ರಭಾವ | ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ | ಜಾಗತಿಕವಾಗಿ ತಾಪಮಾನ ತಂಪಾಗಲು ಕಾರಣ |
| ಭಾರತದ ಮೇಲೆ ಪರಿಣಾಮ | ಮಳೆ ಕೊರತೆ ಅಥವಾ ಬರಗಾಲದ ಸಂಭವ | ಉತ್ತಮ ಮಳೆ ಮತ್ತು ಚಟುವಟಿಕೆಯ ಮಾನ್ಸೂನ್ |
ಭಾರತದ ಮೇಲೆ ಎಲ್ ನಿನೊ ಮತ್ತು ಲಾ ನಿನಾದ ಪ್ರಭಾವ
| ಅಂಶ | ಎಲ್ ನಿನೊ (El Niño) ಪ್ರಭಾವ | ಲಾ ನಿನಾ (La Niña) ಪ್ರಭಾವ |
| ಮಾನ್ಸೂನ್ ಮಾರುತಗಳು | ಮಾರುತಗಳು ದುರ್ಬಲಗೊಳ್ಳುತ್ತವೆ. | ಮಾರುತಗಳು ಬಲಗೊಳ್ಳುತ್ತವೆ. |
| ಮಳೆಯ ಪ್ರಮಾಣ | ಮಳೆ ಕೊರತೆ ಅಥವಾ ಬರಗಾಲದ ಪರಿಸ್ಥಿತಿ. | ಹೆಚ್ಚಿನ ಮಳೆ ಮತ್ತು ಸಮೃದ್ಧ ಮಳೆಗಾಲ. |
| ಕೃಷಿ ಪರಿಣಾಮ | ಬೆಳೆ ಉತ್ಪಾದನೆ ಕುಸಿತ, ಆಹಾರ ಬೆಲೆ ಏರಿಕೆ. | ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ, ಆಹಾರ ಭದ್ರತೆ. |
| ಇತರ ಅಪಾಯಗಳು | ಬರಗಾಲದಿಂದ ರೈತರಿಗೆ ಆರ್ಥಿಕ ನಷ್ಟ. | ಅತಿಯಾದ ಮಳೆಯಿಂದ ಪ್ರವಾಹ ಮತ್ತು ಆಸ್ತಿ-ಪಾಸ್ತಿ ಹಾನಿ. |
| ನಿರ್ಣಾಯಕ ಅಂಶಗಳು | IOD (ಹಿಂದೂ ಮಹಾಸಾಗರದ ದ್ವಿಧ್ರುವಿ) ಧನಾತ್ಮಕವಾಗಿದ್ದರೆ ಪರಿಣಾಮ ತಗ್ಗಬಹುದು. | ಅಧಿಕ ಮಳೆಯು ಜಲಾಶಯಗಳ ಮಟ್ಟ ಹೆಚ್ಚಿಸಲು ಸಹಕಾರಿ. |
ಪತ್ರಿಕೆ-III: ಸಾಮಾನ್ಯ ಅಧ್ಯಯನ-2
‘ಕೆನೆಪದರ: ಆದಾಯವಷ್ಟೇ ಆಧಾರವಲ್ಲ’: ಒಬಿಸಿ ಮೀಸಲಾತಿ ಕುರಿತು ‘ಸುಪ್ರೀಂ’ ಮಹತ್ವದ ತೀರ್ಪು
ಸಂದರ್ಭ: ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಯೊಬ್ಬರು ಕೆನೆಪದರದ ವ್ಯಾಪ್ತಿಯಲ್ಲಿ ಬರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಆ ಅಭ್ಯರ್ಥಿಯ ಪೋಷಕರ ಆದಾಯವೊಂದನ್ನೇ ಆಧರಿಸಿ ನಿರ್ಧರಿಸಲು ಸಾಧ್ಯವಿಲ್ಲ. ಪೋಷಕರು ಯಾವ ಹುದ್ದೆಯಲ್ಲಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

- ಪೋಷಕರು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ನೌಕರಿಯಲ್ಲಿದ್ದಾರೆ. ಬ್ಯಾಂಕುಗಳು ಅಥವಾ ಖಾಸಗಿ ವಲಯದ ಉದ್ಯೋಗದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ಯುಪಿಎಸ್ಸಿ ಆಕಾಂಕ್ಷಿಗಳನ್ನು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕೆನೆಪದರಕ್ಕೆ ಸೇರಿಸಿ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಿಸಿತ್ತು.
