Thu. Apr 9th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಕದನ ವಿರಾಮ: ತಾತ್ಕಾಲಿಕ ಸಮಾಧಾನ: ಪಾಕ್‌ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇಸ್ರೇಲ್, ಇರಾನ್ ಸಮ್ಮತಿ
ಸಂದರ್ಭ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಬುಧವಾರ ಸಮ್ಮತಿಸಿವೆ. ಇದರೊಂದಿಗೆ ಕಳೆದ 40 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದ ನಲುಗಿದ್ದ ಪಶ್ಚಿಮ ಏಷ್ಯಾ ಸೇರಿ ವಿಶ್ವವೇ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

  • ಈ ತಾತ್ಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿ 10 ಅಂಶಗಳನ್ನು ಒಳಗೊಂಡ ಪ್ರಸ್ತಾವ ಮುಂದಿಟ್ಟಿರುವ ಇರಾನ್, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ಕುರಿತು ವಿಸ್ತ್ರತ ಮಾತುಕತೆ ನಡೆಸುವುದಾಗಿ ಹೇಳಿದೆ.
  • ‘ಇರಾನ್ ಮುಂದಿಟ್ಟಿರುವ ಷರತ್ತುಗಳು ‘ಕಾರ್ಯಸಾಧ್ಯವಾದವುಗಳು’ ಎಂದು ಈ ಮೊದಲು ಹೇಳಿದ್ದ ಟ್ರಂಪ್ ಈಗ ತಮ್ಮ ನಿಲುವು ಬದಲಾಯಿಸಿದ್ದಾರೆ. ‘ಈ ಅಂಶಗಳ ಕುರಿತು ವಿಸ್ತ್ರತವಾದ ವಿವರಣೆ ನೀಡದಿದ್ದಲ್ಲಿ ಕದನ ವಿರಾಮ ಕುರಿತ ಇರಾನ್ ಯೋಜನೆಯೇ ವಂಚನೆ ಎನಿಸಲಿದೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟೂಥ್ ಸೋಷಿಯಲ್’ನಲ್ಲಿ ಬರೆದುಕೊಂಡಿದ್ದಾರೆ. ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವುದನ್ನು ಖಚಿತಪಡಿಸಿ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ನಿ ನೀಡಿರುವ ಹೇಳಿಕೆಯನ್ನು ಕೂಡ ಟ್ರಂಪ್ ಹಂಚಿಕೊಂಡಿದ್ದಾರೆ.
  • ಇರಾನ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ‘ಅಮೆರಿಕ ಮುಂದಿಟ್ಟಿರುವ ಎರಡು ವಾರಗಳ ಕದನ ವಿರಾಮ ಪ್ರಸ್ತಾವವನ್ನು ಒಪ್ಪಿಕೊಂಡಿದ್ದೇವೆ. ಇಸ್ಲಾಮಾಬಾದ್‌ನಲ್ಲಿ ನಡೆಯುವ ಸಭೆಯಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಇರಾನ್‌ ರಾಷ್ಟ್ರೀಯ ಭದ್ರತಾ ಪರಿಷತ್ತು ಟೆಹರಾನ್‌ನಲ್ಲಿ ಪ್ರತಿಕ್ರಿಯಿಸಿದೆ.

ಜಂಟಿ ಅಗ್ರಸ್ಥಾನಕ್ಕೆ ಏರಿದ ವೈಶಾಲಿ

  • ವಿಶ್ವಕಪ್ ವಿಜೇತೆ ಹಾಗೂ ಸ್ವದೇಶದ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಬುಧವಾರ ಸೋಲಿಸಿದ ಭಾರತದ ವೈಶಾಲಿ ಆರ್. ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನ ನಂತರ ಚೀನಾದ ಝು ಜಿನರ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
  • ವೈಶಾಲಿ ಮತ್ತು ಜಿನೆರ್ ತಲಾ 5.5 ಅಂಕ ಗಳಿಸಿದ್ದಾರೆ. ಜಿನೆರ್ ಒಂಬತ್ತನೇ ಸುತ್ತಿನಲ್ಲಿ ರಷ್ಯಾದ ಕ್ಯಾತರಿನಾ ಲಾಗೊ (4.5) ಅವರನ್ನು ಮಣಿಸಿದರು.

ಕುಸ್ತಿ: ಬೆಳ್ಳಿ ಜಯಿಸಿದ ನಿತೇಶ್‌
ಸಂದರ್ಭ: ಭಾರತದ ಗ್ರೀಕೊ-ರೋಮನ್ ಕುಸ್ತಿಪಟುಗಳು ಕಿರ್ಗಿಸ್ತಾನದ ಬಿಪೈಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದರು.

  • ಅನುಭವಿ ಪೈಲ್ವಾನ್ ನಿತೇಶ್ ಸಿವಾಚ್ ಅವರು ಪುರುಷರ 97 ಕೆ.ಜಿ. ವಿಭಾಗದಲ್ಲಿ ರಜತ ಜಯಿಸಿದರು. ಸಚಿನ್ ಹಾಗೂ ಪ್ರಿನ್ಸ್ ಕಂಚಿನ ಪದಕ ಜಯಿಸಿದರು.
  • ನಿತೇಶ್ ಅವರು ಫೈನಲ್‌ನಲ್ಲಿ 1-7ರಿಂದ ಇರಾನ್‌ ಮೊಹಮ್ಮದಾದಿ ಮೊಹಮ್ಮದ್ಹದಿ ಸರವಿ ವಿರುದ್ಧ ಪರಾಭವಗೊಂಡರು. ಅದರೊಂದಿಗೆ ಸರವಿ ಅವರು ಸತತ ಎರಡನೇ ಬಾರಿಗೆ ಸ್ವರ್ಣ ತಮ್ಮದಾಗಿಸಿಕೊಂಡರು.
  • ಪುರುಷರ 67 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸಚಿನ್ 6-5ರಿಂದ ಉಜೇಕಿಸ್ತಾನದ ಅಬ್ಬುಮಲಿಕ್ ಅಮಿನೊವ್ ವಿರುದ್ಧ ರೋಚಕ ಜಯ ಸಾಧಿಸಿದರು.
  • ಪ್ರಿನ್ಸ್ ಅವರು ಪುರುಷರ 82 ಕೆ.ಜಿ. ವಿಭಾಗದಲ್ಲಿ 10-1ರಿಂದ ತುರ್ಕಮೆನಿ ಸ್ನಾನದ ದೀದರ್ ಅಮನ್ನಝರೊವ್ ಅವರನ್ನು ಮಣಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು.

‘ಸಾತ್ವಿಕ್’ ಬ್ಯಾಂಡ್ ಖರೀದಿಸಿದ ‘ಸೈಕಲ್ ಪ್ಯೂರ್’

  • ಅಗರಬತ್ತಿ ಮಾರುಕಟ್ಟೆಯಲ್ಲಿ ಮುಂಚೂಣಿ ಕಂಪನಿಯಾಗಿರುವ ಸೈಕಲ್ ವ್ಯೂರ್. ಪೂಜಾ ಸಾಮಗ್ರಿಗಳ ಕಂಪನಿ ‘ಸಾತ್ವಿಕ್ ಅನ್ನು ಸ್ವಾಧೀನಪಡಿಸಿಕೊಂಡಿದೆ.
  • ಈ ಸ್ವಾಧೀನದ ಮೂಲಕ, ಡಿಜಿಟಲ್ ಲೋಕದಲ್ಲಿ ‘ಸಾತ್ವಿಕ್ ಬ್ಯಾಂಡ್ ಹೊಂದಿರುವ ಪ್ರಾಬಲ್ಯವನ್ನು ಬಳಸಿಕೊಳ್ಳಲು, ಪೂಜಾ ಸಾಮಗ್ರಿಗಳಿಗೆ ಇರುವ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂದು ಸೈಕಲ್ ಪ್ಯೂರ್ ಕಂಪನಿ ಹೇಳಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಎಐ ಕಾರ್ಖಾನೆ: ದಯಾನಂದ ಸಾಗರ್ ವಿ.ವಿ ಒಪ್ಪಂದ
ಸಂದರ್ಭ: ಭಾರತದಲ್ಲಿ ಮೊದಲ ಎಐ ಕಾರ್ಖಾನೆಯನ್ನು ನಿರ್ಮಿಸಲು ದಯಾನಂದ ಸಾಗರ್ ವಿಶ್ವವಿದ್ಯಾಲಯವು ಎನ್‌ಡಿಯಾದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