- ಇದನ್ನು ಪ್ರಶ್ನಿಸಿ ಆಕಾಂಕ್ಷಿಗಳು ದೆಹಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯಗಳಲ್ಲಿ ಆಕಾಂಕ್ಷಿಗಳ ಪರವಾಗಿ ತೀರ್ಪು ಬಂದಿತ್ತು ಈ ತೀರ್ಪುಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್ ಮಹಾದೇವನ್ ಅವರ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿ, ಕೇಂದ್ರದ ಮೇಲ್ಮನವಿಯನ್ನು ವಜಾ ಮಾಡಿ ಮಾರ್ಚ್ 11ರಂದು ತೀರ್ಪು ನೀಡಿದೆ.
- 1993ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಟಿಪ್ಪಣಿಯನ್ನು (ಒಬಿಸಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಇದ್ದ ಟಿಪ್ಪಣಿ) ಓದಿದರೂ 2004ರ ಅಕ್ಟೋಬರ್ 14ರಂದು ಇದೇ ಸಚಿವಾಲಯ ನೀಡಿದ ಸ್ಪಷ್ಟಿಕರಣ ಪತ್ರವನ್ನು ಓದಿದರೂ ಸಂಬಳದಿಂದ ಬರುವ ಆದಾಯವನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರನ್ನು ಕೆನೆಪದರದಲ್ಲಿ ಇರಿಸುವುದು ಅಥವಾ ಹೊರಗಿಡುವುದನ್ನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿತು.
- ‘ಅಭ್ಯರ್ಥಿಯ ಪೋಷಕರ ಸ್ಥಾನಮಾನಗಳು ಮತ್ತು ಅವರು ಯಾವ ಹುದ್ದೆಯಲ್ಲಿದ್ದಾರೆ ಎನ್ನುವುದೂ ಮುಖ್ಯವಾಗುತ್ತವೆ ಕೆನೆಪದರವನ್ನು ಆದಾಯದ ಆಧಾರದಲ್ಲಿ ಅಲ್ಲ ಸ್ನಾನಮಾನದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ ಎಂಬುದಾಗಿ ಸಚಿವಾಲಯದ ಟಿಪ್ಪಣಿಯ ಒಂದನೇ ಮತ್ತು ಮೂರನೇ ವಿಭಾಗದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಒಬಿಸಿ (OBC) ಮೀಸಲಾತಿಯಲ್ಲಿನ ‘ಕೆನೆಪದರ’ (Creamy Layer) ಪರಿಕಲ್ಪನೆ ಮತ್ತು ಅದರ ವಿಕಸನದ ಐತಿಹಾಸಿಕ ಹಿನ್ನೆಲೆ:
| ಕಾಲಘಟ್ಟ / ಘಟನೆ | ಪ್ರಮುಖ ಅಂಶಗಳು | ಮಹತ್ವ |
| 1979 (ಮಂಡಲ ಆಯೋಗ) | ಬಿ.ಪಿ. ಮಂಡಲ ನೇತೃತ್ವದ ಆಯೋಗವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (SEBC) ಗುರುತಿಸಿತು. | ಮೀಸಲಾತಿಗೆ ವೈಜ್ಞಾನಿಕ ಆಧಾರವನ್ನು ಒದಗಿಸಿತು. |
| 1990 (ವಿ.ಪಿ. ಸಿಂಗ್ ಸರ್ಕಾರ) | ಮಂಡಲ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದು, ಒಬಿಸಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ 27% ಮೀಸಲಾತಿ ಘೋಷಿಸಲಾಯಿತು. | ಮೀಸಲಾತಿ ಜಾರಿಗೆ ಬಂದ ಪ್ರಮುಖ ಮೈಲಿಗಲ್ಲು. |
| 1992 (ಇಂದಿರಾ ಸಾಹ್ನಿ ತೀರ್ಪು) | ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಎತ್ತಿಹಿಡಿಯಿತು, ಆದರೆ ‘ಕೆನೆಪದರ’ದವರನ್ನು ಹೊರಗಿಡಬೇಕು ಎಂದು ಸ್ಪಷ್ಟವಾಗಿ ಆದೇಶಿಸಿತು. | ಕೆನೆಪದರ ಎಂಬ ಪರಿಕಲ್ಪನೆ ಕಾನೂನಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು. |
| 1993 (DoPT ಟಿಪ್ಪಣಿ) | ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕೆನೆಪದರವನ್ನು ನಿರ್ಧರಿಸಲು ಮಾನದಂಡಗಳನ್ನು ರೂಪಿಸಿತು. | ಆದಾಯದ ಮಿತಿಯ ಜೊತೆಗೆ ಸಾಮಾಜಿಕ ಸ್ಥಾನಮಾನದ ಮಾನದಂಡಗಳನ್ನೂ ಪರಿಗಣಿಸಲಾಯಿತು. |
| 2004 (DoPT ಸ್ಪಷ್ಟೀಕರಣ) | ಸಂಬಳ ಮತ್ತು ಕೃಷಿ ಆದಾಯವನ್ನು ಕೆನೆಪದರದ ಆದಾಯದ ಮಿತಿಯಲ್ಲಿ ಪರಿಗಣಿಸಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿತು. | ಈ ಸ್ಪಷ್ಟೀಕರಣವನ್ನು ಇತ್ತೀಚಿನ ತೀರ್ಪಿನಲ್ಲಿ ಕೋರ್ಟ್ ಪ್ರಬಲವಾಗಿ ಬಳಸಿದೆ. |
| 2026 (ಸುಪ್ರೀಂ ಕೋರ್ಟ್ ತೀರ್ಪು) | ಪೋಷಕರ ಆದಾಯವನ್ನೇ ಏಕೈಕ ಮಾನದಂಡವಾಗಿಟ್ಟುಕೊಳ್ಳುವಂತಿಲ್ಲ; ಹುದ್ದೆಯ ಸ್ಥಾನಮಾನವೇ ಮುಖ್ಯ ಎಂದು ನ್ಯಾಯಾಲಯದ ಆದೇಶ. | ಆದಾಯ ಆಧಾರಿತ ನಿರ್ಧಾರಕ್ಕೆ ತಡೆ, ಸ್ಥಾನಮಾನ ಆಧಾರಿತ ನಿರ್ಧಾರಕ್ಕೆ ಆದ್ಯತೆ. |
ದಯಾಮರಣಕ್ಕೆ ಕಾನೂನು ಬಲ

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3
ಮಹಾರಾಷ್ಟ್ರ ಸರ್ಕಾರದ ನಿರ್ಧಾರ: ‘ಪ್ರಾಣ ರಕ್ಷಣೆಗಾಗಿ ಚಿರತೆ ಹತ್ಯೆ ಮಾಡಿದರೆ ಕ್ರಮವಿಲ್ಲ’
ಸಂದರ್ಭ: ಚಿರತೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪರಿಚ್ಛೇದ 1ರಿಂದ ತೆಗೆದು ಹಾಕಿ, ಪರಿಚ್ಛೇದ 2ಕ್ಕೆ ಸೇರಿಸುವ ಪ್ರಸ್ತಾವವನ್ನು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.