  • ಎನ್‌ಡಿಯಾವು ಮುಂದಿನ ಪೀಳಿಗೆಯ ಎಐ ಸೂಪರ್ ಕಂಪ್ಯೂಟಿಂಗ್ ವೇದಿಕೆಯಾಗಿರುವ ‘ಬ್ಲ್ಯಾಕ್‌ವೆಲ್ ಬಳಸಿಕೊಳ್ಳಲಿದೆ. ಕಡಿಮೆ ಸುಸಜ್ಜಿತ ಮೂಲಸೌಕರ್ಯ, ವಿದೇಶಿ ಎಐ ಮಾದರಿಗಳ ಬಳಕೆ, ದೇಶೀಯ ಸೂಪರ್ ಕಂಪ್ಯೂಟಿಂಗ್ ತಂತ್ರಜ್ಞಾನಗಳ ಕೊರತೆ ಮತ್ತು ಶೈಕ್ಷಣಿಕ ತರಬೇತಿ ಮತ್ತು ಉದ್ಯಮ ನಿಯೋಜನೆ ಅಗತ್ಯಗಳ ನಡುವಿನ ನ್ಯೂನತೆಗಳನ್ನು ನಿವಾರಿಸುವ ಉದ್ದೇಶವನ್ನು ಈ ಒಡಂಬಡಿಕೆ ಹೊಂದಿದೆ.
  • ದಯಾನಂದ ಸಾಗ‌ರ್ ವಿಶ್ವವಿದ್ಯಾಲಯವು ₹175 ಕೋಟಿ ಹೂಡಿಕೆ ಮಾಡಲಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಎಐ ಕಂಪ್ಯೂಟಿಂಗ್ ಬಳಕೆಯಾಗಲಿದೆ.
  • ‘ಎನ್‌ವಿಡಿಯಾ ಜೊತೆಗಿನ ಸಹಯೋಗದಿಂದಾಗಿ ವಿಶ್ವವಿದ್ಯಾಲಯವು ಎಐ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಬಳಸಿಕೊಳ್ಳಲಿದೆ.
  • ‘ಎನ್‌ವಿಡಿಯಾ ಚಾಲಿತ ಎಐ ಕಾರ್ಖಾನೆ ಸ್ಥಾಪಿಸಲಾಗುವುದು ಆ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಎಐ ವ್ಯವಸ್ಥೆಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗುವುದು, ಆತ್ಮನಿರ್ಭರ ಭಾರತ, ತಂತ್ರಜ್ಞಾನ ಅಭಿವೃದ್ಧಿ, ಜವಾಬ್ದಾರಿಯುತವಾಗಿ ಎಐ ಬಳಕೆ ಸೇರಿದಂತೆ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ.
  • ದಯಾನಂದ ಸಾಗರ್ ವಿಶ್ವವಿದ್ಯಾಲಯವು ಆರೋಗ್ಯ, ಎಂಜಿನಿಯರಿಂಗ್, ರಕ್ಷಣೆ, ಸೈಬರ್ ಭದ್ರತೆ, ಅರೆವಾಹಕಗಳು, ಸ್ಮಾರ್ಟ್ ಚಲನಶೀಲತೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಕೆಪೆಕ್ಸ್‌ನಲ್ಲಿ 150 ಕೋಟಿಗೂ ಅಧಿಕ ವೆಚ್ಚದಲ್ಲಿ ಆರು ಉದ್ಯಮ-ಸಂಯೋಜಿತ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಕೇಂದ್ರಗಳು ವಿಶೇಷ ಎಐ ಸಂಶೋಧನೆ ಮತ್ತು ಅನ್ವಯಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆ
ಸಂದರ್ಭ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಅಡಿ ವಿವಿಧ ಕಂಪನಿಗಳ ಸಹಯೋಗದಲ್ಲಿ ರೂಪಿಸಿರುವ ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆಯ ಸೇವೆಗಳನ್ನು ವಿಸ್ತರಿಸಿದೆ.