- ಪರಿಚ್ಛೇದ 1ರಲ್ಲಿ ಗುರುತಿಸಲಾಗುವ ಪ್ರಾಣಿಗಳನ್ನು ಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದರೆ ಪರಿಚ್ಛೇದ 2ರಲ್ಲಿರುವ ಪ್ರಾಣಿಗಳನ್ನು ತಮ್ಮ ಪ್ರಾಣ ರಕ್ಷಣೆಗಾಗಿ ಹತ್ಯೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ.
- ‘ಚಿರತೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲಿ ಪ್ರಾಣರಕ್ಷಣೆಗಾಗಿ ಅವುಗಳನ್ನು ಹತ್ಯೆ ಮಾಡಿದರೆ, ಅಂಥವರ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲಾಗುವುದು’ ಎಂದು ಅರಣ್ಯ ಸಚಿವ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
- ಮಾನವ ವಸತಿ ಪ್ರದೇಶಕ್ಕೆ ನುಗ್ಗಿ, ಸಾವು-ನೋವು ಉಂಟುಮಾಡುವ ಮಾಡುವ ಚಿರತೆಗಳನ್ನು ನರಭಕ್ಷಕ’ ಎಂದು ಘೋಷಿಸುವಂತೆಯೂ ನಿರ್ದೇಶಿಸಲಾಗಿದೆ.
- 150 ಚಿರತೆಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿತ್ತು. ಪ್ರಾಯೋಗಿಕವಾಗಿ ಹಣ್ಣು ಚಿರತೆಗಳನ್ನು ಸೆರೆ ಹಿಡಿದು ಚಿಕಿತ್ಸೆಗೊಳಪಡಿಸಲು ಕೇಂದ್ರವು ಅನುಮತಿ ನೀಡಿದೆ. ಇದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
- ಮಾನವ-ಚಿರತೆ ಸಂಘರ್ಷ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಶಾಲೆಗಳ ಸಮಯವನ್ನೂ ಬದಲಾಯಿಸಲಾಗಿದೆ.
- ಸೆರೆ ಹಿಡಿಯಲಾದ ಹುಲಿಗಳು, ಚಿರತೆಗಳು ಹಾಗೂ ಇತರ ವನ್ಯಪ್ರಾಣಿಗಳನ್ನು ರಕ್ಷಿಸಿ ಇರಿಸಲಾಗುವ ಸಂರಕ್ಷಣಾ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಸೆರೆ ಹಿಡಿದಿರುವ ಚಿರತೆಗಳನ್ನು ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆದು ಹೊರ ರಾಜ್ಯಗಳ ಮೃಗಾಲಯ ಹಾಗೂ ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸುವುದಕ್ಕೂ ಪ್ರಯತ್ನ ನಡೆದಿದೆ’.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act,1972) ಪ್ರಾಣಿಗಳ ವರ್ಗೀಕರಣ ಮತ್ತು ಅವುಗಳ ಹತ್ಯೆಗೆ ಸಂಬಂಧಿಸಿದ ಕಾನೂನು ಕ್ರಮಗಳ ನಡುವಿನ ವ್ಯತ್ಯಾಸ.
| ಹೊಸ ಪರಿಚ್ಛೇದ (Schedules) | ಹಳೆಯ ಪರಿಚ್ಛೇದಗಳ ವಿಲೀನ | ಪ್ರಾಣಿ/ಸಸ್ಯಗಳ ವರ್ಗ ಮತ್ತು ವಿವರಣೆ | ಉದಾಹರಣೆಗಳು | ಕಾನೂನು ಮತ್ತು ಅಧಿಕಾರಿಗಳ ಅನುಮತಿ |
| ಪರಿಚ್ಛೇದ I | ಹಳೆಯ ಪರಿಚ್ಛೇದ I ಮತ್ತು II ರ ಭಾಗಗಳು | ಅತ್ಯುನ್ನತ ರಕ್ಷಣೆ: ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿಗಳು. ಇವುಗಳ ಹತ್ಯೆ ಅಥವಾ ಬೇಟೆ ಸಂಪೂರ್ಣ ನಿಷೇಧ. | ಹುಲಿ, ಆನೆ, ಸಿಂಹ, ಕೃಷ್ಣಮೃಗ, ಘೇಂಡಾಮೃಗ, ಚಿರತೆ. | ಚೀಫ್ ವೈಲ್ಡ್ ಲೈಫ್ ವಾರ್ಡನ್ ಅವರು ಆ ಪ್ರಾಣಿ ಮನುಷ್ಯನ ಜೀವಕ್ಕೆ ಅಪಾಯಕಾರಿ ಎಂದು ಘೋಷಿಸಿದರೆ ಮಾತ್ರ ಹತ್ಯೆಗೆ ಅವಕಾಶ. |
| ಪರಿಚ್ಛೇದ II | ಹಳೆಯ ಪರಿಚ್ಛೇದ II, III ಮತ್ತು IV ರ ಭಾಗಗಳು | ಸಂರಕ್ಷಿತ ಪ್ರಾಣಿಗಳು: ಇವುಗಳಿಗೂ ರಕ್ಷಣೆ ಇರುತ್ತದೆ ಆದರೆ ಶಿಕ್ಷೆಯ ಪ್ರಮಾಣ ಪರಿಚ್ಛೇದ I ಕ್ಕಿಂತ ತುಲನಾತ್ಮಕವಾಗಿ ಕಡಿಮೆ. | ನಾಗರಹಾವು, ನರಿ, ಕಾಡುಹಂದಿ, ಸಾಂಬಾರ್ ಜಿಂಕೆ, ವಿವಿಧ ಪಕ್ಷಿಗಳು. | ರಕ್ಷಣೆಗಾಗಿ ಮಾಡಿದ ಹತ್ಯೆಯನ್ನು ತನಿಖೆಯ ನಂತರ ಸಮರ್ಥನೀಯವೆಂದು ಕಂಡುಬಂದರೆ ಪ್ರಕರಣ ಕೈಬಿಡಲಾಗುತ್ತದೆ. |
| ಪರಿಚ್ಛೇದ III | ಹಳೆಯ ಪರಿಚ್ಛೇದ VI | ಸಂರಕ್ಷಿತ ಸಸ್ಯಗಳು: ಅಪರೂಪದ ಮತ್ತು ವಾಣಿಜ್ಯ ಮೌಲ್ಯವಿರುವ ಸಸ್ಯಗಳ ಸಂರಕ್ಷಣೆ. | ಕೆಂಪು ಚಂದನ, ನೀಲಕುರಿಂಜಿ, ಬೆಡ್ಡೋಮ್ಸ್ ಸೈಕಾಡ್. | ಇವುಗಳ ಕೃಷಿ, ಸಂಗ್ರಹಣೆ ಅಥವಾ ಮಾರಾಟಕ್ಕೆ ರಾಜ್ಯ ಅರಣ್ಯ ಇಲಾಖೆಯ ಪೂರ್ವಾನುಮತಿ ಮತ್ತು ಪರವಾನಗಿ ಕಡ್ಡಾಯ. |
| ಪರಿಚ್ಛೇದ IV | ಹೊಸ ಸೇರ್ಪಡೆ (CITES ಅನ್ವಯ) | ಅಂತರರಾಷ್ಟ್ರೀಯ ವ್ಯಾಪಾರ: CITES ಒಪ್ಪಂದದ ಅಡಿಯಲ್ಲಿ ಬರುವ ಪ್ರಾಣಿ ಮತ್ತು ಸಸ್ಯಗಳ ಸಂರಕ್ಷಣೆ. | ಅಂತರರಾಷ್ಟ್ರೀಯ ಮಟ್ಟದಲ್ಲಿ ರಕ್ಷಿಸಲ್ಪಟ್ಟ ವಿದೇಶಿ ಪ್ರಾಣಿಗಳು ಮತ್ತು ಸಸ್ಯಗಳು. | ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಸಾಗಾಣಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳು ಅನ್ವಯಿಸುತ್ತವೆ. |
ಹೊಸ ತಿದ್ದುಪಡಿಯ ಪ್ರಮುಖ ಮುಖ್ಯಾಂಶಗಳು:
ಪರಿಚ್ಛೇದ 5 (Vermin) ರದ್ದತಿ: ಈ ಮೊದಲು ‘ಉಪದ್ರವಕಾರಿ ಪ್ರಾಣಿಗಳು’ ಎಂದು ಪ್ರತ್ಯೇಕ ಪರಿಚ್ಛೇದವಿತ್ತು. ಈಗ ಅದನ್ನು ತೆಗೆದುಹಾಕಲಾಗಿದ್ದು, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಪ್ರಾಣಿಯನ್ನು ನಿರ್ದಿಷ್ಟ ಅವಧಿಗೆ ‘ವರ್ಮಿನ್’ ಎಂದು ಘೋಷಿಸುವ ಅಧಿಕಾರ ಹೊಂದಿದೆ.