  • ನಿವೃತ್ತ ನೌಕರರ ಉಳಿತಾಯದ ಹಣ ಹಾಗೂ ಆರೋಗ್ಯ ಸೇವೆಗಳನ್ನು ಒಂದೆಡೆ ಬಳಸಿಕೊಳ್ಳಲು ಸಹಕಾರಿಯಾಗುವಂತೆ ಪ್ರಾಧಿಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪ್ರಮುಖ ಆರೋಗ್ಯ ವಿಮಾ ಸೇವಾ ಕಂಪನಿಗಳು ನೌಕರರಿಗೆ ಸೇವೆಗಳನ್ನು ಒದಗಿಸಲಿವೆ.
  • ಎನ್‌ಪಿಎಸ್ ಸ್ವಾಸ್ಥ್ಯ ಯೋಜನೆಯಡಿ ಹೊರ ರೋಗಿಗಳಿಗೆ ಸೇವೆ ಒದಗಿಸುವ ಕುರಿತು ಮೂರು ತಿಂಗಳ ಹಿಂದೆಯೇ ಮಾರ್ಗಸೂಚಿ ಬಿಡುಗಡೆ ಮಾಡ ಲಾಗಿತ್ತು ಈಗ ಒಳ ರೋಗಿಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರಿಗೆ ನೀಡುವ ಸೌಲಭ್ಯಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
  • ಎನ್‌ಪಿಎಸ್‌ ಸೌಲಭ್ಯವನ್ನು ಪಡೆದ ನೌಕರರು ನಿವೃತ್ತಿವರೆಗೂ ಉಳಿತಾಯ ವನ್ನು ಬಳಸಲು ಅವಕಾಶವಿರಲಿಲ್ಲ ಆದರೆ ಎನ್‌ಪಿಎಸ್ ಸ್ವಾಸ್ಥ್ಯ ಅಡಿಯಲ್ಲಿ ಗ್ರಾಹಕರು ಉಳಿತಾಯದ ಶೇಕಡ 25ರಷ್ಟು ಮೊತ್ತವನ್ನು ಬಳಸಿಕೊಳ್ಳಲು ಅವಕಾಶವಿದೆ. ಇದನ್ನು ವೈದ್ಯಕೀಯ ವೆಚ್ಚಗಳಿಗೆ ಉಪಯೋಗಿಸಬಹುದು. ಮೆಡಿ ಅಸಿಸ್ಟ್ ಹೆಲ್ತ್ ಕೇರ್ ಸರ್ವೀಸಸ್ ರೂಪಿಸಿರುವ ಮಾವೆನ್ ಆ್ಯಪ್ ಬಳಸಿ ಸೇವೆ ಪಡೆಯಬಹುದು.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಬೇಡ್ತಿ-ವರದಾ: ಆಂಧ್ರ ಪ್ರದೇಶ ಸರ್ಕಾರದ ತಗಾದೆ: ‘ನದಿ ಜೋಡಣೆಯಲ್ಲೂ ಪಾಲು’
ಸಂದರ್ಭ: ಪ್ರಸ್ತಾವಿತ ಬೇಡ್ತಿ-ವರದಾ ನದಿಗಳ ಜೋಡಣೆ ವೇಳೆಯಲ್ಲಿ ತಮ್ಮ ರಾಜ್ಯಕ್ಕೆ ನ್ಯಾಯಬದ್ಧವಾದ ನೀರು ಹಂಚಿಕೆ ಮಾಡಬೇಕು ಎಂದು ಆಂಧ್ರ ಪ್ರದೇಶ ಸರ್ಕಾರ ತಗಾದೆ ಎತ್ತಿದೆ.