ಆನೆಗಳ ಬಳಕೆ: ಧಾರ್ಮಿಕ ಅಥವಾ ಇತರ ಉದ್ದೇಶಗಳಿಗಾಗಿ ಆನೆಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಲಾಗಿದೆ (ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ).
ದಂಡದ ಹೆಚ್ಚಳ: ಸಾಮಾನ್ಯ ಉಲ್ಲಂಘನೆಗೆ ದಂಡವನ್ನು ₹25,000 ರಿಂದ ₹1,00,000 ವರೆಗೆ ಹೆಚ್ಚಿಸಲಾಗಿದೆ. ಪರಿಚ್ಛೇದ 1ರ ಪ್ರಾಣಿಗಳ ಹತ್ಯೆಗೆ ಕನಿಷ್ಠ ₹25,000 ದಂಡ ವಿಧಿಸಲಾಗುತ್ತದೆ.
ಆತ್ಮರಕ್ಷಣೆ ಮತ್ತು ಮಾಲೀಕತ್ವ: ಯಾವುದೇ ಸಂದರ್ಭದಲ್ಲಿ ಹತ್ಯೆಗೀಡಾದ ಪ್ರಾಣಿಯ ದೇಹದ ಭಾಗಗಳು ಸರ್ಕಾರದ ಆಸ್ತಿಯಾಗಿರುತ್ತವೆ. ಅದನ್ನು ಯಾರೂ ವೈಯಕ್ತಿಕವಾಗಿ ಹೊಂದುವಂತಿಲ್ಲ.
ಪತ್ರಿಕೆ-V: ಸಾಮಾನ್ಯ ಅಧ್ಯಯನ-4
ಪ್ರಕರಣದ ಅಧ್ಯಯನ: ರಾಜ್ಯದ ಆದಾಯ ಮತ್ತು ಸಾರ್ವಜನಿಕ ಆರೋಗ್ಯ – ಅಬಕಾರಿ ನೀತಿಯ ಸಂಘರ್ಷ
1. ಪ್ರಕರಣದ ಸಾರಾಂಶ (Case Context)
ಕರ್ನಾಟಕ ಸರ್ಕಾರವು ತನ್ನ ಅಬಕಾರಿ ನೀತಿಯನ್ನು ಸುಧಾರಿಸಲು ಮುಂದಾಗಿದೆ. ಇದರಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಮದ್ಯದ ಪ್ರಮಾಣದ (Ex-Distillery Price-EDP) ಬದಲು ಆಲ್ಕೋಹಾಲ್ ಸಾಂದ್ರತೆಯ (Alcohol By Volume-ABV) ಆಧಾರದ ಮೇಲೆ ವಿಧಿಸುವ ವೈಜ್ಞಾನಿಕ ಕ್ರಮವೂ ಸೇರಿದೆ. ಒಂದೆಡೆ ಸರ್ಕಾರವು ತನ್ನ ಬಜೆಟ್ ಗುರಿಯನ್ನು ತಲುಪಲು ಅಬಕಾರಿ ಇಲಾಖೆಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಿದ್ದರೆ, ಮತ್ತೊಂದೆಡೆ ಗಡಿ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಸಾರ್ವಜನಿಕರ ಆರೋಗ್ಯದ ಸವಾಲುಗಳು ಎದುರಾಗಿವೆ.