  • ಆಲಮಟ್ಟಿ ಅಣೆಕಟ್ಟಿ ಎತ್ತರ ಹೆಚ್ಚಳಕ್ಕೆ ಅನುವು ಮಾಡಿಕೊಡಬಾರದು ಎಂದು ಅಂಧ್ರ ಪ್ರದೇಶ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಜನವರಿಯಲ್ಲಿ ಪತ್ರ ಬರೆದಿತ್ತು ಅದರ ಬೆನ್ನಲ್ಲೇ, ನೆರೆ ರಾಜ್ಯವು ನದಿ ಜೋಡಣೆಯ ನೀರು ಹಂಚಿಕೆ ವಿಷಯದಲ್ಲೂ ತಕರಾರು ಶುರು ಮಾಡಿದೆ.
  • ನದಿ ಜೋಡಣೆಯ ವಿಷಯದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ತನ್ನ ನಿಲುವನ್ನು ತಿಳಿಸಿರುವ ಆಂಧ್ರ ಪ್ರದೇಶ ಸರ್ಕಾರ, ‘ಈ ನದಿಗಳನ್ನು ಜೋಡಿಸುವ ಮೂಲಕ 18.50 ಟಿಎಂಸಿ ಅಡಿ ನೀರನ್ನು ಕೃಷ್ಣಾ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಪ್ರಸ್ತಾಪಿಸಲಾಗಿದೆ. ಹೀಗಾಗಿ, ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಪ್ರಕಾರ, ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ಆಗ್ರಹಿಸಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ನದಿ ಜೋಡಣೆಯ ವಿಶೇಷ ಸಮಿತಿಯ ಸಭೆಯಲ್ಲೂ ಈ ಬೇಡಿಕೆ ಮುಂದಿಟ್ಟಿದೆ. ಇನ್ನೊಂದೆಡೆ, ನದಿ ಜೋಡಣೆ ಕುರಿತು ರಾಜ್ಯಗಳು ಒಮ್ಮತಕ್ಕೆ ಬಂದಿಲ್ಲ. ಜತೆಗೆ, ರಾಜ್ಯಕ್ಕೆ ಕನಿಷ್ಠ ಪಾಲು ಹಂಚಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಅಂತರ್ ರಾಜ್ಯ ವಿವಾದಗಳು ಬಗೆಹರಿದ ಬಳಿಕವಷ್ಟೇ ನದಿಗಳ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.
  • ಗೋದಾವರಿ-ಕಾವೇರಿ ನದಿ ಜೋಡಣೆಯ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಭಾರಿ ಕಡಿಮೆ ಇದ್ದು. ಪಾಲು ಹೆಚ್ಚಿಸಿದರೆ ಮಾತ್ರ ಒಪ್ಪಂದಕ್ಕೆ ಸಹಿ ಹಾಕುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು ಆ ಬಳಿಕ, ಬೇಡ್ತಿ-ವರದಾ ನದಿಗಳ ಜೋಡಣೆ ಪ್ರಸ್ತಾವವನ್ನು ಈ ಯೋಜನೆಯಲ್ಲಿ ಸೇರಿಸಲಾಗಿತ್ತು.
  • ಧಾರವಾಡ ಜಿಲ್ಲೆಯಲ್ಲಿ ಉಗಮಗೊಂಡು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯನ್ನು ಹಾವೇರಿ ಮತ್ತು ಗದಗ ಜಿಲ್ಲೆಯ ವ್ಯಾಪ್ತಿಗೆ ನೀರು ಪೂರೈಕೆಗೆ ವರದಾ ನದಿಗೆ ಜೋಡಿಸಲು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ, ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ.
  • ಹಾವೇರಿ, ಗದಗ, ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ನೀರಾವರಿ, ಕುಡಿಯುವ ನೀರು ಪೂರೈಕೆ ಕೈಗಾರಿಕೆಗಳಿಗೆ ನೀರು ಒದಗಿಸುವುದು ಈ ಯೋಜನೆಯ ಉದ್ದೇಶ ನದಿ ನೀರು ಸಂಗ್ರಹಕ್ಕೆ ಶಿರಸಿಯ ಸಹಸ್ರಲಿಂಗ ಮತ್ತು ಪಟ್ಟಣದ ಹೊಳೆ ಬಳಿ ಹಾಗೂ ಯಲ್ಲಾಪುರದ ಬೇಡ್ತಿ ಸೇತುವೆ ಸಮೀಪ ಕಿರು ಅಣೆಕಟ್ಟಿ ನಿರ್ಮಾಣ ಮಾಡಲಾಗುತ್ತದೆ ಅಲ್ಲಿಂದ 246.58 ಕಿ.ಮೀ ಪೈಪ್‌ಲೈನ್ ಮೂಲಕ ನೀರುಕೊಂಡೊಯ್ಯಲಾಗುತ್ತದೆ ಈ ನದಿಗಳ ಜೋಡಣೆಯಿಂದಾಗಿ 1.04 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಬಹುದು ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.
  • ತೆಲಂಗಾಣದಿಂದಲೂ ರಗಳೆ: ಗೋದಾವರಿ-ಕಾವೇರಿ ನದಿಗಳ ಜೋಡಣೆ ಸಂದರ್ಭದಲ್ಲಿ ಬದಲಿ ವಿಧಾನದ ಮೂಲಕ ಆಲಮಟ್ಟಿಯಿಂದ ಕರ್ನಾಟಕಕ್ಕೆ 16 ಟಿಎಂಸಿ ಅಡಿ ನೀರು ಹಂಚಿಕೆ ಮಾಡುವುದನ್ನು ಮರು ಪರಿಶೀಲಿಸಬೇಕು ಎಂದು ತೆಲಂಗಾಣ ಸರ್ಕಾರವು ಜಲಶಕ್ತಿ ಸಚಿವಾಲಯದ ಮೇಲೆ ಒತ್ತಡ ಹೇರಿದೆ. ನೀರಿನ ಹಂಚಿಕೆಯಿಂದ ತೆಲಂಗಾಣದ ಜುರಾಲಾ ಯೋಜನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ದೂರಿದೆ.