2. ಪ್ರಕರಣದಲ್ಲಿರುವ ಸತ್ಯಾಂಶಗಳು (Facts in the Case)
ಆದಾಯದ ಗುರಿ: ಸರ್ಕಾರವು ಮುಂದಿನ ಆರ್ಥಿಕ ವರ್ಷಕ್ಕೆ ₹45,000 ಕೋಟಿ ಅಬಕಾರಿ ಸಂಗ್ರಹದ ಗುರಿ ಹೊಂದಿದೆ. ಪ್ರಸ್ತುತ ಫೆಬ್ರವರಿ ಅಂತ್ಯದವರೆಗೆ ₹32,492 ಕೋಟಿ ಸಂಗ್ರಹವಾಗಿದೆ.
ಅಕ್ರಮ ಮದ್ಯದ ಹಾವಳಿ: ಕಳೆದ ಮೂರು ವರ್ಷಗಳಲ್ಲಿ ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿರುವ 1,489 ಪ್ರಕರಣಗಳು ದಾಖಲಾಗಿವೆ.
ಗಡಿ ಜಿಲ್ಲೆಗಳ ಸಮಸ್ಯೆ: ಬೆಳಗಾವಿ (242), ರಾಯಚೂರು (268), ಕಲಬುರಗಿ (200) ಜಿಲ್ಲೆಗಳಲ್ಲಿ ಅಕ್ರಮ ಮದ್ಯದ ಪ್ರಕರಣಗಳು ಅತಿ ಹೆಚ್ಚಿವೆ.
ಜಪ್ತಿ ವಿವರ: ಸುಮಾರು 42,927 ಲೀಟರ್ ಮದ್ಯವನ್ನು ಆಂಧ್ರ/ತೆಲಂಗಾಣ ಗಡಿಯಲ್ಲಿ ಮತ್ತು 1.05 ಲಕ್ಷ ಲೀಟರ್ ಮದ್ಯವನ್ನು ಗೋವಾ ಗಡಿಯಲ್ಲಿ ಜಪ್ತಿ ಮಾಡಲಾಗಿದೆ. 934 ಆರೋಪಿಗಳನ್ನು ಬಂಧಿಸಲಾಗಿದೆ.
ಸುಧಾರಣಾ ಕ್ರಮಗಳು: ಮದ್ಯ ತಯಾರಿಕಾ ವಲಯದಲ್ಲಿ ಪಾರದರ್ಶಕತೆ ತರಲು ‘ಡಿಜಿಟಲ್ ಫ್ಲೋ ಮೀಟರ್’ ಅಳವಡಿಕೆ ಮತ್ತು ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಲಾಗುತ್ತಿದೆ.
3. ನೈತಿಕ ಸಂದಿಗ್ಧತೆಗಳು (Ethical Dilemmas)
ಈ ಪ್ರಕರಣದಲ್ಲಿ ಪ್ರಮುಖವಾಗಿ ಮೂರು ನೈತಿಕ ಸಂಘರ್ಷಗಳು ಕಂಡುಬರುತ್ತವೆ:
1. .ಆದಾಯ vs ಸಾರ್ವಜನಿಕ ಕಲ್ಯಾಣ: ಸರ್ಕಾರದ ಬೊಕ್ಕಸ ತುಂಬಿಸಲು ಮದ್ಯ ಮಾರಾಟದ ಗುರಿ ಹೆಚ್ಚಿಸುವುದು ಸರಿ ಅಥವಾ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮದ್ಯಪಾನವನ್ನು ನಿರುತ್ಸಾಹಗೊಳಿಸುವುದು ಸರಿ ಎಂಬ ಪ್ರಶ್ನೆ.