‘ಸುಪ್ರೀಂ’ ಎರಡು ತೀರ್ಪುಗಳು ಒಳ್ಳೆಯ ಕಾನೂನಲ್ಲ: ಕೇಂದ್ರ

ಸಂದರ್ಭ: ‘ವ್ಯಭಿಚಾರ ಮತ್ತು ಸಲಿಂಗಕಾಮಿಗಳ ಒಪ್ಪಿತ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಎರಡು ಮಹತ್ವದ ತೀರ್ಪುಗಳು ಒಳ್ಳೆಯ ಕಾನೂನುಗಳಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ‘ಈ ತೀರ್ಪುಗಳು ಸಾಂವಿಧಾನಿಕ ನೈತಿಕತೆಯ ವ್ಯಕ್ತಿನಿಷ್ಠ ಅಭಿಪ್ರಾಯವನ್ನು ಆಧರಿಸಿದ್ದಾಗಿವೆ. ಹಾಗಾಗಿ, ಇವನ್ನು ಒಳ್ಳೆಯ ಕಾನೂನುಗಳಲ್ಲ ಎಂದು ಘೋಷಿಸಬೇಕು’ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
  • ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಎದುರು ಕೇಂದ್ರ ಈ ಮನವಿ ಸಲ್ಲಿಸಿದೆ.
  • ‘ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ’ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂಬತ್ತು ಪ್ರಶ್ನೆಗಳನ್ನು ರೂಪಿಸಿದೆ ಸಂವಿಧಾನದ 25 ಮತ್ತು 26ನೇ ವಿಧಿಯಲ್ಲಿನ ನೈತಿಕತೆ ಎಂಬ ಪದದ ವ್ಯಾಪ್ತಿ ಏನು, ಇದು ಸಾಂವಿಧಾನಿಕ ನೈತಿಕತೆಯನ್ನು ಒಳಗೊಳ್ಳುವುದೇ’ ಎಂದು ಕೇಂದ್ರಕ್ಕೆ ಪ್ರಶ್ನಿಸಿದೆ.
  • ‘ಸಾಂವಿಧಾನಿಕ ನೈತಿಕತೆ ಎನ್ನುವುದು ಒಂದು ಭಾವನೆಯಾಗಿದೆ. ಈ ವ್ಯಕ್ತಿನಿಷ್ಠ ಪರಿಲ್ಪನೆಯನ್ನು ನ್ಯಾಯಾಂಗವು ಶಾಸನ ಪರಿಶೀಲನೆಗೆ ಬಳಸಬಾರದು’ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಪೀಠಕ್ಕೆ ಮನವಿ ಮಾಡಿದರು.