2.ಗುರಿ ತಲುಪುವ ಒತ್ತಡ vs ಭ್ರಷ್ಟಾಚಾರ: ಅಧಿಕಾರಿಗಳಿಗೆ ಅತಿಯಾದ ಆದಾಯದ ಗುರಿ ನೀಡುವುದರಿಂದ, ಅವರು ಕೆಳಮಟ್ಟದ ಅಂಗಡಿಗಳ ಮೇಲೆ ಒತ್ತಡ ಹೇರಬಹುದು ಅಥವಾ ಅಕ್ರಮಗಳನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ.
3.ಕಾನೂನು ಜಾರಿ vs ಭೌಗೋಳಿಕ ಸವಾಲುಗಳು: ಗಡಿ ಭಾಗಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಮದ್ಯದ ಆಕರ್ಷಣೆಯನ್ನು ತಡೆಗಟ್ಟುವಲ್ಲಿನ ವೈಫಲ್ಯ ಮತ್ತು ಅದರಿಂದ ಉಂಟಾಗುವ ಆರ್ಥಿಕ ನಷ್ಟ.
4. ಒಳಗೊಂಡಿರುವ ನೀತಿಶಾಸ್ತ್ರದ ಮೌಲ್ಯಗಳು (Stakeholders & Values)
ಸರ್ಕಾರ: ಆರ್ಥಿಕ ಸ್ಥಿರತೆ ಮತ್ತು ಜನರಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಜವಾಬ್ದಾರಿ.
ಸಾರ್ವಜನಿಕರು: ಸಂವಿಧಾನದ 47ನೇ ವಿಧಿಯಡಿ (Article 47) ಆರೋಗ್ಯಕರ ಜೀವನ ನಡೆಸುವ ಹಕ್ಕು.
ಅಬಕಾರಿ ಇಲಾಖೆ: ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಕಾನೂನುಬದ್ಧ ಆಡಳಿತ.
5. ಸಂಭವನೀಯ ಪರಿಹಾರಗಳು ಮತ್ತು ಕ್ರಮಗಳು
ಪ್ರಬಂಧ ಅಥವಾ ಪರೀಕ್ಷೆಯ ದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಸೂಚಿಸಬಹುದು:
ವೈಜ್ಞಾನಿಕ ತೆರಿಗೆ ಪದ್ಧತಿ: ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ತೆರಿಗೆ ವಿಧಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಕ್ರಮ (ಹೆಚ್ಚು ಕಿಕ್ ನೀಡುವ ಮದ್ಯಕ್ಕೆ ಹೆಚ್ಚು ತೆರಿಗೆ).
ಗಡಿ ನಿಗಾ ಘಟಕಗಳ ಬಲವರ್ಧನೆ: ತಂತ್ರಜ್ಞಾನ ಮತ್ತು ಚೆಕ್ಪೋಸ್ಟ್ಗಳ ಮೂಲಕ ಅಕ್ರಮ ಸಾಗಾಟ ತಡೆಯುವುದು.
ಜಾಗೃತಿ ಕಾರ್ಯಕ್ರಮಗಳು: ಕೇವಲ ಮದ್ಯ ಮಾರಾಟ ಮಾಡುವುದಲ್ಲದೆ, ಅಬಕಾರಿ ಆದಾಯದ ಒಂದು ಪಾಲನ್ನು ಮದ್ಯಪಾನ ಮುಕ್ತ ಸಮಾಜದ ಜಾಗೃತಿಗಾಗಿ ಬಳಸುವುದು.
ಪಾರದರ್ಶಕತೆ: ಡಿಜಿಟಲ್ ವ್ಯವಸ್ಥೆಯ ಮೂಲಕ ಸೋರಿಕೆಯನ್ನು ತಡೆಗಟ್ಟುವುದು.
Source: Prajavani