‘ಮೂಢನಂಬಿಕೆ ನಿರ್ಧರಿಸುವ ಹಕ್ಕಿದೆ’
ಸಂದರ್ಭ: ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ, ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕನ್ನು ತಾನು ಹೊಂದಿರುವುದಾಗಿ ಹೇಳಿದ ಸುಪ್ರೀಂ ಕೋರ್ಟ್, ‘ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಲ್ಲದವರು ದೇಗುಲದ ಪದ್ಧತಿಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಬಹುದೇ ಎಂದು ಪ್ರಶ್ನಿಸಿದೆ.

  • ಯಾವುದೇ ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ ಅಥವಾ ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿ ಯನ್ನು ತಾನು ಹೊಂದಿರುವುದಾಗಿ ಹೇಳಿದ ಸುಪ್ರೀಂ ಕೋರ್ಟ್, ‘ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರಲ್ಲದವರು ದೇಗುಲದ ಪದ್ಧತಿಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಬಹುದೇ’ ಎಂದು ಬುಧವಾರ ಪ್ರಶ್ನಿಸಿದೆ.
  • ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ಧರ್ಮೀಯರು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಕುರಿತು ಸಲ್ಲಿಕೆ ಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಹೇಳಿಕೆ ನೀಡಿದೆ.
  • ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಜ್ಞಾನುದ್ದೀನ್ ಅಮಾನುಲ್ಲಾ ಅರವಿಂದ್ ಕುಮಾರ್, ಆಗಸ್ಟ್ರೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್. ಮಹದೇವನ್ ಮತ್ತು ಜಾಯ್‌ಮಾಲ್ಯಾ ಬಾಗ್ನಿ ಅವರು ಈ ಪೀಠದಲ್ಲಿದ್ದಾರೆ
  • ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ‘ಯಾವುದೇ ಆಚರಣೆಯನ್ನು ಮೂಢನಂಬಿಕೆ ಎಂದು ಊಹಿಸಿದರೂ, ಅದು ಮೂಢನಂಬಿಕೆ ಎಂದು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ ಅದು ಶಾಸಕಾಂಗದ ಕೆಲಸ ಶಾಸಕಾಂಗವು ಮಧ್ಯಪ್ರವೇಶಿಸಿ ಸುಧಾರಣೆಗಾಗಿ ಕಾನೂನು ರೂಪಿಸುತ್ತದೆ ಎಂದು ಪ್ರತಿಪಾದಿಸಿದರು
  • ‘ನಿರ್ಧರಿಸುವ ಹಕ್ಕಿದೆ’ ಸರ್ಕಾರದ ಈ ವಾದವನ್ನು ಒಪ್ಪದ ಪೀಠವು, ಮೂಢನಂಬಿಕೆಯನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿಯನ್ನು ನ್ಯಾಯಾಲಯ ಹೊಂದಿದೆ ಆನಂತರ ಏನು ಮಾಡಬೇಕು ಎಂಬುದನ್ನು ಶಾಸಕಾಂಗ ತೀರ್ಮಾನಿಸಬೇಕು. ಆದರೆ, ಶಾಸಕಾಂಗದ ನಿರ್ಧಾರವೇ ಕೊನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
  • ತತ್ತ್ವ ಶಾಸ್ತ್ರದ ಮಸೂರದಿಂದ ಗಮನಿಸಬೇಕು. ‘ಅಗತ್ಯ ಧಾರ್ಮಿಕ ಆಚರಣೆ ಯಾವುದು ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಆ ನಿರ್ದಿಷ್ಟ ಧರ್ಮದ ತತ್ತ್ವಶಾಸ್ತ್ರದ ಮಸೂರದ ಮೂಲಕ ನೋಡಬೇಕು’ ಎಂದು ನ್ಯಾ ನಾಗರತ್ನ ಅವರು ಅಭಿಪ್ರಾಯಪಟ್ಟರು.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments